ಅನುಕ್ತ | ಅವಳು ಕಣ್ಣೀರು ಹಾಕದ ಆ ದಿನ ಬಂಗಡೆ ಫ್ರೈಗೆ ಅದೆಂಥ ರುಚಿ!

ಅವಳ ದನಿಯಲ್ಲಿ ಎಂಥದೋ ಬಿರುಸು, ಗಂಟಲು ಒದ್ದೆಯಾದಂತೆ, “ನೀ ಮನ್ಯಾಗ ಹೇಳು, ಒಪ್ಸು. ನಿಮ್ಮವ್ವನ ತಾವ ಹೇಳಾಕ ಆಗವಲ್ಲದು ಅಂದ್ರ ನಿಮ್ಮಕ್ಕನ ಕೂಟಾಗ ಹೇಳು. ಆಕಿಗ ನನ ಕಂಡ್ರ ಭಾಳ ಜೀವಾ...” ಆ ಕಡೆಯ ಮಾತು ಅದೇನಿತ್ತೋ? ಅವನು ಮದುವೆಗೆ ಸಿದ್ಧನಿಲ್ಲವೇನೋ!

ಮಾರ್ಕ್ಸ್‌ನ ಬಗ್ಗೆ ತುಂಬು ಪ್ರೀತಿಯಿದ್ದರೂ, ಅಡುಗೆ ಮನೆಯಲ್ಲಿದ್ದಾಗ ಮಾತ್ರ ‘ಮನೆಗೆಲಸವನ್ನು ಆದಷ್ಟು ಬೇಗ ಮುಗಿಸುವ ಕೆಲಸ ಎಂದು ತಿಳಿಯಬೇಕು’ ಅನ್ನೋ ಮಾತನ್ನು ಒಪ್ಪಲು ಮನಸ್ಸು ಬಾರದು. ಮನೆಯಿಡೀ ಕೋಳಿ ಕೆದರಿದಂತೆ ಹರವಿರಲಿ ಬೇಕಾದರೆ, ಅಡಿಗೆಮನೆ ಮಾತ್ರ ಯಾವತ್ತೂ ಶುಚಿರ್ಭೂತೆ, ಸದಾವತ್ಸಲೆ. "ಅಡ್ಗೆ ಅಂದ್ರೆ ಕೊಚ್ಚೋದು ಕುದಿಸೋದು ಅನ್ಕೋಬ್ಯಾಡ್ರೆ,” ಅಂತ ತನ್ನ ಹೆಣ್ಣುಬಳಗಕ್ಕೆ ಯಾವತ್ತೂ ಹೇಳುತ್ತಿದ್ದ ಅಜ್ಜಿ, ಸಾಯುವಾಗಲೂ, "ಕೋಡುಬಳೆಗೆ ಕಾಯಿಹಾಲು ಮಾಡ್ರೇ,” ಅಂತ ಹೇಳುತ್ತಲೇ ಕಣ್ಮುಚ್ಚಿದ್ದಳು. ಅಡುಗೆಮನೆ ನನ್ನ ಧ್ಯಾನದ ಕೇಂದ್ರ. ಹೊರಗಿನ ಉತಾವಳಿ ಏನೇ ಇರಲಿ, ನನ್ನನ್ನು ನನ್ನ ಜಗತ್ತಿಗೆ ಒಯ್ದು ಸಂಭಾಳಿಸಿ ಎತ್ತಿ ತರುವ ಶಕ್ತಿ ಅದಕ್ಕಿದೆ. ಮನಸ್ಸು ರೋಸಿ ಅಂಚಿನ ಮೊನಚಿಗೆ ಹಾಯ್ದಾಗಲೆಲ್ಲ, "ಒಲಿಮ್ಯಾಲೆ ಗಂಜಿ ಕುದಿಯೊಡಿಬೇಕಂದ್ರೆ ಒಲಿ ಬಾಯಾಗ ಹಾಕೋ ಕಟಗಿ ಚೂರಿಗೂ ಹದ ಇರ್ಬೇಕೆ,” ಎಂದು ಬದುಕಿನ ಹದ ಹಿಡಿಯಲು ಹೇಳುತಿದ್ದ ಅಜ್ಜಿಯ ವೇದಾಂತ ನೆನಪಾಗುತ್ತದೆ. ಕೋಳಿಗೂಡಿನ ಮೇಲೆ ಮಳೆಗಾಲಕ್ಕೆ ಅಂತ ಕಟ್ಟಿಗೆ ಒಟ್ಟುವ ಅಜ್ಜಿಗದು ಗೋಳಗುಮ್ಮಟದ ಗೋಡೆ ಕಟ್ಟುವಂಥ ಶ್ರದ್ಧೆಯ ಕೆಲಸ. ಮೊನ್ನೆ ಕಡಿದಾಳು ಶಾಮಣ್ಣ ಅವರ ಮನೇಲಿ ಶ್ರೀದೇವಕ್ಕ ಮನೆಯಿಟ್ಟ ಚೆಂದ ಕಂಡರೆ... ಓಹ್... ಮನೆಯೆಂದರದು ಗುಡಿಯೇ; ಹೆಣ್ತನದ ಅದಮ್ಯ ತ್ರಾಣ ಕಣ್ಣೆದುರು ಮರುಕಳಿಸಿತ್ತು.

