ಸಂವಾದ | ಎಚ್ಚರ, ಅಧಿಕಾರಿಗಳು ಮನಸ್ಸು ಮಾಡಿದರೆ ನಿಮ್ಮ ಭಾಷೆ ಕಾಣೆ ಆಗಬಹುದು!

ಗಣತಿಯ ಸಮಯದಲ್ಲಿ ನಾಗರಿಕರು 19,569 ಭಾಷೆಗಳ ಹೆಸರು ಹೇಳಿದ್ದರು. ಆದರೆ, ಅಂತಿಮವಾಗಿ 1,369 ಅದೃಷ್ಟವಂತ ಭಾಷೆಗಳನ್ನು 121 ‘ಗುಂಪು ಪಟ್ಟಿ’ಗಳಡಿಯಲ್ಲಿ ಗುಂಪು ಮಾಡಿ ಇಡಲಾಯಿತು. ಇವುಗಳನ್ನು ಮಾತ್ರವೇ ‘ಭಾಷೆಗಳು’ ಎಂದು ದೇಶಕ್ಕೆ ತೋರಿಸಲಾಯಿತು. ಏನಿದು ಲೆಕ್ಕಾಚಾರ?

ಕಳೆದ ಎಂಬತ್ತು ವರ್ಷಗಳಿಂದ ಭಾರತ ಸರ್ಕಾರ ಹತ್ತು ವರ್ಷಗಳಿಗೊಮ್ಮೆ ಜನಗಣತಿ ಮಾಡುತ್ತ ಬಂದಿದೆ. 1931ರ ಜನಗಣತಿಯು ನಮ್ಮ ದೇಶದ ಸಾಮಾಜಿಕ ಸಂಯೋಜನೆಯನ್ನು ಪ್ರತಿಫಲಿಸಿದ್ದರಿಂದ ಅದು ದೇಶದ ಚಾರಿತ್ರಿಕ ಜನಗಣತಿಯಾಗಿದೆ. 1941ರಲ್ಲಿ ಯುದ್ಧವು ಜನಗಣತಿ ಪ್ರಕ್ರಿಯೆಯನ್ನೇ ಹಾಳುಗೆಡವಿತು. 1951ನೇ ವರ್ಷದಲ್ಲಿ ಹೊಸ ಗಣರಾಜ್ಯವು ಬಿಡುವಿಲ್ಲದೆ ಕಾರ್ಯೋನ್ಮುಖವಾಗಿತ್ತು. 1961ರ ಜನಗಣತಿಯಲ್ಲಷ್ಟೇ ದೇಶದ ಭಾಷೆಗಳನ್ನು ಪೂರ್ಣವಾಗಿ ಗಣತಿ ಮಾಡಲಾಯಿತು. ತನ್ನಲ್ಲಿ 1,652 ಮಾತೃಭಾಷೆಗಳನ್ನು ಮಾತಾಡಲಾಗುತ್ತಿದೆ ಎಂಬುದು ಭಾರತಕ್ಕೆ ಗೊತ್ತಾಗಿದ್ದು ಈ ಜನಗಣತಿಯಿಂದಲೇ. ಆದರೆ, ಹಲವು ಕಾರಣಗಳಿಗಾಗಿ ದೇಶದಲ್ಲಿದ್ದ ಮಾತೃಭಾಷೆಗಳ ಸಂಖ್ಯೆಯನ್ನು ಕೇವಲ 109 ಎಂದು ತೋರಿಸಲಾಯಿತು. ಅಂದರೆ, 1,543 ಭಾಷೆಗಳನ್ನು ಪರಿಗಣಿಸಲೇ ಇಲ್ಲ. ಇದಕ್ಕೆ ಕಾರಣ ಏನೆಂದರೆ, 1,000ಕ್ಕಿಂತ ಕಡಿಮೆ ಜನ ಮಾತಾಡುವ ಭಾಷೆಗಳನ್ನು ಪ್ರಕಟಿಸದಿರಲು ಸರ್ಕಾರ ನಿರ್ಧರಿಸಿದ್ದು. ಅದು ನ್ಯಾಯವಾದ ತೀರ್ಮಾನವಾಗಿರಲಿಲ್ಲ. ಆದರೆ, ಅದನ್ನೇ ನಂತರದ ಜನಗಣತಿಯಲ್ಲೂ ಮಾಡುತ್ತ ಬರಲಾಯಿತು.

