ಚಿತ್ತವಿತ್ತ | ದೇಶದ ಅಭಿವೃದ್ಧಿ ಮತ್ತು ನಿಜವನ್ನು ತೋರಿಸದ ಕನ್ನಡಿ

ಜಿಡಿಪಿ ಎಂಬುದು ಎಲ್ಲ ರೀತಿಯ ಉತ್ಪಾದನೆಯನ್ನೂ ಅಳತೆ ಮಾಡುತ್ತದೆ. ಮಾಲಿನ್ಯ ಕಂಡರೆ ಅದಕ್ಕೆ ಇಷ್ಟ. ಅದನ್ನು ಶುಚಿ ಮಾಡುವುದಕ್ಕೆ ಖರ್ಚು ಮಾಡುತ್ತೀರಿ, ಆಗ ಜಿಡಿಪಿ ಏರುತ್ತದೆ. ಹೀಗೆ, ಜಿಡಿಪಿ ಎಂಬುದು ಲೆಕ್ಕ ಹಾಕುವುದರಲ್ಲಿ ನಿಸ್ಸೀಮ, ಆದರೆ ಗುಣದ ವಿಷಯದಲ್ಲಿ ಅದು ಕುರುಡು!

ಮಳೆಯ ಅವಾಂತರದಿಂದ ಕೇರಳ, ಮಡಿಕೇರಿ ನೆಲಕಚ್ಚಿವೆ. ಸಾವಿರಾರು ಜನರ ಬದುಕು ಅಕ್ಷರಶಃ ಮಣ್ಣುಪಾಲು, ನೀರುಪಾಲು ಆಗಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಅದಕ್ಕೆ ಕಾರಣಗಳನ್ನು ಹುಡುಕುತ್ತ ನಮ್ಮ ಬೆಳವಣಿಗೆಯ ಪರಿಕಲ್ಪನೆಯನ್ನು ಕುರಿತಂತೆ ಅಲ್ಲಿ-ಇಲ್ಲಿ ಒಂದಷ್ಟು ಮರುಚಿಂತನೆ ಪ್ರಾರಂಭವಾಗಿದೆ. ಹಲವರನ್ನು ಅನುಮಾನಗಳು ಕಾಡುತ್ತಿವೆ. ಈ ಅನರ್ಥಗಳಿಗೆ ಬೆಳವಣಿಗೆಯ ಮೋಹ, ಲಾಭದ ದುರಾಸೆ ಕಾರಣವಲ್ಲವೇ ಅನ್ನುವ ಅವಲೋಕನ ನಡೆಯುತ್ತಿದೆ. ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳುವ ನಮ್ಮ ಚಿಂತನೆಯಲ್ಲೇ ತಪ್ಪುಗಳಿರುವ ಸಾಧ್ಯತೆಗಳೂ ಕಾಣಿಸತೊಡಗಿವೆ.

ನಾವು ಹಲವು ದಶಕಗಳಿಂದ ಜಿಡಿಪಿಯ ಕನ್ನಡಿಯಲ್ಲಿ ನಮ್ಮ ಬೆಳವಣಿಗೆಯನ್ನು ನೋಡಿಕೊಂಡು ಸಂಭ್ರಮಿಸುತ್ತಿದ್ದೇವೆ. ನಮ್ಮ ದೇಶ, ನಮ್ಮ ಸಮಾಜ ಎಷ್ಟು ಸುಂದರವಾಗಿದೆ ಅಂತ ಹೆಮ್ಮೆಪಟ್ಟುಕೊಳ್ಳುತ್ತಿದ್ದೇವೆ. ಜಿಡಿಪಿ ಒಂದೋ ಎರಡೋ ಅಂಶ ಕುಸಿದರೆ ತಬ್ಬಿಬ್ಬಾಗಿ ಅದಕ್ಕೆ ಸಮರ್ಥನೆಯನ್ನು ಹೆಣೆಯುವುದರಲ್ಲೇ ನಮ್ಮ ಶಕ್ತಿಯನ್ನೆಲ್ಲ ವ್ಯಯ ಮಾಡುತ್ತಿದ್ದೇವೆ. ಹೇಗೋ ಒಟ್ಟಲ್ಲಿ ನಮ್ಮ ಆರ್ಥಿಕತೆ ಮುಂದಕ್ಕೆ ಹೋಗುತ್ತಿರಬೇಕು. ಆಗಲೇ ನಮಗೆ ನೆಮ್ಮದಿ.

