ಇಲಾಜು | ವೈದ್ಯರಿಗೆ ಸ್ಪರ್ಧೆಯೊಡ್ಡಲಿವೆ ಕೃತಕ ಬುದ್ಧಿಮತ್ತೆಯ ಸಾಧನಗಳು

ಚಿಕಿತ್ಸೆ ಬಗ್ಗೆ ನಿರ್ಣಯಿಸುವಾಗ ರೋಗಿಯ ಆರ್ಥಿಕ-ಸಾಮಾಜಿಕ-ಕೌಟುಂಬಿಕ ಸ್ಥಿತಿಯನ್ನೂ ಸಹಾನುಭೂತಿಯಿಂದ ಪರಿಗಣಿಸುವ ವೈದ್ಯರನ್ನು ಕೃತಕ ಬುದ್ಧಿಮತ್ತೆಯ ಸಾಧನಗಳು ಮೀರಿಸುವುದು ಅಸಾಧ್ಯ. ಆದರೆ, ಮಾನವೀಯ ಕಳಕಳಿ ಇಲ್ಲದ ವೈದ್ಯರಿಗೆ ಇದು ಗಂಭೀರ ಎಚ್ಚರಿಕೆಯೇ ಸರಿ

ಅತ್ಯಾಧುನಿಕ ತಂತ್ರಜ್ಞಾನಕ್ಕೆ ಹೆಬ್ಬಾಗಿಲನ್ನೇ ತೆರೆದಿಟ್ಟಿರುವ ವೈದ್ಯಕೀಯ ಕ್ಷೇತ್ರದೊಳಕ್ಕೆ ನುಗ್ಗುವುದಕ್ಕೆ ಕೃತಕ ಬುದ್ದಿಮತ್ತೆ ಮತ್ತು ಯಂತ್ರ ಕಲಿಕೆಯ ತಂತ್ರಗಳು ಸಜ್ಜಾಗುತ್ತಿವೆ. ಕ್ಯಾಮರಾದ ಮೂಲಕ ಮಾತ್ರೆಯ ಸೇವನೆಯ ಮೇಲೆ ನಿಗಾ ವಹಿಸಿ, ಸಂಬಂಧಿಕರಿಗೆ, ವೈದ್ಯರಿಗೆ, ಅಥವಾ ಔಷಧ ಕಂಪೆನಿಗಳವರಿಗೆ ತಿಳಿಸಬಲ್ಲ ಫೋನ್‌; ತನ್ನೊಡೆಯನ ಚಲನವಲನಗಳನ್ನೂ, ಮಾತುಕತೆಯನ್ನೂ ಗ್ರಹಿಸಿಕೊಳ್ಳುತ್ತಾ, ಅವು ಗಣನೀಯವಾಗಿ ಬದಲಾಗುತ್ತಿದ್ದಂತೆ ಮಾನಸಿಕ ಆರೋಗ್ಯ ತಜ್ಞರನ್ನು ಎಚ್ಚರಿಸುವ ಫೋನ್ ಮುಂತಾದವು ರೂಪುಗೊಳ್ಳುತ್ತಿವೆ!

ವೈದ್ಯಕೀಯ ಕ್ಷೇತ್ರಕ್ಕೆ ಅತ್ಯಾಧುನಿಕ ತಂತ್ರಜ್ಞಾನವು ಹೊಸದೇನಲ್ಲ. ಕ್ಷ-ಕಿರಣ, ಎಂಆರ್‌ಐ ಮುಂತಾದ ರೋಗ ಪತ್ತೆಯ ಸಾಧನಗಳಿಂದ ಹಿಡಿದು, ತಳಿ ತಂತ್ರಜ್ಞಾನ, ಹೊಚ್ಚ ಹೊಸ ಔಷಧಗಳ ಸಂಶೋಧನೆ, ಹೃದಯ,ಮಿದುಳು, ಮೂತ್ರಪಿಂಡ, ಯಕೃತ್ತು ಇತ್ಯಾದಿಗಳ ಕಾಯಿಲೆಗಳಿಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳು ಮತ್ತು ಶಸ್ತ್ರಚಿಕಿತ್ಸೆಯಿಲ್ಲದೆಯೇ ತೂರುನಳಿಕೆಗಳ ಮೂಲಕ ನೀಡಲಾಗುವ ಚಿಕಿತ್ಸಾ ಕ್ರಮಗಳು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿವೆ. ಗಣಕ ತಂತ್ರಜ್ಞಾನವು ಆರಂಭಗೊಂಡಂದಿನಿಂದ ವೈದ್ಯಕೀಯ ವಲಯದಲ್ಲೂ ಬಳಕೆಗೆ ಬಂದಿದೆ, ರೋಗ ಪತ್ತೆ, ಚಿಕಿತ್ಸೆ, ಸಂಶೋಧನೆ, ದತ್ತಾಂಶಗಳ ವಿಶ್ಲೇಷಣೆ, ವೈದ್ಯಕೀಯ ದಾಖಲೆಗಳ ನಿರ್ವಹಣೆ ಇತ್ಯಾದಿಗಳಲ್ಲಿ ಗಣಕೀಯ ಸಾಧನಗಳು ವ್ಯಾಪಕವಾಗಿ ಬಳಕೆಯಲ್ಲಿವೆ.

