ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?

ಉತ್ತರ ಭಾರತದ ಸಣ್ಣ ಹೋಬಳಿ ಕೇಂದ್ರವೊಂದರಲ್ಲಿ ಬೆಳೆದವನು ನಾನು. ಆಗ ನಮಗೆ ಸಮೀಪದ ನಗರವೆಂದರೆ ದೆಹಲಿ. ಬಾಲ್ಯದ ದಿನಗಳಲ್ಲಿ ನನ್ನ ಪುಟ್ಟ ಪಟ್ಟಣದಿಂದ ಹೊರಡುತ್ತಿದ್ದ ಬಸ್ ದೆಹಲಿ ಮಾರ್ಗದಲ್ಲಿ ಯಮುನಾ ನದಿ ಸೇತುವೆ ದಾಟುತ್ತಿದ್ದಂತೆ ಕೆಂಪುಕೋಟೆ ಕಣ್ಣಿಗೆ ಬಿದ್ದು ವಿಚಿತ್ರ ಪುಳಕ, ಖುಷಿ

ಹತ್ತು ವರ್ಷದ ಹಿಂದೆ, ಈಗ ಸ್ಥಗಿತವಾಗಿರುವ ‘ಟೈಮ್ ಔಟ್’ ನಿಯತಕಾಲಿಕದ ಮುಂಬೈ ಆವೃತ್ತಿಯಲ್ಲಿ, ಜಗತ್ತಿನಲ್ಲಿ ನಿಜವಾಗಿಯೂ ಜಾಗತಿಕ ಎನ್ನಬಹುದಾದ ಮೂರೇ ನಗರಗಳಿವೆ ಎಂಬ ವಾದ ಮುಂದಿಟ್ಟು ಒಂದು ಲೇಖನ ಬರೆದಿದ್ದೆ. ಲಂಡನ್, ನ್ಯೂಯಾರ್ಕ್ ಮತ್ತು ನಮ್ಮ ಮುಂಬೈಗಳೇ ಆ ಮೂರು ನಗರಗಳಾಗಿದ್ದವು.

ಮೂರೂ ನಗರಗಳು ಧರ್ಮ, ಜನಾಂಗ ಮತ್ತು ಭಾಷೆಗೆ ಸಂಬಂಧಪಟ್ಟಂತೆ ಸಾಕಷ್ಟು ವೈವಿಧ್ಯಮಯವಾಗಿವೆ. ಹಾಗೇ, ಮೂರೂ ಉದ್ಯಮ, ವ್ಯವಹಾರ, ಹಣಕಾಸಿನ ವಿಷಯದಲ್ಲಿ ಜಗತ್ತಿನ ಕೇಂದ್ರಗಳಾಗಿವೆ. ಸಾಹಿತ್ಯ, ನಾಟಕ ಮತ್ತು ಕಲೆ ರಂಗಗಳಲ್ಲೂ ಮೂರೂ ನಗರಗಳು ಅತ್ಯಂತ ಕ್ರಿಯಾಶೀಲ ಸಾಂಸ್ಕೃತಿಕ ಬದುಕನ್ನು ಹೊಂದಿವೆ. ಜಾಗತಿಕ ನಗರ ಎಂಬ ಈ ಅರ್ಹತೆಗೆ ನಾನು ಇತರ ಕೆಲವು ನಗರಗಳನ್ನೂ ಪರಿಗಣಿಸಿದೆ. ಆದರೆ, ಅವು ಯಾವವೂ ಈ ಮೇಲಿನ ವಿಷಯಗಳಲ್ಲಿ ಇಷ್ಟೊಂದು ವೈವಿಧ್ಯತೆ ಮತ್ತು ಜೀವಂತಿಕೆಯನ್ನು ಹೊಂದಿಲ್ಲ ಎನಿಸಿದ್ದರಿಂದ ಪಟ್ಟಿಯಿಂದ ಕೈಬಿಟ್ಟೆ. ಹಾಗಾಗಿ, ಏಕಮುಖವಾಗಿ ಫ್ರೆಂಚ್ ಪ್ರಭಾವದ ಪ್ಯಾರಿಸ್, ವಾಕ್‌ ಸ್ವಾತಂತ್ರ್ಯಕ್ಕೆ ಯಾವ ಬೆಲೆಯೂ ಇಲ್ಲದ ದೇಶದಲ್ಲಿರುವ ಶಾಂಘೈಗಳನ್ನು ಕೈಬಿಡಬೇಕಾಯಿತು. ಅದು ಹೊರತುಪಡಿಸಿ, ಬಹುಶಃ ಮುಂದೊಂದು ದಿನ, ನಾನು ಹೇಳಿದ ಮಾನದಂಡಗಳ ಪ್ರಕಾರ ಜಾಗತಿಕ ನಗರವಾಗಿ ಬೆಳೆಯುವ ಸಾಧ್ಯತೆ ಇರುವುದು ಸಿಡ್ನಿ ಮತ್ತು ಕೇಪ್‌ಟೌನ್‌ಗೆ ಅನಿಸುತ್ತೆ.

