ಈ ಕಾಲ | ಕೇರಳದ ಮಹಾಪ್ರವಾಹ ದುರಂತದಿಂದ ಕಲಿಯಲೇಬೇಕಾದ ಪಾಠಗಳು

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿನ ಇತ್ತೀಚಿನ ದುರಂತಗಳ ಹಿನ್ನೆಲೆಯಲ್ಲಿ ಗಾಡ್ಗೀಳ್ ವರದಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕಿದೆ ಮತ್ತು ವ್ಯಾಪಕ ಚರ್ಚೆಗೆ ಒಳಪಡಿಸಬೇಕಿದೆ. ಏಕೆಂದರೆ, ಆ ವರದಿ ಹೇಳುವ ಪಾಠ ಕೇವಲ ಕೇರಳಕ್ಕೆ ಮಾತ್ರವಲ್ಲ, ಕರ್ನಾಟಕ, ಗೋವಾ, ಮಹಾರಾಷ್ಟ್ರಗಳಿಗೂ ಅನ್ವಯಿಸುತ್ತದೆ

ನಾನು ಮೊದಲು ಕೇರಳಕ್ಕೆ ಭೇಟಿ ನೀಡಿದ್ದು ೧೯೯೩ರಲ್ಲಿ, ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಅವರೊಂದಿಗೆ. ಅಲ್ಲಿನ ಸಮುದಾಯ ವಿಜ್ಞಾನ ಸಂಘಟನೆಯಾದ ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ (ಕೆಎಸ್‌ಎಸ್‌ಪಿ) ಆಯೋಜಿಸಿದ್ದ ಸಭೆಯೊಂದರಲ್ಲಿ ಮಾತನಾಡಲು ನಮ್ಮನ್ನು ಆಹ್ವಾನಿಸಲಾಗಿತ್ತು. ಎರ್ನಾಕುಲಂ ರೈಲು ನಿಲ್ದಾಣಕ್ಕೆ ಹೋಗಿ ಇಳಿದಾಗ, ಕೆಎಸ್‌ಎಸ್‌ಪಿ ಮುಖ್ಯಸ್ಥರಾಗಿದ್ದ ಜೀವಶಾಸ್ತ್ರಜ್ಙ ಎಂ ಕೆ ಪ್ರಸಾದ್ ಅವರೇ ನಮ್ಮನ್ನು ಬರಮಾಡಿಕೊಂಡಿದ್ದರು. ಸಮಾಜದಲ್ಲಿನ ತಮಗಿರುವ ಉನ್ನತ ಸ್ಥಾನದ ಹೊರತಾಗಿಯೂ ಪ್ರಸಾದ್ ಅಂದು ಸಾಮಾನ್ಯ ಬಸ್ಸಿನಲ್ಲಿಯೇ ಬಂದಿದ್ದರು ಮತ್ತು ಬುಷ್ ಶರ್ಟು ಮತ್ತು ರಬ್ಬರ್ ಚಪ್ಪಲಿ ತೊಟ್ಟು ತೀರಾ ಸರಳ ಉಡುಪಿನಲ್ಲಿಯೇ ಇದ್ದರು!