ಸಂಕೀರ್ಣ ಕೆಲಸಗಳನ್ನು ಸರಳಗೊಳಿಸುವುದಕ್ಕೆ ಗಣಕ ಯಂತ್ರಗಳ ಕ್ರಮಾವಳಿಗಳನ್ನು ಅಭಿವೃದ್ಧಿಪಡಿಸುವ ಕೆಲಸಗಳು 60-70ರ ದಶಕದಲ್ಲೇ ಆರಂಭಗೊಂಡು, ಗಣಕ ಯಂತ್ರಗಳ ಸಂಕೀರ್ಣತೆ ಮತ್ತು ವೇಗಗಳು ಹೆಚ್ಚಿದಂತೆ ಬಿರುಸಾಗುತ್ತಾ ಸಾಗಿದವು. ವೈದ್ಯರ ಕಚೇರಿಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ವೈದ್ಯಕೀಯ ದಾಖಲೆಗಳು, ಶುಲ್ಕ ಪಾವತಿಯ ಲೆಕ್ಕಾಚಾರ ಇತ್ಯಾದಿ ದೈನಂದಿನ ಕೆಲಸಗಳ ನಿರ್ವಹಣೆಯಲ್ಲಿ ಗಣಕ ವ್ಯವಸ್ಥೆಯ ಬಳಕೆಯು ಈಗ ಅನಿವಾರ್ಯವೆನಿಸುವಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ. ಯಂತ್ರ ಕಲಿಕೆ ಹಾಗೂ ಕೃತಕ ಬುದ್ಧಿಮತ್ತೆಯಂತಹ ಸಂಕೀರ್ಣ ತಂತ್ರಜ್ಞಾನವು ಇತರ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟಿಗೆ ದಾಳಿಯಿಡತೊಡಗಿದ್ದರೂ,ಅತ್ಯಂತ ಸಂಕೀರ್ಣವೂ, ಭಾವನಾತ್ಮಕವೂ ಆಗಿರುವ ರೋಗ ಪತ್ತೆ ಮತ್ತು ಚಿಕಿತ್ಸೆಗಳ ಕ್ಷೇತ್ರವನ್ನು ಹೊಕ್ಕುವುದಕ್ಕೆ ಅದು ಅತಿ ಜಾಗರೂಕತೆಯಿಂದಲೇ ಅಡಿಯಿಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದರ ವೇಗವು ಹೆಚ್ಚಿ ಹೊಸ ಭರವಸೆಗಳನ್ನು ಹುಟ್ಟಿಸಿದ್ದರೂ ಕೂಡ, ಸಾಕಷ್ಟು ಸಂಶಯಗಳಿಗೂ, ಆತಂಕಗಳಿಗೂ ಕಾರಣವಾಗಿದೆ.