ಹಾಗೆ ನೋಡಿದರೆ, ಈ ಮೂರು ನಗರಗಳ ನನ್ನ ವೈಯಕ್ತಿಕ ಅನುಭವದ ಆಧಾರದ ಮೇಲೆ ಬರೆದ ‘ಟೈಮ್‌ ಔಟ್‌’ನ ಆ ಲೇಖನ, ಒಂದು ರೀತಿಯಲ್ಲಿ ಏಕಪಕ್ಷೀಯ. ನಾನು ನನ್ನ ಬಾಲ್ಯದಿಂದಲೇ ಮುಂಬೈನೊಂದಿಗೆ ನಂಟು ಹೊಂದಿದ್ದೆ. ಬಾಲಕನಾಗಿರುವಾಗ ನನ್ನ ಸಂಬಂಧಿಗಳ ಮನೆಗೆ ಹೋಗಿದ್ದೆ. ಬಳಿಕ ಅಂತರ ಕಾಲೇಜು ಕ್ವಿಜ್ ಸ್ಪರ್ಧಿಯಾಗಿ ಮುಂಬೈ ಮಹಾನಗರಕ್ಕೆ ಭೇಟಿ ನೀಡಿದ್ದೆ. ಆ ಬಳಿಕ ಸಂಶೋಧಕನಾಗಿ ಅದರ ಪುರಾತನ ಕಡತಗಳನ್ನು ಶೋಧಿಸಲು ಹೋಗಿದ್ದೆ. ನನ್ನ ಇಪ್ಪತ್ತರ ಹರೆಯದ ಅಂತ್ಯದ ವರ್ಷಗಳಲ್ಲಿ ಕಾಲೇಜೊಂದರಲ್ಲಿ ಬೋಧಕನಾಗಿ ನೇಮಕಗೊಂಡಾಗ ಮೊದಲ ಬಾರಿ ನ್ಯೂಯಾರ್ಕ್‌ಗೆ ಹೋಗಿದ್ದೆ. ಲಂಡನ್‌ನನ್ನು ನೋಡಿದ್ದ ನನ್ನ ಮೂವತ್ತರ ವಯೋಮಾನದಲ್ಲಿ. ಆ ಬಳಿಕ ಬ್ರಿಟಿಷ್‌ ಲೈಬ್ರರಿಯಲ್ಲಿ ಭಾರತದ ವಸಾಹತು ಕಾಲದ ದಾಖಲೆ, ವಿವರಗಳನ್ನು ಶೋಧಿಸಲು ವರ್ಷದಲ್ಲಿ ಹಲವಾರು ಬಾರಿ ಅಲ್ಲಿಗೆ ಹೋಗಿಬರುತ್ತಿದ್ದೆ. ಈ ಮೂರೂ ನಗರಗಳ ಉದ್ದಗಲಕ್ಕೆ ನಾನು ನಡೆದಾಡಿದ್ದೇನೆ. ವೃತ್ತಿ ಸಂಪರ್ಕ ಹಾಗೂ ವೈಯಕ್ತಿಕ ಸ್ನೇಹಿತರನ್ನೂ ಹೊಂದಿದ್ದೇನೆ. ಎಂದೂ ಮರೆಯಲಾಗದ ಊಟ, ತಿನಿಸು ಸವಿದಿದ್ದೇನೆ ಮತ್ತು ಅತ್ಯುತ್ತಮ ಸಿನಿಮಾಗಳನ್ನು ನೋಡಿದ್ದೇನೆ.

ಇದನ್ನೂ ಓದಿ : ಈ ಕಾಲ | ಗಾಂಧಿ ಬದುಕಿದ್ದಾಗಿನ ಅವರ ಜನ್ಮದಿನಗಳು ಹೇಗಿದ್ದವು ಗೊತ್ತೇ?

