ಹಗೇವು | ದಿವ್ಯಾ ಎಂಬ ಹುಡುಗಿಯ ಕಲಿಕೆಯ ಕನಸು ಮತ್ತು ಮಲೆನಾಡಿನ ಮಕ್ಕಳ ದುಃಸ್ವಪ್ನ

ಒಂದು ಐಷಾರಾಮಿ ರಸ್ತೆಗೆ, ಒಂದು ಫ್ಲೈ ಓವರಿಗೆ, ಒಂದು ಮೋಜಿನ ಉದ್ಯಾನಕ್ಕೆ ನೂರಾರು ಕೋಟಿ ವ್ಯಯ ಮಾಡುವ ನಮ್ಮ ಆಡಳಿತಗಳಿಗೆ, ಕುಗ್ರಾಮಗಳ ಶಿಕ್ಷಣ, ಸಾರಿಗೆಯಂಥ ಕನಿಷ್ಠ ಸೌಲಭ್ಯಕ್ಕೆ ಅಗತ್ಯ ಹಣ ಕೊಡುವ ಮನಸ್ಸಿರುವುದಿಲ್ಲ! ಇದು ಅರಿವಾಗಬೇಕೆಂದರೆ ದುರಂತಗಳೇ ನಡೆಯಬೇಕೇ?

ತೀರ್ಥಹಳ್ಳಿ- ಆಗುಂಬೆ ರಸ್ತೆಯಲ್ಲಿ ಸಿಗುವ ನಾಲೂರಿನಿಂದ ಒಳಗೆ ಸುಮಾರು ಎಂಟು ಕಿಮೀ ದೂರ ಕಗ್ಗಾಡಿನ ನಡುವಿನ ಕಿರಿದಾದ ದುರ್ಗಮ ದಾರಿಯಲ್ಲಿ ಹಾದು, ಹಳ್ಳ-ಕೊಳ್ಳಗಳನ್ನು ದಾಟಿ, ಮುಗಿಲೆತ್ತರಕ್ಕೆ ನಿಂತ ದೊಡ್ಡ ಗುಡ್ಡದ ಬುಡದಲ್ಲಿರುವ ಆಕೆಯ ಪುಟ್ಟ ಮನೆಯ ಮುಂದೆ ನಿಂತಾಗ ಸಂಜೆ ಆರಾಗಿತ್ತು. ನಾವು ಬರುತ್ತಿರುವುದನ್ನು ತಿಳಿದ ಕೂಡಲೇ ಆಕೆ ಮನೆಯಿಂದ ತೋಟದ ಕಡೆ ಹೋಗಿ ನಮಗೆ ಕಾಣದಂತೆ ಮರೆಯಾಗಿದ್ದಳು. ಆಕೆಯ ಅಮ್ಮನ ಬಳಿ ನಾವು ಬಂದ ಉದ್ದೇಶವನ್ನು ವಿವರಿಸಿದ ಬಳಿಕ, ಜೋರಾಗಿ ಕೂಗಿ ಕರೆದಾದ ಮೇಲೆ ಆಕೆ ಅಂಜುತ್ತಲೇ ನಮ್ಮ ಬಳಿ ಬಂದಳು.

ಆಕೆ ದಿವ್ಯಾ. ಬಾಳೆಕೊಡ್ಲು ಎಂಬ ಕಾಡಿನೊಳಗಿನ ಕುಗ್ರಾಮದ ಆ ಹುಡುಗಿ, ಆಗುಂಬೆ ಸಮೀಪದ ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ವರ್ಷ ಹತ್ತನೇ ತರಗತಿ ಓದುತ್ತಿದ್ದಳು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಆಕೆ ಪಾಸಾಗಿರಲಿಲ್ಲ. ಅದೇ ಕಾರಣಕ್ಕೆ ನಾವು ಬರುತ್ತಿರುವ ವಿಷಯ ತಿಳಿಯುತ್ತಲೇ ಆಕೆ ಮನೆಯಿಂದ ಗದ್ದೆಯಂಚಿಗೆ ಹೋಗಿದ್ದಳು. ಫೇಲ್ ಆದ ದುಃಖ ಮತ್ತು ಅವಮಾನ ಆಕೆಗೆ ಕಾಡುತ್ತಿತ್ತು. ನಮ್ಮೊಂದಿಗೆ ಅವರ ಮಾಸ್ತರು ಕೂಡ ಇದ್ದಿದ್ದರಿಂದ, ಹೇಗೋ ಆ ಸುಳಿವು ತಿಳಿದು ಆಕೆ ಮಾಸ್ತರ ಮುಂದೆ ಅವಮಾನ ಆಗಬಹುದೆಂದೋ, ಮಾಸ್ತರು ಗದರಿಸಬಹುದೆಂದೋ ನಮ್ಮ ಕಣ್ಣಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಳು.

