ಏಕತಾರಿ | ಈಗಲಾದರೂ ನಾವೆಲ್ಲ ದುಃಖದ ಸ್ಪರ್ಧೆಯಿಂದ ಹಿಂದೆ ಸರಿಯಬೇಕಿದೆ

ಎಲ್ಲರಿಗೂ ದುಃಖ ಇದ್ದೇ ಇರುತ್ತದೆ. ಆದರೆ, ಆ ಎಲ್ಲರ ದುಃಖ ಸಮಾನವಾಗಿರುವುದು ಸಾಧ್ಯವಿಲ್ಲ. ಹೆಣ್ಣಿನ ಸಮಸ್ಯೆ ಒಂದು ಸಮಸ್ಯೆ ಆಗಿರುವ ಸಂದರ್ಭದಲ್ಲಿಯೇ ಅದು ದಲಿತ ಸಮಸ್ಯೆಗೆ ಸಮವಲ್ಲ. ಹಾಗೆಯೇ, ಸವರ್ಣೀಯ ಹೆಂಗಸರ ಸಮಸ್ಯೆ ಮತ್ತು ದಲಿತ ಹೆಣ್ಣುಮಕ್ಕಳ ಸಮಸ್ಯೆ ಸಮವಲ್ಲ

ಕಾಶ್ಮೀರದಲ್ಲಿ ಪತ್ರಕರ್ತ ಶುಜಾತ್ ಬುಖಾರಿ ಅವರ ಹತ್ಯೆಯಾದ ಬೆನ್ನಲ್ಲಿ ಗೆಳತಿಯೊಬ್ಬಳು ಸಾಮಾಜಿಕ ಜಾಲತಾಣದದಲ್ಲಿ ಆಕ್ರೋಶಭರಿತವಾಗಿ ಒಂದೆರಡು ಮಾತು ಹೇಳಿ, “ಕದನ ಪ್ರದೇಶದಲ್ಲಿ ಸತ್ಯ ನುಡಿಯುವುದು ಸುಲಭವಲ್ಲ. ನುಡಿದಾಗ ಅದರ ಪರಿಣಾಮ ಯಾವ ಹಂತಕ್ಕೆ ಹೋಗಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ," ಎಂಬರ್ಥದ ಮಾತನ್ನೂ ಆಡಿದ್ದಳು. ಆಕೆ ಈ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಓರ್ವ ಪತ್ರಕರ್ತ ಮಿತ್ರ ಆ ಪೋಸ್ಟಿಗೆ ಒಂದು ಕಾಮೆಂಟ್ ಹಾಕಿದ್ದ. "ಪತ್ರಕರ್ತರಿಗೆ ಭಾರತವೇನೂ ಸ್ವರ್ಗವಲ್ಲ. ಆದರೆ, ಈ ಕಾಶ್ಮೀರ ಮತ್ತು ಈಶಾನ್ಯ ರಾಜ್ಯದ ಪತ್ರಕರ್ತರು ತಮ್ಮ ಕಷ್ಟ ಇತರರ ಕಷ್ಟಕ್ಕಿಂತ ಹೆಚ್ಚು ಭೀಕರವಾದದ್ದು ಎನ್ನುವಂತೆ ಅದ್ಯಾಕೆ ವರ್ತಿಸುತ್ತಾರೋ ಗೊತ್ತಿಲ್ಲ!" ಎಂಬರ್ಥದ ಕಮೆಂಟ್ ಅದಾಗಿತ್ತು.

ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ರಾಜಕೀಯ ಪರಿಸ್ಥಿತಿ ಕುರಿತು ಅರಿವು ಮತ್ತು ಸಹಾನುಭೂತಿ ಇರುವ ಮಿತ್ರ ಈ ರೀತಿಯಾದ ಮಾತನ್ನು ಆಡಿದ್ದು ಸ್ವಲ್ಪ ಅಸಹಜವಾಗಿತ್ತು. ಆದರೂ, ದಮನಿತ ಸಮುದಾಯಕ್ಕೆ ಸೇರಿದ ಈತನಿಗೆ ಭಾರತದಲ್ಲಿ ಸಹ ವಾತಾವರಣ ಪತ್ರಕರ್ತರಿಗೆ ಅನುಕೂಲಕರವಾಗಿಲ್ಲ, ಸುಗಮವಾಗಿಲ್ಲ ಎಂದೆನಿಸಿದರೆ ಅದನ್ನು ಅರ್ಥಮಾಡಿಕೊಳ್ಳಬೇಕು.

ಹಾಗೆಂದ ಮಾತ್ರಕ್ಕೆ ಕದನ ಪ್ರದೇಶದ ಪತ್ರಕರ್ತರ ಸ್ಥಿತಿ ಮತ್ತು ಸದ್ಯದ ಭಾರತದಲ್ಲಿ ಅಲ್ಪಸಂಖ್ಯಾತ ಮತ್ತು ದಮನಿತ ಸಮುದಾಯಗಳಿಗೆ ಸೇರಿದ ಪತ್ರಕರ್ತರ ಪಾಡು-ಪರಿಸ್ಥಿತಿ, ಆತಂಕ ಸಮನಾದದ್ದು, ಒಂದೇ ತೂಕದ್ದು ಎಂದೇನಲ್ಲ. ಬಹುಶಃ ಹಾಗೆಂದು ಹೇಳುವುದು ಆ ಕಮೆಂಟಿನ ಉದ್ದೇಶ ಆಗಿರಲಿಕ್ಕೂ ಇಲ್ಲ. ಆದರೂ ಈ ಪೋಸ್ಟ್ ಮತ್ತು ಕಮೆಂಟಿನ ಮಾತುಕತೆಯಲ್ಲಿ ಈಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಒಂದು ವೈಖರಿಯ ಝಲಕ್ ಕಾಣಿಸುತ್ತದೆ, ಗಮನಕ್ಕೆ ಬರುತ್ತದೆ. ಕಳೆದ ಬೇಸಿಗೆಯಲ್ಲಿ ಹೆಗ್ಗೋಡಿನಲ್ಲಿ ತತ್ವಶಾಸ್ತ್ರ ಕುರಿತಾದ ಒಂದು ಶಿಬಿರದಲ್ಲಿ ಮಾತನಾಡುತ್ತ, ಸದ್ಯ ‘ಎಕಾಮಿನಿಕ್ ಆಂಡ್ ಪೊಲಿಟಿಕಲ್ ವೀಕ್ಲಿ’ ಪತ್ರಿಕೆಯ ಸಂಪಾದಕರಾಗಿರುವ ಚಿಂತಕ ಗೋಪಾಲ್ ಗುರು, ಈ ವೈಖರಿಯನ್ನು 'ದುಃಖದ ಸ್ಪರ್ಧೆ' ಎಂದು ಕರೆದರು.

ಬಹುರೂಪಿ ಆದ ಬಹುತ್ವದಿಂದ ಕೂಡಿದ ಈ ಶ್ರೇಣೀಕೃತ ಸಮಾಜದಲ್ಲಿ ತುಳಿತಕ್ಕೆ ದಮನಕ್ಕೆ ಒಳಗಾದ ಸಮುದಾಯಗಳು ಬಹಳಷ್ಟಿವೆ; ದಲಿತರು, ಸ್ತ್ರೀಯರು, ಜನಾಂಗೀಯ ಅಲ್ಪಸಂಖ್ಯಾತರು, ರಾಜಕೀಯ ಆಕ್ರಮಣಕ್ಕೆಒಳಗಾದವರು, ಬಡವರು, ತೃತೀಯ ಲಿಂಗಿಗಳು, ಲೈಂಗಿಕ ಅಲ್ಪಸಂಖ್ಯಾತರು ಇತ್ಯಾದಿ ಇತ್ಯಾದಿ. ಬಗೆಬಗೆಯ ಅಸಮಾನತೆ ಮತ್ತು ವ್ಯವಸ್ಥಿತ ಮಾತ್ರವಲ್ಲದೆ ವ್ಯವಸ್ಥೆಯೇ ಸೂತ್ರಧಾರಿಯಾದ, ಕಾರಣೀಕೃತವಾದ ಅದೃಶ್ಯ, ಅಗೋಚರ ಹಿಂಸೆ ಈ ಸಮಾಜದಲ್ಲಿ ಸಾಧ್ಯ. ಹೀಗಿರಲು ಇಲ್ಲಿ ನೊಂದವರು ಹಲವರು.

