ಈ ಕಾಲ | ಧರ್ಮಶಾಸ್ತ್ರದ ಕಡೆಗೆ ವಾಲುವುದು ಸೇಂಟ್ ಸ್ಟೀಫನ್ಸ್‌ ಕಾಲೇಜಿನ ಪಥನದ ಹಾದಿ

ಫಿಲಾಸಫಿ ಎಂದರೆ ವಾದ, ಸಂವಾದ, ಪರಾಮರ್ಶೆ, ವಾಗ್ವಾದ. ಥಿಯೋಲಜಿ ಎಂಬುದು ಇದೇ ಅಂತಿಮ ಎಂಬ ಸಿದ್ಧಜ್ಞಾನವನ್ನೂ, ಪೂರ್ವಗ್ರಹದ ಮೌಢ್ಯವನ್ನೂ ಒಳಗೊಂಡದ್ದು. ಸ್ಟೀಫನ್ಸ್‌ ಕಾಲೇಜನ್ನು ಮುನ್ನಡೆಸುತ್ತಿರುವ ಮಂದಿ ಚಿಂತಕರಿಗಿಂತ ತತ್ವಕ್ಕೆ ಕಟ್ಟುಬಿದ್ದವರನ್ನೇ ಅಪ್ಪಿಕೊಂಡದ್ದು ದುರಂತ

ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನ ಪ್ರಧಾನ ಕಟ್ಟಡದ ಮುಂದಿನ ವಿಶಾಲ ಹುಲ್ಲುಹಾಸಿಗೆ ಆಂಡ್ರ್ಯೂಸ್ ಕೋರ್ಟ್ ಎನ್ನುತ್ತಾರೆ. ಭಾರತ ಮತ್ತು ಭಾರತೀಯರ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದ ಬ್ರಿಟಿಷ್ ವ್ಯಕ್ತಿಯೊಬ್ಬರ ಹೆಸರನ್ನು ಆ ಹುಲ್ಲುಹಾಸಿನ ಮೈದಾನಕ್ಕೆ ಇಡಲಾಗಿದೆ. ಚಾರ್ಲ್ಸ್ ಫ್ರೀರ್ ಆಂಡ್ರ್ಯೂಸ್ ಈ ದೇಶಕ್ಕೆ ಕಾಲಿಟ್ಟದ್ದು ೧೯೦೪ರಲ್ಲಿ, ಮಿಷನರಿ ಶಿಕ್ಷಕರಾಗಿ. ಉಳಿದ ಯುರೋಪಿಯನ್ನರಂತೆ ಅವರು, ಈ ನೆಲದ ಜನರಿಂದ ಅಂತರ ಕಾಯ್ದುಕೊಂಡು, ತಮ್ಮ ಸುತ್ತ ಕೋಟೆ ಕಟ್ಟಿಕೊಂಡು ಬದುಕಲಿಲ್ಲ. ಈ ದೇಶಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ಅವರು ಸ್ನೇಹ ಸಂಪಾದಿಸಿದ್ದು ಮುಸ್ಲಿಂ ವಿದ್ವಾಂಸ ಝಕಾವುಲ್ಲಾ ಮತ್ತು ಆರ್ಯ ಸಮಾಜದ ಸ್ವಾಮಿ ಶ್ರದ್ಧಾನಂದ ಅವರದ್ದು. ಆ ಬಳಿಕ ಅವರು, ಇನ್ನಿಬ್ಬರು ಭಾರತೀಯರ ಆಪ್ತರಾದರು. ಆ ಇಬ್ಬರು; ರವೀಂದ್ರನಾಥ ಠಾಕೂರ್ ಮತ್ತು ಮೋಹನ್ ದಾಸ್ ಕರಮಚಂದ ಗಾಂಧಿ!

