ಇಲಾಜು | ಗೋರಕ್ಷಣೆ ಹೆಸರಲ್ಲಿ ಗರ್ಭಿಣಿಯರ ಜೀವರಕ್ಷಕ ಔಷಧಿ ನಿಷೇಧಿಸಿ ಪೇಚಿಗೀಡಾದ ಕೇಂದ್ರ ಸರಕಾರ

ಹೆರಿಗೆ ಬಳಿಕ ಗರ್ಭಕೋಶವನ್ನು ಸಂಕುಚಿಸಿ ರಕ್ತಸ್ರಾವ ನಿಯಂತ್ರಿಸುವುಕ್ಕಾಗಿ ಹೆರಿಗೆ ತಜ್ಞರು ಆಕ್ಸಿಟೋಸಿನನ್ನು ಸಾಮಾನ್ಯವಾಗಿ ಬಳಸುತ್ತಾರೆ. ಇದೇ ಕಾರಣಕ್ಕೆ ಆಕ್ಸಿಟೋಸಿನನ್ನು ಅತ್ಯವಶ್ಯಕ ಔಷಧಗಳ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಇದ್ಯಾವುದನ್ನೂ ಅರಿಯದೆ ವರ್ತಿಸಿರುವುದು ದುರಂತ

ಪ್ರಾಣಿದಯಾಮಯಿ ಮಂತ್ರಿ, ಜನಪರತೆಗಿಂತ ದನಪರತೆಯತ್ತ ಒಲವುಳ್ಳ ಸರಕಾರ ಮತ್ತು ಬಲ್ಲವರನ್ನು ಕೇಳದ ಕಾರ್ಯಾಂಗ- ಈ ಮಹಾ ಸಂಗಮದಿಂದಾಗಿ ಹೆರಿಗೆಯ ವೇಳೆ ಜೀವವುಳಿಸುವ ಆಕ್ಸಿಟೋಸಿನ್ ಎಂಬ ಚುಚ್ಚುಮದ್ದು ನಿಷೇಧಕ್ಕೊಳಗಾಯಿತು, ಕಳೆದ ನಾಲ್ಕು ತಿಂಗಳಲ್ಲಿ ಹಲಬಗೆಯ ಗೊಂದಲಗಳಿಗೂ ಕಾರಣವಾಯಿತು.

ಅತ್ಯಂತ ಸೀಮಿತವಾಗಿ ವರ್ತಿಸುವ, ಅತಿ ಕಡಿಮೆ ಬೆಲೆಯ, ನಿರುಪದ್ರವಿಯಾದ, ಜೀವರಕ್ಷಕ ಆಕ್ಸಿಟೋಸಿನ್ ಅನ್ನು ಮಹಾಕೇಡೆಂದು ಬಿಂಬಿಸಿ ನಿಷೇಧಿಸಿದ್ದರ ಹಿಂದೆ ಮಾಧ್ಯಮಗಳು, ನ್ಯಾಯಾಂಗ ಹಾಗೂ ಸಂವೇದನಾರಹಿತ ರಾಜಕಾರಣಿಗಳೆಲ್ಲರ ಪಾತ್ರಗಳಿದ್ದವು. ಒಂದಿಬ್ಬರು ಪತ್ರಕರ್ತರು ಒಂದೆರಡು ಊರುಗಳಲ್ಲಿ ಯಾರೋ ಹೇಳಿದ್ದೇ ಸತ್ಯವೆಂದು ವರದಿ ಮಾಡಿದಲ್ಲಿಂದ ಆಕ್ಸಿಟೋಸಿನ್ ಮೇಲೆ ಸಂಶಯಗಳೆದ್ದವು. ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು ತಾನಾಗಿ ವಿಚಾರಣೆ ನಡೆಸಿ, ಅದರ ಮೇಲೆ ನಿರ್ಬಂಧ ಹೇರುವಂತೆ ಸೂಚಿಸಿತು. ಸಂಸತ್ತಿನಲ್ಲೂ ಹಲವು ಬಾರಿ ಪ್ರಶ್ನೆಗಳಾಗಿ, ಕೇಂದ್ರ ಸಚಿವೆ ಮನೇಕಾ ಗಾಂಧಿಯವರ ವಿಶೇಷ ಕಾಳಜಿಯಿಂದ ಕೊನೆಗೆ ಪ್ರಧಾನಿ ಕಾರ್ಯಾಲಯವೇ ಮುತುವರ್ಜಿ ವಹಿಸಿ ಅದನ್ನು ನಿಷೇಧಿಸುವ ಮಟ್ಟಕ್ಕೆ ಬೆಳೆಯಿತು. ಉದ್ದಕ್ಕೂ, ವೈಜ್ಞಾನಿಕ ಸಾಕ್ಷ್ಯಾಧಾರಗಳು ಮೂಲೆಯಲ್ಲೇ ಉಳಿದುಬಿಟ್ಟವು.