ಆದರೆ, ನಾವು ನೋಡುತ್ತಿರುವ ಈ ಕನ್ನಡಿ ವಾಸ್ತವವನ್ನು ನಮಗೆ ತೋರಿಸುತ್ತಿಲ್ಲ. ಅಲ್ಲಿ ನಾವು ನೋಡುತ್ತಿರುವುದು ನಮ್ಮ ವಿರೂಪಗೊಂಡ ರೂಪವನ್ನು. ಇಂದು ಈ ಜಗತ್ತಿನಲ್ಲಿ ಅತೃಪ್ತಿ, ಅಸಹನೆ, ಕೋಪ ಬೆಳೆಯುತ್ತಿದೆ. ಅದಕ್ಕೆ ಹಲವು ಕಾರಣ, ವಿವರಣೆ ಕೊಡಬಹುದು. ಆದರೆ ಒಂದಂತೂ ನಿಜ. ನಮ್ಮ ನಾಯಕರು, ಅರ್ಥಶಾಸ್ತ್ರಜ್ಞರು ಕೊಡುತ್ತಿರುವ ‘ಬೆಳವಣಿಗೆ’ ಮತ್ತು ‘ಆರ್ಥಿಕತೆ’ಯ ವ್ಯಾಖ್ಯೆಗೂ ಜನರ ವಾಸ್ತವದ ಅನುಭವಕ್ಕೂ ತಾಳೆ ಆಗುತ್ತಿಲ್ಲ.

ಜಿಡಿಪಿ ಅಂತ ನಾವೆಲ್ಲ ಹೇಳುತ್ತಿದ್ದೇವೆ. ಅದೇನೋ ಅನಾದಿಕಾಲದಿಂದ ಇದ್ದ ಕಲ್ಪನೆಯೇನೋ ಅನ್ನುವಂತೆ ಆ ಬಗ್ಗೆ ಮಾತನಾಡುತ್ತಿದ್ದೇವೆ. ವಾಸ್ತವ ಅಂದರೆ, ಅದು ಇತ್ತೀಚಿನ ಪರಿಕಲ್ಪನೆ. 1930ರಲ್ಲಿ ಮಹಾನ್ ಆರ್ಥಿಕ ಕುಸಿತವನ್ನು ಎದುರಿಸುವುದಕ್ಕೆ ಹುಟ್ಟಕೊಂಡ ಸಾಧನ. ಅಮೇಲೆ ಎರಡನೇ ಮಹಾಯುದ್ಧದ ಸಂದರ್ಭದಲ್ಲೂ ಅದನ್ನು ಬಳಸಿಕೊಂಡರು. ಅದರಂತೆ ‘ಆರ್ಥಿಕತೆ’ ಅನ್ನುವುದೂ ಒಂದು ಸ್ವಾಭಾವಿಕ ಪರಿಕಲ್ಪನೆಯಲ್ಲ. 1930ರ ಮೊದಲು ಅದು ಇರಲಿಲ್ಲ.

