ಮೂಡಲ್ಮಾತು | ‘ದಲಿತ’ ಕಂಡರೆ ಯಾಕೆ ಹೊಟ್ಟೆನೋವು?

ಭಾರತದ ತಳಸಮುದಾಯ, ಅಂದರೆ, ಆಚೆ ಎಸೆಯಲ್ಪಟ್ಟವರು, ಚಾತುರ್ವರ್ಣ ಒಪ್ಪದವರು ತಮ್ಮನ್ನು ದಲಿತರು ಎಂದು ಕರೆದುಕೊಳ್ಳುತ್ತಿರುವುದಕ್ಕೆ ಕೇಂದ್ರ ಸರ್ಕಾರದ ಕಣ್ಣು ಕೆಂಪಾಗಿದೆ. ‘ದಲಿತ’ ಎಂಬ ಪದವು ಜಾತಿ ಪದ್ಧತಿಯ ವರ್ತುಲದ ಒಳಗೆ ಬರುವುದಿಲ್ಲವೆಂಬುದು ಇದಕ್ಕೆ ಕಾರಣವೇ?

ನೆನಪಿರಲಿ, ಭಾರತವು ತನ್ನ ಜಾತಿ ಸಂಕೀರ್ಣ (Complex) ಸಮಾಜವನ್ನೇ ಒಂದು ಧರ್ಮ ಎಂದು ಚಾಲೂ ಮಾಡಲು ‘ಹಿಂದೂ’ ಎಂಬ ಪದವನ್ನು ಹೊರಗಿನವರು ನೀಡಿದ್ದರೂ, ಅದನ್ನು ಸ್ವೀಕರಿಸಿ ಆ ಪದವನ್ನು ತಮ್ಮ ಧರ್ಮ ಎಂದು ಕರೆದುಕೊಂಡಿದೆ. ಇದರ ಬಗ್ಗೆ ನಮ್ಮ ಏನೇ ಆಕ್ಷೇಪಣೆಗಳು ಇದ್ದರೂ, ಅದನ್ನು ಭಾರತದ ಉದಾರವಾದ ಮನಸ್ಸು ಎಂದೇ ಹೇಳಬೇಕಾಗುತ್ತದೆ. ಆದರೆ, ಭಾರತದ ತಳಸಮುದಾಯಗಳು, ಅಂದರೆ ಒಡೆದುಹೋದವರು, ಆಚೆ ಎಸೆಯಲ್ಪಟ್ಟವರು, ಚಾತುರ್ವರ್ಣವನ್ನು ಒಪ್ಪದವರು, ಹಂಚಿಹೋದವರು ತಮ್ಮನ್ನು ದಲಿತರು ಎಂದು ಕರೆದುಕೊಳ್ಳುತ್ತಿರುವುದಕ್ಕೆ ಕೇಂದ್ರ ಸರ್ಕಾರದ ಕಣ್ಣು ಕೆಂಪಾಗಿದೆ. ಕೇಂದ್ರ ಸರ್ಕಾರಕ್ಕೆ ಯಾಕೆ ಹೊಟ್ಟೆನೋವು? ಇದು ನನಗೆ ಅರ್ಥವಾಗುತ್ತಿಲ್ಲ. ದಲಿತ ಪದವು ಜಾತಿ ಪದ್ಧತಿಯ ವರ್ತುಲದ ಒಳಗೆ ಬರುವುದಿಲ್ಲ. ಇದು ಕಾರಣವೇ? ಇರಬಹುದು ಅನ್ನಿಸುತ್ತಿದೆ.

ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆ ಕೊಡುವೆ: ಕನ್ನಡದಲ್ಲಿ ತಳ ಎನ್ನುವ ಪದವೊಂದಿದೆ. ತಳ ಎಂದರೆ ಸ್ಥಳ, ತಳಪಾಯ, ಸ್ಥಳೀಕ ಇತ್ಯಾದಿ ಅನೇಕ ಅರ್ಥಗಳಿವೆ. ಚಾತುರ್ವರ್ಣ ಹಾಗೂ ಜಾತಿಯಿಂದ ನಲುಗಿದ ಛಿದ್ರಗೊಂಡ ತಳಸಮುದಾಯಗಳು ತಮ್ಮ-ತಮ್ಮ ಸಣ್ಣಪುಟ್ಟ ಛಿದ್ರತೆಗಳನ್ನು ಮೀರಿ, ದಲಿತ ಎಂಬ ವಿಶಾಲ ವೇದಿಕೆಯಲ್ಲಿ ಸಂಘಟಿತರಾಗುವುದೆಂದರೆ ಅದು ಇದ್ದುದರಲ್ಲೇ ಅಷ್ಟೋ ಇಷ್ಟೋ ಸೆಕ್ಯುಲರ್ ಆಗುವ ಕಡೆಗಿನ ನಡಿಗೆ. ಆದರೆ, ಜಾತಿಯ ಭಾರತದ ಮನಸ್ಸು ಸೆಕ್ಯುಲರ್ ಪ್ರವೃತ್ತಿಯನ್ನು ತನ್ನ ಬುಡಕ್ಕೆ ಬೀಳುವ ಕೊಡಲಿ ಏಟು ಎಂಬಂತೆ ಭಾವಿಸುತ್ತಿದೆ. ತಾನು ಬ್ರಾಹ್ಮಣನಾಗಿ ಹುಟ್ಟಿದ್ದಕ್ಕಾಗಿ ಪರಿತಪಿಸುವ ಸಂವೇದನಾಶೀಲನಾದ, ಮಹೋನ್ನತ ಜೀವಿಯಾದ ಧರ್ಮಾನಂದ ಕೊಸಾಂಬಿಯವರನ್ನು ಭಾರತ ಮರೆತುಬಿಟ್ಟಿದೆ. ಜಾತಿಯ ಬಚ್ಚಲುನೀರನ್ನೇ ಪವಿತ್ರ ಗಂಗಾಜಲವೆಂದು ಭ್ರಮಿಸಿ ಮುಳುಗೇಳುತ್ತಿರುವ ಭಾರತದಲ್ಲಿ ಹುಟ್ಟುವ ಎಲ್ಲರಿಗೂ ಈ ಸೂಕ್ಷ್ಮತೆ ಕಿಂಚಿತ್ತಾದರೂ ಹುಟ್ಟಬೇಕಾಗಿದೆ. ಇಂದು ಇದು ಭಾರತದ ಉಳಿವಿಗೆ ತುರ್ತಾಗಿ ಬೇಕಾಗಿದೆ.

ಇದನ್ನೂ ಓದಿ : ಮೂಡಲ್ಮಾತು | ಮೇಲ್ಮನೆ ವಿಸರ್ಜನೆಯೇ ಚುನಾವಣಾ ಸುಧಾರಣೆಯ ಮೊದಲ ಹೆಜ್ಜೆಯಾಗಲಿ

ಇದಕ್ಕೆ ಏನು ಮಾಡೋಣ? ಮಾತು ಮಾತಾಡುವುದು ಬೇಡ. 'ರಾಮ್ ರಾಮ್' ರೀತಿಯ ಡಿಸೈನ್ ಉಡುಪಿನಂತೆ ‘ದಲಿತ್ ದಲಿತ್’ ಉಡುಪನ್ನು ಧರಿಸಿದ ದಲಿತ ವಾದ್ಯಗಾರರು ತಮ್ಮ ವಾದ್ಯ, ತಮಟೆ ಇತ್ಯಾದಿಗಳನ್ನು ನುಡಿಸುವ ಮುಖಾಂತರ ಮಾತಾಡಬೇಕಾಗಿದೆ. ಇದಕ್ಕೆ ಪ್ರತಿ ರಾಜ್ಯದಲ್ಲೂ ದಲಿತ ವಾದ್ಯಗಳ ಸಮ್ಮಿಲನ ಕಾರ್ಯಕ್ರಮ ಉತ್ತರವಾಗಲಿ. ಯಾಕೆಂದರೆ, ಮುದುಡಿಕೊಂಡ ದಲಿತವು ಸಾಂಸ್ಕೃತಿಕ ಅಭಿವ್ಯಕ್ತಿಯಾಗಿ ಅರಳಿದರೆ, ಇದರೊಳಗಿಂದ ಸಹನೆ, ಪ್ರೀತಿ, ಸಹಬಾಳ್ವೆ, ಸಮತ್ವಗಳು (balanced equality) ಮೊಳಕೆ ಒಡೆಯಲೂಬಹುದು. ಇದು ದಿಕ್ಕೆಟ್ಟ ಭಾರತಕ್ಕೆ ದಿಕ್ಕಾಗಲೂಬಹುದು.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More