ಚಿತ್ತವಿತ್ತ | ಕುಸಿದಿರುವುದು ರುಪಾಯಿಯ ಬೆಲೆ ಮಾತ್ರವಲ್ಲ!

ಸದ್ಯಕ್ಕೆ ಭಾರತದಲ್ಲಿ ಬಡ್ಡಿದರ ಹೆಚ್ಚಿದೆ. ಒಂದಿಷ್ಟು ಸಟ್ಟಾ ಬಂಡವಾಳ ದೇಶಕ್ಕೆ ಹರಿದುಬಂದಿದೆ. ಹೆಚ್ಚೆಚ್ಚು ಹಣ ಅದರಲ್ಲೂ ಡಾಲರ್ ರೂಪದಲ್ಲಿ ಬಂದರೆ ನಮ್ಮ ಸ್ಥಿತಿ ಸುಧಾರಿಸಬಹುದು ಅನ್ನುವುದು ಈಗಿನ ಲೆಕ್ಕಾಚಾರ. ಆದರೆ, ಇಂತಹ ಹಣವನ್ನು ನೆಚ್ಚಿ ಆರ್ಥಿಕತೆಯನ್ನು ಯೋಜಿಸುವುದಕ್ಕೆ ಸಾಧ್ಯವೇ ಇಲ್ಲ

‘ರೂಪಾಯಿ ಮೌಲ್ಯ ಮತ್ತಷ್ಟು ಕುಸಿತ’, 'ರೂಪಾಯಿ ಮೌಲ್ಯದಲ್ಲಿ ದಾಖಲೆ ಕುಸಿತ’, ‘ಪೆಟ್ರೋಲ್ ಬೆಲೆ ಗಗನಕ್ಕೆ’... ಮುಂತಾದವು ಇತ್ತೀಚಿಗೆ ಪತ್ರಿಕೆಗಳ ದಿನನಿತ್ಯದ ಸುದ್ದಿ. ರೂಪಾಯಿ ಶೇಕಡ 12ಕ್ಕಿಂತ ಹೆಚ್ಚು ಮೌಲ್ಯವನ್ನು ಈ ವರ್ಷ ಕಳೆದುಕೊಂಡಿದೆ. ಇದರ ಬಿಸಿ ಸರ್ಕಾರಕ್ಕೂ ತಟ್ಟಿದೆ. ಮುಂಬರುವ ಚುನಾವಣೆಯಲ್ಲಿ ಇದು ಪಕ್ಷಕ್ಕೆ ಸಮಸ್ಯೆ ಆಗಬಹುದು ಎಂಬ ಆತಂಕ ಅವರನ್ನು ಕಾಡಿದೆ. ಅರುಣ್ ಜೇಟ್ಲಿಯವರು ಕೊನೆಗೂ ಒಂದಿಷ್ಟು ಕ್ರಮಗಳನ್ನು ಘೋಷಿಸಿದ್ದಾರೆ. ಜೊತೆಗೆ, ಇದಕ್ಕೆ ಜಾಗತಿಕ ವಿದ್ಯಮಾನ ಕಾರಣ ಎಂದು ಹೇಳಿದ್ದಾರೆ. ನಿಜ, ಇಂಡೋನೇಷ್ಯಾ, ಅರ್ಜೆಂಟೀನಾ, ಮೆಕ್ಸಿಕೊ ಹಾಗೂ ಟರ್ಕಿಯಲ್ಲೂ ಇದೇ ರೀತಿ ಆಗಿದೆ. ಅಲ್ಲಿಯ ಕರೆನ್ಸಿಗಳ ಮೇಲೂ ಪ್ರತಿಕೂಲ ಪರಿಣಾಮ ಆಗಿದೆ. ಹಾಗೆಂದರೆ, ಏನೂ ಹೇಳಿದಂತೆ ಆಗುವುದಿಲ್ಲ. ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ ತಿಳಿದ ವಿಷಯವೇ. ಅಮೆರಿಕ, ತನ್ನ ಹಣಕಾಸು ಪೂರೈಕೆಯ ಬೆಳವಣೆಗೆಯನ್ನು ತಗ್ಗಿಸಿದೆ. ಅದರ ಪರಿಣಾಮವೂ ಈಗ ಕಾಣಿಸಿಕೊಳ್ಳುತ್ತಿದೆ.

