ಇಲಾಜು | ವೈಜ್ಞಾನಿಕ ಮಾರ್ಗದ ಬದಲು ಅನ್ಯಾಯದ ಹಾದಿ ಹಿಡಿದ ವೈದ್ಯಕೀಯ ಸಂಸ್ಥೆಗಳು

ಯೋಗದ ಹೆಸರಿನಲ್ಲಿ ಅವಾಂತರಗಳು ಹೆಚ್ಚುತ್ತಿವೆ. ಯೋಗಾಸನಗಳ ರೂಪದಲ್ಲಿ ಯೂರೋಪಿನ ಜಿಮ್ನಾಸ್ಟಿಕ್ಸ್ ವ್ಯಾಯಾಮ ಶಾಲೆಗಳನ್ನು ಹೊಕ್ಕಿದೆ. ಈ ಭ್ರಮೆಗಳನ್ನು ದೂರ ಮಾಡಬೇಕೆಂದರೆ ದೀಪಿಕಾ ಪಡುಕೋಣೆ ಸ್ಥಾಪಿಸಿದ The Live Love Laugh Foundationನಂಥ ಸಂಸ್ಥೆಗಳು ಹೆಚ್ಚಬೇಕಿದೆ

ಮಾನಸಿಕ ಸಮಸ್ಯೆಗೆ ಎಲ್ಲೂ ಪರಿಹಾರ ಕಾಣದೆ ದೇಶದ ಅತ್ಯುನ್ನತ ಸಂಸ್ಥೆಯಾದ ಬೆಂಗಳೂರಿನ ನಿಮ್ಹಾನ್ಸ್‌ಗೆ ಹೋದವರನ್ನು ಅಲ್ಲಿನ ಕೆಲ ವೈದ್ಯರು ಯೋಗಾಭ್ಯಾಸದತ್ತ ತಳ್ಳಬಹುದೇ? ತೀವ್ರ ಅಸ್ತಮಾದಿಂದ ನರಳುತ್ತಿರುವ ಮಗುವನ್ನು ಅತಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಶಿಶುರೋಗ ತಜ್ಞರು ಪ್ರಾಣಾಯಾಮಕ್ಕೆ ದೂಡಬಹುದೇ? ಅತ್ಯಾಧುನಿಕ ತರಬೇತಿಯನ್ನೂ, ಕಾನೂನುಬದ್ಧವಾದ ನೋಂದಣಿಯನ್ನೂ ಪಡೆದಿರುವ ವೈದ್ಯರು ಇದಾವುದೂ ಇಲ್ಲದ ಸ್ವಘೋಷಿತ ಚಿಕಿತ್ಸಕರಿಗೆ ಮಣೆ ಹಾಕಬಹುದೇ? ಇವು ವೈದ್ಯವೃತ್ತಿಯ ಘನತೆಗೆ ಮಾತ್ರವಲ್ಲ, ಆಧುನಿಕ ಚಿಕಿತ್ಸೆಯನ್ನು ಬಯಸಿಬಂದ ಜನರಿಗೂ ಮಾಡುವ ದ್ರೋಹವಲ್ಲವೇ?ಪ್ರಜ್ಞಾವಂತರೆಲ್ಲರೂ ಕೇಳಲೇಬೇಕಾದ ಪ್ರಶ್ನೆಗಳಿವು.