ಪ್ರತಿ ದಶಕದ ಮೊದಲ ವರ್ಷದಲ್ಲಿ ಭಾಷೆಗಳ ಎಣಿಕೆ ನಡೆಯುತ್ತದೆ. ಸಂಗ್ರಹಿಸಿದ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಕಟಿಸುವುದು ಸುಮಾರು ಆರೇಳು ವರ್ಷಗಳ ನಂತರ. ಇದಕ್ಕೆ ಕಾರಣ ಏನೆಂದರೆ, ಆರ್ಥಿಕ ಅಥವಾ ಇತರ ವೈಜ್ಞಾನಿಕ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗೆ ಹೋಲಿಸಿದರೆ, ಭಾಷೆಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಪರಿಷ್ಕರಿಸುವುದಕ್ಕೆ ಬಹಳಷ್ಟು ಹೆಚ್ಚಿನ ಸಮಯ ಬೇಕಾಗುತ್ತದೆ. 2011ರ ಜನಗಣತಿಯ ಭಾಷಾ ಮಾಹಿತಿಯನ್ನು ಇತ್ತೀಚೆಗಷ್ಟೇ ಪ್ರಕಟಿಸಲಾಗಿದೆ. ಇಡೀ ಪ್ರಕ್ರಿಯೆಯ ಅಗಾಧತೆ ಅಪೂರ್ವವಾದುದು. ಇದು ದೇಶದ 120 ಕೋಟಿ ಜನರಾಡುವ ದೊಡ್ಡ ಸಂಖ್ಯೆಯ ಭಾಷೆಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ. ಆದ್ದರಿಂದ ಜನಗಣತಿ ಇಲಾಖೆಯ ಭಾಷಾ ವಿಭಾಗವು ಶ್ಲಾಘನಾರ್ಹವಾಗಿದೆ. ಆದರೂ, ಪ್ರಕಟಗೊಂಡ ಮಾಹಿತಿಯು ಹೊಸದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ.

ಗಣತಿಯ ಸಮಯದಲ್ಲಿ, ನಾಗರಿಕರು 19,569 ಭಾಷೆಗಳ ಹೆಸರುಗಳನ್ನು ಹೇಳಿದ್ದರು. ತಾಂತ್ರಿಕ ಪರಿಭಾಷೆಯಲ್ಲಿ ಇದನ್ನು ‘ಕಚ್ಚಾ ಮಾಹಿತಿ’ ಎಂದು ಕರೆಯಲಾಗುತ್ತದೆ. ಹಿಂದೆ ಲಭ್ಯವಿದ್ದಂತಹ ಭಾಷಿಕ ಮತ್ತು ಸಾಮಾಜಶಾಸ್ತ್ರೀಯ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು 18,200 ಭಾಷೆಗಳ ಹೆಸರುಗಳು ಇಲ್ಲಿಯವರೆಗೆ ಗೊತ್ತಿರುವ ಮಾಹಿತಿಗೆ ‘ತಾರ್ಕಿಕವಾಗಿ’ ಹೊಂದಿಕೆಯಾಗಲಿಲ್ಲ ಎಂದು ತೀರ್ಮಾನಿಸಿದರು. ಹಾಗಾಗಿ, 1,369 ಹೆಸರುಗಳನ್ನು (ಇವುಗಳನ್ನು ತಾಂತ್ರಿಕವಾಗಿ ‘ಪಟ್ಟಿಗಳು’ ಎಂದು ಕರೆಯಲಾಗುತ್ತದೆ) ‘ಭಾಷೆಯ ಹೆಸರುಗಳು’ ಎಂದು ಆಯ್ಕೆ ಮಾಡಲಾಯಿತು. ಇವು ಪ್ರತಿಷ್ಠಾಪಿತ ಭಾಷಿಕ ವರ್ಗೀಕರಣದ ವ್ಯಾಪ್ತಿಯೊಳಗೆ ಇದ್ದುದ್ದರಿಂದ ಇವುಗಳನ್ನಷ್ಟೇ ಆಯ್ಕೆ ಮಾಡಲಾಯಿತು. ‘ಕಚ್ಚಾ ಮಾಹಿತಿ’ಯು ಸುಮಾರು 60 ಲಕ್ಷ ಜನರನ್ನು ಹೊರಗಿಟ್ಟಿತು. ವರ್ಗೀಕರಣ ಪದ್ಧತಿಯಿಂದಾಗಿ ಅವರ ಭಾಷಿಕ ಪೌರತ್ವಕ್ಕೆ ನಿರಾಳವಾಗಿ ಕೊಡಲಿಯೇಟು ಕೊಟ್ಟು ಕತ್ತರಿಸಲಾಯಿತು.