ವರ್ತಮಾನದ ನನ್ನಂಥವರಿಗೆ ಅಡುಗೆಮನೆ ಸೆರಗಿನ ತುದಿಹಿಡಿದು ಮಗುವಂತೆ ಜಗ್ಗುತ್ತಿದ್ದರೂ, ಬಿಡಿಸಿ ಹೊರಬದುಕಿಗೆ ಹಾಜರಾಗುವ ಗರಜು. ನಮ್ಮ ನಗರಗಳ ಮನೆಗಳಂತೂ ಒಂದರ ಬೆನ್ನು ಇನ್ನೊಂದು ಹಿಡಿದು ರೊಪ್ಪದಲ್ಲಿ ಹಂದಿಗಳ ಹಾಗೆ ಬಿದ್ದುಕೊಂಡಿವೆ. ನಂನಮ್ಮ ಕಿಡಕಿಗಳು ನನ್ನ ಒಗ್ಗರಣೆಯನ್ನು ಅವರಿಗೂ, ಅವರ ಕಾವಲಿಯ ಬಿಸುಪನ್ನು ನನಗೂ ದಾಟಿಸುತ್ತ, ಸಹಯಾನದ ಗುಟ್ಟು ಉಸುರುತ್ತವೆ. ಮನೆ ಅಂತ ಬೇರ್ಪಡಿಸೋಕೆ ಹಾಕಿಕೊಂಡಿರುವ ಕಂಪೌಂಡು ಗೋಡೆಗಳು ನೇರಾನೇರ ಸಂಬಂಧವನ್ನು ತಡೆದಿಟ್ಟಿವೆ. ಕಣ್ಣಿಗೆ ರೆಪ್ಪೆ ಇದೆ, ಕಿವಿಗೆಲ್ಲಿದೆ? ಆ ಕಡೆಯ ಮಾತು ಈ ಕಡೆಗೂ, ಈ ಕಡೆಯ ಮಾತು ಆ ಕಡೆಗೂ ಕ್ಷಣಾರ್ಧದಲ್ಲಿ ರವಾನೆಯಾಗುತ್ತ, ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ...’ ಎಂಬ ತ್ತತ್ವ ಎದುರಿಡುತ್ತವೆ. ಈಗೀಗ ನಮ್ಮ ನಗರಗಳಲ್ಲಿ ಮನೆಯೆಂದರೆ, ಮರುಆದಾಯ ತರಬಲ್ಲ ಆಸ್ತಿ. ಇರುವ ಚೂರುಪಾರು ಜಾಗೆಯನ್ನೇ ಸರಿಸ್ಯಾಡಿ ‘ಖೋಲಿ’ ಮಾಡಿ ಬಾಡಿಗೆಗೆ ಕೊಟ್ಟರೆ, ವಿದ್ಯಾಕಾಶಿ ಎನಿಸಿಕೊಂಡಿದ್ದ ಧಾರವಾಡ ವಿದ್ಯೆಯ ಚೌಕಾಶಿ ಜಾಗೆಯಾದ ಮೇಲಂತೂ ಕಲಿಯಲು ಬರುವ ಮಕ್ಕಳ ದಂಡು ಲೆಕ್ಕಮೀರಿದ್ದು. ಯು.ಜಿ, ಪಿ.ಜಿ ಕಲಿಕೆಗಳ ಕೇಂದ್ರಗಳಷ್ಟೇ ಅಲ್ಲ; ಲೋಕದಲ್ಲಿರುವ ಸಕಲೆಂಟು ಕೋರ್ಸ್‌ಗಳಿಗೂ, ಪರೀಕ್ಷೆಗಳಿಗೂ ಇಲ್ಲಿ ತರಬೇತಿ ಸಂಸ್ಥೆಗಳಿವೆ. ನಾಡಿನ ಮೂಲೆಮೂಲೆಗಳಿಂದ ಕನಸು ಹೊತ್ತು ಕಲಿಯಲು ಮಕ್ಕಳ ದಂಡು ಬರುತ್ತಲೇ ಇರುತ್ತದೆ. ವಿಜಯಪುರ, ಕಲಬುರಗಿ, ಸಿಂಧನೂರು, ರಾಯಚೂರು, ಬಳ್ಳಾರಿ, ಕಾರವಾರಗಳ ತರಹೇವಾರಿ ಕನ್ನಡದ ತನಿಗಂಪು ಕಲಿಸಿ ಧಾರವಾಡಕ್ಕೇ ಒಂದು ಮುದ ಬಂದಂತೆ, ಬರುವವರಿಗೂ ಹೋಗುವವರಿಗೂ ಇದು ದ್ವಾರವಾಡವೇ. ಹೀಗೆ ಬರುವವರ ಆಶ್ರಯತಾಣಗಳು ಮನೆಮನೆಗಳಲ್ಲಿ ರೆಕ್ಕೆ ಹರಡಿ ನಿಂತಿರುವ ಬಾಡಿಗೆ ಕೋಣೆಗಳೇ.