ಸರ್ಕಾರ ಸದ್ಯದ ಬಿಕ್ಕಟ್ಟನ್ನು ಎದುರಿಸಲು ಕೆಲವು ಕ್ರಮಗಳನ್ನು ಘೋಷಿಸಿದೆ:

  • ಚಾಲ್ತಿ ಖಾತೆಯ ಕೊರತೆಯನ್ನು (ಕರೆಂಟ್ ಅಕೌಂಟ್ ಡಿಫಿಸಿಟ್) ತಗ್ಗಿಸಲು ಕ್ರಮ: ಚಾಲ್ತಿ ಖಾತೆಯ ಕೊರತೆ ಸ್ಥೂಲವಾಗಿ ಒಂದು ದೇಶದ ಸರಕು, ಸೇವೆಗಳ ರಫ್ತಿಗಿಂತ ಆಮದಿನ ಪ್ರಮಾಣ ಹೆಚ್ಚಾದಾಗ ಆಗುವ ಕೊರತೆಯ ಪ್ರಮಾಣವನ್ನು ಸೂಚಿಸುತ್ತದೆ. ಇಂದು ಅದು ಐದು ವರ್ಷಗಳಲ್ಲಿ ಗರಿಷ್ಠ ಪ್ರಮಾಣವನ್ನು ಮುಟ್ಟಿದೆ. ಇದನ್ನು ತಗ್ಗಿಸಲು ಅನವಶ್ಯ ಪದಾರ್ಥಗಳ ಆಮದಿನ ಪ್ರಮಾಣವನ್ನು ತಗ್ಗಿಸುವುದಕ್ಕೆ ಹಾಗೂ ದೇಶಿಯ ಉತ್ಪನ್ನಗಳ ರಫ್ತನ್ನು ಪ್ರೋತ್ಸಾಹಿಸುವುದಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಘೋಷಿಸಲಾಗಿದೆ.
  • ಡಾಲರ್ ದೇಶದೊಳಕ್ಕೆ ಹರಿದುಬರುವಂತೆ ನೋಡಿಕೊಳ್ಳುವುದು ಸದ್ಯದ ಇನ್ನೊಂದು ತುರ್ತು. ಅದಕ್ಕಾಗಿ ವಿಭಿನ್ನ ವಿದೇಶಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಇರುವ ನಿರ್ಬಂಧಗಳನ್ನು ಸಡಿಲಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಘೋಷಿಸಲಾಗಿದೆ. ‘ಮಸಾಲ ಬಾಂಡು’ಗಳ ಹೂಡಿಕೆಯನ್ನು ಪ್ರೋತ್ಸಾಹಿಸುವುದಕ್ಕೂ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸಲಾಗಿದೆ. ಮಸಾಲ ಬಾಂಡುಗಳು ಡಾಲರ್‌ಗೆ ಬದಲಾಗಿ ರೂಪಾಯಿ ರೂಪದಲ್ಲಿ ಇರುತ್ತದೆ. ಅದರಿಂದ ರೂಪಾಯಿ ಬೆಲೆ ಕುಸಿದಾಗ ಹೂಡಿಕೆದಾರನಿಗೆ ಹೊರೆಯಾಗುವುದಿಲ್ಲ. ಅವನು ರೂಪಾಯಿ ರೂಪದಲ್ಲೇ ಪಾವತಿ ಮಾಡುತ್ತಿರುತ್ತಾನೆ. ಖರೀದಿಸಿದವನಿಗೆ ಅದರ ಹೊರೆ ಬೀಳುತ್ತದೆ. ಹಾಗಾಗಿ, ವಿದೇಶಿ ವಿನಿಮಯ ದರದ ಏರುಪೇರಿನಿಂದ ಆಗಬಹುದಾದ ಅಪಾಯ ಇದರಲ್ಲಿ ಇರುವುದಿಲ್ಲ.