ಗೋಪಾಲ್ ಗುರು ಯಾವುದನ್ನು 'ದುಃಖದ ಸ್ಪರ್ಧೆ' ಎಂದು ಕರೆದರೋ ಆ ವೈಖರಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ನಾವು ಗಮನಿಸಿದ್ದೇವೆ. ಶೋಷಣೆ ಮಾಡಿದ ಸಮುದಾಯಗಳೇ, "ನಮ್ಮ ದುಃಖ ಹೇಳತೀರದು," ಎಂಬಂತೆ ಅಳುತ್ತಿರುವುದರಿಂದ ಹಿಡಿದು, ದಮನಿತ ಸಮುದಾಯಗಳು ಉಳಿದ ದಮನಿತ ಸಮುದಾಯಕ್ಕಿಂತ ಹೆಚ್ಚಿನ ದುಃಖ ತಮ್ಮದು ಎಂಬಂತೆ ಬಿಂಬಿಸುವುದು ಕೂಡ ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುವಂಥದ್ದೇ. ಇದು ಸಾಮಾಜಿಕ ಜಾಲತಾಣದ ಆಚೆಗೂ ಕಾಣಿಸುವ ಸಂಗತಿಯೇ; ವರ್ತಮಾನದ ಸಂವಾದಗಳ ಒಂದು ಲಕ್ಷಣ ಕೂಡ.

ಶೋಷಣೆ ಮಾಡಿದ ಸಮುದಾಯಗಳ ದುಃಖದ ಕತೆ ಬಿಟ್ಟು ದಮನಿತ ಸಮುದಾಯಗಳ ದುಃಖದ ಕತೆ ಹೇಳಬೇಕಾದದ್ದೇ ಮತ್ತು ಕೇಳಬೇಕಾದದ್ದೇ ಎಂಬುದರ ಬಗ್ಗೆ ಎರಡು ಮಾತಿಲ್ಲ, ಇರಬಾರದು ಕೂಡ. ಆದರೆ, ಈ ದುಃಖದ ಕತೆಗಳು ಸ್ಪರ್ಧೆಗಿಳಿದಂತಾದಾಗ ಬಹುಶಃ ಈ ದುಃಖಗಳು ದುಃಖಗಳಾಗಿಯೇ ಉಳಿಯುವ ಸಂಭವ ಇದೆ. ಅದಕ್ಕೆ ಮುಕ್ತಿ ಇಲ್ಲವಾಗಬಹುದು, ಇಲ್ಲವೇ ಅದನ್ನು ಪಡೆಯುವ ಮಾರ್ಗ ಇನ್ನೂ ದೂರಾಗಬಹುದು.