ಆದರೆ, ಆಕೆ ಹಾಗೆ ಹೆದರಿ ಹೋದದ್ದು, ಎಲ್ಲ ಸೌಕರ್ಯ, ಸೌಲಭ್ಯವಿದ್ದೂ ಆಕೆ ಸರಿಯಾಗಿ ಓದದೆ, ಸೋಮಾರಿತನ ಮಾಡಿದ್ದ ಸ್ವಯಂಕೃತ ಅಪರಾಧದ ಕಾರಣಕ್ಕಲ್ಲ. ಬದಲಾಗಿ, ತನ್ನ ಸುತ್ತಲಿನವರ ನಿರೀಕ್ಷೆಗೆ ತಕ್ಕಂತೆ ತಾನು ಪಾಸಾಗಲಿಲ್ಲ ಎಂಬ ಅಳುಕು ಆಕೆಯದ್ದಾಗಿತ್ತು. ಅದರಲ್ಲೂ ಶಾಲೆಯ ಶಿಕ್ಷಕರ ಒತ್ತಾಸೆ, ಬೆಂಬಲ ಇದ್ದರೂ, ಪರಿಸ್ಥಿತಿ ಈಗ ಆಕೆಯನ್ನು ತಲೆತಗ್ಗಿಸಿ ನಿಲ್ಲುವಂತೆ ಮಾಡಿತ್ತು. ಆ ಕಾರಣಕ್ಕೆ ನಮ್ಮೆದುರು ಬಂದು ನಿಲ್ಲುತ್ತಿದ್ದಂತೆ ಆಕೆಯ ದುಃಖ ಉಮ್ಮಳಿಸಿ ಬಂತು. ಎಳೆಯ ಕಂಗಳಲ್ಲಿ ಕಣ್ಣೀರು ಉಕ್ಕಿ ಹರಿಯಿತು.

ಹೌದು, ನಾಲ್ಕೇ ನಾಲ್ಕು ಪುಟ್ಟ ಗುಡಿಸಲ ಮನೆಗಳಿರುವ ಆ ಕಾನು ಮೂಲೆಯ ಬಾಳೆಕೊಡ್ಲುವಿನಿಂದ ಒಂದು ಬೆಂಕಿ ಪೊಟ್ಟಣ ಬೇಕೆಂದರೂ ೮ ಕಿಮೀ ಕಾಡುದಾರಿಯ ಹಳ್ಳಕೊಳ್ಳ ಹಾದು ನಾಲೂರಿಗೇ ಬರಬೇಕು. ಹಾಗಿರುವಾಗ, ಆಕೆ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಹತ್ತು ವರ್ಷಗಳ ಕಾಲ ನಿತ್ಯ ಶಾಲೆಗೆ ಅದೇ ಕಾಡು ದಾರಿಯಲ್ಲಿ ಓಡಾಡಿದ್ದಾಳೆ. ನಿತ್ಯ ಬೆಳಗ್ಗೆ ೭.೩೦ಕ್ಕೆ ಮನೆ ಬಿಟ್ಟು, ಎರಡು ಹಳ್ಳಗಳನ್ನು ನಡೆದುಕೊಂಡೇ ದಾಟಿ, ಹತ್ತಾರು ಚಿಕ್ಕಪುಟ್ಟ ತೊರೆಗಳನ್ನು ಹಾದು, ಎದೆ ನಡುಗಿಸುವ ದಟ್ಟ ಕಾಡಿನ ನಡುವೆ ಆಕೆ ಏಕಾಂಗಿಯಾಗಿ ದಾರಿ ಸವೆಸಿದ್ದಾಳೆ. ಪ್ರಾಥಮಿಕ ಶಾಲೆಯವರೆಗೆ ಆಕೆಯ ಅಪ್ಪ ನಿತ್ಯ ಶಾಲೆಗೆ ಬಿಡುತ್ತಿದ್ದರು, ಸಂಜೆ ಮತ್ತೆ ಬಂದು ಕರೆದೊಯ್ಯುತ್ತಿದ್ದರು. ಬಳಿಕ ಒಬ್ಬಳೇ ಬರುವುದನ್ನು ಅಭ್ಯಾಸ ಮಾಡಿಕೊಂಡಿದ್ದಾಳೆ. ಹೈಸ್ಕೂಲಿಗೆ ಬಂದ ಬಳಿಕ ನಾಲೂರಿಗೆ ಬಂದು ಬಸ್ ಹಿಡಿದು ಅಲ್ಲಿಂದ ಮತ್ತೆ ಮೂರು ಕಿಮೀ ದೂರದ ಗುಡ್ಡೇಕೇರಿಗೆ ಹೋಗುತ್ತಿದ್ದಳು. ಬಸ್ಸಿಗೆ ದುಡ್ಡಿಲ್ಲದ ದಿನ ಆ ಮೂರು ಕಿಮೀ ದೂರವನ್ನೂ ನಡೆದುಕೊಂಡೇ ಸಾಗುತ್ತಿದ್ದುದೂ ಉಂಟು.

