ಇಲಾಜು | ಸರ್ಕಾರ ಜಪಿಸುತ್ತಿರೋ ಜೆನೆರಿಕ್ ಔಷಧದ ಬಗ್ಗೆ ಬೆಳಕಿಗೆ ಬಾರದ ಅಂಶಗಳಿವು

ವೈದ್ಯರೆಲ್ಲರೂ ‘ಜೆನೆರಿಕ್’ ಔಷಧ ಬರೆದೊಡನೆ ಔಷಧಗಳ ಮೇಲಿನ ಖರ್ಚು ಕಡಿಮೆಯಾಗಲಿದೆಯೇ? ವಾಸ್ತವದಲ್ಲಿ, ‘ಜೆನೆರಿಕ್’ ಔಷಧ ಎಂದರೇನೆಂಬ ಬಗ್ಗೆ ಅವನ್ನು ಬರೆಯಲು ಹೇಳುವವರಿಗೂ, ಬರೆಯುವವರಿಗೂ, ಮಾರುವವರಿಗೂ, ಸೇವಿಸುವವರಿಗೂ ಸ್ಪಷ್ಟವಾದ ಅರಿವಿಲ್ಲದಂತಾಗಿದೆ!

ವೈದ್ಯಕೀಯ ವೆಚ್ಚಗಳಲ್ಲಿ ಶೇ.70ಕ್ಕೆ ಔಷಧಗಳೇ ಕಾರಣವಾಗಿರುವುದರಿಂದ, ಅವನ್ನು ಅಗ್ಗವಾಗಿ ಒದಗಿಸುವುದು ಜನೌಷಧಿ ಯೋಜನೆಯ ಉದ್ದೇಶವೆಂದು ಹೇಳಲಾಗುತ್ತಿದೆ. ಅದಕ್ಕೀಗ ‘ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ’ (ಪಿಎಂಭಾಜಪ) ಎಂಬ ಹೊಸ ಹೆಸರಿಟ್ಟು, ಭಾಜಪವನ್ನು ಅದರೊಳಕ್ಕೆ ತುರುಕಿಸಲಾಗಿದೆ. ಮಾನ್ಯ ಪ್ರಧಾನಿಯವರು ಈ ಯೋಜನೆಗೆ ಪ್ರಚಾರ ನೀಡುವ ಭರದಲ್ಲಿ ದೇಶದ ವೈದ್ಯರ ವಿದೇಶ ಭೇಟಿಗಳನ್ನೂ, ಕೈಬರಹದ ಶೈಲಿಯನ್ನೂ ಹಳಿದಿದ್ದಾರೆ; ಅವನ್ನು ತಡೆಯುವುದಕ್ಕಾಗಿಯೇ ಜನೌಷಧಿ ಯೋಜನೆಯನ್ನು ಆರಂಭಿಸಿದ್ದಾಗಿಯೂ, ವೈದ್ಯರೆಲ್ಲರೂ ಔಷಧಗಳ ಮೂಲ (ಜೆನೆರಿಕ್) ಹೆಸರುಗಳನ್ನು ಬರೆಯುವುದನ್ನು ಕಡ್ಡಾಯಗೊಳಿಸುವುದಾಗಿಯೂ ಹೇಳಿಕೊಂಡಿದ್ದಾರೆ.

ಆದರೆ, ಜನೌಷಧಿ ಯೋಜನೆಯನ್ನು ಮೋದಿ ಸರಕಾರವಾಗಲೀ, ಭಾಜಪವಾಗಲೀ ಆರಂಭಿಸಿದ್ದಲ್ಲ. ಜನೌಷಧಿ ಯೋಜನೆ ಮತ್ತು ಅದನ್ನು ನಿರ್ವಹಿಸುವ ಭಾರತೀಯ ಸಾರ್ವಜನಿಕ ಔಷಧ ಸಂಸ್ಥೆಗಳ ಬ್ಯೂರೋ (ಬಿಪಿಪಿಐ) 2008ರಲ್ಲೇ ಆರಂಭಗೊಂಡವು. ಅದರೊಂದಿಗೆ, ನೆಹರೂ ಆಡಳಿತದಲ್ಲಿ ಸ್ಥಾಪನೆಗೊಂಡು ನವರತ್ನ ಕಂಪನಿಗಳಾಗಿ ಬೆಳೆದಿದ್ದ ಸಾರ್ವಜನಿಕ ಔಷಧ ಸಂಸ್ಥೆಗಳು ಖಾಸಗಿ ಕಂಪನಿಗಳ ಔಷಧಗಳನ್ನು ಜನೌಷಧಿ ಕೇಂದ್ರಗಳ ಮೂಲಕ ಮಾರುವ ದಲ್ಲಾಳಿಗಳಾದವು.