ಅಂದು ಗೋಪಾಲ್ ಗುರು ಮಾತನಾಡುತ್ತ, “ಶೋಷಿತ, ದಮನಿತ ಸಮುದಾಯಗಳ ಜನ ತಾವೆಲ್ಲರೂ ಸಮಾನ ದುಃಖಿಗಳು ಎಂಬುದನ್ನು ಅರಿಯಬೇಕಾಗಿದೆ,” ಎಂದರು. ಹಾಗಾದಾಗ ಮಾತ್ರ ಎಲ್ಲರಿಗೂ ದುಃಖದಿಂದ ಪಾರಾಗಲು ಸಾಧ್ಯ ಎಂಬ ಮಾತನ್ನು ಸೇರಿಸಿದರು ಕೂಡ. ದುಃಖದ ಸ್ಪರ್ಧೆ ಎಲ್ಲ ಬಗೆಯ ಶೋಷಣೆಯ ವಿರುದ್ಧ ಇರುವ ಹೋರಾಟಕ್ಕೆ ಬಹಳ ಅನಾರೋಗ್ಯಕರ ಎಂಬುದರ ಬಗ್ಗೆ ಸಂಪೂರ್ಣ ಸಮ್ಮತಿ ಇದ್ದರೂ ನನಗೆ ಗೋಪಾಲ್ ಗುರು ಹೇಳಿದ ಮಾತು- ಅಂದರೆ ನಾವೆಲ್ಲ ಸಮಾನ ದುಃಖಿಗಳು- ಎಂಬುದರ ಬಗ್ಗೆ ಸಮ್ಮತಿ ಇರಲಿಲ್ಲ, ಈಗಲೂ ಇಲ್ಲ.

ಅಂದು ಅವರ ಮಾತು ಮುಗಿದ ಮೇಲೆ ಊಟದ ವಿರಾಮ ಸಿಕ್ಕಾಗ ಗೋಪಾಲ್ ಗುರು ಅವರು ತಮ್ಮ ಕೊಠಡಿಗೆ ಹೋಗುತ್ತಿದ್ದಾಗ ಅವರೊಂದಿಗೆ ನೆಡೆಯುತ್ತ ಹೇಳಿದೆ: "ಸರ್, ಬಹುಶಃ ಎಲ್ಲರ ದುಃಖ ಖರೆ ಇರುವಾಗಲೂ ಎಲ್ಲರ ದುಃಖ ಸಮಾನವಾಗಿರುವುದು ಸಾಧ್ಯವಿಲ್ಲ. ನೋಡಿ ಸರ್, ಹೆಣ್ಣಿನ ಸಮಸ್ಯೆ ಒಂದು ಸಮಸ್ಯೆ ಆಗಿರುವ ಸಂದರ್ಭದಲ್ಲಿಯೇ ಅದು ದಲಿತ ಸಮಸ್ಯೆಗೆ ಸಮವಲ್ಲ. ಉದಾಹರಣೆಗೆ, ಸವರ್ಣೀಯ ಹೆಂಗಸರ ಸಮಸ್ಯೆ ಮತ್ತು ದಲಿತ ಹೆಣ್ಣುಮಕ್ಕಳ ಸಮಸ್ಯೆ ಸಮವಲ್ಲ. ಇನ್ನೂ ಹೇಳುತ್ತ ಹೋದರೆ, ದಲಿತ ಹೆಂಗಸರ ಮತ್ತು ದಲಿತರಲ್ಲಿರುವ ಲೈಂಗಿಕ ಅಲ್ಪಸಂಖ್ಯಾತರ ದುಃಖ ಸಮಾನವಲ್ಲ. ಹೌದಲ್ವಾ?" ಗೋಪಾಲ್ ಗುರು, "ಹೌದು," ಎಂದು ತಲೆ ಅಲುಗಾಡಿಸುತ್ತಿರುವಾಗ, "ಬಡ ಬ್ರಾಹ್ಮಣರ ದುಃಖವನ್ನು ದಲಿತರ ದುಃಖಕ್ಕೆ ಸಮ ಎನ್ನುತ್ತಲೇ ಅಲ್ಲವೇ ಬ್ರಾಹ್ಮಣರು ಮೀಸಲಾತಿಯನ್ನು ವಿರೋಧಿಸುವುದು?" ಎಂದೆ.

