ಈ ಕಾಲ | ಗಾಂಧಿ ಬದುಕಿದ್ದಾಗಿನ ಅವರ ಜನ್ಮದಿನಗಳು ಹೇಗಿದ್ದವು ಗೊತ್ತೇ?

ಗಾಂಧಿಯ ೧೫೦ನೇ ಹುಟ್ಟುಹಬ್ಬದ ಆಚರಣೆಯ ಹೊತ್ತಲ್ಲಿ ನಾವೀಗ, ಕನಿಷ್ಠ ಅವರ ಜೀವಿತಾವಧಿಯಲ್ಲಿ ಸಿಕ್ಕ ಅರ್ಥಪೂರ್ಣ ಮೆಚ್ಚುಗೆಯ ಮಾತುಗಳನ್ನು ಮತ್ತೆ ಕೇಳಬಲ್ಲವೇ? ಜಾನ್ ಸ್ಮಟ್ಸ್ ಮತ್ತು ವೆರಿಯರ್ ಎಲ್ವಿನ್ ಆಡಿದ್ದ ಮಾತುಗಳಂತಹ ಒಳನೋಟದ ಅಭಿಪ್ರಾಯಗಳು ಮತ್ತೆ ಮಾರ್ಧನಿಸಬಲ್ಲವೇ?

ಮುಂದಿನ ತಿಂಗಳ ಆರಂಭದಲ್ಲಿ ದೇಶ ಮತ್ತು ಜಗತ್ತಿನ ಎಲ್ಲೆಡೆ ಮಹಾತ್ಮನ ೧೪೯ನೇ ಹುಟ್ಟುಹಬ್ಬ ಆಚರಿಸಲಾಗುತ್ತದೆ. ಅಂದಿನಿಂದ ಮುಂದಿನ ವರ್ಷದ ಅಕ್ಟೋಬರ್ ೨ರವರೆಗೆ ಆತನ ಹೆಸರಿನೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ಮೂಲಕ ತಮ್ಮ ಪಾಪ ಮರೆಮಾಚಲು ಹವಣಿಸುವ ರಾಜಕಾರಣಿಗಳೂ ಸೇರಿದಂತೆ ಎಲ್ಲರಿಂದಲೂ ಗಾಂಧಿ ಸ್ಮರಣೆ ಮತ್ತು ಅಪಸ್ಮರಣೆಗಳು ನಡೆಯಲಿವೆ.

‘ಗಾಂಧಿ@೧೫೦’ ವರ್ಷಾಚರಣೆಯ ನಿರೀಕ್ಷೆಯಲ್ಲಿ ನಾನು, ಅವರು ಬದುಕಿದ್ದಾಲೇ ನಡೆದ ಮಹಾತ್ಮನ ಹುಟ್ಟುಹಬ್ಬಗಳ ಕುರಿತ ಕೆಲವು ಕುತೂಹಲಕಾರಿ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ. ೧೯೩೯ರ ಅಕ್ಟೋಬರ್ ೨ರಂದು ಗಾಂಧಿಯ ೭೦ನೇ ಹುಟ್ಟುಹಬ್ಬದ ಸಂದರ್ಭದಲ್ಲಿ; ಆ ವಿಶೇಷ ದಿನಕ್ಕಾಗಿ ತತ್ವಜ್ಞಾನಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಗಾಂಧಿಯ ಜೀವನ ಮತ್ತು ಸಾಧನೆ ಕುರಿತ ಅಭಿನಂದನಾ ಗ್ರಂಥವೊಂದನ್ನು ಸಂಪಾದಿಸಿದ್ದರು. ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್, ಕವಿ ಯೋನೆ ನಗು‍ಷಿ, ಕಾದಂಬರಿಕಾರ ಪರ್ಲ್ ಬಕ್ ಮತ್ತು ತತ್ವಜ್ಞಾನಿ ಗಿಲ್ಬರ್ಟ್ ಮ್ಯೂರಿ ಸೇರಿದಂತೆ ಹಲವು ಮೇಧಾವಿಗಳು ಗಾಂಧಿಯ ಕುರಿತ ಬರೆದ ಪ್ರಬಂಧಗಳು ಆ ಕೃತಿಯ ಮೌಲ್ಯ ಹೆಚ್ಚಿಸಿದ್ದವು. ಜಾಗತಿಕ ಖ್ಯಾತಿಯ ಈ ಗಾಂಧಿ ಅಭಿಮಾನಿಗಳು, ಈ ಕೃತಿಯ ಮೂಲಕ ಗಾಂಧಿಯ ಆಪ್ತ ಸ್ನೇಹಿತರಾದ ಸಿ ಎಫ್ ಆಂಡ್ರ್ಯೂಸ್, ರವೀಂದ್ರನಾಥ ಠಾಗೋರ್, ಮಿರ್ಜಾ ಇಸ್ಮಾಯಿಲ್ ಮತ್ತು ಹೆನ್ರಿ ಪೊಲಾಕ್ ಅವರಂಥವರೊಂದಿಗೆ ಜೊತೆಯಾಗಿದ್ದರು.

