ಕಾಶ್ಮೀರದಿಂದ | ಮಹಿಳಾ ಕ್ರಾಂತಿಗೆ ವೇದಿಕೆ ಆಗಲಿದೆಯೇ 2018ರ ಪಾಕ್‌ ಚುನಾವಣೆ?

ಪಾಕಿಸ್ತಾನ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 2,000ಕ್ಕೂ ಹೆಚ್ಚಿನ ಮಹಿಳೆಯರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದಾರೆ. ಅವರಲ್ಲಿ 1,100 ಮಹಿಳೆಯರು ದೇಶದ ಅತಿದೊಡ್ಡ ಪ್ರಾಂತ್ಯವಾದ ಪಂಜಾಬ್‌ ಒಂದರಲ್ಲೇ ಕಣಕ್ಕಿಳಿದಿದ್ದರೆ, ಸಿಂಧ್‍ನಲ್ಲಿ 403 ಮಹಿಳೆಯರು ಸ್ಪರ್ಧಿಸಿದ್ದಾರೆ

ಪಾಕಿಸ್ತಾನದಲ್ಲಿ ರಾಷ್ಟ್ರೀಯ ಶಾಸನಸಭೆ ಮತ್ತು ಪ್ರಾದೇಶಿಕ ಶಾಸನಸಭೆಗಳ ಚುನಾವಣೆಗಳು ಪ್ರಾರಂಭವಾಗುವುದಕ್ಕೆ ಇನ್ನು ಒಂದು ತಿಂಗಳೂ ಇಲ್ಲ. ಮತದಾನವು ಜುಲೈ 25ಕ್ಕೆ ನಿಗದಿಯಾಗಿದ್ದು, ರಾಜಕೀಯ ಪಕ್ಷಗಳು ತಮ್ಮ ಭವಿಷ್ಯವನ್ನು ರಕ್ಷಿಸಿಕೊಳ್ಳುವುದಕ್ಕೆ ತೀವ್ರ ಹೋರಾಟ ನಡೆಸಿವೆಯಲ್ಲದೆ, ಬಹಳಷ್ಟು ಸಲ ವೈಯಕ್ತಿಕ ಸಂಘರ್ಷಕ್ಕೂ ಇಳಿದಿವೆ. ಇದೇ ಹೊತ್ತಿನಲ್ಲಿ, ಪುರುಷಾಧಿಪತ್ಯದ ಯಥಾಸ್ಥಿತಿವಾದಕ್ಕೆ ಸವಾಲೊಡ್ಡಲು ನಿರ್ಧರಿಸಿರುವ ಪಾಕಿಸ್ತಾನಿ ಮಹಿಳೆಯರು, ಈ ಚುನಾವಣೆಗೆ ಬಹಳ ದೊಡ್ಡ ಪ್ರಮಾಣದಲ್ಲಿ ಇಳಿದಿದ್ದಾರೆ.

ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಇತ್ತೀಚೆಗೆ ನೀಡಿರುವ ಮಾಹಿತಿಯ ಪ್ರಕಾರ, 2,000ಕ್ಕೂ ಹೆಚ್ಚಿನ ಮಹಿಳೆಯರು ಈ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದಾರೆ. ಅವರಲ್ಲಿ 1,100 ಮಹಿಳೆಯರು ದೇಶದ ಅತಿದೊಡ್ಡ ಪ್ರಾಂತ್ಯವಾದ ಪಂಜಾಬ್ ಒಂದರಲ್ಲೇ ಕಣಕ್ಕಿಳಿದಿದ್ದರೆ, ಸಿಂಧ್‍ನಲ್ಲಿ 403 ಮಹಿಳೆಯರು ಸ್ಪರ್ಧಿಸಿದ್ದಾರೆ. ಕಳೆದ ಒಂದು ದಶಕದಿಂದ ಟೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಥರದ ಧರ್ಮಾಂಧ ಇಸ್ಲಾಂವಾದಿ ಗುಂಪುಗಳ ಹಿಂಸೆಯಿಂದ ತತ್ತರಿಸಿರುವ ಸಂಪ್ರದಾಯವಾದಿ ಖೈಬರ್ ಫಕ್ತುನಖ್ವಾ ಪ್ರಾಂತ್ಯದಲ್ಲಿ 350 ಮಹಿಳೆಯರು ಚುನಾವಣಾ ಸ್ಪರ್ಧಾ ಅಂಗಳದಲ್ಲಿದ್ದಾರೆ. ಕಳೆದೊಂದು ದಶಕದ ಅವಧಿಯಲ್ಲಿ ಟಿಟಿಪಿ ಮತ್ತು ಅದರ ಸಹಭಾಗಿ ಭಯೋತ್ಪಾದಕ ಗುಂಪುಗಳು ನೊಬೆಲ್ ಪಾರಿತೋಷಕ ವಿಜೇತೆ ಮಾಲಾಲ ಯೂಸೂಫ್‍ಝಾಯ್ ಒಳಗೊಂಡಂತೆ ಅನೇಕ ಮಹಿಳೆಯರ ಮೇಲೆ ದಾಳಿ ಮಾಡಿವೆ. ಅನೇಕ ಶಾಲೆಗಳ ಮೇಲೆ, ಶೈಕ್ಷಣಿಕ ಸಮಸ್ಥೆಗಳ ಮೇಲೆ ಮಾತ್ರವಲ್ಲದೆ, ಮಹಿಳೆಯರ ಸಬಲೀಕರಣ ಮತ್ತು ಅವರ ಹಕ್ಕುಗಳ ರಕ್ಷಣೆಗಾಗಿ ಕೈಹಾಕಿದ ಎಲ್ಲ ಸಂಸ್ಥೆಗಳ ಮೇಲೂ ಆಕ್ರಮಣ ಮಾಡಿವೆ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಹಾಗೂ ಸಾರ್ವಜನಿಕ ಬದುಕಿನಲ್ಲಿ ಮಹಿಳೆಯರು ಕಾಣಸಿಗುವುದೇ ದುಸ್ತರವಾಗಿರುವ ಉದ್ವಿಗ್ನ ಬಲೂಚಿಸ್ತಾನ ಪ್ರಾಂತ್ಯದಲ್ಲೂ 152 ಮಹಿಳೆಯರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಇವರಲ್ಲಿ ಬಹುತೇಕ ಮಹಿಳೆಯರ ಸ್ಪರ್ಧೆಯು ಸಾಂಕೇತಿಕವಾಗಿರುವುದು ನಿಜ. ಆದರೂ, ಅವರ ಸ್ಪರ್ಧೆ ಪುರುಷಾಧಿಪತ್ಯದ ಬುಡಗಳನ್ನು ಅಲುಗಾಡಿಸುತ್ತಿದೆ; ಯಾವತ್ತೂ ಪ್ರತಿರೋಧವನ್ನೇ ಎದುರಿಸದ ಅಪರಿಮಿತ ಅಧಿಕಾರದ ಊಳಿಗಮಾನ್ಯ ನೆಲೆಗಳನ್ನು ಚಿಕ್ಕಚಿಕ್ಕದಾಗಿ ಕೆದರಿ ದುರ್ಬಲಗೊಳಿಸುತ್ತಿದೆ.