ಜಿಡಿಪಿ ಎಲ್ಲ ರೀತಿಯ ಉತ್ಪಾದನೆಯನ್ನು ಅಳತೆ ಮಾಡುತ್ತದೆ. ಅದು ಒಳ್ಳೆಯದೋ ಕೆಟ್ಟದ್ದೋ ಅನ್ನುವುದನ್ನು ಅದು ನೋಡುವುದಿಲ್ಲ. ಮಾಲಿನ್ಯ ಕಂಡರೆ ಅದಕ್ಕೆ ಇಷ್ಟ. ಅದನ್ನು ಶುಚಿ ಮಾಡುವುದಕ್ಕೆ ಹಣ ಖರ್ಚು ಮಾಡುತ್ತೀರಿ, ಆಗ ನಮ್ಮ ಜಿಡಿಪಿ ಏರುತ್ತದೆ. ಅದಕ್ಕೆ ಕ್ರೈಮ್ ಕಂಡರೆ ಎಲ್ಲಿಲ್ಲದ ವ್ಯಾಮೋಹ. ಯಾಕೆಂದರೆ ಆಗ ಪೋಲಿಸ್ ದಳದ ಮೇಲೆ ಹಣ ಖರ್ಚು ಮಾಡಬಹುದು, ಮುರಿದ ಗಾಜು ಇತ್ಯಾದಿಗಳನ್ನು ರಿಪೇರಿ ಮಾಡುವುದಕ್ಕೆ ಹಣ ಖರ್ಚು ಆಗುತ್ತದೆ. ಹಾಗೆಯೇ, ಯುದ್ಧ ಆದರೂ ಒಳ್ಳೆಯದೇ. ಶಸ್ತ್ರಾಸ್ತ್ರಗಳನ್ನು ನೀವು ಮತ್ತೆ ಕೊಳ್ಳಬಹುದು. ಅಷ್ಟೇ ಅಲ್ಲ, ಹಾಳಾದ ಊರನ್ನು ಪುನರ್ ನಿರ್ಮಿಸುವುದಕ್ಕೂ ಹಣ. ಜಿಡಿಪಿ ಲೆಕ್ಕ ಹಾಕುವುದರಲ್ಲಿ ನಿಸ್ಸೀಮ, ಆದರೆ ಗುಣದ ವಿಷಯಕ್ಕೆ ಬಂದಾಗ ಅದು ಕುರುಡು. ಅದು ವ್ಯಾಪಾರಿ ಇದ್ದ ಹಾಗೆ; ಹಣ ವಿನಿಮಯ ಆಗದ ವ್ಯವಹಾರದಲ್ಲಿ ಅದಕ್ಕೆ ಆಸಕ್ತಿ ಇಲ್ಲ. ಮನೆಯಲ್ಲಿ ಮಹಿಳೆಯರು ಮಾಡುವ ಕೆಲಸ ಅದಕ್ಕೆ ದೊಡ್ಡ ವಿಷಯವಲ್ಲ. ಮಾಲುಗಳಲ್ಲಿ ಮಾರುವ ನೀರು ಬಾಟಲ್ ಅದರಲ್ಲಿ ಸೇರುತ್ತದೆ, ಆದರೆ ಕಿಲೋಮೀಟರುಗಟ್ಟಲೆ ನಡೆದು ಗ್ರಾಮೀಣ ಮಹಿಳೆಯರು ಹೊತ್ತು ತರುವ ನೀರು ಅದರಲ್ಲಿ ಬರುವುದಿಲ್ಲ.

ಬೆಳವಣಿಗೆ ಅನ್ನುವುದು ಸರಕುಗಳ ಉತ್ಪಾದನೆಯೊಂದಿಗೆ ಶುರುವಾಯಿತು. ಅದು ಹುಟ್ಟಿಕೊಂಡದ್ದೇ ಭೌತಿಕ ಉತ್ಪಾದನೆಯನ್ನು ಅಳೆಯುವುದಕ್ಕೆ. ಇಟ್ಟಿಗೆ, ಸ್ಟೀಲ್, ಕಾರು ಇತ್ಯಾದಿಗಳ ಉತ್ಪಾದನೆಯೆಲ್ಲ ಅದರ ಲೆಕ್ಕದಲ್ಲಿ ಬರುತ್ತದೆ. ಆದರೆ, ನೀವು ಡೌನ್‌ಲೋಡ್‌ ಮಾಡಿಕೊಂಡ ಸಂಗೀತ, ಮನೋವಿಜ್ಞಾನಿಯು ನಿಮ್ಮೊಂದಿಗೆ ಆತ್ಮಸಮಾಲೋಚನೆಯಲ್ಲಿದ್ದ ಸಮಯ ಇಂಥವೆಲ್ಲ ಬಂದಾಗ ಅದು ಸೋಲುತ್ತದೆ. ನಿಜವಾಗಿ ಪ್ರಗತಿಯನ್ನು ಅಳತೆ ಮಾಡುವುದಕ್ಕೆ ಅದು ಖಂಡಿತ ಒಳ್ಳೆಯ ಮಾಪನವಲ್ಲ. ಕೆಲ ದಶಕಗಳ ಹಿಂದೆ ಒಬ್ಬ ಸಿಫಿಲಿಸ್ ಪೀಡಿತ ಕೋಟ್ಯಾದೀಶ್ವರ ಒಂದು ವಾರಕ್ಕೆ ಬೇಕಾದ ಆಂಟಿಬಯಾಟಿಕ್ ಕೊಳ್ಳಲು ತನ್ನ ಸಂಪತ್ತಿನ ಅರ್ಧಭಾಗ ಖರ್ಚು ಮಾಡಬೇಕಿತ್ತು. ಈಗ ನಿಮಗೆ ಅದು ಕೆಲವು ರುಪಾಯಿಗಳಿಗೆ ಸಿಗುತ್ತದೆ. ಇಂತಹ ಪ್ರಗತಿಯ ಬಗ್ಗೆ ಜಿಡಿಪಿ ಏನೂ ಹೇಳುವುದಿಲ್ಲ.