ಈ ಕ್ರಮಗಳ ಒಳಿತು, ಕೆಡುಕುಗಳನ್ನು ಚರ್ಚಿಸುವುದು ಈ ಟಿಪ್ಪಣಿಯ ಉದ್ದೇಶವಲ್ಲ. ರೂಪಾಯಿ ಮೌಲ್ಯದ ಕುಸಿತ, ಪೆಟ್ರೋಲ್ ಬೆಲೆ ಏರಿಕೆ, ಸೆನ್ಸೆಕ್ಸ್ ಕುಸಿತ ನಿರಂತರವಾಗಿ ಮುಂದುವರಿದಿರುವುದನ್ನು ನೋಡಿದರೆ ಮಾರುಕಟ್ಟೆ ಇದಕ್ಕೆ ಅನುಕೂಲಕರವಾಗಿ ಪ್ರತಿಕ್ರಿಯಿಸಿಲ್ಲ ಎನಿಸುತ್ತದೆ.

ಸಮಸ್ಯೆ ಸದ್ಯದ ಬಿಕ್ಕಟ್ಟು ಮಾತ್ರವಲ್ಲ. ಹಾಗಾಗಿ, ಅದರ ಸುತ್ತ ಗಿರಕಿ ಹೊಡೆದರೆ ಪರಿಹಾರ ಸಿಗುವುದಿಲ್ಲ. ನಾವು ಇನ್ನೂ ಗಂಭೀರ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿದೆ. ನಮ್ಮ ಆರ್ಥಿಕತೆಯ ಬುನಾದಿ ಎಷ್ಟು ಭದ್ರವಾಗಿದೆ? ನಾವು ಎಷ್ಟು ಪರಿಣಾಮಕಾರಿಯಾಗಿ ಅದನ್ನು ನಿಭಾಯಿಸುತ್ತಿದ್ದೇವೆ? ಇವೆಲ್ಲ ನಮ್ಮನ್ನು ಕಾಡಬೇಕು. ನಮಗೆ ಇನ್ನೂ ನಮ್ಮ ಮೂಲಭೂತ ಸಮಸ್ಯೆಗಳಿಂದ ಹೊರಬರುವುದಕ್ಕೇ ಆಗಿಲ್ಲ. ಅವುಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆಯೇ ಅನ್ನುವ ಅನುಮಾನ ಕೂಡ ಸಹಜವೇ. ದೇಶದೊಳಗಿನ ಆರ್ಥಿಕತೆಯಲ್ಲಿ ಒಂದು ಸಮತೋಲನ ಕಂಡುಕೊಳ್ಳುವುದಕ್ಕೆ ನಮಗೆ ಸಾಧ್ಯವಾಗಿಲ್ಲ. ದೇಶದಾಚೆಗಿನ ಸ್ಥಿತಿಯಲ್ಲಿ ಅಸ್ಥಿರತೆ ಇದೆ. ಅಮೆರಿಕದ ಒತ್ತಡ, ಚಾಲ್ತಿ ಖಾತೆಯಲ್ಲಿನ ಕೊರತೆ, ರಫ್ತಿನ ಕುಸಿತ ಇವೆಲ್ಲ ನಮ್ಮನ್ನು ಬಾಧಿಸುತ್ತಿವೆ. ಕೃಷಿಯಲ್ಲಿನ ಬಿಕ್ಕಟ್ಟು ಢಾಳಾಗಿ ಕಾಣಿಸಿಕೊಳ್ಳುತ್ತಿದೆ. ಉದ್ಯೋಗ ನಿರ್ಮಾಣದಲ್ಲೂ ಹೇಳಿಕೊಳ್ಳುವಂತಹ ಯಾವುದೇ ಸಾಧನೆಯೂ ಆಗಿಲ್ಲ. ಅಸಮಾನತೆ ಹೆಚ್ಚುತ್ತಲೇ ಇದೆ. ಹಲವು ಅವಶ್ಯ ಪದಾರ್ಥಗಳು, ಸೌಲಭ್ಯಗಳು ಜನರಿಗೆ ಎಟುಕದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರಾಕೃತಿಕ ಬಿಕ್ಕಟ್ಟನ್ನು ನಿರ್ವಹಿಸುವುದರಲ್ಲೂ ಎಡವುತ್ತಿದ್ದೇವೆ. ಸ್ವಾಭಾವಿಕವಾಗಿಯೇ ಬಹುಸಂಖ್ಯಾತರ ಬದುಕಿನಲ್ಲಿ ಅಭದ್ರತೆಯ ಭಾವನೆ ಬೆಳೆಯುತ್ತಿದೆ. ಇವೆಲ್ಲ ನಮಗೆ ಕಾಣಬೇಕು. ನಮ್ಮ ದೇಶದ ಆರ್ಥಿಕ ಅಭಿವೃದ್ಧಿ ಅನ್ನುವಾಗ ಇವೆಲ್ಲ ನಮ್ಮ ಗಮನದಲ್ಲಿರಬೇಕು. ಅಂತಹ ಒಂದು ಬೆಳೆವಣಿಗೆಯಿಂದ ದೇಶಕ್ಕೆ ತಾತ್ಕಾಲಿಕ ಬಿಕ್ಕಟ್ಟುಗಳನ್ನು ತಾಳಿಕೊಳ್ಳುವ ಶಕ್ತಿ ಬರುತ್ತದೆ. ಇದರಲ್ಲಿ ಹೊಸದೇನೂ ಇಲ್ಲ. ಇವೆಲ್ಲ ಪ್ರತಿಯೊಬ್ಬ ಆರ್ಥಿಕ ಚಿಂತಕನೂ ಲಾಗಾಯ್ತಿನಿಂದ ಹೇಳಿಕೊಂಡು ಬರುತ್ತಿರುವ ಮಾತುಗಳು.

