ಶತಪಥ | ಓ ಗಂಡಸರೇ, ನೀವು ಎಂದು ಪುರುಷರಾಗುವಿರಿ?

ನಿಮ್ಮ ಆಸುಪಾಸಿನಲ್ಲೇ ಪುರುಷರಿದ್ದಾರೆ, ಚರಿತ್ರೆಯಲ್ಲಿದ್ದಾರೆ, ಪುರಾಣದಲ್ಲಿಯೂ ಇದ್ದಾರೆ, ಅವರನ್ನು ನೋಡಿಯಾದರೂ ಕಲಿತುಕೊಳ್ಳಿ. ದಯಮಾಡಿ ನಿಮ್ಮ ಮರ್ಯಾದೆ ಮಾತ್ರವಲ್ಲ ಅವರ ಮರ್ಯಾದೆಯೂ ನಿಮ್ಮ ಹೊಣೆಯೇ, ಅದನ್ನು ಉಳಿಸಿ. ಇಲ್ಲವಾದರೆ... 

ಜಗತ್ತನ್ನೇ ಆಳುತ್ತಿರುವ ದೊಡ್ಡ ಮೂಢನಂಬಿಕೆ ಎಂದರೆ, ಹೆಣ್ಣು ಗಂಡಿನ ಅಧೀನ ಇರತಕ್ಕವಳು ಎಂಬುದು. ಹೆಣ್ಣೆಂದರೆ ದೇಹ, ಹೆಣ್ಣೆಂದರೆ ಲಿಂಗ-ಅಂಗ ಮಾತ್ರ ಎಂಬ ನಂಬಿಕೆ. ಈ ನಂಬಿಕೆಯನ್ನು ಕೊಡವದೆ ನೀವು ಏನೇ ಕಟ್ಟಿದರೂ ಅವೆಲ್ಲ ಗಾಳಿಬುರುಡೆಗಳಂತೆ, ನೀರ್ಗುಳ್ಳೆಗಳಂತೆ ಒಡೆದು ಹೋಗುತ್ತವೆ. ಎಷ್ಟೆಲ್ಲ ನವನವೀನ ಆವಿಷ್ಕಾರಗಳು, ಮಂತ್ರ-ತಂತ್ರ-ಯಂತ್ರಗಳು, ಸಂಶೋಧನೆಗಳು, ವೇದಾಂತ-ಸಿದ್ಧಾಂತ, ತರ್ಕ, ಚಿಂತನೆಗಳು, ಗುಹೆ-ಗಹ್ವರ ತಪಸ್ಸುಗಳು, ಎಲ್ಲವೂ ಇದ್ದೂ ಇಂದು ಪ್ರಪಂಚ ಅಧೋಗತಿಗೆ ಇಳಿಯುತ್ತಿದೆ ಯಾಕೆ? ಉದ್ಧಾರ ಆಗಿಲ್ಲ ಯಾಕೆ? ಯಾವುದೂ ಮಿದುಳಲ್ಲೇ ಸುತ್ತಾಡುತ್ತ ಇದೆ ಯಾಕೆ? ಹೃದ್ಗತವೋ ರಕ್ತಗತವೋ ಆಗುತ್ತಿಲ್ಲ ಯಾಕೆ? ಯಾಕೆಂದರೆ, ಇದೇ ಮೂಲಭೂತ ಮೂಢನಂಬಿಕೆ ಜಗತ್ತನ್ನು ಕಪಿಮುಷ್ಟಿಯಲ್ಲಿ ಹಿಡಿದಿರುವುದಕ್ಕೆ. ಎಂಥೆಂಥ ಸಾಧಕ ಎನಿಸಿಕೊಂಡವರೂ ಹೆಣ್ಣನ್ನು ಕಂಡಕೂಡಲೇ ಕೇವಲ ಗಂಡು ಆಗಿಬಿಡುವ ದುರಂತ. ಹೆಣ್ಣನ್ನು ಕಂಡೊಡನೆ ಆಕೆ ಕೇವಲ ಕಾಮ ತಣಿಸುವ ಗೊಂಬೆಯಾಗಿ ಕಾಣುವ ದುರಂತ. ಹೆಣ್ಣು ಸಾಧನೆಯ ದಾರಿಯಲ್ಲಿ ಕಂಟಕ ಎಂದು ತೋರುವುದು, ಹೆಣ್ಣನ್ನು ದೇಹಮಾತ್ರವಾಗಿ ನೋಡುವವರಿಗಷ್ಟೇ ಸೈ. ಇಂಥ ವಿಕೃತಿಗೆ ಶಾಪವೋ ಎಂಬಂತೆ ಇತಿಹಾಸದಲ್ಲಿ ಎಷ್ಟು ಸಾಮ್ರಾಜ್ಯಗಳು ಯುದ್ಧರಕ್ತದಲ್ಲಿ ತೋಯ್ದವು, ಹೆಣ್ಣು ಒಂದು ಬಲೆಯಾದಳು, ಗಾಳವಾದಳು, ಜಂಗಮನನ್ನು ಮರುಳು ಮಾಡುವವಳಾದಳು, ರಾಜಕಾರಣಿಯನ್ನು ಹಿಡಿದುಕೊಡುವ, ತನ್ನನ್ನು ಹೆಣ್ಣುಮಾತ್ರ ಎಂದು ತಿಳಿಯುವವರ ಕೈಯಲ್ಲಿ ತನ್ನ ಅಸಹಾಯಕತೆ ಮೀರುವ ಸೂತ್ರವಾಗಿ, ಆಯುಧವಾದಳು, ತನ್ನ ಸ್ಥಿತಿಯನ್ನು ನಿಭಾಯಿಸುವ ಅಪ್ರತಿಮ ಅವಳು. ತನ್ನನ್ನು ಗಂಡಿನ ಆಸ್ತಿ ಎಂದು ತಿಳಿವವರಿಗೆ ತಕ್ಕ ಶಾಸ್ತಿಯೂ ಆಗುವಳು.

