ಈ ಕಾಲ | ಅರುಂಧತಿಯವರ ಛಲದ ಎದುರು ಕರಗಿದ್ದು ಬೆಟ್ಟದಂಥ ನಾಲ್ಕು ಸವಾಲು

ಅರುಂಧತಿ ನಾಗ್ ‘ರಂಗಶಂಕರ’ದ ಮೂಲಕ ಏನನ್ನು ಸಾಧಿಸಿದ್ದಾರೆಯೋ ಅದು ಅನನ್ಯವಾದುದು. ಭಾರತದ ಪ್ರತಿಯೊಂದು ನಗರ ಹಾಗೂ ಪಟ್ಟಣಗಳು ತಮ್ಮದೇ ಆದ ‘ರಂಗಶಂಕರ’ವನ್ನು ಹೊಂದಿದ್ದರೆ, ಬಹುಶಃ ನಮ್ಮ ಪ್ರಜಾಸತ್ತಾತ್ಮಕ ಒಕ್ಕೂಟವು ಬಹಳ ಖುಷಿ, ನೆಮ್ಮದಿಯ ತಾಣ ಆಗಿರುತ್ತಿತ್ತು 

ಒಮ್ಮೆ ತಮ್ಮ ಸಮಕಾಲೀನ ಹಿಂದೂಗಳು ಸತಿ ಪದ್ಧತಿಯನ್ನು ಮಹಾನ್ ಆಚರಣೆ ಎಂದು ಹಾಡಿ ಹೊಗಳುತ್ತಿರುವಾಗ, ಮಹಾತ್ಮ ಗಾಂಧಿ, “ಪತಿಯ ಸಾವಿನೊಂದಿಗೆ ಹೆಣ್ಣೊಬ್ಬಳು ತನ್ನ ಬದುಕಿಗೂ ಅಂತ್ಯ ಹಾಡುವುದು ವಿವೇಕದ ಕಾರ್ಯ ಅಲ್ಲ; ಅದೊಂದು ಮೌಢ್ಯ ಮತ್ತು ತಿಳಿಗೇಡಿ ಕೃತ್ಯ,” ಎಂದು ಕರೆದಿದ್ದರು. “ಒಂದು ವೇಳೆ, ಆಕೆ ತನ್ನ ಗಂಡನನ್ನು ನಿಜವಾಗಿಯೂ ಗಾಢವಾಗಿ ಪ್ರೀತಿಸುತ್ತಿದ್ದರೆ, ಸತಿ ಸಹಗಮನದ ಮೂಲಕ ತನ್ನ ಬದುಕಿಗೆ ಅಂತ್ಯ ಹಾಡುವುದರ ಬದಲಾಗಿ, ತನ್ನ ಕುಟುಂಬ ಮತ್ತು ದೇಶದ ಬಗೆಗಿನ ಆತನ ಕನಸು, ಆದರ್ಶಗಳನ್ನು ಸಾಕಾರಗೊಳಿಸಲು ತನ್ನ ಜೀವನವನ್ನು ಮುಡಿಪಾಗಿಡುತ್ತಿದ್ದಳು,” ಎಂದೂ ಗಾಂಧಿ ಹೇಳಿದ್ದರು.

