ಹಗೇವು | ನಾಟಿ ಎಂಬ ಕಂಬಳದ ಕಳೆದ ಕಾಲದ ಸಂಭ್ರಮ

ಈ ಹಿಂದೆ ನಾಟಿಗಾಗಿ ವಾರದ ಮುಂಚೆಯೇ ತಯಾರಿ ಬಿರುಸುಗೊಳ್ಳುತ್ತಿತ್ತು. ಸಸಿ ಬಿಡುವುದು, ಗದ್ದೆ ಹೂಟಿ ಮಾಡಿ ಹದ ಮಾಡುವುದು, ಹಾಳಿ (ಬದು) ಕಡಿಯುವುದು ಮುಂತಾದ ಕೆಲಸಗಳನ್ನು ಹೊರತುಪಡಿಸಿಯೂ, ನಾಟಿಯ ದಿನ ಊಟ-ವಗೈರೆಗಳ ಸಿದ್ಧತೆಯದ್ದೇ ದೊಡ್ಡ ಹಬ್ಬದ ಸಡಗರ

ಊರಲ್ಲಿ ಈಗ ಜೋರು ನಾಟಿ ಶುರುವಾಗಿದೆ. ಶುಂಠಿ, ಜೋಳದ ಬೆಳೆಗಳ ಆರಂಭಿಕ ಆರೈಕೆಯ ಕೆಲಸಗಳನ್ನು ಮುಗಿಸಿ, ಬಿಡುವು ಮಾಡಿಕೊಳ್ಳುವ ಹೊತ್ತಿಗೆ, ಸರಿಯಾದ ಒಳ್ಳೆಯ ಮಳೆಗೆ ಗದ್ದೆಬಯಲುಗಳು ನೀರಾಗಿವೆ. ಹಾಗಾಗಿ, ಹಂಗಾಮಿಗೆ ಸರಿಯಾಗಿ ಭತ್ತದ ಸಸಿ ಮಡಿ ನಾಟಿಗೆ ಸಜ್ಜಾಗಿದೆ, ಗದ್ದೆಗಳೂ ಎರಡು ಸಾಲು ಹೂಟಿಗೆ ಮಾಗಿ, ಸಸಿ ನಾಟಿಗೆ ಮೈಯಾಗಲು ಕಾದಿವೆ. ಆರಿದ್ರಾ ಮಳೆ ಕಳೆದು, ಪುನರ್ವಸು (ಅಣ್ಣನ ಮಳೆ) ಕಾಲಿಡುತ್ತಲೇ ನಾಟಿ ಗೌಜು ಗದ್ದೆ ಬಯಲನು ತುಂಬಿದೆ.

ನಾಟಿ ಗೌಜು ಎಂದರೆ ಈಗೀಗ ಬರೀ ಟ್ಯಾಕ್ಟರು, ಟಿಲ್ಲರುಗಳ ಗದ್ದಲವಷ್ಟೇ. ಹಿಂದಿನಂತೆ ಹತ್ತಾರು ಜೋಡಿ ನೇಗಿಲ ಹೂಟಿಯ ಎತ್ತುಗಳ ಕೊರಳ ಗಗ್ಗರದ ಸದ್ದಿಲ್ಲ, ನಳ್ಳಿ (ಹೂಟಿ ಮಾಡಿದ ಕೆಸರು ಗದ್ದೆಯನ್ನು ಸಪಾಟು ಮಾಡುವ ಮರದ ಸಲಕರಣೆ) ಹೊಡೆಯುವ ಮೋಜಿನ ಕೇಕೆಯಾಗಲೀ, ನಾಟಿ ನೆಡುವ ಹೆಂಗಳೆಯರ ಹಾಡಿನ ಸೊಲ್ಲಾಗಲೀ ಈಗ ಗದ್ದೆಹರದಲ್ಲಿ ಕೇಳುವುದು ವಿರಳ. ಆ ಊರಿನ, ಆ ಕೇರಿಯ ಜನರೇ ಒಬ್ಬರ ಮನೆಯ ಕೆಲಸಕ್ಕೆ ಮತ್ತೊಬ್ಬರು ಹೋಗುವ ಪರಸ್ಪರ ಸಹಕಾರದ ಮೈಯಾಳು ಪದ್ಧತಿ ಯಾವಾಗ ಮರೆಯಾಯಿತೋ, ಆಗ ನಾಟಿ ಗದ್ದೆ ಇರಬಹುದು, ತೋಟವಿರಬಹುದು, ಹಿಂದೆ ಕೇಳುತ್ತಿದ್ದ ಹಾಡು-ಒಗಟುಗಳು ಕೂಡ ಮಾಯವಾದವು.