ವಿಶ್ವದಾದ್ಯಂತ ಕೋಟಿಗಟ್ಟಲೆ ರೋಗಿಗಳ ವೈಯಕ್ತಿಕ ವಿಷಯಗಳು, ಕಾಯಿಲೆಗಳು ಮತ್ತು ಚಿಕಿತ್ಸೆಯ ವಿವರಗಳು ಈಗಾಗಲೇ ಗಣಕ ಯಂತ್ರಗಳೊಳಗೆ ದಾಖಲಾಗಿರುವುದರಿಂದ, ಈ ಗೋಫ್ಯ ಮಾಹಿತಿಯು ತಂತ್ರಜ್ಞರಿಗೆ ಲಭ್ಯವಾದರೆ ಕೃತಕ ಬುದ್ಧಿಮತ್ತೆಯ ಕ್ರಮಾವಳಿಗಳನ್ನು ಬೆಳೆಸುವುದಕ್ಕೆ ಅತ್ಯಂತ ಅನುಕೂಲವಾಗುತ್ತದೆ. ಆ ಮಾಹಿತಿಯನ್ನು ಪಡೆದು ವೈದ್ಯಕೀಯ ಕ್ಷೇತ್ರಕ್ಕೆ ಕೃತಕ ಬುದ್ದಿಮತ್ತೆಯನ್ನು ಬೆಳೆಸುವ ಕಾರ್ಯವು ಚುರುಕಾಗುತ್ತಿದ್ದು, ಗೂಗಲ್‌ನ ಡೀಪ್ ಮೈಂಡ್, ಐಬಿಎಂನ ವಾಟ್ಸನ್, ಮತ್ತು ಸ್ಟಾನ್‌ಫರ್ಡ್, ಆಕ್ಸ್‌ಫರ್ಡ್, ಹಾವರ್ಡ್, ವಾಂಡರ್‌ಬಿಲ್ಟ್ ಮುಂತಾದ ವಿಶ್ವವಿದ್ಯಾಲಯಗಳು ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಕಣಕ್ಕಿಳಿದಿವೆ.

ಅಂತರಜಾಲವನ್ನು ತಡಕುವ ಯೋಜನೆಯಾಗಿ ಆರಂಭಗೊಂಡ ಗೂಗಲ್, ಜಾಲದೊಳಗಿರುವ ಮಾಹಿತಿಯ ಜೊತೆಗೆ ಕೋಟಿಗಟ್ಟಲೆ ಮನುಷ್ಯರ ವೈಯಕ್ತಿಕ ವಿವರಗಳು, ಪ್ರಾಣಿ-ಪಕ್ಷಿಗಳ ಚಿತ್ರಗಳು ಮತ್ತು ಭೂಗೋಲದ ಮೂಲೆ-ಮೂಲೆಗಳ ಪಟಗಳನ್ನು ತನ್ನ ಕಣಜದೊಳಕ್ಕೆ ತುಂಬಿಸಿಕೊಂಡು ಮಾಹಿತಿ ದೈತ್ಯನಾಗಿ ಬೆಳೆದಿದೆ. ಗೂಗಲ್ ತಂತ್ರಜ್ಞರು ರೂಪಿಸಿರುವ ವಿಶೇಷ ಕ್ರಮಾವಳಿಗಳು ಈ ಅಗಾಧ ಮಾಹಿತಿಯನ್ನು ಜಾಲಾಡಿ ವಿಶ್ಲೇಷಿಸುತ್ತವೆ, ಯಾರು ಏನು ಮಾಡುತ್ತಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ, ಯಾರ ಪಟ ಹೇಗಿದೆ, ಯಾವ ದಾರಿಯಲ್ಲಿ ಏನಿದೆ ಎಂಬುದನ್ನೆಲ್ಲ ಗೂಗಲ್‌ಗೆ ತಿಳಿಸುತ್ತವೆ. ಈ ಯಂತ್ರಕಲಿಕೆಯ ವಿಧಾನಗಳನ್ನು ಗೂಗಲ್‌ನ ಡೀಪ್ ಮೈಂಡ್ ಯೋಜನೆಯಡಿಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೂ ವಿಸ್ತರಿಸಲಾಗುತ್ತಿದೆ. ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆ, ಪ್ರತಿಷ್ಠಿತ ಮೂರ್‌ಫೀಲ್ಡ್ಸ್ ಕಣ್ಣು ಆಸ್ಪತ್ರೆ, ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಮುಂತಾದವು ತಮ್ಮಲ್ಲಿರುವ ಲಕ್ಷಗಟ್ಟಲೆ ರೋಗಿಗಳ ಮಾಹಿತಿಯನ್ನು ಗೂಗಲ್‌ಗೆ ಒದಗಿಸಿ, ಯಂತ್ರಕಲಿಕೆಯ ತಂತ್ರಾಂಶಗಳನ್ನು ರೂಪಿಸುವಲ್ಲಿ ಜೊತೆಗೂಡಿವೆ. ರೋಗಿಗಳ ದಾಖಲೆಗಳ ತಡಕಾಟವನ್ನು ಸುಲಭಗೊಳಿಸುವುದು, ಅಕ್ಷಿಪಟಲದ ಚಿತ್ರಗಳಲ್ಲಿ ಕಾಯಿಲೆಗಳನ್ನು ಗುರುತಿಸುವುದು, ಸ್ತನದ ಚಿತ್ರಗಳಲ್ಲಿ (ಮಾಮೊಗ್ರಾಂ) ಕ್ಯಾನ್ಸರ್ ಗುರುತಿಸುವುದು, ಇತ್ಯಾದಿಗಳಿಗೆ ಕೃತಕ ಬುದ್ಧಿಮತ್ತೆಯನ್ನು ಬಳಸುವ ಪ್ರಯತ್ನಗಳು ನಡೆದಿವೆ. ಈ ನಡುವೆ, ಗೂಗಲ್ ಸೃಷ್ಟಿಸಿದ ಕೃತಕ ಬುದ್ಧಿಮತ್ತೆಯ ತಂತ್ರಾಂಶವೊಂದು ತೀವ್ರ ನಿಗಾ ಘಟಕದಲ್ಲಿ ದಾಖಲಾದವರು 24 ಗಂಟೆಗಳೊಳಗೆ ಸಾವನ್ನಪ್ಪುವ ಸಾಧ್ಯತೆಗಳನ್ನು ಶೇ.95 ಪ್ರಕರಣಗಳಲ್ಲಿ ಸರಿಯಾಗಿ ಅಂದಾಜಿಸುವ ಮೂಲಕ ಸುದ್ದಿ ಮಾಡಿದೆ.