ಮಾರುಕಟ್ಟೆಯನ್ನು ಅದರಷ್ಟಕ್ಕೆ ಕೆಲಸ ಮಾಡಲು ಬಿಟ್ಟರೆ ಅದು ಏಳುಬೀಳುಗಳನ್ನು ತನ್ನಷ್ಟಕ್ಕೆ ಸರಿಪಡಿಸಿಕೊಂಡು ನಮ್ಮ ಆರ್ಥಿಕತೆಯನ್ನು ಯಾವಾಗಲೂ ಸಂತಸದ ಸ್ಥಿತಿಯಲ್ಲಿ ಇಟ್ಟಿರುತ್ತದೆ ಅನ್ನುವುದು ನಮ್ಮ ಅರ್ಥಶಾಸ್ತ್ರದ ನಂಬಿಕೆ. ಅದು ನಿಂತಿರುವುದೇ ಆ ನಂಬಿಕೆಯ ಮೇಲೆ. 2008ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಅರ್ಥಶಾಸ್ತ್ರದ ಈ ನಂಬಿಕೆ ಹುಸಿಯಾಗುತ್ತಿದೆ ಅಂತ ಹಲವರಿಗೆ ಅನ್ನಿಸಿತು. ಆರ್ಥಿಕ ಬೆಳವಣಿಗೆ ಅನ್ನೋದು ಹೆಚ್ಚುತ್ತಿರುವ ಅಸಮಾನತೆಯ ಬಗ್ಗೆಯಾಗಲೀ, ಜಾಗತಿಕ ಅಸಮತೋಲನದ ಬಗ್ಗೆಯಾಗಲೀ, ನಾಶವಾಗುತ್ತಿರುವ ಪರಿಸರದ ಬಗ್ಗೆಯಾಗಲೀ ನಮಗೆ ಏನನ್ನೂ ಹೇಳುವುದಿಲ್ಲ.

ಈ ರೀತಿಯ ಬೆಳವಣಿಗೆಯ ಒಂದು ದೊಡ್ಡ ಸಮಸ್ಯೆ ಅಂದರೆ, ಅದು ಸಾಗುತ್ತಿರಬೇಕಾದರೆ ಉತ್ಪಾದನೆ ನಿರಂತರವಾಗಿ ಆಗುತ್ತಿರಬೇಕು, ಜೊತೆಜೊತೆಗೆ ಅದರ ಬಳಕೆಯೂ ಆಗುತ್ತಿರಬೇಕು. ನಮಗೆ ಇನ್ನೂ ಬೇಕು, ಬೇಕು ಅನ್ನುವ ಹಪಹಪಿ ಇರುವ ತನಕ ಬೆಳವಣಿಗೆ ಆಗುತ್ತಿರುತ್ತದೆ. ಒಮ್ಮೆ ನಮ್ಮ ಆಸೆ ಇಂಗಿಹೋದರೆ ಆರ್ಥಿಕತೆ ಮುಗ್ಗುರಿಸಿ ಬೀಳುತ್ತದೆ. ಆಧುನಿಕ ಅರ್ಥಶಾಸ್ತ್ರ ನಿಂತಿರುವುದೇ ನಮ್ಮ ಅಮಿತ ಆಸೆಯ ಮೇಲೆ. ಇದೊಂದು ಹುಚ್ಚು ಅನ್ನೋದು ನಮ್ಮ ಅಂತರಾಳಕ್ಕೆ ಗೊತ್ತು. ನಿರಂತರ ವಿಸ್ತರಣೆಯನ್ನು ಕೇವಲ ಅರ್ಥಶಾಸ್ತ್ರದಲ್ಲಿ ಮಾತ್ರ ಒಳ್ಳೆಯ ಬೆಳವಣಿಗೆಯಾಗಿ ನೋಡಲಾಗುತ್ತದೆ. ಜೀವಶಾಸ್ತ್ರದಲ್ಲಿ ಇದನ್ನು ಕ್ಯಾನ್ಸರ್ ಅಂತ ಕರೆಯುತ್ತಾರೆ.

