ಹಂಸಗಾಥ | ಇಂದೇಕೋ ಹಳೆಯದರ ಹಂಬಲ, ಕಾಡುತ್ತಿದೆ ಕೊಡಚಾದ್ರಿಯ ಆ ಕೊಳ

ಮನಸ್ಸಿನಲ್ಲಿ ಉತ್ಕಟ ಆಸೆಯೊಂದಿದ್ದರೆ, ಅದನ್ನು ಭಾವಿಸಿಕೊಂಡು ಚಪ್ಪಾಳೆ ತಟ್ಟಿದಾಗ ಈ ಕೊಳದ ತಳದಿಂದ ನೀರಿನ ಗುಳ್ಳೆಗಳೆದ್ದು ಮೇಲ್ಮೈವರೆಗೂ ಬಂದರೆ ಇಷ್ಟಾರ್ಥ ಸಿದ್ಧಿಸುತ್ತದೆಂಬುದು ಪ್ರತೀತಿ. ನಂಬಿಕೆ, ಅಪನಂಬಿಕೆ, ಇವೆಲ್ಲ ಬೇರೆ ಚರ್ಚೆ, ಆದರೆ ಇಂಥ ಆಖ್ಯಾನಗಳು ಕೇಳುವುದಕ್ಕೇ ಚಂದ

ಶಿಶಿರಸುಪ್ತಿಯಲ್ಲಿದ್ದಂತಿದ್ದ ನೆನಪುಗಳು ಮೈಮುರಿದು ಮೆಲ್ಲಗೆ ಎಚ್ಚರಗೊಳ್ಳುತ್ತಿವೆ. ಮಲೆನಾಡ ಮಹತ್ತಾದ ಸೌಂದರ್ಯವೈವಿಧ್ಯದಲ್ಲಿ; ಅದರ ಊಹಾತೀತ ಕೃಪೆಯಲ್ಲಿ ಅಂತರಂಗವ ತಡಕಿ ಪುನರ್ಶೋಧಿಸಿಕೊಳ್ಳುವ ಅನ್ವೇಷಣೆಯಲ್ಲಿರುವವರಿಗೆ ಇದೊಂದು ಪುಟ್ಟ ಅವಕಾಶ, ಭಾವಮಂಥನಕ್ಕೆ. ಕಡೆಗೆ ಅಲ್ಲಿಂದ ಸಮಯಾನಿಬದ್ಧ ಅನುಭವದಲ್ಲಿ ಮುಳುಗಿ ಮೌನ ಆವರಿಸಿ, ಮಂಥನದಿಂದಲೂ ಮುಕ್ತವಾಗಿ ನಡೆದುಬರಲು ಅನುವು ಮಾಡಿಕೊಡುವ ಈ ಜಾಗಕ್ಕೆ ಹೆಸರೊಂದಿದೆ- ಗೌರಿತೀರ್ಥ.

ಯೋಗಿಯೊಬ್ಬರು ಚಪ್ಪಾಳೆ ತಟ್ಟಿಯೇ ಇಲ್ಲೊಂದು ಕೊಳ ಆವಿರ್ಭವಿಸುವಂತೆ ಮಾಡಿದರಂತೆ. ಮತ್ತೊಬ್ಬ ಯೋಗಿ ಅದರ ಮೇಲೆ ಕೂತು ತಾಸುಗಟ್ಟಲೆ ಧ್ಯಾನ ಮಾಡುತ್ತಿದ್ದರಂತೆ. ಮನಸ್ಸಿನಲ್ಲಿ ಉತ್ಕಟ ಆಸೆಯೊಂದಿದ್ದರೆ, ಅದನ್ನು ಭಾವಿಸಿಕೊಂಡು ಚಪ್ಪಾಳೆ ತಟ್ಟಿದರೆ, ಈ ಕೊಳದ ತಳದಿಂದ ನೀರಿನ ಗುಳ್ಳೆಗಳೆದ್ದು ಮೇಲ್ಮೈವರೆಗೂ ಬಂದರೆ ಇಷ್ಟಾರ್ಥ ಸಿದ್ಧಿಸುತ್ತದೆಂದು ಪ್ರತೀತಿ. ನಂಬಿಕೆ, ಅಪನಂಬಿಕೆ, ಇವೆಲ್ಲ ಬೇರೆ ಚರ್ಚೆ, ಆದರೆ ಇಂಥ ಆಖ್ಯಾನಗಳು ಕೇಳುವುದಕ್ಕೇ ಚಂದ.