ನನ್ನ ಅಡಿಗೆಕೋಣೆಯ ಆಚೆಗೇ ಹೀಗೊಂದು ಖೋಲಿಯಿದೆ. ಅಲ್ಲಿ ಹುಡಿಗಿಯರು ಉಳಿದಿರುತ್ತಾರೆ. ಅವರು ವರ್ಷವೋ, ಆರು ತಿಂಗಳೋ, ಮೂರು ತಿಂಗಳೋ ಉಳಿದು ತಮ್ಮ ಕೆಲಸ ಕಬ್ಜ ಮುಗಿಸಿ ಹೊರಡುತ್ತಿರುತ್ತಾರೆ. ಮತ್ತೆ ಇನ್ನಾರೋ ಬರುತ್ತಾರೆ. ನನ್ನ ಅವರ ಸಂಬಂಧಕ್ಕೆ ಕಂಪೌಂಡು ಗೋಡೆ ಅಡ್ಡಲಾಗಿದೆ. ಆದರೆ ಕಿವಿಯ ಬಲ, ಜೀವ ಜೀವಾಳದ ಸಂಬಂಧ ಬೆಸೆವ ನೆಲದಾಳದ ಬಿಸುಪಿನಂತಿರುತ್ತದೆ. ಅವರು ತಮ್ಮ ಕೋಣೆಯಿಂದ ಹೊರಬಂದು ಕಂಪೌಂಡು ಗೋಡೆಗೆ ಆತುಕೊಂಡು ಮೊಬೈಲಿನಲ್ಲಿ ಪಿಸುಪಿಸು ನುಡಿಯುವಾಗ, ಬೇಕಿಲ್ಲದೆಯೂ ಕಿವಿದುಂಬುವ ಆ ಹರೆಯದ ಹುಡಿಗಿಯರ ಲೋಕ ನನ್ನನ್ನು ದಶಕ-ದಶಕಗಳ ಹಿಂದಕ್ಕೂ ಮುಂದಕ್ಕೂ ಜೀಕು ಹೊಡೆಸುತ್ತಿರುತ್ತದೆ.