ಹಾಗೆ ನೋಡಿದರೆ, ಮಲೆನಾಡಿನ ಬದುಕಿನ ಬದಲಾವಣೆಯ ಗಾಳಿ ಆರಂಭವಾದದ್ದೇ ಅಲ್ಲಿನ ಗದ್ದೆ- ತೋಟಗಳಿಂದ. ಪರಸ್ಪರ ಕೈಜೋಡಿಸಿ ದುಡಿಯುವ ಪರಂಪರೆಗೆ ಪೆಟ್ಟು ಕೊಟ್ಟಿದ್ದೇ ಶಿಕ್ಷಿತ ಮಕ್ಕಳು ನಗರ ಸೇರುವ ಪರಿಪಾಠ. ಮಲೆನಾಡಿನ ಕೃಷಿಕರ ಕುಟುಂಬಗಳಲ್ಲಿ ದುಡಿಯುವ ಕೈಗಳೇ ಇಲ್ಲದೆ, ನಾಟಿ, ಶುಂಠಿ, ತೋಟದ ಕೆಲಸಗಳಿಗೆ ೫೦-೬೦ ಮಂದಿಯನ್ನು ಬಯಲುಸೀಮೆಯ ಊರುಗಳಿಂದ ಕರೆತರುವುದು ಅನಿವಾರ್ಯವಾಯಿತು. ಹಾಗೆ ಬಂದ ಕೂಲಿಯಾಳುಗಳಿಗೆ ಧಾವಂತದಲ್ಲಿ ದಿನ ಕಳೆಯುವುದು ಮುಖ್ಯವಾಯಿತೇ ವಿನಾ ಲವಲವಿಕೆಯ ದುಡಿಮೆಯಲ್ಲ! ಹಾಗಾಗಿ, ಈ ಮೊದಲು ಒಂದು ಹಬ್ಬದಂತೆ ಸಂಭ್ರಮ ಕೊಡುತ್ತಿದ್ದ ನಾಟಿ ಇದೀಗ ಯಾಂತ್ರಿಕ ದುಡಿಮೆಯಷ್ಟೇ ಆಗಿ ಬದಲಾಗಿದೆ.

ಹಿಂದೆ ನಾಟಿ ಎಂದರೆ, ವಾರದ ಮುಂಚೆಯಿಂದಲೇ ಅದಕ್ಕೆ ತಯಾರಿಗಳು ಬಿರುಸುಗೊಳ್ಳುತ್ತಿದ್ದವು. ಸಸಿ ಬಿಡುವುದು, ಗದ್ದೆ ಹೂಟಿ ಮಾಡಿ ಹದ ಮಾಡುವುದು, ಹಾಳಿ (ಬದು) ಕಡಿಯುವುದು ಮುಂತಾದ ಕೆಲಸಗಳನ್ನು ಹೊರತುಪಡಿಸಿಯೂ, ನಾಟಿಯ ದಿನ ಊಟ-ವಗೈರೆಗಳ ಸಿದ್ಧತೆಯದ್ದೇ ದೊಡ್ಡ ಹಬ್ಬಕ್ಕೆ ಸಜ್ಜಾದಂತೆ. ನಾಟಿಗೆ ಸಾಮಾನ್ಯವಾಗಿ ಕೊಟ್ಟೆ ಕಡುಬು ಮಾಡಲೇಬೇಕು. ಅದಕ್ಕಾಗಿ ಬಾಳೆಎಲೆ ತರಬೇಕು. ಅಕ್ಕಿ ನೆನೆಹಾಕಿ, ಆರಿಸಿ ಬೀಸಿ ಹಿಟ್ಟು ಮಾಡಿಟ್ಟುಕೊಳ್ಳಬೇಕು. ನಾಟಿಯ ಮುಂಚಿನ ದಿನ ರಾತ್ರಿಯಲ್ಲೇ ನಿದ್ದೆ ಬಿಟ್ಟು ನೂರಾರು ಕಡುಬು ಬೇಯಿಸಿಡಬೇಕು.