ವೈದ್ಯರೆಲ್ಲರೂ ‘ಜೆನೆರಿಕ್’ ಔಷಧಗಳನ್ನು ಬರೆದೊಡನೆ ಔಷಧಗಳ ಮೇಲಿನ ಖರ್ಚು ಕಡಿಮೆಯಾಗಲಿದೆಯೇ? ವಾಸ್ತವದಲ್ಲಿ, ‘ಜೆನೆರಿಕ್’ ಔಷಧಗಳೆಂದರೇನು ಎನ್ನುವ ಬಗ್ಗೆ ಅವನ್ನು ಬರೆಯಲು ಹೇಳುವವರಿಗೂ (ಭಾರತೀಯ ವೈದ್ಯಕೀಯ ಪರಿಷತ್ತು ಕೂಡ ಸೇರಿ), ಬರೆಯುವವರಿಗೂ, ಮಾರುವವರಿಗೂ, ಸೇವಿಸುವವರಿಗೂ ಸ್ಪಷ್ಟವಾದ ಅರಿವಿಲ್ಲ. ಆಧುನಿಕ ಔಷಧಗಳ ರಾಸಾಯನಿಕ ಗುಣಗಳಿಗೆ ಅನುಗುಣವಾಗಿ, ಮೂಲದಲ್ಲೇ, ಕೊಡಲಾಗಿರುವ ಹೆಸರುಗಳನ್ನು ಜೆನೆರಿಕ್ ಹೆಸರುಗಳು ಎನ್ನಲಾಗುತ್ತದೆ. ಅಮೆರಿಕದ ರಾಷ್ಟ್ರೀಯ ಔಷಧ ನಿಯಂತ್ರಣ ಸಂಸ್ಥೆಯ (ಎಫ್‌ಡಿಎ) ವ್ಯಾಖ್ಯೆಯಂತೆ, ಯಾವುದೇ ಔಷಧವನ್ನು ಅಭಿವೃದ್ಧಿಪಡಿಸಿದ ಸಂಸ್ಥೆಯು ಅದರ ಮೇಲಿನ ಸ್ವಾಮ್ಯತೆಯನ್ನು ಕಳೆದುಕೊಂಡ ಬಳಿಕ ಅದೇ ಔಷಧವನ್ನು ಇನ್ನಿತರ ಸಂಸ್ಥೆಗಳು ಉತ್ಪಾದಿಸಿದರೆ, ಅವನ್ನು ಜೆನೆರಿಕ್ ಉತ್ಪನ್ನಗಳು ಎಂದು ಹೇಳಲಾಗುತ್ತದೆ.