ಆ ಬಳಿಕ ನಾನು ಹಲವು ಬಾರಿ ಕೇರಳಕ್ಕೆ ಹೋಗಿದ್ದೇನೆ. ಒಬ್ಬ ಇತಿಹಾಸಕಾರನಾಗಿ ನನಗೆ ಬಹಳ ಇಷ್ಟವಾಗಿದ್ದು ಅಲ್ಲಿ ಎದ್ದುಕಾಣುವ ಸಮತಾವಾದ; ಎಲ್ಲರನ್ನೂ ಸರಿಸಮನಾಗಿ ಕಾಣುವ ಆ ರಾಜ್ಯದ ಸಾಮಾಜಿಕ ವಾತಾವರಣ. ಆ ಗುಣ ಮತ್ತೊಮ್ಮೆ ಎಲ್ಲರ ಗಮನ ಸೆಳೆದದ್ದು; ಇತ್ತೀಚಿನ ಭಯಾನಕ ಪ್ರವಾಹದ ಹೊತ್ತಲ್ಲಿ ಅಲ್ಲಿನ ಜನ ಜಾತಿ-ಧರ್ಮಗಳನ್ನು ಬದಿಗೊತ್ತಿ ಪರಸ್ಪರರ ನೆರವಿಗೆ ಧಾವಿಸಿದ ಹೊತ್ತಲ್ಲಿ. ಆ ರಾಜ್ಯದ ಹೊರಗಿನ ಕೆಲವು ಕಟ್ಟರ್‌ವಾದಿಗಳು ಹಿಂದೂಗಳನ್ನು ಕ್ರೈಸ್ತರು ಮತ್ತು ಮುಸ್ಲಿಮರ ವಿರುದ್ಧ ಎತ್ತಿಕಟ್ಟುತ್ತಿರುವಾಗ, ಮಲಯಾಳಿಗಳು ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಗಲ್ಫ್‌ನ ಭಾರೀ ಶ್ರೀಮಂತರು ತಮ್ಮ ಬ್ಯಾಂಕ್ ಚೆಕ್‌ಬುಕ್ ತೆಗೆದು ಮನಸಾರೆ ದೇಣಿಗೆಯನ್ನು ನೀಡಿದರೆ, ಇತ್ತ ಕಡುಬಡವ ಮೀನುಗಾರರು ಕೂಡ ಪ್ರವಾಹದಲ್ಲಿ ಸಿಲುಕಿದ ಸಂತ್ರಸ್ತರ ಜೀವರಕ್ಷಣೆಗೆ ಹಗಲಿರುಳೂ ಶ್ರಮಿಸಿದರು. ಹೀಗೆ, ಈ ದುರಂತದ ಹೊತ್ತಲ್ಲಿ ಪ್ರತಿಯೊಬ್ಬರೂ ತಮ್ಮ ಸಾಮಾಜಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮನುಷ್ಯತ್ವ ಮೆರೆದರು.

ಹಾಗಾಗಿ, ಕೇರಳ ಪ್ರವಾಹದಿಂದ ಕಲಿಯಬೇಕಿರುವ ಮೊದಲ ಪಾಠವೆಂದರೆ, ಮನುಷ್ಯರು ಜನರನ್ನು ಒಡೆಯಲು ಮತ್ತು ಆಳಲು ಬಹಳ ಜಾಣ್ಮೆಯಿಂದ ಸೃಷ್ಟಿಸಿಕೊಂಡಿರುವ ತರತಮ ವ್ಯವಸ್ಥೆಯನ್ನು ಪ್ರವಾಹ, ಭೂಕಂಪದಂತಹ ಪ್ರಕೃತಿ ವಿಕೋಪಗಳು ಒಪ್ಪುವುದೇ ಇಲ್ಲ ಎಂಬುದು. ಹಾಗೇ ಆ ಪ್ರವಾಹ ಹೇಳಿರುವ ಮತ್ತೊಂದು ಪಾಠವನ್ನು ಬಹುಶಃ ಅರ್ಥಮಾಡಿಕೊಳ್ಳುವುದು ತುಸು ಕಷ್ಟ ಮತ್ತು ಪಾಲಿಸುವುದು ಇನ್ನೂ ಕಷ್ಟ; ಮನುಷ್ಯನ ನಡವಳಿಕೆ (ಅದರಲ್ಲೂ, ಆತನ ದುರಾಸೆ)ಗೆ ಪ್ರಕೃತಿ ಹಾಕುವ ಮಿತಿಯನ್ನು ಮೀರಿದರೆ ಅಥವಾ ನಿರ್ಲಕ್ಷಿಸಿದರೆ ಅದು ತನ್ನ ಸೇಡು ತೀರಿಸಿಕೊಳ್ಳದೆ ಬಿಡದು ಎಂಬುದು ಆ ಎರಡನೇ ಪಾಠ.