ಆದರೆ, ಕಳೆದ ಎರಡು ವಾರದ ಹಿಂದೆ, ಈ ಹಿಂದೆ ಎಂದೂ ಮಾಡಿರದ ಒಂದು ಸಾಹಸವನ್ನು ಮಾಡಿದೆ. ಲಂಡನ್ ಗೆ ಹೊರಟಿದ್ದ ನಾನು, ಮಾರ್ಗಮಧ್ಯೆ ಮುಂಬೈಗೆ ಹೋಗಿ, ಅಲ್ಲಿ ಒಂದು ವಾರ ಕಳೆದು ಬಳಿಕ ಲಂಡನ್ ಮತ್ತು ಆ ನಂತರ ನ್ಯೂಯಾರ್ಕ್‌ಗೆ ಭೇಟಿ ನೀಡಿದೆ. ಈ ಮೊದಲ ನನ್ನ ಭೇಟಿಗಳಲ್ಲಿ, ಹೀಗೆ ಈ ನಗರಗಳಿಗೆ ಒಂದಾದ ಮೇಲೊಂದರಂತೆ ಭೇಟಿ ನೀಡಿರಲಿಲ್ಲ. ಬಿಡಿಬಿಡಿಯಾಗಿ ಆಯಾ ನಗರಗಳಿಗೆ ಹೋಗಿಬರುತ್ತಿದ್ದೆ. ಈಗ ಅರವತ್ತರ ಆಸುಪಾಸಿನಲ್ಲಿ, ನನ್ನ ಇಷ್ಟದ ಮೂರು ನಗರಗಳಿಗೆ ಒಂದಾದ ಮೇಲೊಂದರಂತೆ ಒಂದೇ ಪ್ರವಾಸದಲ್ಲಿ ಭೇಟಿ ನೀಡಿದೆ.

ಉತ್ತರ ಭಾರತದ ಸಣ್ಣ ಹೋಬಳಿ ಕೇಂದ್ರವೊಂದರಲ್ಲಿ ಬೆಳೆದವನು ನಾನು. ಆಗ ನಮಗೆ ಸಮೀಪದ ನಗರವೆಂದರೆ ದೆಹಲಿಯೇ. ಬಾಲ್ಯದ ದಿನಗಳಲ್ಲಿ ನನ್ನ ಪುಟ್ಟ ಪಟ್ಟಣದಿಂದ ಹೊರಡುತ್ತಿದ್ದ ಬಸ್ ದೆಹಲಿಯ ಮಾರ್ಗದಲ್ಲಿ ಯಮುನಾ ನದಿಯ ಸೇತುವೆ ದಾಟುತ್ತಿದ್ದಂತೆ ಕೆಂಪುಕೋಟೆ ಕಣ್ಣಿಗೆ ಬೀಳುತ್ತಿದ್ದಂತೆ ನನಗೆ ಒಂದು ವಿಚಿತ್ರ ಪುಳಕ, ಖುಷಿ ಎನಿಸುತ್ತಿತ್ತು. ಆದರೆ, ಆ ನಂತರ ಪಾಲಂ ವಿಮಾನ ನಿಲ್ದಾಣದಿಂದ ನವದೆಹಲಿಗೆ ಬರುವಾಗ ಅಂತಹ ಉಮೇದು ಅನುಭವಿಸಿಲ್ಲ. ಆದರೆ, ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಕ್ಷಿಣ ಮುಂಬೈಗೆ ಪ್ರಯಾಣಿಸುವಾಗೆಲ್ಲ ಏನೋ ಒಂದು ಉತ್ಸಾಹ ನನಗೆ ಅರಿವಿಲ್ಲದೆಯೇ ನನ್ನಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೇ, ಹೀತ್ರೂ ಟರ್ಮಿನಲ್‌ನಿಂದ ಲಂಡನ್‌ಗೆ ಮತ್ತು ಜೆಎಫ್ ಕೆನಡಿ ವಿಮಾನ ನಿಲ್ದಾಣದಿಂದ ಮ್ಯಾನ್‌ಹ್ಯಾಟನ್‌ಗೆ ಪ್ರಯಾಣಿಸುವಾಗಲೂ ಅದೇ ಅನೂಹ್ಯ ಉತ್ಸಾಹ ಮನೆಮಾಡುತ್ತದೆ.