ಇದನ್ನು ಗಮನದಲ್ಲಿಟ್ಟುಕೊಂಡೇ ಹಲವಾರು ಯೋಜನೆಗಳು, ನಮ್ಮ ತೆರಿಗೆ ನೀತಿಗಳು ರೂಪುಗೊಂಡಿರುತ್ತವೆ. ಆ ಯೋಜನೆಗಳನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದರೂ ದೇಶದ ಆರ್ಥಿಕತೆಯಲ್ಲಿ ಒಂದಿಷ್ಟು ಬೆಳವಣೆಗೆ ಸಾಧ್ಯವಾಗುತ್ತಿತ್ತು. ಉದ್ಯೋಗ ಹೆಚ್ಚುತ್ತಿತ್ತು, ಉತ್ಪಾದನಾ ವಲಯದಲ್ಲಿ ಬೆಳೆವಣಿಗೆ ಆಗುತ್ತಿತ್ತು. ರಫ್ತು ಹೆಚ್ಚುತ್ತಿತ್ತು. ಬಿಕ್ಕಟ್ಟನ್ನು ತಾಳಿಕೊಳ್ಳುವ ಶಕ್ತಿ ಹೆಚ್ಚುತ್ತಿತ್ತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಂತಹ ಯೋಜನೆಗಳು ಕೇವಲ ನೆಪಮಾತ್ರಕ್ಕೆ ಉಳಿದಿವೆ. ಅವುಗಳಿಗೆ ನೀಡಬೇಕಾದ ಮಹತ್ವವನ್ನು ನಾವು ನೀಡುತ್ತಿಲ್ಲ. ಅಸಂಘಟಿತ ಉತ್ಪಾದನಾ ವಲಯವನ್ನು ಬಲಗೊಳಿಸುವುದು ಮುಖ್ಯವೆಂದು ನಾವು ಭಾವಿಸಿದಂತೆ ಕಾಣುತ್ತಿಲ್ಲ. ಗೃಹ ಕೈಗಾರಿಕೆಗಳು ಕೇವಲ ರೊಮ್ಯಾಂಟಿಕ್ ಯೋಜನೆಗಳಾಗಿವೆ.

ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ತನ್ನದೇ ಆದ ದಾರಿಯನ್ನು ಹಿಡಿದು ಸಾಗುತ್ತಿರುತ್ತದೆ. ಅಲ್ಲಿ ಬಲಶಾಲಿಗಳು ಅದನ್ನು ನಿರ್ದೇಶಿಸುತ್ತಿರುತ್ತಾರೆ. ಅಮೆರಿಕ, ಚೀನಾದ ಆರ್ಥಿಕ ಮಾರ್ಗಗಳು, ಅವರ ನಡುವಿನ ಸಮರ ಇವೆಲ್ಲ ನಮ್ಮ ಆರ್ಥಿಕತೆಯನ್ನು ಸಹಜವಾಗಿಯೇ ಪ್ರಭಾವಿಸುತ್ತವೆ.