ಒಂದು ವೇಳೆ, ಕೇರಳ ಈ ಎರಡನೇ ಪಾಠವನ್ನು ಆಲಿಸುವುದೇ ಆದರೆ, ಮೊದಲ ಭೇಟಿಯಲ್ಲಿ ನನ್ನೊಂದಿಗೆ ಇದ್ದ ಆ ವಿಜ್ಞಾನಿಯ ಮಾತುಗಳನ್ನು ಕೇಳಿಸಿಕೊಳ್ಳಲೇಬೇಕಿದೆ. ಪಾಶ್ಷಿಮಾತ್ಯ ದೇಶಗಳ ಶೈಕ್ಷಣಿಕ ವಲಯದ ದೊಡ್ಡ ಅವಕಾಶಗಳನ್ನು ಬಿಟ್ಟು ಮಾಧವ್ ಗಾಡ್ಗೀಳ್ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸೇರಿದರು ಮತ್ತು ಅಲ್ಲಿ ಸೆಂಟರ್ ಫಾರ್ ಎಕಾಲಜಿಕಲ್ ಸೈನ್ಸ್ ಎಂಬ ಪರಿಸರ ಅಧ್ಯಯನ ವಿಭಾಗವನ್ನು ಕಟ್ಟಿ ಬೆಳೆಸಿದವರು. ಪರಿಸರ ಹೊಣೆಗಾರಿಕೆಯ ಪ್ರಜ್ಞೆ ಕಟ್ಟುವ ನಿಟ್ಟಿನಲ್ಲಿ ಅವರು ತಮ್ಮ ಕೃತಿ, ಲೇಖನ ಮತ್ತು ಪ್ರಭಾವಿಸಿದ ಮತ್ತು ಪೊರೆದ ತಮ್ಮ ಶಿಷ್ಯ ಬಳಗದ ಮೂಲಕ ದಣಿವರಿಯದೆ ದುಡಿದರು.

ಅಂತಹ ಗಾಡ್ಗೀಳ್ ಅವರ ಕೊಡುಗೆಯ ಪೈಕಿ ಈ ಹೊತ್ತಿಗೆ ಅತ್ಯಂತ ಸಕಾಲಿಕವಾಗಿರುವುದು ಅವರ ನೇತೃತ್ವದ ಪರಿಸರ ಅಧ್ಯಯನ ಸಮಿತಿ ಸಲ್ಲಿಸಿದ ವರದಿ. ಜೈರಾಮ್ ರಮೇಶ್ ಅವರು ಕೇಂದ್ರ ಪರಿಸರ ಸಚಿವರಾದ ಹೊತ್ತಲ್ಲಿ ಅವರೇ ರಚಿಸಿದ್ದ ಆ ಸಮಿತಿ, ಮಿತಿ ಇರದೆ ನೈಸರ್ಗಿಕ ಸಂಪನ್ಮೂಲ ದೋಚಿದ ಮಾನವ ದುರಾಸೆಯಿಂದಾಗಿ ಪಶ್ಚಿಮಘಟ್ಟಕ್ಕೆ ಸದ್ಯ ಎದುರಾಗಿರುವ ಅಪಾಯಗಳು ಕುರಿತ ಸಮಗ್ರ ವಿಶ್ಲೇಷಣೆಯ ವರದಿಯನ್ನು ಸಲ್ಲಿಸಿತ್ತು. “ಪಶ್ಷಿಮಘಟ್ಟಗಳು ಶ್ರೀಮಂತರ ಅಸೀಮ ದುರಾಸೆಯಿಂದ ಛಿದ್ರವಾಗಿವೆ ಮತ್ತು ಬದುಕಿಗಾಗಿ ತನ್ನನ್ನೇ ಅವಲಂಬಿತರಾಗಿರುವ ಬಡವರ ಪಾಲಿಗೆ ಆತಂಕ ತಂದಿವೆ. ಇದೊಂದು ದೊಡ್ಡ ದುರಂತ. ಏಕೆಂದರೆ; ಈ ಪರ್ವತ ಶ್ರೇಣಿ ಇಡೀ ದಕ್ಷಿಣ ಭಾರತದ ಪರಿಸರ ಮತ್ತು ಅರ್ಥವ್ಯವಸ್ಥೆಯ ಬೆನ್ನೆಲುಬು,” ಎಂದು ಗಾಡ್ಗೀಳ್ ವರದಿ ಹೇಳಿತ್ತು. ಮುಂದುವರಿದು, “ಆದಾಗ್ಯೂ ಭರವಸೆಯ ಸಂಗತಿಯೆಂದರೆ; ಅದೇ ಪಶ್ಚಿಮಘಟ್ಟ ಪ್ರದೇಶ ದೇಶದಲ್ಲೇ ಅತಿಹೆಚ್ಚು ಸಾಕ್ಷರತೆಯನ್ನು ಹೊಂದಿದೆ. ಹಾಗೇ ಉನ್ನತ ಮಟ್ಟದ ಪರಿಸರ ಜಾಗೃತಿಯನ್ನು ಹೊಂದಿದೆ. ಜೊತೆಗೆ ಪ್ರಜಾಸತ್ತಾತ್ಮಕ ಸಂಸ್ಥೆಗಳು ಆಳವಾಗಿ ಬೇರೂರಿವೆ. ಪಂಚಾಯತ್ ರಾಜ್‌ನಂತಹ ಸ್ಥಳೀಯ ಸರ್ಕಾರಿ ವ್ಯವಸ್ಥೆಯ ಸಬಲೀಕರಣದ ವಿಷಯದಲ್ಲಿ ಕೇರಳ ದೇಶದಲ್ಲೇ ಮುಂಚೂಣಿಯಲ್ಲಿದೆ,” ಎಂಬುದನ್ನೂ ಆ ವರದಿ ಉಲ್ಲೇಖಿಸಿತ್ತು.

ಹಲವು ದಶಕಗಳ ತಳಮಟ್ಟದ ಅನುಭವ ಮತ್ತು ಹೊಸ-ಹೊಸ ವೈಜ್ಞಾನಿಕ ಅಧ್ಯಯನಗಳ ಬಲದ ಮೇಲೆ ರೂಪಿತವಾಗಿದ್ದ ಗಾಡ್ಗೀಳ್ ವರದಿ, ಪರಿಸರ ಸಂರಕ್ಷಣೆಯ ಜೊತೆಜೊತೆಗೇ ಆರ್ಥಿಕ ಪ್ರಗತಿಯನ್ನೂ ಸಾಧಿಸುವ ಸುಸ್ಥಿರ ಪ್ರಯತ್ನವನ್ನು ಶಿಫಾರಸು ಮಾಡಿತ್ತು. “ಅಭಿವೃದ್ಧಿ ಯೋಜನೆಗಳು ಜಿಗುಟು ಚೌಕಟ್ಟಿನಡಿ ಬಂಧಿಯಾಗಬಾರದು, ಸ್ಥಳೀಯ ರೂಢಿಗತ ಕ್ರಮಗಳು ಮತ್ತು ಆ ಹೊತ್ತಿನ ಪರಿಸ್ಥಿತಿಗೆ ಅನುಗಣವಾಗಿ ಸ್ಥಳೀಯ ಜನತೆಯ ಸಂಪೂರ್ಣ ಪಾಲ್ಗೊಳ್ಳುವಿಕೆಯ ಮೂಲಕವೇ, ಸಮನ್ವಯದ ಸಹ ಭಾಗಿತ್ವದ ನಿರ್ವಹಣೆ ಎನ್ನಲಾಗುವ ರೀತಿಯಲ್ಲಿಯೇ ಜಾರಿಗೆ ಬರಬೇಕು,” ಎಂದು ವರದಿ ಹೇಳಿತ್ತು. ಅಂದರೆ, “ಅದು ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸೆದುಕೊಂಡೇ ಸಾಗಬೇಕೆ ವಿನಃ ಒಂದನ್ನೊಂದು ಪ್ರತ್ಯೇಕ, ವಿರುದ್ಧ ದಿಕ್ಕಿನವು ಎಂಬ ವರಸೆಯಲ್ಲಿ ಅಲ್ಲ,” ಎಂಬುದು ವರದಿಯ ಸಾರವಾಗಿತ್ತು.