ಕಡುಬಿಗೆ ಗಣಪೆ ಕಾಯಿ ಇಲ್ಲವೇ ಕಳಲೆಯ ಪಲ್ಯವೇ ಆಗ ದೊಡ್ಡ ವಿಶೇಷ. ಗಣಪೆಕಾಯಿಗಾಗಿ ದೇವರ ಕಾಡುಗಳಲ್ಲೋ, ದಟ್ಟಡವಿಯಲ್ಲೋ ಸುತ್ತಿ ಕಾಯಿ ಆರಿಸಿ ತರಬೇಕು. ಅವುಗಳನ್ನು ಸುಟ್ಟು, ಸಿಪ್ಪೆ ತೆಗೆದು, ಬೀಸ ಕತ್ತರಿಸಿ, ಐದಾರು ಬಾರಿ ನೀರಲ್ಲಿ ಕುದಿಸಿ, ಬಸಿದು, ಪಲ್ಯ ಮಾಡಬೇಕು. ಇನ್ನು, ಕಳಲೆಯದ್ದು ಮತ್ತೊಂದು ಪುರಾಣ. ೨೦-೩೦ ಕಳಲೆ ಕಡಿದು ತರಬೇಕು, ಅವುಗಳ ಸಿಪ್ಪೆ ಬಿಡಿಸಿ, ಹೆಚ್ಚಿ, ನೀರಲ್ಲಿ ನಾಲ್ಕೈದು ದಿನ ನೆನೆಹಾಕಿ ಇಡಬೇಕು. ನಂತರ ಹೆಚ್ಚಿದ ಕಳಲೆಗೆ ಕಡಲೆ, ಕಾಳುಬೇಳೆ ಹಾಕಿ ರುಚಿಕರ ಪಲ್ಯ ಮಾಡಬೇಕು.

ಹೀಗೆ ಗಣಪೆ ಅಥವಾ ಕಳಲೆಯ ಪಲ್ಯ, ಕೊಟ್ಟೆ ಕಡುಬಿನ ಭೋಜನ ನಡುಮಧ್ಯಾಹ್ನದ ಹೊತ್ತಿಗೆ ನಾಟಿಗದ್ದೆಯ ಕಡೆ ಹೊರಡುತ್ತಿದ್ದಂತೆ, ಇಡೀ ಗದ್ದೆಯ ಬಯಲೇ ಘಮಗುಡುತ್ತಿತ್ತು. ನಾಟಿಗದ್ದೆಯಲ್ಲಿದ್ದ ಹೆಂಗಸರು, ಮಕ್ಕಳು ಗಾಳಿಯ ಪರಿಮಳದ ಮೇಲೆ ಇವತ್ತು ಗಣಪೆ ಪಲ್ಯವಾ, ಕಳಲೆ ಪಲ್ಯವಾ ಎಂಬುದನ್ನು ಊಹಿಸಿಬಿಡುತ್ತಿದ್ದರು. ಸುರಿವ ಮಳೆಯ ನಡುವೆ, ಮೊಣಕಾಲು ಮುಳುಗುವ ಕೆಸರಿನ ನಡುವೆ ದುಡಿದ ದಣಿದ ದೇಹಗಳು ಎರಡೆರಡು ಕೊಟ್ಟೆ ಕಡುಬು, ಬೊಗಸೆ ಪಲ್ಯ ಉಂಡು, ಮೇಲೆದ್ದು ಒಂದು ಎಲೆಯಡಿಕೆ, ಬೀಡಿ ಸೇದಿ ಮತ್ತೆ ನಳ್ಳಿಯ ಮೇಲೇರಿ ಕಾಕು (ಕೂಗು) ಹಾಕಿದರೆ, ಇಡೀ ಗದ್ದೆ ಬಯಲೇ ಕಂಬಳದ ಕಳೆ ಹೊದ್ದು ಮೊಳಗುತ್ತಿತ್ತು. ನಾಟಿಗೆ ಆಗ ಕಂಬಳ ಎಂದೇ ಕರೆಯುವುದು ರೂಢಿಯಾಗಿತ್ತು.