ಪಾಕಿಸ್ತಾನಿ ಮಹಿಳಾ ರಾಜಕಾರಣಿಗಳು ಸಾಮಾನ್ಯವಾಗಿ ಪ್ರಭಾವಶಾಲಿ ಕುಟುಂಬಗಳಿಂದಲೋ ಅಥವಾ ಊಳಿಗಮಾನ್ಯ ಅಧಿಕಾರದ ಹಿನ್ನೆಲೆಯಿಂದಲೋ ಅಥವಾ ಅವೆರಡನ್ನೂ ಹೊಂದಿರುವ ಮನೆತನಗಳಿಂದಲೋ ಬಂದವರಾಗಿದ್ದಾರೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶಿಸುತ್ತಿರುವ ಮಹಿಳೆಯರಲ್ಲಿ ಬಹುತೇಕರು ಸಾಧಾರಣ ಹಿನ್ನೆಲೆಯಿಂದ ಮತ್ತು ಮಧ್ಯಮ ವರ್ಗದ ಕುಟುಂಬಗಳಿಂದ ಅಥವಾ ಗ್ರಾಮೀಣ ಪ್ರದೇಶದ ಕೆಳಮಧ್ಯಮ ವರ್ಗದಿಂದ ಬಂದವರಾಗಿದ್ದಾರೆ. ಅವರ ಎದುರು ಸ್ಪರ್ಧಾಕಣದಲ್ಲಿರುವ ಪುರುಷ ಅಭ್ಯರ್ಥಿಗಳು ಈ ಮಹಿಳೆಯರ ಸ್ಪರ್ಧೆಯನ್ನು ತಮ್ಮ ಅಧಿಪತ್ಯಕ್ಕೆ ಅಥವಾ ಪ್ರತಿಷ್ಠೆಗೆ ಒಡ್ಡಿದ ಸವಾಲು ಎಂದೇ ಬಗೆದಿದ್ದಾರೆ.

ಬುಡಕಟ್ಟು ಪ್ರದೇಶದಿಂದ ಬಂದಿರುವ 24 ವರ್ಷದ ಜಂರ್ತಾಜ್ ಗುಲ್ ವಾಜಿಂರ್ ಎಂಬ ಮಹಿಳೆ ಪಂಜಾಬ್ ಪ್ರಾಂತ್ಯದ ದೇರಾ ಘಜಿ ಖಾನ್ ಕ್ಷೇತ್ರದಲ್ಲಿ ಪ್ರಬಲ ಲೆಘಾರಿಗಳ ವಿರುದ್ಧ ಕಣಕ್ಕಿಳಿದಿದ್ದಾರೆ. ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್-ಇ-ಇನ್ಸಾಫ್ ಪಕ್ಷಕ್ಕೆ ಸೇರಿದ ವಾಜಿಂರ್ ಅವರು ಬ್ರಿಟಿಷ್ ಭಾರತದ ಕಾಲದಿಂದಲೂ ರಾಜಕೀಯದಲ್ಲಿ ನೆಲೆಯೂರಿರುವ ಪ್ರಬಲ ಲೆಘಾರಿ ಸಮುದಾಯದ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ್ದಾರೆ. ಅವರನ್ನು ಭಯಭೀತಗೊಳಿಸುವುದಕ್ಕೆ ಅನೇಕ ಬಾರಿ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ; ಅವರಿಗೆ ಬಹಳಷ್ಟು ಹಿಂಸೆಯ ಬೆದರಿಕೆಗಳು ಬಂದಿವೆ. ಆದರೂ ಎದೆಗುಂದದೆ, ವಿಚಲಿತರಾಗದೆ ಕಣದಲ್ಲಿದ್ದಾರೆ. ಈ ಭಾಗದಲ್ಲಿ ಸರ್ದಾರ್ ಎಂದು ಕರೆಯಲ್ಪಡುವ ಊಳಿಗಮಾನ್ಯ ದೊರೆಗಳು ಹೆಚ್ಚೂಕಮ್ಮಿ ದೇವರಂತೆಯೇ ವರ್ತಿಸುತ್ತ, ಇಡೀ ಸಮುದಾಯವನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ. ಇವರ ಕ್ರೂರ ಊಳಿಗಮಾನ್ಯ ಆಳ್ವಿಕೆಯಡಿಯಲ್ಲಿ ಯಾವುದೇ ಆಯ್ಕೆ ಇಲ್ಲದೆ, ಉತ್ತಮ ಬದುಕಿಲ್ಲದೆ ನಲುಗಿರುವ ಜನರು, ಈಗ ವಾಜಿಂರ್ ಅವರ ಚುನಾವಣಾ ರ್ಯಾಲಿಗಳಿಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹೊಸ ಭರವಸೆ ಇಟ್ಟುಕೊಂಡು ಹರಿದುಬರುತ್ತಿದ್ದಾರೆ.