ಒಂದು ತಿಳಿದುಕೊಳ್ಳಿ, ಹೋಗುವುದು ನಮ್ಮ ಮರ್ಯಾದೆಯಲ್ಲ; ಏಕೆಂದರೆ, ನಮ್ಮ ಮರ್ಯಾದೆ ಅಂಗ-ಲಿಂಗದಲ್ಲಿಲ್ಲ, ನಾವು ಮಾನಸ ಜೀವಿಗಳು, ಭಾವಜೀವಿಗಳು, ಮನುಷ್ಯನನ್ನು ಭೂಮಿಗೆ ತರುವವರು, ಮನುಷ್ಯ ಪ್ರೀತಿಯವರು. ಗಂಡು, ಗಂಡಸರು ಎಂದರೆ ಬಹಳ ಗೌರವದಿಂದ ನೋಡುತ್ತ, ಬೆಳೆದವರು. ನೀವೋ, ಹೆಣ್ಣು ಎಂಬುದನ್ನು ತೀರಾ ಕೆಳದೃಷ್ಟಿಯಿಂದ ನೋಡಿದಿರಿ. ನಿಮ್ಮನ್ನು ಹಾಗೆಯೇ ಬೆಳೆಸಿದರು. ಅದನ್ನು ಅರಿತುಕೊಳ್ಳಿ. ಈ ಯುಗದಲ್ಲಿಯೂ ನೀವಿದನ್ನು ಅರಿತುಕೊಳ್ಳದೆ ಹೋದಲ್ಲಿ ನೀವು ಕಟ್ಟಿದ ಪುರಾಣಗಳು, ಶ್ಲೋಕಗಳು, ನಿಮ್ಮ ಯಾವುದೇ ಬೌದ್ಧಿಕ ಚಟುವಟಿಕೆಗಳು ನಿಮಗೇ ತಿಳಿಯದಂತೆ ಹೇಳಹೆಸರಿಲ್ಲದೆ ಮಾಯವಾಗುತ್ತವೆ. ಹೆಣ್ಣುಮಕ್ಕಳ ಕ್ರೋಧ ಅವನ್ನು ಇನ್ನು ಹುಟ್ಟದಂತೆ ಸುಟ್ಟುಹಾಕುತ್ತದೆ.