ಯೋಗವಲ್ಲದ ಯೋಗವನ್ನು ಎಲ್ಲೆಡೆ ಹರಡಲಾಗುತ್ತಿದೆ. ಯೂರೋಪಿನ ದೈಹಿಕ ಕಸರತ್ತುಗಳು (ಜಿಮ್ನಾಸ್ಟಿಕ್ಸ್) ಯೋಗಾಸನಗಳೆಂದು ನಾಮಾಂತರಗೊಂಡು ಶಾಲೆ-ಕಾಲೇಜು-ವ್ಯಾಯಾಮ ಶಾಲೆಗಳನ್ನು ಹೊಕ್ಕಿವೆ. ವ್ರಾತ್ಯ-ವಿರಕ್ತರ ಸಾಧನೆಯಾಗಿದ್ದ ಪ್ರಾಣಾಯಾಮವು ಉಸಿರಾಟವನ್ನು ಕಲಿಸುವವರ ಸರಕಾಗುತ್ತಿದೆ. ಈ ಧ್ಯಾನ-ವ್ಯಾಯಾಮಗಳ ಜಾಗತಿಕ ವಹಿವಾಟು ವರ್ಷಕ್ಕೆ 8,000 ಕೋಟಿ ಡಾಲರ್ (ಐದೂವರೆ ಲಕ್ಷ ಕೋಟಿ ರೂಪಾಯಿ) ದಾಟಿದೆ. ಹಿಂದೆಂದೂ ಚಿಕಿತ್ಸಾ ಪದ್ಧತಿಯೇ ಆಗಿರದಿದ್ದ ಯೋಗಾಭ್ಯಾಸಕ್ಕೆ ಆಧುನಿಕ ಆಸ್ಪತ್ರೆಗಳಲ್ಲೂ ಪ್ರತ್ಯೇಕ ವಿಭಾಗವು ದೊರೆಯತೊಡಗಿದೆ. ಹಿರಿಯ ವೈದ್ಯರಿಂದ ಉದ್ಘಾಟನೆ, ಉಪನ್ಯಾಸ, ಹೊಸ ಚಿಕಿತ್ಸಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಗಳಿರುತ್ತಿದ್ದ ವೈದ್ಯಕೀಯ ಸಮ್ಮೇಳನಗಳಲ್ಲಿ ಈಗೀಗ ಬಾಬಾ-ಶ್ರೀಶ್ರೀಗಳಿಂದ ಉದ್ಘಾಟನೆ, ಆಶೀರ್ವಚನ, ಪ್ರವಚನ, ಯೋಗ ಪ್ರಾತ್ಯಕ್ಷಿಕೆಗಳು ಸಾಮಾನ್ಯವಾಗುತ್ತಿವೆ. ವೈದ್ಯ ವಿಜ್ಞಾನವನ್ನು ಪಾಲಿಸಬೇಕಾದವರು ವೈಜ್ಞಾನಿಕ ಮನೋವೃತ್ತಿಯಿಂದ ವಿಮುಖರಾಗುತ್ತಿರುವ ಲಕ್ಷಣಗಳಿವು.

ಮಾನಸಿಕ ಆರೋಗ್ಯಕ್ಕೂ ಯೋಗಾಭ್ಯಾಸವನ್ನು ಮುಂದೊತ್ತುವ ಪ್ರಯತ್ನಗಳಾಗುತ್ತಲೇ ಇವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜೂನ್ 25ರಂದು ಚಿತ್ರವೊಂದನ್ನು ಪ್ರಕಟಿಸಿ, ಖಿನ್ನತೆಯನ್ನು ಎದುರಿಸಲು ಯೋಗ, ನಡೆದಾಟ, ಹಣ್ಣು ಸೇವನೆ, 8 ಗಂಟೆಗಳ ನಿದ್ದೆ, ಧನಾತ್ಮಕ ಯೋಚನೆಗಳನ್ನು ಮಾಡಬೇಕೆಂದು ಸಲಹೆ ನೀಡಿತು. ಭಾರತೀಯ ವೈದ್ಯಕೀಯ ಸಂಘವು (ಐಎಂಎ) ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರ ಮಾನಸಿಕ ಆರೋಗ್ಯಕ್ಕೆಂದು ಜುಲೈ 8ರಂದು ಮೂರು ಯೋಗ ಸಂಸ್ಥೆಗಳೊಂದಿಗೆ ಕಾರ್ಯಕ್ರಮವೊಂದನ್ನು ಆಯೋಜಿಸಿತು. ಇವೆರಡನ್ನೂ ಅನೇಕ ತಜ್ಞರು ಉಗ್ರವಾಗಿ ವಿರೋಧಿಸಿದರು. ಭಾರತೀಯ ಮನೋರೋಗ ತಜ್ಞರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸೇರಿದಂತೆ ಹಲವಾರು ತಜ್ಞರು ಹಾಗೂ ಖಿನ್ನತೆಯಿಂದ ನರಳುತ್ತಿದ್ದ ಹಲವರು ಸರಕಾರದ ಆ ಪ್ರಕಟಣೆಯನ್ನು ಖಂಡಿಸಿದರು, ಛೇಡಿಸಿದರು; ಖಿನ್ನತೆಯುಳ್ಳವರು ಯಾವುದನ್ನು ಮಾಡಲು ಕಷ್ಟಪಡುತ್ತಾರೋ, ಅಂಥವನ್ನೇ ಅವರಿಗೆ ಬೋಧಿಸುವುದು