ಇಲಾಜು | ಸುದ್ದಿ ಆಗುತ್ತಲೇ ಇರುವ ‘ಆಯುಷ್ಮಾನ್ ಭಾರತ’ದ ಅಸಲಿ ಕತೆ

ಆಧುನಿಕ ವೈದ್ಯರನ್ನು ಪ್ರತಿನಿಧಿಸುವ ಏಕೈಕ ಸಂಸ್ಥೆಯೆಂದು ಹೇಳಿಕೊಳ್ಳುವ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಈ ಯೋಜನೆಯನ್ನು ಆರಂಭದಲ್ಲಿ ಸ್ವಾಗತಿಸಿ, ನಂತರ ಸಂಪೂರ್ಣವಾಗಿ ವಿರೋಧಿಸಿ, ಮತ್ತೆ ಬೆಂಬಲಿಸಿ, ನಂತರ ಭಾಗಶಃ ವಿರೋಧಿಸುವ ಮೂಲಕ ಲಾಗ ಹೊಡೆಯುತ್ತಲೇ ಇದೆ!

ಮಾನ್ಯ ಪ್ರಧಾನಮಂತ್ರಿಗಳ ಬಹು ಮಹತ್ವಾಕಾಂಕ್ಷೆಯ ಯೋಜನೆಯೆನ್ನಲಾದ ಆಯುಷ್ಮಾನ್ ಭಾರತವನ್ನು ಆರಂಭಿಸಲು ಸಿದ್ಧತೆಗಳಾಗುತ್ತಿವೆ. ವಿಶ್ವದಲ್ಲೇ ಅತಿ ದೊಡ್ಡ ಆರೋಗ್ಯ ಯೋಜನೆ ಎಂದೆಲ್ಲ ಹೇಳಿಕೊಳ್ಳಲಾಗಿರುವ ಈ ಯೋಜನೆಯಿಂದ ಯಾರಿಗೆ ಎಷ್ಟು ಆರೋಗ್ಯ ಲಭಿಸಲಿದೆ ಎನ್ನುವುದು ಸ್ಪಷ್ಟವಿಲ್ಲವಾದರೂ, ಮುಂದಿನ ಚುನಾವಣೆಯಲ್ಲಿ ಪ್ರಧಾನಮಂತ್ರಿಗಳ ಪ್ರಚಾರದ ಆರೋಗ್ಯಕ್ಕೆ ನೆರವಾಗುವ ಸಾಧ್ಯತೆಗಳಿವೆ.

ಆಧುನಿಕ ವೈದ್ಯರನ್ನು ಪ್ರತಿನಿಧಿಸುವ ಏಕೈಕ ಸಂಸ್ಥೆಯೆಂದು ಹೇಳಿಕೊಳ್ಳುವ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಈ ಯೋಜನೆಯನ್ನು ಆರಂಭದಲ್ಲಿ ಸ್ವಾಗತಿಸಿ, ನಂತರ ಸಂಪೂರ್ಣವಾಗಿ ವಿರೋಧಿಸಿ, ಮತ್ತೆ ಬೆಂಬಲಿಸಿ, ನಂತರ ಭಾಗಶಃ ವಿರೋಧಿಸುವ ಮೂಲಕ ಲಾಗ ಹೊಡೆಯುತ್ತಲೇ ಇದೆ. ಭಾರತದ ಆರೋಗ್ಯ ಸೇವಾ ಸಂಸ್ಥೆಗಳ ಸಂಘ (ಎಎಚ್‌ಪಿಐ) ಕೂಡ ಈ ಯೋಜನೆಗೆ ನಿಗದಿಪಡಿಸಲಾಗಿರುವ ದರಗಳು ತೀರಾ ಕಡಿಮೆಯೆಂದು ಪ್ರತಿಭಟಿಸಿ, ಅಲ್ಲಿಗೇ ಬಿಟ್ಟಿದೆ. ಸರಕಾರದ ಯಾವ ಸಾಮ-ದಾನ-ಭೇದ-ದಂಡಾಸ್ತ್ರಗಳು ಬಳಕೆಯಾಗಿವೆಯೋ ಏನೋ?