ಈ ಬಾರಿ ಚುನಾವಣೆಯ ಮೂಲಕ ಹೊಸದಾಗಿ ರಾಜಕೀಯ ಪ್ರವೇಶಿಸುತ್ತಿರುವ ಮಹಿಳೆಯರ ಪೈಕಿ ಸಿಂಧ್ ಪ್ರಾಂತ್ಯದ ಥಾರ್‌ಪರ್ಕಾರ್ ಕ್ಷೇತ್ರದಿಂದ ಪ್ರಾಂತೀಯ ಚುನಾಣೆಯಲ್ಲಿ ಸ್ಪರ್ಧಿಸುತ್ತಿರುವ ಸುನಿತಾ ಪರಮಾರ್ ಎಂಬ ಹಿಂದೂ ಮಹಿಳೆ ಜನಾಕರ್ಷಣೆಯ ಕೇಂದ್ರವಾಗಿದ್ದಾರೆ. ಆಡುಮಾತಿನಲ್ಲಿ ಥಾರ್ ಎಂದೇ ಪ್ರಸಿದ್ಧವಾಗಿರುವ ಥಾರ್‌ಪರ್ಕಾರ್ ಕಳೆದ ಕೆಲವು ವರ್ಷಗಳಿಂದ ಭೀಕರ ಬರಗಾಲಕ್ಕೆ ಬಲಿಯಾಗಿ ನಿರಂತರವಾಗಿ ಸುದ್ದಿಯಲ್ಲಿದೆ. ಈ ಪ್ರದೇಶವನ್ನು ಆವರಿಸಿರುವ ಕ್ಷಾಮವು ನೂರಾರು ಜನರನ್ನು ಕೊಂದಿದೆ; ಸಾವಿರಾರು ಮಕ್ಕಳ ಅಪೌಷ್ಟಿಕತೆಗೆ ಕಾರಣವಾಗಿದೆ; ಸಾವಿರಾರು ಜನರನ್ನು ಬಡತನ, ದಾರಿದ್ರ್ರ್ಯ ಮತ್ತು ರೋಗರುಜಿನಗಳ ಕೂಪಕ್ಕೆ ದೂಡಿದೆ. ಇದು ಪಾಕಿಸ್ತಾನದಲ್ಲೇ ಅತಿ ಹೆಚ್ಚು ಹಿಂದೂ ಜನಸಂಖ್ಯೆ ಕೇಂದ್ರಿಕೃತವಾಗಿರುವ ಪ್ರದೇಶವಾಗಿದ್ದು, ೨೦೧೭ರ ಜನಗಣತಿಯ ಪ್ರಕಾರ ಈ ಪ್ರದೇಶದಲ್ಲಿರುವ 16 ಲಕ್ಷ ಜನಸಂಖ್ಯೆಯಲ್ಲಿ ಅರ್ಧದಷ್ಟು ಹಿಂದೂಗಳಿದ್ದಾರೆ. ಬರ ಮತ್ತು ಅಪೌಷ್ಟಿಕತೆಗೆ ಮಾತ್ರವಲ್ಲದೆ, ಹರೆಯದ ಹಿಂದೂ ಹುಡುಗಿಯರನ್ನು ಅಪಹರಿಸಿಕೊಂಡು ಹೋಗಿ, ಅವರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಮದುವೆ ಮಾಡಿಕೊಳ್ಳುವಂತಹ ಮುಸ್ಲಿಮರ ಕ್ರೂರ ಘಾತುಕ ಕೃತ್ಯಗಳಿಗೂ ಈ ಪ್ರದೇಶ ಕುಖ್ಯಾತಿಯಾಗಿದೆ. ಇಂತಹ ಘಟನೆಗಳು ನಡೆದಾಗಲೆಲ್ಲ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗದೆ ಸಣ್ಣದೊಂದು ನಗಣ್ಯ ಘಟನೆಯಂತೆ ಮಿಂಚಿ ಮಾಯವಾಗುತ್ತದೆ. ಅದಕ್ಕಿಂತಲೂ ಕೆಟ್ಟದ್ದೆಂದರೆ, ಪ್ರಗತಿಪರ ಮತ್ತು ಧರ್ಮನಿರಪೇಕ್ಷ ಪಕ್ಷ ಎಂದು ಕೊಚ್ಚಿಕೊಳ್ಳುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಉಸ್ತುವಾರಿಯಲ್ಲೇ ಹಿಂದೂಗಳ ಮೇಲಿನ ಈ ಕ್ರೂರ ದೌರ್ಜನ್ಯಗಳು ನಡೆಯುತ್ತಿರುವುದು. ಖುದ್ದು ಹಿಂದುಳಿದ ಮೆಂಘ್ವಾರ್ ಸಮುದಾಯಕ್ಕೆ ಸೇರಿದ ಮೂವತ್ತರ ಹರೆಯದ ಪರಮಾರ್ ಈ ದೌರ್ಜನ್ಯಗಳಿಗೆ ಸವಾಲೊಡ್ಡಿ ಚುನಾವಣಾ ಕಣಕ್ಕಿಳಿದಿದ್ದಾಳೆ. ತನ್ನ ಧರ್ಮದ ಬಗ್ಗೆ ಮಾತನಾಡದೆ ಕೇವಲ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯಿಂದ ಮಾತಾಡುವ ಅವರು, ದೌರ್ಜನ್ಯ ಮತ್ತು ತಾರತಮ್ಯಗಳನ್ನು ಸಾಂಸ್ಥೀಕರಿಸಿದ ಯಥಾಸ್ಥಿತಿವಾದಕ್ಕೆ ಸಡ್ಡು ಹೊಡೆದು ಬಹಿರಂಗ ಕಾಳಗಕ್ಕಿಳಿದು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದ್ದಾರೆ.

“ಮಹಿಳೆಯರ ಪರಿಸ್ಥಿತಿ ನಿಕೃಷ್ಟವಾಗುತ್ತಿರುವುದಕ್ಕೆ, ಅದರಲ್ಲೂ ನಿರ್ದಿಷ್ಟವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅವರ ಸ್ಥಿತಿ ಹೀನಾಯವಾಗುತ್ತಿರುವುದಕ್ಕೆ ಸಿಂಧ್ ಪ್ರಾಂತ್ಯದಲ್ಲಿ ಆಡಳಿತದಲ್ಲಿರುವ ಪಕ್ಷಗಳೇ ಕಾರಣ,” ಎಂದು ಪರಮಾರ್ ಪಿಪಿಪಿ ಪಕ್ಷದ ಹೆಸರು ತೆಗೆದುಕೊಳ್ಳದೆ ಹೇಳುತ್ತಾರೆ. ಮಹಿಳೆಯರ ಈ ಪರಿಸ್ಥಿತಿಯನ್ನು ಬದಲಿಸುವುದಕ್ಕೆ ಹಾಗೂ ಥಾರ್ ಜನರಿಗೆ ಉತ್ತಮ ಆರೋಗ್ಯಪಾಲನೆ, ಶುದ್ಧ ಕುಡಿಯುವ ನೀರು ಮತ್ತು ಒಳ್ಳೆಯ ಶಿಕ್ಷಣ ನೀಡುವುದಕ್ಕೆ ಅವರು ಬಯಸುತ್ತಿದ್ದಾರೆ.