ಆ ಕಾಡಿನಲ್ಲೇ ಮೂರು ಅಪಾಯಕಾರಿ ಒಂಟಿ ಸಲಗಗಳಿವೆ. ಕಾಡುಕೋಣಗಳಂತೂ ಅಲ್ಲಿನ ನಿತ್ಯದ ಅತಿಥಿಗಳು. ಇನ್ನು ಕಾಡುಹಂದಿ, ಹುಲಿ-ಚಿರತೆ ಮತ್ತು ಕಾಳಿಂಗ ಸರ್ಪ ಸೇರಿದಂತೆ ಅಪಾಯಕಾರಿ ಹಾವುಗಳ ನೆಲೆ ಕೂಡ ಆಕೆ ಹಾದುಬರುತ್ತಿದ್ದ ಅದೇ ಆಗುಂಬೆಯ ಕಾಡು. ಮಳೆಗಾಲದಲ್ಲಂತೂ ರಕ್ತ ಹೀರುವ ಜಿಗಣೆಗಳ ಉಪಟಳ. ಅಷ್ಟು ಅಪಾಯ, ಆತಂಕಗಳನ್ನು ದಾಟಿ ಶಾಲೆಗೆ ಹೋಗುವುದು ಆಕೆಯ ಒಂದು ದಿನದ ಸಾಹಸವಾಗಿರಲಿಲ್ಲ. ವರ್ಷವಿಡೀ ಆಕೆಯ ಪಾಲಿಗೆ ಅದು ನಿತ್ಯದ ಅನಿವಾರ್ಯ. ಆ ಎಳೆವೆಯಲ್ಲೇ ಅಷ್ಟು ಸಂಕಷ್ಟಗಳನ್ನು ಮೀರಿಯೂ ಆಕೆಯೊಳಗಿನ ಕಲಿಕೆಯ ಅದಮ್ಯ ಬಯಕೆ ಬತ್ತಲಿಲ್ಲ. ಹಾಗಾಗಿಯೇ ಅವಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎದೆಗುಂದದೆ ಎದುರಿಸಿದ್ದಳು. ಆದರೆ, ಇಂಗ್ಲಿಷ್‌ ವಿಷಯದಲ್ಲಿ ಕೇವಲ ಆರು ಅಂಕಗಳ ಅಂತರದಲ್ಲಿ ಅದೃಷ್ಟ ಕೈಕೊಟ್ಟಿತ್ತು.

ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅತ್ಯಂತ ಹಿಂದುಳಿದ ಹಸಲರು ಎಂಬ ಗುಡ್ಡಗಾಡು ಬುಡಕಟ್ಟು ಸಮುದಾಯಕ್ಕೆ ಸೇರಿದ ಆಕೆಯ ತಲೆಮಾರುಗಳ ಶಿಷ್ಟಜ್ಞಾನದ ಹಸಿವು ಆಕೆಯೊಳಗಿನ ಕಲಿಕೆಯ ಛಲದ ಮೂಲವಿರಬಹುದು. ಆದರೆ, ಪರೀಕ್ಷೆಯ ಆ ಸೋಲು ಆಕೆಯನ್ನು ಧೃತಿಗೆಡಿಸಿತ್ತು. ಇಡೀ ಆ ನಾಲ್ಕು ಕುಟುಂಬಗಳಲ್ಲಿ ಎಸ್‌ಎಸ್‌ಎಲ್‌ವರೆಗೆ ಹೋದ ಏಕೈಕ ವ್ಯಕ್ತಿ ಆಕೆಯೇ. ಹಾಗಾಗಿ ಆಕೆ ಈಗಲೂ ತಾನು ಎಸ್‌ಎಸ್‌ಎಲ್‌ಸಿ ಪಾಸು ಮಾಡಿಕೊಂಡು ಮುಂದೆ ಓದಬೇಕು. ತನ್ನ ಜನರಂತೆ ತಾನೂ ಶಿಕ್ಷಣದಿಂದ ವಂಚಿತಳಾಗಬಾರದು. ಜೀವನದಲ್ಲಿ ತಾನೂ ಮುಂದೆ ಬಂದು, ತನ್ನವರನ್ನೂ ಮುಂದೆ ತರಬೇಕು ಎಂಬ ಕನಸು ಹೊತ್ತಿದ್ದಾಳೆ.

ಮಲೆನಾಡಿನ ಇಂತಹ ಕಾಡಿನ ಮಕ್ಕಳ ಶಿಕ್ಷಣದ ಹಸಿವೆಗೆ ಕಂಟಕಗಳು ನೂರಾರು. ಇಂತಹದ್ದೇ ಹಳ್ಳದ ಕಾಲುಸಂಕವನ್ನು ದಾಟುವಾಗ ಕಾಲುಜಾರಿ ಆಶಿಕಾ ಎಂಬ ಅದೇ ಗುಡ್ಡೇಕೇರಿ ಹೈಸ್ಕೂಲಿನ ಬಾಲಕಿ ನೀರು ಪಾಲಾಗಿದ್ದಾಳೆ. ಹತ್ತು ವರ್ಷಗಳ ಹಿಂದೆ ಸಾಗರ ತಾಲೂಕಿನ ತಲಕಳಲೆ ಜಲಾಶಯದ ಹಿನ್ನೀರಿನ ಇಂದ್ರೋಡಿಮನೆ ಎಂಬ ಗ್ರಾಮದ ಪೂರ್ಣಿಮಾ ಎಂಬ ನಾಲ್ಕನೇ ತರಗತಿಯ ಬಾಲಕಿ ಇಂತಹದ್ದೇ ಮಳೆಗಾಲದ ಒಂದು ದಿನ ಶಾಲೆಗೆ ಹೋದವಳು ಶರಾವತಿ ಕಣಿವೆಯ ಹಳ್ಳದ ಪಾಲಾಗಿದ್ದಳು. ಸರ್ಕಾರ ಮಕ್ಕಳ ಕೊರತೆ ನೆಪ ತೆಗೆದು ಆಕೆಯ ಮನೆ ಸಮೀಪದ ಶಾಲೆಯನ್ನು ಮುಚ್ಚಿದಾಗ ಕಲಿಕೆಯ ಛಲ ಬಿಡದ ಆ ಪುಟ್ಟ ಹಸುಗೂಸು, ಮನೆಯಿಂದ ನಾಲ್ಕು ಕಿಮೀ ದೂರದ ಇಂದ್ರೋಡಿಮನೆ ಶಾಲೆಗೆ ನಿತ್ಯ ನಡೆದುಕೊಂಡೇ ಹೋಗಿಬರುತ್ತಿದ್ದಳು. ಆದರೆ, ಆಕೆಯ ಆ ಕಲಿಕೆಯ ಬಯಕೆಯನ್ನು ಮಳೆಗಾಲದ ಮತ್ತೇರಿದ ಹಳ್ಳವೊಂದು ಬಲಿ ತೆಗೆದುಕೊಂಡುಬಿಟ್ಟಿತು!

