ಶತಪಥ | ಮುರಿಯಲು ಬಾರದ, ಮೀರಲು ಬಾರದ ಮರ್ಜೀ ಮಾನವರು

ನಮ್ಮ ಪುರಾತನರು ಎಷ್ಟು ಚಾಣಾಕ್ಷರಾಗಿದ್ದರು ಅಂತ ಅವರು ಹೇಳುತಿದ್ದ ಕಟ್ಟುಕತೆಗಳನ್ನು ನೆನೆದಾಗ ಅಚ್ಚರಿಯಾಗುತ್ತದೆ. ಇಂದಿಗೂ ಯಾವುದೋ ಘಟನೆ ನಡೆದಾಗ ಸಣ್ಣದಿನಲ್ಲಿ ಸುಮ್ಮನೆ ಅಂತ ಕೇಳಿದ ಕತೆ ನೆನಪಾಗುತ್ತವೆ. ಹಾಗೆ ನನಗೆ ಇತ್ತೀಚೆಗೆ ನಡೆದ ಒಂದು ಘಟನೆಯಿಂದ ಈ ಕತೆ ನೆನಪಾಯಿತು

ನಮ್ಮ ಪುರಾತನರು ಎಷ್ಟು ಚಾಣಾಕ್ಷರಾಗಿದ್ದರು ಅಂತ ಅವರು ಕಟ್ಟಿಕಟ್ಟಿ ಹೇಳುತಿದ್ದ ಕಟ್ಟುಕತೆಗಳನ್ನು ನೆನೆದಾಗ ಅಚ್ಚರಿಯಾಗುತ್ತದೆ. ಇಂದಿಗೂ ಯಾವುದೋ ಒಂದು ಘಟನೆ ನಡೆದಾಗ ಸಣ್ಣದಿನಲ್ಲಿ ಸುಮ್ಮನೆ ಕತೆ ಅಂತ ಕೇಳಿದ ಕತೆಗಳು ನೆನಪಾಗುತ್ತವೆ. ಹಾಗೆ ನನಗೆ ಇತ್ತೀಚೆಗೆ ನಡೆದ ಒಂದು ಘಟನೆಯಿಂದ ಈ ಕತೆ ನೆನಪಾಯಿತು. ಇದೊಂದು ಮಕ್ಕಳ ಕತೆಯೂ ಹೌದು, ವೈನೋದಿಕ ಕತೆಯೂ ಹೌದು. ಒಟ್ಟಾರೆ ನನಗೆ ಕರೆಕ್ಟಾಗಿ ಈಗ ಯಾಕೆ ಇದು ನೆನಪಾಯಿತು? ಅದನ್ನು ಮುಂದೆ ಹೇಳಬೇಕೆಂದು ಕಂಡಲ್ಲಿ, ಹೇಳುವೆ. ಈಗ ಕತೆಯ ಸಾರಾಂಶಕ್ಕೆ ಬರುವೆ.