ಸದ್ಯಕ್ಕೆ ಭಾರತದಲ್ಲಿ ಬಡ್ಡಿದರ ಹೆಚ್ಚಿದೆ. ಒಂದಿಷ್ಟು ಸಟ್ಟಾ ಬಂಡವಾಳ ದೇಶಕ್ಕೆ ಹರಿದುಬಂದಿದೆ. ಹೆಚ್ಚೆಚ್ಚು ಹಣ ಅದರಲ್ಲೂ ಡಾಲರ್ ರೂಪದಲ್ಲಿ ಬಂದರೆ ನಮ್ಮ ಸ್ಥಿತಿ ಸುಧಾರಿಸಬಹುದು ಅನ್ನುವುದು ಈಗಿನ ಲೆಕ್ಕಾಚಾರ. ಆದರೆ, ಇಂತಹ ಹಣವನ್ನು ನೆಚ್ಚಿ ಆರ್ಥಿಕತೆಯನ್ನು ಯೋಜಿಸುವುದಕ್ಕೆ ಸಾಧ್ಯವೇ ಇಲ್ಲ. ಒಮ್ಮೆ ಹಣಕಾಸಿನ ಕ್ಷೇತ್ರದಲ್ಲಿ ಅನಿಶ್ಚಿತತೆ ಕಾಣಿಸಿಕೊಂಡರೆ ಅಷ್ಟೇ ಬೇಗ ಅದು ಹೊರಕ್ಕೆ ಹರಿಯುತ್ತದೆ. ಹಾಗಾಗಿ, ನಮ್ಮ ಚಾಲ್ತಿ ಖಾತೆಯ ಕೊರತೆಯ ಸ್ಥಿತಿ ನಾವು ಭಾವಿಸಿರುವುದಕ್ಕಿಂತ ತೀವ್ರವಾಗಿರುವ ಸಾಧ್ಯತೆ ಇದೆ. ಅದು ನಿಜವಾಗಿ ಸುಭದ್ರವಾಗಬೇಕಾದರೆ ರಫ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವು ಯೋಚಿಸಿಬೇಕಾಗಿದೆ. ಸಾಮಾನ್ಯವಾಗಿ ರುಪಾಯಿ ಮೌಲ್ಯ ಕುಸಿದರೆ ನಮ್ಮ ರಫ್ತು ಹೆಚ್ಚಾಗಬೇಕು. ಆದರೆ, ಇಂದು ನಮ್ಮಲ್ಲಿ ಹಾಗೆ ಆಗುತ್ತಿಲ್ಲ. ಭಾರತದಲ್ಲಿ ಆಮದು ಹೆಚ್ಚಾಗುತ್ತಿದೆ. ನಮ್ಮ ಯಾವ ಕ್ರಮಗಳೂ ಅದನ್ನು ಸರಿಪಡಿಸುವ ಕಡೆ ಸಾಗುತ್ತಿಲ್ಲ. ಅದರ ಪರಿಣಾಮ ವ್ಯತಿರಿಕ್ತವಾಗಿ ಆಗುತ್ತಿದೆ. ಆರ್ಥಿಕ ಯೋಜನೆಗಳೇ ಹಾಗೆ. ಹಲವಾರು ಆಯಾಮಗಳಲ್ಲಿ ಅವು ಕೆಲಸ ಮಾಡುತ್ತವೆ. ಹಾಗಾಗಿ, ನಮ್ಮ ನಡೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಉದಾಹರಣೆಗೆ, ಕಪ್ಪುಹಣದ ನಿಗ್ರಹಕ್ಕೆ ತೆಗೆದುಕೊಂಡ ಅಪನಗದೀಕರಣದ ಕ್ರಮ ಆಮದನ್ನು ಹೆಚ್ಚು ಮಾಡಿದೆ ಎಂದು ಹಲವು ಅಧ್ಯಯನಗಳು ಗಮನಿಸಿವೆ. ಅದನ್ನು ಸಂಪೂರ್ಣ ಅಲ್ಲಗೆಳೆಯುವುದಕ್ಕೆ ಸಾಧ್ಯವಿಲ್ಲ. ಅಪನಗದೀಕರಣದಿಂದ ಹಣವನ್ನೇ ಅವಲಂಬಿಸಿದ್ದ ಅಸಂಘಟಿತ ವಲಯಕ್ಕೆ ಬಲವಾದ ಪೆಟ್ಟು ಬಿತ್ತು. ಅಲ್ಲಿ ಸರಕುಗಳ ಉತ್ಪಾದನೆ ನಿಂತಿತು. ಅದರಿಂದ ಒಂದು ದೊಡ್ಡ ನಿರ್ವಾತ ಸೃಷ್ಟಿಯಾಯಿತು. ಜನಕ್ಕೆ ಸರಕುಗಳು ಬೇಕಿತ್ತು. ಆದರೆ, ಅವು ಸಿಗುತ್ತಿರಲಿಲ್ಲ. ಪರಿಣಾಮವಾಗಿ, ಚೀನಾದಿಂದ ಸರಕುಗಳು