ಸತ್ವಶಾಲಿ ನಟಿ ಹಾಗೂ ದೇಶದ ಮೇರು ರಂಗಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅರುಂಧತಿ ನಾಗ್ (ರಾವ್) ಅವರ ಜೀವನ ಮತ್ತು ಸಾಧನೆಯ ಬಗ್ಗೆ ಯೋಚಿಸುವಾಗ ಗಾಂಧಿಯ ಆ ಮಾತುಗಳು ನೆನಪಾದವು. ಅರುಂಧತಿ ದೆಹಲಿಯಲ್ಲಿ ಬಾಲ್ಯವನ್ನು ಕಳೆದವರು. ಹಿಂದಿ, ಮರಾಠಿ ಮತ್ತು ಇಂಗ್ಲಿಷ್ ಅವರ ಆರಂಭದ ದಿನಗಳ ಭಾಷೆಯಾಗಿದ್ದವು. ಶಾಲಾ ದಿನಗಳಲ್ಲೇ ಅವರು ಈ ಮೂರೂ ಭಾಷೆಗಳ ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದರು. ಬಳಿಕ ಅವರು ಕನ್ನಡ ನಟ ಶಂಕರ್ ನಾಗ್ ಅವರನ್ನು ಮದುವೆಯಾಗಿ, ಕನ್ನಡ ಭಾಷೆಗೂ ತಮ್ಮ ರಂಗ ಚಟುವಟಿಕೆಗಳನ್ನು ವಿಸ್ತರಿಸಿಕೊಂಡರು. ಜೊತೆಗೆ ಅವರು ತಮ್ಮ ವೃತ್ತಿಯಲ್ಲೂ ಬೆಳೆಯುತ್ತ ಮತ್ತು ಪುಟ್ಟ ಮಗಳನ್ನೂ ಬೆಳೆಸುತ್ತ ಸುಂದರ ಬದುಕು ಕಟ್ಟಿಕೊಂಡರು. ಆ ಹೊತ್ತಿಗೆ, ಅವರು ನಿಜವಾಗಿಯೂ ತಮ್ಮ ವೈಯಕ್ತಿಕ ನೆಮ್ಮದಿಯನ್ನೂ, ವೃತ್ತಿ ಯಶಸ್ಸನ್ನೂ ಜೊತೆಯಾಗಿ ಕಂಡುಕೊಂಡಿದ್ದರು ಕೂಡ. ಆದರೆ, ಅಷ್ಟರಲ್ಲಿ ರಸ್ತೆ ಅಪಘಾತವೊಂದು ಅವರ ಸುಂದರ ಬದುಕಿಗೆ ಅಪ್ಪಳಿಸಿತು. ಕುಟುಂಬ ಪಯಣಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಶಂಕರ್ ಬಲಿಯಾದರು. ಜೊತೆಗಿದ್ದ ಪತ್ನಿ ಮತ್ತು ಮಗಳು ಸಾವು-ಬದುಕಿನ ನಡುವೆ ಹೋರಾಡಿ ಗೆದ್ದರು.

ಶಂಕರ್ ಮೇಲೆ ಅರುಂಧತಿ ಜೀವವನ್ನೇ ಇಟ್ಟಿದ್ದರು. ಅಷ್ಟು ಗಾಢ ಪ್ರೀತಿ ಅವರದ್ದು. ೧೯ನೇ ಶತಮಾನದಲ್ಲಾಗಿದ್ದರೆ, ಸಂಪ್ರದಾಯವಾದಿ ಹಿಂದೂಗಳು ಬಹುಶಃ ಅವರಿಗೆ ಸತಿ ಸಹಗಮನದ ಮೂಲಕ ತನ್ನ ಪತಿಯ ಮೇಲಿನ ಪ್ರೀತಿ ಸಾಬೀತು ಮಾಡುವಂತೆ ಹೇಳುತ್ತಿದ್ದರು. ಆದರೆ, ೨೦ನೇ ಶತಮಾನದ ಅಂತ್ಯದಲ್ಲಿ ಅವರು ಆ ಪರಿಸ್ಥಿತಿಗೆ ಪ್ರತಿಕ್ರಿಯಿಸಿದ ರೀತಿ ಬೇರೆಯೇ ಆಗಿತ್ತು. ಎಲ್ಲರಂತಲ್ಲದ ಮಹಿಳೆಯೊಬ್ಬರ ಪ್ರೀತಿ ಕೂಡ ತಥಾಕಥಿತ ದಾರಿಯಿಂದ ಬೇರೆಯೇ ಆದ ತಿರುವು ಪಡೆದುಕೊಂಡಿತು. ಶಂಕರ್ ನಾಗ್ ನೆನಪಿನಲ್ಲಿ ಒಂದು ರಂಗಮಂದಿರ ಕಟ್ಟಲು ಅವರು ನಿರ್ಧರಿಸಿದರು. ತಮ್ಮ ವೃತ್ತಿ ಮತ್ತು ನಾಡಿನ ಕುರಿತು ತಾವು ಜೊತೆಯಾಗಿ ಕಟ್ಟಿಕೊಂಡಿದ್ದ ಕನಸು ಮತ್ತು ಆದರ್ಶವನ್ನು ನಿಜ ಮಾಡುವ ಅರ್ಥಪೂರ್ಣ ಮಾರ್ಗ ಕಂಡುಕೊಂಡರು.