ಒಬ್ಬ ರಾಜನಿದ್ದ. ಆತನಿಗೆ ಒಮ್ಮೆ ತನ್ನ ಪ್ರಜೆಗಳೆಲ್ಲ ಸಂಗೀತ ಕಲಿಯಬೇಕು ಅಂತ ಹಂಬಲ ಉಂಟಾಯಿತು. ಕಲಿಯದಿದ್ದವರಿಗೆ ಕಠಿಣ ಶಿಕ್ಷೆ ಬೇರೆ ಇತ್ತು. ಅವರಿಗೆ ಕಲಿಸಲು ಸಂಗೀತ ಕಲಿಸುವವರ ದಂಡೇ ತಯಾರಾಯಿತು. ಸರಿ, ಮನೆಮಂದಿ ಎಲ್ಲರೂ ಊರಿಗೆ ಊರೇ ಮಕ್ಕಳು, ದೊಡ್ಡವರು ಎನ್ನದೆ ಸಂಗೀತ ಕಲಿಯಲು ತೊಡಗಿದರು. ಅವರವರ ಕಂಠಕ್ಕೆ ತಕ್ಕಂತೆ ಹೇಗೋ ಕಲಿಕೆ ನಿಭಾಯಿಸಿದರು. ಇಲ್ಲಿಯವರೆಗೆ ಎಲ್ಲ ಸರಿಯೇ. ಸಂಗೀತವನ್ನು ಪ್ರೀತಿಸುವ ದೊರೆಗಳು ಎಷ್ಟಿದ್ದಾರೆ? ಇವನೊಬ್ಬ ಅಪರೂಪದವ, ರಾಜ್ಯಕ್ಕೆ ರಾಜ್ಯವೇ ಸಂಗೀತಮಯ ಮಾಡಿದ. ಇವನ ಸಾಧನೆ ಆಚಂದ್ರಾರ್ಕವಾಗಿ ಉಳಿಯುತ್ತದೆ ಅಂತೆಲ್ಲ ಜನ ಮೆಚ್ಚಿ-ಮೆಚ್ಚಿ ಕೊಂಡಾಡಿದರು.

ಆದರೆ, ಒಂದು ದಿನ ರಾಜನಿಗೆ ಇನ್ನೊಂದೇ ಆಸೆ ಮೂಡಿತು. ಅದೆಂದರೆ, ಹೇಗೂ ತನ್ನ ಪ್ರಜೆಗಳಿಗೆ ಸಂಗೀತ ಗೊತ್ತಿದೆ, ಅದನ್ನು ಬದುಕಿನಲ್ಲಿ ಅನ್ವಯಿಸಬೇಕು. ಹೇಗೆಂದರೆ, ಇನ್ನು ಮೇಲೆ ಅವರು ಪರಸ್ಪರ ಸಂಗೀತದಲ್ಲಿಯೇ ಸಂಭಾಷಿಸಬೇಕು. ರಾಜನ ಆಸ್ಥಾನಕ್ಕೆ ದೂರು ತರುವವರೂ ಸಂಗೀತ ರೂಪದಲ್ಲಿಯೇ ದೂರನ್ನು ಹೇಳಬೇಕು. ಹಾಗೆ ಮಾಡದೆ ಇದ್ದವರಿಗೆ ಕಠಿಣ ಶಿಕ್ಷೆ ಕಾದಿದೆ ಅಂತ ಡಂಗುರ ಹೊಡೆಸಿದ. ಸರಿ, ರಾಜ ಹೇಳಿದ ಅಂದಮೇಲೆ ಅಲ್ಲವೆನ್ನಲುಂಟೇ? ಅಲ್ಲವೆಂದ ಮಂತ್ರಿಯ ಮಾತು ಆತನಾದರೂ ಕೇಳುವವನೇ? ಜನರೂ ಇದನ್ನು ಒಪ್ಪಿ ಸಂಗೀತ ರೂಪದಲ್ಲಿಯೇ ಮಾತಾಡತೊಡಗಿದರು. ಒಬ್ಬೊಬ್ಬರ ಕಂಠ ಒಂದೊಂದು ತರಹ, ಒಬ್ಬೊಬ್ಬರ ಕಲಿಕೆ ಒಂದೊಂದು ತರಹ, ಒಬ್ಬರದು ಸ್ವರ, ಮತ್ತೊಬ್ಬರದು ಅಪಸ್ವರ. ಆದರೇನು, ರಾಜನ ಆಜ್ಞೆಯ ಪರಿಪಾಲನೆ ಎಂದರೆ ಪರಿಪಾಲನೆ. ಕೈ ಹಾರಿಸುತ್ತ ಆಲಾಪಿಸುತ್ತ ಅವರು ಮಾತಾಡುವಾಗ ಕೇಳುಗರಿಗೆ ಅವರವರ ಧ್ವನಿಯ ಪ್ರಕಾರ ಕರ್ಕಶವಾದರೂ ವಿಧಿಯಿಲ್ಲದೆ ಸಹಿಸಿದರು. ಸಂಗೀತಕ್ರಮದಲ್ಲಿ ಮಾತಾಡತೊಡಗಿದ್ದರಿಂದ ಒಂದೊಂದು ವಾಕ್ಯವನ್ನು ಹೇಳಿ ಮುಗಿಸಲು ಬಹಳ ಹೊತ್ತು ಹಿಡಿಯುತಿತ್ತು. ಮತ್ತೆ ಮಾತಿಗೆ ತಕ್ಕ ಪ್ರತಿಮಾತಿಗೂ ಅಷ್ಟೇ. ‘ಆಆಆ...’ ಅಂತ ಆಲಾಪನೆಯೊಂದಿಗೆ ಮಾತು ಸುರುವಾಗುತಿತ್ತು; ಮುಗಿಯುತಿತ್ತು. “ಅವನು ಸಂತೆಗೆ ಹೋದ,” ಎನ್ನಲೂ ಒಂದಷ್ಟು ನಿಮಿಷ ಬೇಕಾಯಿತು. ಏನೇ ಆದರೂ ಅದು ಆ ರಾಜ್ಯದ ಶಿಷ್ಟಾಚಾರದ ಪಟ್ಟಿಗೆ ಸೇರಿದ್ದಲ್ಲವೇ? ಅಂತೆಯೇ ಚ್ಯುತಿಯಿಲ್ಲದೆ ಎಲ್ಲವೂ ಸಾಗತೊಡಗಿತು.