ಹರಿದುಬಂದವು. ಜಿಎಸ್‍ಟಿ ಕೂಡ ಆಮದಿನ ಪ್ರಮಾಣವನ್ನು ತಗ್ಗಿಸಲಿಲ್ಲ. ಅದು ಈ ಬೆಳೆವಣಿಗೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆಮದು ಕಡಿಮೆ ಆಗಬೇಕಾದರೆ ಈ ಅಸಂಘಟಿತ ಆರ್ಥಿಕ ಕ್ಷೇತ್ರವೂ ಬಲಗೊಳ್ಳಬೇಕು. ಅದನ್ನು ನಿರ್ಲಕ್ಷಿಸುವುದಕ್ಕೆ ಸಾಧ್ಯವಿಲ್ಲ. ಹಾಗೆಯೇ, ನಾವು ನೀಡಬೇಕಾದಷ್ಟು ಮಹತ್ವ ನೀಡದೆ ಇರುವ ಇನ್ನೊಂದು ಕ್ಷೇತ್ರ ಕೃಷಿ. ರೈತರಲ್ಲಿ ಅತೃಪ್ತಿ ಸ್ಪಷ್ಟವಾಗಿ ಕಾಣುತ್ತಿದೆ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಕ್ರಮಗಳನ್ನು ಗಂಭೀರವಾಗಿ ತೆಗೆದುಕೊಂಡು ಅದನ್ನು ಸದೃಢಗೊಳಿಸಬೇಕಾಗಿದೆ. ಅತೃಪ್ತಿಯನ್ನು ರಾಜಕೀಯ ಪ್ರತಿಕ್ರಿಯೆಯಾಗಿ ನೋಡುವುದು ಅಂತಹ ಆರೋಗ್ಯಕರ ಪ್ರವೃತ್ತಿಯೇನಲ್ಲ.

ಇದನ್ನೂ ಓದಿ : ಚಿತ್ತವಿತ್ತ | ಮುಂದೊಂದು ದಿನ ಮನುಷ್ಯರೇ ಅತ್ಯಂತ ನಿರುಪಯುಕ್ತ ಆಗಿಬಿಡಬಹುದು!

ನಮ್ಮ ಆರ್ಥಿಕತೆಯ ಪ್ರಮುಖ ಸೂಚ್ಯಾಂಕಗಳು ಅಷ್ಟೇನೂ ಆಶಾದಾಯಕವಾಗಿಲ್ಲ. ನಿಜ, ಜಿಡಿಪಿಯಲ್ಲಿ ಚೇತರಿಕೆ ಕಂಡಿದೆ. ಆದರೆ, ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲೂ ನೆಮ್ಮದಿ ಕಂಡುಕೊಳ್ಳುವುದು ಕಷ್ಟವಾಗುತ್ತದೆ. ಏಪ್ರಿಲ್‍ನಿಂದ ಜೂನ್ 2018ರವರೆಗೆ ಅದು ಶೇಕಡ 8.2 ರಷ್ಟು ಏರಿದೆ. ಇದು ಕೇವಲ ಅಂದಾಜು, ಪರಿಷ್ಕೃತ ಅಂದಾಜು ಇದಕ್ಕಿಂತ ಕಡಿಮೆ ಆಗುವ ಸಾಧ್ಯತೆ ಇದೆ. ಇದು ನಮ್ಮ ನಿರಾಸೆಗೆ ಕಾರಣವಲ್ಲ. ಜಿಡಿಪಿಯ ಬೆಳವಣಿಗೆಯ ಹೆಚ್ಚಳಕ್ಕೆ ಬಹುಪಾಲು (ಶೇಕಡ 47ರಷ್ಟು) ಕಾರಣ ಕೇವಲ ಎರಡು ಕ್ಷೇತ್ರಗಳು. ಹಣಕಾಸು, ವಿಮೆ ಹಾಗು ವೃತ್ತಿಪರ ಸೇವೆಗಳ ಪಾಲು ಇದರಲ್ಲಿ ಸುಮಾರು ಶೇಕಡ 35ರಷ್ಟಿದ್ದರೆ, ಸಾರ್ವಜನಿಕ ಆಡಳಿತ ಹಾಗೂ ರಕ್ಷಣೆ, ಡಿಫೆನ್ಸ್‌ನಿಂದ ಸುಮಾರು ಶೇಕಡ 12ರಷ್ಟಿದೆ. ಇದು ಆರ್ಥಿಕತೆಯ ಸುಸ್ಥಿರ ಸ್ಥಿತಿಯನ್ನು ಖಂಡಿತ ಸೂಚಿಸುವುದಿಲ್ಲ. ಇದು ಗುಳ್ಳೆಯಷ್ಟೆ. ಯಾವಾಗ ಬೇಕಾದರೂ ಒಡೆಯಬಹುದು.