"ಹಾಗಿದ್ದರೆ ನಾವೆಲ್ಲ ಸಮಾನದುಃಖಿಗಳಲ್ಲ ಅಲ್ವಾ?" ಎಂದು ಹೇಳಿದ ಗೋಪಾಲ್ ಗುರು, "ನಾವೆಲ್ಲ ಸಮಾನ ದುಃಖಿಗಳು ಎಂದು ಭಾವಿಸದಿದ್ದರೆ ಶೋಷಣೆ ವಿರುದ್ಧ ಐಕ್ಯವಾಗಿ ಹೋರಾಡಲು ಸಾಧ್ಯವಾಗದು," ಎಂದರು. ಈ ಸಮ್ಮಿಶ್ರ ಹೋರಾಟದ ಕುರಿತು ನನಗೆ ಸಮ್ಮತಿ ಇತ್ತು, ಮತ್ತು ಇಂದಿಗೂ ಇದೆ.

"ನನ್ನ ಪ್ರಕಾರ, ನಾವೆಲ್ಲ ಸಮಾನ ದುಃಖಿಗಳು ಆಗಿರದೆ ಇದ್ದರೂ ನಾವೆಲ್ಲರೂ ಸಹದುಃಖಿಗಳು ಮತ್ತು ಬೇಗಂಪುರಾ ಕಡೆ ಹೊರಟಿರುವ ಸಹ ಪಯಾಣಿಗರು," ಎಂದೆ. "ಸಹದುಃಖಿಗಳು- ಇದು ಚೆನ್ನಾಗಿದೆ," ಎಂದರು ಗೋಪಾಲ್ ಗುರು.

‘ಸಹದುಃಖಿಗಳು’ ಎಂಬ ನುಡಿಗಟ್ಟು ಹೊಳೆದದ್ದು ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಬರೆದ ಒಂದು ಸಾಲಿನಿಂದ- 'ಬಡಾ ಹೈ ದರ್ದ್ ಕಾ ರೀಶ್ತಾ ಯೇ ದಿಲ್ ಗರೀಬ್ ಸಹಿ.' ಜೊತೆಗೆ, ನಾವು ನಮ್ಮ-ನಮ್ಮ ವೈಯಕ್ತಿಕ ನೋವಿನ ಅನುಭವದ ಮುಖಾಂತರ ಇನ್ನೊಬ್ಬರ ನೋವನ್ನು- ಅದು ನಮ್ಮ ನೋವಿಗಿಂತ ದೊಡ್ಡದಾಗಿದ್ದರೂ ಇಲ್ಲ ಚಿಕ್ಕದಾಗಿದ್ದರೂ- ಅರಿಯಬಹುದು ಎಂಬ ನನ್ನ ಒಂದು ನಂಬಿಕೆಯಿಂದ.

‘ಹ್ಯಾಮ್ಲೆಟ್’ ನಾಟಕದಲ್ಲಿ ಬರುವ ಒಂದು ಸಾಲು ಹೀಗಿದೆ; "ವಾಟ್ ಈಸ್ ಹೀ ಟು ಹೆಕುಬಾ ಅಂಡ್ ಹೆಕುಬಾ ಟು ಹಿಮ್?" ತನಗೆ ನೇರವಾಗಿ ಯಾವುದೇ ಸಂಬಂಧಪಡದ ಒಂದು ಪಾತ್ರವನ್ನು ತನ್ನದಾಗಿಸಿಕೊಂಡಾಗ ಆ ಪಾತ್ರದ ನೋವನ್ನು ತನ್ನದೇ ನೋವಾಗಿ ಅನುಭವಿಸುವ ಪರಿವರ್ತಿಸಿಕೊಳ್ಳುವ ನಟನ ಕುರಿತಾಗಿ ಬರುವ ಈ ಮಾತು, ಸಾಹಿತ್ಯಕ್ಕೆ, ಕಲೆಗೆ ಇರುವ ಶಕ್ತಿಯನ್ನು ಮಾತ್ರ ತೋರಿಸುವುದಲ್ಲ. ಬದಲಾಗಿ, ಒಂದು ನೋವು ಇನ್ನೊಂದು ನೋವನ್ನು ಅರ್ಥ ಮಾಡಿಕೊಳ್ಳುವ ಸಾಧ್ಯತೆಯನ್ನೂ ತೋರಿಸುತ್ತದೆ ಮತ್ತು ನೋವಿನ ಮೂಲಕ ಕಾಲ-ದೇಶ ವಾಸ್ತವ-ಕಲ್ಪನೆ ಈ ಎಲ್ಲ ಗಡಿಗಳನ್ನು ಮೀರಿ ಜನರು ಒಂದಾಗಬಲ್ಲ ಸಾಧ್ಯತೆಯನ್ನೂ ತೋರಿಸುತ್ತದೆ.