ಒಮ್ಮೆ ಏನಾಯಿತು ಅಂದರೆ, ರಾಜ್ಯದ ಆಹಾರ ದಾಸ್ತಾನು ಮಳಿಗೆಗೆ ಬೆಂಕಿ ಬಿತ್ತು. ಹೇಗೆ, ಏನು ಎಂಬುದೆಲ್ಲ ಒತ್ತಟ್ಟಿಗಿರಲಿ. ಇಂಥ ವಿಚಾರ ಏನಿದ್ದರೂ ಮೊದಲು ರಾಜಧಾನಿಗೆ ತಲುಪಬೇಕು. ರಾಜನವರೆಗೆ ವಿಷಯ ತಲುಪಿ ಆತನ ಆಜ್ಞೆಪ್ರಕಾರ ಮಂತ್ರಿಯು ಕಾರ್ಯೋನ್ಮುಖನಾಗಿ ಮುಂದಿನ ಕಾರ್ಯ ನಡೆಸಬೇಕು- ಇದು ಅಲ್ಲಿನ ಶಿಷ್ಟಾಚಾರ. ವಿಧಿಯಿಲ್ಲದೆ ಪ್ರಜೆಗಳು ಒಬ್ಬರಿಂದ ಒಬ್ಬರಿಗೆ ಸುದ್ದಿ ತಿಳಿಸಲಾರಂಭಿಸಿದರು: "ರಾಜ್ಯದ ಆಹಾರ ದಾಸ್ತಾನಿಗೇ ಬೆಂಕಿ ಬಿದ್ದಿದೇ... ಏನು ಮಾಡಬೇಕೂ..." ಎಂದು ರಾಗವಾಗಿ ಹೇಳುತ್ತ, ತಕ್ಕನಾಗಿ ತಾಳವನ್ನೂ ಹಾಕುತ್ತ ಸುದ್ದಿ ದಾಟಿಸಲಾರಂಭಿಸಿದರು. ಸುದ್ದಿಯು ರಾಗ ಮತ್ತು ತಾಳದೊಂದಿಗೆ ದಾಟುತ್ತ ದಾಟುತ್ತ, ಅರಮನೆ ತಲುಪಿ, ಅಲ್ಲಿರುವ ದ್ವಾರಪಾಲಕನಿಗೆ ತಲುಪಿ, ಅಲ್ಲಿಂದ ಆಸ್ಥಾನಿಕರಿಗೆ ತಲುಪಿ, ಅಲ್ಲಿಂದ ಮಂತ್ರಿಗೆ, ಅವನಿಂದ ರಾಜನಿಗೆ ತಲುಪುವುದರೊಳಗೆ ಇಡೀ ದಾಸ್ತಾನು ಬೆಂಕಿಗೆ ಆಹುತಿಯಾಗಿ ಬರೀ ಬೂದಿ ಮಾತ್ರ ಉಳಿದಿತ್ತು.