ಮೂರ್ಖತನವೆಂದೂ, ಖಿನ್ನತೆಯು ಇನ್ನಷ್ಟು ಬಿಗಡಾಯಿಸಲು ಕಾರಣವಾಗುತ್ತದೆಂದೂ, ಖಿನ್ನತೆಯ ನಿವಾರಣೆಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯು ಅತ್ಯಗತ್ಯವಾಗಿದ್ದು, ಇಂಥ ಬೋಧನೆಗಳಲ್ಲವೆಂದೂ ಸರಕಾರಕ್ಕೆ ಸ್ಪಷ್ಟಪಡಿಸಿದರು. ಐಎಂಎಯು ಯೋಗ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದನ್ನು ಹಲವು ವೈದ್ಯರು ಕಟುವಾಗಿ ವಿರೋಧಿಸಿದರು, ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಔಷಧಗಳೂ, ಮನೋತಜ್ಞರೂ ಬೇಕೇ ಹೊರತು, ಆಧಾರವಿಲ್ಲದ ಯೋಗಾಭ್ಯಾಸವಾಗಲೀ, ಸ್ವಘೋಷಿತ ಯೋಗ ಗುರುಗಳಾಗಲೀ ಅಲ್ಲವೆಂದು ನೆನಪಿಸಿದರು. ಐಎಂಎ ಅಲ್ಲಿಗೇ ತಟಸ್ಥವಾಯಿತು, ಕಾರ್ಯಕ್ರಮವೂ ಹೆಸರಿಗಷ್ಟೇ ನಡೆಯಿತು.

ಮಾನಸಿಕ ಆರೋಗ್ಯಕ್ಕಾಗಿ ದೇಶದ ಅತ್ಯುನ್ನತ ಸಂಸ್ಥೆಯಾದ ನಿಮ್ಹಾನ್ಸ್‌ನಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಯೋಗ ಚಿಕಿತ್ಸೆಗೆಂದೇ ಪ್ರತ್ಯೇಕ ಕೇಂದ್ರ ಸ್ಥಾಪಿಸಲಾಗಿರುವುದು ಯೋಗವನ್ನು ಎಲ್ಲೆಡೆ ಹರಡುವ ಯೋಜನೆಯ ಭಾಗವೆಂದೇ ಅನಿಸುತ್ತದೆ. ಎಲ್ಲವನ್ನೂ ಕೂಲಂಕಷವಾಗಿ ಪರೀಕ್ಷಿಸಿ, ಪ್ರಶ್ನಿಸುವ ಮನೋವೃತ್ತಿಯನ್ನು ವಿದ್ಯಾರ್ಥಿಗಳೊಳಕ್ಕೆ ತುಂಬುವ ನಿಮ್ಹಾನ್ಸ್‌ನಲ್ಲಿ ಸಾಕಷ್ಟು ಆಧಾರಗಳಿಲ್ಲದ ಯೋಗಚಿಕಿತ್ಸೆಯನ್ನು ಉತ್ತೇಜಿಸುತ್ತಿರುವುದು ವಿಪರ್ಯಾಸವೇ ಆಗಿದೆ. ನಿಮ್ಹಾನ್ಸ್‌ನ ಯೋಗ ಕೇಂದ್ರವನ್ನು ಬೆಳೆಸುತ್ತಿರುವ ಇಬ್ಬರು ಹಿರಿಯ ಮನೋರೋಗ ತಜ್ಞರು ಮಾನಸಿಕ ಸಮಸ್ಯೆಗಳ ಚಿಕಿತ್ಸೆಯಲ್ಲಿ ಯೋಗಾಭ್ಯಾಸದ ಪಾತ್ರದ ಬಗ್ಗೆ ಅಧ್ಯಾಯವೊಂದನ್ನು ಬರೆದಿದ್ದು, ಒಂದೇ ಒಂದು ಮಾನಸಿಕ ಸಮಸ್ಯೆಗೂ ಯೋಗಾಭ್ಯಾಸದಿಂದ ಸ್ಪಷ್ಟವಾದ ಪ್ರಯೋಜನವಿದೆಯೆಂಬ ಆಧಾರವು ಅದರಲ್ಲೆಲ್ಲೂ ಕಾಣಿಸುವುದಿಲ್ಲ. ಬದಲಿಗೆ, ಈ ಬಗ್ಗೆ ಉತ್ತಮ ಗುಣಮಟ್ಟದ ಅಧ್ಯಯನಗಳ ಅಗತ್ಯವಿದೆ ಮತ್ತು ಮಾನಸಿಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಯೋಗವನ್ನು ಸಹ-ಚಿಕಿತ್ಸೆಯಾಗಿ ಬಳಸುವುದಕ್ಕೆ ಸಾಧ್ಯವೇ ಎಂದು ಪರೀಕ್ಷಿಸುವುದಕ್ಕೆ ಅವಕಾಶವಿದೆ ಎಂದಷ್ಟೇ ಅದರಲ್ಲಿ ಹೇಳಲಾಗಿದೆ. ಹಾಗಿರುವಾಗ, ದೃಢವಾದ ಆಧಾರಗಳಿಲ್ಲದ ಯೋಗಚಿಕಿತ್ಸೆಯನ್ನು ನಿಮ್ಹಾನ್ಸ್‌ನಂತಹ ಸಂಸ್ಥೆಯಲ್ಲಿ ನೀಡಹೊರಟಿರುವುದರ ಔಚಿತ್ಯವೇನು?

ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ಯೋಗಾಭ್ಯಾಸದ ಪಾತ್ರದ ಬಗ್ಗೆ ನಿಮ್ಹಾನ್ಸ್ ಸೇರಿದಂತೆ ದೇಶ-ವಿದೇಶಗಳಲ್ಲಾಗಿರುವ ಹಲವಾರು ಅಧ್ಯಯನಗಳ ಕ್ರಮಬದ್ಧತೆ ಮತ್ತು ವಿಶ್ವಾಸಾರ್ಹತೆಗಳನ್ನು ಪ್ರಶ್ನಿಸಲಾಗಿದೆ. ಯಾವ ಸಮಸ್ಯೆಗೆ ಯಾವ ಯೋಗಾಭ್ಯಾಸ, ಯಾವಾಗ, ಎಷ್ಟು, ಯಾರಿಂದ, ಹೇಗೆ ಎಂಬುದು ಸ್ಪಷ್ಟವಾಗಿಲ್ಲದಿರುವಾಗ ಯಾವುದೇ ಮಾನಸಿಕ ಅಥವಾ ದೈಹಿಕ ಕಾಯಿಲೆಗೆ ಯೋಗಾಭ್ಯಾಸವನ್ನು ಸೂಚಿಸುವುದು ಸಾಧ್ಯವಲ್ಲ, ಸಾಧುವೂ ಅಲ್ಲ; ಚಿಕಿತ್ಸೆಯಲ್ಲಿ ಯೋಗಾಭ್ಯಾಸಕ್ಕೆ ಪಾತ್ರವಿರಬೇಕೆಂದು ಒತ್ತಾಯಿಸುವವರು ಮತ್ತು ಆ ಬಗ್ಗೆ ಅಧ್ಯಯನಗಳನ್ನು ನಡೆಸುತ್ತಿರುವವರು ಯೋಗಾಭ್ಯಾಸದ ನಿಜವಾದ ಇತಿಹಾಸವನ್ನೂ, ತಿರುಳನ್ನೂ ಸರಿಯಾಗಿ ಅರ್ಥೈಸಿಕೊಳ್ಳಬೇಕಾಗುತ್ತದೆ ಮತ್ತು ಯಾವುದೇ ಸಾಮಾಜಿಕ-ರಾಜಕೀಯ ಆಯಾಮಗಳನ್ನು ಯೋಗಾಭ್ಯಾಸದೊಂದಿಗೆ ತಳುಕು ಹಾಕದೆ, ಕೇವಲ ಜನಸಾಮಾನ್ಯರ ಹಿತಾಸಕ್ತಿಗಳನ್ನಷ್ಟೇ ಪರಿಗಣಿಸಿ ಕ್ರಮಬದ್ಧವಾದ ಅಧ್ಯಯನಗಳನ್ನು ನಡೆಸುವ ಅಗತ್ಯವಿದೆ ಎಂದು ತಜ್ಞರ ಅಭಿಮತವಾಗಿದೆ [Indian J Psychiatry 2013;55:S409-14; Journal of Primary Care & Community Health 2017;8(1):31–36]

ಇದನ್ನೂ ಓದಿ : ಇಲಾಜು | ಸುದ್ದಿ ಆಗುತ್ತಲೇ ಇರುವ ‘ಆಯುಷ್ಮಾನ್ ಭಾರತ’ದ ಅಸಲಿ ಕತೆ

ಮಾನಸಿಕ ಆರೋಗ್ಯಕ್ಕಾಗಿ ವಿಶ್ವದೆಲ್ಲೆಡೆ ಕಾರ್ಯಕ್ರಮಗಳಿದ್ದು, ಭಾರತದಲ್ಲೂ ಮಾನಸಿಕ ಆರೋಗ್ಯದಲ್ಲಿ ಪರಿಣತರಾದ ವೈದ್ಯರು ಮತ್ತು ಮನೋಚಿಕಿತ್ಸಜ್ಞರು ಅವಿರತವಾಗಿ ದುಡಿಯುತ್ತಲೇ ಇದ್ದಾರೆ. ಭಾರತದಲ್ಲಿ ಸುಮಾರು 7 ಕೋಟಿ ಜನರಲ್ಲಿ ಮಾನಸಿಕ ಸಮಸ್ಯೆಗಳಿದ್ದು, ಸುಮಾರು 5 ಕೋಟಿ ಜನರಲ್ಲಿ ಖಿನ್ನತೆ ಹಾಗೂ ಆತಂಕಗಳಂತಹ ಸಮಸ್ಯೆಗಳೂ, ಇನ್ನುಳಿದ 2 ಕೋಟಿಯಲ್ಲಿ ಇಚ್ಚಿತ್ತ ವಿಕಲತೆ ಹಾಗೂ ಉನ್ಮಾದ-ಖಿನ್ನತೆಗಳೆರಡೂ ಇರುವ ತೀವ್ರ ಸಮಸ್ಯೆಗಳೂ ಕಂಡುಬರುತ್ತವೆ. ಇನ್ನೆರಡು ವರ್ಷಗಳಾಗುವಾಗ ಶೇ.20ರಷ್ಟು ಜನರಲ್ಲಿ ಒಂದಿಲ್ಲೊಂದು ಮಾನಸಿಕ ಸಮಸ್ಯೆ ಇರಬಹುದೆಂದು ಅಂದಾಜಿಸಲಾಗಿದೆ. ಈಗ ವರ್ಷಕ್ಕೆ ಸುಮಾರು 1,35,000 ಆತ್ಮಹತ್ಯೆಗಳಾಗುತ್ತಿದ್ದು, ಗಂಟೆಗೊಬ್ಬ ವಿದ್ಯಾರ್ಥಿಯ ಜೀವವು ಕೊನೆಯಾಗುತ್ತಿದೆ. ಮುಂದುವರಿದ ದೇಶಗಳಲ್ಲಿ ಲಕ್ಷ ಜನರಿಗೆ 15-30 ಮನೋರೋಗ ಚಿಕಿತ್ಸಕರಿದ್ದರೆ, ನಮ್ಮಲ್ಲಿ ಮೂವರಷ್ಟೇ ಇದ್ದಾರೆ; ಅಲ್ಲಿ ಶೇ.70ರಿಂದ 80ಕ್ಕೂ ಹೆಚ್ಚು ಮನೋರೋಗಿಗಳಿಗೆ ತಜ್ಞರಿಂದ ಚಿಕಿತ್ಸೆ ದೊರೆಯುತ್ತಿದ್ದರೆ, ನಮ್ಮಲ್ಲಿ ಶೇ.10ರಷ್ಟು ಮನೋರೋಗಿಗಳಿಗಷ್ಟೇ ದೊರೆಯುತ್ತಿದೆ. ಅಲ್ಲಿ ಮಾನಸಿಕ ಆರೋಗ್ಯ ರಕ್ಷಣೆಗೆ ಒಟ್ಟು ಆರೋಗ್ಯ ವೆಚ್ಚದ ಶೇ.6ರಷ್ಟು ಮುಡಿಪಾಗಿದ್ದರೆ, ಇಲ್ಲಿ ಕೇವಲ ಶೇ.0.06 ಇದೆ. ಜೊತೆಗೆ, ಮಾನಸಿಕ ಕಾಯಿಲೆಗಳ ಬಗ್ಗೆ ಅಜ್ಞಾನವೂ, ಮನೋರೋಗ ತಜ್ಞರಿಂದ ಚಿಕಿತ್ಸೆ ಪಡೆಯುವುದಕ್ಕೆ ಹಿಂಜರಿಕೆಯೂ ನಮ್ಮಲ್ಲಿ ಸಾಮಾನ್ಯವಾಗಿದೆ. ನಮ್ಮ ಜನರ ಮಾನಸಿಕ ಆರೋಗ್ಯದ ರಕ್ಷಣೆಯಾಗಬೇಕಿದ್ದರೆ ಈ ಎಲ್ಲ ಕೊರತೆಗಳನ್ನು ನೀಗಿಸಿ, ಗಂಭೀರ ಸ್ವರೂಪದ ಮನೋರೋಗ ಉಳ್ಳವರಿಗೆ ಹಾಗೂ ಆತ್ಮಹತ್ಯೆಯ ಯೋಚನೆ ಉಳ್ಳವರಿಗೆ ತಕ್ಷಣವೇ ಮಾನಸಿಕ ಆರೋಗ್ಯ ತಜ್ಞರ ನೆರವು ದೊರೆಯುವಂಥ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಆಧುನಿಕ ಮನೋವಿಜ್ಞಾನದ ಆಧಾರದಲ್ಲೇ ರೂಪಿಸಲಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಗಳನ್ನು ಮತ್ತು ನಮ್ಮ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ಪ್ರಾಮಾಣಿಕತೆಯಿಂದ ಕಾರ್ಯಗತಗೊಳಿಸಬೇಕಾಗಿದೆ.

ಮನೋವೈದ್ಯರ ಚಿಕಿತ್ಸೆಯಿಂದ ತನ್ನ ಖಿನ್ನತೆಯನ್ನು ನಿವಾರಿಸಿಕೊಂಡ ಖ್ಯಾತ ನಟಿ ದೀಪಿಕಾ ಪಡುಕೋಣೆ, ಮನೋರೋಗಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಪ್ರಚುರಪಡಿಸುವುದಕ್ಕೆ The Live Love Laugh Foundation (ಟಿಎಲ್‌ಎಲ್‌ಎಲ್‌ಎಫ್) ಎಂಬ ಸಂಸ್ಥೆಯನ್ನೇ ಸ್ಥಾಪಿಸಿದ್ದಾರೆ. ಭಾರತೀಯ ಮಾನಸಿಕ ಆರೋಗ್ಯ ತಜ್ಞರ ಸಂಘವು (ಐಪಿಎಸ್) ದೀಪಿಕಾರನ್ನು ತನ್ನ ಗೌರವ ರಾಯಭಾರಿಯಾಗಿಯೂ ನೇಮಿಸಿದೆ. ಐಎಂಎಯು 2016ರಲ್ಲಿ ಟಿಎಲ್‌ಎಲ್‌ಎಲ್‌ಎಫ್ ಹಾಗೂ ಐಪಿಎಸ್ ಸಹಭಾಗಿತ್ವದಲ್ಲಿ ‘ಖಿನ್ನತೆಯೆದುರು ಜೊತೆಗಾರಿಕೆ’ ಎಂಬ ಹೆಸರಲ್ಲಿ 5,000 ವೈದ್ಯರಿಗೆ ಮನೋರೋಗಗಳ ಬಗ್ಗೆ ತರಬೇತಿ ನೀಡುವ ಯೋಜನೆಯನ್ನೂ ಹಾಕಿಕೊಂಡಿದೆ. ಐಎಂಎ, ಐಪಿಎಸ್, ನಿಮ್ಹಾನ್ಸ್‌ಗಳು ಅಂಥ ಯೋಜನೆಯನ್ನು ಕೈಬಿಟ್ಟು, ಯಾವುದೇ ಆಧಾರಗಳಿಲ್ಲದ, ಯಾವುದೇ ಮಾನಸಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಒಂದಕ್ಷರದ ಉಲ್ಲೇಖವೂ ಇಲ್ಲದ, ಯಾವುದೇ ಕಾನೂನಿನ ಮಾನ್ಯತೆಯೂ ಇಲ್ಲದ ಯೋಗಾಭ್ಯಾಸವನ್ನು ಉತ್ತೇಜಿಸುವುದೆಂದರೆ ಎಲ್ಲರಿಗೂ ಅನ್ಯಾಯ ಮಾಡಿದಂತೆಯೇ ಆಗುತ್ತದೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More