ನಮಗೆ ಬೇಕೋ ಬೇಡವೋ, ನಾವು ಬಳಸುತ್ತೇವೋ ಇಲ್ಲವೋ, ಸುಮ್ಮನೆ ಕೊಳ್ಳುತ್ತಲೇ ಇದ್ದೇವೆ. ಹೊಸ-ಹೊಸ ಮಾಡೆಲ್ಲುಗಳಿಗಾಗಿ ಹಪಹಪಿಸುತ್ತಿರುತ್ತೇವೆ. ಈಗ ಐಫೋನ್ 8 ಹಳತಾಗಿದೆ. ನಾವು ಕೊಳ್ಳುವ ವಾಷಿಂಗ್ ಮಷಿನ್, ಟೋಸ್ಟರ್ ಇವೆಲ್ಲವನ್ನೂ ಬೇಗ ಕೆಟ್ಟುಹೋಗುವ ರೀತಿಯಲ್ಲೇ ಡಿಸೈನ್ ಮಾಡಲಾಗಿರುತ್ತದೆ. ನಾವು ಮತ್ತೆ-ಮತ್ತೆ ಕೊಳ್ಳುತ್ತಲೇ ಇರುತ್ತೇವೆ. ಆ ಚಕ್ರ ನಿಲ್ಲುವುದೇ ಇಲ್ಲ. ಮನೆಯಲ್ಲೇ ಕುಳಿತು ಹಲವಾರು ವಸ್ತುಗಳನ್ನು ಖರೀದಿ ಮಾಡುತ್ತ ಹೋಗುತ್ತಿರುತ್ತೇವೆ. ಅವೆಲ್ಲ ನಿಮಗೆ ಬೇಕೇ ಬೇಕು ಅಂತ ಜಾಹಿರಾತುಗಳು ನಮ್ಮನ್ನು ನಂಬಿಸಿವೆ. ನಿಮ್ಮ ನಾಯಿಗೆ ಹಳೆಯ ಕಾಲದ ರಾಜರ ಡ್ರೆಸ್ಸುಗಳನ್ನು ಹಾಕಬೇಕು, ಕಾಡಿನಲ್ಲಿ ಮರಕ್ಕೆ ಜೋತುಬಿದ್ದಿರುವ ರೀತಿಯ ಕೋತಿಯ ಗೊಂಬೆ ನಿಮ್ಮ ಮನೆ ಶೋಕೇಸಿನಲ್ಲಿರಬೇಕು, ನಿಮ್ಮ ಬೆಕ್ಕಿಗೆ ಯಾವುದೋ ಡ್ರೆಸ್ ಬೇಕು, ಆಹಾರ ಬೇಕು ಹೀಗೆ ಏನೇನೋ ಕೊಳ್ಳುತ್ತಲೇ ಇರುತ್ತೇವೆ. ಇಷ್ಟಾದರೂ ನಮ್ಮ ಅರ್ಥಶಾಸ್ತ್ರಜ್ಞರು ಇಂದಿನ ಜಾಗತಿಕ ಸಮಸ್ಯೆಗೆ ತೀವ್ರ ಬೇಡಿಕೆ ಕೊರತೆ ಕಾರಣ ಅಂತಿದ್ದಾರೆ. ಹಾಗಾದರೆ, ಜನ ಇನ್ನೇನು ಕೊಳ್ಳಬೇಕು ಅಂತ ದಿಗಿಲಾಗುತ್ತದೆ!