ಇದನ್ನೂ ಓದಿ : ಪ್ರವಾಹದಂಥ ದುಸ್ಥಿತಿಯನ್ನು ಕೇರಳ ಘನತೆಯಿಂದ ನಿಭಾಯಿಸಿದ್ದರ ಗುಟ್ಟೇನು ಗೊತ್ತೇ?
ಇದನ್ನೂ ಓದಿ : ಈ ಕಾಲ | ಆಗಸ್ಟ್‌ನಲ್ಲಿ ಅಗಲಿದ ಈ ಮೂವರಲ್ಲೂ ಒಂದು ಕುತೂಹಲಕರ ಸಾಮ್ಯ ಉಂಟು!

ಹಾಗೇ, “ಪರಿಸರ ಸೂಕ್ಷ್ಮತೆ ಎಂಬುದು ವೈಜ್ಞಾನಿಕ ಸಂಗತಿಯೇನಲ್ಲ, ಅದು ಅತ್ಯಂತ ಮಾನವೀಯ ಕಾಳಜಿ,” ಎಂಬುದನ್ನು ಗಾಡ್ಗೀಳ್ ವರದಿ ಒತ್ತಿ ಹೇಳಿತ್ತು. ಅಲ್ಲದೆ, ಹಳ್ಳಿಗಾಡಿನ ಕೃಷಿಕರು, ಕರಕುಶಲಕರ್ಮಿಗಳು, ಹೈನುಗಾರರು ಮತ್ತು ಮೀನುಗಾರರಂತಹ ಸಮುದಾಯಗಳ ಜಾನಪದ ಜ್ಞಾನವನ್ನೂ ಸೇರಿಸಿಕೊಂಡು ಆಧುನಿಕ ವಿಜ್ಞಾನ ಕೂಡ ತನ್ನನ್ನು ತಾನು ಶ್ರೀಮಂತಗೊಳಿಸಿಕೊಳ್ಳಬೇಕಿದೆ ಎಂದೂ ವರದಿ ಅಭಿಪ್ರಾಯಪಟ್ಟಿತ್ತು. “ಆಡಳಿತಾತ್ಮಕವಾಗಿ ಅತಿಯಾದ ನಿರ್ಬಂಧದ ಕೇಂದ್ರೀಕೃತ ವ್ಯವಸ್ಥೆ ನಮ್ಮಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಮತ್ತು ಮಾಡುವುದು ಸಾಧ್ಯವೂ ಇಲ್ಲ,” ಎಂಬ ಅಂಶದ ಕಡೆಗೂ ಗಮನ ಸೆಳೆದಿತ್ತು. ಆ ಹಿನ್ನೆಲೆಯಲ್ಲಿ ರಾಜಕೀಯ ವ್ಯವಸ್ಥೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಪರಿಸರದ ವಿಷಯದಲ್ಲಿ ಸ್ಥಳೀಯವಾಗಿ ತೀರ್ಮಾನಗಳನ್ನು ಕೈಗೊಳ್ಳುವಂತಹ ವ್ಯವಸ್ಥೆಯನ್ನು