ಸ್ಟೇಟ್ ಆಫ್‌ ದಿ ನೇಷನ್ | ರಫೇಲ್ ಡೀಲ್; ತಡವರಿಸತೊಡಗಿದ ಬಿಜೆಪಿ ಮಾತುಗಾರರು

ಏನಾದರೂ ತಂತ್ರ ಅನುಸರಿಸಿ ಅಪಾಯದಿಂದ ಪಾರಾಗುವುದು ಬಿಜೆಪಿ ಮಾತುಗಾರರ ಹೆಗ್ಗಳಿಕೆ. ಆದರೆ, ರಫೇಲ್ ಹಗರಣದ ಬೆಂಕಿ ನಂದಿಸುವಲ್ಲಿ ಸೋಲುತ್ತಿರುವ ವಕ್ತಾರರಿಗೆ, ಗೊಂದಲ ಮತ್ತು ಅತಾರ್ಕಿಕ ಸಂಗತಿ ಮುಂದೆ ಮಾಡುವುದರ ಹೊರತು ಯಾವ ದಾರಿಯೂ ತೋಚುತ್ತಿಲ್ಲ!

ಸಮರ್ಥಿಸಿಕೊಳ್ಳಲಾಗದ್ದನ್ನು ಸಮರ್ಥಿಸಿಕೊಳ್ಳುವುದು ಯಾವಾಗಲೂ ಸವಾಲಿನ ಸಂಗತಿ. ಎದುರಾಳಿಯ ವಾಗ್ಬಾಣಗಳನ್ನು ಸಮರ್ಥವಾಗಿ ತಿರುವುಮುರುವುಗೊಳಿಸಿ ತಿರುಗೇಟು ನೀಡುವ ಮಾತಿನ ಚತುರರು ಕೂಡ, ಇಂತಹ ಸಂದರ್ಭಗಳಲ್ಲಿ ತಮ್ಮೆಲ್ಲ ಅಸ್ತ್ರಗಳನ್ನು-ವಾಸ್ತವಗಳ ತಿರುಚುವಿಕೆ, ಪೂರ್ವಗ್ರಹದ ಹೇರಿಕೆ, ಜನರ ಗಮನ ಬೇರೆಡೆ ತಿರುಗಿಸುವ ತಂತ್ರಗಾರಿಕೆ- ಕೆಳಗಿಟ್ಟು ನಿರಾಯುಧರಾಗಿ ನಿಲ್ಲಬೇಕಾಗುತ್ತದೆ. ಹಾಗಾದಾಗೆಲ್ಲ ಅವರ ವ್ಯಂಗ್ಯ ಮತ್ತು ಮೊನಚು ಮಾತುಗಳು ಸ್ವತಃ ಅವರಿಗೇ ತಿರುಗುಬಾಣವಾಗುತ್ತವೆ ಮತ್ತು ಹತಾಶೆ, ಗೊಂದಲ ಮತ್ತು ಕುತರ್ಕಗಳೇ ಅವರಿಗೆ ಆಸರೆ ಆಗಬೇಕಾಗುತ್ತದೆ. ಬಹಳ ಸ್ಪಷ್ಟ ಮತ್ತು ನಿಖರ ಮಾತುಗಾರರು ಕೂಡ, ಅಂತಹ ಹೊತ್ತಿನಲ್ಲಿ ಸಮರ್ಥನೆಯ ಸಾಹಸ ಗೆಲ್ಲಲಾರದೆ ಕೈಚೆಲ್ಲುತ್ತಾರೆ.