ಐಬಿಎಂ ವಾಟ್ಸನ್‌ನ ಕೃತಕ ಬುದ್ದಿಮತ್ತೆಯು ತನ್ನೊಳಗಿರುವ ಮಾಹಿತಿಯನ್ನು ತಡಕಾಡಿ, ವಿಶ್ಲೇಷಿಸಿ, ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ನೀಡುವಂಥದ್ದಾಗಿದೆ, ಟಿವಿ ವಾಹಿನಿಗಳಲ್ಲಿ ಬಿತ್ತರವಾಗುವ ಜನಪ್ರಿಯ ಪ್ರಶ್ನೋತ್ತರ ಕಾರ್ಯಕ್ರಮಗಳಲ್ಲಿ ಈ ವಾಟ್ಸನ್ ಗೆದ್ದಿರುವುದೂ ಇದೆ. ರೋಗಿಗಳ ವಿವರಗಳು, ವೈದ್ಯರ ಚಿಕಿತ್ಸಾ ನಿರ್ಣಯಗಳು, ಚಿಕಿತ್ಸಾ ಮಾನದಂಡಗಳು, ಸಂಶೋಧನಾ ವರದಿಗಳು ಇತ್ಯಾದಿಗಳನ್ನೆಲ್ಲ ತುಂಬಿಸಿ, ರೋಗಪತ್ತೆ ಹಾಗೂ ಚಿಕಿತ್ಸೆಗೆ ನೆರವಾಗಲೆಂದು ವೈದ್ಯಕೀಯ ವಾಟ್ಸನ್ ರೂಪುಗೊಂಡಿದೆ. ಅಮೆರಿಕಾದ ಪ್ರತಿಷ್ಠಿತ ಕ್ಯಾನ್ಸರ್ ಸಂಸ್ಥೆಗಳಾದ ಎಂಡಿ ಆಂಡರ್‌ಸನ್ ಕೇಂದ್ರ, ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕೇಂದ್ರ, ಹಾಗೂ ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಾಟ್ಸನ್‌ನ ನೆರವು ಪಡೆಯುವ ಪ್ರಯತ್ನಗಳು ನಡೆದಿವೆ. ಆದರೆ, ವಾಟ್ಸನ್ ನೀಡಿದ ಸಲಹೆಗಳು ಕೆಲವೊಮ್ಮೆ ತಪ್ಪಾಗಿದ್ದುದರಿಂದ ವೈದ್ಯರ ವಿಶ್ವಾಸವನ್ನು ಗಳಿಸುವಲ್ಲಿ ಇನ್ನೂ ಸಫಲವಾಗಿಲ್ಲ.