ಭಾರತೀಯ ಸಮಾಜದಲ್ಲಿ ಮಹಿಳೆ ಒಂಟಿಯಾಗಿ ಬದುಕುವುದು ಕಷ್ಟ. ಅದರಲ್ಲೂ, ಸಾಮಾಜಿಕ ರಂಗದಲ್ಲಿ ಕ್ರಿಯಾಶೀಲರಾಗಿ, ಒಂಟಿಯಾಗಿ ಮುನ್ನಡೆಯುವುದು ಇನ್ನಷ್ಟು ಕಠಿಣ. ಅಲ್ಲದೆ, ಅರುಂಧತಿ ಅವರಿಗೆ ಕುಟುಂಬದ ಹಣಕಾಸಿನ ಅಥವಾ ಪ್ರಭಾವದ ಬಲ ಕೂಡ ಇರಲಿಲ್ಲ. ಆದರೆ, ಅವರು ತನ್ನ ಕನಸನ್ನು ನನಸಾಗಿಸುವ ಛಲದಿಂದ ಹಿಂದೆ ಸರಿಯಲಿಲ್ಲ. ಏಕೆಂದರೆ, ಆ ಕನಸು ಅವರೊಬ್ಬರದ್ದೇ ಆಗಿರಲಿಲ್ಲ, ಶಂಕರ್ ಅವರದ್ದೂ ಆಗಿತ್ತು! ಆ ಕನಸಿನ ಸಾಕಾರಕ್ಕೆ ಅವರಿಗೆ ಮೂಲಭೂತವಾಗಿ ನಾಲ್ಕು ಅಗತ್ಯಗಳಿದ್ದವು. ಅಂದಿನ ಬೆಂಗಳೂರು ನಗರದ ಪರಿಸ್ಥಿತಿಯಲ್ಲಿ ಆ ನಾಲ್ಕರ ಪೈಕಿ ಯಾವೊಂದೂ ಕೈಗೆಟುಕುವ ಸ್ಥಿತಿ ಇರಲಿಲ್ಲ.