ಗಾಂಧಿಯನ್ನು ರೈಲಿನಿಂದ ಹೊರದೂಡಲ್ಪಟ್ಟ ಘಟನೆ ಘಟಿಸಿ ಇಲ್ಲಿಗೆ ಭರ್ತಿ ೧೨೫ ವರ್ಷವಾಯಿತು. ಗಾಂಧಿಯ ಕುರಿತಾಗಿ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದ ಅನಂತಮೂರ್ತಿ ಆಗಾಗ ಹೇಳುತ್ತಿದ್ದ ಒಂದು ಮಾತು ಏನೆಂದರೆ, "ಅಂದು ತನ್ನ ಅಸ್ಮಿತೆಗಾಗಿ ರೈಲಿನಿಂದ ಹೊರದಬ್ಬಲ್ಪಟ್ಟಾಗ ಗಾಂಧಿಗೆ ಭಾರತದಲ್ಲಿ ದಲಿತರ ಸ್ಥಿತಿಯ ಬಗ್ಗೆ ಅರಿವಾಯಿತು." ಗಾಂಧಿ ಜಾತಿಪದ್ಧತಿಯನ್ನು ಅದೆಷ್ಟು ಸರಿಯಾಗಿ ಮತ್ತು ಆಳವಾಗಿ ಗ್ರಹಿಸಿದ್ದರು, ಜಾತಿವಿನಾಶದ ಕುರಿತು ಅವರಿಗೆಷ್ಟು ನಿಷ್ಠೆ ಇತ್ತು ಎಂಬುದರ ಬಗ್ಗೆ ಚರ್ಚೆ ನಡೆಸಬಹುದು. ಯಾಕೆಂದರೆ, ಅದು ತಿಳಿಯಾಗಿಯೇ ಇತ್ತು. ಆದರೆ, ಜಾತಿ ವ್ಯವಸ್ಥೆಯ ಹಿಂಸೆಗೆ ಒಳಗಾಗುವ ಮನುಷ್ಯರ ಬಗ್ಗೆ ಗಾಂಧಿಗೆ ಇದ್ದ ಕಾಳಜಿ ಮಾತ್ರ ಸುಳ್ಳಲ್ಲ. ಅವರ ಹಿನ್ನಲೆ ಅವರ ಪರಾನುಭೂತಿಗೂ ಒಂದು ಮಿತಿ ತಂದಿತ್ತು ಎಂಬುದನ್ನು ಒಪ್ಪಿಕೊಂಡಾಗಲೂ ಅವರು ತನ್ನ ನೋವಿನ ಮೂಲಕ ಇತರರ ನೋವನ್ನು ನೋಡಿದಾಗ ಆ ಮಿತಿಯನ್ನು ಒಂದಿಷ್ಟಾದರೂ ದಾಟಲು ಸಾಧ್ಯವಾಗಿತ್ತು ಎಂಬುದನ್ನು ಅಲ್ಲಗಳೆಯಲಾಗದು. ಇದೇ ಅಲ್ಲವೇ ಸಮಾನ ದುಃಖಿಯಲ್ಲದೆ ಇದ್ದಾಗಲೂ ಸಹ-ದುಃಖಿಯಾಗುವುದು ಮತ್ತು ಆ ಮುಖಾಂತರ ಇನ್ನೊಬ್ಬರ ದುಃಖದ ನಿರ್ವಾಣದಲ್ಲಿ ಭಾಗಿಯಾಗುವುದು ಎಂದರೆ!