ಈ ಬಾರಿ ಕೂಡ ಹೀಗೆ, ಮಕ್ಕಳ ಕೊರತೆಯ ಕಾರಣಕ್ಕೆ ಶಾಲೆಗಳನ್ನು ಮುಚ್ಚುವ ಪ್ರಸ್ತಾಪ ಸರ್ಕಾರದ ಮುಂದಿತ್ತು. ಜನರ ಆಕ್ರೋಶದಿಂದಾಗಿ ಕೊನೇ ಗಳಿಗೆಯನ್ನು ಸರ್ಕಾರ ಹಿಂದೆ ಸರಿದಿದೆ. ಆದರೆ, ಮಲೆನಾಡಿನ ಕುಗ್ರಾಮಗಳಲ್ಲಿ ಈಗಲೂ ಶಾಲೆಗಳಿಗೆ ಮಕ್ಕಳು ನಿತ್ಯ ಓಡಾಡುವುದೆಂದರೆ ಅದು ಸಾವು-ಬದುಕಿನ ಪ್ರಶ್ನೆ. ಅದರಲ್ಲೂ, ಮಳೆಗಾಲದಲ್ಲಂತೂ ಶಾಲೆಗೆ ಹೋದ ಮಕ್ಕಳು ಸಂಜೆ ಮನೆಗೆ ಮರಳುತ್ತಾರೆ ಎಂಬ ಖಾತ್ರಿ ಕೂಡ ಇರದ ಆತಂಕ. ಶಾಲೆ ಮುಚ್ಚುವ ಮುನ್ನ ನಿರ್ಧಾರ ಕೈಗೊಳ್ಳುವ ಮೂಲಕ ಎಸಿ ಕಚೇರಿಗಳಲ್ಲಿ ಕೂತವರು ಇಂತಹ ಕಟುವಾಸ್ತವದತ್ತ ಒಮ್ಮೆ ಕಣ್ಣು ಹಾಯಿಸಬೇಕಿದೆ.

ಕನಿಷ್ಠ ಹೈಸ್ಕೂಲುಗಳಿರುವ ಕಡೆಯಾದರೂ, ಮಲೆನಾಡಿನ ದಟ್ಟ ಕಾಡಿನ ಒಳಗಿನ ಊರುಗಳ ಮಕ್ಕಳಿಗೆ ಅನುಕೂಲವಾಗುವಂತೆ ಹಾಸ್ಟೆಲುಗಳನ್ನು ನಿರ್ಮಾಣ ಮಾಡಬೇಕಿದೆ. ವರ್ಷವಿಡೀ ಅಲ್ಲದಿದ್ದರೂ, ಮಳೆಗಾಲದ ನಾಲ್ಕು ತಿಂಗಳ ಮಟ್ಟಿಗಾದರೂ ತಾತ್ಕಾಲಿಕ ವಸತಿ ವ್ಯವಸ್ಥೆ ಆದಲ್ಲಿ ಮಕ್ಕಳ ಜೀವದೊಂದಿಗೆ, ಅವರ ಶಿಕ್ಷಣದ ಬಯಕೆಯನ್ನೂ ಉಳಿಸುವುದು ಸಾಧ್ಯ. ಆದರೆ, ಒಂದು ಸೇತುವೆಗೆ, ಒಂದು ಫ್ಲೈ ಓವರಿಗೆ, ಒಂದು ಮೋಜಿನ ಉದ್ಯಾನಕ್ಕೆ ನೂರಾರು ಕೋಟಿ ವ್ಯಯ ಮಾಡುವ ನಮ್ಮ ಆಡಳಿತಗಳಿಗೆ, ಇಂತಹ ನತದೃಷ್ಟರ ಶಿಕ್ಷಣಕ್ಕೆ, ಸಾರಿಗೆ ಸೌಲಭ್ಯಕ್ಕೆ ಅಗತ್ಯ ಹಣ ಮತ್ತು ಗಮನ ಹರಿಸುವ ಮನಸ್ಸಿರುವುದಿಲ್ಲ!

