ಶತಪಥ | ವೈದೇಹಿ ಅವರ ಹೊಸ ಕತೆ ‘ಸಲ್ಮಾ ಮತ್ತು ಸುರಭಿ’

ಈಗ ಇಷ್ಟು ವರ್ಷಗಳ ಮೇಲೆ, ಅದೂ ಬಸ್ಸಿನಲ್ಲಿ, ಒಂದೇ ಸೀಟಿನಲ್ಲಿ! ಪರಸ್ಪರ ಗುರುತು ಕೂಡ ಹಿಡಿದು ಮಾತಾಡುತಿದ್ದಾರೆ. ನಡುವೆ ಒಮ್ಮೆ ಸುಮ್ಮನೆ ಹಳೆಯ ನೆನಪಿನ ಸುಖಕ್ಕೆ ಸುರಭಿ, “ಅಲ್ಲ, ಪಳ್ಳಿಯಲ್ಲಿ...” ಎಂದಳು. ನಕ್ಕ ಸಲ್ಮಾ ಬಿಡುವಳೇ? “ಗೊಲ್ಲ ಹಟ್ಟಿಯಲ್ಲಿ...” ಎಂದಳು. ಮುನಿಸು ಕರಗಿತು. ಆದರೆ...

“ಅರೆ ಸಲ್ಮಾ ನೀನು! ಕಿಟಿಕಿಯಾಚೆ ನೋಡುತಿದ್ದೆನಲ್ಲ, ಬಂದದ್ದು ನೀನು ಅಂತ ತಿಳಿಯಲೇ ಇಲ್ಲ!”

“ಅರೆ ಸುರಭಿಯಾ! ನೀನು ಅಂತ ನಾನೂ ಅಂದುಕೊಂಡಿರಲಿಲ್ಲ. ಮುಖ ಆಚೆಗಿತ್ತಲ್ಲ!" ಅಚ್ಚರಿಗಣ್ಣಲ್ಲಿ ಸಣ್ಣ ನಗೆಯಲ್ಲಿ ಕುಳಿತುಕೊಂಡಳು ಸಲ್ಮಾ.

ಇಬ್ಬರಿಗೂ ಒಮ್ಮೆ ಆಶ್ಚರ್ಯ, ಖುಷಿ. ಎಲ್ಲ ಬಿಟ್ಟು ತಾವು ಭೇಟಿಯಾದೆವೆಂದರೆ! ನೋಡಿ ಎಷ್ಟು ದಿನವಾಗಿತ್ತೋ. ಎಸೆಸ್ಸೆಲ್ಸಿ ಮುಗಿಯುತ್ತಲೇ ಮದುವೆಯಾಗಿ ಹೋಗಿದ್ದಳು ಸಲ್ಮಾ. ಸುರಭಿ ಹೊರತಾಗಿ ಉಳಿದ ಗೆಳತಿಯರೆಲ್ಲ ಅಷ್ಟು ಬೇಗ ಮದುವೆಯಾಗುವಳೆಂದು ಎಷ್ಟು ಕುಶಾಲು ಮಾಡಿದ್ದರೊ! ತಮಾಷೆ ಮಾಡಲು ಹಿಂದೆ ಮುಂದೆ ನೋಡದ ದಿನಗಳವು. ಹಿನ್ನೆಲೆ, ಮುನ್ನೆಲೆ, ಸಂಪ್ರದಾಯ ಮಣ್ಣು ಮಸಿಗಳ ಅರಿವು ಯಾರಿಗಿತ್ತು? ತಮಾಷೆಯೆದುರು ಸಣ್ಣ ಮುಖ ಮಾಡಿಕೊಂಡು ಕುಳಿತುಕೊಳ್ಳುವವಳೇ ಸಲ್ಮಾ? "ನೀವು ನಮ್ಮ ಮನೆಯಲ್ಲಿ ಹುಟ್ಟಿದ್ದರೆ ನಿಮಗೂ ಒಂದೊಂದು ಮದುವೆ ಮಾಡಿಸಿಯೇಬಿಡುತಿದ್ದೆ,” ಎಂದು ನಗೆ ಹೊಟ್ಟಿ ಹಾರಿಸಿದ್ದಳು.