ಆಧುನಿಕ ಆರ್ಥಿಕತೆಯ ಪರಿಕಲ್ಪನೆಯ ದೃಷ್ಟಿಯಿಂದ ಜಗತ್ತು ಬೆಳೆಯುತ್ತಿದೆ. ಅದು ಹಿಂದೆಂದೂ ಇಷ್ಟು ಸುಂದರವಾಗಿರಲಿಲ್ಲ. ಈ ರೀತಿಯ ಬೆಳವಣಿಗೆಯನ್ನೇ ನಾವು ನೆಮ್ಮದಿ ಎಂದು ಒಪ್ಪಿಕೊಳ್ಳುವುದಾದರೆ, ಇದಕ್ಕಿಂತ ನೆಮ್ಮದಿಯ ಬದುಕು ನಮಗೆ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಆದರೆ, ಇಂತಹ ಬೆಳವಣಿಗೆಯ ಒಂದು ದೊಡ್ಡ ಸಮಸ್ಯೆ ಅಂದರೆ, ಇಲ್ಲಿ ಬೆಳವಣಿಗೆಯ ಫಲವನ್ನು ಸಮವಾಗಿ ಹಂಚುವುದಿಲ್ಲ. ಜಿಡಿಪಿ ಅಂದಾಗ ನಾವು ಲೆಕ್ಕ ಹಾಕುವುದು ಸರಾಸರಿ ವರಮಾನವನ್ನು. ಒಟ್ಟಾರೆ ಜಗತ್ತಿನ, ದೇಶದ ವರಮಾನವನ್ನು ಒಟ್ಟು ಜನರ ಸಂಖ್ಯೆಯಿಂದ ಭಾಗಿಸಿಬಿಟ್ಟರೆ ನಮಗೆ ನಮ್ಮ ದೇಶದ ಸ್ಥಿತಿಗತಿ ತೋರಿಸುವ ಒಂದು ಸೂಚಿ ಸಿಕ್ಕಿಬಿಡುತ್ತದೆ. ನೂರಾರು ಜನ ಹೊಟ್ಟಿಗಿಲ್ಲದೆ ಸತ್ತರೂ ಅಂಬಾನಿಯಂತಹ ಕೆಲವರ ವರಮಾನ ಏರುತ್ತ ಹೋದರೆ ಸಾಕು, ಈ ಸೂಚಿಯೂ ಏರುತ್ತ ಹೋಗುತ್ತದೆ; ದೇಶದ ಬೆಳವಣಿಗೆಯಾಯಿತು ಅಂತ ನಾವು ಸಂಭ್ರಮಿಸುತ್ತ ಹೋಗುತ್ತೇವೆ. ಈಗ ಆಗುತ್ತಿರುವುದು ಅದೇ. ನೀವು ಅಸಮಾನತೆಗೆ ಸಂಬಂಧಿಸಿದ ಯಾವುದೇ ಅಧ್ಯಯನವನ್ನು ನೋಡಿದರೂ ಇದು ಸ್ಪಷ್ಟವಾಗುತ್ತದೆ. ಸಂಪತ್ತು ಕೆಲವರ ಕೈಯಲ್ಲೇ ಹೆಚ್ಚೆಚ್ಚು ಶೇಖರವಾಗುತ್ತ ಹೋಗುತ್ತಿರುವುದು ಎದ್ದುಕಾಣುತ್ತದೆ.

ಕೈಗಾರಿಕಾ ಕ್ರಾಂತಿಯ ನಂತರವಷ್ಟೇ ನಮಗೆ ಈ ರೀತಿಯ ಆರ್ಥಿಕತೆಯ ಪರಿಕಲ್ಪನೆ ಹಾಗೂ ಅದನ್ನು ಅಳತೆ ಮಾಡುವ ಜಿಡಿಪಿಯ ಪರಿಕಲ್ಪನೆ ಪ್ರಾರಂಭವಾಗಿದ್ದು. ಇದು ನಮ್ಮ ಸ್ಥಿತಿಯನ್ನು ಸಮರ್ಪಕವಾಗಿ ಅಳೆಯುವುದಿಲ್ಲ ಅಂತಾದರೆ ಸರ್ಕಾರಗಳಿಗೂ ನಮ್ಮ ಸಮಾಜದ ವಾಸ್ತವ ಪರಿಸ್ಥಿತಿ ಅರ್ಥವಾಗುವುದಿಲ್ಲ. ಅದನ್ನು ಆಧರಿಸಿದ ನೀತಿ ನಿಯಮಗಳು ತಪ್ಪಾಗಿಯೇ ಇರುತ್ತವೆ. ಎಲ್ಲ ಸರ್ಕಾರಗಳು ಬೆಳವಣಿಗೆಯನ್ನು ಗರಿಷ್ಠಗೊಳಿಸುವುದಕ್ಕಾಗಿಯೇ ನಿಯಮಗಳನ್ನು, ಯೋಜನೆಗಳನ್ನು ರೂಪಿಸುತ್ತಿವೆ.

