ಇಲಾಜು | ಆರೋಗ್ಯ ಸೇವೆ ಕೊರತೆಯಿಂದ 2016ರಲ್ಲಿ 25 ಲಕ್ಷ ಭಾರತೀಯರ ಪ್ರಾಣಹರಣ

ಸುಸಜ್ಜಿತವಾದ, ಸುಲಭವಾಗಿ ಎಲ್ಲರಿಗೂ ಎಟುಕುವಂಥ ಆರೋಗ್ಯ ಸೇವೆಗಳು ದೇಶದಲ್ಲಿ ಇದ್ದಿದ್ದರೆ 2016ರಲ್ಲಿ ಬರೋಬ್ಬರಿ 24 ಲಕ್ಷ ಮಂದಿಯನ್ನು ಬದುಕಿಸಬಹುದಿತ್ತು. ಇನ್ನು, ಚಿಕಿತ್ಸೆ ದೊರೆಯದೆ ಆದ ಸಾವುಗಳಿಗಿಂತ ಕಳಪೆ ಚಿಕಿತ್ಸೆಯಿಂದ ಸಂಭವಿಸಿದ ಸಾವುಗಳು ಎರಡು ಪಟ್ಟು ಎಂಬುದು ಗಮನಾರ್ಹ

ವಿಶ್ವದಲ್ಲಿ ಎರಡನೇ ಅತಿ ದೊಡ್ಡದಾದ ಭಾರತದ ಜನತೆಯ ಆರೋಗ್ಯದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸಕ್ತಿಯೂ, ಆತಂಕವೂ ಹೆಚ್ಚುತ್ತಿದೆ. ಅತ್ಯಂತ ಹಳೆಯದಾದ (1823ರಿಂದ) ಮತ್ತು ಪ್ರತಿಷ್ಠೆಯ ವೈದ್ಯಕೀಯ ವಿದ್ವತ್ ಪತ್ರಿಕೆಯಾದ ‘ದಿ ಲಾನ್ಸೆಟ್‌’ ಇದೇ ತಿಂಗಳಲ್ಲಿ ಭಾರತೀಯರ ಆರೋಗ್ಯದ ಬಗ್ಗೆ ಐದು ಅಧ್ಯಯನಗಳ ವರದಿಗಳನ್ನು ಒಮ್ಮೆಗೇ ಪ್ರಕಟಿಸಿದೆ. ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಆರೋಗ್ಯ ಸೇವೆಗಳ ವಿಷಯವು ನಿರ್ಣಾಯಕ ಎನಿಸುವ ಸಾಧ್ಯತೆಗಳಿವೆ ಎಂದು ‘ಲಾನ್ಸೆಟ್‌’ನ ಪ್ರಧಾನ ಸಂಪಾದಕ ರಿಚರ್ಡ್ ಹೋರ್ಟನ್ ಬರೆದಿದ್ದಾರೆ.

ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ನೇತೃತ್ವದಲ್ಲಿ ನಡೆಯುತ್ತಿರುವ 1990-2016ರ ನಡುವಿನ ಜಾಗತಿಕ ರೋಗ ಹೊರೆಯ ಅಧ್ಯಯನದ ಆಧಾರದಲ್ಲಿ ಈ ವರದಿಗಳನ್ನು ತಯಾರಿಸಲಾಗಿದೆ; ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು, ಕೇಂದ್ರ ಆರೋಗ್ಯ ಇಲಾಖೆ, ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಮುಂತಾದ ಸಂಸ್ಥೆಗಳು ಈ ಅಧ್ಯಯನಗಳಲ್ಲಿ ಭಾಗಿಯಾಗಿವೆ. ಈ ಅವಧಿಯಲ್ಲಿ ನಮ್ಮ ತಲಾವಾರು ರೋಗ ಹೊರೆಯು ಇಳಿದಿದ್ದರೂ, ನೆರೆಹೊರೆಯವರಿಗೆ ಹೋಲಿಸಿದರೆ ಹೆಮ್ಮೆಪಟ್ಟುಕೊಳ್ಳುವ ಸಾಧನೆಯೇನೂ ನಮ್ಮದಲ್ಲ.