ಆದರೆ, ಸಣ್ಣ ಕ್ಲಾಸಿನಲ್ಲಿದ್ದಾಗ ದೋಸ್ತಿ ಬಿಟ್ಟದ್ದರಿಂದ ಸುರಭಿ ಆ ನಗೆಯಲ್ಲಿ ಸೇರಿಕೊಳ್ಳುವ ಹಾಗೆಯೇ ಇರಲಿಲ್ಲ. ಏನೋ ಸ್ಲೇಟು ಕಡ್ಡಿ ಜಗಳ ಅದು. ವಿವರಗಳನ್ನು ಈಗ ಎಷ್ಟು ನೆನಪು ಮಾಡಿಕೊಳ್ಳುವೆನೆಂದರೂ ನೆನಪಿಗೆ ಬರದು. ಅವತ್ತು ಮಾತು ಬಿಟ್ಟದ್ದು ಮುಂದೆ ಒಂದು ಮಾತನ್ನೂ ಆಡಲೇ ಇಲ್ಲ. ಸುರಭಿಯೊಡನೆ ಇನ್ನು ತಾನು ಸಾಯುವವರೆಗೆ ಮಾತಾಡುವುದಿಲ್ಲ ಎಂದು ಅವಳು ಶಪಥ ತೊಟ್ಟಿದ್ದಳಂತೆ. ಇನ್ನೂ ಹತ್ತೋ ಎಂಟೋ ಪ್ರಾಯದ ಹುಡುಗಿಯರು ಆಗ. ತೊಡುವ, ತೊಟ್ಟ ತುಸು ಹೊತ್ತಿನಲ್ಲಿಯೇ ತೊರೆಯುವ, ತೊರೆಯಲು ಹಾತೊರೆಯುವ ಎಂಥೆಂಥ ಶಪಥಗಳು... ಒಂದೇ ಎರಡೇ? ಆದರೆ, ಸಲ್ಮಾ ಮತ್ತು ಸುರಭಿ ಯಾಕೋ ಈ ಶಪಥವೊಂದನ್ನು ತೊರೆಯಲೇ ಇಲ್ಲ- ಶಾಲೆ ಕಲಿತು ಮುಗಿಯುವವರೆಗೂ. ಅವರಿಬ್ಬರಲ್ಲಿ ಎಷ್ಟೋ ಸಲ ಒಬ್ಬರು ಮುಗುಳುನಕ್ಕರೆ ಇನ್ನೊಬ್ಬರು ನಗದೆ ಅವಮಾನದಲ್ಲಿ ಬೇಯಿಸುತಿದ್ದರು, ತಾವೂ ಬೇಯುತಿದ್ದರು. ಥ್ರೋಬಾಲ್ ಮ್ಯಾಚಿನಲ್ಲಿ ಒಂದೇ ಟೀಂಗೆ ಸೇರಿದರೂ ಒಟ್ಟಿಗೇ ಆಟವಾಡುತಿದ್ದರೂ ತಪ್ಪಿಯೂ ಮಾತಾಡರು. ಕಟ್, ಸರ್ವಿಸ್, ಕ್ಯಾಛ್ ಎಲ್ಲಿ ತಪ್ಪಾದರೂ ಆಟದ ನಶೆಯಲ್ಲಿಯೂ ಪಿಟಕ್ ಪಟಕ್ ಇಲ್ಲ. ತಮ್ಮಿಂದಾಗಿ ಮ್ಯಾಚಿನಲ್ಲಿ ಸೋತರೂ ಸರಿಯೆ, ಶಪಥ ಎಂದರೆ ಶಪಥ. ಪಾಲಿಸಿಕೊಂಡು ಅಂತೂ ಶಾಲೆ ಮುಗಿದದ್ದೇ ಸಲ್ಮಾಗೆ ಮದುವೆಯಾಗಿ ಇಬ್ಬರೂ ದೂರವಾಗಿದ್ದರು. ಮತ್ತೆ ಸಿಕ್ಕಿದ್ದು ಈಗಲೇ, ಅದೂ ಅಚಾನಕ್. ಅದೂ ಎಷ್ಟು ವರ್ಷಗಳ ಮೇಲೆ! ತಮ್ಮ ಜಗಳವನ್ನು ಮಕ್ಕಳ ಬಳಿ ಹೇಳಿ, ಕೇವಲ ಸ್ಲೇಟು ಬಳಪದ ಯಾವುದೋ ನೆಪದಲ್ಲಿ ಇಷ್ಟು ದೀರ್ಘ ಮಾತು ಬಿಟ್ಟದ್ದು ಯಾರಾದರೂ ಇರುವರೇ! ಎಂದು ಅವರೊಡನೆಯೇ ಕೇಳುತ್ತ ತಮ್ಮ ಜಗಳವನ್ನು ಎಷ್ಟು ಸಲ ಮೆಲುಕು ಹಾಕಿರುವರೋ.

ದೋಸ್ತಿ ಬಿಡುವುದಕ್ಕೂ ಮುಂಚೆ ಪ್ರಪಂಚದಲ್ಲಿ ಇರುವವರು ತಾವೇ ತಾವಿಬ್ಬರೇ ಎಂಬಷ್ಟು ಗಾಢ ದೋಸ್ತಿಗಳಾಗಿದ್ದರಲ್ಲ. ಕ್ಲಾಸಿನಲ್ಲಿಯೂ ಒಟ್ಟು, ಹೊರಬರುವಾಗಲೂ ಒಟ್ಟು, ಎಲ್ಲಿಯೂ ಒಟ್ಟು. ಕೈ ಕೈ ಹಿಡಿದುಕೊಂಡೇ ನಡೆದವರು. ಅವಳು ಇವಳಿಗಾಗಿ ಇವಳು ಅವಳಿಗಾಗಿ ಜನ್ಮವೆತ್ತಿದಂತೆ.