ಉದಾಹರಣೆಗೆ, ಮಲೇರಿಯಾ ಚಿಕಿತ್ಸೆಗಾಗಿ ಜರ್ಮನಿಯ ಬಾಯರ್ ಕಂಪನಿ 30-40ರ ದಶಕದಲ್ಲಿ ಸಿದ್ಧಪಡಿಸಿದ ಸಂಯುಕ್ತಕ್ಕೆ ಕೊಟ್ಟ ಔಷಧೀಯ ಹೆಸರು ಕ್ಲೋರೋಕ್ವಿನ್; ಅದನ್ನು ಮಾರುವುದಕ್ಕೆ ಆ ಕಂಪನಿ ಕೊಟ್ಟ ಬ್ರಾಂಡ್ ಹೆಸರು ರೆಸೋಚಿನ್; ಇಂದು ಹಲವು ಕಂಪೆನಿಗಳು ಅದೇ ಕ್ಲೋರೋಕ್ವಿನ್ ಅನ್ನು ಉತ್ಪಾದಿಸಿ, ತಮ್ಮತಮ್ಮದೇ (ನಿವಾಕ್ವಿನ್, ನಿಯೋಕ್ವಿನ್, ಪಾರಾಕ್ವಿನ್, ಕ್ವಿನ್‌ರಾಸ್, ಮಲಿಯಾಗೋ, ಲಾರಿಯಾಗೋ ಇತ್ಯಾದಿ) ಬ್ರಾಂಡ್‌ ಹೆಸರುಗಳಲ್ಲಿ ಮಾರಾಟ ಮಾಡುತ್ತಿವೆ. ಇವುಗಳಲ್ಲಿ ನಿಜಾರ್ಥದಲ್ಲಿ ಜೆನೆರಿಕ್ ಹೆಸರೆಂದರೆ ಕ್ಲೋರೋಕ್ವಿನ್ ಮಾತ್ರ. ಆದರೆ ಎಫ್‌ಡಿಎ ಅನುಸಾರ, ರೆಸೋಚಿನ್ ಒಂದನ್ನುಳಿದು ಇನ್ನೆಲ್ಲವೂ ಜೆನೆರಿಕ್ ಆಗುತ್ತವೆ. ನಮ್ಮಲ್ಲಿ 2005ರವರೆಗೆ ಇದ್ದ ಸ್ವಾಮ್ಯತೆಯ ಕಾನೂನಿನ ದೆಸೆಯಿಂದಾಗಿ ದೇಶೀಯ ಕಂಪನಿಗಳು ಅತಿ ನೂತನ ಔಷಧಗಳೆಲ್ಲವನ್ನೂ ಇಲ್ಲೇ ತಯಾರಿಸಿ, ತಮ್ಮದೇ ಬ್ರಾಂಡ್ ಹೆಸರುಗಳನ್ನಿಟ್ಟು, ಮೂಲ ಬ್ರಾಂಡ್‌ಗಳಿಗಿಂತ ಅತಿ ಕಡಿಮೆ ದರದಲ್ಲಿ ಮಾರುವುದಕ್ಕೆ ಸಾಧ್ಯವಾಗಿತ್ತು ಮತ್ತು ಅಂತಹ ‘ಜೆನೆರಿಕ್ ಬ್ರಾಂಡ್‌’ಗಳು ಈಗಲೂ ಇಲ್ಲಿ ಲಭ್ಯವಿವೆ. ಹಾಗಿರುವಾಗ, ಇಲ್ಲಿನ ವೈದ್ಯರು ‘ಜೆನೆರಿಕ್’ ಅಂದರೆ ಯಾವುದನ್ನು ಬರೆಯಬೇಕು? ಜನೌಷಧಿ ಕೇಂದ್ರಗಳು ಯಾವುದನ್ನು ಕೊಡಬೇಕು? ಮಲೇರಿಯಾ ಚಿಕಿತ್ಸೆಗೆ ರೆಸೋಚಿನ್ (ಅಥವಾ ಇತರ ‘ಜೆನೆರಿಕ್ ಬ್ರಾಂಡ್’) ಹೆಸರನ್ನು ಬರೆದು, ಜೊತೆಗೆ ಕ್ಲೋರೋಕ್ವಿನ್ ಎಂದು ಬರೆದರೆ, ಜನೌಷಧಿ ಕೇಂದ್ರಗಳ ನಿಯಮದಂತೆ ಯಾವ ಬ್ರಾಂಡ್ ಅನ್ನೂ ಕೊಡುವಂತಿಲ್ಲ, ಬೇರಾವುದೋ ಕ್ಲೋರೋಕ್ವಿನ್ ಕೊಡಬೇಕಾಗುತ್ತದೆ.