ಜಾಗತಿಕ ರೋಗ ಹೊರೆಯ ಅಧ್ಯಯನ- 2016ರ ಆಧಾರದಲ್ಲಿ 195 ದೇಶಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ ಹಾಗೂ ಗುಣಮಟ್ಟಗಳ ವಿಶ್ಲೇಷಣೆಯು ಈ ಮೊದಲೇ, (2018ರ ಮೇ 23) ‘ಲಾನ್ಸೆಟ್‌’ನಲ್ಲಿ ಪ್ರಕಟವಾಗಿತ್ತು. ಭಾರತವು ಆರೋಗ್ಯ ಸೇವೆಗಳ ಮಟ್ಟದಲ್ಲಿ 195 ದೇಶಗಳ ಪೈಕಿ 145ನೇ ಸ್ಥಾನದಲ್ಲಿದ್ದರೆ; ನೆರೆಯ ಚೀನಾ, ಶ್ರೀಲಂಕಾ, ಮಾಲ್ದೀವ್ಸ್‌, ಬಾಂಗ್ಲಾದೇಶ ಹಾಗೂ ಬೂತಾನ್‌ಗಳು ಕ್ರಮವಾಗಿ 48, 71, 72, 133 ಹಾಗೂ 134ನೇ ಸ್ಥಾನಗಳಲ್ಲಿವೆ, ಇತರ ಬ್ರಿಕ್ಸ್ ದೇಶಗಳೂ, ಸುಡಾನ್, ನೈಜೀರಿಯಾ, ಯೆಮೆನ್‌ಗಳಂತಹ ಕೆಲವು ದೇಶಗಳೂ ಭಾರತಕ್ಕಿಂತ ಉತ್ತಮವಾಗಿವೆ. 1990ಕ್ಕೆ ಹೋಲಿಸಿದರೆ, 2016ರಲ್ಲಿ ಭಾರತದಲ್ಲಿ ಆರೋಗ್ಯ ಸೇವೆಗಳ ಲಭ್ಯತೆಯ ಸೂಚ್ಯಂಕವು 24.7ರಿಂದ 41.2ಕ್ಕೆ ಉತ್ತಮಗೊಂಡಿದ್ದರೂ, ದೇಶದೊಳಗಿನ ಪ್ರಾದೇಶಿಕ ಅಸಮಾನತೆಯು ಹೆಚ್ಚಾಗಿದೆ; 2016ರಲ್ಲಿ ಗೋವಾ ಮತ್ತು ಕೇರಳಗಳಲ್ಲಿ ಸೂಚ್ಯಂಕವು 64.8 ಹಾಗೂ 63.9ರಷ್ಟಿದ್ದರೆ, ಅಸ್ಸಾಂ ಮತ್ತು ಉತ್ತರ ಪ್ರದೇಶಗಳಲ್ಲಿ 34 ಹಾಗೂ 34.9ರಷ್ಟು ಕಡಿಮೆ ಇದೆ. ಕರ್ನಾಟಕ ಮತ್ತು ಗುಜರಾತ್ 46.6 ಹಾಗೂ 45 ಅಂಕಗಳೊಂದಿಗೆ 14 ಮತ್ತು 17ನೇ ಸ್ಥಾನಗಳಲ್ಲಿವೆ.

‘ಲಾನ್ಸೆಟ್‌’ನಲ್ಲಿ ಇದೇ ಸೆಪ್ಟೆಂಬರ್ 5ರಂದು ಪ್ರಕಟವಾದ ಇನ್ನೊಂದು ವರದಿಯ ಅನುಸಾರ, ಬಡ ಹಾಗೂ ಮಧ್ಯಮ ಆದಾಯವುಳ್ಳ 137 ದೇಶಗಳಲ್ಲಿ ಆರೋಗ್ಯ ಸೇವೆಗಳ ಕೊರತೆಯಿಂದ 2016ರಲ್ಲಿ ಒಂದೂವರೆ ಕೋಟಿ ಹೆಚ್ಚುವರಿ ಸಾವುಗಳಾಗಿವೆ. ಅವುಗಳಲ್ಲಿ 50 ಲಕ್ಷ ಸಾವುಗಳು ಕಳಪೆ ಚಿಕಿತ್ಸೆಯ ಕಾರಣದಿಂದಲೂ, 36 ಲಕ್ಷ ಸಾವುಗಳು ಆರೋಗ್ಯ ಸೇವೆಗಳ ಅಲಭ್ಯತೆಯಿಂದಲೂ ಸಂಭವಿಸಿವೆ. ನಮ್ಮಲ್ಲಿ 2016ರಲ್ಲಿ ಇವೇ ಕಾರಣಗಳಿಂದಾದ ಸಾವುಗಳ ಸಂಖ್ಯೆಯು ಕ್ರಮವಾಗಿ 16 ಲಕ್ಷ ಹಾಗೂ 84 ಸಾವಿರದಷ್ಟಿವೆ. ಅಂದರೆ, ಆಸ್ಪತ್ರೆಗಳು ದೊರೆಯದಿದ್ದುದಕ್ಕಿಂತ ಎರಡು ಪಟ್ಟು ಹೆಚ್ಚು ಸಾವುಗಳು ಕಳಪೆ ಚಿಕಿತ್ಸೆಯ ಕಾರಣದಿಂದಾದವು. ಅದೇ ವರದಿಯ ಅನುಸಾರ, ಸುಸಜ್ಜಿತವಾದ, ಸುಲಭವಾಗಿ ಎಟಕುವ ಆರೋಗ್ಯ ಸೇವೆಗಳಿದ್ದರೆ ಈ 24 ಲಕ್ಷ ಸಾವುಗಳನ್ನು ತಡೆಯಬಹುದಿತ್ತು ಹಾಗೂ ಸಾಮುದಾಯಿಕ ರೋಗ ನಿಯಂತ್ರಣಾ ಕಾರ್ಯಕ್ರಮಗಳಿಂದ 15 ಲಕ್ಷ ಸಾವುಗಳನ್ನು ತಡೆಯಬಹುದಿತ್ತು.

‘ಲಾನ್ಸೆಟ್‌’ನಲ್ಲಿ ಪ್ರಕಟವಾದ ಇನ್ನುಳಿದ ವರದಿಗಳಲ್ಲಿ ಭಾರತೀಯರನ್ನು ಕಾಡುತ್ತಿರುವ ಕಾಯಿಲೆಗಳ ವಿವರಗಳಿವೆ. ಇಪ್ಪತ್ತನೇ ಶತಮಾನದಲ್ಲಿ ಸೋಂಕುಗಳು, ತಾಯಂದಿರು ಮತ್ತು ನವಜಾತ ಶಿಶುಗಳ ಸಮಸ್ಯೆಗಳು ಹಾಗೂ ಪೋಷಣೆಯ ಸಮಸ್ಯೆಗಳೇ ಹೆಚ್ಚಿನ ಪ್ರಮಾಣದಲ್ಲಿದ್ದರೆ, 2003ರ ಬಳಿಕ ಸೋಂಕು ರೋಗಗಳಲ್ಲದ ಬೊಜ್ಜು, ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಇತ್ಯಾದಿಗಳು ಹೆಚ್ಚಾಗತೊಡಗಿವೆ. ಸೋಂಕು, ತಾಯಿ-ಶಿಶುಗಳ ಸಮಸ್ಯೆಗಳು ಹಾಗೂ ಪೋಷಣೆಯ ಸಮಸ್ಯೆಗಳು 1990ರಿಂದ 2016ರ ನಡುವೆ ದೇಶದೆಲ್ಲೆಡೆ ಇಳಿಮುಖವಾಗಿದ್ದರೂ, ಕೇರಳ, ಗೋವಾ, ತಮಿಳುನಾಡುಗಳಂತಹ ಸ್ಥಿತಿವಂತ ರಾಜ್ಯಗಳಿಗೆ ಹೋಲಿಸಿದರೆ, ಬಿಹಾರ್, ಜಾರ್ಖಂಡ್, ಉತ್ತರ ಪ್ರದೇಶಗಳಂತಹ ಹಿಂದುಳಿದ ರಾಜ್ಯಗಳಲ್ಲಿ ಇಳಿಕೆಯ ಗತಿಯು ನಿಧಾನವಾಗಿದೆ. ಇದೇ ಕಾಲಾವಧಿಯಲ್ಲಿ ಸೋಂಕಲ್ಲದ ಆಧುನಿಕ ರೋಗಗಳು ದೇಶದೆಲ್ಲೆಡೆ ಎಲ್ಲ ವಯಸ್ಸಿನವರಲ್ಲಿ ಹೆಚ್ಚುತ್ತಲೇ ಇದ್ದು, ಸ್ಥಿತಿವಂತ ರಾಜ್ಯಗಳಲ್ಲಿ ಇನ್ನೂ ಹೆಚ್ಚಿದೆ. ವಾಯುಮಾಲಿನ್ಯ ಮತ್ತು ಆಕಸ್ಮಿಕ ಗಾಯಗಳ ಸಮಸ್ಯೆಗಳು ಕೂಡ ಎಲ್ಲೆಡೆ ಹೆಚ್ಚುತ್ತಿವೆ.