ಅವತ್ತಿನ ತಮಾಷೆ ಅಂದರೆ -ಯಾವುದೇ ಮಾತಿಗೆ ಸಲ್ಮಾ ‘ಅಲ್ಲ’ ಎಂದರೆ ಸಾಕು. ‘ಅಲ್ಲ ಪಳ್ಳಿಯಲ್ಲಿ’ ಎಂದು ಉಳಿದ ಗೆಳತಿಯರಲ್ಲಿ ಯಾರಾದರೊಬ್ಬರು ಹೇಳಿಯಾಯಿತು, ನಕ್ಕಾಯಿತು. ಅದಕ್ಕೆ ಪ್ರತಿಯಾಗಿ ಸಟಕ್ಕನೆ ‘ಗೊಲ್ಲ ಹಟ್ಟಿಯಲ್ಲಿ’ ಎಂದು ಡೋಸು ಹೊಡೆಯದೆ ಬಿಡುವವಳೇ ಸಲ್ಮಾ? ಎರಡೂ ಮಾತುಗಳು ಸೇರಿ ನಗೆಯ ಅಲೆಯೇಳುವುದು. ಅದೇ, ಹೇಳಿದೆನಲ್ಲ, ಹಿಂದುಮುಂದಿಲ್ಲದ ನಗೆ. ಕಲ್ಮಶವಿಲ್ಲದ ನಗೆ. ಅಲ್ಲ ಗೊಲ್ಲಗಳೆಲ್ಲ ಉದ್ದವಾಗಿ ದೊಡ್ಡದಾಗಿ ಆಕಾಶದೆತ್ತರ ಏರಿ ಕದನ ಕಾದಾಟದವರೆಗೂ ಹರಡದೆ ವಿಷಯ ಅಲ್ಲಲ್ಲೇ ಅಲ್ಲಲ್ಲಿಗೇ ಮುಗಿದು ಮತ್ತೆ ಆಟಕ್ಕೆ ಹೊರಳಿಕೊಳ್ಳುವ ದಿನಗಳು ಅವು.

ಆದರೆ ಒಂದು ದಿನ ಕೊನೆಗೂ ಸುರಭಿ-ಸಲ್ಮಾ ಸ್ನೇಹಕ್ಕೆ ಕಲ್ಲು ಬಿತ್ತು. ಅದೂ ಏನೋ ಒಂದು ಬಳಪ ಮತ್ತು ಸ್ಲೇಟುಗಳ ವಿಚಾರಕ್ಕೆ. ಅವತ್ತಿಗೆ ಅದೇ ದೊಡ್ಡದು. ಅಂಥಾ ದೋಸ್ತಿಗಳಾಗಿದ್ದವರು ‘ಎನಿಮಿ’ಗಳಾದರು. ಮಾತು ಬಿಟ್ಟರು. ಇನ್ನೊಬ್ಬರ ಮೂಲಕ ಮಾತಾಡತೊಡಗಿದರು. ಎದುರು ಸಿಕ್ಕರೆ ಮೂಕರಂತೆ ನಡೆವರು. ಯಾರ್ಯಾರಿಂದಲೂ ರಾಜಿ ಮಾಡಿಸಲು ಸಾಧ್ಯವೇ ಆಗದೆ ಎನಿಮಿಗಳಾಗಿಯೇ ಕೊನೆಗೂ ಹೈಸ್ಕೂಲು ಮುಗಿಸಿದರು. ಮುಂದೆ ಅವರವರ ಜೀವನ ಪಥವೇ ಬೇರೆಯಾಯಿತು.

ಮತ್ತೆ ಸಿಕ್ಕಿದ್ದು ತಾವು ಎನಿಮಿಗಳಾಗಿದ್ದ ಒಂದು ನಗೆಯ ಸಂಗತಿಯಾಗಿ ಹೇಳಿಕೊಳ್ಳುವ ಹಂತದಲ್ಲಿ; ಈಗ ಇಷ್ಟು ವರ್ಷಗಳ ಮೇಲೆ, ಅದೂ ಇಲ್ಲಿ, ಬಸ್ಸಿನಲ್ಲಿ! ಅದೂ ಒಂದೇ ಸೀಟಿನಲ್ಲಿ! ಪರಸ್ಪರ ಗುರುತು ಕೂಡ ಹಿಡಿದು ಮಾತಾಡುತಿದ್ದಾರೆ. ನಡುವೆ ಒಮ್ಮೆ ಸುಮ್ಮನೆ ಹಳೆಯ ನೆನಪಿನ ಸುಖಕ್ಕೆ ಸುರಭಿ, "ಅಲ್ಲ, ಪಳ್ಳಿಯಲ್ಲಿ..." ಎಂದಳು. ನಕ್ಕ ಸಲ್ಮಾ ಬಿಡುವಳೇ? "ಗೊಲ್ಲ ಹಟ್ಟಿಯಲ್ಲಿ...” ಎಂದಳು. ಮಂಜು ಕರಗಿತು, ಮೋಡ ಸರಿಯಿತು, ಬೆಳ್ಳಿ ಮೂಡಿತು ಅಂತೆಲ್ಲ ಹೇಳುವರಲ್ಲ, ಹಾಗೆಯೇ ಆಯಿತು ಇಬ್ಬರ ಮನಸ್ಸಿಗೂ. ವಯಸ್ಸು ಬಾಲ್ಯದಲ್ಲಿ ಮಾಡಿದ ಜಗಳದ ಕಾವನ್ನು ಹೇಗೆ ತಗ್ಗಿಸುತ್ತದೆ ಮತ್ತು ನಗೆಯನ್ನಾಗಿ ಪರಿವರ್ತಿಸುತ್ತದೆ! ಒಂದು ಜೀವ ಎರಡು ದೇಹ ಎಂಬಂತೆ ಇದ್ದವರು, ಬೇರೆಯಾದರೂ ತಮ್ಮೊಳಗೇ ತಮ್ಮ ಬಾಲ್ಯದ ಗೆಳೆತನದ ಘಮವನ್ನು ಬಚ್ಚಿಟ್ಟುಕೊಂಡೇ ಬಂದವರು ಈಗ ಒಂದು ರೀತಿಯಲ್ಲಿ ಸುಖವಾದರು. ಕಳೆದುಹೋದ ಸಂಬಂಧ ಮತ್ತೆ ದೊರಕುವುದೆಂದರೆ ಸಣ್ಣ ಸಂಭ್ರಮವೇ? ಸುರಭಿಯ ಕಡೆ ಒಮ್ಮೆ ನೋಡಿ, "ಕಿಟಿಕಿ ಬಾಗಿಲು ಸ್ವಲ್ಪ ತೆಗೆ ನೋಡುವ, ಸೆಖೆ,” ಎಂದಳು ಸಲ್ಮಾ. ತನಗೆ ಕಿಟಿಕಿ ಗಾಳಿ ಬೇಡ, ಕೂದಲೆಲ್ಲ ಹಾರುತ್ತದೆ ಎಂದು ಮುಂಚಿನಂತಾಗಿದ್ದರೆ ಹೇಳುತಿದ್ದಳೇನೋ ಸುರಭಿ. ಆದರೆ ಈಗ ಹೇಳಲಿಲ್ಲ. ಗೆಳೆತನ ಮತ್ತೆ ಜೋಡಿಕೊಳ್ಳುತ್ತಿದೆ. ಮುಟ್ಟಿದರೆ ಬಿಟ್ಟುಹೋದೀತು ಎಂಬ ಆತಂಕವೇ? ಕಿಟಿಕಿ ಗಾಜು ಸರಿಸಿದಳು. ನೋಡಲು ಹಾಗೆಯೇ ಇದ್ದಳು ಸಲ್ಮಾ, ದಪ್ಪಗೆ, ಗುಳ್ಗಿಯಾಗಿ. "ಹಾಗೆಯೇ ಇದ್ದೀ, ಒಂದು ಚೂರೂ ಬದಲಾಗಿಲ್ಲವಲ್ಲ ಸಲ್ಮಾ!"