ಭಾರತ ಮತ್ತು ಫ್ರಾನ್ಸ್ ನಡುವಿನ ಬರೋಬ್ಬರಿ ೫೮ ಸಾವಿರ ಕೋಟಿ ರು. ಮೌಲ್ಯದ ರಫೇಲ್ ಯುದ್ಧ ವಿಮಾನ ಹಗರಣದ ವಿಷಯದಲ್ಲಿ ಬಿಜೆಪಿ ವಕ್ತಾರರ ಸ್ಥಿತಿ ಕೂಡ ಹೀಗೇ ಆಗಿದೆ. ಅದರಲ್ಲೂ, ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಸ್ ಹೊಲಾಂದ್ ಅವರು, “ಹೊಸ ಒಪ್ಪಂದದಲ್ಲಿ ಉತ್ಪಾದನಾ ಸಹಭಾಗಿ ಸಂಸ್ಥೆಯಾಗಿ ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಬದಲಾಗಿ ಅನಿಲ್ ಅಂಬಾನಿ ಸಮೂಹಕ್ಕೆ ಸೇರಿದ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಸೇರಿಸಿಕೊಂಡದ್ದು ಭಾರತ ಸರ್ಕಾರದ ಒತ್ತಾಸೆಯ ಮೇರೆಗೇ,” ಎಂಬ ಸಂಗತಿಯನ್ನು ಬಹಿರಂಗಪಡಿಸಿದ ಬಳಿಕ, ಬಿಜೆಪಿ ವಕ್ತಾರರಿಗೆ ಈ ವಿಷಯದಲ್ಲಿ ಸಮರ್ಥಿಸಿಕೊಳ್ಳುವುದು ನಿಜಕ್ಕೂ ದೊಡ್ಡ ತಲೆನೋವಿನ ಕೆಲಸವಾಗಿದೆ.

ಯುದ್ಧ ವಿಮಾನ ಖರೀದಿ ಒಪ್ಪಂದವು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ ಮಹಾ ಹಗರಣ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಹೊಲಾಂದ್ ಅವರು ಬಹಿರಂಗಪಡಿಸಿದ ಸಂಗತಿಗಳು ಇನ್ನಷ್ಟು ತುಪ್ಪ ಸುರಿದವು. ಹಾಗಾಗಿ, ಬಿಜೆಪಿ ವಕ್ತಾರರ ಮುಂದೆ ತಕ್ಷಣಕ್ಕೆ ಇದ್ದ ಸವಾಲು; ಹೊಲಾಂದ್ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕುವುದು ಮತ್ತು ಆ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಎತ್ತಿದ್ದ ಎರಡು ಪ್ರಶ್ನೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವುದು. ಪ್ರತಿಪಕ್ಷಗಳು ಪ್ರಮುಖವಾಗಿ, ೧) ಪ್ರಧಾನಿ ನರೇಂದ್ರ ಮೋದಿಯವರು ೨೦೧೫ರ ಏಪ್ರಿಲ್‌ನಲ್ಲಿ ಪ್ಯಾರಿಸ್‌ಗೆ ಭೇಟಿ ನೀಡಿದ ವೇಳೆ ಹಳೆಯ ರಫೇಲ್ ಒಪ್ಪಂದವನ್ನು ಏಕಾಏಕಿ ಯಾಕೆ ಕೈಬಿಡಲಾಯಿತು? ೨) ರಿಲಯನ್ಸ್ ಡಿಫೆನ್ಸ್ ಕಂಪನಿಗೆ ಪಾಲುದಾರಿಕೆ ನೀಡುವ ಉದ್ದೇಶದಿಂದಲೇ ತೀರಾ ತರಾತುರಿಯಲ್ಲಿ; ಪ್ರತಿ ವಿಮಾನದ ವೆಚ್ಚದಲ್ಲಿ ದುಪ್ಪಟ್ಟು ಮೀರಿ ವೆಚ್ಚ ನಿಗದಿ ಮಾಡಿ, ಹೊಸ ಒಪ್ಪಂದ ಜಾರಿಗೆ ತರಲಾಯಿತೇ? ಎಂಬ ಎರಡು ಪ್ರಶ್ನೆಗಳನ್ನು ಮುಂದೊಡ್ಡಿದ್ದವು.

ಈ ಎರಡು ಪ್ರಶ್ನೆಗಳಿಗೆ ಉತ್ತರ ಕೊಡಲಾರದ ಬಿಜೆಪಿ ವಕ್ತಾರರು, ತಮ್ಮ ಎಲ್ಲ ವಿದ್ಯೆ ಬಳಸಿ, ಆ ವಿಷಯವನ್ನೇ ಮರೆಮಾಚಿ ಬೇರೆಡೆ ಗಮನ ತಿರುಗಿಸುವ ದುಃಸ್ಸಾಹಸ ಮಾಡಿದರು. ಆದರೆ, ಅಂತಹ ಎಲ್ಲ ಪ್ರಯತ್ನಗಳಲ್ಲಿ ಅವರು ಈವರೆಗೆ ಸೋಲುತ್ತಲೇ ಇದ್ದಾರೆ. ವಕ್ತಾರರ ಇಂತಹ ಪ್ರಯತ್ನಗಳು ಸರ್ಕಾರದ ಮಾನ ಕಾಯುವ ಬದಲು, ಕೆಲವು ಬಾರಿ ಇನ್ನಷ್ಟು ಅನುಮಾನಗಳಿಗೂ ಕಾರಣವಾಗಿವೆ. ಜೊತೆಗೆ, ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ ಎಂಬ ಜನರ ಭಾವನೆಗಳಿಗೆ ಪುಷ್ಟಿ ನೀಡುತ್ತಿವೆ. ರಫೇಲ್ ಹಗರಣ ವಿಷಯದಲ್ಲಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುವ ದುಸ್ಸಾಹಸ ಸರ್ಕಾರಕ್ಕೆ ಇನ್ನಷ್ಟು ಹಾನಿ ಮಾಡಿದ ಅಂತಹ ಕೆಲವು ನಿದರ್ಶನಗಳು ಇಲ್ಲಿವೆ:

ವಿದೇಶಿ ಹುನ್ನಾರದ ವಾದ

ಈ ಹಗರಣ ಮತ್ತು ಅದರ ಕುರಿತ ವಿವಾದದಲ್ಲಿ ಫ್ರಾನ್ಸ್ ಪಾಲೂ ಇರುವುದರಿಂದ ಮತ್ತು ಫ್ರಾನ್ಸ್ ಮಾಜಿ ಅಧ್ಯಕ್ಷರು ಬಿಜೆಪಿ ಸರ್ಕಾರಕ್ಕೆ ಮುಜುಗರ ತರುವ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿಯವರಿಗೆ ಪೂರಕವಾಗಿ ಹೊಲಾಂದ್ ಹೇಳಿಕೆ ನೀಡಿರಬಹುದು ಎಂಬ ವಾದ ತೇಲಿಬಿಡಲಾಯಿತು. ಈ ವಾದವನ್ನು ಹೂಡಿದವರು ಮತ್ತಾರೂ ಅಲ್ಲ; ಸ್ವತಃ ಹಣಕಾಸು ಸಚಿವ ಅರುಣ್ ಜೇಟ್ಲಿ! ಕಾಂಗ್ರೆಸ್ ಅಧ್ಯಕ್ಷರನ್ನು ಇತ್ತೀಚೆಗಷ್ಟೇ ‘ವಿಧೂಷಕ ರಾಜಕುಮಾರ’ ಎಂದು ವ್ಯಂಗ್ಯವಾಡಿದ್ದರು ಜೇಟ್ಲಿ!

ಇದೀಗ ದಿಢೀರ್ ಯೂಟರ್ನ್ ತೆಗೆದುಕೊಂಡಿರುವ ಅವರು, ಅದೇ ‘ವಿಧೂಷಕ’ನಿಗೆ ರಾಜಕೀಯ ತಂತ್ರಗಾರನ ಪಟ್ಟ ಕಟ್ಟಿದ್ದು, ಸೆಪ್ಟೆಂಬರ್ ೨೩ರಂದು ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ, “ಅವರು (ರಾಹುಲ್ ಗಾಂಧಿ) ಒಂದು ರೀತಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎನಿಸುತ್ತದೆ. ಈ ಇಡೀ ವಿವಾದವೇ ಒಂದು ವ್ಯವಸ್ಥಿತ ಹುನ್ನಾರ ಆಗಿದ್ದರೂ ಆಶ್ಚರ್ಯವಿಲ್ಲ. ಏಕೆಂದರೆ, ಆಗಸ್ಟ್ ೩೦ರಂದು ಅವರು (ರಾಹುಲ್) 'ಕೆಲ ದಿನಗಳಲ್ಲೇ ಪ್ಯಾರಿಸ್‌ನಿಂದ ಬಾಂಬು ಸಿಡಿಯಲಿವೆ ಕಾಯಿರಿ' ಎಂದು ಟ್ವೀಟ್‌ ಮಾಡಿದ್ದರ ಅರ್ಥವೇನು? ಮತ್ತು ಅವರ ಆ ಮಾತುಗಳಿಗೆ ತಕ್ಕಂತೆ ಆ ನಂತರದ ಬೆಳವಣಿಗೆಗಳು ನಡೆದವು ಎಂದರೆ ಏನು?” ಎಂದು ಪ್ರಶ್ನಿಸಿದ್ದಾರೆ.

