ಇಲಾಜು | ಆಧಾರ್ ಅಯೋಮಯ ಆಗಿರುವಾಗಲೇ ಬರುತ್ತಿದೆ ಮತ್ತೊಂದು ಅನಾರೋಗ್ಯ ಯೋಜನೆ

ನೀತಿ ಆಯೋಗವು ‘ರಾಷ್ಟ್ರೀಯ ಆರೋಗ್ಯ ಬಣವೆ’ ಎಂಬ ಹೊಸ ಯೋಜನೆಯ ಕರಡು ಪ್ರಕಟಿಸಿದ್ದು, ‘ಆಯುಷ್ಮಾನ್ ಭಾರತ’ಕ್ಕೆ ಇದು ಬೆನ್ನುಲುಬಾಗಲಿದೆ ಎನ್ನಲಾಗಿದೆ. ಆದರೆ, ವಾಸ್ತವದಲ್ಲಿ ‘ಆಯುಷ್ಮಾನ್ ಭಾರತ’ದ ಬೆನ್ನೇರಿ ಎಲ್ಲರ ಆರೋಗ್ಯ ಮಾಹಿತಿ ಸಂಗ್ರಹಿಸುವ ಯೋಜನೆ ಇದು!

ಆಧಾರ್ ಯೋಜನೆಗೆ ದೇಶದ ಸಂಸತ್ತು ಇನ್ನೂ ಪೂರ್ಣ ಅನುಮೋದನೆ ಕೊಟ್ಟಿಲ್ಲ; ಅದರ ಸಾಂವಿಧಾನಿಕ, ನ್ಯಾಯಿಕ ಸಿಂಧುತ್ವದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಇನ್ನೂ ಅಂತಿಮ ತೀರ್ಪು ನೀಡಿಲ್ಲ. ಹಾಗಿದ್ದರೂ, ಕೇಂದ್ರ ಸರಕಾರವು ಒಂದರ ಹಿಂದೊಂದರಂತೆ ಆಧಾರ್ ಆಧಾರಿತ ಯೋಜನೆಗಳನ್ನು ಘೋಷಿಸುತ್ತಲೇ ಇದೆ. ಇದೀಗ ನೀತಿ ಆಯೋಗವು ‘ರಾಷ್ಟ್ರೀಯ ಆರೋಗ್ಯ ಬಣವೆ’ ಎಂಬ ಹೊಸ ಯೋಜನೆಯ ಕರಡನ್ನು ಪ್ರಕಟಿಸಿದೆ. ಐವತ್ತು ಕೋಟಿ ಭಾರತೀಯರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಿದೆ ಎನ್ನಲಾಗುತ್ತಿರುವ ‘ಆಯುಷ್ಮಾನ್ ಭಾರತ’ ಯೋಜನೆಗೆ ಇದು ಬೆನ್ನುಲುಬಾಗಲಿದೆ ಎಂದು ಹೇಳಲಾಗಿದೆ. ಆದರೆ, ವಾಸ್ತವದಲ್ಲಿ ಇದು ಆಯುಷ್ಮಾನ್ ಭಾರತದ ಬೆನ್ನೇರಿ ಕೋಟಿಗಟ್ಟಲೆ ಭಾರತೀಯರ ಆರೋಗ್ಯ ಮಾಹಿತಿಯನ್ನು ಮತ್ತು ಎಲ್ಲ ವೈದ್ಯಕೀಯ ಸಂಸ್ಥೆಗಳ ವಿವರಗಳನ್ನು ಪಡೆದುಕೊಳ್ಳುವ ಯೋಜನೆಯಾಗಿದೆ; ಮತ್ತು ಆ ಮಾಹಿತಿಯೆಲ್ಲವನ್ನೂ ದೈತ್ಯ ಖಾಸಗಿ ಕಂಪನಿಗಳಿಗೆ, ವಿಮಾ ಕಂಪನಿಗಳಿಗೆ, ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಸಾಧನಗಳನ್ನು ಬೆಳೆಸಬಯಸಿರುವವರಿಗೆ ದಾಟಿಸುವ ಉಪಾಯವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗೆ ವಿಶೇಷ ಮಹತ್ವವಿದೆ, ವಿಪರೀತ ಬೇಡಿಕೆಯೂ ಇದೆ. ಯಾರಿಗೆ ಯಾವ ರೋಗ ಇದೆ ಎನ್ನುವುದು ಗೊತ್ತಾಗಿಬಿಟ್ಟರೆ ಅವರನ್ನು ಸತಾಯಿಸಬಹುದು, ವಿಮೆಯನ್ನು ನಿರಾಕರಿಸಬಹುದು ಅಥವಾ ಕಂತನ್ನು ಏರಿಸಬಹುದು, ಸಾಲವನ್ನು ತಡೆಹಿಡಿಯಬಹುದು ಅಥವಾ ಆಸ್ತಿಯನ್ನು ಲಪಟಾಯಿಸುವ ಯೋಜನೆಯನ್ನೂ ಹಾಕಿಕೊಳ್ಳಬಹುದು. ಆದ್ದರಿಂದಲೇ, ಭಾರತದ ಪ್ರಜೆಗಳ ಆರೋಗ್ಯ ಮಾಹಿತಿಯನ್ನು ಪಡೆಯುವುದಕ್ಕೆ ಹಲವರು ಉತ್ಸುಕರಾಗಿದ್ದಾರೆ, ಆಧಾರ್ ಬೆರಳಚ್ಚಿಗೆ ಅದನ್ನು ಜೋಡಿಸಿ ಇನ್ನಷ್ಟು ನಿಖರಗೊಳಿಸಲು ಕಾತರರಾಗಿದ್ದಾರೆ.

ಆಧಾರ್ ಆರಂಭಗೊಂಡಾಗಲೇ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವ ಮಹಾ ಯೋಜನೆಯೂ ರೂಪ ತಳೆದಿದೆ; ಆಧಾರ್ ಪ್ರಾಧಿಕಾರದ ಮೊದಲ ಅಧ್ಯಕ್ಷ ನಂದನ್ ನಿಲೇಕಣಿಯವರು ಅಂದಿನಿಂದಲೂ ಅದರ ಬೆನ್ನಿಗಿದ್ದಾರೆ. ಈ ಯೋಜನೆಗೆ ಪುಷ್ಟಿ ನೀಡಲೆಂದು 2016ರ ಫೆಬ್ರವರಿಯಲ್ಲಿ ಕೇಂದ್ರ ಸರಕಾರವು ಆರೋಗ್ಯದ ಮಿಂದಾಖಲೆಗಳ ಮಾನದಂಡಗಳನ್ನೂ, ಆಧಾರ್‌ ಜೋಡಣೆಯ ಪ್ರಸ್ತಾವವನ್ನೂ ಪ್ರಕಟಿಸಿದೆ. ಬಳಿಕ, 2017ರ ಮಾರ್ಚ್‌ನಲ್ಲಿ ಪ್ರಕಟಿಸಿದ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ಅದಕ್ಕೆ ಇನ್ನಷ್ಟು ತುಂಬಲಾಗಿದೆ: ರಾಷ್ಟ್ರೀಯ ಗಣಕೀಕೃತ ಆರೋಗ್ಯ ಪ್ರಾಧಿಕಾರವನ್ನು ರಚಿಸುವುದು; ಆಸ್ಪತ್ರೆಗಳಿಂದ, ವೈದ್ಯರಿಂದ, ಧರಿಸುವ ಸಾಧನಗಳು ಮತ್ತು ಬಳಸುವ ಫೋನ್‌ಗಳಿಂದ, ಹೀಗೆ ಎಲ್ಲೆಡೆಗಳಿಂದ ದೇಶದ ಎಲ್ಲ ನಾಗರಿಕರ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವುದು; ಇವುಗಳನ್ನು ಬಳಸಿ ಸಮಗ್ರ ಆರೋಗ್ಯ ಮಾಹಿತಿ ಜಾಲವನ್ನು ಸ್ಥಾಪಿಸುವುದು; ಮತ್ತು ಮಾಹಿತಿ ಸಂಗ್ರಹಣೆಯಲ್ಲೂ, ಅದರ ವಿಶ್ಲೇಷಣೆ ಹಾಗೂ ಹಂಚಿಕೆಗಳಲ್ಲೂ ಖಾಸಗಿ ವಲಯವನ್ನು ಒಳಗೊಳ್ಳುವುದು ಈ ಆರೋಗ್ಯ ನೀತಿಯೊಳಗೆ ಅಡಕವಾಗಿದೆ. ಇಂತಹ ಅಡಿಪಾಯದ ಮೇಲೆ ಈಗ ರಾಷ್ಟ್ರೀಯ ಆರೋಗ್ಯ ಬಣವೆಯ ಕರಡು ಮೇಲೆದ್ದಿದೆ.