ಒಮ್ಮೆ ಅಂತರ್ಮುಖಿಯಾಗಿ. ನಿಮ್ಮೊಳಗಿನ ಮಾನವೀ ಹೆಣ್ಣನ್ನು ಗುರುತಿಸಿಕೊಳ್ಳಿ. ಹೆಣ್ಣು- ಆಗಿ. ಅದು ನಿಮ್ಮನ್ನು ಕಾಪಾಡುತ್ತದೆ. ಗಂಡಿನ ತೋಳ್ಬಲದ ಕಾಲ ಮುಗಿದು ಈಗ ಸಮಾನತೆ, ಪ್ರೀತಿ, ಸ್ನೇಹ, ಸೌಹಾರ್ದತೆ, ಬೌದ್ಧಿಕತೆ ಹೊಂದಾಣಿಕೆಯ ಕಾಲಕ್ಕೆ ದಾಟುತಿದ್ದೇವೆ. ಈಗಲೂ ನೀವು ನಿಮ್ಮ ಹಳೆಯ ಚಾಳಿ ಹಾಗೂ ನಂಬಿಕೆಯಲ್ಲೇ ಮುಳುಗಿದ್ದರೆ ನೀವೇ ಮುಳುಗಿಹೋಗುತ್ತೀರಿ. ಇತ್ತೀಚೆಗೆ ಕೇರಳದ ಒಬ್ಬ ಸಾಹಿತಿಯ ಮಾತು ಕೇಳಿದಿರಲ್ಲವೇ? ಆ ಕೆಟ್ಟ ದಾಷ್ಟ್ರ್ಯ ಆತನಿಗೆ ಎಲ್ಲಿಂದ ಬಂತು? ನನ್ನದೇ ಒಂದು ಅನುಭವ ಹೇಳುವೆ. ಒಂದು ಸೆಮಿನಾರಿನಲ್ಲಿ ನನಗೆ ಬಹಳ ಬುದ್ಧಿವಂತನೆಂದು (ಅವನ ದೌರ್ಬಲ್ಯದ ಜೊತೆಗೇ) ಎಲ್ಲರೂ ಹೇಳುತಿದ್ದ ಪ್ರಸಿದ್ಧನೊಬ್ಬನ ಭೇಟಿಯಾಯಿತು. ಟೀ ಬ್ರೇಕಿನಲ್ಲಿ ಟೀ ಕುಡಿಯುತ್ತ ನಾನು ಕುಳಿತಿದ್ದ ಕಡೆ ಅವನೂ ಬಂದು ಕುಳಿತ. ಸುಮ್ಮನೆ ಮಾತಿಗಿಳಿದೆವು. ಹೀಗೇ ಮಾತು ಸಾಗುತಿದ್ದಾಗ ಎದುರಿಂದ ಸಿಂಗಾರ ಮಾಡಿಕೊಂಡ ಮಹಿಳೆಯೊಬ್ಬಳು ದಾಟಿಹೋದಳು. ಆಕೆಯನ್ನು ನೋಡುತ್ತ ಹೇಳಿದ, "ನೋಡಿ, ನೀವೂ ಇದ್ದೀರಿ, ಆಕೆಯನ್ನು ನೋಡಿ, ಹೇಗಿದ್ದಾಳೆ! ಒಮ್ಮೆ ನೋಡಿದರೆ ಹಿಂತಿರುಗಿ ನೋಡುವಂತೆ!" (ಹೀಗೆ ಅನೇಕ ಹೆಣ್ಣುಮಕ್ಕಳಿಂದಲೇ ತಮಾಷೆಗೂ ಸತ್ಯಕ್ಕೂ ಹಲಬಾರಿ ಹೇಳಿಸಿಕೊಂಡು