ಮೊದಲನೆಯದಾಗಿ, ವೈಯಕ್ತಿಕ ಲಾಭಕ್ಕಾಗಿ ರಾಜಕಾರಣಿಗಳು ಖಾಲಿ ಇರುವ ಪ್ರತಿ ನಿವೇಶನದ ಮೇಲೂ ಕಣ್ಣಿಟ್ಟಿರುವ ಹೊತ್ತಿನಲ್ಲಿ ನಗರದ ಬಹುತೇಕ ಕೇಂದ್ರಭಾಗದಲ್ಲಿ ಒಂದು ವಿಶಾಲ ನಿವೇಶನ ಪಡೆಯುವ ಸವಾಲು. ಎರಡನೆಯದು, ಸಾಮಾನ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ವಲಯವನ್ನು ಹೊರತುಪಡಿಸಿ ಕಲೆಯಂತಹ ರಂಗಕ್ಕೆ ದಾನ-ದೇಣಿಗೆ ನೀಡುವುದೇ ವಿರಳವಾಗಿದ್ದ ಶ್ರೀಮಂತ ಭಾರತೀಯರಿಂದ ರಂಗಮಂದಿರಕ್ಕಾಗಿ ದೇಣಿಗೆ ಸಂಗ್ರಹಿಸುವ ಸವಾಲು. ಮೂರನೆಯದ್ದು, ಅವರ ಇಷ್ಟದಂತೆ ಮತ್ತು ಅವರ ಕೈಗೆಟುಕುವ ಮೊತ್ತದಲ್ಲಿ ರಂಗಮಂದಿರ ಕಟ್ಟಬಲ್ಲ ಒಬ್ಬ ಪರಿಣಿತ ವಾಸ್ತುಶಿಲ್ಪಿಯನ್ನು ಗೊತ್ತುಮಾಡುವುದು. ನಾಲ್ಕನೆಯದಾಗಿ, ತಮ್ಮ ರಂಗಮಂದಿರದಲ್ಲಿ ನಡೆಯುವ ನಾಟಕಗಳನ್ನು ನೋಡಲು ದೂರದ ಪ್ರದೇಶಗಳಿಂದ ಬರುವಂತಹ ಪ್ರೇಕ್ಷಕರನ್ನು ಹುಡುಕುವುದು. ಅದೂ, ಮನೆಯಲ್ಲಿ ಕೂತು ಟಿವಿಯಲ್ಲಿ ನಾಲ್ಕು ನೂರು (ಅಥವಾ ನಾಲ್ಕು ಸಾವಿರ!) ಚಾನೆಲುಗಳ ಕಣ್ಣಲ್ಲಿ ಕಣ್ಣು ನೆಟ್ಟಿರುವವರನ್ನು ರಂಗಭೂಮಿಗೆ ಸೆಳೆಯುವುದಂತೂ ಅತ್ಯಂತ ದೊಡ್ಡ ಸವಾಲಾಗಿತ್ತು.

ಮೂರು ಮತ್ತು ನಾಲ್ಕನೇ ಅಗತ್ಯಗಳನ್ನು ಈಡೇರಿಸುವ ಸವಾಲಿನ ನಡುವೆ ಅರುಂಧತಿಯವರು, ನನ್ನ ಪತ್ನಿ ಸುಜಾತ ಕೇಶವನ್‌ ಅವರನ್ನು ಭೇಟಿಯಾಗಿದ್ದರು. ಆ ವಿಷಯದಲ್ಲಿ ನೆರವಾಗುವಂತೆ ಕೋರಿದ್ದರು. ಈಗ ‘ರಂಗಶಂಕರ’ ಎಂದು ಕರೆಯಲಾಗುತ್ತಿರುವ ರಂಗಮಂದಿರದ ಲೋಗೋ ಮತ್ತು ಬ್ರಾಂಡಿಂಗ್ ಮಾಡಿಕೊಡುವಂತೆ ಅವರು ಕೋರಿದ್ದರು. ಆ ಹೊತ್ತಿಗಾಗಲೇ ಸುಜಾತ, ತನ್ನ ‘ಜೀವಂತ ಪತಿ’ಯ ಯಾವ ನೆರವೂ ಇಲ್ಲದೆ ತಮ್ಮದೇ ಸ್ವಶಕ್ತಿಯ ಮೇಲೆ ಡಿಸೈನ್ ವಲಯದಲ್ಲಿ ಗುರುತಿಸಿಕೊಂಡಿದ್ದರು. ಹಾಗಾಗಿ, ಅರುಂಧತಿ ಅವರ ಆ ಕಾರ್ಯ ಆಕೆಯಲ್ಲಿ ದೊಡ್ಡ ಅಭಿಮಾನಕ್ಕೆ ಕಾರಣವಾಗಿತ್ತು. ಹಾಗೇ, ನನ್ನಲ್ಲೂ ಅಭಿಮಾನವನ್ನೂ (ತಡವಾಗಿ ಒಂದಿಷ್ಟು ಪಾಪಪ್ರಜ್ಞೆಯನ್ನೂ!) ಹುಟ್ಟುಹಾಕಿತ್ತು. ಬಳಿಕ, ೨೦೦೪ರಲ್ಲಿ ರಂಗಶಂಕರ ಪೂರ್ಣಗೊಂಡು, ಜನಸೇವೆಗೆ ಸಮರ್ಪಣೆಗೊಂಡ ಬಳಿಕ ಸುಜಾತ ಮತ್ತು ನಾನು ಅಲ್ಲಿ ಹಲವು ನಾಟಕಗಳನ್ನು ನೋಡಿದೆವು. ಖ್ಯಾತ ನಾಟಕಕಾರರಾದ ವಿಜಯ್ ತೆಂಡೂಲ್ಕರ್, ಹಬೀಬ್ ತನ್ವೀರ್ ಅವರ ನಾಟಕಗಳನ್ನೂ, ರಜತ್ ಕಪೂರ್ ಮತ್ತು ರತ್ನಾ ಪಾಠಕ್ ಅವರಂತಹ ಮೇರು ನಟರ ನಟನೆಯನ್ನೂ ನಾವು ರಂಗಶಂಕರದಲ್ಲಿ ಕಣ್ತುಂಬಿಕೊಂಡೆವು.