ಈಗ ಬಂದಿರುವ ಹುಡುಗಿಯರೂ ಹೀಗೆ ಮನಸ್ಸಿಗೆ ಹತ್ತಿರವಾಗಿಬಿಟ್ಟಿದ್ದಾರೆ. ಅವರಿಗೂ ನನ್ನ ಅಡುಗೆಮನೆಯಿಂದ ದಾಟುವ ಪರಿಮಳದ ಕಂಪು ಕರೆಯುತ್ತದೆಯೋ ಏನೋ, ಮತ್ತೆ-ಮತ್ತೆ ಕಿಟಕಿಗೆ ಬಾಚಿಕೊಂಡಂತೆ, ನನ್ನೊಂದಿಗೇ ತಮ್ಮ ಗುಟ್ಟುಗಳನ್ನು ಹೇಳಿಕೊಳ್ಳುವಂತಿರುತ್ತಾರೆ. ಅವರ ಮಾತಿನ ಧಾಟಿ ನೋಡಿದರೆ ಬಳ್ಳಾರಿ ಕಡೆಯವರು ಅನ್ನಿಸುತ್ತದೆ. ಊರಿಂದ ಕಟ್ಟಿ ತಂದ ರೊಟ್ಟಿ-ಚಟ್ನಿಯ ಗಂಟು ಕರಗುವವರೆಗೂ ಅಡುಗೆ ಉಸಾಬರಿಗೆ ಹೋಗದ ಜಾಣೆಯರು. "ಏ, ಅನು ಚಾದಕೂಟಾಗ ರೊಟ್ಟಿ ಕಲ್ಸಕಂಡ ತಿನ್ನಾಕತ್ತಿಯಲ್ಲೆ ನಿನ್ನ..." ಅಂತ ನಗೆಯ ಅಲೆ ಉಕ್ಕಿದರೆ ಇಲ್ಲಿ ನನಗೂ ನಗು. "ಹಾಂಗ್ಯಾಕ ಕುಂತೀ... ಕಂಪೌಂಡ ಹತ್ತಿ? ಬಿದ್ದರ?" ರಸ್ತೆಗೆ ಮರೆಯಾಗಿರುವ ಕಂಪೌಂಡು ಹತ್ತಿ ಓದಲು ಕೂತವಳ ಉತ್ತರ, "ಎಷ್ಟ ಓದಬೇಕಂದ್ರೂ ತೂಕಡಿಕಿ ನಿಂದರವಲ್ದು. ಇಲ್ಲಿ ಕೂತ್ರ ಅದ ಹ್ಯಾಂಗ ತೂಕಡಿಕಿ ಬರ್ತದ ಅಂಬೂದ..." "ಊರಿಗಿ... ಬ್ಯಾಡ ಬಿಡೆ, ಬಸ್‍ಚಾರ್ಜ್ ಏನ್ ಕಮ್ಮಿ ಐತಾ? ಇಲ್ಲೇ ಓದ್ಕಂಬಿಡಾಮು,” -ಹೀಗೆ ತುಂಡು-ತುಂಡು ಮಾತುಗಳು ಕೌದಿ ಹೊಲಿದಂತೆ ಅವರ ಮತ್ತು ಅವರಂಥ ಹೆಣ್ಣುಮಕ್ಕಳ ಹೋರಾಟದ ಕಥನವನ್ನು ಅರುಹುತ್ತಿದ್ದವು. ಎರಡು ಯೂನಿಫಾರಂ ಬಿಟ್ಟರೆ, ಹೊರಗೆ ಹಾಕಲು ಅಂತ ಇದ್ದ ಇನ್ನೊಂದೇ ಒಂದು ಡ್ರೆಸ್ಸು; ಆದರೂ ಕೊರತೆ ಅನ್ನಿಸದೆ ಕಳೆದ ಹೈಸ್ಕೂಲು ದಿನಗಳು ನೆನಪಾಗುತ್ತಿದ್ದವು. ಇಂದಿಗೂ ಬಟ್ಟೆಯಂಗಡಿಗೆ ಹೋದರೆ ಯಾರೋ ಕತ್ತು ಹಿಡಿದು ಹೊರಗೆ ತಳ್ಳಿದಂತಾಗುತ್ತಿರುವುದು ಅದಕ್ಕೇ ಏನೋ. ಈ ಅಪರಿಚಿತ ಮಕ್ಕಳು ನನ್ನೆದುರು ನನ್ನನ್ನೇ ಅನಾಮತ್ತಾಗಿ ನಿಲ್ಲಿಸುವ ಪರಿಗೆ ಬೆರಗೋ ಬೆರಗು.