ಬಳಿಕ ಸೇಂಟ್‌ ಸ್ಟೀಫನ್ಸ್ ಕಾಲೇಜಿನ ಅಂದಿನ ಬ್ರಿಟಿಷ್ ಪ್ರಿನ್ಸಿಪಾಲರು ನಿವೃತ್ತರಾದಾಗ, ಅವರ ಸ್ಥಾನಕ್ಕೆ ಆಂಡ್ರ್ಯೂಸ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಅವರು, ಆ ಅವಕಾಶವನ್ನು ನಯವಾಗಿ ನಿರಾಕರಿಸಿ, ಆ ಸ್ಥಾನಕ್ಕೆ ಯಾರಾದರೂ ಅರ್ಹ ಭಾರತೀಯರನ್ನೇ ನೇಮಿಸುವಂತೆ ಸೂಚಿಸಿದ್ದರು. ಸದಾ ಜನಾಂಗ, ಧರ್ಮ ಮತ್ತು ವರ್ಗದ ನಡುವಿನ ಕಂದರವನ್ನು ಮೀರಿ ಬರೆದ ಮತ್ತು ಬರೆದಂತೆ ಬದುಕಿದ ಮಹಾನುಭಾವ ಅವರು. ಬ್ರಿಟಿಷ್ ಸಾಮ್ರಾಜ್ಯದಲ್ಲಿನ ಜೀತದಾಳು ಪದ್ಧತಿಯನ್ನು ನಿಷೇಧಿಸುವಂತೆ ಆಂದೋಲನ ಕೈಗೊಂಡಿದ್ದ ಅವರು, ಆಫ್ರಿಕಾ, ಫಿಜಿ ಮತ್ತು ಕರೇಬಿಯನ್ ದೇಶಗಳಲ್ಲಿ ಸುತ್ತಾಡಿ ಆ ಬಗ್ಗೆ ಜಾಗೃತಿ ಮೂಡಿಸಿದ್ದರು. ಅಪಾರ ಬದ್ಧತೆಯ ಮತ್ತು ಅಷ್ಟೇ ಜೀವನೋತ್ಸಾಹದ ಆಂಡ್ರ್ಯೂಸ್‌ ಅವರ ಆ ಗುಣಗಳು ಇತ್ತೀಚೆಗೆ ಪ್ರಕಟವಾಗಿರುವ ಅವರ ಪತ್ರಗಳ ಸಂಕಲನದಲ್ಲಿ ಎದ್ದುಕಾಣುತ್ತವೆ. ಉಮಾ ದಾಸ್‌ ಗುಪ್ತಾ ಸಂಪಾದಿಸಿರುವ ‘ಫ್ರೆಂಡ್‌ಶಿಫ್ ಆಫ್ ಲಾರ್ಜ್‌ನೆಸ್ ಅಂಡ್ ಫ್ರೀಡಂ’ ಹೆಸರಿನ ಆ ಕೃತಿ ಅವರ ಮೇರು ವ್ಯಕ್ತಿತ್ವ ದರ್ಶನ ಮಾಡಿಸದಿರದು.