ರಾಜ ಇದನ್ನು ತಿಳಿದು ಕಿಡಿಕಿಡಿಯಾದ. “ಏನು! ನಿತ್ಯದ ಸಂಭಾಷಣೆಯನ್ನು ನೀವು ಸಂಗೀತದಲ್ಲಿ ನಡೆಸಿ ಎಂದರೆ ವಿಶೇಷ ಸಂದರ್ಭದಲ್ಲಿ, ಗಂಡಾಂತರ ಕಾಲದಲ್ಲಿಯೂ ಸಂಗೀತದಲ್ಲಿ ವ್ಯವಹರಿಸಿ ಎಂದು ಅರ್ಥವೇ? ಅಷ್ಟು ತಲೆಯಿಲ್ಲದೆ ಹೋಯಿತೇ ನಿಮಗೆ? ಅಥವಾ ತಲೆಗೆ ಕೆಲಸವನ್ನೇ ಕೊಡುವುದಿಲ್ಲ ಅಂತಾಯಿತೇ? ವಿಷಯವನ್ನು ಸೀದಾ ಬಂದು ಹೇಳಬಹುದಿತ್ತಲ್ಲ? ಇದು ಎಮರ್ಜೆನ್ಸಿ ಎಂದೂ ತಿಳಿಯದೇ ಹೋಯಿತೇ!" ಎಂದು ಆರ್ಭಟಿಸಿದ. ಅಷ್ಟೂ ಸಾಲದೆಂಬಂತೆ, ರಾಗ ತಾಳದೊಂದಿಗೆ ದೂರು ದಾಟಿಸಿದ ಎಲ್ಲರಿಗೂ ನೇಣುಶಿಕ್ಷೆ ವಿಧಿಸಿದ. ಆ ಮೇಲೆ ಆ ಶಾಸನವನ್ನು ರದ್ದು ಮಾಡಿದನೋ ಇಲ್ಲವೋ? ಏನೋ, ಅದೆಲ್ಲ ನೆನಪಾಗುತ್ತಿಲ್ಲ. ಅಥವಾ ಕತೆಯನ್ನು ನನಗೆ ಹೇಳಿದವರಿಗೂ ಅದು ನೆನಪಾಗದೆ ಅಲ್ಲಿಗೇ ಮುಗಿಸಿದರೋ, ಅದೂ ನೆನಪಾಗುತ್ತಿಲ್ಲ. ನಮ್ಮ ಅಭಿಲಾಷೆಯಂತೆ ರದ್ದು ಮಾಡಿದನು ಅಂತಲೇ ಎಂದುಕೊಳ್ಳೋಣವಂತೆ, ಏನೀಗ!