1990ರಿಂದ 2016ರವರೆಗಿನ 26 ವರ್ಷಗಳಲ್ಲಿ ಹೃದಯದ ರಕ್ತನಾಳಗಳ ಕಾಯಿಲೆ ಮತ್ತು ಅದರಿಂದಾಗುವ ಸಾವುಗಳು ದುಪ್ಪಟ್ಟಾಗಿವೆ. ಮಧುಮೇಹವುಳ್ಳವರ ಸಂಖ್ಯೆಯು ಎರಡೂವರೆ ಕೋಟಿಯಿಂದ ಆರೂವರೆ ಕೋಟಿಗಳಷ್ಟಾಗಿದೆ. ಕ್ಯಾನ್ಸರ್‌ಗಳು ಶೇ.28ರಷ್ಟು ಹೆಚ್ಚಾಗಿ, ಹೊಸ ಕ್ಯಾನ್ಸರ್ ಪ್ರಕರಣಗಳು 11 ಲಕ್ಷದಷ್ಟಾಗಿವೆ. ಶ್ವಾಸಾಂಗದ ಕಾಯಿಲೆಯುಳ್ಳವರ ಸಂಖ್ಯೆಯು ದುಪ್ಪಟ್ಟಾಗಿ ಐದೂವರೆ ಕೋಟಿಗಳಾಗಿದೆ. ಹೀಗೆ, 2016ನೇ ವರ್ಷದಲ್ಲಿ ಹೃದ್ರೋಗ, ಶ್ವಾಸಾಂಗದ ಸಮಸ್ಯೆಗಳು, ಭೇದಿ, ಮತ್ತು ಪಾರ್ಶ್ವವಾಯುಗಳು ಭಾರತೀಯರನ್ನು ಕಾಡಿದ ಅತಿ ಮುಖ್ಯ ಕಾಯಿಲೆಗಳೆನಿಸಿವೆ. ನಮ್ಮಲ್ಲಿ ಮಾನಸಿಕ ಸಮಸ್ಯೆಗಳು ಕೂಡ ಹೆಚ್ಚುತ್ತಿವೆ. ವಿಶ್ವದ ಶೇ.18ರಷ್ಟು ಜನಸಂಖ್ಯೆಯನ್ನು ನಾವು ಹೊಂದಿದ್ದರೂ, 2016ರಲ್ಲಾದ ಮಹಿಳೆಯರ ಆತ್ಮಹತ್ಯೆಗಳಲ್ಲಿ ಶೇ.37ರಷ್ಟು ಹಾಗೂ ಪುರುಷರ ಆತ್ಮಹತ್ಯೆಗಳಲ್ಲಿ ಶೇ.24ರಷ್ಟು ನಮ್ಮ ದೇಶದಲ್ಲಾದವು ಮತ್ತು ವಿಶ್ವದ ಸರಾಸರಿಗೆ ಹೋಲಿಸಿದರೆ, ಭಾರತದಲ್ಲಿ ಮಹಿಳೆಯರ ಆತ್ಮಹತ್ಯೆಯ ಪ್ರಮಾಣವು 2 ಪಟ್ಟು, ಪುರುಷರದು ಒಂದೂವರೆ ಪಟ್ಟು ಹೆಚ್ಚಿತ್ತೆನ್ನುವುದು ಆತಂಕಕಾರಿಯಾಗಿದೆ.