ವಿನ್ಯಾಸ ಮತ್ತು ನಿರ್ವಹಣೆಯ ವಿಷಯದಲ್ಲಿ ರಂಗಶಂಕರ ಬಹಳ ಮುಕ್ತ ಮತ್ತು ಸಮಾನ ಅವಕಾಶಗಳ ಒಂದು ವೇದಿಕೆ. ಎತ್ತರದ ಛಾವಣಿಯ ವಿಶಾಲ ಸಭಾಂಗಣದ ಅದರ ಒಂದು ಬದಿ ಪುಸ್ತಕದ ಮಳಿಗೆಯೂ, ಮತ್ತೊಂದು ಬದಿಯಲ್ಲಿ ಕೆಫೆಯೂ ಇದೆ. ರಂಗಮಂದಿರದ ಒಳಪ್ರವೇಶಿಸಲು ಸಾಲಾಗಿ ಮೆಟ್ಟಿಲೇರಿ ಹೋಗಬೇಕು. ರಂಗಮಂದಿರ ಒಳಗೆ ಯಾವುದೇ ವಿಐಪಿ ಸಾಲುಗಳಿಲ್ಲ. ಎಲ್ಲ ಟಿಕೇಟುಗಳ ಬೆಲೆಯೂ ಒಂದೇ. ಮುಂದಿನ ಆಸನಗಳು ಬೇಕೆಂದರೆ ನೀವು ಎಲ್ಲರಿಗಿಂತ ಮುಂಚಿತವಾಗಿ ರಂಗಮಂದಿರವನ್ನು ತಲುಪಬೇಕು. ವರ್ಷದಲ್ಲಿ ಸುಮಾರು ೩೦೦ ನಾಟಕಗಳ ಪ್ರದರ್ಶನ ಕಾಣುವ ಈ ರಂಗಭೂಮಿಯಲ್ಲಿ, ವಿದೇಶಿ ಭಾಷೆಗಳ ನಾಟಕಗಳಲ್ಲದೆ, ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳ ನಾಟಕಗಳೂ ಪ್ರದರ್ಶನ ಕಾಣುತ್ತವೆ.

ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ನಾನು ಅರುಂಧತಿ ಅವರನ್ನು ಬಲ್ಲೆ. ಆದರೆ, ಕಳೆದ ವಾರದವರೆಗೆ ಅವರು ತಾವೇ ಕಟ್ಟಿ ಬೆಳೆಸಿದ ರಂಗಶಂಕರದಲ್ಲಿ ನಾಟಕದ ಪ್ರದರ್ಶನ ನೀಡಿದ್ದನ್ನು ನೋಡಿರಲಿಲ್ಲ. ಬೇರೆ-ಬೇರೆ ನಗರಗಳಲ್ಲಿ ವಿವಿಧ ನಾಟಕಗಳಲ್ಲಿ ಅವರು ನಟಿಸಿದ್ದರು, ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ರಂಗಶಂಕರದಲ್ಲಿ ಅವರು ನಟಿಸಿದ್ದು ತೀರಾ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಆದರೆ, ಈ ಬಾರಿ ಗಿರೀಶ್ ಕಾರ್ನಾಡ್ ಅವರು ತಮ್ಮ ಹೊಸ ನಾಟಕದ ಹಿಂದಿ ಪ್ರಯೋಗದಲ್ಲಿ ನಟಿಸುವಂತೆ ಅರುಂಧತಿ ಅವರಿಗೆ ಒಪ್ಪಿಸಿದ್ದರು. ಒಬ್ಬರೇ ನಟರು ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ‘ಬಿಕರೆ ಬಿಂಬ್’ (ಒಡಕಲು ಬಿಂಬ) ನಾಟಕದಲ್ಲಿ ಅರುಂಧತಿ ವೇದಿಕೆಯ ಮೇಲೆಯೂ, ನಾಟಕದ ಭಾಗವಾದ ಟಿವಿಯಲ್ಲಿನ ಪಾತ್ರವಾಗಿಯೂ ಕಾಣಿಸಿಕೊಂಡಿದ್ದರು. ಅದೊಂದು ನಿಜವಾಗಿಯೂ ಕಾಸ್ಲಿಕ್ ಎನ್ನಬಹುದಾದ ನಾಟಕ. ಮಾತೃಭಾಷೆ ಕನ್ನಡ ಮತ್ತು ಜಾಗತಿಕ ಭಾಷೆ ಇಂಗ್ಲಿಷ್‌ ನಡುವಿನ ಪೈಪೋಟಿಯನ್ನು ಅಕ್ಕ-ತಂಗಿಯರ ನಡುವಿನ ಪೈಪೋಟಿ, ಪ್ರತಿಸ್ಫರ್ಧೆಯ ಮೂಲಕ ಹೇಳುವುದು ನಾಟಕದ ವಿಶೇಷ.

ಈ ನಾಟಕದ ಇಂಗ್ಲಿಷ್ ಅವತರಣಿಕೆಯನ್ನು ನಾನು ಈ ಮೊದಲು ನೋಡಿದ್ದೆ. ಈಗ ಅರುಂಧತಿ ಅವರು ಹಿಂದಿಯಲ್ಲಿ ಅಭಿನಯಿಸಿದ್ದನ್ನೂ ನೋಡಿದೆ. ಮುಖ್ಯಪಾತ್ರದ ಮನೋವ್ಯಾಪಾರಗಳನ್ನು ಅದರ ಎಲ್ಲ ಸ್ಥಿತ್ಯಂತರಗಳೊಂದಿಗೆ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವಲ್ಲಿ ಅವರು ಅದ್ಬುತ ಎಂಬಂತೆ ನಟಿಸಿದ್ದಾರೆ. ವೈಯಕ್ತಿಕ ಬದುಕಿನಲ್ಲಿ ತುಂಬಾ ಕಾಳಜಿಯ ಮತ್ತು ಮೃದು ಸ್ವಭಾವದ ಅವರು, ನಾಟಕದಲ್ಲಿ ತೀರಾ ಅನುಮಾನದ, ವಿಕ್ಷಿಪ್ತ ಮತ್ತು ಸ್ವಾರ್ಥದ ಪ್ರತಿರೂಪದಂತೆ ಪರಕಾಯ ಪ್ರವೇಶ ಮಾಡಿದ್ದಾರೆ. ನಿಜಕ್ಕೂ ರಂಗದ ಮೇಲಿನ ಅವರ ಆ ರೂಪಾಂತರ ಅಚ್ಚರಿ ಹುಟ್ಟಿಸುತ್ತದೆ.