ಈ ಅಂಕಣಕಾರ, ಆಂಡ್ರ್ಯೂಸ್ ಅವರು ಆ ಸಂಸ್ಥೆಯನ್ನು ತೊರೆದ ಸುಮಾರು ೬೦ ವರ್ಷಗಳ ಬಳಿಕ ೧೯೭೪ರಲ್ಲಿ ಸೇಂಟ್ ಸ್ಟೀಫನ್ಸ್‌ಗೆ ಸೇರಿದರು. ಅರವತ್ತು ವರ್ಷಗಳ ಬಳಿಕವೂ ಅವರ ಮೌಲ್ಯಗಳು ಕಾಲೇಜಿನ ವಾತಾವರಣದಲ್ಲಿ ಇನ್ನೂ ಜೀವಂತವಿದ್ದವು. ಆದರೂ, ಖಚಿತವಾಗಿ ಹೇಳಬೇಕೆಂದರೆ, ನನ್ನ ಹಲವು ಸಹಪಾಠಿಗಳು ಹಣ ಮಾಡುವುದನ್ನೇ ತಮ್ಮ ಗುರಿಯಾಗಿಸಿಕೊಂಡಿದ್ದರು. ಸೇಂಟ್ ಸ್ಟೀಫನ್ಸ್ ಕಾಲೇಜಿನ ಪ್ರತಿಷ್ಠಿತ ಪದವಿಯನ್ನು ಪಣಕ್ಕಿಟ್ಟು ಹಿಂದೂಸ್ಥಾನ್ ಲಿವರ್ಸ್ ಅಥವಾ ಸಿಟಿ ಬ್ಯಾಂಕ್‌ನಲ್ಲಿ ಒಳ್ಳೆಯ ಕೆಲಸ ಗಳಿಸುವ ಇರಾದೆ ಅವರದ್ದಾಗಿತ್ತು. ಉಳಿದವರು ಅಧಿಕಾರ ಮತ್ತು ಪ್ರಭಾವದ ಐಎಎಸ್‌ ಹುದ್ದೆ ಗಿಟ್ಟಿಸಲು ಈ ಕಾಲೇಜಿನ ಓದು ಒಂದು ಮೆಟ್ಟಿಲು ಎಂದೇ ಭಾವಿಸಿದ್ದರು. ಅಂತಹವರ ನಡುವೆ ಕೆಲವೇ ಕೆಲವು ಮಂದಿ ಹಣ, ಅಧಿಕಾರಕ್ಕಿಂತ ಶಿಕ್ಷಕರಾಗಿ, ಲೇಖಕರಾಗಿ ಅಥವಾ ಸಾಮಾಜಿಕ ಕಾರ್ಯಕರ್ತರಾಗಿ ಏನಾದರೂ ಸಾಧಿಸಬೇಕು ಎಂಬ ಮಹತ್ವಾಕಾಂಕ್ಷೆಯನ್ನೂ ಹೊಂದಿದ್ದರು. ಅದೇನೇ ಇರಲಿ, ಕಾಲೇಜಿನ ಪದವಿಯ ಬಳಿಕ ಅವರು ಏನು ಮಾಡಿದರು, ಏನಾದರು ಎಂಬ ಸಂಗತಿಗಳನ್ನೆಲ್ಲ ಮೀರಿ, ಕಾಲೇಜಿನ ದಿನಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಜಾತಿ-ಜನಾಂಗ, ಧರ್ಮ-ವರ್ಗಗಳ ಯಾವ ಪೂರ್ವಗ್ರಹಗಳ ಸೋಂಕಿಲ್ಲದಂತಿದ್ದರು ಎಂಬುದು ಆಂಡ್ರ್ಯೂಸ್ ಮತ್ತು ಗಾಂಧಿಯವರ ಮೌಲ್ಯಗಳು ಇನ್ನೂ ಜೀವಂತವಿದ್ದವು ಎಂಬುದಕ್ಕೆ ನಿದರ್ಶನ.