ನಾಟಿಯ ವಿಶೇಷಗಳ ಬಳಿಕ ಉಳಿದ ಮಾಮೂಲಿ ಕೆಲಸ ಕಾರ್ಯಗಳಲ್ಲಿ ಮಳೆಗಾಲದ ಸಾಮಾನ್ಯ ತಿಂಡಿಗಳೆಂದರೆ; ಚಿತ್ರನ್ನ, ಮೊಸರುಬುತ್ತಿ, ರೊಟ್ಟಿಗಳೊಂದಿಗೆ ಪಲ್ಯ ಮತ್ತು ಮಿಡಿಯುಪ್ಪಿನಕಾಯಿ. ಇವೆಲ್ಲ ಕೊರೆಯ ಚಳಿಗಾಳಿಯ ಮಳೆಗಾಲದ ದುಡಿಮೆಯ ದಿನಗಳಿಗೆ ಕಸುವು ತುಂಬುತ್ತಿದ್ದವು. ಆದರೆ, ಈಗ ಎಲ್ಲ ಬದಲಾಗಿದೆ. ಗದ್ದೆ ಹಸನು ಮಾಡುವ, ನಾಟಿ ನೆಡುವ ವರಸೆಗಳಷ್ಟೇ ಅಲ್ಲ; ಕೃಷಿ ಕೆಲಸಗಳ ಊಟೋಪಚಾರಗಳೂ ಬದಲಾಗಿವೆ.

ಈಗ ಮಲೆನಾಡಿನ ಮೂಲೆಮೂಲೆಯ ಮುಂಗಾರು ಹಂಗಾಮಿನಲ್ಲಿ ನಾಟಿ ಗದ್ದೆಯ ಬಯಲಿನಲ್ಲಿ ಹೈಬ್ರಿಡ್ ಕೋಳಿಯ ಘಮವೇ ಆವರಿಸಿರುತ್ತದೆ. ಆತ ದೊಡ್ಡವನಿರಲಿ, ಸಣ್ಣವನಿರಲಿ, ತಿನ್ನುವನಿರಲಿ, ತಿನ್ನದೆ ಇರುವವನಿರಲಿ; ನಾಟಿ ದಿನ ಚಿಕನ್ ಮಸಾಲಾ, ಇಲ್ಲವೇ ಬಿರಿಯಾನಿ ಮಾಡಿಸಲೇಬೇಕು. ಚಿಕನ್ ಮಸಾಲಾದೊಂದಿಗೆ ಮಧ್ಯಾಹ್ನವೇ ಎಣ್ಣೆ ಏರಿಸಿಕೊಳ್ಳುವ ಮಂದಿ, ಮಧ್ಯಾಹ್ನದ ಊಟದ ಬಳಿಕ ಇನ್ನಷ್ಟು ಹುರುಪುಗೊಂಡು ಗದ್ದೆಗಿಳಿಯುವ ಬದಲು, ಮಂಕಾಗಿ, ಜೋಲಾಡುತ್ತ, ತೂರಾಡುತ್ತ ಕೆಸರಿನಲ್ಲಿ ಹೆಜ್ಜೆ ಹಾಕುವುದು ಸಾಮಾನ್ಯ. ಹಾಗಾಗಿ, ಗದ್ದೆಯ ಬಯಲಲ್ಲಿ ಈಗ ಕೇಳುವುದು ಹಿಂದಿನ ನಾಟಿನ ಸಂಭ್ರಮದ, ಹುರುಪಿನ ಕೇಕೆಯಲ್ಲ!