ನಂತರ, ಪರಿಶೀಲನೆಯಲ್ಲಿ ಹೆಕ್ಕಿ ತೆಗೆದ 1,369 ‘ಮಾತೃಭಾಷೆ’ಗಳಲ್ಲದೆ, ಹೆಚ್ಚುವರಿಯಾಗಿ 1,474 ಇತರ ಮಾತೃಭಾಷೆಗಳಿದ್ದವು. ಅವುಗಳನ್ನು ‘ಇತರ’ ಎಂಬ ಪಟ್ಟಿಯಡಿಯಲ್ಲಿ ಇಡಲಾಯಿತು. ಗಣತಿಯಲ್ಲಿ ಈ ಇತರ ಭಾಷೆಗಳನ್ನಾಡುವವರಿಗೆ ಯಾವುದೇ ಮನ್ನಣೆ ಇರಲಿಲ್ಲ. ಅವು ಅವರ ಭಾಷೆಗಳಷ್ಟೆ. ಅವರು ಅವುಗಳನ್ನು ಮಾತಾಡುತ್ತಾರೆ. ಆದರೆ, ಅವರು ಏನನ್ನು ಅಥವಾ ಯಾವ ಭಾಷೆಯನ್ನು ಮಾತಾಡುತ್ತಾರೆ ಎಂಬುದನ್ನು ಗುರುತಿಸುವುದಕ್ಕೆ ವರ್ಗೀಕರಣ ಪದ್ಧತಿಗೆ ಸಾಧ್ಯವಾಗಿಲ್ಲ. ‘ಇತರ’ ಎಂಬ ಹಣೆಪಟ್ಟಿ ಹಚ್ಚುವ ಮೂಲಕ ಈ ಭಾಷೆಗಳನ್ನು ಬಡಿದು ಮೂಲೆಗೆ ಕೂರಿಸಲಾಯಿತಷ್ಟೆ!

ಇದನ್ನೂ ಓದಿ : ಸಂವಾದ | 190 ಬುಡಕಟ್ಟುಗಳ ಜನ ಇಷ್ಟವಿಲ್ಲದಿದ್ದರೂ ಅಲೆಮಾರಿ ಆಗಿರುವುದೇಕೆ?