ಸೇಂಟ್ ಸ್ಟೀಫನ್ಸ್‌ ತಾಂತ್ರಿಕವಾಗಿ ಕ್ರಿಶ್ಚಿಯನ್ ಕಾಲೇಜು ಆಗಿದ್ದರೂ, ನನ್ನ ಕಾಲದಲ್ಲಿ ಅದರ ಆ ಧಾರ್ಮಿಕ ಅಸ್ಮಿತೆಗೆ ಪ್ರಾಮುಖ್ಯತೆಯೇ ಇರಲಿಲ್ಲ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಕ್ರೈಸ್ತರು ಶೇ.೨ರಷ್ಟಿದ್ದರೆ, ಕಾಲೇಜಿನ ವಿದ್ಯಾರ್ಥಿಗಳ ಪೈಕಿ ಕ್ರೈಸ್ತರ ಪ್ರಮಾಣ ಶೇ.೫ರಷ್ಟು ಮಾತ್ರ ಇತ್ತು. ಆದರೆ, ಅನುದಾನಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಶೇ.೫೦ರಷ್ಟು ಸೀಟುಗಳಿಗೆ ಆಯಾ ಸಂಸ್ಥೆಯ ಮೂಲ ಸಮುದಾಯದ ವಿದ್ಯಾರ್ಥಿಗಳಿಗೆ ಅವಕಾಶ ನೀಡಬಹುದು ಎಂಬ ಸುಪ್ರೀಂ ಕೋರ್ಟಿನ ತೀರ್ಪಿನ ಬಳಿಕ ಕಾಲೇಜಿನ ಆ ಚಿತ್ರಣ ಬದಲಾಗತೊಡಗಿತು.

ಆಗ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿದ್ದ ಸಮಾಜಶಾಸ್ತ್ರಜ್ಞ ಆಂಡ್ರೆ ಬಿಟೀಲ್ ಅವರು, “ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಹೆಚ್ಚು-ಹೆಚ್ಚು ಕ್ರೈಸ್ತ ವಿದ್ಯಾರ್ಥಿಗಳನ್ನು ಸೇರಿಸಿಕೊಂಡರೆ ಅದು ಅಂತಿಮವಾಗಿ ಕಾಲೇಜಿನ ಚಹರೆಯನ್ನೆ ಬದಲಾಯಿಸಬಹುದು ಮತ್ತು ಅಂತಹ ಬದಲಾವಣೆ ಖಂಡಿತವಾಗಿಯೂ ಒಳ್ಳೆಯದಲ್ಲ,” ಎಂದು ಅಂದಿನ ಪ್ರಿನ್ಸಿಪಾಲರಾಗಿದ್ದ ಅನಿಲ್ ವಿಲ್ಸನ್‌ ಅವರಿಗೆ ಕಿವಿಮಾತು ಹೇಳಿದ್ದರು. ಆದರೆ, ಅವರು ಆ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ; ಖಂಡಿತವಾಗಿಯೂ ಆ ನಿರ್ಲಕ್ಷ್ಯದ ಹಿಂದೆ ಕ್ರೈಸ್ತ ಸಮುದಾಯದ ಉನ್ನತ ಶಕ್ತಿಗಳ ಒತ್ತಡವಿತ್ತು. ಅನಿಲ್ ವಿಲ್ಸನ್‌ ಮತ್ತು ಅವರ ನಂತರದ ಪ್ರಿನ್ಸಿಪಾಲರು ಅಂತಹ ಒತ್ತಡಕ್ಕೆ ಮಣಿಯುತ್ತಲೇ ಹೋದರು. ಹಾಗಾಗಿ, ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ಕ್ರೈಸ್ತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತ ಹೋಯಿತು. ಈಗ ಕಾಲೇಜು