ಆಕ್ಸಿಟೋಸಿನ್ ಮಿದುಳಿನೊಳಗಿರುವ ಹೈಪೋಥಲಮಸ್‌ನಲ್ಲಿ ಸಿದ್ಧಗೊಂಡು, ಪಿಟ್ಯುಟರಿ ಗ್ರಂಥಿಯಿಂದ ಸ್ರವಿಸಲ್ಪಡುವ ಒಂದು ವಿಶೇಷ ಹಾರ್ಮೋನ್. ಹೆರಿಗೆ ಮತ್ತು ಎದೆ ಹಾಲೂಡಿಸುವಿಕೆಗಳಲ್ಲಿ ಅದು ಪ್ರಮುಖ ಪಾತ್ರ ವಹಿಸುತ್ತದೆ. ಹೆರಿಗೆಯ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಪಿಟ್ಯುಟರಿಯಿಂದ ಆಕ್ಸಿಟೋಸಿನ್ ಸ್ರವಿಸಲ್ಪಟ್ಟು, ಗರ್ಭಕೋಶದ ಸ್ನಾಯುಗಳನ್ನು ಸಂಕುಚಿಸಿ, ಹೆರಿಗೆಯನ್ನು ಸಾಧ್ಯವಾಗಿಸುತ್ತದೆ ಹಾಗೂ ಆ ಬಳಿಕ, ಗರ್ಭಕೋಶವು ಇನ್ನಷ್ಟು ಸಂಕುಚಿಸಿ, ರಕ್ತಸ್ರಾವವು ನಿಲ್ಲುವುದಕ್ಕೂ, ಗರ್ಭಕೋಶವು ಸುಸ್ಥಿತಿಗೆ ಮರಳುವುದಕ್ಕೂ ನೆರವಾಗುತ್ತದೆ. ಮಗುವು ಸ್ತನವನ್ನು ಚೀಪಿದಾಗ ಮತ್ತಷ್ಟು ಆಕ್ಸಿಟೋಸಿನ್ ಬಿಡುಗಡೆಯಾಗಿ, ಹಾಲಿನ ಗ್ರಂಥಿಗಳನ್ನು ಸಂಕುಚಿಸಿ ಹಾಲು ಹೊರಬರುವುದಕ್ಕೆ ನೆರವಾಗುತ್ತದೆ (ಹೀಗೆ ಆಕ್ಸಿಟೋಸಿನ್ ಎಂಬ ಒಂದೇ ಹಾರ್ಮೋನು ತಾಯಿ-ಮಕ್ಕಳಿಬ್ಬರನ್ನೂ ರಕ್ಷಿಸುತ್ತದೆ!). ಗಂಡಸರಲ್ಲೂ ಆಕ್ಸಿಟೋಸಿನ್ ಸ್ರಾವವಿದ್ದು, ಗಂಡು-ಹೆಣ್ಣಿನ ಲೈಂಗಿಕ ಮತ್ತು ಭಾವನಾತ್ಮಕ ಬೆಸುಗೆಗಳಲ್ಲಿ ಪಾತ್ರ ವಹಿಸುತ್ತದೆ.