ದಮನಿತರು ದುಃಖದ ಸ್ಪರ್ಧೆಗೆ ಇಳಿದಾಗ ಅದರಿಂದಾಗುವ ಲಾಭ ಶೋಷಣೆ ಮಾಡುವ ಶಕ್ತಿಗಳಿಗೇ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಬಹುಶಃ ಈ ದುಃಖದ ಸ್ಪರ್ಧೆಯನ್ನು ದಮನಿತರ ನಡುವೆ ಏರ್ಪಡಿಸಲೆಂದೇ ಶೋಷಕ ಸಮುದಾಯವಾದವರು ತಮ್ಮ ದುಃಖದ ಕತೆಯನ್ನು ಉಳಿದವರ ದುಃಖದ ಜೊತೆಗೆ ಸ್ಪರ್ಧೆಗೆ ಬಿದ್ದವರಂತೆ ಹೇಳುತ್ತ, ಈ ಅನಾರೋಗ್ಯಕರ ಪದ್ದತಿಯನ್ನು ಚಾಲ್ತಿಗೆ ತರುವುದು!

ಕೆಲವು ವರ್ಷಗಳ ಹಿಂದೆ ನಾನು ನನ್ನ ಖಿನ್ನತೆಯ ಸಮಸ್ಯೆಯನ್ನು ಆಗ ನಾನು ಬಹಳವಾಗಿ ಗೌರವಿಸುತ್ತಿದ್ದ ಓರ್ವ ಹಿರಿಯರ ಬಳಿ ಹೇಳಿಕೊಂಡೆ. ಆಗ ಅವರು ನನ್ನ ಅಸ್ತಿತ್ವವಾದಿ ಒಂಟಿತನವನ್ನು, ಪರಕೀಯತೆಯನ್ನು ಒಂದು ನಗಣ್ಯ ವಿಚಾರವೆಂಬಂತೆ, "ನಿನ್ನ ಸುತ್ತ ಮುತ್ತ ನೋಡು. ಆಗ ನಿನಗೆ ಇಲ್ಲಿನ ಕೂಲಿಕಾರ್ಮಿಕರು ಮತ್ತಿತರರ ಕಷ್ಟ ಕಾಣಿಸುತ್ತದೆ. ಅವರ ಕಷ್ಟದ ಮುಂದೆ ನಿನ್ನ ಕಷ್ಟ ಎಂಥದ್ದು?" ಎಂದು ಕೇಳಿದರು. ಆ ಕ್ಷಣ ನನಗೆ ನಾನು ಬಹಳ ಸ್ವಾರ್ಥಿ ಎಂಬಂತೆಯೂ ಮತ್ತು ನನಗೆ ಆ ಮಾತನ್ನು ಹೇಳಿದ ಆ ಹಿರಿಯರು ಬಹಳ ಸೂಕ್ಷ್ಮ ಮತ್ತು ವಿಶಾಲ ಹೃದಯಿಯಂತೆ ಕಂಡರು. ಇಂದು ಹಿಂತಿರುಗಿ ನೋಡುವಾಗ ಅದೆಲ್ಲ ತಲೆಕೆಳಗಾಗಿ ಕಾಣಿಸುತ್ತದೆ. ನನ್ನ ದುಃಖವನ್ನು ದುಃಖವೇ ಅಲ್ಲ ಎಂದು ಹೇಳಿಕೊಂಡಾಗ ನನಗೆ ಇತರರ ದುಃಖ ಅರ್ಥವಾಗುವುದೂ ಅಷ್ಟಕ್ಕೇ ಇದೆ!