‘ಬಿಕರೆ ಬಿಂಬ್’ ನಾಟಕದ ದೃಶ್ಯ
ಇದನ್ನೂ ಓದಿ : ಬೈಠಕ್‌ | ರಂಗಕರ್ಮಿಗಳಾದ ಅರುಂಧತಿ ನಾಗ್‌ ಮತ್ತು ಪದ್ಮಾವತಿ ರಾವ್‌ ಸಂದರ್ಶನ

ನಾಟಕ ಮುಗಿದ ಬಳಿಕ ನಾನು ರಂಗಶಂಕರ ಕೆಫೆಯಲ್ಲಿ ಒಬ್ಬನೇ ಕೂತು, ಅಕ್ಕಿ ರೊಟ್ಟಿ, ಸಬುದಾನ ವಡೆ ಮೆಲ್ಲುತ್ತಿದ್ದೆ. ನನ್ನ ಸುತ್ತ ನಾಟಕ ನೋಡಿ ಹೊರಬಂದ ಬೇರೆ-ಬೇರೆ ವಯೋಮಾನದ, ಬೇರೆ-ಬೇರೆ ಜಾತಿ, ಧರ್ಮದ ಹಿನ್ನೆಲೆಯ ಹಲವರು ಅತ್ಯುತ್ಸಾಹ ಮತ್ತು ಖುಷಿಯಲ್ಲಿ ನಾಟಕದ ಕುರಿತು ಜೋರಾಗಿ ಮಾತನಾಡುತ್ತಿದ್ದರು. ನಾಟಕ ಮುಗಿದು ಒಂದು ಗಂಟೆಯ ಬಳಿಕ ಅರುಂಧತಿ ಮೆಟ್ಟಿಲು ಇಳಿಯುತ್ತ ಬಂದರು. ನಾನು ಆ ನನ್ನ ಸ್ನೇಹಿತೆಗೆ ಅಭಿನಂದನೆ ಹೇಳಬೇಕು ಎಂದುಕೊಂಡಿದ್ದೆ. ಆದರೆ, ಅಷ್ಟರಲ್ಲಿ ಹಲವರು ಅವರನ್ನು ಸುತ್ತುವರಿದು ಅಭಿನಂದಿಸತೊಡಗಿದರು. ಹಾಗಾಗಿ ನನ್ನ ಪಾಳಿಗಾಗಿ ಕಾದೆ. ಆ ಸ್ಥಳ ಮತ್ತು ಸಂದರ್ಭಕ್ಕೆ ಹಾಗೆ ಕಾಯುವುದು ಉಚಿತವಾಗಿತ್ತು.

ಬಹುಶಃ ಇಂದು ಅರುಂಧತಿ ಏನನ್ನು ಸಾಧಿಸಿದ್ದಾರೆಯೋ ಅದನ್ನು ಕಂಡಿದ್ದರೆ ಮಹಾತ್ಮ ಗಾಂಧಿ ನಿಜವಾಗಿಯೂ ಹೆಮ್ಮೆಪಡುತ್ತಿದ್ದರು. ಬೆಂಗಳೂರಿನ ರಂಗಭೂಮಿಪ್ರಿಯರೆಲ್ಲ ಬಹುತೇಕ ನನಗೆ ಗೊತ್ತು. ಆ ದೃಷ್ಟಿಯಲ್ಲಿ ಹೇಳಬೇಕೆಂದರೆ, ಭಾರತದ ಪ್ರತಿ ನಗರ-ಪಟ್ಟಣಗಳೂ ತಮ್ಮದೇ ಆದ ‘ರಂಗಶಂಕರ’ವನ್ನು ಹೊಂದಿದ್ದರೆ, ಬಹುಶಃ ನಮ್ಮ ಪ್ರಜಾಸತ್ತಾತ್ಮಕ ಒಕ್ಕೂಟ ಬಹಳ ಖುಷಿಯ, ನೆಮ್ಮದಿಯ ತಾಣವಾಗಿರುತ್ತಿತ್ತು.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More