ಯಾವುದೇ ಮಗ್ಗಲಿನಿಂದ ನೋಡಿದರೂ, ನಿಜವಾದ ಆರ್ಥಿಕತೆಯ ಬೆಳೆವಣಿಗೆ ಕಡೆಗಿನ ನಮ್ಮ ಗಮನ ಗಂಭೀರವಾಗಿಲ್ಲದಿರುವುದನ್ನೇ ಸೂಚಿಸುತ್ತದೆ. ದೇಶದ ಆರ್ಥಿಕತೆಯನ್ನು ಸುಸ್ಥಿರಗೊಳಿಸಿಕೊಳ್ಳುವ ಕಡೆ, ಬಾಳಿಕೆಯ ಆರ್ಥಿಕ ಬೆಳೆವಣಿಗೆಯ ಕಡೆ ಗಮನ ಕೊಡದೆಹೋದರೆ ಪದೇಪದೇ ಎದುರಾಗುವ ಬಿಕ್ಕಟ್ಟುಗಳು ಭಯಂಕರವಾಗಿ ಬಾಧಿಸುತ್ತವೆ. ಕೇರಳ, ಕೊಡಗಿನಂತಹ ದುರಂತಗಳು, ರೂಪಾಯಿ ಮೌಲ್ಯದ ಕುಸಿತದಂತಹ ಆರ್ಥಿಕ ಬಿಕ್ಕಟ್ಟುಗಳು ನಮ್ಮನ್ನು ಪದೇಪದೇ ಎಚ್ಚರಿಸುತ್ತಿವೆ. ಚುನಾವಣಾ ಲೆಕ್ಕಾಚಾರವನ್ನು ಮೀರಿ ಯೋಚಿಸುವುದು, ಆರೋಪ-ಪ್ರತ್ಯಾರೋಪಗಳಿಂದ ಆಚೆಗಿನ ಗಂಭೀರ ಚಿಂತನೆ, ಪ್ರಯತ್ನಗಳು ಮಾತ್ರ ನಮ್ಮನ್ನು ಕಾಪಾಡಬಲ್ಲವು. ಕೇವಲ ಲಾಭದ ಬೆನ್ಹತ್ತಿ ನಿಂತವರಿಗೆ ಆರ್ಥಿಕತೆಯ ಜವಾಬ್ದಾರಿಯನ್ನು ವಹಿಸಿಕೊಡುವುದು ಯಾವುದೇ ಕಾರಣಕ್ಕೂ ಯೋಗ್ಯ ಕ್ರಮವಲ್ಲ. ಇಂದು ಕುಸಿದಿರುವುದು ಕೇವಲ ರೂಪಾಯಿ ಮೌಲ್ಯವಲ್ಲ. ನಮ್ಮ ಮೌಲ್ಯಗಳು, ನಮ್ಮ ಕನಸುಗಳು, ಎಲ್ಲವೂ ಕುಸಿದು ಅಲ್ಪರಾಗಿಬಿಟ್ಟಿದ್ದೇವೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More