ಈ ಕರಡು ಬಣವೆಯ ಹೊದಿಕೆಯನ್ನು ಸರಿಸಿದರೆ ನಡುಕವೇ ಹುಟ್ಟುತ್ತದೆ. ಮೊದಲ ಪುಟದಲ್ಲಿ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿನೋದ್ ಪೌಲ್ ಅವರು ವಿಚ್ಛಿದ್ರತೆಯನ್ನು ಸಂಭ್ರಮಿಸಿರುವುದು ಕಾಣುತ್ತದೆ. ರಾಷ್ಟ್ರೀಯ ಆರೋಗ್ಯ ಬಣವೆಯು ದೂರದರ್ಶಿತ್ವದ, ಗಣಕೀಯ ಚೌಕಟ್ಟಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದನ್ನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಬಳಸಬಹುದೆಂದೂ, ಕ್ಷಿಪ್ರವಾದ, ವಿಚ್ಛಿದ್ರಕಾರಿಯಾದ ಬದಲಾವಣೆಗಳನ್ನೂ, ಅನಿರೀಕ್ಷಿತವಾದ ತಿರುವುಗಳನ್ನೂ ಕಾಣಲಿರುವ (ಆರೋಗ್ಯ) ಕ್ಷೇತ್ರಕ್ಕೆ ಅದು ಭವಿಷ್ಯದ ಮಾಹಿತಿ ತಂತ್ರಜ್ಞಾನದ ಮಾರ್ಗೋಪಾಯಗಳನ್ನು ಒದಗಿಸಲಿದೆ ಎಂದೂ ಪೌಲ್ ಬರೆದಿದ್ದಾರೆ. ಇದರರ್ಥವೇನೆಂದರೆ, ದೇಶದ ಎಲ್ಲ ಸಾರ್ವಜನಿಕ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಾಹಿತಿ ಜೊತೆಗೆ ಎಲ್ಲ ನಾಗರಿಕರ ಮಾಹಿತಿಯೂ ಬಣವೆಯೊಳಗೆ ಸೇರಲಿವೆ; ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಬಹುದಾಗಿದೆ, ಭವಿಷ್ಯದ ಮಾಹಿತಿ ತಂತ್ರಜ್ಞಾನವನ್ನು ಕಟ್ಟುವವರಿಗೆ ಒಪ್ಪಿಸಬಹುದಾಗಿದೆ, ಆ ಮೂಲಕ, ಆರೋಗ್ಯ ಕ್ಷೇತ್ರವನ್ನು ಛಿದ್ರಗೊಳಿಸಿ, ಖಾಸಗಿ ದೈತ್ಯರ ಕೈಗಳಿಗೊಪ್ಪಿಸಿ, ಅನಿರೀಕ್ಷಿತವಾದ ತಿರುವುಗಳನ್ನು ಉಂಟುಮಾಡಬಹುದಾಗಿದೆ.