1,369 ಅದೃಷ್ಟವಂತ ಭಾಷೆಗಳನ್ನು 121 ‘ಗುಂಪು ಪಟ್ಟಿ’ಗಳಡಿಯಲ್ಲಿ ಗುಂಪು ಮಾಡಿ ಇಡಲಾಯಿತು. ಇವುಗಳನ್ನು ‘ಭಾಷೆಗಳು’ ಎಂದು ದೇಶಕ್ಕೆ ತೋರಿಸಲಾಯಿತು. ಇವುಗಳಲ್ಲಿ ಸಂವಿಧಾನದ 8ನೇ ಅನುಸೂಚಿಯಲ್ಲಿ ಸೇರ್ಪಡೆಗೊಂಡಿರುವ 22 ಭಾಷೆಗಳೂ ಸೇರಿವೆ. ಆದ್ದರಿಂದಲೇ ಅವುಗಳನ್ನು ‘ಅನುಸೂಚಿತ ಭಾಷೆಗಳು’ ಎಂದು ಕರೆಯಲಾಗುತ್ತದೆ. ಉಳಿದ 99 ಭಾಷೆಗಳನ್ನು ‘ಅನುಸೂಚಿಯೇತರ ಭಾಷೆಗಳು’ ಎಂದು ಕರೆಯಲಾಗುತ್ತದೆ. ಈ ಭಾಷೆಗಳ ಕಡೆ ಯಾರಾದರೂ ಕಣ್ಣಾಡಿಸಿದರೆ ಬಹಳಷ್ಟು ಭಾಷೆಗಳನ್ನು ಒತ್ತಾಯದಿಂದ ಗುಂಪುಗೊಳಿಸಿರುವುದು ಕಂಡುಬರುತ್ತದೆ. ಉದಾಹರಣೆಗೆ, ‘ಹಿಂದಿ’ ಎಂಬ ಶೀರ್ಷಿಕೆಯಡಿಯಲ್ಲಿ ಸುಮಾರು 50 ಭಾಷೆಗಳಿವೆ. ಐದು ಕೋಟಿಗಿಂತ ಹೆಚ್ಚಿನ ಜನ ಮಾತಾಡುವ, ತನ್ನದೇ ಆದ ಸಿನಿಮಾ, ನಾಟಕ, ಸಾಹಿತ್ಯ, ಶಬ್ದಭಂಡಾರ ಮತ್ತು ಶೈಲಿಯನ್ನು ಹೊಂದಿರುವ ಭೋಜ್ಪುರಿ ಭಾಷೆಯನ್ನು ‘ಹಿಂದಿ’ ಎಂದು ಕರೆಯಲಾಗಿದೆ. ರಾಜಸ್ತಾನದ ಸುಮಾರು ಮೂರು ಕೋಟಿಯಷ್ಟು ಜನ ತಮ್ಮದೇ ಆದ ಸ್ವತಂತ್ರ ಭಾಷೆಯನ್ನು ಮಾತಾಡುತ್ತಿದ್ದರೂ ಅವರನ್ನು ಹಿಂದಿ ಮಾತೃಭಾಷೆ ಮಾತಾಡುವ ಜನ ಎಂದು ತೋರಿಸಲಾಗಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳ ಪೊವಾರಿ/ ಪಾವ್ರಿ ಬುಡಕಟ್ಟು ಜನರನ್ನೂ ಹಿಂದಿಗೆ ಕಟ್ಟಿಹಾಕಲಾಗಿದೆ. ಉತ್ತರಾಖಂಡದ ಕುಮೌನಿ ಭಾಷೆಗೂ ಇದೇ ಗತಿ ಬಂದಿದ್ದು, ಅದರ ಮೇಲೂ ಹಿಂದಿಯ ನೊಗ ಹೊರಿಸಲಾಗಿದೆ. 50 ಕೋಟಿಗಿಂತಲೂ ಹೆಚ್ಚಿನ ಜನ ಹಿಂದಿಯನ್ನು ತಮ್ಮ ಮಾತೃಭಾಷೆಯಾಗಿ ಮಾತಾಡುತ್ತಾರೆ ಎಂದು ಗಣತಿಯಲ್ಲಿ ತೋರಿಸಲಾಗಿದೆ. ಆದರೆ, ವಾಸ್ತವ ಹಾಗಿಲ್ಲ. ಗಣತಿಯ ಸಮಯದಲ್ಲಿ ‘ಎರಡನೇ ಭಾಷೆ’ ಬಗ್ಗೆ ಕೇಳಲಾದ ಪ್ರಶ್ನೆಗೆ ಬಂದ ಉತ್ತರಗಳನ್ನು ಲೆಕ್ಕ ಹಾಕಿ ಸಂಸ್ಕೃತಕ್ಕೆ ಹೆಚ್ಚಿನ ತೂಕ ನೀಡಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಎರಡನೇ ಭಾಷೆಯ ದೃಷ್ಟಿಕೋನದಲ್ಲಿ ಇಂಗ್ಲಿಷ್ ಭಾಷೆಯನ್ನು ನೋಡೇ ಇಲ್ಲ. ಅದನ್ನು ‘ಮಾತೃಭಾಷೆ’ ವಿಭಾಗದಡಿಯಲ್ಲಿ ಮಾತ್ರ ಲೆಕ್ಕ ಹಾಕಲಾಗಿದ್ದರಿಂದ ಅದರ ಸಂಖ್ಯೆ ಗಣನೀಯವಾಗಿ ಕುಸಿದಿದೆ.

ಗಣತಿಯು ಯಾವುದೇ ಪೂರ್ವಗ್ರಹವಿಲ್ಲದ ದೇಶದ ಭಾಷಿಕ ಸಂಯೋಜನೆಯನ್ನು ಪ್ರತಿಫಲಿಸಬೇಕು. ಯಾವುದೇ ಸಾರ್ವಜನಿಕ ಚರ್ಚೆಯಿಲ್ಲದೆ, ಅವೈಜ್ಞಾನಿಕ ವರ್ಗೀಕರಣ ನಿಯಮಗಳನ್ನು ಅನುಸರಿಸುವ ಮೂಲಕ ಗಣತಿಯಲ್ಲಿ ದೊಡ್ಡ ಸಂಖ್ಯೆಯ ನಾಗರಿಕರ ಭಾಷಿಕ ಅಸ್ತಿತ್ವವನ್ನೇ ನಿರಾಕರಿಸಲಾಗಿದೆ. ಈ ವಾಕ್‍ಸ್ಥಂಬ ರೋಗ ಅಥವಾ ಗಣರಾಜ್ಯದಲ್ಲಿ ನಮ್ಮ ಮೇಲೆ ಹೇರಲಾಗಿರುವ ಈ ಮೌನವನ್ನು ಪ್ರಶ್ನಿಸುವುದಕ್ಕಿದು ಸಕಾಲ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More