ಇದನ್ನೂ ಓದಿ : ಕಾಶ್ಮೀರದಿಂದ | ಅಪನಂಬಿಕೆಯ ನೆಲದಲ್ಲಿ ಹೆಣಗಳನ್ನು ಎಣಿಸುತ್ತ ಬದುಕುವ ಯಾತನೆ

ಚುನಾವಣಾ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿರುವುದು ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಅವರು ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಲಿಂಗತ್ವ-ಅಲ್ಪಸಂಖ್ಯಾತರಿಗೆ ನೀಡಬೇಕಾದ ಅತ್ಯಗತ್ಯ ಮನ್ನಣೆಯ ಪ್ರಶ್ನೆಯನ್ನೂ ಮುನ್ನೆಲೆಗೆ ತಂದಿದೆ. ದೇಶದ ಚರಿತ್ರೆಯಲ್ಲೇ ಮೊಟ್ಟಮೊದಲ ಬಾರಿಗೆ ಲಿಂಗತ್ವ-ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶ ನೀಡಲಾಗಿದೆ. ಇಡೀ ದೇಶಾದ್ಯಂತ ಒಟ್ಟು 13 ಮಂದಿ ಲಿಂಗತ್ವ-ಅಲ್ಪಸಂಖ್ಯಾತರು ಚುನಾವಣಾ ಕಣದಲ್ಲಿದ್ದು, ಅವರಲ್ಲಿ ಇಬ್ಬರು ರಾಷ್ಟ್ರೀಯ ಶಾಸನಸಭೆಗೆ ಸ್ಪರ್ಧಿಸಿದ್ದಾರೆ. ಕಳೆದ ವರ್ಷ, ದೇಶದ ಅತ್ಯುನ್ನತ ನ್ಯಾಯಾಲಯವು ಅವರ ಪರವಾಗಿ ಮಧ್ಯಪ್ರವೇಶ ಮಾಡಿ ಜನಗಣತಿಯಲ್ಲಿ ಅವರನ್ನೂ ಸೇರಿಸುವಂತೆ, ಅವರಿಗೆ ಮತದಾನದ ಹಕ್ಕನ್ನು ನೀಡಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ, ಅವರಿಗೆ ರಾಷ್ಟ್ರೀಯ ಗುರುತಿನ ದಾಖಲಾತಿ ನೀಡುವಂತೆ ಹಾಗೂ ಅವರಿಗೆ ಆಸ್ತಿಯ ಹಕ್ಕನ್ನು ಕೊಡುವಂತೆ ಸರ್ಕಾರಕ್ಕೆ ನಿರ್ದೇಶನ ನಿಡಿತ್ತು. ಕಳೆದ ಆಗಸ್ಟ್‌ನಲ್ಲಿ ಪ್ರಕಟವಾದ ಜನಗಣತಿಯ ಪ್ರಕಾರ, ದೇಶದ 20.8 ಕೋಟಿ ಜನಸಂಖ್ಯೆಯಲ್ಲಿ 10,418 ಲಿಂಗತ್ವ-ಅಲ್ಪಸಂಖ್ಯಾತರಿದ್ದಾರೆ.

ಸಾರ್ವಜನಿಕ ನಡೆನುಡಿಯಲ್ಲಿ ಅರ್ಥಪೂರ್ಣ ಬದಲಾವಣೆಗಳನ್ನು ಮಾಡುವುದಕ್ಕೆ ಸಾಕಷ್ಟು ಪ್ರೇರೇಪಣೆ ಮತ್ತು ಕಾನೂನಾತ್ಮಕ ಮಧ್ಯಪ್ರವೇಶಿಕೆಗಳು ಬೇಕಾಗುತ್ತವೆಯಾದರೂ, 2018ರ ಚುನಾವಣೆಗಳು ಈಗಾಗಲೇ ಆ ನಿಟ್ಟಿನಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಿವೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More