ಕ್ರೈಸ್ತ ಮತ್ತು ಕ್ರೈಸ್ತೇತರ ವಿದ್ಯಾರ್ಥಿಗಳ ನಡುವೆ ಒಡೆದು ಹೋಳಾಗಿದೆ. ಅದರಲ್ಲೂ, ಕ್ರೈಸ್ತ ವಿದ್ಯಾರ್ಥಿಗಳ ಪ್ರವೇಶದ ಕನಿಷ್ಠ ಅಂಕ ಇತರರಿಗಿಂತ ಕಡಿಮೆ ಇರುವುದರಿಂದ ಸಹಜವಾಗೇ ಕ್ರೈಸ್ತ ವಿದ್ಯಾರ್ಥಿಗಳ ಕೈ ಮೇಲಾಗಿದೆ. ಹಾಗೇ, ವಿಲ್ಸನ್‌ ಅವರ ನಂತರದ ಪ್ರಿನ್ಸಿಪಾಲರು ಇತರರಿಗಿಂತ ಹೆಚ್ಚಾಗಿ ಕ್ರೈಸ್ತ ಬೋಧಕರನ್ನೇ ನೇಮಕ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಈ ಕಾಲ | ಅರುಂಧತಿಯವರ ಛಲದ ಎದುರು ಕರಗಿದ್ದು ಬೆಟ್ಟದಂಥ ನಾಲ್ಕು ಸವಾಲು

ಆರಂಭದಿಂದ ಈವರೆಗೆ ಹಲವು ದಶಕಗಳ ಕಾಲ ಸೇಂಟ್ ಸ್ಟೀಫನ್ಸ್ ಕಾಲೇಜಿಗೆ ಸಾರ್ವಜನಿಕ ತೆರಿಗೆ ಹಣದಲ್ಲೇ ಅನುದಾನ ನೀಡಲಾಗುತ್ತಿದೆ. ಅಲ್ಲದೆ, ಒಟ್ಟಾರೆಯಾಗಿ ನೋಡಿದರೆ, ದಲಿತರು ಮತ್ತು ಆದಿವಾಸಿಗಳಿಗಿಂತ ಕ್ರೈಸ್ತರು ಎಲ್ಲ ವಿಧದಲ್ಲೂ ಹೆಚ್ಚು ಅನುಕೂಲಸ್ಥರಿದ್ದಾರೆ. ಆದರೆ, ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬ ರೀತಿಯ ಈ ಮೀಸಲಾತಿ ನೀತಿಯ ಪರಿಣಾಮವೆಂದರೆ, ಈಗಾಗಲೇ ಸಾಕಷ್ಟು ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನವನ್ನು ಹೊಂದಿರುವ ಸಿರಿಯನ್ ಕ್ರಿಶ್ಚಿಯನ್ ಸಮುದಾಯದ ವಿದ್ಯಾರ್ಥಿಗಳೇ ಈ ಸಂಸ್ಥೆಯಲ್ಲಿ ತುಂಬಿಕೊಂಡಿದ್ದಾರೆ. ಒಟ್ಟು ಜನಸಂಖ್ಯೆಯ ಶೇ.೨ರಷ್ಟು ಪ್ರಮಾಣದ ಸಮುದಾಯಕ್ಕೆ ಸಂಸ್ಥೆಯ ಶೇ.೫೦ರಷ್ಟು ಸೀಟುಗಳನ್ನು ನೀಡುವ ಈ ಕ್ರಮ, ಆ ಪ್ರಬಲ ಸಮುದಾಯಕ್ಕೆ ಇನ್ನಷ್ಟು ಬಲ ತುಂಬಿದಂತೆಯೇ ವಿನಾ ನೈತಿಕವಾಗಿ ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಅದರಲ್ಲೂ, ಆ ಸಂಸ್ಥೆಯನ್ನು ಯಾವುದೇ ಚರ್ಚ್ ಹುಟ್ಟುಹಾಕಿದ್ದಲ್ಲ, ಬದಲಾಗಿ ಸಾರ್ವಜನಿಕ ತೆರಿಗೆ ಹಣದಲ್ಲಿ ನಿರ್ಮಾಣ ಮಾಡಿದ್ದು ಎಂಬ ಹಿನ್ನೆಲೆಯಲ್ಲಿ ನೋಡಿದಾಗಲಂತೂ ಈ ಕ್ರಮವನ್ನು ಒಪ್ಪಲಾಗದು.