ನತದೃಷ್ಟ ಬಾಲಕಿ ದಿವ್ಯ ಮತ್ತು ಆಕೆಯಂತಹ ಸಾವಿರಾರು ಕಾಡಿನ ಮಕ್ಕಳ ಕಣ್ಣಲ್ಲಿ ಜಾರಿದ ಹನಿಗಳಿಗೆ ರಾಜಧಾನಿಯಲ್ಲಿ ಕೂತು ಅಧಿಕಾರದ ಚುಕ್ಕಾಣಿ ಹಿಡಿದವರ ಕಣ್ಣು ತೆರೆಸುವ ಶಕ್ತಿ ಇಲ್ಲ. ಸ್ಥಳೀಯ ಜನನಾಯಕರಿಗೆ ಸಮಸ್ಯೆಗಳನ್ನು ಅರಿಯುವ ಮನಸ್ಸು ಮತ್ತು ಪುರುಸೊತ್ತೇ ಇರುವುದಿಲ್ಲ. ಇದ್ದರೂ, ಅದನ್ನು ಪರಿಣಾಮಕಾರಿಯಾಗಿ ಅಧಿಕಾರದ ಮತ್ತೊಂದು ತುದಿಗೆ ತಲುಪಿಸುವ ಇಚ್ಛಾಶಕ್ತಿಯ ಕೊರತೆ. ಮಲೆನಾಡಿನ ಕಗ್ಗಾಡಿನ ನಡುವಿನ ಜನವಸತಿ ಪ್ರದೇಶಗಳಲ್ಲಿ ಎಲ್ಲ ಸೌಕರ್ಯಗಳನ್ನು ತಲುಪಿಸುವುದು ಸರಳವಲ್ಲ ಮತ್ತು ಅರಣ್ಯ ಕಾಯ್ದೆಯೂ ಸೇರಿದಂತೆ ಅದಕ್ಕೆ ನೂರಾರು ಅಡ್ಡಿಗಳಿವೆ ಎಂಬ ವಾಸ್ತವದ ಅರಿವಿನ ಹೊರತಾಗಿಯೂ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ವಸತಿ ನಿಲಯ, ಕನಿಷ್ಠ ಶಾಲಾ ವೇಳೆಯಲ್ಲಿ ಬಸ್‌ ಸಂಚಾರದಂಥ ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.

ಹೀಗೆಲ್ಲ ಯೋಚಿಸುತ್ತ ದಿವ್ಯಾಗೆ, “ಈ ಬಾರಿ ಪೂರಕ ಪರೀಕ್ಷೆಯಲ್ಲಿ ಪಾಸಾಗ್ತೀಯಾ, ಚಿಂತೆ ಮಾಡಬೇಡ. ಕಾಲೇಜಿಗೆ ಸೇರಿ, ಚೆನ್ನಾಗಿ ಓದಿ ನಿನ್ನವರ ಬದುಕಿನಲ್ಲಿ ಬದಲಾವಣೆ ತರಬೇಕು,” ಎಂದು ಹೇಳಿ ವಾಪಸಾದೆವು. ಬರುವಾಗ ದಾರಿಯುದ್ದಕ್ಕೂ, ಇಂತಹದ್ದೇ ಕುಗ್ರಾಮದ ನನ್ನ ಬಾಲ್ಯ ಮತ್ತು ಓದಿನ ಸಾಹಸ ಕಣ್ಣಮುಂದೆ ಹಾದುಹೋಯಿತು. ನನ್ನೂರಿನಲ್ಲಿ ಇವತ್ತಿಗೂ ಶಾಲೆಯೇ ಇಲ್ಲ. ಮೂರು ಕಿಮೀ ದೂರದ ಕಾಡದಾರಿಯ ಮೂಲಕ ಶಾಲೆಗೆ ಕಳಿಸಲಾರದೆ ನನ್ನಪ್ಪ, ನನ್ನನ್ನು ಮನೆಯ ಹತ್ತಿರವೇ ಶಾಲೆ ಇದ್ದ ಅಜ್ಜಿ ಮನೆಯಲ್ಲಿ ಬಿಟ್ಟಿದ್ದರು. ಆದರೆ, ಅಲ್ಲಿಯೂ ನಾಲ್ಕನೇ ತರಗತಿಯ ಬಳಿಕ ಐದನೇ ತರಗತಿಗೆ ನಿತ್ಯ ಮೂರು ಕಿಮೀ ದೂರದ ಶಾಲೆಗೆ ಹೋಗಿಬರಬೇಕಿತ್ತು. ದೊಡ್ಡ ಹಳ್ಳವನ್ನು ಅಡ್ಡಲಾಗಿ ಹಾಕಿದ್ದ ಸಣ್ಣ ನೀಲಗಿರಿ ಮರದ ತುಂಡನ್ನು ಬಳಸಿಯೇ ದಾಟಬೇಕಿತ್ತು.