"ಹ್ಞಾ, ನೀನು ಮತ್ತೇನು? ಹಾಗೇ ಇದ್ದೀಯಲ್ಲ, ಇನ್ನೂ ಕಡ್ಡಿಯಾಗಿದ್ದೀ!" ನಕ್ಕಳು ಸಲ್ಮಾ. ತಕ್ಷಣ ತಿರುಪಿ ಉತ್ತರ ಕೊಡುವ ಅವಳ ಎಂದಿನ ಬೀಸಿನಿಂದ ಇಬ್ಬರಿಗೂ ತಣ್ಣಗೆ ಗಾಳಿ ಬೀಸಿ ಬಂದಂತಾಯಿತು.

"ಎಷ್ಟು ಸಮಯವಾಯಿತೇ ನೋಡೀ..." ಎಂದು ಮಾತಿನ ನಡುವೆ ಅಲ್ಪವಿರಾಮ ಹಾಕಿದಂತೆ ಹೇಳಿಹೇಳಿಯೇ ಅಚ್ಚರಿಪಟ್ಟರು. ಐದು ಗಂಟೆಗಳ ಪಯಣದುದ್ದಕ್ಕೂ ತಾವು ಜೊತೆಗೇ ಇರುತ್ತೇವೆ ಅಂದರೆ ಏನು ಅನಿರೀಕ್ಷಿತವಿದು!

ತಾವು ಶಾಲೆಯ ಟ್ರಿಪ್ಪಿಗೆ ಹೋಗುತಿದ್ದುದು, ವಾರ್ಷಿಕೋತ್ಸವದಲ್ಲಿ ಜೋಡಿಯಾಗಿ ಟಮಕೀ ಡಾನ್ಸ್ ಮಾಡಿದ್ದು, ಒಬ್ಬರು ಕಡ್ಡಿ-ಒಬ್ಬರು ಗುಳ್ಗಿ, ಅದು ಹೇಗೆ ತಮ್ಮನ್ನು ಜೋಡಿ ಮಾಡಿದರು ಆ ಟೀಚರ್ ಎಂದು ನೆನೆನೆನೆದು ನಕ್ಕರು. ಮನೆಯಿಂದ ತಂದ ಉಂಡೆಯನ್ನು ಒಮ್ಮೆ ಅವಳು- ಒಮ್ಮೆ ಇವಳು ಕಚ್ಚಿ ತಿನ್ನುತಿದ್ದುದು... ನೆನಪುಗಳ ಸುರುಳಿ ಬಿಚ್ಚಿದರು. "ಅಂದಹಾಗೆ ಆ ಉಂಡೆ ತಂದವರು ಯಾರು? ನಾನೋ ನೀನೋ?” "ಒಂಚೂರೂ ನೆನಪೆ ಆಗುತ್ತಿಲ್ಲವಲ್ಲ!" ಎಂದು ಯೋಚಿಸಿದರು. ಅದುವರೆಗಿನ ತಮ್ಮ ಬದುಕಿನ ಸಂಗತಿಗಳನ್ನು ಹೇಳಿಕೊಂಡರು. ಇದ್ದೇ ಇರುತ್ತಲ್ಲ, ಮಕ್ಕಳು, ಗಂಡ, ಅವರವರ ಸ್ಥಿತಿಗತಿ ಇತ್ಯಾದಿ. ಸಲ್ಮಾಗೆ ಈಗ ಮಕ್ಕಳು ಮಾತ್ರವಲ್ಲ ಮೊಮ್ಮಕ್ಕಳೂ ಇವೆ. "ನಿಮ್ಮ ಹಾಗೆ ತಡವಾಗಿ ಮದುವೆಯಾದರೆ ನನಗಿನ್ನೂ ಮಕ್ಕಳ ಮದುವೆ ಮಾಡಿಯೇ ಮುಗಿಯುತ್ತಿರಲಿಲ್ಲ. ನಿನ್ನ ನೋಡೀಗ!" ಛೇಡಿಸಿ ನಕ್ಕಳು. ಮುಂಚಿನ ಆ ಎಳೆಯ ದನಿ ಎಲ್ಲಿ ಹೋಯಿತೋ. ಧ್ವನಿಗೂ ವಯಸ್ಸಾಗಿ ದಪ್ಪವಾಗಿತ್ತು- ಇಬ್ಬರದೂ. ಮಾತು ಸಾಗುತಿದ್ದಂತೆ ಬಸ್ಸು ಸಾಗುತ್ತಲೇ ಇತ್ತು.