ರಾಧಾಕೃಷ್ಣನ್ ಅವರ ಆ ಕೃತಿಯ ಮೊದಲ ಆವೃತ್ತಿಯ ಪ್ರತಿಯೇ ನನ್ನ ಬಳಿ ಇದೆ. ಅದರಲ್ಲಿನ ನನ್ನ ಇಷ್ಟದ ಲೇಖನ, ದಕ್ಷಿಣ ಆಫ್ರಿಕಾದ ರಾಜಕಾರಣಿ ಜಾನ್ ಸ್ಮುಟ್ಸ್ ಅವರು ಗಾಂಧಿಯ ಕುರಿತು ಬರೆದಿರುವುದು. ಒಬ್ಬರ ಪ್ರತಿಭಟನಾಕಾರನಾಗಿ ಗಾಂಧಿಯನ್ನು ತಾವು ಕಂಡ ಬಗ್ಗೆ ಅವರು ಮೆಚ್ಚುಗೆ ಮತ್ತು ಅಷ್ಟೇ ಅಸಮಾಧಾನದ ಮಾತುಗಳಲ್ಲಿ ಬಣ್ಣಿಸುತ್ತಾರೆ. ಗಾಂಧಿಯ ಒಂದು ಕಾಲದ ಹೋರಾಟದ ವಿರೋಧಿಯಾಗಿದ್ದ ಜಾನ್, ‘ರಾಜಕೀಯದ ವರಸೆಗೆ ಗಾಂಧಿಯ ವಿಶಿಷ್ಟ ಕೊಡುಗೆ’ ಕುರಿತು ಬರೆಯುತ್ತ, “ತನ್ನ ಮನಸ್ಸಿನಲ್ಲಿ ತೀವ್ರವಾಗಿ ಅನ್ನಿಸಿದ ಉದ್ದೇಶದ ಸಫಲತೆಗಾಗಿ ಅವರು ತಮ್ಮನ್ನು ತಾವೇ ಸಂಕಷ್ಟಕ್ಕೆ ಒಡ್ಡಿಕೊಳ್ಳುತ್ತಿದ್ದರು. ನೋವಿಗೆ ಒಡ್ಡಿಕೊಳ್ಳುತ್ತಿದ್ದರು. ಆ ಮೂಲಕ ಜನರ ಕನಿಕರವನ್ನೂ, ಕಾಳಜಿಯನ್ನೂ ಎಚ್ಚರಗೊಳಿಸಿ, ಅದನ್ನೇ ತಮ್ಮ ಹೋರಾಟದ ಬಲವನ್ನಾಗಿ ಮಾಡಿಕೊಳ್ಳುವ ಕಲೆ ಅವರಿಗೆ ಸಿದ್ಧಿಸಿತ್ತು. ಸಾಮಾನ್ಯ ರಾಜಕೀಯ ವರಸೆ ಮತ್ತು ಒತ್ತಡ ತಂತ್ರಗಳು ಫಲ ಕೊಡದ ಹೊತ್ತಲ್ಲಿ, ಅವರು ಭಾರತ ಮತ್ತು ಪೂರ್ವದೇಶಗಳ ಈ ಪುರಾತನ ರೂಢಿ ಆಧಾರಿತ ಹೊಸ ತಂತ್ರದ ಮೊರೆಹೋಗುತ್ತಿದ್ದರು,” ಎನ್ನುತ್ತಾರೆ.