“ನಮ್ಮ ಆರ್ಥಿಕ ಸಾಧನೆಯನ್ನು ಅಳೆಯುವ ಸಾಧನೆಗಳನ್ನು ಬದಲಿಸದೆ ಹೋದರೆ ನಮ್ಮ ನಡತೆಯೂ ಬದಲಾಗುವುದಿಲ್ಲ,” ಅಂತ ಫ್ರಾನ್ಸಿನ ಮಾಜಿ ಅಧ್ಯಕ್ಷ ನಿಕೊಲಸ್ ಸಖೋಜಿ ಹೇಳಿದ್ದ. ಬ್ರಿಟನ್ನಿನಲ್ಲಿ ಹಿಂದಿನ ಇಬ್ಬರೂ ಪ್ರಧಾನಮಂತ್ರಿಗಳು ಟೋನಿ ಬ್ಲೇರ್ ಹಾಗೂ ಡೇವಿಡ್ ಕ್ಯಾಮೆರಾನ್ ಆರ್ಥಿಕ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನ ಕ್ಷೇಮವನ್ನು ಅಳೆಯುವ ಯೋಜನೆಗಳನ್ನು ರೂಪಿಸಲು ಪ್ರಯತ್ನ ಮಾಡಿದರು. ಅದರಲ್ಲಿ ಶಿಕ್ಷಣ, ಆರೋಗ್ಯ ಇತ್ಯಾದಿ ಸಾರ್ವಜನಿಕ ಸೇವೆಗಳನ್ನು ಸೇರಿಸುವ ಪ್ರಯತ್ನ ಮಾಡಿದ್ದರು. ಅವೆಲ್ಲ ಸಾಂಪ್ರದಾಯಿಕ ಅರ್ಥಶಾಸ್ತ್ರ ಬಳಸುವ ಮಾಪಕದಲ್ಲಿ ಸೇರುವುದಿಲ್ಲ.

ಜಿಡಿಪಿಯನ್ನು ಸಮರ್ಥಿಸಿ ಮಾತನಾಡುವವರು ಹೇಳುವಂತೆ ಅದು ಜನರ ಕ್ಷೇಮವನ್ನು ಅಳತೆ ಮಾಡಲು ಇರುವ ಸಾಧನವಲ್ಲ. ಅದನ್ನು ದೂಷಿಸುವುದು ಅಂದರೆ, ಅಳತೆ ಟೇಪು ನಿಮ್ಮ ತೂಕವನ್ನು ಅಳತೆ ಮಾಡುವುದಿಲ್ಲ ಎಂದು ಹೇಳಿದಂತೆ ಆಗುತ್ತದೆ. ನಮ್ಮ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಇರುವ ಹಲವಾರು ಸಾಧನಗಳಲ್ಲಿ ಅದೂ ಒಂದು ಎಂದಾಗಿದ್ದರೆ ಅವರು ಹೇಳುವುದು ಸರಿ. ಆದರೆ, ಇಂದು ಆರ್ಥಿಕ ಬೆಳವಣಿಗೆ ಅನ್ನುವುದು ನಮಗೆ ಎಲ್ಲವನ್ನೂ ಅಳೆಯುವ ಸಾಧನವಾಗಿಬಿಟ್ಟಿದೆ. ಅದೇ ನಮಗೆ ಸರ್ವಸ್ವವೂ ಆಗಿದೆ. ಅದೇ ನಮ್ಮ ಗುರಿಯಾಗಿದೆ. ಅದನ್ನು ಸಾಧಿಸುವುದಕ್ಕೆ ನೀವು ಹೆಚ್ಚು ಕೆಲಸ ಮಾಡಬೇಕು, ತ್ಯಾಗ ಮಾಡಬೇಕು, ಗ್ಯಾಸ್ ಸಬ್ಸಿಡಿ ಬಿಟ್ಟುಕೊಡಬೇಕು, ಹೆಚ್ಚಿನ ಅಸಮಾನತೆ ಒಪ್ಪಿಕೊಳ್ಳಬೇಕು, ಮಡಿಕೇರಿಯಲ್ಲಿ ಬೆಟ್ಟ ಕುಸಿದರೆ ಸಹಿಸಿಕೊಳ್ಳಬೇಕು, ನಮ್ಮ ಖಾಸಗಿತನವನ್ನು ಬಿಟ್ಟುಕೊಡಬೇಕು, ಹೀಗೆ ಎಲ್ಲವನ್ನೂ ಮಾಡಬೇಕು.