ಬಗೆಬಗೆಯ ಔಷಧಗಳನ್ನು ಬೆರಕೆ ಮಾಡಿರುವ ಸುಮಾರು 30,000ಕ್ಕೂ ಹೆಚ್ಚು ‘ಬ್ರಾಂಡ್‌’ಗಳು ಕೂಡ ನಮ್ಮಲ್ಲಿ ಲಭ್ಯವಿವೆ ಮತ್ತು ಈ ಬೆರಕೆಗಳಲ್ಲಿರುವ ಔಷಧಗಳು ಮತ್ತು ಅವುಗಳ ಪ್ರಮಾಣಗಳು ಬ್ರಾಂಡ್‌ನಿಂದ ಬ್ರಾಂಡ್‌ಗೆ ಬೇರೆಬೇರೆಯಾಗಿವೆ. ಇವುಗಳಲ್ಲಿ ಹೆಚ್ಚಿನವು ಅವೈಜ್ಞಾನಿಕವೂ, ಅಪಾಯಕಾರಿಯೂ ಆಗಿದ್ದು, ವೈದ್ಯರಲ್ಲೂ, ಮದ್ದಿನಂಗಡಿಗಳವರಲ್ಲೂ ಗೊಂದಲಗಳನ್ನು ಉಂಟುಮಾಡುತ್ತಿವೆ. ಒಂದೊಂದು ಬೆರಕೆ ಬ್ರಾಂಡ್‌ನಲ್ಲಿರುವ ಔಷಧಗಳು ಮತ್ತವುಗಳ ಪ್ರಮಾಣಗಳು ಬೇರೆಬೇರೆ ಆಗಿರುವಾಗ, ಜನೌಷಧಿ ಕೇಂದ್ರಗಳಲ್ಲಿ ಅವೆಲ್ಲಕ್ಕೂ ಹೊಂದುವ ಬದಲಿಗಳಿರುವುದು ಕಷ್ಟವೇ. ಹಾಗಿದ್ದರೂ, ಯಾವ ನಿಟ್ಟಿನಿಂದಲೂ ‘ಜೆನೆರಿಕ್’ ಅನಿಸಿಕೊಳ್ಳದ ಹಲವಾರು ಬೆರಕೆಗಳು ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿವೆ!

ಇವೇನೇ ಇದ್ದರೂ, ಜನೌಷಧಿ ಕೇಂದ್ರಗಳಲ್ಲಿ ದೊರೆಯುವ ಔಷಧಗಳು ಬ್ರಾಂಡ್ ಔಷಧಗಳಿಗಿಂತ ಕನಿಷ್ಠ ಶೇ.50ರಷ್ಟಾದರೂ ಅಗ್ಗವಾಗಿರುತ್ತವೆ ಹಾಗೂ ಗುಣಮಟ್ಟದಲ್ಲಿ ಬ್ರಾಂಡ್‌ಗಳಿಗೆ ಸರಿಸಾಟಿಯಾಗಿಯೇ ಇರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಗುಣಮಟ್ಟವು ಒಂದೇ ಆಗಿದ್ದಾಗ ಬೆಲೆಗಳು ಬೇರೆ ಇರುವುದಕ್ಕೆ ಕಾರಣಗಳೇನು? ಹೊಸ ಔಷಧವನ್ನು ಅಭಿವೃದ್ಧಿಪಡಿಸಿ, ಪರೀಕ್ಷಿಸಿ, ಹೊಸ ‘ಬ್ರಾಂಡ್’ ಆಗಿ ಮಾರುಕಟ್ಟೆಗೆ ಪರಿಚಯಿಸಿ, ಪ್ರಚಾರ (ವೈದ್ಯರ ಸಮ್ಮೇಳನ, ಪ್ರತಿನಿಧಿಗಳ ಮೂಲಕ ಪ್ರಚಾರ, ಜಾಹೀರಾತುಗಳು ಇತ್ಯಾದಿ) ಮಾಡುವುದಕ್ಕೆ ತಗಲುವ ವೆಚ್ಚಗಳಿಂದಾಗಿ ಹೊಸದಾದ, ಮೂಲ ‘ಬ್ರಾಂಡ್‌’ಗಳು ದುಬಾರಿಯಾಗುತ್ತವೆ. ಸ್ವಾಮ್ಯತೆ ಕಳೆದುಹೋದ ಔಷಧಗಳನ್ನು ಇತರ ಕಂಪನಿಗಳು ಉತ್ಪಾದಿಸಿ ಮಾರುವಾಗ ತಮ್ಮದೇ ‘ಬ್ರಾಂಡ್‌’ಗಳೆಂದು ಪ್ರಚಾರ ಮಾಡುವುದರಿಂದಲೂ ದರಗಳು ಹೆಚ್ಚುತ್ತವೆ. ಮೂಲ ಜೆನೆರಿಕ್ ಔಷಧಗಳನ್ನು ಯಾವುದೇ ಬ್ರಾಂಡ್ ಹೆಸರುಗಳನ್ನಿಡದೆ, ಪ್ರಚಾರವೂ ಇಲ್ಲದೆ, ಮಾರುವುದಿದ್ದರೆ ದರವೂ ಕಡಿಮೆಯಾಗುತ್ತದೆ, ಜನೌಷಧಿ ಕೇಂದ್ರಗಳಲ್ಲಿ ಇಂಥವನ್ನೇ ಮಾರಲಾಗುತ್ತದೆ.