ಅದೊಂದು ದಿನ ಕೊಡಚಾದ್ರಿಯ ಬೆಟ್ಟ ಹತ್ತಿಳಿದದ್ದಾಯ್ತು, ಅದೊಂದು ಸಮಯಾತೀತ ಅನುಭೂತಿ. ಆದರೆ, ಒಂದು ಸಂಜೆ ಗೌರಿತೀರ್ಥದಲ್ಲಿ ಕಳೆದ ಅನುಭವ ಅಧ್ಯಾತ್ಮಿಕವಾದದ್ದು. ಅತಿಶಯೋಕ್ತಿಯಲ್ಲ, ಅದರ ತೀವ್ರತೆಗೆ ಸಮನಾದ ಮತ್ತೊಂದು ಪದವಿದ್ದರೆ ಬಳಸಬಹುದಿತ್ತೇನೋ.

ಮಣ್ಣಿನ ಸುತ್ತುಗೋಡೆಯೊಳಗೆ ಈ ಕೊಳ, ಗೌರಿತೀರ್ಥ. ಅದರ ಮೇಲೊಂದು ಗೌರಿಶಂಕರ ಗುಡಿ. ಪುಟ್ಟ ಹೆಂಚಿನ ಮಾಡಿನ ಗುಡಿಯೊಳಗೆ ಶಿವಲಿಂಗ. ಮಲೆನಾಡ ಮಡಿಲಲ್ಲಿ, ಮನಕಲಕುವ ಮೌನದಲ್ಲಿ ಸೊಗಸಾದ ಸಪ್ಪಳ ಮೂಡಿಸಲು ಅಲ್ಲಿರುವ ಮೂರು ಘಂಟೆಗಳಲ್ಲಿ ಒಂದನ್ನು ಬಡಿದರಾಯಿತು, ನಾದಬ್ರಹ್ಮಂ ಆವಾಹಯಾಮಿ. ಆ ಸದ್ದು ಮೊಳಗುವಾಗ ಕಣ್ಣುಗಳು ಅನೈಚ್ಛಿಕವಾಗಿಯೇ ಮುಚ್ಚಿಕೊಳ್ಳುತ್ತವೆ. ಧ್ಯಾನಸ್ಥ ಸ್ಥಿತಿ. ಗುಡಿಯ ಹೊಸ್ತಿಲಿಂದ ಮಣ್ಣಿನ ಮೆಟ್ಟಿಲುಗಳು ಶುರುವಾಗಿ ನೇರವಾಗಿ ಗೌರಿತೀರ್ಥವನ್ನು ತಲುಪುತ್ತವೆ.

ಭೂಮಿ, ನಮ್ಮ ಭೂಮಿ, ಕಲ್ಲು-ಮಣ್ಣಿನಿಂದಲೂ ನೀರು ಒಸರುವ ನಮ್ಮ ಭೂಮಿ. ಓಹ್! ಜನಿಸಿ, ಉಸಿರಾಡುತ್ತ, ಇದೇ ಭೂಮಿಯನ್ನು ಮತಿವಿಕಲರಂತೆ ಪೂಜಿಸುತ್ತ ಬದುಕಿರುವ ಅವಕಾಶಕ್ಕೇ ಮನಸ್ಸು ಸೋತು, ಶರಣಾಗಿ, ಐಹಿಕ ವಿವರಗಳೆಡೆಗೂ ಮತ್ಸರವಿಲ್ಲದ ವೈರಾಗ್ಯ ತಳೆಯುವಂತಾಗುತ್ತದೆ. ವಾರವಿಡೀ ಸಮಾಜದಲ್ಲಿ ನಟಿಸುವ ಪಾತ್ರಗಳಿಗೂ, ಆಳದಲ್ಲಿ ಅಡಗಿಕೂತ ಯಾವುದೋ ಪ್ರಾಚೀನ ಅರಿವಿಗೂ ಸಂಬಂಧವೇ ಇರದ ವ್ಯೋಮದಲ್ಲಿ ಎಂಥದೋ ಬೆಳಕು. ಪ್ರಾರ್ಥನೆ, ಧ್ಯಾನಗಳಿಗೆ ಹೊಸ ಲಹರಿ, ಅರ್ಥ ಹುಟ್ಟಿದಂತೆ.