ಹಾಗೆ ನೋಡಿದರೆ, ನಾಟಿ ಎಂಬ ಹಂಗಾಮೇ ಒಂದು ಕಾಲದಲ್ಲಿ ಮಲೆನಾಡಿನ ಅತ್ಯಂತ ಜೀವಂತಿಕೆಯ ದಿನಗಳಾಗಿದ್ದವು. ಹತ್ಮೀನು, ಕಳಲೆ, ಅಣಬೆ, ಏಡಿ, ಕಾನು ಶಿಕಾರಿಯಂತಹ ನೂರೆಂಟು ಚಟುವಟಿಕೆಗಳು ಸುರಿಯುವ ಮಳೆಗಾಳಿಯ ನಡುವೆಯೂ ಮಲೆನಾಡಿನ ಮಂದಿಗೆ ಚುರುಕು ತುಂಬುತ್ತಿದ್ದವು. ಗಟ್ಟಿತನ ಮತ್ತು ಕ್ರಿಯಾಶೀಲತೆಯನ್ನು ಮತ್ತೆ ಮೊನಚುಗೊಳಿಸುತ್ತಿದ್ದವು.

ಹತ್ಮೀನು ಹಿಡಿಯುವುದು ಎಂದರೆ; ಅದು ಕೇವಲ ಮೀನು ಬೇಟೆಯಾಡುವ ಒಂದು ಮಾಂಸಹಾರಿಗಳ ವಾಂಛೆಯಷ್ಟೇ ಆಗಿರಲಿಲ್ಲ. ಹಗಲು ಮತ್ತು ರಾತ್ರಿಯ ಹತ್ನೀನು ಬೇಟೆಗಳಿಗೆ ಒಂದು ಆಟದ, ಕ್ರೀಡೆಯ ಆಯಾಮವೂ ಇತ್ತು. ಜೋರು ಮಳೆಯ ನಡುವೆ ಹೊಲಗದ್ದೆಗಳಲ್ಲಿ ತುಂಬುವ ಮೊದ-ಮೊದಲ ಮಳೆನೀರು, ಗದ್ದೆಯಿಂದ ಅಗಳಕ್ಕೆ, ಅಗಳದಿಂದ ಹಳ್ಳಕ್ಕೆ, ಹಳ್ಳದಿಂದ ಕೆರೆಗೆ ಹೋಗಿ ತಲುಪುವ ಹೊತ್ತಿಗೆ ಹದವರಿತ ಬೆದೆಯ ತವಕದಲ್ಲಿ ಕಾಯುತ್ತಿದ್ದ ಕೆರೆಯ ಮೀನುಗಳು ಗದ್ದೆಯಿಂದ ಹರಿದುಬರುವ ನೀರಿಗೆ ಎದುರಾಗಿ ಪೈಪೋಟಿಯ ಮೇಲೇ ಏರತೊಡಗುತ್ತವೆ. ಹಾಗೆ ಮದನೋಲ್ಲಾಸದ ಮೀನುಗಳ ಭರಾಟೆ ಎಷ್ಟಿರುತ್ತದೆ ಎಂದರೆ, ಸುರಿಯ ಮಳೆ ನಡುವೆ ಚಣ ಕಾಲ ಬಿಸಿಲು ಸುಳಿದರೂ ಅವರು ತಂಡತಂಡವಾಗಿ ಹಾರುತ್ತಾ ಹೊಸ ನೀರಿನ ಸಳೆವಿಗೆ ಕಾತರಿಸುತ್ತವೆ. ಆಗ ಯಾವ ಪರಿವೇ ಇರದೆ ನುಗ್ಗುವ ಅವುಗಳಿಗೆ, ಮನುಷ್ಯರು ಅಡ್ಡ ನಿಂತು ಮೀನುಕತ್ತಿಯಲ್ಲೋ, ಕೋಲಲ್ಲೋ ಬಡಿದು ಬುಟ್ಟಿತುಂಬುತ್ತಿದ್ದರೂ, ಅಂಜಿಕೆ ಇರದು!

ಹೀಗೆ ಮೈಮೇಲಿನ ಕದರುಬಿಟ್ಟು ಏರಿಬರುವ ಮೀನುಗಳನ್ನು ಹಿಡಿಯವುದೇ ಒಂದು ಕಾಲದಲ್ಲಿ ಮಲೆನಾಡಿನ ಮಂದಿಗೆ ದೊಡ್ಡ ಆಟದಂತೆಯೂ, ಸಂಭ್ರಮದಂತೆಯೂ ಇತ್ತು. ಇನ್ನು ರಾತ್ರಿಯ ಮೀನು ಬೇಟೆಗೆ ಸಿದ್ಧತೆಗಳು ಕೂಡ ವೈವಿಧ್ಯಮಯ. ಬ್ಯಾಟರಿಗಳು ಜನಪ್ರಿಯವಾಗಿರದೇ ಇದ್ದ ಕಾಲದಲ್ಲಿ ದೊಂದಿಗಳೇ ಮೀನು ಬೇಟೆಯ ಬೆಳಕು. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಪೊಪ್ಪಾಯಿ ಗಿಡದ ದಿಂಡು(ಎಲೆಯ ತೊಟ್ಟು) ತಂದು, ಒಂದು ಕಡೆ ಮಾತ್ರ ಅದರ ಕೊಳವೆಯನ್ನು ತೆರೆದು, ಅದಕ್ಕೆ ಸೀಮೆಎಣ್ಣೆ ತುಂಬಿ, ತುದಿಗೆ ಬಟ್ಟೆಯ ಬತ್ತಿಯನ್ನು ಸಿಕ್ಕಿಸಿಕೊಂಡು ದೊಂದಿ ಮಾಡುತ್ತಿದ್ದರು. ಅದು ಹೆಚ್ಚು ಬೆಳಕು ನೀಡುತ್ತಿದ್ದ ಸುರಕ್ಷಿತ ಮಾದರಿ. ಆದರೆ, ಕೆಲವರು ಒಣಬಿದಿರ ದಬ್ಬೆಗಳನ್ನೇ ಕೊಚ್ಚಿ, ಬೆಂಕಿ ಹೊತ್ತಿಸಿಕೊಂಡು ಹೋಗುತ್ತಿದ್ದರು. ಬಿದಿರ ದೊಂದಿಯ ತಾಪತ್ರಯವೆಂದರೆ, ಅದು ಬೇಗ ಉರಿದುಹೋಗುತ್ತದೆ ಮತ್ತು ನಡು-ನಡುವೆ ಆರಿಹೋಗಿ, ಕತ್ತಲಲ್ಲಿ ಹೊಂಡಕ್ಕೊ, ಗುಂಡಿಗೆ ಬಿದ್ದು ಬೇಸ್ತುಬೀಳುವ ಅಪಾಯವೂ ಇತ್ತು.

ಇದನ್ನೂ ಓದಿ : ಹಗೇವು | ಅಜ್ಜಿ ಹೇಳಿದ ಕಾರೇಡಿ ಕತೆಯೂ ಗೆಳೆಯ ಎತ್ತಿದ ಚಾರಿತ್ರಿಕ ಅನ್ಯಾಯದ ಪ್ರಶ್ನೆಯೂ