ಈಗ 60 ವರ್ಷಗಳಿಂದ ಆಕ್ಸಿಟೋಸಿನನ್ನು ಕೃತಕವಾಗಿ ಉತ್ಪಾದಿಸಲಾಗುತ್ತಿದ್ದು, ಅಂಥ ಮೊದಲ ಹಾರ್ಮೋನ್ ಎಂಬ ಹೆಗ್ಗಳಿಕೆಯೂ ಅದಕ್ಕಿದೆ. ಹೆರಿಗೆಯನ್ನು ಸುಲಭಗೊಳಿಸುವುದಕ್ಕೂ, ಹೆರಿಗೆಯ ಬಳಿಕ ಗರ್ಭಕೋಶವನ್ನು ಸಂಕುಚಿಸಿ ರಕ್ತಸ್ರಾವವನ್ನು ನಿಯಂತ್ರಿಸುವುದಕ್ಕೂ ಹೆರಿಗೆ ತಜ್ಞರು ಆಕ್ಸಿಟೋಸಿನನ್ನು ಸಾಮಾನ್ಯವಾಗಿ ಬಳಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಂತೂ ಹೆರಿಗೆಯ ವೇಳೆ ಅತೀವ ರಕ್ತಸ್ರಾವದಿಂದ ಸಾವುಂಟಾಗದಂತೆ ತಡೆದು ತಾಯಿಯ ಜೀವವುಳಿಸಲು ಆಕ್ಸಿಟೋಸಿನ್ ಒಂದೇ ವೈದ್ಯರ ನೆರವಿಗಿರುತ್ತದೆ. ಇದೇ ಕಾರಣಕ್ಕೆ ಆಕ್ಸಿಟೋಸಿನನ್ನು ಭಾರತದಲ್ಲೂ, ವಿಶ್ವ ಆರೋಗ್ಯ ಸಂಸ್ಥೆಯಲ್ಲೂ ಅತ್ಯವಶ್ಯಕ ಔಷಧಗಳ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಎದೆ ಹಾಲೂಡಿಸುವಿಕೆಯಲ್ಲಿ ದೇಹದೊಳಗೆ ಸ್ರವಿಸಲ್ಪಡುವ ಆಕ್ಸಿಟೋಸಿನ್‌ಗೆ ಪಾತ್ರವಿದ್ದರೂ, ಕೃತಕ ಆಕ್ಸಿಟೋಸಿನ್ ಬಳಸಿ ಹಾಲೂಡಿಸುವಿಕೆಯನ್ನು ಹೆಚ್ಚಿಸಬಹುದೆನ್ನುವುದಕ್ಕೆ ಸಾಕಷ್ಟು ಆಧಾರಗಳು ಲಭ್ಯವಿಲ್ಲದಿರುವುದರಿಂದ, ಹಾಲೂಡಿಸುವುದಕ್ಕೆಂದು ತಾಯಂದಿರಿಗೆ ಆಕ್ಸಿಟೋಸಿನ್ ನೀಡುವ ಕ್ರಮವಿಲ್ಲ. ಪಶು ವೈದ್ಯರು ಕೂಡ ಸಾಕುಪ್ರಾಣಿಗಳಲ್ಲಿ ಹೆರಿಗೆಗಾಗಿ ಆಕ್ಸಿಟೋಸಿನ್ ಬಳಸುತ್ತಾರೆ, ಅಪರೂಪಕ್ಕೊಮ್ಮೆ, ಹಾಲಿಳಿಯದ ಸಂದರ್ಭಗಳಲ್ಲೂ ಅದನ್ನು ಬಳಸುವುದಿದೆ.