ಆಯುಷ್ಮಾನ್ ಭಾರತವು ಹತ್ತು ವರ್ಷಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ (ಆರ್‌ಎಸ್‌ಬಿವೈ) ದೊಡ್ಡ ಅವತಾರ ಮಾತ್ರ. ಅದನ್ನು ಆರೋಗ್ಯ ಸುರಕ್ಷೆಯ ವಿಮಾ ಯೋಜನೆಯೆಂದು ಹೇಳಲಾಗುತ್ತಿದ್ದರೂ, ಕೆಲವು ನಿರ್ದಿಷ್ಟ ಚಿಕಿತ್ಸೆಗಳಷ್ಟೇ ದೊರೆಯುವುದರಿಂದ ಸಂಪೂರ್ಣ ಆರೋಗ್ಯ ಸುರಕ್ಷೆಯೂ ಇಲ್ಲ, ಆರೋಗ್ಯ ವಿಮೆಯೂ ಆಗುವುದಿಲ್ಲ. ಅತಿ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಆರೋಗ್ಯವನ್ನೊದಗಿಸುವ ಯೋಜನೆಯೆಂದು ಪ್ರಧಾನಿಗಳು ಹೇಳಿದ್ದಾರಾದರೂ, ಹಲವು ವರ್ಷಗಳಿಂದ ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಜಾರಿಯಲ್ಲಿರುವ ಇಂತಹ ಯೋಜನೆಗಳಿಂದ ಆರೋಗ್ಯಕ್ಕಾಗಿ ಜನರ ಖರ್ಚು ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗಿಲ್ಲ.

ಆರ್‌ಎಸ್‌ಬಿವೈ ಅಥವಾ ಆಯುಷ್ಮಾನ್ ಭಾರತ ಯೋಜನೆಗಳಂಥವು ಸಮಗ್ರ ಆರೋಗ್ಯ ಸುರಕ್ಷೆಯನ್ನು ಒದಗಿಸುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಅನುಸಾರ, ಸಮಗ್ರ ಆರೋಗ್ಯ ಸೇವೆಗಳೆಂದರೆ, ಎಲ್ಲ ವರ್ಗಗಳ ಜನರಿಗೆ ಆರೋಗ್ಯ ವರ್ಧನೆ, ರೋಗ ನಿಯಂತ್ರಣ, ಚಿಕಿತ್ಸೆ, ಶಮನ, ಪುನಃಶ್ಚೇತನ ಸೇವೆಗಳನ್ನು ಉತ್ತಮ ಗುಣ ಮಟ್ಟದಲ್ಲಿ, ಯಥೋಚಿತವಾಗಿ, ಆರ್ಥಿಕವಾಗಿ ಹೊರೆಯಾಗದಂತೆ ಒದಗಿಸುವುದು. ಶೇ.80ಕ್ಕೂ ಹೆಚ್ಚು ಜನರಿಗೆ ಅತ್ಯುತ್ತಮ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿರುವ ಸ್ವೀಡನ್, ಫ್ರಾನ್ಸ್, ಜರ್ಮನಿ, ಅಮೆರಿಕ ಮುಂತಾದ ದೇಶಗಳಲ್ಲಿ ಆರೋಗ್ಯ ಸೇವೆಗಳಿಗಾಗಿ ಸರಕಾರಿ ವ್ಯಯವು ರಾಷ್ಟ್ರೀಯ ಉತ್ಪನ್ನದ ಶೇ. 7ರಿಂದ10ರಷ್ಟಿದೆ; ಆದರೆ, ಶೇ.0.5-1ರಷ್ಟು ವ್ಯಯಿಸುತ್ತಿರುವ ಆಫ್ರಿಕಾದ ದೇಶಗಳು ಮತ್ತು ಭಾರತದಲ್ಲಿ ಶೇ.30-60ರಷ್ಟು ಜನರಿಗಷ್ಟೇ ಸಾರ್ವಜನಿಕ ಆರೋಗ್ಯ ಸೇವೆಗಳು ದೊರೆಯುತ್ತಿವೆ. ಅಂದರೆ, ಸಮಗ್ರ ಆರೋಗ್ಯ ಸೇವೆಗಳನ್ನು ನಿಜಾರ್ಥದಲ್ಲಿ ಒದಗಿಸಬೇಕಾದರೆ ನಮ್ಮ ಸರಕಾರವು ಆರು ಪಟ್ಟು ಹೆಚ್ಚು ಹಣವನ್ನು ವ್ಯಯಿಸಿ, ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಪಡಿಸಬೇಕಾಗುತ್ತದೆ. ದೇಶದ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಕನಿಷ್ಟ ಸೌಕರ್ಯಗಳನ್ನು ಖಾತರಿಪಡಿಸಬೇಕಾದರೆ, ಪ್ರಾಥಮಿಕ ಆರೋಗ್ಯ ಕೇಂದ್ರವೊಂದಕ್ಕೆ ಕನಿಷ್ಠ 20 ಲಕ್ಷದಂತೆ ವರ್ಷಕ್ಕೆ ಹೆಚ್ಚುವರಿಯಾಗಿ ಸುಮಾರು 30 ಸಾವಿರ ಕೋಟಿ ರು. ಬೇಕಾಗುತ್ತದೆ. ಆದರೆ, ಆಯುಷ್ಮಾನ್ ಭಾರತದ ಭಾಗವಾಗಿ ಒಂದೂವರೆ ಲಕ್ಷ ಆರೋಗ್ಯ ಉಪಕೇಂದ್ರಗಳನ್ನು ಅಭಿವೃದ್ಧಿಪಡಿಸಲು 1,200 ಕೋಟಿ (ಉಪಕೇಂದ್ರವೊಂದಕ್ಕೆ 80 ಸಾವಿರ ರು. ಮಾತ್ರ) ಒದಗಿಸಲಾಗಿರುವುದು ಸರಕಾರದ ಬದ್ಧತೆ ಎಷ್ಟಿದೆ ಎನ್ನುವುದನ್ನು ತಿಳಿಸುತ್ತದೆ.

ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆಗಳನ್ನು ಖರೀದಿಸುವ ಆಯುಷ್ಮಾನ್ ಭಾರತ ಯೋಜನೆಗೆ ಸೇರಿಕೊಳ್ಳಲು ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಒಪ್ಪಿವೆ. ಆರ್‌ಎಸ್‌ಬಿವೈ ಅಡಿಯಲ್ಲಿ ಕುಟುಂಬವೊಂದರ ಚಿಕಿತ್ಸೆಗೆ ವರ್ಷಕ್ಕೆ 30 ಸಾವಿರ ರು. ಒದಗಿಸುತ್ತಿದ್ದಲ್ಲಿ, ಹೊಸ ಯೋಜನೆಯಲ್ಲಿ ವರ್ಷಕ್ಕೆ 5 ಲಕ್ಷದಷ್ಟು ಒದಗಿಸಬೇಕಾಗುತ್ತದೆ. ಆರ್‌ಎಸ್‌ಬಿವೈಯಲ್ಲಿ ಫಲಾನುಭವಿ ಕುಟುಂಬವೊಂದಕ್ಕೆ ವರ್ಷಕ್ಕೆ 400ರಂತೆ ಸರಕಾರಗಳು ವಿಮೆ ಕಟ್ಟಬೇಕಿತ್ತು. ಆಯುಷ್ಮಾನ್ ಯೋಜನೆಗೆ ನೀತಿ ಆಯೋಗವು ಅದನ್ನು 1,082 ರು.ಗೆ ನಿಗದಿಪಡಿಸಿದ್ದರೂ, ವಿಮಾ ಕಂಪನಿಗಳ ತಗಾದೆಯಿಂದಾಗಿ ಅದು ಹೆಚ್ಚುವ ಸಾಧ್ಯತೆಗಳಿವೆ. ಆರ್‌ಎಸ್‌ಬಿವೈಗೆ ವಿಮೆ ತುಂಬುವಲ್ಲಿ ಕೇಂದ್ರ ಹಾಗೂ ರಾಜ್ಯಗಳ ಪಾಲುಗಳು 75:25 ಇದ್ದರೆ, ಆಯುಷ್ಮಾನ್ ಭಾರತದಲ್ಲಿ ರಾಜ್ಯಗಳ ಪಾಲು ಶೇ.40ಕ್ಕೆ ಏರಿದೆ. ಹೀಗೆ, ಆಯುಷ್ಮಾನ್ ಭಾರತವು ರಾಜ್ಯ ಸರಕಾರಗಳ ಮೇಲೆ 3-4 ಪಟ್ಟು ಹೆಚ್ಚಿನ ಹೊರೆಯಾಗಲಿರುವುದು ಖಂಡಿತ. ಯಾರದೋ ದುಡ್ಡು, ಇನ್ಯಾರದೋ ಜಾತ್ರೆ!