ಆ ಕೃತಿ ಹಲವು ಮರು ಮುದ್ರಣಗಳನ್ನೂ ಕಂಡಿದೆ. ಆ ಬಳಿಕ ಮಹಾತ್ಮನ ೭೫ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಡಿ ಜಿ ತೆಂಡೂಲ್ಕರ್, ಎಂ ಚಲಪತಿ ರಾವ್, ಮೃದುಲಾ ಸಾರಾಭಾಯ್ ಮತ್ತು ವಿಠಲ್ ಬಾಯ್ ಕೆ ಝವೇರಿ ಅವರ ಸಂಪಾದಕತ್ವದಲ್ಲಿ ಗಾಂಧಿ ಕುರಿತ ಮತ್ತೊಂದು ಕೃತಿ ಹೊರಬಂದಿತು. ಆ ಕೃತಿಗೆ ಜವಹರಲಾಲ್ ನೆಹರು ಅವರೇ ಮುನ್ನುಡಿ ಬರೆದಿದ್ದಾರೆ. ಆ ಕೃತಿಯಲ್ಲಿಯೂ ಪರ್ಲ್ ಬಕ್, ಐನ್‌ಸ್ಟೀನ್ ಅವರ ಹೊಸ ಸಂಕ್ಷಿಪ್ತ ಸಂದೇಶಗಳಿವೆ. ಅದನ್ನು ಹೊರತುಪಡಿಸಿ ಆ ಕೃತಿಯಲ್ಲಿನ ಬರಹಗಳೆಲ್ಲ ಬಹುತೇಕ ಭಾರತೀಯರದ್ದೇ. ಆ ಪೈಕಿ, ಗಾಂಧಿಯ ಸಹವರ್ತಿ ಹೋರಾಟಗಾರರಾದ ಜೆ ಬಿ ಕೃಪಲಾನಿ, ಕಮಲಾದೇವಿ ಚಟ್ಟೋಪಾಧ್ಯಾಯ, ಸುಶೀಲಾ ನಾಯರ್ ಮತ್ತು ಯೂಸೂಫ್ ಮೆಹರೌಲಿ ಹಾಗೂ ಪತ್ರಕರ್ತರಾದ ಫ್ರಾಂಕ್ ಮೋರೇಸ್, ಕೆ ಎ ಅಬ್ಬಾಸ್ ಮತ್ತು ಎಸ್ ಎ ಬ್ರೆಲ್ವಿ ಹಾಗೂ ಕಲಾವಿದ ನಂದಲಾಲ್ ಬೋಸ್ ಸೇರಿದಂತೆ ಹಲವರು ತಾವು ಕಂಡ ಗಾಂಧಿಯ ಕುರಿತು ಬರೆದಿದ್ದಾರೆ.