ಕೇಂದ್ರ ಸರಕಾರವು ಇದೇ ಏಪ್ರಿಲ್ ತಿಂಗಳಲ್ಲಿ ಈ ಆಕ್ಸಿಟೋಸಿನನ್ನು ನಿರ್ಬಂಧಿಸುವ ಆಜ್ಞೆಗಳನ್ನು ಹೊರಡಿಸಿತು. ಏಪ್ರಿಲ್ 24ರಂದು ಆಕ್ಸಿಟೋಸಿನಿನ ಆಮದನ್ನು ನಿಷೇಧಿಸಲಾಯಿತು. ಏಪ್ರಿಲ್ 27ರಂದು ಇನ್ನೊಂದು ಆಜ್ಞೆಯನ್ನು ಹೊರಡಿಸಿ, ಜುಲೈ ಒಂದರ ಬಳಿಕ ದೇಶದೊಳಗಿನ ಬಳಕೆಗಾಗಿ ಆಕ್ಸಿಟೋಸಿನನ್ನು ಸರಕಾರಿ ಸಂಸ್ಥೆಗಳು ಮಾತ್ರವೇ ಉತ್ಪಾದಿಸಬೇಕು, ನೋಂದಾಯಿತ ಆಸ್ಪತ್ರೆಗಳಲ್ಲಿ ಮತ್ತು ಜನೌಷಧಿ ಕೇಂದ್ರಗಳಲ್ಲಿ ಮಾತ್ರವೇ ಮಾರಾಟ ಮಾಡಬೇಕು ಹಾಗೂ ಖಾಸಗಿ ಔಷಧ ಮಳಿಗೆಗಳಲ್ಲಿ ಮಾರಾಟ ಮಾಡುವಂತಿಲ್ಲ ಎಂದು ನಿರ್ಬಂಧಿಸಲಾಯಿತು. ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು 2016ರ ಮಾರ್ಚ್ 15ರಂದು ನೀಡಿದ ತೀರ್ಪು ಹಾಗೂ ಔಷಧಗಳ ತಾಂತ್ರಿಕ ಸಲಹಾ ಸಮಿತಿಯು 2018ರ ಫೆಬ್ರವರಿ 12ರಂದು ನೀಡಿದ ಸಲಹೆಗಳ ಆಧಾರದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಯಿತು. ಆ ಬಳಿಕ, ಇಡೀ ದೇಶಕ್ಕೆ ಅಗತ್ಯವಿರುವ ಆಕ್ಸಿಟೋಸಿನ್ ಅನ್ನು ಉತ್ಪಾದಿಸಿ, ಮೂಲೆಮೂಲೆಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಹಿಂದೆಂದೂ ಆಕ್ಸಿಟೋಸಿನ್ ಉತ್ಪಾದಿಸದೆ ಇದ್ದ ಕರ್ನಾಟಕ ಪ್ರತಿಜೈವಿಕ ಮತ್ತು ಔಷಧ ಸಂಸ್ಥೆಗೆ ವಹಿಸಲಾಯಿತು. ಅದಾಗಲೇ ಆಕ್ಸಿಟೋಸಿನ್ ಉತ್ಪಾದಿಸುತ್ತಿರುವ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಅದನ್ನು ದೇಶದೊಳಗೆ ಮಾರದಂತೆ ತಡೆಯಲಾಯಿತಾದರೂ, ವಿದೇಶಗಳಿಗೆ ರಫ್ತು ಮಾಡದಂತೆ ನಿರ್ಬಂಧಿಸಲಿಲ್ಲ! ವಿಚಿತ್ರವೆನಿಸಿದ ಈ ನಿರ್ಧಾರಗಳು ಹಲವು ಸಂಶಯಗಳನ್ನು ಹುಟ್ಟಿಸಿದವು.

ಆಜ್ಞೆಗೆ ಆಧಾರವೆನ್ನಲಾದ ಹಿಮಾಚಲ ನ್ಯಾಯಾಲಯದ ತೀರ್ಪಿನಲ್ಲಿ, “ಆಕ್ಸಿಟೋಸಿನ್ ಅನ್ನು ಭಾರಿ ಪ್ರಮಾಣದಲ್ಲಿ ರಹಸ್ಯವಾಗಿ ಉತ್ಪಾದಿಸಿ, ಗಂಭೀರ ಪ್ರಮಾಣದಲ್ಲಿ ದುರುಪಯೋಗಿಸಲಾಗುತ್ತಿದೆ. ಅದರಿಂದ ಪ್ರಾಣಿಗಳಿಗೂ, ಮನುಷ್ಯರಿಗೂ ಹಾನಿಯಾಗುತ್ತಿದೆ. ಆದ್ದರಿಂದ ಸರಕಾರವು ಅದರ ಬಳಕೆಯನ್ನು ನಿರ್ಬಂಧಿಸುವ ಬಗ್ಗೆ ಪರಿಶೀಲಿಸಬೇಕು,” ಎಂದು ಹೇಳಲಾಗಿತ್ತಾದರೂ, ಆ ವಿಚಾರಣೆಯ ಕ್ರಮವೇ ಪ್ರಶ್ನಾರ್ಹವೆನಿಸಿತ್ತು. ತರಕಾರಿ ಹಾಗೂ ಹಣ್ಣುಗಳ ಗಾತ್ರವನ್ನು ಹೆಚ್ಚಿಸುವುದಕ್ಕೆ ಆಕ್ಸಿಟೋಸಿನ್ ಚುಚ್ಚಲಾಗುತ್ತಿದೆ ಎಂಬ ವದಂತಿಗಳ ಬಗ್ಗೆ ‘ಅಮರ್ ಉಜಾಲಾ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಆಧರಿಸಿ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಈ ವಿಚಾರಣೆ ನಡೆಸಿತ್ತು ಮತ್ತು ತಾನೇ ನೇಮಿಸಿದ್ದ ಹಿರಿಯ ವಕೀಲರ ಅಭಿಮತವನ್ನಷ್ಟೇ ಪರಿಗಣಿಸಿ, ಆಕ್ಸಿಟೋಸಿನ್‌ನಿಂದ ದುಷ್ಪರಿಣಾಮಗಳಿಲ್ಲ ಎಂದಿದ್ದ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಕಡೆಗಣಿಸಿ ತೀರ್ಪು ನೀಡಿತ್ತು.