ಹಾಗೆ ಹೇಳುವ ಮೂಲಕ ಜೇಟ್ಲಿ, ಆ.೩೦ರ ರಾಹುಲ್ ಟ್ವೀಟ್‌ ಮೇಲೆಯೇ ತಮ್ಮ ಈ ಷಢ್ಯಂತ್ರದ ವಾದವನ್ನು ನಿಲ್ಲಿಸಿದ್ದಾರೆ. ಆದರೆ, ವಾಸ್ತವವಾಗಿ ರಾಹುಲ್ ಗಾಂಧಿ ತಮ್ಮ ಆ ಟ್ವೀಟ್‌ನಲ್ಲಿ, ಹೊಲಾಂದ್ ಗೆಳತಿ ನಟಿ ಜೂಲಿ ಗಯೆಟ್ ನಟಿಸಿದ ಸಿನಿಮಾವೊಂದಕ್ಕೆ ಅನಿಲ್ ಅಂಬಾನಿ ಸಮೂಹ ಹಣಕಾಸು ಹೂಡಿಕೆ ಮಾಡಿದ ಕುರಿತ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯೊಂದನ್ನು ಪ್ರಸ್ತಾಪಿಸುತ್ತ, “ಭ್ರಷ್ಟಾಚಾರದ ಜಾಗತೀಕರಣ. ಈ #ರಫೇಲ್ಏರ್‌ಕ್ರಾಫ್ಟ್ ನಿಜವಾಗಿಯೂ ಅತಿವೇಗದಲ್ಲಿ ಅತಿದೂರಕ್ಕೆ ತಲುಪಿದೆ. ಅಲ್ಲದೆ, ಕೆಲವೇ ವಾರಗಳಲ್ಲಿ ಈ ರಫೇಲ್ ಕೆಲವು ಬಂಕರ್ ನಾಶಕ ಬಾಂಬ್‌ಗಳನ್ನೂ ಹಾಕಲಿದೆ. ಫ್ರಾನ್ಸ್‌ನಲ್ಲಿ ದೊಡ್ಡ ಸಮಸ್ಯೆ ಎದುರಾಗಿದೆ ಎಂದು ಅನಿಲ್‌ಗೆ ಹೇಳಿಬಿಡಿ ಮೋದಿಜೀ ಪ್ಲೀಸ್,” ಎಂದು ಹೇಳಿದ್ದರು. ಆದರೆ, ಜೇಟ್ಲಿ ಈ ಟ್ವೀಟ್‌ನ ಮೊದಲಾರ್ಧವನ್ನು ಉಲ್ಲೇಖಿಸದೆ, ಕೇವಲ ಕೊನೆಯ ಸಾಲನ್ನು ಮಾತ್ರ ಉಲ್ಲೇಖಿಸಿ, ಫ್ರಾನ್ಸ್ ಮಾಜಿ ಅಧ್ಯಕ್ಷರು ರಾಹುಲ್ ಅವರೊಂದಿಗೆ ಕೈಜೋಡಿಸಿದ್ದಾರೆ ಎಂಬ ಕಟ್ಟುಕತೆಯನ್ನು ಹೊಸೆಯಲು ಪ್ರಯತ್ನಿಸಿದ್ದರು.

ಈ ಮೊದಲು ಇಂತಹದ್ದೇ ವಿದೇಶಿ ಕೈವಾಡದ ಆರೋಪ ಹೊರಿಸಲು ಯತ್ನಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ, “ರಫೇಲ್ ವಿವಾದದ ಹಿಂದೆ ಪಾಕಿಸ್ತಾನದ ಕೈವಾಡವಿದೆ,” ಎಂದಿದ್ದರು. “ರಾಹುಲ್ ಗಾಂಧಿ ಹೇಳುತ್ತಾರೆ, ‘ಮೋದಿ ಹಠಾವೋ’, ಪಾಕಿಸ್ತಾನ ಹೇಳುತ್ತೆ ‘ಮೋದಿ ಹಠಾವೋ.’ ಈಗ ಪ್ರಧಾನಿ ಮೋದಿ ವಿರುದ್ಧದ ರಾಹುಲ್ ಗಾಂಧಿಯವರ ಆಧಾರರಹಿತ ಆರೋಪಗಳನ್ನು ಪಾಕಿಸ್ತಾನವೂ ಬೆಂಬಲಿಸುತ್ತಿದೆ. ಹಾಗಾದರೆ, ಮೋದಿ ವಿರುದ್ಧ ಕಾಂಗ್ರೆಸ್ ಅಂತಾರಾಷ್ಟ್ರೀಯ ಮಹಾಘಟಬಂಧನ್ (ಮಹಾಮೈತ್ರಿ) ಕಟ್ಟುತ್ತಿದೆಯೇ?” ಎಂದು ಅಮಿತ್ ಶಾ ಟ್ವೀಟ್‌ ಮಾಡಿದ್ದರು. ಬಿಜೆಪಿ ನಾಯಕರ ಈ ವಿದೇಶಿ ಕೈವಾಡದ ವಾದವನ್ನು ಕ್ರೀಡಾ ಖಾತೆ ರಾಜ್ಯ ಸಚಿವ ರಾಜವರ್ಧನ್ ರಾಥೋಡ್ ಹಾಗೂ ಬಿಜೆಪಿಯ ಟ್ರೋಲ್ ಪಡೆಗಳು ಕೂಡ ಬೆಂಬಲಿಸಿದ್ದವು.