ಈ ಕೃತಿಯಲ್ಲಿನ ನನ್ನ ಇಷ್ಟದ ಲೇಖನ, ಬ್ರಿಟನ್ ಮೂಲದ ಭಾರತೀಯ ಮಾನವಶಾಸ್ತ್ರಜ್ಞ ವೆರಿಯರ್ ಎಲ್ವಿನ್ ಅವರದ್ದು. ಕೃತಿಯ ಇತರ ಲೇಖಕರು ಮಹಾತ್ಮನ ಕುರಿತು ಬರೆದಿದ್ದರೆ, ೧೯೧೭ರಿಂದ ೧೯೪೨ರವರೆಗೆ ಗಾಂಧಿ ಬದುಕು ಮತ್ತು ಬರಹದ ಅವಿಭಾಜ್ಯ ಅಂಗವಾಗಿದ್ದ ಮಹದೇವ ದೇಸಾಯಿ ಅವರ ವ್ಯಕ್ತಿತ್ವವನ್ನು ಎಲ್ವಿನ್ ಅನಾವರಣಗೊಳಿಸಿದ್ದಾರೆ. ೧೯೪೨ರಲ್ಲಿ ಆಗತಾನೇ ದೇಸಾಯಿ ಬ್ರಿಟಿಷರ ಜೈಲಿನಲ್ಲಿಯೇ ನಿಧನರಾಗಿದ್ದರು. “ಅಧಿಕೃತವಾಗಿ ದೇಸಾಯಿ ಅವರು ಗಾಂಧಿಯ ಕಾರ್ಯದರ್ಶಿಯಾಗಿದ್ದರು. ಆದರೆ, ವಾಸ್ತವವಾಗಿ ಅವರು ಅದಕ್ಕಿಂತ ಹೆಚ್ಚಾಗಿದ್ದರು. ಅವರು ಗಾಂಧಿಯವರಿಗೆ ಗೃಹ ಮತ್ತು ವಿದೇಶಾಂಗ ಕಾರ್ಯದರ್ಶಿಯಂತೆಯೇ ಇದ್ದರು. ಅವರು ಎಲ್ಲವನ್ನೂ ನಿರ್ವಹಿಸುತ್ತಿದ್ದರು. ಗಾಂಧಿಯವರ ಎಲ್ಲಾ ಅಗತ್ಯಗಳನ್ನೂ ನೋಡಿಕೊಳ್ಳುತ್ತಿದ್ದರು. ಗಾಂಧಿಯವರ ಕಚೇರಿ, ಮನೆ, ಅತಿಥಿಗೃಹ, ಅಡುಗೆಮನೆ ಸೇರಿದಂತೆ ಎಲ್ಲ ಕಡೆ ಅವರೇ ಎಲ್ಲವನ್ನೂ ನಿಭಾಯಿಸುತ್ತಿದ್ದರು. ಅತಿಥಿಗಳ ಸತ್ಕಾರದಿಂದ ಹಿಡಿದು ಎಲ್ಲವನ್ನೂ ನಿರ್ವಹಿಸುತ್ತಿದ್ದರು. ಗಾಂಧಿಯವರನ್ನು ಭೇಟಿಯಾಗಲು ಬರುತ್ತಿದ್ದ ಅನಪೇಕ್ಷಿತ ಅತಿಥಿಗಳನ್ನು ಅರ್ಧದಲ್ಲೇ ವಾಪಸು ಕಳಿಸುವ ಮೂಲಕ ಬಹುಶಃ ದೇಸಾಯಿ ಅವರು ಗಾಂಧಿಯ ಬದುಕಿಗೆ ಕನಿಷ್ಠ ಹತ್ತು ವರ್ಷಗಳನ್ನು ಹೆಚ್ಚು ಮಾಡಿರಬಹುದು,” ಎಂದು ಎಲ್ವಿನ್ ದೇಸಾಯಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ.