ಕರಡಿನ ಎರಡನೇ ಪುಟದಲ್ಲಿ ನೀತಿ ಆಯೋಗದ ಮುಖ್ಯ ಆಡಳಿತಾಧಿಕಾರಿ ಅಮಿತಾಭ್ ಕಾಂತ್ ಅವರ ಯೋಚನೆಗಳಿವೆ. ಪ್ರಸ್ತಾವಿತ ಆರೋಗ್ಯ ಬಣವೆಯು ಶಕ್ತಿಶಾಲಿ ಸಾಧನ-ವಿಧಾನಗಳನ್ನು ಬಳಸಿ ಅಗಾಧ ಮಾಹಿತಿಯ ವಿಶ್ಲೇಷಣೆ, ಯಂತ್ರ ಕಲಿಕೆ, ಕೃತಕ ಬುದ್ಧಿಮತ್ತೆ, ಮತ್ತು ಮುಂದಕ್ಕೆ, ನೀತಿ ನಿರೂಪಣೆ ಮಾಡಬಲ್ಲ ಅತ್ಯಾಧುನಿಕ ಗಣಕೀಯ ಭಾಷೆಗಳನ್ನು ಅಭಿವೃದ್ಧಿಪಡಿಸುವವರೆಗೆ ಬೆಳೆಯಲಿದೆ ಎಂದೂ, ಆ ಮೂಲಕ, ಜನತೆ, ಹಣ ಮತ್ತು ಮಾಹಿತಿಗಳ ಹರಿವನ್ನು ಮರುವಿನ್ಯಾಸಗೊಳಿಸಿ, ಎಲ್ಲ ರಾಜ್ಯಗಳಿಗೆ ಮತ್ತು ಯೋಜನೆಗಳಿಗೆ ಆರೋಗ್ಯದ ವಿಚಾರದಲ್ಲಿ ಸಮಗ್ರ ತಳಹದಿ ಒದಗಿಸಿ, ಆರೋಗ್ಯ ರಕ್ಷಣೆಯ ವೆಚ್ಚವನ್ನು ಗಣನೀಯವಾಗಿ ಇಳಿಸಿ, ನಗದುರಹಿತವಾಗಿಸಿ ಆರೋಗ್ಯ ಸುಧಾರಣೆಗೆ ನೆರವಾಗಲಿದೆ ಎಂದೂ ಕಾಂತ್ ಬರೆದಿದ್ದಾರೆ. ಈ ಅತ್ಯಾಕರ್ಷಕ ಪದಸರಣಿಯ ಹಿಂದೆ ಭಯಾನಕ ಯೋಜನೆಯೇ ಅಡಗಿರುವಂತೆ ಕಾಣುತ್ತದೆ. ಎಲ್ಲೆಡೆಗಳಿಂದ ಎಳೆದು ಪಡೆಯುವ ಮಾಹಿತಿಯನ್ನು ಯಂತ್ರಕಲಿಕೆಯ ಕೃತಕ ಬುದ್ಧಿಮತ್ತೆಯಿಂದ ವಿಶ್ಲೇಷಿಸಿ, ಯಂತ್ರಗಳಿಂದಲೇ ನೀತಿ ನಿರೂಪಣೆ ಮಾಡಿಸಿ, ಸಂಸದೀಯ ಪ್ರಜಾಪ್ರಭುತ್ವವನ್ನು ಧ್ವಂಸಗೊಳಿಸುವ ತೀರಾ ಅಮಾನವೀಯ ಯೋಜನೆ ಇದಾಗಿರುವಂತೆ ಕಾಣುತ್ತದೆ.