ತುಸು ತಡೆದು ಸುರಭಿ ಎಂದಳು, "ಅಲ್ಲ ಸಲ್ಮಾ, ಆಗ ನಾವು ಎಷ್ಟೆಲ್ಲಾ ತಮಾಷೆ ಮಾಡಿಕೊಳ್ಳುತಿದ್ದೆವು! ನೀವು ಉಪರಾಟೆ ಬರೆಯುವವರು ಅಂತ, ಅಲ್ಲಾ ಪಳ್ಳಿಯಲ್ಲಿ ಅಂತ...’

"ನೀವು ಬರೀ ಪುಳಿಚಾರು, ಅಂತ”

"ಹೌದು... ಆದರೆ ಈಗ ನೋಡು, ಹೇಗಾಗಿದೆ. ಇವತ್ತು ಮಕ್ಕಳು ಕೂಡ ಹೀಗೆಲ್ಲ ಮಾತಾಡುವಂತಿಲ್ಲ..."

"ಮಾತಾಡಿದರೆ ಪೆಟ್ಟೇ! ಅಯ್ಯಮ್ಮ!" ಹೇಳುತ್ತ ಗಂಭೀರವಾದಳು ಸಲ್ಮಾ. "ಮೊನ್ನೆ ಹಾಗೇ ಆಯಿತು. ನನ್ನ ಮೊಮ್ಮಗ ಏನು ಹೇಳಿದನೋ ನಮಗೂ ಸರೀ ಗೊತ್ತಿಲ್ಲ, ಶಾಲೆಯಿಂದ ಬರುವಾಗ ಯುನಿಫಾರ್ಮ್ ಎಲ್ಲ ರಕ್ತ. ಛೆ! ಏನು ಮಾಡಿದೆ ಅಂತ ಕೇಳಿದರೆ ಅಳುವುದು ಅಳುವುದು, ಹೇಳುವುದಿಲ್ಲ. ಯಾರು ಮಾಡಿದರು ಅಂತ ಕೇಳಿದರೆ ಮೂರು ನಾಲ್ಕು ಹೆಸರು ಹೇಳಿದ... ಎಲ್ಲ ನಿಮ್ಮ ಜನದ ಹೆಸರುಗಳು...”

"ಹೌದಾ!"

"ಮತ್ತೆ! ಮರುದಿವಸ ನಾನೇ ಶಾಲೆಗೆ ಹೋದೆ. ಮಾಸ್ಟರ ಹತ್ತಿರ ಕೇಳಿದರೆ ಅವರಿಗೂ ಏನೂ ಗೊತ್ತಿಲ್ಲ..."

ಸುರಭಿ ತುಸು ತಡೆದು ಎಂದಳು, "ಅವ ಏನೋ ಬೇಡದ್ದು ಮಾತಾಡಿರಬೇಕು ಸಲ್ಮಾ. ಇಲ್ಲವಾದರೆ ಸುಮ್ಮಸುಮ್ಮನೆ...”

"ಏನು, ‘ಇಲ್ಲವಾದರೆ’? ಅದಿನ್ನೂ ಸಣ್ಣದು, ನಾಲ್ಕನೆಯ ಕ್ಲಾಸು. ನಾನು ಅವನನ್ನೂ ಕೂರಿಸಿ ಕೇಳಿದೆ, ಏನಂದೆ ಅಂತ..."

"ಏನಂತೆ?"

"ಏನಿಲ್ಲ. ಅದೇ ಅಲ್ಲ ಪಳ್ಳಿಯಲ್ಲಿ ಗೊಲ್ಲ ಹಟ್ಟಿಯಲ್ಲಿ ಅಂತಿರಲಿಲ್ಲವೇ ನಾವು, ಅಂಥದೇ ಬೇರೆ ಏನೇನೋ. ಅದು ಅಲ್ಲಿಗೇ ಮುಗಿಯುತಿತ್ತೇನೋ. ಹೇಳಿದ್ದು ಹಿಂದಿನ ದಿನವಂತೆ. ಮರುದಿನ ಎಲ್ಲಿಂದಲೋ ಒಂದಷ್ಟು ಜನ ದಾಂಡಿಗರು ಬಂದು... ಮಗು ಉಳಿದದ್ದು ಹೆಚ್ಚು,” ಸಲ್ಮಾ ದನಿ ನಡುಗುತಿತ್ತು.