ನನ್ನ ಪ್ರಕಾರ, ನವದೆಹಲಿಯನ್ನು ಜಾಗತಿಕ ಮಹಾನಗರವಾಗಿ ಪರಿಗಣಿಸಲು ಅಡ್ಡಿಯಾಗುವ ಎರಡು ಪ್ರಮುಖ ಸಂಗತಿಗಳು; ಅದು ಭೂಖಂಡದ ಒಳಗಿರುವುದು ಮತ್ತು ರಾಜಕೀಯ ಶಕ್ತಿಕೇಂದ್ರವಾಗಿರುವುದು. ಕಡಲ ತೀರಕ್ಕೆ ತೆರೆದುಕೊಂಡಿರುವ ನಗರಗಳು ಸಹಜವಾಗೇ ಎಲ್ಲ ಬಗೆಯ ಗಾಳಿಗೆ ಒಡ್ಡಿಕೊಂಡಿರುತ್ತವೆ. ಅದು ಆರ್ಥಿಕ ವಿಷಯಕ್ಕೆ ಸಂಬಂಧಿಸಿದ್ದಿರಬಹುದು ಅಥವಾ ಸಾಂಸ್ಕೃತಿಕ ಸಂಗತಿ ಇರಬಹುದು, ಆ ನಗರಗಳಿಗೆ ಒಂದು ಮುಕ್ತ ಒಳಗೊಳ್ಳುವಿಕೆ ಸಾಧ್ಯವಾಗುತ್ತದೆ. ಹಾಗೆ ನೋಡಿದರೆ, ಲಂಡನ್ ಕೂಡ ರಾಜಧಾನಿ ನಗರವೇ. ಆದರೆ, ತೀರಕ್ಕೆ ಒಡ್ಡಿಕೊಂಡಿರುವ ಅದರ ಭೌಗೋಳಿಕ ಅವಕಾಶ, ಅದನ್ನು ದೆಹಲಿಗೆ ಅಂಟಿರುವ ಹಮ್ಮು ಮತ್ತು ಜಿಗುಟುತನದಿಂದ ಪಾರು ಮಾಡಿದೆ. ಈ ವಿಷಯದಲ್ಲಿ ಬೀಜಿಂಗ್ ಮತ್ತು ದೆಹಲಿ ನಡುವೆ ಹೆಚ್ಚು ಸಾಮ್ಯತೆ ಇದೆ. ಭೂಖಂಡದ ಒಳನಗರ, ಒಳಮುಖಿ, ದೇಶದ ದೊರೆ ಮತ್ತು ಆತನ ಪರಿವಾರದ ಕೇಂದ್ರ ಎಂಬ ಕಾರಣಕ್ಕೆ ದೇಶದ ಇತರ ನಗರಗಳಿಗಿಂತ ತಾನೇ ಮೇಲು ಎಂಬ ಹಮ್ಮು ದೆಹಲಿಯಂತೆ ಬೀಜಿಂಗ್‌ಗೂ ಇವೆ.

ಲಂಡನ್ ಮತ್ತು ನ್ಯೂಯಾರ್ಕ್ ನಗರಗಳನ್ನು ಹೊಂದಿರುವ ರಾಷ್ಟ್ರಗಳು ಬಾವಿಯೊಳಗಿನ ಕಪ್ಪೆಯಂತೆ ದಿಢೀರ್ ಕುಡುಮಿತನಕ್ಕೆ(ನ್ಯಾರೋಮೈಂಡೆಡ್) ಹೊರಳಿದ್ದ ಹೊತ್ತಲ್ಲಿ ಈ ನಗರಗಳ ನನ್ನ ಇತ್ತೀಚಿನ ಭೇಟಿ ಸಂಭವಿಸಿತ್ತು. ಬ್ರೆಕ್ಸಿಟ್‌ ಮೂಲಕ ಬ್ರಿಟಿಷರು ಯುರೋಪಿಗೆ ಬೆನ್ನು ತಿರುಗಿಸಿದ್ದರೆ, ಟ್ರಂಪ್ ಮತ್ತು ಟ್ರಂಪಿಸಂ ಮೂಲಕ ಅಮೆರಿಕ ಜಾಗತಿಕ ಆಗುಹೋಗುಗಳಿಂದ ವಿಮುಖವಾಗಿತ್ತು. ಅಷ್ಟಾದರೂ ಅದೃಷ್ಟಕ್ಕೆ, ನನ್ನ ಇಷ್ಟದ ನಗರಗಳೆರಡೂ ತಮ್ಮ ತಮ್ಮ ದೇಶಗಳ ಈ ಕುಡುಮಿತನದ ಹುಚ್ಚಿನಿಂದ ಹೊರಗುಳಿದಿದ್ದವು. ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಉಳಿಯುವುದರ ಪರ ಲಂಡನ್ ನಗರ ಭಾರೀ ಬಹುಮತದ ಜನಮತ ವ್ಯಕ್ತಪಡಿಸಿದ್ದರೆ, ನ್ಯೂಯಾರ್ಕ್ ನಗರದ ಬಹುತೇಕ ಮಂದಿ, ಅಸೂಕ್ಷ್ಮ, ಹುಂಬ ಮತ್ತು ಮೂರ್ಖ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ಅಬ್ರಹಾಂ ಲಿಂಕನ್ ಮತ್ತು ಎಫ್‌ಡಿಆರ್ (ಫ್ರಾಂಕ್ಲಿನ್ ಡಿ ರೋಸ್ವೆಲ್ಟ್) ಅವರಂಥವರ ಸ್ಥಾನದಲ್ಲಿ ಕೂರುವುದರ ವಿರುದ್ಧ ಮತ ಚಲಾಯಿಸಿದ್ದರು.