ಮೊನ್ನೆ, ಹನಿವ ಮಳೆಯಲ್ಲಿ ಧಾರವಾಡದಲ್ಲಿ ಮೀನು ಮಾರ್ಕೆಟ್ಟಿಗೆ ಹಸಿಹಸಿ ಬಂಗಡೆ ಬಂದು ಕೂತಿದೆ ಅಂದರೆ ಸಾಮಾನ್ಯದ ಸಂಗತಿಯಾಗಿರಲಿಲ್ಲ. ಮೀನು ಸಿಕ್ಕ ದಿನ ನನ್ನ ಅಡುಗೆಮನೆ ಅಮ್ಮನನ್ನೂ ಅಜ್ಜಿಯನ್ನೂ ಅನಾಮತ್ತಾಗಿ ತಂದು ತನ್ನೊಳಗಿಟ್ಟುಕೊಂಡು ಬಿಡುತ್ತದೆ. ವಾಟೆಹುಳಿ, ಜುಮ್ಮನಕಾಯಿಗಳ ಡಬ್ಬಗಳು ಮೂಲೆಯಿಂದೆದ್ದು ಬರುತ್ತವೆ. ನೋಡುತ್ತೇನೆ, ಮುಳ್ಳು ತೆಗೆದು ಫ್ರೈ ಮಾಡಬಹುದಾದಷ್ಟು ತಾಜಾ ಮೀನು. ಬಿಡುತ್ತೇನೆಯೇ? ಅನ್ನ, ಮೀನಗಸಿ ಎಲ್ಲ ಮುಗಿದು, ಚಕಚಕಾಂತ ಬಂಗಡೆ ಸೀಳಿ ಮುಳ್ಳು ತೆಗೆದು ಹಿಡಿದರೆ ಎಡಗೈ ಹಸ್ತ ತುಂಬಿತ್ತು. ಒಂದೊಂದಕ್ಕೆ ಮಸಾಲ ಸವರಿ ಇನ್ನೇನು ಉಳಿದದ್ದು ಫ್ರೈ ತಯಾರಿ ಒಂದೇ. ಅಷ್ಟೊತ್ತಿಗೆ ಕಂಪೌಂಡಿನ ಆಚೆಯಿಂದ ಮಾತು. ಓ... ಹುಡುಗಿ ಮೊಬೈಲ್‍ನಲ್ಲಿ ಮಾತಾಡುತ್ತಿದ್ದಳು. ಕತ್ತಲನ್ನು ಕರಗಿಸುವ ಉಮೇದಿಯಲ್ಲಿ. ಓಹ್, ಇಷ್ಟು ಮಧುರವಾಗಿ ಸವಿಯಾಗಿ ಆಡಬಹುದಾದ ಮಾತುಗಳು ‘ಅವನೊಂದಿಗೆ’ ಮಾತ್ರ. ನನ್ನ ಪಳಗಿದ ಮನಸ್ಸು ಷರಾ ಬರೀತಿತ್ತು. ಇನ್ನೊಬ್ಬರ ಮಾತನ್ನು ಕೇಳಿಸಿಕೊಳ್ಳಬಾರದು, ನಿಜ. ಆದರೆ ನಾನೆಲ್ಲಿಗೆ ಹೋಗಲಿ? ನನ್ನ ಒಲೆಮೇಲಿನ ತವೆ ಬೆಂಕಿ ಸಣ್ಣಗಿಡು, ಚೂರು ಎಣ್ಣೆ ಹನಿಸು ಅಂತ ಆದೇಶಿಸುತ್ತದೆ. ನಾನೇನು ಬೇಕೂಂತ ಕೇಳಿಸಿಕೊಳ್ಳುತ್ತಿಲ್ಲವಲ್ಲ ಎಂಬ ಮೊಂಡುತನ. ತವೆ ಮೇಲಿನ ಫ್ರೈ ಹರಡಿದ ಘಮಲಿಗೂ ಅವಳು ಜಾಗ ಬದಲಿಸುತ್ತಿಲ್ಲ. ಬಹುಶಃ ಮೀನು ತಿನ್ನುವವಳೇ ಇದ್ದಾಳು. ಕೇಳುವುದು ಹೇಗೆ? ಕಾಣುತ್ತಿಲ್ಲ ಅವಳು.

ಇದನ್ನೂ ಓದಿ : ಅನುಕ್ತ | ಎಗ್ಗಿಲ್ಲದೆ ನಡೆಯುತ್ತಿದೆ ಬೇಂದ್ರೆ ಹೇಳಿದ ‘ಹಾಡಹಗಲ ಜೀವದ ಬ್ಯಾಟಿ’