ಭಾರತ ಮತ್ತು ಇಡೀ ಜಗತ್ತಿನ ಪಾಲಿಗೆ ಗಾಂಧಿ ಎಂದರೆ ಏನು, ಗಾಂಧಿಯ ಮಹತ್ವ ಏನು ಎಂಬುದನ್ನು ಅರ್ಥಮಾಡಿಸುವ ದೃಷ್ಟಿಯಲ್ಲಿ ಈ ಎರಡೂ ಕೃತಿಗಳು ಬಹಳ ಮುಖ್ಯವಾದವುಗಳೇ. ಆದರೆ, ಈ ಎರಡು ಪ್ರಕಟಿತ ಮಹಾಕೃತಿಗಳಿಗೆ ಸರಿಸಮನಾಗಿ ನಿಲ್ಲಬಲ್ಲ, ಜನಪ್ರಿಯರಲ್ಲದ ಸಾಮಾನ್ಯ ಭಾರತೀಯರು ಗಾಂಧಿಯ ಹುಟ್ಟುಹುಬ್ಬಕ್ಕೆ ಹಾರೈಸಿದ ಕೆಲವು ಮಾದರಿಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ೧೯೧೯ರ ಅಕ್ಟೋಬರ್ ೨ರಂದು ಗಾಂಧಿ ೫೦ನೇ ವರ್ಷಕ್ಕೆ ಕಾಲಿಟ್ಟಿದ್ದರು. ಆ ಸಂದರ್ಭದಲ್ಲಿ ದೇಶದ ಉದ್ದಗಲಕ್ಕೆ ಸಂಭ್ರಮಾಚರಣೆ ಮೂಲಕ ಗಾಂಧಿಯವರಿಗೆ ಶುಭ ಕೋರಲಾಗಿತ್ತು. ಬೆಳಗಾವಿಯಲ್ಲಿ ನಡೆದ ಅಂತಹ ಒಂದು ಸಭೆಯಲ್ಲಿ ಭಾಷಣಕಾರರೊಬ್ಬರು, “ಸಿಪಾಯಿ ದಂಗೆಯ (೧೮೫೭) ಬಳಿಕ ಸತ್ಯಾಗ್ರಹದ ಮೂಲಕ ಸರ್ಕಾರವನ್ನು ಮಣಿಸಬಹುದು ಎಂದು ತೋರಿಸಿಕೊಟ್ಟ ಮೊದಲಿಗರು ಗಾಂಧಿ. ತನ್ನ ಆ ವ್ಯಕ್ತಿತ್ವದ ನೂರನೇ ಒಂದು ಭಾಗದಷ್ಟಾದರೂ ಜನ ಅನುಸರಿಸಿದರೂ ಸಾಕು ಎಂದು ಗಾಂಧಿ ಬಯಸಿದ್ದರು,” ಎಂದಿದ್ದರು. “ತಿಲಕರು ಮತ್ತು ಇತರರು ತಮ್ಮ ಭಾಷಣ, ಮಾತುಗಳ ಮೂಲಕ ಸಾಧಿಸದ್ದನ್ನು ಗಾಂಧಿ ಮಾಡಿ ತೋರಿಸಿದರು,” ಎಂದು ಮತ್ತೊಬ್ಬ ಭಾಷಣಕಾರರು ಹೇಳಿದ್ದರು.

ಗಾಂಧಿಯವರಿಗೆ ಐವತ್ತು ತುಂಬಿದ ಹೊತ್ತಲ್ಲಿ ಅವರಿಗೆ ಸಿಕ್ಕ ದೊಡ್ಡ ಶ್ಲಾಘನೆ ಒಂದು ಪ್ರಗಾಥದ (ಮಹಾಕಾವ್ಯ) ರೂಪದಲ್ಲಿತ್ತು. ಸುಮಾರು ನಾಲ್ಕುನೂರು ಸಾಲಿನ ಆ ಪದ್ಯದ ಶೀರ್ಷಿಕೆಯೇ ‘ದಿ ಅಸೆಟಿಕ್ ಆಫ್ ಗುಜರಾತ್’ (ಗುಜರಾತಿನ ಸಂತ) ಎಂದಿತ್ತು. ನಾನಾಲಾಲ್ ಡಿ ಕವಿ ಎಂಬುವರು ಆ ಕಾವ್ಯವನ್ನು ಗುಜರಾತಿ ಭಾಷೆಯಲ್ಲಿ ಬರೆದಿದ್ದರು. ಬಾಂಬೆ ಸರ್ಕಾರದ ಅಂದಿನ ಪೊಲೀಸ್ ಇಲಾಖೆ ಈ ಕವಿತೆಯನ್ನು ಗುಜರಾತಿ ಭಾಷೆಯಿಂದ ಇಂಗ್ಲಿಷ್‌ಗೆ ಬಹಳ ಶ್ರಮಪಟ್ಟು ಅನುವಾದ ಮಾಡಿಸಿತ್ತು. ಅನುವಾದದ ಕೆಲವು ಸಾಲುಗಳು ಹೀಗಿವೆ:

“ಸತ್ಯವೇ ಅವರ ಬಲ.