ಹೊಲಾಂದ್ ಎಂಬ ವಿರೋಧಾಭಾಸದ ವ್ಯಕ್ತಿತ್ವ

ಮೊದಲನೆಯದಾಗಿ, ಯಾವುದೇ ವಿವಾದವೇ ಇಲ್ಲ ಎಂಬುದನ್ನು ಹೇಳುವ ಉದ್ದೇಶದಿಂದಲೇ ಈ ವಿದೇಶಿ ಕೈವಾಡದ ವಾದವನ್ನು ಹೂಡಲಾಗಿತ್ತು. ಇದಕ್ಕೆ ಮೂಲವಾಗಿದ್ದು ಹೊಲಾಂದ್ ಅವರು ಎಎಫ್‌ಪಿ ಸುದ್ದಿಸಂಸ್ಥೆಗೆ, ಟೊರಾಂಟೋದ ಸಮಾವೇಶವೊಂದರ ವೇಳೆ ನೀಡಿದ ಹೇಳಿಕೆಗಳು. ರಫೇಲ್ ಒಪ್ಪಂದದ ಬಗ್ಗೆ ಕೇಳಿದಾಗ, “ಮೊದಲನೆಯದಾಗಿ, ಮೋದಿ ಸರ್ಕಾರ ಅಂತಿಮಗೊಳಿಸಿದ ಒಪ್ಪಂದದ ‘ಹೊಸ ಸೂತ್ರ’ದ ಪ್ರಕಾರವೇ ರಿಲಯನ್ಸ್ ಹೆಸರು ಸೇರ್ಪಡೆಯಾಯಿತು ಮತ್ತು ಎರಡನೆಯದಾಗಿ, ಒಪ್ಪಂದದಲ್ಲಿ ರಿಲಯನ್ಸ್ ಸಂಸ್ಥೆಯನ್ನೂ ಸೇರಿಸಿಕೊಳ್ಳುವಂತೆ ಭಾರತ ಸರ್ಕಾರ ಡಸಾಲ್ಟ್ ಕಂಪನಿಗೆ ಒತ್ತಡ ಹೇರಿದ ಬಗ್ಗೆ ತಮಗೆ ಗೊತ್ತಿಲ್ಲ. ಆ ಬಗ್ಗೆ ಡಸಾಲ್ಟ್ ಕಂಪನಿಯೇ ಉತ್ತರಿಸಬೇಕು,” ಎಂದು ಹೇಳಿರುವುದಾಗಿ ವರದಿಯಾಗಿತ್ತು.

ಇದನ್ನೂ ಓದಿ : ಸಂಕಲನ | ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ವರದಿ-ವಿಶ್ಲೇಷಣೆಗಳು

