ಕಾಶ್ಮೀರದಿಂದ | ನವಜೋತ್ ಅವರನ್ನು ಟೀಕಿಸಲು ಅಮರಿಂದರ್‌ಗೆ ಅರ್ಹತೆ ಇತ್ತೇ?

ಪಾಕ್ ಪಾಸ್‍ಪೋರ್ಟ್ ಹೊಂದಿರುವ ಮಹಿಳೆಯೊಬ್ಬರನ್ನು ತನ್ನ ರಾಜಕೀಯ, ವೈಯಕ್ತಿಕ ಬದುಕಿನಲ್ಲಿ ಪಾಲುದಾರರನ್ನಾಗಿಸಿಕೊಂಡ ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಸಿಧು ಬಹಿರಂಗವಾಗಿ ಪಾಕ್ ಸೇನಾ ಮುಖ್ಯಸ್ಥರನ್ನು ಅಪ್ಪಿಕೊಂಡಿದ್ದನ್ನು ಹೇಗೆ ಆಕ್ಷೇಪಿಸಲು ಸಾಧ್ಯ ಎಂಬ ಪ್ರಶ್ನೆ ಎದ್ದಿದೆ

ಇಮ್ರಾನ್ ಖಾನ್ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವುದಕ್ಕಾಗಿ ನವಜೋತ್ ಸಿಂಗ್ ಸಿಧು ಪಾಕಿಸ್ತಾನಕ್ಕೆ ಬಂದಾಗ ಅವರಿಗೆ ಅಧಿಕಾರಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರಿಂದಲೂ ಆತ್ಮೀಯ ಸ್ವಾಗತ ಸಿಕ್ಕಿತಾದರೂ ಅವರ ಪಾಕಿಸ್ತಾನ ಭೇಟಿ ಭಾರತಕ್ಕೆ ಹಿಡಿಸಲಿಲ್ಲ. ನನಗೆ ಬಹಳ ಹೃದಯತುಂಬಿ ಬರುವ ವಿಷಯ ಏನೆಂದರೆ, ರಾಜಕಾರಣಿಗಳು ಮತ್ತು ಮಾಧ್ಯಮಗಳು, ಅದರಲ್ಲೂ ವಿಶೇಷವಾಗಿ ಭಾರತೀಯ ರಾಜಕಾರಣಿಗಳು ಮತ್ತು ಮಾಧ್ಯಮಗಳು ಎರಡೂ ದೇಶಗಳ ನಡುವೆ ದ್ವೇಷ ಬಿತ್ತುವಂತಹ ಉತ್ತೇಜನಕಾರಿ ಕೂಗಾಟ ಮಾಡುತ್ತಿದ್ದರೂ ಎರಡೂ ದೇಶಗಳ ಜನರು ಮಾತ್ರ ತಮ್ಮ ನಡುವೆ ಗಟ್ಟಿಯಾದ ಆತ್ಮೀಯ ಬಾಂಧವ್ಯ ಬೆಳೆಸಿಕೊಳ್ಳುವ ಸಾಮರ್ಥ್ಯ ಹೊಂದಿರುವುದು. ಸಿಧು ಅವರನ್ನು 'ಶಾಂತಿದೂತ' ಎಂದು ಇಮ್ರಾನ್ ಖಾನ್ ಬಣ್ಣಿಸಿರುವುದು ಸಿಧು ವಿರುದ್ಧ ಕಕ್ಕುತ್ತಿರುವ ದ್ವೇಷಕ್ಕೆ ತಕ್ಕುದಾದ ಅತ್ಯುತ್ತಮ ಪ್ರತಿಸ್ಪಂದನೆಯಾಗಿದೆ. ಕಾಶ್ಮೀರವನ್ನೂ ಒಳಗೊಂಡಂತೆ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಎಲ್ಲ ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದಕ್ಕೆ ರಚನಾತ್ಮಕ ಮಾತುಕತೆಯಲ್ಲಿ ತೊಡಗಬೇಕಿರುವ ಅವಶ್ಯಕತೆಯ ಬಗ್ಗೆಯೂ ಹೊಸ ಪಾಕಿಸ್ತಾನದ ಹೊಸ ಪ್ರಧಾನಿ ಬಹಳ ಸಮತೋಲಿತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪಂಜಾಬಿನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಮಂತ್ರಿಯೂ ಆಗಿರುವ ಹಸನ್ಮುಖಿ ಸಿಧು ಅವರು, ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಬಾಜ್ವಾ ಅವರ ಜೊತೆ ನೇರಪ್ರಸಾರದಲ್ಲಿ ನಿರತವಾಗಿದ್ದ ಮಾಧ್ಯಮ ಕ್ಯಾಮೆರಾಗಳ ಎದುರೇ ಆತ್ಮೀಯವಾಗಿ ಮಾತಾಡುತ್ತಿದ್ದರು. ಮೂಲತಃ ಪಂಜಾಬಿಗಳೇ ಆದ ಅವರಿಬ್ಬರೂ ಬಹಳ ಆರಾಮಾಗಿ ಇದ್ದಂತೆ ಕಾಣುತ್ತಿದ್ದರು. ಅವರಿಬ್ಬರ ನಡುವಿನ ಆ ಪುಟ್ಟ ಮಾತುಕತೆಯು ಇಬ್ಬರೂ ಪರಸ್ಪರ ಆತ್ಮೀಯವಾಗಿ ಅಪ್ಪಿಕೊಳ್ಳುವುದರೊಂದಿಗೆ ಮುಕ್ತಾಯವಾದಾಗ ಅದು ಭಾರತದಲ್ಲಿ ದ್ವೇಷಪೂರಿತ ರೋಷಾವೇಶವನ್ನು ಬಡಿದೆಬ್ಬಿಸಿತು. ರಾಜಕಾರಣಿಗಳಿಂದ ಹಿಡಿದು ಉಗ್ರವಾದಿಗಳ ಮತ್ತು ಅನಾಮಧೇಯ ಸಾಮಾಜಿಕ ಮಾಧ್ಯಮಗಳ ಟ್ರೋಲ್‍ಗಳ ತನಕ ಪ್ರತಿಯೊಬ್ಬರೂ ಸಿಧು ಅವರ ಮೇಲೆ ಮುಗಿಬಿದ್ದುಬಿಟ್ಟರು.

ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು, “ಸಿಧು ಪಾಕಿಸ್ತಾನಕ್ಕೆ ಹೋಗಿದ್ದೇ ಭಾರತದ ಮೌಲ್ಯಸಂಚಯಕ್ಕೆ ವಿರುದ್ಧವಾದುದು," ಎಂದು ಘೋಷಿಸಿದ್ದಂತೂ ಬಹಳ ಅಪಾಯಕಾರಿ ಆಗಿತ್ತು. ಏಕೆಂದರೆ, ರಾಜಕೀಯ ಲಾಭಕ್ಕಾಗಿ ಬಿಜೆಪಿಯು ಪಾಕಿಸ್ತಾನ ವಿರೊಧಿ ಅಲಂಕಾರಿಕ ಪದಪುಂಜ ಪ್ರಯೋಗವನ್ನು ಮುಂದುವರಿಸಲಿದೆ ಎಂಬುದು ಈ ಮಾತುಗಳಲ್ಲಿ ಸೂಚ್ಯವಾಗಿ ಅಭಿವ್ಯಕ್ತಗೊಂಡಿತ್ತು. ಅಷ್ಟಕ್ಕೇ ನಿಲ್ಲದ ಪಾತ್ರಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರ್ಯಾಯ ಸರ್ಕಾರವನ್ನು ನಡೆಸುತ್ತಿದ್ದಾರೆಂದೂ ಹಾಗೂ ಭಾರತದಲ್ಲಿ ಪಾಕಿಸ್ತಾನದ ಡೆಸ್ಕ್ ಪ್ರಾರಂಭಿಸಿದ್ದಾರೆಂದು ಅವರ ಮೇಲೂ ಎರಗಿದ್ದನ್ನು ನೋಡಿದರೆ, ಭವಿಷ್ಯದಲ್ಲಿ ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ರಚನಾತ್ಮಕ ಮಾತುಕತೆ ನಡೆಸುವುದಕ್ಕೆ ಬಿಜೆಪಿಗೆ ಎಳ್ಳಷ್ಟೂ ಮನಸ್ಸಿಲ್ಲ ಎಂಬುದು ಖಾತ್ರಿಯಾಗುತ್ತದೆ. ಸಿಧು ವಿವಾದವು ವಾಸ್ತವದಲ್ಲಿ ಭಾರತ-ಪಾಕಿಸ್ತಾನ ನಡುವಿನ ಸಂಬಂಧದ ಬೆನ್ನುಬಿದ್ದಿರುವ ಅಸ್ವಸ್ಥತೆಯನ್ನು ಪ್ರದರ್ಶಿಸುತ್ತದೆ. ತಾವು ಒಂದೇ ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ದೇಶಗಳು ಎಂದು ತೋರಿಕೆಗಾಗಿ ಎರಡೂ ದೇಶಗಳು ಎಷ್ಟೇ ಹೇಳಿಕೊಂಡರೂ, ರಾಜಕೀಯ ಸಂಸ್ಕೃತಿ ಮತ್ತು ಸಾಮಾಜಿಕ ನಡವಳಿಕೆಗಳಲ್ಲಿ ಅವರೆರಡೂ ಪರಸ್ಪರ ಎಷ್ಟೊಂದು ದೂರ ಹೋಗಿಬಿಟ್ಟಿವೆ ಎಂದರೆ, ಸದ್ಯದ ಭವಿಷ್ಯದಲ್ಲಿ ಅವೆರಡೂ ಪರಸ್ಪರ ಅನ್ಯೋನ್ಯತೆಯಿಂದ ಕೂಡಿಬಾಳುವುದು ಅಸಾಧ್ಯವೇನೋ ಎನ್ನಿಸುತ್ತದೆ.

ಸಿಧು ಅವರ ತಕ್ಷಣದ ಬಾಸ್ ಮತ್ತು ಪಂಜಾಬಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಸಿಧು ವಿರೋಧಿ ವಾಗ್ದಾಳಿ ಕೂಟದಲ್ಲಿ ಜೊತೆಗೂಡಿದ್ದಾರೆ. ಸಿಧು ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದು ತಪ್ಪು ಎಂದು ಅವರೂ ಟೀಕಿಸಿದ್ದಾರೆ. ಇದಕ್ಕೂ ಮುಂಚೆ ಅವರು, "ಅಪ್ಪುಗೆಯು ಒಳ್ಳೆಯ ವರ್ತನೆಯಲ್ಲ, ಅದನ್ನು ತಪ್ಪಿಸಬಹುದಿತ್ತು," ಎಂದು ಟ್ವೀಟ್ ಮಾಡಿದ್ದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರಸಿದ್ಧ ಲೇಖಕಿ ಮತ್ತು ರಾಜಕೀಯ ವಿಶ್ಲೇಷಕಿ ಶೋಭಾ ಡೆ ಅವರು, ಅಮರಿಂದರ್ ಸಿಂಗ್ ಅವರ ಹೇಳಿಕೆಯನ್ನು ಆಷಾಢಭೂತಿತನ ಎಂದು ಜರಿದಿದ್ದಾರೆ. ಜೊತೆಗೆ, “ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಜನರಲ್ ಯಾಯ್ಯಾ ಖಾನ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ ಕಾರಣಕ್ಕಾಗಿ ಜನರಲ್ ರಾಣಿ ಎಂದೇ ಚಿರಪರಿಚಿತವಾಗಿದ್ದ ಕುಖ್ಯಾತ ವೇಶ್ಯಾಂಗನೆ ಅಖ್ಲೀಮ್ ಅಖ್ತರ್ ಅವರ ಮಗಳು ಅರೂಸಾ ಆಲಮ್ ಅವರೊಂದಿಗೆ ಜೊತೆಗೂಡಿ ಬಾಳುತ್ತಿರುವ ಅಮರಿಂದರ್ ಸಿಂಗ್ ಅವರು, ಸಿಧು ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಅಪ್ಪಿಕೊಂಡಿದ್ದಕ್ಕೆ ಆಕ್ಷೇಪಿಸಿದ್ದು ಕುಟಿಲತನ,” ಎಂದು ಹೀಗಳೆದಿದ್ದಾರೆ. "ಅರೂಸಾ ಆಲಮ್ ಅವರು ಮುಖ್ಯಮಂತ್ರಿಯ (ಅಮರಿಂದರ್ ಸಿಂಗ್) ಗಡಿಯಾಚೆಯ ಬಹುದಿನದ ಸಂಗಾತಿಯಾಗಿ ಅವರೊಟ್ಟಿಗೇ ಬಾಳುತ್ತಿದ್ದಾರೆ,” ಎಂದೂ ಡೇ ಅವರು ಹೇಳಿದ್ದಾರೆ.

ಇದನ್ನೂ ಓದಿ : ಕಾಶ್ಮೀರದಿಂದ | ಮಹಿಳೆಯರಿಗಾಗಿ ನಿರ್ಮಾಣ ಆಗಲಿದೆಯೇ ‘ಹೊಸ ಪಾಕಿಸ್ತಾನ’?