“ಛೆ!..." ಮೌನವಾದಳು ಸುರಭಿ. "ಇನ್ನೆಲ್ಲ ಕಷ್ಟವಪ್ಪ. ನೀನು ಹೇಳುತ್ತಿ, ಮೊನ್ನೆ ಗೊತ್ತ? ನನ್ನ ಪಕ್ಕದ ಮನೆ ಹುಡುಗಿ, ಮದುವೆ ಇನ್ನೇನು ಹತ್ತಿರ ಬಂದಿದೆ. ರಸ್ತೆಯ ಮೇಲೆ ಹೋಗುತಿದ್ದವಳಿಗೆ, ನಿಮ್ಮವರಂತೆಯೇ ಇದ್ದರಂತೆ ಗಡ್ಡಗಿಡ್ಡ ಬಿಟ್ಟುಕೊಂಡು. ಸೀದಾ ಬಂದು ಎದುರು ನಿಂತು ದುರುದುರು ನೋಡಿದರಂತೆ ನೋಡು. ಹುಡುಗಿ ಪಾಪ, ಮನೆಗೆ ಫೋನ್ ಮಾಡಿ, ವಿಷಯ ಹೀಗೆ, ಒಬ್ಬಳೇ ಬರಲು ಹೆದರಿಕೆ, ಯಾರನ್ನಾದರೂ ಕಳಿಸಿ ಅಂತ; ಅಯ್ಯೋ... ಅದು ದೊಡ್ಡ ಕೇಸು ಆಗಿ, ಮದುವೆ ನಿಂತೇಹೋಗುವುದೊಂದು ಬಾಕಿ. ತಾನು ಯಾಕಾದರೂ ಫೋನು ಮಾಡಿದೆನೋ ಆಂಟಿ ಅಂತ ಹೇಳಿಕೊಂಡು ಒಂದು ಅತ್ತಳೂ ಅಷ್ಟಿಷ್ಟಲ್ಲ."

"ಏನು, ಕೇಸು ಅಂದರೆ?"

"ಏನು ಹೇಳುವುದು!... ಹೇಳಲಿಕ್ಕೂ ಹೆದರಿಕೆ. ಅದೇ, ದೂರು ಕೊಡಬಾರದಿತ್ತು ಅವಳು. ಆ ಅದೇ ಗೂಂಡಾಗಳು ಅವಳ ಮನೆಗೆ ಬಂದು ಗಾಜು ಒಡೆದು...” ಸುರಭಿ ಪಿಸುವಾದಳು. ಒಮ್ಮೆ ಹಿಂದೆ ತಿರುಗಿ ಕಣ್ಣು ಹಾಯಿಸಿದಳು. "ಮಾರಾಯ್ತಿ, ಇವತ್ತು ಏನಾದರೂ ಮನಸ್ಸು ಬಿಚ್ಚಿ ಮಾತಾಡಲಿಕ್ಕುಂಟ? ನನ್ನ ಗ್ರಾಚಾರ ಕೆಟ್ಟು ಎಲ್ಲಿಯಾದರೂ ಹಿಂದೆ ನಿಮ್ಮವರು ಇದ್ದರೆ ಮತ್ತೆ ಆಯಿತು ಕತೆ..."

"ಬಿಡು, ನಮ್ಮವರೇ ಯಾಕೆ ಹೇಳುತ್ತಿ? ನಿಮ್ಮವರೂ ಇರಬಹುದು. ಆಗ ನನ್ನದೂ ಮುಗಿಯುವುದೇ. ಮತ್ತೆ ಬಸ್ಸಿಂದ ಇಳಿಯುವ ಕತೆ ಇಲ್ಲ."

ಮಾತು ಬೆಳೆಯುತ್ತ ವರ್ತಮಾನದಿಂದ ಮೆಲ್ಲ ಸರಿಯುತ್ತ ಮುಂಬೈ ಗಲಾಟೆ ಕಡೆ ಹಿನ್ನಡೆಯಿತು. ಅದರಲ್ಲಿ ನಿಜ ಎಷ್ಟು, ಸುಳ್ಳು ಎಷ್ಟು ಅಂತ ಇಬ್ಬರೂ ತಮತಮಗೆ ಸಿಕ್ಕಿದ ಸತ್ಯ ಸುಳ್ಳು ಸುದ್ದಿಗಳನ್ನು ಹೇಳಿಕೊಂಡರು. ಹೇಳಿಕೊಳ್ಳುತ್ತ ಅದಕ್ಕೆ ಮತ್ತೆ ಊರು ಪರವೂರುಗಳಲ್ಲಿ ನಡೆದ ಅನೇಕ ಘಟನೆಗಳು ಸೇರಿಕೊಂಡವು. ನಿಧಾನವಾಗಿ ಇಬ್ಬರಲ್ಲಿಯೂ ಸಣ್ಣಗೆ ಪ್ರತಿರೋಧ ಏರತೊಡಗಿತು.