ಕೇಳಿಕೊಳ್ಳಲು ತಾನೇ ಏನಿದೆಯೆಂದು ಸುಮ್ಮನೆ ಚಪ್ಪಾಳೆ ತಟ್ಟಿದರೂ ನೀರಿನ ಗುಳ್ಳೆಗಳೇಳುತ್ತವೆ. ಇಲ್ಲ, ಅರೆಕ್ಷಣದಲ್ಲಿ, ಅಲ್ಲೇ ಮತ್ತೊಂದು ಆಸೆಯ ಉಗಮ- ಈ ಭೂಮಿಯನ್ನು, ಈ ಧರಿತ್ರಿಯನ್ನು ಈ ಒಂದು ಜೀವಿತಾವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೂ ನೋಡಬೇಕು. ಪಾದಗಳಿಗೆ ಅವನೀ ಚುಂಬನವಾಗಬೇಕು. ಇದೊಂದೇ ಒಲವು, ಮನಸ್ಸಲ್ಲಿ ಧೃಢವಾಗಿ ಬೇರೂರಿರುವುದು. ಇಹ-ಪರಗಳ ಪರಾಮರ್ಶೆ ಅದರ ಪಾಡಿಗದಿರಲಿ, ಆದರೆ ಇಲ್ಲಿ, ಉಚ್ಛ್ವಾಸ -ನಿಶ್ವಾಸಗಳೂ ಅಚ್ಚರಿ ಎನಿಸುವಾಗ ಈ ಆಸೆಯೇ ಪ್ರಾರ್ಥನೆಯಾಗಿ, ಮೊರೆಯಾಗಿ ಮನದಲ್ಲಿ ಮೊಳಗಿತ್ತು. ಮತ್ತೊಮ್ಮೆ ಚಪ್ಪಾಳೆ. ಮತ್ತೊಮ್ಮೆ ನೀರಿನ ಗುಳ್ಳೆಗಳು. ಮತ್ತೊಮ್ಮೆ ಮುಗುಳ್ನಗು. ಮತ್ತೊಮ್ಮೆ ಮೌನ.

ಇದನ್ನೂ ಓದಿ : ಹಂಸಗಾಥ | ಈಜು ಬರದ ನೀರಿನೊಲವು ನನ್ನದು, ಹಾಗೆಂದೇ ಬರೀ ತೇಲಿದೆ

ಕೊಳ ತಲುಪುವ ಮುನ್ನ, ಹಾವೊಂದು ಸರಸರನೆ ನಮ್ಮ ಪಕ್ಕವೇ ಹರಿದುಹೋಗಿ ಮಣ್ಣಿನ ಸುತ್ತುಗೋಡೆಯ ಒಂದು ಮೂಲೆಯಲ್ಲಿದ್ದ ಕುಳಿಬಿದ್ದ ಜಾಗ ಸೇರಿತು. ಮೆಲ್ಲಗೆ ಅಲ್ಲಿ ಇಣುಕಿನೋಡಿದರೆ ಅದರೊಟ್ಟಿಗೆ ನಾಲ್ಕೈದು ಪುಟ್ಟ-ಪುಟ್ಟ ಮರಿಗಳು, ಅವುಗಳ ಚರ್ಮದ ಮಂದಮಿನುಗು. ಅಪಾರ ಜೀವಸಂಕುಲವ ಹೊರೆಯುತ್ತಿರುವ ವ್ಯಕ್ತವಿಶ್ವದಲ್ಲಿ ಸದ್ಯಕ್ಕೆ ಗುರುತಾಗಿರುವ ಒಂದೇ ಗ್ರಹ, ಭೂಮಿ. ಭೂಮಿ. ಪೃಥ್ವಿ. ಅವನೀ.

ಗೌರಿತೀರ್ಥ ಈಗ ನೆನಪಾಗಿ ಮನಸ್ಸಲ್ಲಿ ಚಿರಸ್ಥಾಯಿ. ಒಂದು ವರ್ಷವೇ ಕಳೆದಿದೆ, ಅಲ್ಲಿಂದ ಬಂದು. ಈಗ ಚಂಚಲ ಮನಸ್ಸಿನ ಮೂಲೆಯಲ್ಲಿ ಇನ್ನೊಂದು ಪುಟ್ಟ ಆಸೆ. ಮದುವೆಯಾದರೆ, ಮಗಳು ಹುಟ್ಟಿದರೆ, ತಾಯ್ತನದ ಆನಂದದ ಅನುಭವವಾಗುವುದೇ ಇದ್ದರೆ, ಅವಳನ್ನು ‘ಅವನೀ’ ಎಂದು ಕರೆಯಬೇಕೆಂಬ ಹಂಬಲ.

ಗೌರಿತೀರ್ಥಕ್ಕೆ ಮೌನನಮನ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More