ಸಾತ್ವಿಕತೆಯೇ ಅವರ ಅಸ್ತ್ರ,

ಬ್ರಹ್ಮಚರ್ಯೆವೇ ಅವರ ಹೆಗ್ಗುರುತು, ಸಂತತನದ ಶಕ್ತಿ,

ಪರಿಮಿತಿಯೇ ಇರದ ಕ್ಷಮೆಯ ಸಾಗರವೇ ತುಂಬಿದೆ ಎದೆಯಲ್ಲಿ,

ತಾಳ್ಮೆ-ಸಹನೆಯೇ ಅವರ ಶ್ರೀರಕ್ಷೆ,

ಅಸೀಮ ಸಂಸಾರದ ಯೋಗದ ವಾರಸುದಾರ,

ಆಸೆ-ಆಮಿಷಗಳ ಬಿರುಗಾಳಿಯ ಮೆಟ್ಟಿ ನಿಂತ

ಭರತ ಖಂಡದ ಮಹಾ ಗುರು;

ಆತ ಗುಜರಾತಿನ ಸಂತ,

ಮಹಾ ಆತ್ಮವ ಹೊತ್ತ ಮಹಾತ್ಮ ಗಾಂಧಿ.

ಈಗ ನಾವು ೨೭ ವರ್ಷ ಮುಂದಕ್ಕೆ ಬರೋಣ; ಅಂದರೆ, ೧೯೪೬ನೇ ಅಕ್ಟೋಬರ್ ೨ಕ್ಕೆ. ಆ ದಿನ ಗಾಂಧಿ ೭೭ ವರ್ಷಕ್ಕೆ ಕಾಲಿಟ್ಟಿದ್ದರು. ಎಂದಿನಂತೆ ಆ ದಿನವೂ ಅವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಿ ಸ್ನೇಹಿತರು, ಆಪ್ತರಿಂದ ಹಲವಾರು ಪತ್ರಗಳು ಬಂದಿದ್ದವು. ಆ ಪೈಕಿ, ವಿಯೆಟ್ನಾಂ ರಾಷ್ಟ್ರೀಯವಾದಿ ಹೋರಾಟಗಾರ ಹು ಚಿ ಮಿನ್, ಬರ್ಮಾ ಹೋರಾಟಗಾರ ಆಂಗ್ ಸಾನ್ ಮತ್ತು ಬ್ರಿಟಿಷ್ ಲೇಬರ್ ಪಾರ್ಟಿ ನಾಯಕ ಸ್ಟಾಫರ್ಡ್ ಕ್ರಿಪ್ಸ್ ಬರೆದ ಪತ್ರಗಳೂ ಇದ್ದವು.