ಒಟ್ಟಿನಲ್ಲಿ, ಕಳೆದ 26 ವರ್ಷಗಳಲ್ಲಿ ಭಾರತದಲ್ಲಿ ಕಾಯಿಲೆಗಳ ತಲಾವಾರು ಹೊರೆಯು ಮೂರನೇ ಒಂದರಷ್ಟು ಇಳಿದಿದ್ದರೂ, ಹಿಂದುಳಿದ ರಾಜ್ಯಗಳಲ್ಲಿ ಸೋಂಕು ರೋಗಗಳು, ಕುಪೋಷಣೆ ಹಾಗೂ ತಾಯಿ-ಶಿಶುಗಳ ಕಾಯಿಲೆಗಳು ದೊಡ್ಡ ಸಮಸ್ಯೆಯಾಗಿವೇ ಉಳಿದಿವೆ ಮತ್ತು ಆಧುನಿಕ ಕಾಯಿಲೆಗಳು ಹಾಗೂ ಮಾನಸಿಕ ಸಮಸ್ಯೆಗಳು ದೇಶದೆಲ್ಲೆಡೆ ಹೆಚ್ಚುತ್ತಲೇ ಇವೆ. ಭಾರತದಲ್ಲಷ್ಟೇ ಅಲ್ಲ, ಹೆಚ್ಚಿನ (137ರಲ್ಲಿ 115) ದೇಶಗಳಲ್ಲಿ ಆಸ್ಪತ್ರೆಗಳ ಅಲಭ್ಯತೆಗಿಂತ ಲಭ್ಯ ಚಿಕಿತ್ಸೆಯು ಕಳಪೆಯಾಗಿದ್ದುದೇ ಹೆಚ್ಚಿನ ಸಾವುಗಳಿಗೆ ಕಾರಣವಾದುದರಿಂದ, ಚಿಕಿತ್ಸಾ ಸೌಲಭ್ಯಗಳನ್ನು ದೊರಕಿಸಿದರಷ್ಟೇ ಸಾಲದು, ಅವು ಅತ್ಯುತ್ತಮ ಗುಣಮಟ್ಟವನ್ನೂ ಹೊಂದಿರಬೇಕು ಎಂದು ಈ ವರದಿಗಳಲ್ಲಿ ಒತ್ತಿ ಹೇಳಲಾಗಿದೆ.

ಇದನ್ನೂ ಓದಿ : ಇಲಾಜು | ಗೋರಕ್ಷಣೆ ಹೆಸರಲ್ಲಿ ಗರ್ಭಿಣಿಯರ ಜೀವರಕ್ಷಕ ಔಷಧಿ ನಿಷೇಧಿಸಿ ಪೇಚಿಗೀಡಾದ ಕೇಂದ್ರ ಸರಕಾರ