ರೋಗಿಗಳ ವೈದ್ಯಕೀಯ ದಾಖಲೆಗಳನ್ನು ವಿಶ್ಲೇಷಿಸುವುದು, ಅವುಗಳಲ್ಲಿ ನುಸುಳಿರಬಹುದಾದ ತಪ್ಪುಗಳನ್ನು ಗುರುತಿಸುವುದು, ಅಪರೂಪದ ರೋಗಗಳನ್ನು ಹುಡುಕುವುದು, ರೋಗಿಗೆ ಮುಂಬರಬಹುದಾದ ಅಪಾಯಗಳನ್ನೂ,ಪದೇ ಪದೇ ದಾಖಲಾಗಬೇಕಾಗುವ ಸಾಧ್ಯತೆಗಳನ್ನೂ ಲೆಕ್ಕ ಹಾಕುವುದು ಇತ್ಯಾದಿಗಳಿಗೆ ಕೃತಕ ಬುದ್ಧಿಮತ್ತೆಯ ತಂತ್ರಾಂಶಗಳು ಈಗಾಗಲೇ ಬಳಕೆಗೆ ಬಂದಿವೆ. ವಿಮಾ ಕಂಪೆನಿಗಳಿಗೆ ಸಾಕಷ್ಟು ಹಣ ಉಳಿಸಲು ಅವು ನೆರವಾಗುತ್ತಿವೆ ಎಂದೂ ಹೇಳಲಾಗಿದೆ. ಎದೆಯ ಕ್ಷಕಿರಣ ಚಿತ್ರಗಳಲ್ಲಿ ಕ್ಷಯ ರೋಗವನ್ನು ಗುರುತಿಸುವುದು, ಹೃದಯದ ಸ್ಕಾನ್‌ಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸುವುದು, ಚರ್ಮದ ಚಿತ್ರಗಳಲ್ಲಿ ಕ್ಯಾನ್ಸರ್ ಗುರುತಿಸುವುದು,ರೋಗಗ್ರಸ್ತ ಅಂಗಾಂಶದ (ಬಯಾಪ್ಸಿ) ಸೂಕ್ಷ್ಮ ಪರೀಕ್ಷೆಯಲ್ಲಿ ಕ್ಯಾನ್ಸರ್‌ ಮುಂತಾದ ರೋಗಗಳನ್ನು ಗುರುತಿಸುವುದು ಇತ್ಯಾದಿಗಳಿಗೂ ಕೃತಕ ಬುದ್ಧಿಮತ್ತೆಯ ತಂತ್ರಗಳು ರೂಪುಗೊಳ್ಳುತ್ತಿವೆ. ರೋಗಪತ್ತೆಯನ್ನು ಸುಲಭವೂ,ನಿಖರವೂ ಆಗಿಸುವುದರ ಜೊತೆಗೆ, ತಜ್ಞರು ದೊರೆಯದ ಸನ್ನಿವೇಶಗಳಲ್ಲಿ ವಿಶೇಷವಾಗಿ ನೆರವಾಗಬಲ್ಲ ಭರವಸೆಯನ್ನು ಇವು ಮೂಡಿಸಿವೆ. ಸಂಕೀರ್ಣ ಶಸ್ತ್ರಕ್ರಿಯೆಗಳನ್ನು ನಡೆಸುವುದಕ್ಕೆ ಮತ್ತು ದೇಹದೊಳಗಿನ ಅಂಗಗಳನ್ನು ಪರೀಕ್ಷಿಸುವುದಕ್ಕೆ (ಎಂಡಾಸ್ಕಪಿ) ನೆರವಾಗಬಲ್ಲ ಕೃತಕ ಬುದ್ಧಿಮತ್ತೆಯ ಸಾಧನಗಳೂ ಸಜ್ಜಾಗುತ್ತಿವೆ.