ಇದನ್ನೂ ಓದಿ : ಏಕತಾರಿ | ಕಾಶ್ಮೀರದ ವರದಿ ಮಾಡುವಾಗ ನಮ್ಮ ಮಾಧ್ಯಮ ಹಿಡಿಯುವ ದಾರಿಯೇ ಬೇರೆ!

ನಿಜವಾಗಿಯೂ ನಾವು ನಮ್ಮ ದುಃಖವನ್ನು ಸಂಪೂರ್ಣವಾಗಿ ಅನುಭವಿಸಿ ಆ ದುಃಖದ ಮೂಲಕ ಇತರರ ದುಃಖವನ್ನು ಅರಿಯಬೇಕೇ? ದುಃಖವನ್ನು ಅರಿವಿನ ಮಾರ್ಗವಾಗಿಸಿಕೊಳ್ಳಬೇಕು. ನನ್ನ ಅಸ್ತಿತ್ವವಾದಿ ಒಂಟಿತನವನ್ನು ನಾನು ಬದಿಗೆ ಸರಿಸದೆ ಆ ದುಃಖವನ್ನು ಅನುಭವಿಸುತ್ತ, ಇಲ್ಲಿಯ ದಮನಿತರ ಪರಕೀಯ ಭಾವನೆಯನ್ನು ಅರಿಯಬಹುದು ಮತ್ತು ಸಹದುಃಖಿಯಾಗಿ ಬೇಗಂಪುರಾದ ಕಡೆಗೆ ಸಾಗುವ ಹಾದಿಯಲ್ಲಿ ದಮನಿತರೆಲ್ಲರ ಸಹಪಯಣಿಗನಾಗಬಹುದು. ದುಃಖವನ್ನು ಸ್ಪರ್ಧೆಗೆ ಇಳಿಸದೆ ಐಕ್ಯತೆ ಸಾಧಿಸಲು ಬೇಕಾದ ಹತ್ಯಾರವಾಗಿಸಿಕೊಳ್ಳಬೇಕು.

ಭಾರತದ ಪತ್ರಕರ್ತರ ಪರಿಸ್ಥಿತಿ ಕಾಶ್ಮೀರ ಮತ್ತು ಈಶಾನ್ಯ ಪ್ರದೇಶದ ಪತ್ರಕರ್ತರ ಪರಿಸ್ಥಿತಿಯಷ್ಟು ಕೆಟ್ಟದಲ್ಲದೆ ಇದ್ದರೂ, ಇಲ್ಲಿನ ಸ್ಥಿತಿಯೂ ಚಿಂತಾಜನಕವಾಗಿದೆ. ಈ ನೋವುಗಳು ಕಾಶ್ಮೀರದ ಪತ್ರಕರ್ತರನ್ನೂ, ಈಶಾನ್ಯ ಭಾರತದ ಪತ್ರಕರ್ತರನ್ನೂ, ಭಾರತದಲ್ಲಿನ ದಮನಿತ ಸಮುದಾಯಗಳಿಗೆ ಸೇರಿದ ಪತ್ರಕರ್ತರನ್ನೂ ಸಹದುಃಖಿಗಳನ್ನಾಗಿ ಮಾಡುತ್ತದೆ.

ಸಹದುಃಖ ನಮ್ಮನ್ನು ಸಹಪಯಣಕ್ಕೆ ಸಜ್ಜುಗೊಳಿಸಬೇಕು ಮತ್ತು ಈ ಪಯಣಕ್ಕೆ ಶಕ್ತಿ ತುಂಬಬೇಕು. ಏಕೆಂದರೆ, ಬೇಗಂಪುರಾ ಇನ್ನೂ ದೂರವಿದೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More