ಆರೋಗ್ಯ ಬಣವೆಯು ಭಾರತ ಬಣವೆಯೆಂಬ ಯೋಜನೆಯ ಭಾಗವೆಂದು ಬಹಳ ಹೆಮ್ಮೆಯಿಂದ ಈ ಕರಡಿನಲ್ಲಿ ಹೇಳಲಾಗಿದೆ. ಈ ಭಾರತ ಬಣವೆ ಎಂಬುದು ಇದ್ದುದನ್ನೆಲ್ಲ ಛಿದ್ರಗೊಳಿಸಿ ಇಲ್ಲವಾಗಿಸುವ ಬಹುದೊಡ್ಡ ಯೋಜನೆಯಂತಿದೆ. ಈ ಭಾರತ ಬಣವೆಯೊಳಗೆ ಒಪ್ಪಿಗೆ ಪದರ, ನಗದುರಹಿತ ಪದರ, ಕಾಗದರಹಿತ ಪದರ, ಉಪಸ್ಥಿತಿರಹಿತ ಪದರ ಎಂಬ ನಾಲ್ಕು ‘ಪದರ’ಗಳಿವೆ ಎಂದು ಹೇಳಲಾಗಿದೆ. ಎಲ್ಲದಕ್ಕೂ ಬೆರಳಚ್ಚು ಒತ್ತಿ ಒಪ್ಪಿಗೆ ನೀಡುವುದು, ಎಲ್ಲ ವಹಿವಾಟನ್ನೂ ನಗದಿಲ್ಲದೆ ನಡೆಸುವುದು, ಎಲ್ಲ ದಾಖಲೆಗಳನ್ನೂ ಕಾಗದವಿಲ್ಲದೆಯೆ ನಿರ್ವಹಿಸುವುದು ಮತ್ತು ಮಸಿ ಇಲ್ಲದೆಯೇ ಸಹಿಯೊತ್ತುವುದು, ವ್ಯಕ್ತಿಯ ಬದಲು ಬೆರಳೊತ್ತುವ ಫೋನ್ ಇತ್ಯಾದಿ ಉಪಕರಣಗಳ ಮೂಲಕವೇ ಎಲ್ಲ ಕೆಲಸಗಳನ್ನೂ ಮಾಡಿಸುವುದು ಈ ಭಾರತ ಬಣವೆಯಡಿ ಸಿದ್ಧಗೊಳ್ಳುತ್ತಿರುವ ತಂತ್ರಾಂಶಗಳ ಉದ್ದೇಶವಾಗಿದೆ.

ಇದನ್ನೂ ಓದಿ : ಇಲಾಜು | ವೈಜ್ಞಾನಿಕ ಮಾರ್ಗದ ಬದಲು ಅನ್ಯಾಯದ ಹಾದಿ ಹಿಡಿದ ವೈದ್ಯಕೀಯ ಸಂಸ್ಥೆಗಳು

ಇರುವುದನ್ನೆಲ್ಲ ಇಲ್ಲವಾಗಿಸುವ ಈ ಭಾರತ ಬಣವೆಯೊಳಗೆ ಆರೋಗ್ಯ ಬಣವೆಯೂ ಒಂದು ಪದರವಾಗಿ, ಅದರೊಳಗೂ ಒಂದಷ್ಟು ಪದರಗಳಿರಲಿವೆ. ಆರೋಗ್ಯ ಸೇವೆಗಳನ್ನು ಒದಗಿಸುವವರು ಮತ್ತು ಪಡೆಯುವವರೆಲ್ಲರ ಸಕಲ ವಿವರಗಳು, ಆರೋಗ್ಯ ಸೇವೆಗಳ ನೀಡಿಕೆ ಮತ್ತು ಅದರ ಶುಲ್ಕ ಪಾವತಿಯ ವಿವರಗಳು ಮತ್ತು ಅವುಗಳಲ್ಲಾಗುವ ಮೋಸಗಳ ಪತ್ತೆ, ವ್ಯಕ್ತಿ ಮತ್ತು ಸಂಶೋಧನಾ ಸಂಸ್ಥೆಗಳು ಪಡೆದುಕೊಳ್ಳಬಹುದಾದ ವೈಯಕ್ತಿಕ ಆರೋಗ್ಯ ದಾಖಲೆಗಳು, ಈ ಎಲ್ಲ ಮಾಹಿತಿಯನ್ನು ವಿಶ್ಲೇಷಿಸುವ ಮತ್ತು ನೀತಿ ನಿರೂಪಣೆಗೆ ಬಳಸಿಕೊಳ್ಳುವ ತಂತ್ರಗಳು, ಇವೆಲ್ಲಕ್ಕೂ ಅಗತ್ಯವಾದ ನೆರವನ್ನೊದಗಿಸುವ ವ್ಯವಸ್ಥೆಗಳು ಈ ಆರೋಗ್ಯ ಬಣವೆಯ ಪದರಗಳಾಗಿರಲಿವೆ. ಅಂದರೆ, ದೇಶದ ಪ್ರತಿಯೊಬ್ಬನ ದೈಹಿಕ ವಿವರಗಳನ್ನು ಸಂಗ್ರಹಿಸಿ, ಎಲ್ಲಿ ಹೋದರೂ ಅಲ್ಲಿ ಬೆಂಬತ್ತಿ, ಮೋಸಗಾರನೆಂದು ಸಂಶಯಿಸಿ, ಆ ಮಾಹಿತಿಯನ್ನು ವಿಮಾ ಕಂಪನಿಗಳಿಗೂ ಸಂಶೋಧನಾ ಸಂಸ್ಥೆಗಳಿಗೂ ರವಾನಿಸಿ, ಆರೋಗ್ಯ ಸೇವೆಗಳನ್ನು ಒದಗಿಸುವ ಅಥವಾ ನಿರಾಕರಿಸುವ ಸಂಪೂರ್ಣ ಅಧಿಕಾರವು ಈ ಯಂತ್ರಗಳ ಮೂಲಕ ಸರಕಾರ ಹಾಗೂ ವಿಮಾ ಕಂಪನಿಗಳದ್ದಾಗಲಿದೆ.

ಸರಕಾರವನ್ನು ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಹಿಡಿದು ಹಿಂಸಿಸುವ ಶಕ್ತಿಯಾಗಿ, ಖಾಸಗಿ ಶಕ್ತಿಗಳಿಗೆ ಒದಗಿಸುವ ದಲ್ಲಾಳಿಯಾಗಿ ಬೆಳೆಸುವ ಭಾರತ ಬಣವೆಯ ಒಳಗೆ ಯಾರಿದ್ದಾರೆ ಎನ್ನುವುದು ನಿಗೂಢವಾಗಿಯೇ ಇದೆ. ಎಲ್ಲ ದೇಶವಾಸಿಗಳಿಂದ ಆಧಾರ್ ಆಧಾರಿತ ವೈಯಕ್ತಿಕ ಮಾಹಿತಿಯನ್ನು ಅಸಾಂವಿಧಾನಿಕವಾಗಿ ಪಡೆಯಲು ಯತ್ನಿಸುತ್ತಿರುವ ಸರಕಾರವು, ಭಾರತ ಬಣವೆಯ ಹಿಂದಿರುವ ವ್ಯಕ್ತಿಗಳ ಗೋಫ್ಯತೆಯನ್ನು ರಕ್ಷಿಸುತ್ತಿರುವುದು ಇಡೀ ಯೋಜನೆಯ ನಿಜರೂಪವನ್ನು ತೋರಿಸುತ್ತದೆ. ಆಧಾರ್ ಯೋಜನೆಯ ಆರಂಭದ ವರ್ಷಗಳಲ್ಲಿ ಅದಕ್ಕೆ ನೇತೃತ್ವ ನೀಡಿದ್ದ ಮಹಾನ್ ತಂತ್ರಜ್ಞರೇ ಆಧಾರ್ ಆಧಾರಿತ ಮಾಹಿತಿಯ ಸಂಗ್ರಹಣೆ ಹಾಗೂ ವಿಶ್ಲೇಷಣೆಗೆ ಯಂತ್ರಕಲಿಕೆಯ ತಂತ್ರಗಳನ್ನು ಹೆಣೆಯುವ ಬಣವೆಗಳೊಳಗೆ ಅಡಗಿರುವ ಬಗ್ಗೆ ಮಾಧ್ಯಮಗಳಲ್ಲಿ ಊಹಾಪೋಹ ಇರುವುದು ಇಡೀ ವ್ಯವಸ್ಥೆಯಲ್ಲಿರುವ ಅಪಾಯವನ್ನು ತೋರಿಸುತ್ತದೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More