ಇಂತಹ ಕ್ರಮದಿಂದಾಗಿ ಸಂಸ್ಥೆ ಶೈಕ್ಷಣಿಕವಾಗಿಯೂ ಸಾಕಷ್ಟು ಬೆಲೆ ತೆತ್ತಿದೆ ಕೂಡ. ಕೇವಲ ಧರ್ಮದ ಕಾರಣಕ್ಕಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಬೋಧಕರು ಆ ಸಂಸ್ಥೆಯಲ್ಲಿ ಅವಕಾಶ ವಂಚಿತರಾದರೆ, ಸಹಜವಾಗೇ ಅವರು ಮತ್ತೊಂದು ಕಡೆಗೆ ಮುಖಮಾಡುತ್ತಾರೆ. ದೆಹಲಿ ವಿವಿಯ ವ್ಯಾಪ್ತಿಯಲ್ಲೇ ಶ್ರೀರಾಮ್‌ ಕಾಲೇಜ್ ಆಫ್ ಕಾಮರ್ಸ್‌, ಹಿಂದೂ ಕಾಲೇಜ್ ಮತ್ತು ಲೇಡಿ ಶ್ರೀರಾಮ್ ಕಾಲೇಜುಗಳು ಇಂತಹ ಪರಿಸ್ಥಿತಿಯ ಲಾಭ ಪಡೆದುಕೊಂಡವು. ಸೇಂಟ್‌ ಸ್ಟೀಫನ್ಸ್ ಕಾಲೇಜನ್ನು ಕ್ರೈಸ್ತಮಯ ಮಾಡುವ ಪ್ರಯತ್ನದ ಫಲವಾಗಿ ಈ ಇತರ ಕಾಲೇಜುಗಳು ವಿದ್ಯಾರ್ಥಿಗಳು ಮತ್ತು ಗುಣಮಟ್ಟದ ವಿಷಯದಲ್ಲಿ ಸಾಕಷ್ಟು ಅನುಕೂಲತೆ ಪಡೆದುಕೊಂಡವು. ದೆಹಲಿ ವಿವಿ ವ್ಯಾಪ್ತಿಯ ಹೊರಗೂ ಹೊಸ ಕಾನೂನು ಕಾಲೇಜುಗಳು, ಸೇಂಟ್ ಸ್ಟೀಫನ್ಸ್‌ನಿಂದ ಅವಕಾಶವಂಚಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದವು. ನನ್ನ ತಲೆಮಾರಿನ ಅತ್ಯುತ್ತಮ ಇತಿಹಾಸಕಾರರು, ಸಮಾಜಶಾಸ್ತ್ರಜ್ಞರಲ್ಲಿ ಬಹುತೇಕ ಮಂದಿ ನನ್ನ ಕಾಲೇಜಿನಿಂದಲೇ ಬಂದವರಾಗಿದ್ದರು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಇದೀಗ ಇಂತಹ ಇತರ ಕಾಲೇಜುಗಳಿಂದ ಹೊರಬಂದವರೇ ಹೆಚ್ಚಿನವರಿದ್ದಾರೆ.

ಒಟ್ಟಾರೆ, ನನ್ನ ಹಳೆಯ ಕಾಲೇಜಿನ ಧಾವಂತದ ಕ್ರೈಸ್ತಮಯ ವಾತಾವರಣ ಅದರ ವರ್ಚಸ್ಸಿಗೆ ಸರಿಪಡಿಸಲಾಗದ ಪೆಟ್ಟು ನೀಡಿದೆ. ಇಂಥದ್ದನ್ನು ಕಂಡೂ ಕಾಲೇಜಿನ ಆಡಳಿತ ಮಂಡಳಿ, ಕಾಲೇಜನ್ನು ಸಂಪೂರ್ಣ ‘ಕ್ರೈಸ್ತ ಧರ್ಮ ಬೋಧಕರ ಬಿಡಾರ’ವನ್ನಾಗಿ (Evangelical Ghetto) ಮಾಡುವ ಪಣ ತೊಟ್ಟಂತಿದೆ. ‘ದಿ ಪ್ರಿಂಟ್‌’ನ ಇತ್ತೀಚಿನ ವರದಿ ಪ್ರಕಾರ, ತನ್ನ ಫಿಲಾಸಫಿ ವಿಭಾಗವನ್ನು ಮುಚ್ಚಿ, ಅದರ ಬದಲಾಗಿ ಥಿಯಾಲಜಿ ವಿಭಾಗ ಆರಂಭಿಸಲು ಕಾಲೇಜು ಇಚ್ಛಿಸಿದೆಯಂತೆ. ಆದರೆ, ಸೇಂಟ್ ಸ್ಟೀಫನ್ಸ್‌ನ ಫಿಲಾಸಫಿ ವಿಭಾಗ ದಶಕಗಳ ಕಾಲ ದೇಶದಲ್ಲೇ ಅತ್ಯುತ್ತಮ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು. ಫಿಲಾಸಫಿ ಎಂದರೆ, ವಾದ, ಸಂವಾದ, ಪರಾಮರ್ಶೆ ಮತ್ತು ವಾಗ್ವಾದ. ಆದರೆ, ಥಿಯಾಲಜಿ ಎಂಬುದು ಇದೇ ಅಂತಿಮ ಎಂಬ ಸಿದ್ಧ ಜ್ಞಾನವನ್ನೂ, ಪೂರ್ವಗ್ರಹದ ಮೌಢ್ಯವನ್ನೂ ಒಳಗೊಂಡದ್ದು. ಸಹಜವಾಗೇ, ಕಾಲೇಜನ್ನು ಈಗ ಮುನ್ನಡೆಸುತ್ತಿರುವ ಮಂದಿ ಕೂಡ ಚಿಂತಕರಿಗಿಂತ, ತತ್ವಕ್ಕೆ ಕಟ್ಟುಬಿದ್ದವರನ್ನೇ ಅಪ್ಪಿಕೊಂಡಿದ್ದಾರೆ!

ಶೈಕ್ಷಣಿಕ ಪರಿಭಾಷೆಯಲ್ಲಿ ಹೇಳುವುದೇ ಆದರೆ, ಸೇಂಟ್ ಸ್ಟೀಫನ್ಸ್ ಸಂಸ್ಥೆಯ ಕಣ್ಣಿಗೆ ಪಟ್ಟಿ ಕಟ್ಟಿದಂತಹ ಈ ಬೆಳವಣಿಗೆ ಬಗ್ಗೆ ಕಟು ಧೋರಣೆ ತಳೆಯುವಂತಿಲ್ಲ. ಏಕೆಂದರೆ, ಯಾವುದೇ ಕಾಲೇಜು ಆಗಲಿ, ಸದಾ ಕಾಲ ಅತ್ಯುತ್ತಮವಾಗೇ ಇರಲು ಸಾಧ್ಯವಿಲ್ಲ. ಆಕ್ಸ್‌ಫರ್ಡ್ ಮತ್ತು ಕೇಂಬ್ರಿಜ್‌ ವಿವಿಗಳು ಶತಮಾನಗಳ ಕಾಲ ಪರಮೋಚ್ಚ ಶೈಕ್ಷಣಿಕ ಸಂಸ್ಥೆಗಳಾಗಿ ಮೆರೆದಿದ್ದವು. ಆ ಬಳಿಕ ಹಾವರ್ಡ್, ಯೇಲ್, ಸ್ಟ್ಯಾನ್‌ಫರ್ಡ್ ಮತ್ತು ಬರ್ಕಲೀ ವಿವಿಗಳು ಆ ಎರಡಕ್ಕೂ ಸವಾಲೊಡ್ಡಿ ಪ್ರವರ್ಧಮಾನಕ್ಕೆ ಬಂದವು. ಅದೇ ರೀತಿ, ಸೇಂಟ್ ಸ್ಟೀಫನ್ಸ್‌ ಕಾಲೇಜನ್ನು ಬದಿಗೆ ಸರಿಸಿ, ಎಸ್‌ಆರ್‌ಸಿ, ಎಲ್‌ಎಸ್‌ಆರ್‌ ಮತ್ತು ನ್ಯಾಷನಲ್ ಲಾ ಸ್ಕೂಲ್‌ನಂತಹ ಸಂಸ್ಥೆಗಳು ಬೆಳೆದರೆ, ಅಂತಿಮವಾಗಿ ಅದರಿಂದ ಇಡೀ ಭಾರತವೇ ಲಾಭ ಪಡೆಯಲಿದೆ.