"ಇವತ್ತಿನ ಸನ್ನಿವೇಶದಲ್ಲಿ ಅತಿದೊಡ್ಡ ಪ್ರಶ್ನೆ ಎಂದರೆ ಪಂಜಾಬ್ ರಾಜಕೀಯದಲ್ಲಿ ಅರೂಸಾ ಬೇಗಂ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬುದು. ಮುಖ್ಯಮಂತ್ರಿಗಳಿಗಾಗಿ ಚುನಾವಣಾ ಪ್ರಚಾರ ಮಾಡುವ ಹಾಗೂ ಮುಖ್ಯಮಂತ್ರಿಗಳ ಪತ್ನಿ ಎಂದೇ ಪರಿಗಣಿಸಲಾಗುವ ಅರೂಸಾ ಬೇಗಂ (ಅವರು ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲೇ ಮುಖ್ಯಮಂತ್ರಿಗಳ ಜೊತೆಗೆ ವಾಸಿಸುತ್ತಾರೆ) ಮುಖ್ಯಮಂತ್ರಿಗಳ ಖಾಸಾ ಗೆಳತಿಯಷ್ಟೇ ಎಂದು ನಾವು ಹೇಳಬಹುದೇ? ಈಗಲೂ ಪಾಕಿಸ್ತಾನದ ಪಾಸ್‍ಪೋರ್ಟ್ ಹೊಂದಿರುವ ಮಹತ್ವಾಕಾಂಕ್ಷಿ ಮಹಿಳೆಯೊಬ್ಬಳನ್ನು ತನ್ನ ರಾಜಕೀಯ ಮತ್ತು ವೈಯಕ್ತಿಕ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಟ್ಟುಕೊಂಡಿರುವ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಸವಜೋತ್ ಸಿಂಗ್ ಸಿಧು ಬಹಿರಂಗವಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಅಪ್ಪಿಕೊಂಡಿದ್ದನ್ನು ಹೇಗೆ ಆಕ್ಷೇಪಿಸಲು ಸಾಧ್ಯ?" ಎಂದು ಶೋಭಾ ಡೇ ಅವರು ಪ್ರಶ್ನಿಸಿದ್ದಾರೆ.

ಕುತೂಹಲಕಾರಿ ವಿಷಯ ಏನೆಂದರೆ, ‘ದೇಶದ್ರೋಹ' ಮತ್ತು 'ವಿಶ್ವಾಸಘಾತುಕತನ'ಗಳಿಗಾಗಿ ಸಿಧು ಅವರನ್ನು ನೇಣಿಗೇರಿಸುವ ಪ್ರಕ್ರಿಯೆ ಭರ್ಜರಿಯಾಗಿ ಮುಂದುವರಿಯುತ್ತಿರುವಾಗಲೇ ಭಾರತ ಮತ್ತು ಪಾಕಿಸ್ತಾನ ಸೇನೆಗಳು ಶಾಂಘಾಯ್ ಕೋಅಪರೇಷನ್ ಆರ್ಗನೈಸೇಷನ್ (ಎಸ್‍ಸಿಓ) ಮುಂದಾಳತ್ವದಲ್ಲಿ ಭಯೋತ್ಪಾದನಾ ವಿರೋಧಿ ಯುದ್ಧ ಕಾರ್ಯಾಚರಣೆಗಳ ಭಾಗವಾಗಿ ರಷ್ಯಾದಲ್ಲಿ ಜೊತೆಗೂಡಿ 'ಪೀಸ್ ಮಿಷನ್ 2018' ಸಮರಭ್ಯಾಸ ಮಾಡುತ್ತಿವೆ. "ಬಹುರಾಷ್ಟ್ರೀಯ ಜಂಟಿ ಪರಿಸರದಲ್ಲಿ ನಗರ ಪ್ರದೇಶದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ತರಬೇತುಕೊಳ್ಳುವುದಕ್ಕೆ ಎಸ್‍ಸಿಓ ದೇಶಗಳ ಸಶಸ್ತ್ರ ಬಲಗಳಿಗೆ ಇದೊಂದು ಸದಾವಕಾಶ," ಎಂದು ಭಾರತೀಯ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಈ ಸಮರಾಭ್ಯಾಸದ ಬಗ್ಗೆ ಹೇಳಿದ್ದಾರೆ. ಕರ್ನಲ್ ಆನಂದ್ ಅವರ ವಿರುದ್ಧವೂ ರಾಷ್ಟ್ರದ್ರೋಹದ ಆರೋಪ ಇಲ್ಲಿಯತನಕ ಕೇಳಿಬಂದಿಲ್ಲ ಎಂಬುದೇ ಸಮಾಧಾನಕರ ವಿಷಯ!

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More