ಜನೌಷಧಿ ಕೇಂದ್ರಗಳು ‘ಬ್ರಾಂಡ್‌’ ಔಷಧಗಳಿಗಿಂತ ಅಗ್ಗವಾಗಿ ಔಷಧಗಳನ್ನು ಮಾರುತ್ತಿದ್ದರೂ, ಅವುಗಳ ಲಾಭಾಂಶವೇನೂ ಕಡಿಮೆ ಇಲ್ಲ! ಒಂದು ಅಧ್ಯಯನದ ಅನುಸಾರ, ‘ಬ್ರಾಂಡ್‌’ ಔಷಧಗಳ ಮಾರಾಟದಿಂದ ಅಂಗಡಿಗಳವರಿಗೆ ಶೇ.25-31ರಷ್ಟು ಲಾಭ ದೊರೆತರೆ, ಅವನ್ನೇ ‘ಜೆನೆರಿಕ್’ ರೂಪದಲ್ಲಿ ಮಾರಿದರೆ ಶೇ.201-1016ರಷ್ಟು ಲಾಭವಾಗುತ್ತದೆ! ಜನೌಷಧಿ ಯೋಜನೆಯನ್ನು ನಡೆಸುತ್ತಿರುವ ಬಿಪಿಪಿಐಯ ದಾಖಲೆಗಳನ್ನು ನೋಡಿದರೆ, ಈ ಔಷಧಗಳ ಖರೀದಿ ಮತ್ತು ಮಾರಾಟಗಳ ನಡುವೆ ಶೇ.100ರಷ್ಟಾದರೂ ವ್ಯತ್ಯಾಸ ಇರುವುದು ಕಾಣುತ್ತದೆ. ಬಿಪಿಪಿಐ ಅಧಿಕಾರಿಗಳನುಸಾರ, ಈ ಜೆನೆರಿಕ್ ಔಷಧಗಳನ್ನು ಬ್ರಾಂಡ್‌ಗಳ ಶೇ.10-15ರಷ್ಟು ಬೆಲೆಗೆ ಒದಗಿಸುವುದಕ್ಕೆ ಸಾಧ್ಯವಿದೆ, ಆದರೆ, ಜನೌಷಧಿ ಕೇಂದ್ರಗಳವರಿಗೆ ಶೇ.20, ವಿತರಕರಿಗೆ ಶೇ.10, ಪ್ರಧಾನ ಸಂಸ್ಥೆಗೆ ಶೇ.6, ಪ್ರಚಾರಕ್ಕೆ ಶೇ.4 ಹಾಗೂ ಇತರ ಆಡಳಿತಾತ್ಮಕ ವೆಚ್ಚಗಳಿಂದಾಗಿ ಅಷ್ಟು ಅಗ್ಗದಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ : ಇಲಾಜು | ನೂತನ ಸಿಎಂ ಕುಮಾರಸ್ವಾಮಿ ಅವರಿಗೆ ವೈದ್ಯರೊಬ್ಬರ ಆರು ಅಹವಾಲು

ಔಷಧಗಳನ್ನು ಉತ್ಪಾದಿಸದೆ ನಷ್ಟದಲ್ಲಿರುವ ಸಾರ್ವಜನಿಕ ರಂಗದ ಉದ್ದಿಮೆಗಳು ಹೀಗೆ ಜನೌಷಧಿ ಕೇಂದ್ರಗಳ ದಲ್ಲಾಳಿಗಳಾಗಿ ಒಂದಷ್ಟು ಲಾಭ ಪಡೆಯಲು ಯತ್ನಿಸುತ್ತಿದ್ದರೂ ಯಶಸ್ವಿಯಾದಂತಿಲ್ಲ. ಪ್ರಧಾನಿಯಾದಿಯಾಗಿ ಎಲ್ಲರೂ ವೈದ್ಯರನ್ನು ತೆಗಳಿ ಪ್ರಚಾರ ಮಾಡಿದರೂ, 2014ರವರೆಗೆ 80ರಷ್ಟಿದ್ದ ಜನೌಷಧಿ ಕೇಂದ್ರಗಳು ಈಗ 3,500 ದಾಟಿದ್ದರೂ, 2017-18ರಲ್ಲಿ ಕೇವಲ 74 ಕೋಟಿ ರು. ಮಾತ್ರವೇ ವಹಿವಾಟಾಗಿದೆ. ಇದೇ ಮಾರ್ಚ್‌ನಲ್ಲಿ ಪ್ರಕಟವಾಗಿರುವ ಸಣ್ಣ ಅಧ್ಯಯನವೊಂದರಂತೆ, ಜನೌಷಧಿ ಕೇಂದ್ರವೊಂದು ದಿನಕ್ಕೆ ಸರಾಸರಿ 47 ಜನರಿಗೆ ಸೇವೆಯೊದಗಿಸುತ್ತಿದ್ದು, ತಿಂಗಳಿಗೆ ಕೇವಲ 4,230 ರು. ಲಾಭ ಪಡೆಯುತ್ತಿದೆ. ಇದಕ್ಕಿದಿರಾಗಿ, ಖಾಸಗಿ ಕಂಪನಿಗಳ ಬ್ರಾಂಡ್‌ ಔಷಧಗಳ ವಹಿವಾಟು 70 ಸಾವಿರ ಕೋಟಿಯಷ್ಟಿದೆ; ಮೂಲ ಜೆನೆರಿಕ್ ಔಷಧಗಳ ಪಾಲು 10 ಸಾವಿರ ಕೋಟಿಯಷ್ಟಿದೆ. ಜನೌಷಧಿ ಯೋಜನೆಯು ಸುದ್ದಿಯಾದಷ್ಟು ವಹಿವಾಟು ಮಾಡಲಾಗದಿರುವುದಕ್ಕೆ ಅದು ಜನರ ವಿಶ್ವಾಸವನ್ನು ಇನ್ನೂ ಗಳಿಸದಿರುವುದು, ಹೆಚ್ಚಾಗಿ ಬಳಕೆಯಲ್ಲಿರುವ ಔಷಧಗಳು ಅಲ್ಲಿ ಲಭ್ಯವಿಲ್ಲದಿರುವುದು, ಬೆರಕೆ ಔಷಧಗಳ ಬಗ್ಗೆ ಗೊಂದಲಗಳಿರುವುದು ಎಲ್ಲವೂ ಕಾರಣಗಳಾಗಿವೆ.

ಬ್ರಾಂಡ್ ಔಷಧಗಳ ಹತ್ತನೇ ಒಂದರಷ್ಟು ಬೆಲೆಗೆ ದೊರೆಯಬಲ್ಲ ಜೆನೆರಿಕ್ ಔಷಧಗಳನ್ನು ಬ್ರಾಂಡ್‌ಗಳ ಅರ್ಧದಷ್ಟು ಬೆಲೆಗೆ ಮಾರುವ ಮೂಲಕ ಜನೌಷಧಿ ಯೋಜನೆಯನ್ನು ನಡೆಸುವ ಎಲ್ಲ ಸಂಸ್ಥೆಗಳೂ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿವೆ ಎಂದ ಮೇಲೆ, ವೈದ್ಯರನ್ನು ದೂಷಿಸುವ ಬದಲು ಸರಕಾರವೇ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ದೇಶದ ಜನರಿಗೆ ಅತಿ ಕಡಿಮೆ ದರದಲ್ಲಿ ಔಷಧಗಳನ್ನೊದಗಿಸುವ ನೈಜ ಕಾಳಜಿಯಿದ್ದರೆ ಸರಕಾರಿ ಸ್ವಾಮ್ಯದ ಔಷಧ ಕಂಪನಿಗಳನ್ನು ಪುನಶ್ಚೇತನಗೊಳಿಸಬೇಕು, ರಾಷ್ಟ್ರೀಯ ಅತ್ಯವಶ್ಯ ಔಷಧಗಳ ಪಟ್ಟಿಯಲ್ಲಿರುವ ಎಲ್ಲ ಔಷಧಗಳನ್ನು ಅಲ್ಲೇ ಉತ್ಪಾದಿಸಿ, ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು.

ಚಿತ್ರ: ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More