ಅವರ ಉತ್ತರದ ದ್ವಿತೀಯಾರ್ಧವನ್ನೇ ಮುಂದಿಟ್ಟುಕೊಂಡ ಬಿಜೆಪಿ ನಾಯಕರು, “ಡಸಾಲ್ಟ್ ಮೇಲೆ ಭಾರತ ಸರ್ಕಾರ ಯಾವುದೇ ಒತ್ತಡ ಹೇರಿಲ್ಲ ಮತ್ತು ಹಾಗಾಗಿ ಉತ್ಪಾದನಾ ಸಹಭಾಗಿತ್ವದ ಆಯ್ಕೆಯ ವಿಷಯ ಸಂಪೂರ್ಣವಾಗಿ ಆ ಎರಡು ಕಾರ್ಪೊರೇಟ್ ಕಂಪನಿಗಳಿಗೆ ಬಿಟ್ಟ ವಿಷಯವಾಗಿತ್ತು,” ಎಂಬ ವಾದ ಮಂಡಿಸಿದ್ದರು. ಆದರೆ, ಹೊಲಾಂದ್ ತನ್ನ ಆ ಹೇಳಿಕೆಯ ಬಳಿಕ ‘ಮೀಡಿಯಾ ಪಾರ್ಟ್’ ಎಂಬ ಫ್ರೆಂಚ್ ವೆಬ್‌ಸೈಟಿಗೆ ನೀಡಿದ ಹೇಳಿಕೆಯಲ್ಲಿ, “ಮೋದಿ ಸರ್ಕಾರದ ಒತ್ತಾಸೆಯ ಮೇರೆಗೇ ರಿಲಯನ್ಸ್‌ ಅನ್ನು ‘ಹೊಸ ಸೂತ್ರ’ದ ಪ್ರಕಾರ ಒಪ್ಪಂದದಲ್ಲಿ ಸೇರಿಸಿಕೊಳ್ಳಲಾಯಿತು,” ಎಂದಿದ್ದರು. ಆದರೆ, ಬಿಜೆಪಿ ನಾಯಕರು ಜಾಣ್ಮೆಯಿಂದ ಈ ಹೇಳಿಕೆಯನ್ನು ಮರೆಮಾಚಲು ಯತ್ನಿಸಿದರು. ರಿಲಯನ್ಸ್ ಕಂಪನಿಯನ್ನು ಪಾಲುದಾರನನ್ನಾಗಿ ಮಾಡಿಕೊಳ್ಳಬೇಕು ಎಂದು ಡಸಾಲ್ಟ್ ಸಂಸ್ಥೆಯ ಮೇಲೆ ಭಾರತ ಸರ್ಕಾರ ಒತ್ತಡ ಹಾಕಿದ ಬಗ್ಗೆ ತನಗೆ ಗೊತ್ತಿಲ್ಲ ಎಂದು ಹೇಳಿದ್ದರೇ ವಿನಾ, ಒತ್ತಡ ಹಾಕಿಲ್ಲ ಎಂದೇನೂ ಹೊಲಾಂದ್ ಹೇಳಿರಲಿಲ್ಲ!

ಡಸಾಲ್ಟ್-ರಿಲಯನ್ಸ್ ಒಪ್ಪಂದಕ್ಕೆ ಯುಪಿಎ-೨ರ ಅವಧಿಯಲ್ಲಿ ಸಹಿ!