ಅಭ್ಯಾಸವಾಗಿರುವ ನನಗೆ ಅದು ವಿಶೇಷವೆನಿಸದೆ) ಸುಮ್ಮನೆ ನಕ್ಕೆ. ಮುಂದೆ ಆತ ಹೇಳಿದ್ದು ಏನು ಗೊತ್ತೇ? "ಹೆಂಗಸರು ಅಲಂಕಾರ ಮಾಡಿಕೊಳ್ಳುವುದು, ಗಂಡಸರನ್ನು ಸೆಳೆಯಲು, ಆಕರ್ಷಿಸಲು. ಬೇರೆ ಕಾರಣವೇ ಇಲ್ಲ." ಮೂಢನಂಬಿಕೆಯ ಕುರಿತು ಪುಟಗಟ್ಟಲೆ ಮಾತಾಡುವ ಮನುಷ್ಯನ ಮಾತೇ ಇದು! ನನಗೊಮ್ಮೆ ಆಘಾತ. ಹೋ, ಹೌದು, ಬೇಕಾದ ಹಾಗೆ ವಾದ ಮಾಡಬಹುದಿತ್ತು, ಸಿಟ್ಟಿಗೇಳಬಹುದಿತ್ತು, ಪ್ರತಿಭಟಿಸಬಹುದಿತ್ತು, ನಾನು ಏನೂ ಮಾಡದೆ ಬಂದೆನೇ ಎಂದು ನಂತರವೂ ಎಷ್ಟೋ ಬಾರಿ ಅನಿಸಿ, ನನ್ನ ಬಗ್ಗೆ ನನಗೇ ಸಿಟ್ಟು ಬಂದಿತ್ತೋ. ಆದರೆ, ವಾದಿಸಿದರೆ ವಾದ ಹೊರತು ಇನ್ನೇನೂ ಆಗುತ್ತಿರಲಿಲ್ಲ ಅಂತ ನನ್ನ ಒಳಮನಸ್ಸಿಗೆ ಆಗಲೇ ತಿಳಿದು ನನ್ನನ್ನು ಸುಮ್ಮನಾಗಿಸಿತ್ತೇ? ಯಾಕೆಂದರೆ, ಆತ ಆಗಲೇ ಆ ಕಾಯಿಲೆಗೆ ಇನ್ನು ಬಿಡುಗಡೆ ಇಲ್ಲ ಎನ್ನುವಷ್ಟು ತುತ್ತಾಗಿದ್ದ. ಅಂತಹ ಎಲ್ಲ ಗಂಡಸರಂತೆ ಆ ಲಜ್ಜೆಭಂಡ, ತನ್ನ ಒಂದು ಇಶಾರಕ್ಕೆ ಬಳಿ ಬರುವ ಎಷ್ಟು ಹೆಣ್ಣುಗಳು ಬೇಕು ಎಂದೂ ನಾಚಿಗಿಲ್ಲದೆ ಹೇಳಿಕೊಂಡ. ಇವನ ಇಶಾರಕ್ಕೆ ಬರುವರೆಂದು ಆತ ಬಯಲುಗೊಳಿಸಿದ ಕೆಲ ಹೆಣ್ಣುಗಳು ನನಗೂ ಪರಿಚಿತರೇ ಇದ್ದರು. ಅವರು ಆತನಿಗೇ ತಿರುಮಂತ್ರ ಹಾಕಿ ಹೇಗೆ ಮಂಗ ಮಾಡಿದ್ದರೆಂದು ತಿಳಿಯಲೇ ಇಲ್ಲವಲ್ಲ ಆತ!