ಇದನ್ನೂ ಓದಿ : ಶತಪಥ | ವೈದೇಹಿ ಅವರ ಹೊಸ ಕತೆ ‘ಸಲ್ಮಾ ಮತ್ತು ಸುರಭಿ’

ಏನೆಂದರೆ, ಶಿಷ್ಟಾಚಾರಗಳೆಲ್ಲ ಇರುತ್ತವೆ, ಇರಲಿ. ಆದರೆ, ಅದನ್ನು ಮುರಿಯಲು, ಸಂದರ್ಭಕ್ಕೆ ಸರಿಯಾಗಿ ಅದನ್ನು ಮೀರಲು ತಿಳಿಯದಿದ್ದರೆ ಹೇಗೆ? ಅದಕ್ಕೇ ಅಂಟಿಕೊಂಡರೆ ಹೇಗೆ? ಮೀರಿ ನಡೆದಾಗ ಅದನ್ನು ದೊಡ್ಡದು ಮಾಡದೆ ಮುಖ್ಯ ಕಾರ್ಯದ ಕುರಿತು ಗಮನ ಹರಿಸದಿದ್ದರೆ ಹೇಗೆ? ಇದೆಲ್ಲ ಹೇಳಿಕೊಟ್ಟು ಬರುವುದೇ? ಜಲ ಪ್ರಳಯದಿಂದ ಮುಳುಗಿದ ಊರಲ್ಲಿಯೂ, ಬೆಂಕಿ ಬಿದ್ದು ಉರಿಯುತ್ತಿರುವ ಊರಲ್ಲಿಯೂ, ಪ್ರಜೆಗಳ ಪ್ರಾಣಸಂಕಟದ ಸಂದರ್ಭದಲ್ಲಿಯೂ ರಾಜಕಾರ್ಯಗಳನ್ನು ನಿರ್ವಹಿಸಲು ಬಂದವರಿಗೆ ಶಿಷ್ಟಾಚಾರವೇ ಹೇಗೆ ಮುಖ್ಯವಾಗುತ್ತದೆ? ಹೇಗೆ ನೆನಪಾಗುತ್ತದೆ? ಒಂದಿಷ್ಟು ಅದು ಅತ್ತಿತ್ತ ಆದರೂ ಅಸಹನೆ ಉಕ್ಕುವುದಾದರೂ ಹೇಗೆ? ಇಂದು ನಾವು ಕಾಣುವ ಪರಮಾಶ್ಚರ್ಯ ಮತ್ತು ನಮಗಾಗುವ ಪರಮ ಗಾಬರಿ ಎಂದರೆ ಇದುವೇ.

ನಿಜವಾಗಿ ಪರಿಸ್ಥಿತಿಯ ವಜ್ರಮುಷ್ಟಿಯಲ್ಲಿ ಸಿಲುಕಿ ಇನ್ನಿಲ್ಲದಂಥ ಪಡಿಪಾಟಲು ಪಡುವ ಪ್ರಜೆಗಳನ್ನು ಕಂಡವರಿಗೆ, ರಾಜಮಾರ್ಗವಾಗಿ ಏನಾದರೂ ಮಾಡಲೇಬೇಕೆಂದು ಆ ನಿಮಿತ್ತ ಮಾತ್ರವಾಗಿ ಕಾರ್ಯವೆಸಗಲು ಬಂದವರಿಗೆ, ಮನ ಕರಗುವವರಿಗೆ, ಕರುಳು ಮಿಡಿವವರಿಗೆ, ಮನುಷ್ಯತ್ವ ಇರುವವರಿಗೆ ಶಿಷ್ಟಾಚಾರ ಗಿಷ್ಟಾಚಾರಗಳೆಲ್ಲವೂ ಆ ಕ್ಷಣಕ್ಕೆ ಅಮುಖ್ಯವೂ ಕ್ಷುಲ್ಲಕವೂ ಮೀರುವಂಥವೂ ಮುರಿಯುವಂಥವೂ ಆಗಲೇಬೇಕಲ್ಲವೆ? ಆಗಲೇ ಇಲ್ಲ ಎಂದರೆ, ಏನರ್ಥ?

ಅರ್ಥ ಮತ್ತು ಉತ್ತರಗಳು ಎಷ್ಟೋ ಸಲ ಪ್ರಶ್ನೆಯಲ್ಲಿಯೇ ಇರುತ್ತವೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More