ಪ್ರೋತ್ಸಾಹಿಸಬೇಕಿದೆ. ಅದಕ್ಕಾಗಿ ಬಹುಕೇಂದ್ರಿತ ಆಡಳಿತ ವ್ಯವಸ್ಥೆಯತ್ತ ಸಾಗಬೇಕಿದೆ. ಹೊಸ ಹೊಣೆಗಾರಿಕೆ, ಕಲಿಕೆ, ಸಹಕಾರ, ಪರಿಸರದ ಒತ್ತಡಗಳನ್ನು ತಾಳಿಕೊಳ್ಳುವ ಮತ್ತು ಬದಲಾವಣೆಗಳಿಗೆ ಹೊಸ ವಿನೂತನ ರೀತಿಯ ಪ್ರತಿಕ್ರಿಯೆಗಳಿಗೆ ಅವಕಾಶ ಇರುವ ಸ್ಥಳೀಯವಾಗಿ ತೀರ್ಮಾನ ಕೈಗೊಳ್ಳುವ ಹಲವು ಕೇಂದ್ರಗಳಿಗೆ ಅವಕಾಶ ನೀಡಬೇಕಿದೆ ಎಂದೂ ಶಿಫಾರಸು ಮಾಡಿತ್ತು.

ಇದನ್ನೂ ಓದಿ : ಪ್ರವಾಹದಂಥ ದುಸ್ಥಿತಿಯನ್ನು ಕೇರಳ ಘನತೆಯಿಂದ ನಿಭಾಯಿಸಿದ್ದರ ಗುಟ್ಟೇನು ಗೊತ್ತೇ?
ಇದನ್ನೂ ಓದಿ : ಈ ಕಾಲ | ಆಗಸ್ಟ್‌ನಲ್ಲಿ ಅಗಲಿದ ಈ ಮೂವರಲ್ಲೂ ಒಂದು ಕುತೂಹಲಕರ ಸಾಮ್ಯ ಉಂಟು!

ಕೃಷಿ, ಹೈನುಗಾರಿಕೆ, ಅರಣ್ಯೀಕರಣ, ಮೀನುಗಾರಿಕೆ, ಇಂಧನ, ಉದ್ಯಮ, ಮೂಲಸೌಕರ್ಯ ಸೇರಿದಂತೆ ಆರ್ಥಿಕ ಚಟುವಟಿಕೆಯ ಎಲ್ಲಾ ವಲಯಗಳನ್ನೂ ಗಾಡ್ಗೀಳ್ ವರದಿ ವಿಶ್ಲೇಷಿಸಿದೆ. ಈ ಎಲ್ಲಾ ವಲಯಗಳಲ್ಲಿನ ಸದ್ಯದ ಚಾಲ್ತಿಯ ರೂಢಿಗತ ಚಟುವಟಿಕೆಗಳನ್ನೂ ಅದು ಅಧ್ಯಯನ ನಡೆಸಿದೆ. ಹಾಗೇ ಹೊಸ ವೈಜ್ಞಾನಿಕ ಆವಿಷ್ಕಾರಗಳು ಮತ್ತು ಜನಸಹಭಾಗಿತ್ವದ ನೀತಿನಿರ್ಧಾರಗಳ ಮೂಲಕ ಹೇಗೆ ಈ ವಲಯಗಳನ್ನು ಹೆಚ್ಚು ಸುಸ್ಥಿತರವೂ ಮತ್ತು ಪ್ರಯೋಜನಕಾರಿಯೂ ಆಗಿ ಮಾಡಬಹುದು ಎಂಬುದನ್ನೂ ವಿವರಿಸಿದೆ. ವರದಿಯಲ್ಲಿ ಗಣಿಗಾರಿಕೆ ಮತ್ತು ಅದು ಸೃಷ್ಟಿಸಿರುವ ಅನಾಹುತಗಳ ಬಗ್ಗೆ ವಿವರವಾಗಿ ಒಂದು ಕಡೆ ಹೇಳಲಾಗಿದೆ. ಗಣಿಗಾರಿಕೆ ಹೇಗೆ ಅರಣ್ಯ ನಾಶ ಮಾಡಿತು, ಮಣ್ಣಿನ ಫಲವತ್ತತೆ ನಾಶಪಡಿಸಿತು, ವಾತಾವರಣವನ್ನು ಮಲಿನಗೊಳಿಸಿತು ಮತ್ತು ನೀರಿನ ಮೂಲಗಳನ್ನು ಹಾಳುಮಾಡಿತು ಎಂಬುದನ್ನು ವಿವರಿಸುತ್ತಲೇ, ಜನರ ಆರೋಗ್ಯವನ್ನೂ ಹೇಗೆ ದುಸ್ಥಿತಿಗೆ ತಂದಿತು ಮತ್ತು ರೈತರು, ಹೈನುಗಾರರು, ಮೀನುಗಾರರನ್ನು ಅವರ ದುಡಿಮೆಯಿಂದ ಹೊರತಳ್ಳಿತು ಎಂಬುದನ್ನೂ ವಿಶ್ಲೇಷಿಸಲಾಗಿದೆ.

ದೇಶದ ಉದ್ದಗಲಕ್ಕೂ ಯಾವ ಲಂಗುಲಗಾಮಿಲ್ಲದ ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಪರಿಸರ ಲೂಟಿಯಲ್ಲಿ ಗುತ್ತಿಗೆದಾರರೊಂದಿಗೆ ರಾಜಕಾರಣಗಳೂ ಕೈಜೋಡಿಸಿರುವುದರಿಂದ ಆ ದರೋಡೆಗೆ ಮಿತಿ ಇಲ್ಲದಾಗಿದೆ. ಪರಿಣಾಮವಾಗಿ ಸ್ಥಳೀಯ ಸಮುದಾಯಗಳು ತಮ್ಮ ಆದಾಯ ಮತ್ತು ಆಸರೆ ಕಳೆದುಕೊಂಡು ಸಾಲುಸಾಲಾಗಿ ಬೀದಿಪಾಲಾಗುತ್ತಿವೆ. ಕಲ್ಲು ಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಯಿಂದಾಗಿ ಉಂಟಾದ ಭೂ ಕುಸಿತ, ಮಣ್ಣಿನ ಸವಕಳಿಗಳು ಕೇರಳದ ಪ್ರವಾಹದ ತೀವ್ರತೆಗೆ ಪ್ರಮುಖ ಕಾರಣ ಎಂಬುದನ್ನು ಹಲವು ಸಾಕ್ಷಾತ್ ಅಧ್ಯಯನ ವರದಿಗಳೇ ದೃಢಪಡಿಸಿವೆ.