ಇದನ್ನೂ ಓದಿ : ಇಲಾಜು | ವೈಜ್ಞಾನಿಕ ಮಾರ್ಗದ ಬದಲು ಅನ್ಯಾಯದ ಹಾದಿ ಹಿಡಿದ ವೈದ್ಯಕೀಯ ಸಂಸ್ಥೆಗಳು

ಆದರೆ, ಸದ್ಯಕ್ಕೆ ಇವೆಲ್ಲವೂ ಪ್ರಾಯೋಗಿಕ ಹಂತದಲ್ಲಷ್ಟೇ ಇದ್ದು, ಅವುಗಳ ಪ್ರಯೋಜನ ಹಾಗೂ ಸುರಕ್ಷತೆಗಳ ಬಗ್ಗೆ ವಿಶ್ವಾಸಾರ್ಹವಾದ ಅಧ್ಯಯನಗಳು ಇನ್ನಷ್ಟೇ ಆಗಬೇಕಾಗಿದೆ. ಜೊತೆಗೆ, ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆಯ ತಂತ್ರಜ್ಞಾನದ ಬಳಕೆಯ ಬಗ್ಗೆ ಹಲವು ಆತಂಕಗಳೂ, ಆಕ್ಷೇಪಗಳೂ ವ್ಯಕ್ತವಾಗಿವೆ. ರೋಗಿಗಳ ಒಪ್ಪಿಗೆಯಿಲ್ಲದೆ ಅವರ ಮಾಹಿತಿಯೆಲ್ಲವನ್ನೂ ಗೂಗಲ್‌ನಂತಹ ಕಂಪನಿಗಳಿಗೆ ಒಪ್ಪಿಸಿರುವುದನ್ನು ಪ್ರಶ್ನಿಸಲಾಗಿದೆ. ಹೃದಯ ಗತಿ, ರಕ್ತದೊತ್ತಡ, ತೂಕ, ನಿತ್ಯ ವ್ಯಾಯಾಮ, ರಕ್ತದ ಗ್ಲೂಕೋಸ್ ಪ್ರಮಾಣ ಇತ್ಯಾದಿ ವೈಯಕ್ತಿಕ ವಿವರಗಳು ಕೈಯೊಳಗಿನ ಫೋನ್‌ಗಳು ಹಾಗೂ ಧರಿಸುವ ಇತರ ಸಾಧನಗಳ ಮೂಲಕ ಕ್ಷಣಕ್ಷಣಕ್ಕೂ ವಿವಿಧ ಕಂಪನಿಗಳಿಗೆ ತಲುಪುತ್ತಿರುವುದರಿಂದ ಅವುಗಳ ಬಳಕೆಯ ಬಗ್ಗೆಯೂ ಸಂಶಯಗಳೆದ್ದಿವೆ.

ರೋಗಿಗೆ ಅಗತ್ಯವಿರುವ ಪರೀಕ್ಷೆಗಳು ಮತ್ತು ಚಿಕಿತ್ಸೆಯ ಬಗ್ಗೆ ನಿರ್ಣಯಿಸುವಾಗ ನುರಿತ ವೈದ್ಯರು ತಮ್ಮ ಜ್ಞಾನ, ಕೌಶಲ, ಅನುಭವಗಳ ಜೊತೆಗೆ, ರೋಗಿಯ ಆರ್ಥಿಕ-ಸಾಮಾಜಿಕ-ಕೌಟುಂಬಿಕ ಸ್ಥಿತಿಗತಿಗಳೆಲ್ಲವನ್ನೂ ಸಹಾನುಭೂತಿಯಿಂದ ಪರಿಗಣಿಸುತ್ತಾರೆ. ಆದ್ದರಿಂದ ಅತ್ಯುತ್ತಮವಾಗಿ ತರಬೇತಾಗಿರುವ, ಮನುಷ್ಯರ ಕಷ್ಟಗಳನ್ನೆಲ್ಲ ಅರಿತಿರುವ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ವೈದ್ಯರನ್ನು ಮೀರಿಸುವುದಕ್ಕೆ ಯಂತ್ರಗಳ ಕೃತಕ ಬುದ್ಧಿಮತ್ತೆಗೆ ಎಂದಿಗೂ ಸಾಧ್ಯವಾಗದು. ಆದರೆ ಮಾನವೀಯ ಕಳಕಳಿಯಿಲ್ಲದ, ಜ್ಞಾನ-ಕೌಶಲಗಳೂ ಸರಿಯಿಲ್ಲದ, ರೋಗಿಯ ಅಗತ್ಯಕ್ಕಿಂತಲೂ ತನ್ನ ಸ್ವಂತ ಅಗತ್ಯಗಳಿಗಾಗಿ ಪರೀಕ್ಷೆ-ಚಿಕಿತ್ಸೆಗಳನ್ನು ಬರೆಯುವ ವೈದ್ಯರಿಗೆ, ಸಾಕ್ಷ್ಯಾಧಾರಿತವಾಗಿ ಚಿಕಿತ್ಸೆಯನ್ನು ಸೂಚಿಸಬಲ್ಲ ಕೃತಕ ಬುದ್ಧಿಮತ್ತೆಯ ಸಾಧನಗಳು ತೀವ್ರ ಸ್ಪರ್ಧೆಯೊಡ್ಡಲಿರುವುದು ನಿಶ್ಚಿತ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More