ಸ್ವಲ್ಪ ಹೊತ್ತಿಗೆ, ಅವಳ ದನಿಯಲ್ಲಿ ಎಂಥದೋ ಬಿರುಸು, ಗಂಟಲು ಒದ್ದೆಯಾದಂತೆ, “ನೀ ಮನ್ಯಾಗ ಹೇಳು, ಒಪ್ಸು. ನಿಮ್ಮವ್ವನ ತಾವ ಹೇಳಾಕ ಆಗವಲ್ಲದು ಅಂದ್ರ ನಿಮ್ಮಕ್ಕನ ಕೂಟಾಗ ಹೇಳು. ಆಕಿಗ ನನ ಕಂಡ್ರ ಭಾಳ ಜೀವಾ...” ಆ ಕಡೆಯ ಮಾತು ಅದೇನಿತ್ತೋ? ಅವನು ಮದುವೆಗೆ ಸಿದ್ಧನಿಲ್ಲವೇನೋ, ಕಡೆಗೆ, ಕಟ್ಟಕಡೆಗೆಂಬಂತೆ ಅಂದಳು: “ಹೂಂ. ಕೇಳ್ಸಕಾ ಸಮಾ. ಇನ್ನು ಫೋನ್‍ಗಿನ್ ಮಾಡಾಕ ಹೋಗ್ಬೇಡ, ಬ್ಯಾಡಾ ಬಿಡು. ನಾ ಯೇನ್ ನಿನ್ನ ಹೆಸ್ರ ಮ್ಯಾಗ ಪ್ರಾಣ ತಕ್ಕೊಳಾಂಗಿಲ್ಲ. ನಿನ್ನ ದಾರಿ ನಿನಗ. ನನ್ನ ಮತ್ತ-ಮತ್ತ ಮಾತಾಡ್ಸಾಕೂ ಹೋಗ್ಬ್ಯಾಡ. ಕೇಳಕಾ ಶಂಕ್ರು. ನಂಗೂ ದಗದ ಐತಿ ಓದೂದು ಹಾಂಗ್ಯ ಬಿದ್ದೇತಿ, ತಿಳೀತಾ?” ಅವಳದನ್ನು ಎಷ್ಟು ದಿಟ್ಟವಾಗಿ ಹೇಳಿದ್ದಳೆಂದರೆ... ರೋಷವಿಲ್ಲದೆ, ಭಯವಿಲ್ಲದೆ, ಅಳು ಅದುಮಿಡದೆ ಅದ್ಯಾವುದೋ ಅನುಭಾವದ ಎತ್ತರದಲ್ಲಿದ್ದಂತೆ. ಕೇಳಿಸಿಕೊಳ್ಳುತ್ತಿದ್ದ ನಾನೂ ಅವಾಕ್ಕಾಗಿದ್ದೆ. ಗಡಿಬಿಡಿಯಲ್ಲಿ ತವೆಗೆ ಕೈ ತಾಕಿ ಚಂದದ ಬರೆಯೂ ಮೂಡಿತ್ತು. ಅವಳೀಗ... ಅಲ್ಲಲ್ಲ, ಅವಳ ದನಿಯಿಲ್ಲ. ವಿಚಿತ್ರ ಶಾಂತಿ ಕವಿದಂತೆ. ಅಯಾಚಿತವಾಗಿ ಪ್ರತಿಭಾ ನಂದಕುಮಾರ್ ಕವಿತೆಯ ಸಾಲು ನೆನಪಾಗತೊಡಗಿತ್ತು.

ಇವಳನ್ನು ನೋಡಿ

ಇವಳೇ ಜಗದಚ್ಚರಿ

ಸುಡುವೆನೆಂದಿರಿ ಸುಡಲಿಲ್ಲ

ಮುಳುಗೆಂದಿರಿ ಮುಳುಗಲಿಲ್ಲ

ಕಳೆದುಹೋಗಲು ಕಾಡಿಗಟ್ಟಿದಿರಿ

ಬದಲಿಗೆ ಕಂಡುಕೊಂಡಳು

ಮರೆತುಬಿಟ್ಟಿರಿ ನೀವು ಮರೆಯಲಿಲ್ಲ ಅವಳು

ತಾಕಲಿಲ್ಲ ಎದೆಗೆ ನಿಮ್ಮ

ಕುಹಕ ತಾತ್ಸಾರದ ಬಾಣ

ಕೆತ್ತಿದಷ್ಟೂ ಮೂಡಿ ಕತ್ತರಿಸಿದಷ್ಟು ಚಿಗುರಿ...

ಅವಳು ಕಣ್ಣೀರು ಹಾಕಲಿಲ್ಲ. ಕಣ್ಣ ಬೆಳಕಿನಲಿ ಹಾದಿ ಹುಡುಕಿದ್ದಳು. ನಿಜ. ಆವತ್ತು ಬಂಗಡೆ ಫ್ರೈಗೆ ಅದೆಂಥ ರುಚಿ. ಅವಳ ಆತ್ಮವಿಶ್ವಾಸದ ಉಸಿರು ತಾಕಿರಬೇಕು.

ಚಿತ್ರಕೃಪೆ: ಆಶಿಷ್ ಆರ್ ಗೌತಮ್

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More