ಜೈರಾಂ ರಮೇಶ್ ಅವರು ಕಾಳಜಿ ವಹಿಸಿ ರಚಿಸಿದ್ದ ಸಮಿತಿ ನೀಡಿದ ಗಾಡ್ಗೀಳ್ ವರದಿಯನ್ನು, ಅವರ ನಂತರ ಪರಿಸರ ಖಾತೆ ವಹಿಸಿಕೊಂಡ ಸಚಿವರು ಮೂಲೆಗುಂಪು ಮಾಡಿದರು. ಅಷ್ಟೇ ಅಲ್ಲ, ಆ ಸಚಿವರು ವರದಿಯನ್ನು ಸಾರ್ವಜನಿಕರಿಗೆ ಸಿಗದಂತೆಯೂ ನೋಡಿಕೊಂಡಿದ್ದರು. ಆದರೆ, ಮಾಹಿತಿ ಆಯುಕ್ತರ ಕ್ರಮದಿಂದಾಗಿ ವರದಿ ಆನ್‌ಲೈನ್‌ನಲ್ಲಿ ಈಗ ದೊರೆಯುಂತಾಯಿತು. ಇತ್ತೀಚಿನ ಪಶ್ಚಿಮಘಟ್ಟ ವ್ಯಾಪ್ತಿಯ ದುರಂತಗಳ ಹಿನ್ನೆಲೆಯಲ್ಲಿ ಗಾಡ್ಗೀಳ್ ಅವರ ವರದಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕಿದೆ ಮತ್ತು ವ್ಯಾಪಕ ಚರ್ಚೆಗೆ ಒಳಪಡಿಸಬೇಕಿದೆ. ಏಕೆಂದರೆ, ಆ ವರದಿ ಹೇಳುವ ಪಾಠ ಕೇವಲ ಕೇರಳಕ್ಕೆ ಮಾತ್ರವಲ್ಲ, ಇತ್ತೀಚಿನ ದಶಕಗಳಲ್ಲಿ ಘಟ್ಟಗಳ ಮೇಲೆ ಅವ್ಯಾಹತ ದಾಳಿ ನಡೆದಿರುವ ಕರ್ನಾಟಕ, ಗೋವಾ, ಮಹಾರಾಷ್ಟ್ರಗಳಿಗೂ ಅನ್ವಯಿಸುತ್ತದೆ.

ಹಾಗೆ ನೋಡಿದರೆ, ಗಾಡ್ಗೀಳ್ ವರದಿಯ ಚಿಂತನೆಗಳು ಪಶ್ಚಿಮಘಟ್ಟಕ್ಕಿಂತ ಹೆಚ್ಚು ಸೂಕ್ಷ್ಮವಾದ ಹಿಮಾಲಯ ಶ್ರೇಣಿಗೂ ಹೆಚ್ಚು ಅನ್ವಯವಾಗುತ್ತವೆ. ಅಲ್ಲಿನ ವ್ಯಾಪಕ ಅರಣ್ಯ ನಾಶ, ಗಣಿಗಾರಿಕೆ, ಯಾವ ಗೊತ್ತುಗುರಿ ಇಲ್ಲದೆ ರಸ್ತೆ ಅಗಲೀಕರಣ ಮತ್ತು ನದಿ ದಂಡೆಯ ಅತಿಕ್ರಮಣಗಳು ನಡೆಯದೇ ಹೋಗಿದ್ದರೆ, ಬಹುಶಃ ೨೦೧೩ರ ಉತ್ತರಾಖಂಡ ಪ್ರಹಾಹದಲ್ಲಿ ಆ ಪ್ರಮಾಣದ ಜೀವ ಮತ್ತು ಆಸ್ತಿಪಾಸ್ತಿ ಹಾನಿ ಸಂಭವಿಸುತ್ತಿರಲಿಲ್ಲ. ಪಶ್ಚಿಮಘಟ್ಟ ಪ್ರದೇಶದಂತೆಯೇ ಹಿಮಾಲಯ ವಲಯದಲ್ಲೂ ದೂರದೃಷ್ಟಿಯ ಮತ್ತು ವಿವೇಚನೆಯ ನಡೆಗಳು ತೀರಾ ಜರೂರು. ಅಂತಹ ವಿವೇಚನೆ ಬರಬೇಕೆಂದರೆ ಭ್ರಷ್ಟ ರಾಜಕಾರಣಿಗಳು ಮತ್ತು ಧನದಾಹಿ ಗುತ್ತಿಗೆದಾರರಿಗೆ ಕಡಿವಾಣ ಬೀಳಬೇಕಿದೆ. ಅದಕ್ಕೆ ನಾಗರಿಕ ಹೋರಾಟದಂತೆಯೇ ವೈಜ್ಞಾನಿಕ ಅರಿವು ಕೂಡ ಜೊತೆಜೊತೆಯಾಗಿ ಕೆಲಸ ಮಾಡಬೇಕಿದೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More