ಜಾಗತಿಕ ರೋಗ ಹೊರೆಯ ಅಧ್ಯಯನಗಳು ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವ ಪರಿಕಲ್ಪನೆಯನ್ನು ಮುಂದೊತ್ತುವ ಪ್ರಯತ್ನದ ಭಾಗವೆಂದಾದರೂ ಕೂಡ, ಅವುಗಳಲ್ಲಿ ದಾಖಲಾಗಿರುವ ವಾಸ್ತವಾಂಶಗಳನ್ನು ಅಲ್ಲಗಳೆಯುವಂತಿಲ್ಲ. ಆರೋಗ್ಯ ಸುರಕ್ಷಾ ವಿಮೆಯಂತಹ ಯೋಜನೆಗಳನ್ನು ಒದಗಿಸಿದರಷ್ಟೇ ಸಾಲದು, ಆರೋಗ್ಯ ಸೇವೆಗಳ ಎಲ್ಲ ಸ್ತರಗಳಲ್ಲಿ ವಿಪುಲವಾಗಿ ಹೂಡಿಕೆ ಮಾಡಿ, ಗುಣಮಟ್ಟ ಹೆಚ್ಚಿಸುವುದಕ್ಕೆ ಆದ್ಯತೆ ಇತ್ತರೆ ಮಾತ್ರವೇ ಜನರ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಆಗಬಹುದು ಎಂದು ಈ ವರದಿಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿರುವುದನ್ನು ಕಡೆಗಣಿಸಲಾಗದು.

‘ಲಾನ್ಸೆಟ್’ ಸಂಪಾದಕ ರಿಚರ್ಡ್ ಹೋರ್ಟನ್ ತನ್ನ ಸಂಪಾದಕೀಯದಲ್ಲಿ, “ಪ್ರಧಾನಿ ಮೋದಿಯವರು ಸಮಗ್ರ ಆರೋಗ್ಯ ಸೇವೆಗಳ ಅಗತ್ಯವನ್ನು ಮನಗಂಡು ಆಯುಷ್ಮಾನ್ ಭಾರತ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ, ಆದರೆ ರಾಹುಲ್ ಗಾಂಧಿ ಇನ್ನೂ ಅಂಥ ಯೋಜನೆಯನ್ನು ಘೋಷಿಸಿಲ್ಲ,” ಎಂದಿದ್ದಾರೆ. ಆದರೆ, ಪ್ರಧಾನಿ ಘೋಷಿಸಿರುವ ಆಯುಷ್ಮಾನ್ ಭಾರತ ಯೋಜನೆಯು ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವುದಿಲ್ಲ; ಬದಲಿಗೆ, ಸರಕಾರಿ ವೆಚ್ಚದಲ್ಲಿ ಸೀಮಿತ ಚಿಕಿತ್ಸೆಗಳನ್ನಷ್ಟೇ ಒದಗಿಸುತ್ತದೆ ಎನ್ನುವುದು ಹೋರ್ಟನ್ ಅರಿವಿಗೆ ಬಂದಂತಿಲ್ಲ. ‘ಲಾನ್ಸೆಟ್’ ವರದಿಗಳಲ್ಲಿ ಸೂಚಿಸಿರುವ ಗುಣಮಟ್ಟದ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಬೇಕಾದರೆ ಕೇಂದ್ರ ಸರಕಾರವು ಇನ್ನೂ ಆರು ಪಟ್ಟು ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ; ಉಪಕೇಂದ್ರಗಳ ಅಭಿವೃದ್ಧಿಗೆ ಈಗಿನಂತೆ 1,200 ಕೋಟಿ ಒದಗಿಸಿದರೆ ಸಾಲದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕನಿಷ್ಠ 30 ಸಾವಿರ ಕೋಟಿ ಒದಗಿಸಬೇಕಾಗುತ್ತದೆ. ಇಲ್ಲದಿದ್ದರೆ, ಆಯುಷ್ಮಾನ್ ಭಾರತದ ಸಮಗ್ರ ಆರೋಗ್ಯ ಸೇವೆಯು ಕೇವಲ ಚುನಾವಣಾ ಘೋಷಣೆಯಾಗಿ ಉಳಿಯುತ್ತದೆ.

ಚಿತ್ರಕೃಪೆ: ಮೆಡಿಮ್ಯಾನೇಜ್ ಜಾಲತಾಣ

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More