ಈ ಮೂರೂ ಜಾಗತಿಕ ನಗರಗಳನ್ನು ನಾನು ತುಂಬಾ ಇಷ್ಟಪಡುವೆ. ಆದರೆ, ವೈಯಕ್ತಿಕ ಅನುಭವ ಮತ್ತು ವಸ್ತುನಿಷ್ಠವಾಗಿಯಾಗಲೀ, ಯಾವುದೇ ಮಾನದಂಡದ ಮೇಲೆ ಈ ನಗರಗಳನ್ನು ಒಂದಕ್ಕಿಂತ ಒಂದು ಉತ್ತಮ ಅಥವಾ ಅಲ್ಲ ಎಂದು ವರ್ಗೀಕರಿಸಲಾರೆ. ನ್ಯೂಯಾರ್ಕ್ ಮತ್ತು ಲಂಡನ್‌ಗೆ ಹೋಲಿಸಿದರೆ, ಮುಂಬೈನ ಬೀದಿಗಳಲ್ಲಿ ಅತಿ ಹೆಚ್ಚು ಭಾಷೆಗಳು ಕಿವಿಗೆ ಬೀಳುತ್ತವೆ. ಲಂಡನ್ ಮತ್ತು ಮುಂಬೈಗೆ ಹೋಲಿಸಿದರೆ, ನ್ಯೂಯಾರ್ಕ್‌ನಲ್ಲಿ ಹೆಚ್ಚು ಔದ್ಯಮಿಕ ಸ್ಫೂರ್ತಿ ಕಾಣುತ್ತದೆ (ಇತರ ನಗರಗಳ ಬೀದಿಗಳು ಕನಿಷ್ಠ ಬೆಳಗಿನ ಜಾವ ೩ರಿಂದ ೪ ಗಂಟೆ ಹೊತ್ತಲ್ಲಾದರೂ ನಿರ್ಜನವೆನಿಸಿದರೆ, ಈ ನಗರ ಅಕ್ಷರಶಃ ನಿದ್ರಿಸುವುದೇ ಇಲ್ಲ!). ನಗರ ವಾಸ್ತುಶಿಲ್ಪದ ವಿಷಯದಲ್ಲಿ, ಉಳಿದೆರಡಕ್ಕಿಂತ ಲಂಡನ್ ನಗರ ಮುಂದೆ ನಿಲ್ಲುತ್ತದೆ.