ಆಕ್ಸಿಟೋಸಿನ್ ಅನ್ನು ಪಶುಗಳಲ್ಲಿ ಹಾಲಿಳಿಸುವುದಕ್ಕೂ, ಕದ್ದು ಸಾಗಿಸಿದ ಹೆಣ್ಣುಮಕ್ಕಳನ್ನು ಲೈಂಗಿಕ ವೃತ್ತಿಗೆ ದೂಡಲು ಬೇಗನೇ ಪ್ರೌಢರಾಗಿಸುವುದಕ್ಕೂ ದುರ್ಬಳಕೆ ಮಾಡಲಾಗುತ್ತಿದೆ ಎಂಬ ವದಂತಿಗಳು ಕೂಡ ವರದಿಯಾಗಿದ್ದವು. ಈ ಕುರಿತು ಸಂಸತ್ತಿನಲ್ಲಿ 2000ನೇ ಇಸವಿಯಿಂದೀಚೆಗೆ 22 ಸಲ ಪ್ರಶ್ನೆಗಳನ್ನು ಕೇಳಲಾಗಿತ್ತು; ವೈದ್ಯಕೀಯ, ಕೃಷಿ ಹಾಗೂ ಹೈನು ಸಂಶೋಧನಾ ಸಂಸ್ಥೆಗಳು 2010-16ರ ನಡುವೆ ಅಧ್ಯಯನಗಳನ್ನು ನಡೆಸಿದ್ದಾಗಿಯೂ, ಅಂತಹ ವದಂತಿಗಳಿಗೆ ಆಧಾರಗಳಿಲ್ಲವೆಂದೂ, ಆಕ್ಸಿಟೋಸಿನ್‌ ಅತ್ಯವಶ್ಯಕ ಔಷಧಿಯಾಗಿದ್ದು, ಮನುಷ್ಯರ ಮೇಲಾಗಲೀ, ಪ್ರಾಣಿಗಳ ಮೇಲಾಗಲೀ ದುಷ್ಪರಿಣಾಮಗಳಿಲ್ಲವೆಂದೂ, ಅದರ ದುರ್ಬಳಕೆಯಾಗದಂತೆ ನಿಗಾ ವಹಿಸಲಾಗುತ್ತಿದೆ ಎಂದೂ ಸರಕಾರವು ಉತ್ತರಿಸಿತ್ತು.

ಅಂತಲ್ಲಿ, ಒಮ್ಮಿಂದೊಮ್ಮೆಗೇ ಆಕ್ಸಿಟೋಸಿನ್ ಮೇಲೆ ನಿಷೇಧ ಹೇರಿದ್ದೇಕೆ? ಮನೇಕಾ ಗಾಂಧಿಯವರು 2012ರಿಂದ ಹಲವು ಸಲ ಔಷಧಗಳ ತಾಂತ್ರಿಕ ಹಾಗೂ ಸಲಹಾ ಸಮಿತಿಗಳೆದುರು ಹಾಗೂ ಇತ್ತೀಚೆಗೆ ಪ್ರಧಾನಿ ಕಾರ್ಯಾಲಯದಲ್ಲಿ ಆಕ್ಸಿಟೋಸಿನ್ ನಿರ್ಬಂಧಕ್ಕೆ ಒತ್ತಾಯಿಸಿದ್ದು ಮತ್ತು ಪ್ರಧಾನಿ ಕಾರ್ಯಾಲಯವು ವಿಶೇಷ ಆಸಕ್ತಿ ವಹಿಸಿದ್ದು ಈ ನಿರ್ಧಾರಕ್ಕೆ ಕಾರಣವೆಂದು ವರದಿಗಳಾದವು.