ಸುರಭಿಗೆ ಯಾಕೋ ಸಲ್ಮಾ ಕಡೆಯಿಂದ ವಾಸನೆ ಬರತೊಡಗಿತು. ಏನು ಸುಡುಗಾಡು, ಏನು ತಿಂದು ಬಂದಿದ್ದಾಳೋ, ಸ್ನಾನ ಮಾಡದೆ ಎಷ್ಟು ದಿನಗಳಾಗಿದೆಯೋ, ಸೆಂಟ್ ಬೇರೆ ಕೇಡು. ಮುಂಚಿನಿಂದಲೂ ಇದೇ ಚಾಳಿಯವಳು ಎಂದುಕೊಂಡಳು. ಮುಂಚೆ ಯಾವತ್ತೂ ಹಾಗೆ ಅನಿಸದಿದ್ದ ಸುರಭಿ, ಮುಖ ತಿರುಗಿಸಿ ಕಿಟಿಕಿಯಾಚೆ ನೋಡತೊಡಗಿದಳು. ಅವಳು ಕತ್ತು ತಿರುಗಿಸಿದ ಭಂಗಿಯಿಂದ ಕೆರಳಿ ಸಲ್ಮಾ, "ನಾನುಂಟಲ್ಲ, ಬಸ್ಸಿನಲ್ಲಿ ಬಂದೆ ಎಂದರೆ ಇಡೀ ಸೀಟನ್ನೇ ಬುಕ್ ಮಾಡಿಬಿಡುವುದು. ಬದಿಯಲ್ಲಿ ಯಾರೂ ಬೇಡ ಅಂತ. ಈ ಸಲ ರಷ್ ಇತ್ತು. ಒಂದೇ ಒಂದು ಸೀಟು ಉಳಿದಿತ್ತು. ಹಾಗಾಗಿ ಸಿಕ್ಕಿಬಿದ್ದೆ,” ಎಂದು ಮಸೆದಳು.

ತುಸು ಹೊತ್ತು ಮೌನದ ಬಳಿಕ ಸಲ್ಮಾ, "ನೀನು ಹೇಳುವುದನ್ನು ಕೇಳಿದರೆ ಮುಸ್ಲಿಮರೆಲ್ಲ ಕೆಟ್ಟವರು ಅಂದುಕೋಬೇಕು..."

ಸುರಭಿಗೆ ರೇಗಿತು. ಈಚೆ ತಿರುಗಿದಳು. "ನಾನೆಲ್ಲಿ ಹಾಗೆಂದೆ ಮಾರಾಯ್ತಿ?"

"ಮತ್ತೆ! ಎಲ್ಲ ದೋಷ ನಮ್ಮದೇ ಎಂಬಂತೆ ಮಾತಾಡಿದೆ!"

"ಇದ್ದ ವಿಷಯ ಹೇಳಿದೆ. ಅದೂ ನೀನು ನಿನ್ನ ಮೊಮ್ಮಗನ ವಿಚಾರ ಹೇಳಿದೆಯಲ್ಲ, ಹಾಗಾಗಿ ನೆನಪಾಯ್ತು, ಹೇಳಿದೆ...”

"ಇವತ್ತು ಮಕ್ಕಳು ಕೂಡ ಹೀಗೆಲ್ಲ ಮಾತಾಡುವಂತಿಲ್ಲ ಅಂತ ಸುರುಮಾಡಿದವರು ಯಾರು, ನಾನೋ ನೀನೋ?"

"ನಾನೇನು ಸುಮ್ಮನೆ ಹೇಳಿದ್ದಲ್ಲವೇ, ಪೇಪರು ನೋಡು; ಗೂಂಡಾಗಿರಿ ಮಾಡುವುದು ಯಾರು, ಬೇಡದ್ದು ಮಾಡಿ ಸಿಕ್ಕಿಬೀಳುವವರು ಯಾರು ನೋಡು. ಹೆಚ್ಚಾಗಿ ನಿಮ್ಮವರೇ. ನಾನು ನಿನ್ನನ್ನು ಹೇಳುತ್ತಿಲ್ಲ. ನೀನು ಏನು, ನನಗೆ ಗೊತ್ತು...”

ಸಲ್ಮಾ, "ಏನು ಪೇಪರಿನಲ್ಲಿ ಬರುವುದು? ನೀವು ಲೆಕ್ಕಕ್ಕಿಡುವುದು ನಮ್ಮ ಹೆಸರು ಮಾತ್ರ. ನಿಮ್ಮವರಲ್ಲಿ ಯಾರೂ ಕಳ್ಳರು, ಅತ್ಯಾಚಾರಿಗಳೇ ಇಲ್ಲವೇ? ಸಿಕ್ಕಿಬಿದ್ದವರೇ ಇಲ್ಲವೇ? ಯಂಥಾ ಮಾತಾಡುತ್ತೀ? ನೀನು ಏನು, ನನಗೂ ಗೊತ್ತು ಬಿಡು...”