ಇದನ್ನೂ ಓದಿ : ಚಿತ್ತವಿತ್ತ | ಕೈಯಲ್ಲಿರುವ ವೈನ್ ಬಿಡಲಾರೆ, ಅಂಗಡಿಯಲ್ಲಿಯೂ ಕೊಳ್ಳಲಾರೆ!

ಹೀಗೆಲ್ಲ ಹೇಳುವಾಗ ನಾವು ಬೆಳವಣಿಗೆಯನ್ನು ವಿರೋಧಿಸುತ್ತಿದ್ದೇವೆ, ಅದರ ವಿರುದ್ಧ ಸಮರ ಸಾರುತ್ತಿದ್ದೇವೆ ಅಂತ ಭಾವಿಸಬೇಕಾಗಿಲ್ಲ. ಇದು ಕೇವಲ ನಮ್ಮ ಮಾಪನದಲ್ಲಿ ಇರುವ ಸಮಸ್ಯೆಗಳನ್ನು ತೋರಿಸುವ, ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಅಷ್ಟೆ. ನಮ್ಮ ದೃಷ್ಟಿಕೋನ ಹೆಚ್ಚೆಚ್ಚು ವಿಶಾಲವಾದಷ್ಟೂ ನಮ್ಮ ಬದುಕಿನ ವಾಸ್ತವ ಹೆಚ್ಚು ಚೆನ್ನಾಗಿ ಅರ್ಥವಾಗುತ್ತ ಹೋಗುತ್ತದೆ. ಇದು ನಮ್ಮ ಅರ್ಥಶಾಸ್ತ್ರಜ್ಞರ ಭಾವಕೋಶದೊಳಕ್ಕೆ ಹೊಕ್ಕರೆ ಅವರು ರೂಪಿಸುವ ನೀತಿಗಳಿಂದ ಜನರಿಗೆ ಹೆಚ್ಚು ನೆಮ್ಮದಿ ಸಿಗುತ್ತದೆ.

-ಹೀಗೆ ಹರಿಯುತ್ತ ಹೋಗುತ್ತದೆ ಡೇವಿಡ್ ಪಿಲ್ಲಿಂಗ್ ಅವರ ವಿಚಾರ ಲಹರಿ. ಅವರ ‘ದಿ ಗ್ರೋತ್ ಡೆಲ್ಯುಷನ್’ ಪುಸ್ತಕ ಅರ್ಥಿಕತೆಯ ಪರಿಧಿಗೆ ಶುದ್ಧ ಗಾಳಿಯಿಂದ ಸುರಕ್ಷಿತ ಬೀದಿಯವರೆಗೆ, ಸ್ಥಿರ ಉದ್ಯೋಗದಿಂದ ಒಳ್ಳೆಯ ಮನಸ್ಸಿನವರೆಗೆ ಎಲ್ಲವನ್ನೂ ತರುವ ಪ್ರಯತ್ನ ಮಾಡಿದೆ. ಇವೆಲ್ಲವನ್ನೂ ಕೇವಲ ಆರ್ಥಿಕ ತಜ್ಞರ ಮರ್ಜಿಗೆ ಬಿಡದೆ, ಅವರ ನೀತಿಗಳನ್ನು ಎಚ್ಚರದಿಂದ ಗಮನಿಸುವ, ಪ್ರತಿಕ್ರಿಯಿಸುವ ಕಡೆ ನಮ್ಮ ಅರಿವನ್ನು ಹೆಚ್ಚಿಸುವತ್ತ ಒಂದು ಒಳ್ಳೆಯ ಪ್ರಯತ್ನ ಮಾಡಿದೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More