ಇತಿಹಾಸದ ಮಹಾನ್ ವ್ಯಕ್ತಿಗಳ ಪತ್ರಗಳನ್ನೊಳಗೊಂಡ ಐತಿಹಾಸಿಕ ಗಾಂಧಿಯ ಪತ್ರಗಳ ಕಡತದಲ್ಲಿ ಅಮೆರಿಕದ ಅನಾಮಿಕ ವ್ಯಕ್ತಿಯೊಬ್ಬರ ಪತ್ರವೂ ಇತ್ತು. ಆ ವ್ಯಕ್ತಿ ಹೇಳಿದ್ದ ಮಾತಿದು: “ಇವತ್ತಿನ ಮಧ್ಯಾಹ್ನದ ಊಟದ ಹೊತ್ತಿಗೆ ನನಗೆ ನಿಮ್ಮ ನೆನಪಾಯಿತು. ನಾನು ವಾಸಿಸುತ್ತಿರುವ ಈ ಫಾರ್ಟಿಫೋರ್ಟ್‌ನಂತಹ (ಪೆನ್ಸಿಲ್ವೇನಿಯಾದ ಪಟ್ಟಣ) ಚಿಕ್ಕ ಪಟ್ಟಣಗಳ ಬದುಕು ಇವತ್ತು ಹಿಂದಿಗಿಂತ ಸಹನೀಯವಾಗಿದೆ ಮತ್ತು ನೆಮ್ಮದಿ ಪಡೆದುಕೊಂಡಿದೆ ಎಂದರೆ ಅದಕ್ಕೆ ಕಾರಣ ನೀವು ಮತ್ತು ನಿಮ್ಮ ಬದುಕು. ನೀವೊಬ್ಬ ಹಿಂದೂ ಮುಖಂಡರಾಗಿ ಪ್ಯಾಲೆಸ್ತೇನ್ ಮತ್ತು ಇಡೀ ಜಗತ್ತಿಗೆ ನಮ್ಮ ಜೀಸಸ್ ಕ್ರೈಸ್ತನ ಮಾದರಿಯನ್ನು ಅನುಸರಿಸುವಂತೆ ನೆನಪು ಮಾಡುತ್ತಿರುವುದು ವಿಚಿತ್ರ ಎನಿಸದು. ಇಂದು ನಿಮ್ಮ ಮೂಲಕ ಜೀಸಸ್ ನಮ್ಮ ನಡುವೆ ಬದುಕಿದ್ದಾರೆ ಮತ್ತು ಬಹುಶಃ ನಿಮ್ಮ ಮೂಲಕವೇ ಮಾತನಾಡುತ್ತಿದ್ದಾರೆ. ನಿಮ್ಮ ತಲೆಮಾರಿಗೆ ಸೇರಿದವನಾಗಿ ಈ ಭೂಮಿಯ ಮೇಲೆ ಬದುಕಿರುವುದು ಬಹುಶಃ ನನ್ನ ಬಹುದೊಡ್ಡ ಭಾಗ್ಯ ಎಂದುಕೊಂಡಿದ್ದೇನೆ.”

ಇದನ್ನೂ ಓದಿ : ಈ ಕಾಲ | ಆಗಸ್ಟ್‌ನಲ್ಲಿ ಅಗಲಿದ ಈ ಮೂವರಲ್ಲೂ ಒಂದು ಕುತೂಹಲಕರ ಸಾಮ್ಯ ಉಂಟು!

ಆಗಿನ ಅಕ್ಟೋಬರ್ ೨ ಮತ್ತು ಈಗಿನ ಅಕ್ಟೋಬರ್ ೨ರ ನಡುವೆ ನಾವು ಮಹಾತ್ಮನ ಕುರಿತ ಸಾಕಷ್ಟು ಹೆಮ್ಮೆಯ, ಅಭಿಮಾನದ ಮತ್ತು ಆರಾಧನೆಯ ಮಾತುಗಳನ್ನು ಕೇಳಿದ್ದೇವೆ. ಗಾಂಧಿಯ ೧೫೦ನೇ ಹುಟ್ಟುಹಬ್ಬದ ಆಚರಣೆಯ ಹೊತ್ತಲ್ಲಿ ನಾವೀಗ, ಕನಿಷ್ಠ ಅವರ ಜೀವಿತಾವಧಿಯಲ್ಲಿ ಸಿಕ್ಕ ಇಂತಹ ಅರ್ಥಪೂರ್ಣ ಮೆಚ್ಚುಗೆಯ ಮಾತುಗಳನ್ನು ಮತ್ತೆ ಕೇಳಬಲ್ಲವೇ? ಜಾನ್ ಸ್ಮಟ್ಸ್ ಮತ್ತು ವೆರಿಯರ್ ಎಲ್ವಿನ್ ಅವರು ಆಡಿದ್ದ ಮಾತುಗಳಂತಹ ಒಳನೋಟದ ಮತ್ತು ನಾನಾಲಾಲ್ ಕವಿ ಹಾಗೂ ಫಾರ್ಟಿಫೋರ್ಟ್‌ನ ಆ ಅನಾಮಿಕನ ಪ್ರಾಮಾಣಿಕ ಅಭಿಪ್ರಾಯಗಳು ಈಗ ಮತ್ತೆ ಮಾರ್ಧನಿಸಬಲ್ಲವೇ?

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More