ಇದನ್ನೂ ಓದಿ : ಶತಪಥ | ಕಲ್ಲು ರಾಜಕುಮಾರನ ವರಿಸಿದವಳ ಕತೆ

"ನಿನ್ನ ಮಾತು ನೋಡಿದರೆ ತಪ್ಪೆಲ್ಲ ನಮ್ಮದೇ ಎಂಬಂತಿದೆ. ಈಗ ನೀವೆಲ್ಲ ಹಾಗೆಯೇ. ನಮ್ಮ ಮೇಲೆಯೇ ಗೂಬೆ ಕೂರಿಸುವುದು,” ಎಂದೂ, "ಅವತ್ತು ನಡೆದದ್ದೆಲ್ಲ ನೆನೆದರೆ ಒಂದು ಕ್ಷಣದಲ್ಲಿ ದೇವರು ಬಚಾವು ಮಾಡಿದ. ಏನೇ ಹೇಳು, ಅವತ್ತು ನಿಮ್ಮವರೇನು ಕಡಿಮೆ ಮಾಡಿದರೆನ್ನುತ್ತೀಯ? ನನ್ನ ಹತ್ತಿರ ಕೇಳು, ಅವರನ್ನೆಲ್ಲ ಸಾಲಾಗಿ ನಿಲ್ಲಿಸಿ ಗುಂಡು ಹೊಡೆಯಬೇಕು,” ಎಂಬರ್ಥದ ಮಾತುಗಳೂ ಇಬ್ಬರಲ್ಲಿಯೂ ಬಂದವು. ಅಂತೂ ಅವರಿಗೇ ತಿಳಿಯದಂತೆ ಇಬ್ಬರ ಕೈಯಲ್ಲಿಯೂ ಮಾತಿನ ಮೂಲಕವೇ ಕೋವಿಯೋ ಪಿಸ್ತೂಲೋ ಬರುತ್ತ ಇತ್ತು. ರೋಷ ಒಳಗಿಂದ ತಿರುಗುತ್ತ ಇತ್ತು. ಸಲ್ಮಾ ಸಲ್ಮಾ ಆಗಿರದೆ ಸುರಭಿ ಸುರಭಿ ಆಗಿರದೆ ಎರಡು ಬಣಗಳ ಪ್ರತಿನಿಧಿಗಳ ಹಾಗೆ ಆದರು. ಎಲ್ಲಿಂದಲೋ ಸುರುವಾಗಿದ್ದು ಎಲ್ಲಿಗೋ ತಲುಪುತ್ತ ಇತ್ತು. ಕ್ಲಾಸಿನಲ್ಲಿ ಒಟ್ಟಿಗೇ ಕುಳಿತು ಕಲಿತು, ಸ್ಲೇಟು-ಬಳಪಕ್ಕಾಗಿ ಜಗಳವಾಡಿ ಮಾತು ಬಿಟ್ಟ ಇಬ್ಬರು ಹುಡುಗಿಯರು ಯಾವ ಮಾಯಕದಲ್ಲಿಯೋ ಮಾಯವಾಗಿ ಇಲ್ಲಿ ಬೇರೆಯೇ ಇಬ್ಬರು ದೊಡ್ಡವರು ಕುಳಿತಿದ್ದರು. ಸಾಗಿಹೋದ ಕಾಲದ ಪದಘಾತಗಳು ಅವರನ್ನು ಸುಳಿವೇ ಕೊಡದೆ ಬೇರೆಯೇ ತೆರನ ಜಗಳದ ಮೂರ್ತಿಯನ್ನಾಗಿ ಕಡೆದಿದ್ದುವು.

ಸುರಭಿ ಕಿಟಿಕಿಯ ಬಾಗಿಲನ್ನು ಸರಕ್ಕನೆ ಎಳೆದು ಮುಚ್ಚಿಕೊಂಡಳು. ಸಲ್ಮಾ ತೆರೆ ಎಂದು ಕೇಳಿಕೊಳ್ಳದೆ ಬ್ಯಾಗಿನಿಂದ ಪುಟ್ಟ ಬೀಸಣಿಕೆ ತೆಗೆದು ಭರಭರನೆ ಗಾಳಿ ಬೀಸಿಕೊಂಡಳು. ಗಾಳಿ ತನಗೆ ಬಂದು ಬಡಿದಾಗ ಬೇಕೆಂದೇ ಎಂಬಂತೆ ಸುರಭಿ ತನ್ನ ಮೂಗಿನ ಅಡ್ಡ ಕೈ ಬೀಸಿ ಗಾಳಿ ಓಡಿಸಿಕೊಂಡಳು.

ಪಯಣ ಮುಗಿಯುವ ಹೊತ್ತಿಗೆ ಇಬ್ಬರೂ ಮತ್ತೆ ಎನಿಮಿಗಳಾಗಿ ಮಾತು ನಿಲ್ಲಿಸಿ ಮುಗುಮ್ಮಾಗಿ ಕುಳಿತಿದ್ದರು. ಚಿನ್ನದಂಥ ಅವಕಾಶವೊಂದು ಅವರ ನಡುವೆ ಅನಾಥವಾಗಿ ಅತ್ತ-ಇತ್ತ ತಿರುಗುತಿದ್ದಂತೆ ಊರು ಬಂತು. ಇಬ್ಬರೂ ವಿದಾಯ ಹೇಳದೆಯೇ ಬಿಗಿದ ಮುಖದಲ್ಲಿ ತಮ್ಮ-ತಮ್ಮ ಬ್ಯಾಗು ಎತ್ತಿಕೊಂಡು ಆಟೋ ಹತ್ತಿ ಮರೆಯಾದರು.

ಇನ್ನು ಎಂದಿಗೂ ಅವರು ಭೇಟಿಯಾಗಲಾರರು, ಪರಸ್ಪರ ಮಾತಾಡಲಾರರು- ಎನ್ನಲೇ?

ಅಹ್ಞ... ಹಾಗೆ ಎನ್ನದಿರೋಣ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More