ಇದನ್ನೂ ಓದಿ : ಶತಪಥ | ನನಗೂ ಒಂಚೂರು ಹೇಳಲಿಕ್ಕಿದೆ, ಕೇಳೀ...

ಹೆಣ್ಣುಮಕ್ಕಳು ಹೆಡ್ಡರು, ಮುಗ್ಧರು ಎನ್ನುವಿರಿ. ಎಲ್ಲಿವರೆಗೆ? ಒಂದು ಹಂತದ ವರೆಗೆ. ಅದು ಯಾವತ್ತು ನೀವೇ ಛಿದ್ರಗೊಳಿಸುವರೋ ಗಂಡು ಎಂಬುದರ ಮೇಲಿನ ಗೌರವವೂ ಛಿದ್ರಛಿದ್ರವಾಗಿ ‘ಅವರು’ ಎಂಬುದು ‘ಅದು’ ಅಂತಾಗಿ, ಅದು ತಮ್ಮ ಬೇಳೆ ಬೇಯಿಸಿಕೊಳ್ಳುವ ಸಾಧನವಾಗಿ ಬಿಡುವ ಪ್ರಕರಣಗಳು ಎಷ್ಟು ಬೇಕು? ಅರಿವು ಹುಟ್ಟಲಾರದ, ತಿಳಿಹೇಳಿದರೆ ಗ್ರಹಿಸಲಾರದ, ತಮ್ಮೊಳಗೆ ತಾವೇ ಚಿಂತಿಸಿ ಸರಿಹೋಗದ ಸ್ಥಿತಿಯೇ ನಿಮ್ಮದು? ನಿಮ್ಮಿಂದಾಗಿ ಹೆಣ್ಣುಮಗುವಿಗೆ, ಮಹಿಳೆಗೆ ಮುದುಕಿಗೂ ಬಾಹ್ಯಪ್ರಪಂಚ ಹೇಗೂ ಆಯಿತಲ್ಲ; ತಾನು ವಾಸಿಸುವ ಮನೆ, ಮನೆಯ ಯಾವ ಮೂಲೆ ಕೂಡ ಸುರಕ್ಷಿತವಲ್ಲ, ಯಾರ ಬಳಿಯೂ ಸುರಕ್ಷಿತತೆ ಇಲ್ಲ, ಯಾರನ್ನೂ ಅವರು ನಂಬುವಂತಿಲ್ಲ ಎನ್ನುವ ಇಂದಿನ ವರ್ತಮಾನ ಯಾವುದನ್ನು ಸಾರುತ್ತದೆ? ನೀವು ಜಾತಿಮತ ಇತ್ಯಾದಿ ಗೋಡೆ ದಾಟಿ ಬರುವುದು ಇಲ್ಲಿ ಮಾತ್ರ ಎಂಬುದು ಎಂತಹ ದರಿದ್ರ ವ್ಯಂಗ್ಯ! ಪರಮಾವಧಿ ಭಯದ ಸಂದರ್ಭದಲ್ಲಿ ಹೆಣ್ಣಿನ ನೆರವಿಗೆ ಬಾರದ ತಂತ್ರ ಕಂಡುಹಿಡಿಯದ ತಂತ್ರಜ್ಞಾನವೂ ಆಕೆಯನ್ನು ಕಾಪಾಡಲಾರದ ಯಾವುದೇ ಪ್ರಭುತ್ವವೂ ದೊಡ್ಡ ಲೊಳಲೊಟ್ಟೆಯೇ ಸೈ.

ಮಣಿಪುರದ ಮಹಿಳೆಯರ ಉದಾಹರಣೆ ಎದುರಿಗಿದೆ. ಎದುರು ಆ ಮಹಾಲೇಖಕಿ ಮಹಾಶ್ವೇತಾ ದೇವಿ ಬರೆದ ಕತೆ ಇದೆ. ಯಾವ ಘಟನೆಯೂ ಯಾವುದೇ ಕತೆಯೂ ಅದಷ್ಟೇ ಅಲ್ಲ, ಮುಂದಿನ ಸೂಚನೆ ನೀಡುವ ಸಂಜ್ಞೆ ಕೂಡ.