ಆಯುಷ್ಮಾನ್ ಭಾರತದಡಿಯಲ್ಲಿ ಲಭ್ಯವಾಗಲಿರುವ 1,354 ಚಿಕಿತ್ಸೆಗಳಲ್ಲಿ ಹೆಚ್ಚಿನವು ಶಸ್ತ್ರಚಿಕಿತ್ಸೆಗಳೇ ಆಗಿದ್ದು, ನಮ್ಮ ದೇಶದಲ್ಲಿ ಆಸ್ಪತ್ರೆ ದಾಖಲಾತಿಗಳಿಗೆ ಕಾರಣವಾಗುತ್ತಿರುವ ಶೇ.60ಕ್ಕೂ ಹೆಚ್ಚು ಸಮಸ್ಯೆಗಳು ಈ ಯೋಜನೆಯಡಿ ಲಭ್ಯವೇ ಇಲ್ಲ. ಅವುಗಳಲ್ಲೂ, 610 ಚಿಕಿತ್ಸೆಗಳನ್ನು ಪಡೆಯಬೇಕಾದರೆ ವಿಮಾ ಕಂಪನಿಯು ಪೂರ್ವಾನುಮತಿ ನೀಡಬೇಕಾಗುತ್ತದೆ. ಕರ್ನಾಟಕದಲ್ಲಿ ಆಯುಷ್ಮಾನ್ ಭಾರತ ಯೋಜನೆಯನ್ನು ಮೊದಲೇ ಘೋಷಿಸಲಾಗಿದ್ದ ಆರೋಗ್ಯ ಕರ್ನಾಟಕ ಯೋಜನೆಯೊಳಗೆ ಸೇರಿಸಲಾಗುವುದರಿಂದ, ಅದರ ನಿಯಮಗಳೂ ಅನ್ವಯವಾಗಲಿವೆ. ಅದರಂತೆ, ಎಲ್ಲ ಫಲಾನುಭವಿಗಳು ಮೊದಲು ಸರಕಾರಿ ಆಸ್ಪತ್ರೆಗಳಿಗೇ ಹೋಗಬೇಕು, ಅಲ್ಲಿ ಚಿಕಿತ್ಸೆಯು ಲಭ್ಯವಿರದಿದ್ದ ಸಂದರ್ಭಗಳಲ್ಲಿ, ಅಲ್ಲಿನ ಶಿಫಾರಸಿನ ಮೇಲಷ್ಟೇ ಖಾಸಗಿ ಆಸ್ಪತ್ರೆಗೆ ಹೋಗಬಹುದು. ಎಲ್ಲ ಪ್ರಾಥಮಿಕ ಆರೋಗ್ಯ ಸೇವೆಗಳು, ಪ್ರಸೂತಿ ಸೇವೆಗಳು, ಸಾಮಾನ್ಯವಾಗಿ ನಡೆಸುವ 481 ಬಗೆಯ ಶಸ್ತ್ರಚಿಕಿತ್ಸೆಗಳು, ಉನ್ನತ ಮಟ್ಟದ ಪರೀಕ್ಷೆಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲೇ ಪಡೆಯಬೇಕಾಗಿದ್ದು, ಇನ್ನುಳಿದ 1,042 ಬಗೆಯ ಚಿಕಿತ್ಸೆಗಳಿಗೆ ಶಿಫಾರಸಿನ ಮೇರೆಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗಬಹುದು. ಈ ಶಿಫಾರಸುಗಳಿಗೆ ಎಂತೆಂತಹ ಪ್ರಭಾವಗಳು ಬೇಕಾಗಬಹುದೋ ಏನೋ?

ಆಯುಷ್ಮಾನ್ ಭಾರತದಡಿಯಲ್ಲಿ ಪಟ್ಟಿ ಮಾಡಲಾಗಿರುವ ಚಿಕಿತ್ಸೆಗಳಿಗೆ 1000ದಿಂದ 1.6 ಲಕ್ಷ ರು.ವರೆಗೆ ದರ ನಿಗದಿಪಡಿಸಲಾಗಿದೆ. ಆರೋಗ್ಯ ಕರ್ನಾಟಕಕ್ಕಾಗಿ ಇವೇ ಚಿಕಿತ್ಸೆಗಳಿಗೆ ನಿಗದಿಪಡಿಸಲಾಗಿರುವ ದರಗಳಲ್ಲಿ ಕೆಲವು ಹೆಚ್ಚಿದ್ದರೆ, ಕೆಲವು ಕಡಿಮೆ ಇವೆ! ಈಗ ನಿಗದಿಪಡಿಸಿರುವ ದರಗಳು ನಾಲ್ಕೈದು ವರ್ಷಗಳ ಹಿಂದೆ ನಿಗದಿಪಡಿಸಿದ್ದ ದರಗಳಿಗಿಂತ ಶೇ.10ರಿಂದ 15ರಷ್ಟು ಕಡಿಮೆ ಇವೆ! ಇದಕ್ಕೆ ವೈದ್ಯರ ಮತ್ತು ಆಸ್ಪತ್ರೆಗಳ ಸಂಘಟನೆಗಳ ವಿರೋಧವನ್ನು ಮೊದಲು ಕಡೆಗಣಿಸಿದ್ದ ಕೇಂದ್ರ ಸರಕಾರವು, ಇದೀಗ ದರಗಳನ್ನು ಪರಿಷ್ಕರಿಸುವ ಬಗ್ಗೆ ಸಮಿತಿಯೊಂದನ್ನು ರಚಿಸುವುದಕ್ಕೆ ಒಪ್ಪಿದೆ. ಆದರೆ, ಯೋಜನೆಯನ್ನು ಅದಕ್ಕೂ ಮೊದಲೇ ಆರಂಭಿಸುವುದಾಗಿಯೂ ಹೇಳಿದೆ. ಯಾರು ಯಾರನ್ನು ಎಷ್ಟು ನಂಬಲಿದ್ದಾರೆನ್ನುವುದು ಗೊತ್ತಾಗುತ್ತಿಲ್ಲ!

ಈಗಿರುವ ದರ ಪಟ್ಟಿಯಂತೆ, ಸಣ್ಣ ಹಾಗೂ ಮಧ್ಯಮ ಗಾತ್ರದ ಆಸ್ಪತ್ರೆಗಳಲ್ಲಿ ನಡೆಸಲಾಗುವ ಚಿಕಿತ್ಸೆಗಳಿಗೆ ಅತ್ಯಲ್ಪ ದರಗಳನ್ನು ನಿಗದಿಪಡಿಸಲಾಗಿದ್ದು, ಚಿಕಿತ್ಸೆಯ ಖರ್ಚಿನ ಶೇ.10-30ರಷ್ಟನ್ನು ಮಾತ್ರವೇ ಅವು ಭರಿಸಲಿರುವುದರಿಂದ ಆ ಆಸ್ಪತ್ರೆಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿ, ಈಗಾಗಲೇ ಹಲವೆಡೆ ಆಗಿರುವಂತೆ ಬಾಗಿಲು ಹಾಕಿಕೊಳ್ಳುವ ಸ್ಥಿತಿಯುಂಟಾಗಲಿದೆ. ಆದರೆ, ಕಾರ್ಪೊರೇಟ್ ಮತ್ತು ದೊಡ್ಡ ಆಸ್ಪತ್ರೆಗಳಲ್ಲಿ ನೀಡಲಾಗುವ ಉನ್ನತ ಚಿಕಿತ್ಸೆಗಳಿಗೆ ಸಾಕಷ್ಟು ಉತ್ತಮ ದರಗಳನ್ನೇ ನಿಗದಿಪಡಿಸಲಾಗಿರುವುದರಿಂದ ಅವು ತಮ್ಮ ಖರ್ಚಿನ ಶೇ. 60-100ರಷ್ಟನ್ನು ಗಳಿಸಿಕೊಳ್ಳಲಿವೆ, ಇನ್ನಷ್ಟು ಬೆಳೆದು ಸಣ್ಣ ಆಸ್ಪತ್ರೆಗಳನ್ನು ಕಬಳಿಸಲಿವೆ. ಸಣ್ಣ ಚಿಕಿತ್ಸೆ ನೀಡಿ ದೊಡ್ಡ ಚಿಕಿತ್ಸೆಗಳ ಹಣ ಪಡೆಯುವುದು, ಹೆಚ್ಚುವರಿ ಸೌಕರ್ಯಗಳನ್ನು ಒದಗಿಸಿ ಹೆಚ್ಚು ಹಣ ಪಡೆಯುವುದು ಇತ್ಯಾದಿ ಮೋಸಗಳಿಗೆಲ್ಲ ಸರಕಾರವೇ ಅವಕಾಶ ಕೊಟ್ಟಂತೆಯೂ ಆಗಬಹುದು.