ಆದರೆ, ಈಗ ಮಲೆನಾಡಿನ ಮೂಲೆಮೂಲೆಯ ಗೂಡಂಗಡಿಗಳಲ್ಲೂ ಹತ್ತು ರೂಪಾಯಿಗೆ ಎಲ್‌ಇಡಿ ಬಲ್ಬಿನ ಮಿನಿ ಬ್ಯಾಟರಿಗಳು ಸಿಗುತ್ತವೆ. ಆದರೆ, ಹತ್ಮೀನು ಹಂಗಾಮ ಎಂಬುದು ಸಂಭ್ರಮವಾಗಿ ಉಳಿದಿಲ್ಲ. ಮೊದಲನೆಯದಾಗಿ ವಿನಾಶಕಾರಿ ಕೃಷಿ ಪದ್ಧತಿಯಿಂದಾಗಿ ಹೊಳೆ-ಕೆರೆಗಳಲ್ಲಿ ಮಣ್ಣು-ಹೋಳಷ್ಟೇ ಅಲ್ಲದೆ, ವಿಷವೂ ತುಂಬಿ, ನಾಟಿ ಮೀನು ತಳಿಗಳು ಬಹುತೇಕ ನಾಮಾವಶೇಷವಾಗಿವೆ. ಅಪರೂಪಕ್ಕೆ ಹತ್ಮೀನು ಹತ್ತಿದರೂ, ಅವುಗಳನ್ನು ಬೇಟೆಯಾಡುವ ಆಸಕ್ತಿ ಮತ್ತು ಜೀವಂತಿಕೆ ಮಲೆನಾಡಿನ ಹೈಬ್ರಿಡ್ ಕೋಳಿ ಪ್ರಿಯರಿಗೆ ಇಲ್ಲ! ಏಕೆಂದರೆ, ಬ್ಯಾಟರಿಯಂತೆಯೇ ಈಗ ಮಲೆನಾಡಿನ ಮೂಲೆಮೂಲೆಯಲ್ಲೂ ಹೈಬ್ರಿಡ್‌ ಕೋಳಿ ಮಾಂಸ ಕೈಗೆಟುಕತ್ತದೆ.

ಕೃತಕ ಹಾರ್ಮೋನುಗಳ ಸೊಕ್ಕಿನ ಮಾಂಸದ ರುಚಿಗೆ ಒಗ್ಗಿರುವ ನಾಲಿಗೆಗಳಿಗೆ ನಾಟಿ ಮೀನು ರುಚಿಸದು. ಅದಷ್ಟೇ ಅಲ್ಲ; ಮಲೆನಾಡಿನ ಹಲವು ಸಹಜ ಸೊಪ್ಪು, ಗಡ್ಡೆ, ಹಣ್ಣು-ಹಂಪಲುಗಳು ಕೂಡ ಜನಪ್ರಿಯತೆ ಕಳೆದುಕೊಂಡಿವೆ. ಮುಳ್ಳು ಹರಿವೆ, ಸೀಗೆ, ಚೀನಿಬಳ್ಳಿ ಕುಡಿ, ಕೆಸವು, ಹೊನಗೊನೆಯಂತಹ ಪರಮ ರುಚಿಯ ಪದಾರ್ಥಗಳು ಈಗ ಅನ್ನದಬಟ್ಟಲಿನಲ್ಲಿ ಕಾಣಿಸುವುದೇ ವಿರಳ. ಅಂಗಡಿಯಿಂದ ಬಂದದ್ದು ಮಾತ್ರ ಶ್ರೇಷ್ಠ, ಹಿತ್ತಿಲ ಗಿಡ ಮದ್ದಲ್ಲ ಎಂಬುದನ್ನು ಮಲೆನಾಡಿನ ಮಂದಿ ಈಗ ಅಕ್ಷರಶಃ ಜಾರಿಗೆ ತಂದುಬಿಟ್ಟಿದ್ದಾರೆ. ಒಂದು ವಿಪರ್ಯಾಸವೆಂದರೆ; ನಗರವಾಸಿ ಜನ ದೇಸಿ ಧಾನ್ಯ, ತರಕಾರಿ, ಅಡುಗೆ, ದೇಸಿ ಔಷಧಗಳತ್ತ ಮುಖಮಾಡಿರುವಾಗ, ತಲೆಮಾರುಗಳಿಂದ ಅವುಗಳನ್ನೇ ಉಸಿರಾಡಿದ ಜನ ಈಗ ನಗರದ ರುಚಿಯ ಹಿಂದೆ ಬಿದ್ದಿದ್ದಾರೆ!

ಹಾಗಾಗಿ ಈಗ ಗಣಪೆ ಮತ್ತು ಕಳಲೆಯ ಘಮದ ಬದಲು, ಗದ್ದೆ ಬಯಲಿನ ತುಂಬ ಚಿಕನ್ ಮಸಾಲಾದ ಕಮಟು!

ಚಿತ್ರಕೃಪೆ: ಜಗದೀಶ್ ಹೆಗಡೆ

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More