ಆದರೆ, ತಮ್ಮ ಬೌದ್ಧಿಕ ಮತ್ತು ನೈತಿಕ ಶಿಕ್ಷಣದ ನೆಲೆ ತಮ್ಮ ಆ ಕಾಲೇಜು ಎಂಬುದನ್ನು ಸ್ಮರಿಸುವ ಹಳೆಯ ವಿದ್ಯಾರ್ಥಿಗಳ ಪಾಲಿಗೆ ಏನನ್ನೋ ಕಳೆದುಕೊಂಡ ಭಾವ ಅನಿವಾರ್ಯ. ಬಹುತ್ವದ ನೆಲೆಯಾಗಿದ್ದ, ಬಹುಭಾಷೆ, ಜನಾಂಗ, ಧರ್ಮಗಳ ಪ್ರತಿನಿಧಿಸುವ ಭಾರತದ ಒಂದು ಪುಟ್ಟ ಘಟಕದಂತೆ ಇದ್ದ ಜಾಗವನ್ನು ಪ್ರಭಾವಿ ಸಮುದಾಯವೊಂದರ ಸ್ವಹಿತಾಸಕ್ತಿಯ ಕೆಲವೇ ಕೆಲವು ಮಂದಿ ಇಂದು ತಮ್ಮ ಆಡುಂಬೊಲವಾಗಿ ಮಾಡಿಕೊಂಡಿದ್ದಾರೆ. ಕಾಲೇಜು ಹಿಂದೆಂದಿಗಿಂತ ಈಗ ಒಂದು ಸಮುದಾಯದ ಆಸ್ತಿಯಂತಾಗಿದೆ ಎಂಬುದು ನಾನು ಅಲ್ಲಿಗೆ ಇತ್ತೀಚೆಗೆ ಭೇಟಿ ನೀಡಿದಾಗ ಗಮನಕ್ಕೆ ಬಂದಿತು. ಒಂದು ಕಾಲದಲ್ಲಿ ತಮ್ಮ ವೈಯಕ್ತಿಕ ಪ್ರತಿಭೆ ಮತ್ತು ವೈಶಿಷ್ಟ್ಯಗಳಿಂದ ಗುರುತಿಸಲ್ಪಡುತ್ತಿದ್ದ ವಿದ್ಯಾರ್ಥಿಗಳನ್ನು, ಈಗ ‘ಕೈಸ್ತರು’ ಮತ್ತು ‘ಕೈಸ್ತರಲ್ಲದವರು’ ಎಂದೇ ಗುರುತಿಸಲಾಗುತ್ತಿದೆ. ಬೋಧಕರು ಕೂಡ ಈ ಮಾನದಂಡದಿಂದ ಹೊರತಾಗಿಲ್ಲ. ಇವತ್ತಿನ ಸೇಂಟ್ ಸ್ಟೀಫನ್ಸ್‌, ಅಂದಿನ ಕಾಲೇಜಿನ ಚಹರೆಯ ಸಂಪೂರ್ಣ ತಿರುವುಮುರುವು ರೂಪದಲ್ಲಿದೆ. ಹಾಗೇ, ಚಾರ್ಲಿ ಆಂಡ್ರ್ಯೂಸ್‌ ತನ್ನ ಜೀವವನ್ನೇ ತೇಯ್ದ ದೇಶದ ಚಹರೆಗೂ ತದ್ವಿರುದ್ಧವಾಗಿದೆ!

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More