ಈ ಸ್ಫೋಟಕ ಮಾಹಿತಿ ಭಾರಿ ಸದ್ದು ಮಾಡಿದಷ್ಟೇ ವೇಗವಾಗಿ ತಣ್ಣಗಾಯಿತು. ಪ್ರಧಾನಿ ಮನಮೋಹನ ಸಿಂಗ್ ಅವರ ಎರಡನೇ ಅವಧಿಯಲ್ಲೇ- ಅಂದರೆ, ೨೦೧೨ರಲ್ಲಿಯೇ ಡಸಾಲ್ಟ್ ಮತ್ತು ರಿಲಯನ್ಸ್ ನಡುವೆ ರಫೇಲ್ ಒಪ್ಪಂದ ನಡೆದಿತ್ತು ಎಂದು ಹೇಳಲಾಗಿತ್ತು. ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರೇ ಸ್ವತಃ ಈ ಬಾಂಬ್ ಸ್ಫೋಟಿಸಿದ್ದರು. ಡಸಾಲ್ಟ್ ಏವಿಯೇಷನ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್ (ಆರ್‌ಐಎಲ್) ನಡುವೆ ಒಪ್ಪಂದ ಕುರಿತ ೨೦೧೨ರ ಫೆಬ್ರವರಿ ೧೩ರ ‘ಟೈಮ್ಸ್ ಆಫ್ ಇಂಡಿಯಾ’ ವರದಿಯನ್ನು ಪ್ರಸ್ತಾಪಿಸಿ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಆದರೆ, ಈ ವಾದದಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಿದ ಸತ್ಯವೆಂದರೆ, ಆರ್‌ಐಎಲ್ ಮಾಲೀಕತ್ವ ಮುಖೇಶ್ ಅಂಬಾನಿಯವರದ್ದು ಮತ್ತು ೨೦೦೫ರಲ್ಲೇ ಭಾರಿ ಸುದ್ದಿ ಮಾಡಿದ್ದ ಕೌಟುಂಬಿಕ ಕಲಹದ ಬಳಿಕ ಮುಖೇಶ್, ತಮ್ಮ ಸಹೋದರನಿಂದ ಬೇರ್ಪಟ್ಟಿದ್ದರು ಎಂಬುದು. ೨೦೧೨ರಲ್ಲಿ ಆರ್‌ಐಎಲ್ ಮತ್ತು ಡಸಾಲ್ಟ್ ನಡುವೆ ಒಪ್ಪಂದವಾಗಿದ್ದು, ಬಳಿಕ ಅದನ್ನು ರದ್ದು ಮಾಡಲಾಗಿತ್ತು. ಆದರೆ, ಆ ಒಪ್ಪಂದಕ್ಕೂ ರಫೇಲ್‌ಗೂ ಯಾವುದೇ ಸಂಬಂಧ ಇರಲಿಲ್ಲ. ೨೦೧೫ರ ಮಾರ್ಚ್ ೨೮ರಂದು ಡಸಾಲ್ಟ್‌ ಪಾಲುದಾರಿಕೆಯೊಂದಿಗೆ ರಫೇಲ್‌ ಒಪ್ಪಂದಕ್ಕೆ ಸೇರ್ಪಡೆಯಾಗಿರುವುದು ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಕಂಪನಿ. ಈ ಒಪ್ಪಂದವಾಗಿ ಕೇವಲ ಹದಿನೈದು ದಿನದಲ್ಲೇ ಏಪ್ರಿಲ್ ೧೦ರಂದು ಮೋದಿ ಪ್ಯಾರಿಸ್‌ಗೆ ಭೇಟಿ ನೀಡಿದಾಗ, ಯುಪಿಎ ಸರ್ಕಾರದ ಅವಧಿಯ ಹಳೆಯ ರಫೇಲ್ ಒಪ್ಪಂದ ಕೈಬಿಟ್ಟು ಏಕಾಏಕಿಯಾಗಿ ಹೊಸ ಒಪ್ಪಂದ ಘೋಷಿಸಲಾಗಿತ್ತು.

ಸರ್ಕಾರದ ನಿರಾಕರಣೆಯೇ ಅಂತಿಮ ಸತ್ಯ

“ಹೊಲಾಂದ್ ಅವರ ಹೇಳಿಕೆಯನ್ನು ಸ್ವತಃ ಫ್ರಾನ್ಸ್ ಸರ್ಕಾರವೇ ನಿರಾಕರಿಸಿರುವುದರಿಂದ ರಫೇಲ್ ಒಪ್ಪಂದದ ಕುರಿತು ಜಂಟಿ ಸದನ ಸಮಿತಿಯ ತನಿಖೆ ನಡೆಸಬೇಕು ಎಂಬ ತಮ್ಮ ಆಗ್ರಹವನ್ನು ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಕೈಬಿಡಬೇಕು,” ಎಂಬ ಮಾತೂ ಕೇಳಿಬರುತ್ತಿದೆ. ಭಾರತದ ರಕ್ಷಣಾ ಸಚಿವಾಲಯ ಕೂಡ ರಿಲಯನ್ಸ್ ಸೇರ್ಪಡೆಯಲ್ಲಿ ತನ್ನ ಪಾತ್ರವಿಲ್ಲ ಎಂದಿದೆ. ಹಾಗಾಗಿ, ಎರಡೂ ಸರ್ಕಾರಗಳು ರಿಲಯನ್ಸ್ ಪರ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ ಎಂದು ಹೇಳುತ್ತಿರುವುದರಿಂದ ಇದರಲ್ಲಿ ವಿವಾದದ ಪ್ರಶ್ನೆ ಏಕೆ ಎಂಬ ಪ್ರಶ್ನೆ ಎತ್ತಲಾಯಿತು.

ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಅದು ಹೇಗೆ ನಡೆದುಕೊಂಡಿತ್ತು ಎಂಬುದನ್ನು ನೋಡಿದರೆ, ಈ ವಾದ ಕೂಡ ತೀರಾ ಟೊಳ್ಳು ಎನಿಸದೆ ಇರದು. ತನ್ನ ಮೂಗಿನಡಿ ನಡೆದಿರುವ ಹಗರಣಗಳನ್ನು ಯಾವ ಸರ್ಕಾರ ತಾನೇ ಬಹಿರಂಗವಾಗಿ ಒಪ್ಪಿಕೊಳ್ಳುತ್ತದೆ? ಮೊದಲ ಪ್ರಯತ್ನದಲ್ಲೇ ಆ ಹಗರಣದಿಂದ ನುಣುಚಿಕೊಳ್ಳಲು ಯತ್ನಿಸುವುದು ಸಾಮಾನ್ಯ. ಈಗ ದೆಹಲಿ ಮತ್ತು ಪ್ಯಾರಿಸ್ ಸರ್ಕಾರಗಳು ಮಾಡುತ್ತಿರುವುದು ಕೂಡ ಅದನ್ನೇ!

ಇತಿಹಾಸ ಎಲ್ಲಕ್ಕೂ ಸಾಕ್ಷಿ

ಸಮರ್ಥನೆಯ ದಾರಿಗಳೆಲ್ಲ ಮುಚ್ಚಿಹೋಗಿವೆ ಎನಿಸಿದಾಗೆಲ್ಲ ಬಿಜೆಪಿ ವಕ್ತಾರರು ನಮ್ಮ ಮುಂದಿಡುವ ಸೊಗಸಾದ ಮಾತು, ಇತಿಹಾಸ ಪಾಠದ ಪ್ರವಚನ! ೧೯೪೮ರ ಜೀಪ್‌ ಹಗರಣ, ೧೯೭೧ರ ಇಂದಿರಾ ಗಾಂಧಿಯವರ ‘ಕುಖ್ಯಾತ ಚುನಾವಣಾ ಹಗರಣ’, ಬೋಫೋರ್ಸ್ ಮತ್ತು ಯುಪಿಎ ಅವಧಿಯ ಸಾಲು-ಸಾಲು ಹಗರಣಗಳನ್ನು ನೆನಪಿಸುವುದು ವಾಡಿಕೆ. ಹಾಗೇ, ವಸತಿ ಮತ್ತು ನಗರಾಡಳಿತ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಅವರಂತೆ ನೆಹರು-ಗಾಂಧಿ ಕುಟುಂಬದ ಭ್ರಷ್ಟಾಚಾರದ ಬಗ್ಗೆಯೂ ಭಾಷಣ ಬಿಗಿಯುತ್ತಾರೆ.

ಆದರೆ, ರಫೇಲ್ ಒಪ್ಪಂದ ವಿಷಯದಲ್ಲಿ ಪ್ರತಿಪಕ್ಷಗಳು ಎತ್ತಿರುವ ಎರಡು ಮೂಲಭೂತ ಪ್ರಶ್ನೆಗಳಿಗೆ ಈ ಯಾವ ವಿಷಯಾಂತರ ಪ್ರಯತ್ನಗಳೂ ತಕ್ಕ ಉತ್ತರ ಕೊಡುವುದಿಲ್ಲ ಎಂಬುದು ದುರದೃಷ್ಟಕರ. ಆದರೆ, ಆ ಪ್ರಶ್ನೆಗಳಿಗೆ ನಿಶ್ಚಿತವಾಗಿಯೂ ನಿಖರ ಉತ್ತರ ತಿಳಿದಿರುವ ಸರ್ಕಾರ, ಅದನ್ನು ಬಹಿರಂಗಗೊಳಿಸುತ್ತಿಲ್ಲ ಮತ್ತು ಅದರದ್ದೇ ಆದ ಕಾರಣಗಳಿಗಾಗಿ ಮುಂದೆಯೂ ಬಹಿರಂಗಪಡಿಸುವುದಿಲ್ಲ. ಹಾಗಾಗಿ, ಬಿಜೆಪಿಯ ವಕ್ತಾರರಿಗೆ ಈಗ ವಿಕೆಟ್‌ ಅನ್ನೂ ಉರುಳಿಸದ, ರನ್‌ ಕೂಡ ನೀಡಲಾರದ ತೀರಾ ನೀರಸ ಬೌಲಿಂಗ್ ಪ್ರದರ್ಶನವಲ್ಲದೆ ಗತ್ಯಂತರವಿಲ್ಲ!

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More