ಒಬ್ಬ ಹೆಣ್ಣಿಗೆ ಅನ್ಯಾಯವಾಯಿತೆಂದರೆ ಆಗುವ ದುಃಖ ಅವಳೊಬ್ಬಳಿಗೇ ಅಲ್ಲ, ಸ್ತ್ರೀ ಸಮುದಾಯಕ್ಕೇ. ಸಿಟ್ಟು ಭಯ ಆತಂಕವನ್ನು ಹೊರತೋರುವ ಸಾವಿರ ಜನರಿದ್ದರೆ, ಒಳಗೊಳಗೇ ನೋಯುತ್ತ ಶಾಪ ಹಾಕುವ ಮಹಿಳೆಯರು ಲಕ್ಷಾಂತರ. ಅವೆಲ್ಲ ಪರಿಣಾಮ ಹೀನ ಎನ್ನುವಿರ?

ನೀವು ನಮ್ಮೆದುರು ತೀರಾ ಸಣ್ಣವರಾದಿರಿ, ನಮ್ಮ ಬಗ್ಗೆ ಕೀಳಾಗಿ ಯೋಚಿಸುವ ಕೀಟಗಳಾದಿರಿ. ನಮ್ಮನ್ನು ಹೇಗಾದರೂ ಬಳಸಿಕೊಳ್ಳಬಹುದು ಎಂಬ ಹುಂಬರಾದಿರಿ. ಬೇರು ಸಹಿತ ಕಿತ್ತೊಗೆಯಲಾಗದಂಥ ಮೂಢನಂಬಿಕೆಯ ದುಷ್ಟ ವಾಹಕಹುಳವಾದಿರಿ. ನಾವು ಇರಬೇಕೋ, ಸಾಯಬೇಕೋ? ಹುಟ್ಟಬೇಕೋ ಹುಟ್ಟದಿರಬೇಕೋ, ಹೆಣ್ಣುಭ್ರೂಣಕ್ಕೆ ಜನ್ಮ ನೀಡಬೇಕೋ ನೀಡದೆ ಅಲ್ಲಿಯೇ ಖತಂ ಮಾಡಬೇಕೋ ಎಂಬಂಥ ಭೀಕರ ಚಿಂತೆಗಳಿಗೆ ಕಾರಣವಾಗುತ್ತಿದ್ದೀರಿ. ನಿಮ್ಮ ಆಸುಪಾಸಿನಲ್ಲೇ ಪುರುಷರಿದ್ದಾರೆ, ಚರಿತ್ರೆಯಲ್ಲಿದ್ದಾರೆ, ಪುರಾಣದಲ್ಲಿಯೂ ಇದ್ದಾರೆ, ಅವರನ್ನು ನೋಡಿಯಾದರೂ ಕಲಿತುಕೊಳ್ಳಿ. ದಯಮಾಡಿ ನಿಮ್ಮ ಮರ್ಯಾದೆ ಮಾತ್ರವಲ್ಲ ಅವರ ಮರ್ಯಾದೆಯೂ ನಿಮ್ಮ ಹೊಣೆಯೇ, ಅದನ್ನು ಉಳಿಸಿ. ಇಲ್ಲವಾದರೆ ಮುಂದೆ ನಿಮ್ಮನ್ನೇ ಅಟ್ಟಾಡಿಸುವ ಕಾಲ ದೂರವಿಲ್ಲ. ಈ ಯುದ್ಧದಲ್ಲಿ ಕ್ರಮೇಣ ಮಾನವ ಕುಲವೇ ನಾಶವಾಗುವ ಚಿತ್ರವೂ ಕೇವಲ ಕಲ್ಪನೆಯಲ್ಲ.

ಹೇಳಿ ಗಂಡಸರೇ, ನೀವು ಪುರುಷರಾಗುವುದು ಯಾವಾಗ?

...ಎಂದೆಲ್ಲ ನಾನು ಯಾರಲ್ಲಿ ಬೊಬ್ಬಿಡುತಿದ್ದೇನೆ? ಯಾವ ಕಿವಿಗಳಿಗೆ?

ಚಿತ್ರಕೃಪೆ: Wilfred Sequeira

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More