ಇದನ್ನೂ ಓದಿ : ಇಲಾಜು | ಖಾಸಗಿ ವೈದ್ಯಕೀಯ ಕಾಲೇಜುಗಳ ಅಟಾಟೋಪಕ್ಕೆ ಚಿಕಿತ್ಸೆ ನೀಡುವಲ್ಲಿ ವಿಫಲವಾದ ನೀಟ್

ಆಯುಷ್ಮಾನ್ ಯೋಜನೆಗೆ ಸೇರಿಕೊಳ್ಳುವುದಕ್ಕೆ ಯಾವುದೇ ಬಗೆಯ ಮಾನ್ಯತೆ ಇದ್ದರೆ ಸಾಕೆಂದು ಕೇಂದ್ರವು ಒಪ್ಪಿಕೊಂಡಿದೆ. ಆದರೆ, ಕರ್ನಾಟಕದಲ್ಲಿ ಈ ಯೋಜನೆಗೆ ಸೇರಬಯಸುವ ಎಲ್ಲ ಆಸ್ಪತ್ರೆಗಳಿಗೆ ಕಾರ್ಪೊರೇಟ್ ಪ್ರಾಯೋಜಿತ ಎನ್‌ಎಬಿಎಚ್ ಮಾನ್ಯತೆ ಇರಬೇಕೆಂದು ಕಡ್ಡಾಯಗೊಳಿಸಲಾಗಿದೆ. ಈಗ ರಾಜ್ಯದಲ್ಲಿ ಕೇವಲ 35 ಆಸ್ಪತ್ರೆಗಳಷ್ಟೇ ಈ ಮಾನ್ಯತೆ ಪಡೆದಿದ್ದು, ಇನ್ನುಳಿದವು ಅದಕ್ಕಾಗಿ ಲಕ್ಷಗಟ್ಟಲೆ ವ್ಯಯಿಸಬೇಕಾಗುತ್ತದೆ. ಸಣ್ಣ ಆಸ್ಪತ್ರೆಗಳು ಅಷ್ಟು ವ್ಯಯಿಸಿದ ಬಳಿಕ ಖರ್ಚು ಕೂಡ ದಕ್ಕದ ಯೋಜನೆಗೆ ಸೇರಿಕೊಂಡರೆ ಗತಿಯೇನಾದೀತು?

ಹಣಕಾಸು, ಉದ್ದಿಮೆ, ಶಿಕ್ಷಣ, ಆಡಳಿತ, ನ್ಯಾಯಾಂಗ, ಸೌಹಾರ್ದತೆ ಎಲ್ಲವನ್ನೂ ಅಸ್ತವ್ಯಸ್ತಗೊಳಿಸಿ ಆನಂದಪಡುತ್ತಿರುವ ಕೇಂದ್ರ ಸರಕಾರಕ್ಕೆ ಆರೋಗ್ಯ ಸೇವೆಗಳನ್ನು ಛಿದ್ರಗೊಳಿಸಿದ ಆನಂದವು ಸದ್ಯದಲ್ಲೇ ಪ್ರಾಪ್ತಿಯಾದೀತು!

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More