ಇದನ್ನೂ ಓದಿ : ಮಲೆನಾಡಿನ ಕುಗ್ರಾಮಗಳಲ್ಲಿ ಜೀವಬಲಿಗೆ ಕಾದಿವೆ ಅಸುರಕ್ಷಿತ ಕಾಲುಸಂಕಗಳು

ಆ ನಂತರ ಹೈಸ್ಕೂಲಿಗೆ ನಿತ್ಯ ಆರು ಕಿಮೀ ದೂರವನ್ನು (ಎರಡೂ ಕಡೆಯ ಪಯಣ ೧೨ ಕಿಮೀ!) ನಡೆದುಕೊಂಡೇ ಹೋಗಬೇಕಿತ್ತು; ಅದೂ ಕಾಡಿನ ನಡುವೆ ಏಕಾಂಗಿಯಾಗಿ! ಮೊಳಕಾಲವರೆಗೆ ಹೂತುಹೋಗುತ್ತಿದ್ದ ಕೆಸರಿನ ರಸ್ತೆಯಲ್ಲಿ ಎದ್ದುಬಿದ್ದು ಶಾಲೆಗೆ ಹೋಗುವುದೇ ಸಾಹಸ. ಮಳೆಗಾಲದಲ್ಲಂತೂ ಬೀಳದೆ, ಯೂನಿಫಾರಂ ಕೆಸರು ಮಾಡಿಕೊಳ್ಳದೆ ಶಾಲೆಗೆ ಪ್ರಾರ್ಥನೆಗೆ ಮುಂಚೆ ತಲುಪಿದರೆ ಅದೇ ದೊಡ್ಡ ಸಾಧನೆ. ಶಾಲೆಯಿಂದ ಸಂಜೆ ಮನೆಗೆ ಹೋಗುವ ಹೊತ್ತಿಗೆ ಕೆಲವು ದಿನಗಳಲ್ಲಿ ಕತ್ತಲೆ ಆಗಿರುತ್ತಿತ್ತು. ಆ ಕಾಡಿನ ದಾರಿಯಲ್ಲಿ ಕಿಮೀಗಟ್ಟಲೆ ದಾರಿಯಲ್ಲಿ ಯಾರೂ ದಾರಿಹೋಕರು ಸಿಗುತ್ತಿರಲಿಲ್ಲ. ಕಾಡುಪ್ರಾಣಿಗಳ ಭಯ, ದೊಡ್ಡವರು ಭಿತ್ತಿದ್ದ ದೆವ್ವ ಭೂತಗಳ ಭೀತಿ… ಜೀವ ಕೈಯಲ್ಲಿ ಹಿಡಿದುಕೊಂಡೇ ಇಡೀ ದಾರಿ ಸಾಗಿಸಬೇಕಿತ್ತು!

ಆ ಬಳಿಕ, ಈ ಇಪ್ಪತ್ತೈದು ವರ್ಷಗಳಲ್ಲಿ ದೇಶದ ಚರಿತ್ರೆಯಲ್ಲಿ ದೊಡ್ಡ ಬದಲಾವಣೆ ಆಗಿಹೋಗಿವೆ. ದೊಡ್ಡ ಅಭಿವೃದ್ಧಿ ಘಟಿಸಿಬಿಟ್ಟಿದೆ. ಪ್ರಪಂಚದ ರಾಜಕೀಯ ಮತ್ತು ಅಭಿವೃದ್ಧಿಯ ನಕಾಶೆಯಲ್ಲಿ ಭಾರತ ಹೊಸ ಚಹರೆಯನ್ನೇ ಪಡೆದುಕೊಂಡಿದೆ. ಭಾರತ ಪ್ರಕಾಶಿಸಿದ್ದು, ಆಮ್‌ ಆದ್ಮಿ ಬದುಕು ಬದಲಾದದ್ದು, ಮತ್ತೀಗ ಅಚ್ಛೇ ದಿನ... ಎಲ್ಲವೂ ಬಂದುಹೋಗಿವೆ. ಆದರೆ, ಮಲೆನಾಡಿನ ಕುಗ್ರಾಮಗಳ ಚಿಣ್ಣರ ಕಣ್ಣಿನ ಕಲಿಕೆಯ ಕನಸನ್ನು ಕಾಡುವ ದುಃಸ್ವಪ್ನಗಳು ಮಾತ್ರ ಬದಲಾಗಲೇ ಇಲ್ಲ. ಈಗಲೂ ಶಿಕ್ಷಣ ಎಂಬುದು ಅವರ ಪಾಲಿಗೆ ಸಾಲು-ಸಾಲು ಸವಾಲುಗಳ ದಾಟಿ ಗುರಿ ಮುಟ್ಟಬೇಕಾದ ಅಗ್ನಿಪರೀಕ್ಷೆಯೇ!

ಬದಲಾವಣೆ ಎಲ್ಲಿಗೆ ಬಂತು? ಯಾರಿಗೆ ಬಂತು?

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More