ಇದನ್ನೂ ಓದಿ : ಇಲಾಜು | ಆಧಾರ್ ಅಯೋಮಯ ಆಗಿರುವಾಗಲೇ ಬರುತ್ತಿದೆ ಮತ್ತೊಂದು ಅನಾರೋಗ್ಯ ಯೋಜನೆ

ಆದರೆ, ಅತ್ಯವಶ್ಯಕವಾದ ಆಕ್ಸಿಟೋಸಿನ್ ಹೀಗೆ ನಿರ್ಬಂಧಕ್ಕೊಳಗಾದರೂ ಹೆಚ್ಚಿನ ವೈದ್ಯಕೀಯ ಅಥವಾ ಮಹಿಳಾ ಸಂಘಟನೆಗಳು ಅದನ್ನು ಪ್ರಶ್ನಿಸುವ ಅಥವಾ ಪ್ರತಿಭಟಿಸುವ ಗೋಜಿಗೆ ಹೋಗಲಿಲ್ಲ! ಕೇರಳದ ಪಯ್ಯನ್ನೂರಿನ ಕಣ್ಣು ತಜ್ಞ ಕೆ ವಿ ಬಾಬು, ಸ್ತ್ರೀರೋಗ ತಜ್ಞರ ಸಂಘದ ಕೆಲವು ಪದಾಧಿಕಾರಿಗಳು ಮತ್ತು ಅಖಿಲ ಭಾರತ ಔಷಧ ಕ್ರಿಯಾ ಕೂಟದವರು ಮಾಧ್ಯಮಗಳನ್ನು ಎಚ್ಚರಿಸಿ, ಸರಕಾರದ ಮೇಲೆ ಒತ್ತಡ ಹೇರಿದ್ದಲ್ಲದೆ, ದಿಲ್ಲಿ ಉಚ್ಚ ನ್ಯಾಯಾಲಯಕ್ಕೂ ಮೊರೆಹೋದರು. ಪರಿಣಾಮವಾಗಿ, ಜುಲೈ ಒಂದರ ಗಡುವನ್ನು ಸೆಪ್ಟೆಂಬರ್ ಒಂದಕ್ಕೆ ಮುಂದೂಡಲಾಯಿತು; ಕೆಲ ದಿನಗಳ ಬಳಿಕ ಮತ್ತೆ ಬದಲಿಸಿ, ಆಕ್ಸಿಟೋಸಿನ್ ಅನ್ನು ಖಾಸಗಿ ಔಷಧ ಮಳಿಗೆಗಳಲ್ಲಿ ನಿಯಂತ್ರಿತವಾಗಿ ಮಾರಾಟ ಮಾಡುವುದಕ್ಕೂ ಅವಕಾಶ ನೀಡಲಾಯಿತು. ಇದೀಗ ದಿಲ್ಲಿ ಉಚ್ಚ ನ್ಯಾಯಾಲಯವು ನಿರ್ಬಂಧವನ್ನು ತಡೆಹಿಡಿದಿದ್ದು, ಬಹಳಷ್ಟು ಹಾನಿಕಾರಕವಾಗಿರುವ ಇತರ ಔಷಧಗಳನ್ನೆಲ್ಲ ಬಿಟ್ಟು ಇದೊಂದನ್ನೇ ನಿರ್ಬಂಧಿಸಿದ್ದೇಕೆಂದೂ, ಜಿಎಸ್‌ಟಿ, ಔಷಧ ನಿಯಂತ್ರಕರು ಮತ್ತಿತರ ವ್ಯವಸ್ಥೆಗಳ ಮೂಲಕ ದುರ್ಬಳಕೆ ತಡೆಯಲು ಸಾಧ್ಯವಿರುವಾಗ ಔಷಧವನ್ನೇ ನಿರ್ಬಂಧಿಸುವ ಅಗತ್ಯವೇನೆಂದೂ ಸರಕಾರವನ್ನು ಪ್ರಶ್ನಿಸಿದೆ.

ಮಹಿಳೆಯರ ಜೀವಕ್ಕಿಂತ ಪಶುಗಳ ಮೇಲಾಗುತ್ತದೆನ್ನುವ ಕಥಾಕಥಿತ ಸಮಸ್ಯೆಗಳನ್ನೇ ಮುಖ್ಯವೆಂದು ಪರಿಗಣಿಸಿ ಜೀವರಕ್ಷಕ ಆಕ್ಸಿಟೋಸಿನ್ ಅನ್ನು ನಿಷೇಧಿಸಹೊರಟು ಕೇಂದ್ರ ಸರಕಾರವು ಪೇಚಿಗೆ ಸಿಲುಕಿರುವುದಂತೂ ನಿಜ.

ಚಿತ್ರ: ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More