ನನ್ನ ಹೆಚ್ಚಿನ ಆಸಕ್ತಿ ಪುಸ್ತಕಗಳಲ್ಲಿ, ಆ ನಿಟ್ಟಿನಲ್ಲಿ ಈ ಮೂರೂ ನಗರಗಳು ಪುಸ್ತಕಪ್ರಿಯರಿಗೆ ಸಾಕಷ್ಟು ಕೊಡುಗೆ ನೀಡುತ್ತಿವೆ. ನನ್ನ ತೀರಾ ಇತ್ತೀಚಿನ ಭೇಟಿಯ ಮೊದಲ ದಿನ ನಾನು ಮುಂಬೈನ ಫ್ಲೋರಾ ಫೌಂಟೇನ್ ಸಮೀಪದ ಬೀದಿಬದಿ ಹಳೆಯ ಪುಸ್ತಕದಂಗಡಿಗಳಿಗೆ ಹೋಗಿದ್ದೆ. ಅಲ್ಲಿ ನನಗೆ ಕೇವಲ ನಾಲ್ಕು ನೂರು ರುಪಾಯಿಗೆ ನೀರಧ್ ಚೌಧುರಿ ಅವರ ‘ಆನ್ ಆಟೊಬಯಾಗ್ರಫಿ ಆಫ್ ಆನ್ ಅನ್‌ನೋನ್ ಇಂಡಿಯನ್’ ಕೃತಿ ಸಿಕ್ಕಿತು ಮತ್ತು ಅದು ಸಾಕಷ್ಟು ಉತ್ತಮವಾಗೇ ಇತ್ತು. ಹಾಗೇ ಇತ್ತೀಚಿನ ಲಂಡನ್ ಭೇಟಿಯ ಮೊದಲ ದಿನವೂ, ಎಂದಿನಂತೆ ನಾನು ಚಾರಿಂಗ್ ಕ್ರಾಸ್ ರಸ್ತೆಯುದ್ದಕ್ಕೂ ಹೋದೆ. ಅಲ್ಲಿಯೂ ಹಳೆಯ ಪುಸ್ತಕದಂಗಡಿಗಳನ್ನು ಎಡತಾಕಿದೆ. ಸಿಸಿಲ್ ಕೋರ್ಟ್ ಸಮೀಪ, ಖ್ಯಾತ ಐರಿಷ್ ಕತೆಗಾರ ಫ್ರಾಂಕ್ ಒ ಕಾನರ್‌ನ ಆತ್ಮಚರಿತ್ರೆಯ ಕೃತಿ ಸಿಕ್ಕಿತು.

ಅಂಟ್ಲಾಂಟಿಕ್ ಸಾಗರದ ಉದ್ದದ ಸುದೀರ್ಘ ಪ್ರಯಾಣದಲ್ಲಿ ಚೌಧುರಿ ಮತ್ತು ಓ’ಕಾನರ್ ನನ್ನ ಸೂಟ್‌ಕೇಸಿನಲ್ಲಿ ಜೊತೆಯಾಗಿ ಬೆಚ್ಚಗೆ ಕಾಲಕಳೆದರು. ನ್ಯೂಯಾರ್ಕಿಗೆ ಬಂದಿಳಿದ ಬೆಳಗ್ಗೆ ಈ ಕಾಲಂ ಬರೆಯುತ್ತಿರುವೆ. ಸೂರ್ಯ ಮೇಲೇರುತ್ತಿದ್ದಾನೆ, ಶಿಶಿರ ಕಾಲದ ತಂಗಾಳಿ ಬೀಸಿ ಬರುತ್ತಿದೆ. ಮಧ್ಯಾಹ್ನದ ಊಟಕ್ಕೆ ಇಬ್ಬರು ಹಳೆಯ ಗೆಳೆಯರು ಜೊತೆಯಾಗಲಿದ್ದಾರೆ. ಇಬ್ಬರೂ ನ್ಯೂಯಾರ್ಕ್‌ನ ಬಹುಕಾಲದ ನಿವಾಸಿಗಳು; ಒಬ್ಬ ಲೇಖಕ, ಮತ್ತೊಬ್ಬ ಪ್ರಕಾಶಕ. ಊಟದ ಬಳಿಕ ಸೆಂಟ್ರಲ್ ಪಾರ್ಕಿನಲ್ಲಿ ಓಡಾಡಬೇಕಿದೆ. ಅಲ್ಲಿಂದ ಕ್ಯಾಬ್ ಹತ್ತಿ ಸ್ಟ್ರಾಂಡ್ ಬುಕ್‌ ಸ್ಟೋರ್‌ಗೆ ಹೋಗಬೇಕು. ಮುದ್ರಣ ಜಗತ್ತಿನ ಅತಿದೊಡ್ಡ ಆ ಖಜಾನೆಗೆ ಹೋಗಿಬಂದ ಬಳಿಕ ಅಥವಾ ಅದಕ್ಕೂ ಮೊದಲು ಯೂನಿಯನ್ ಸ್ಕ್ವೇರ್‌ನಲ್ಲಿನ ಗಾಂಧಿ ಪ್ರತಿಮೆಗೆ ನಮನ ಸಲ್ಲಿಸಬೇಕಿದೆ.

ಮುಂಬೈ, ಲಂಡನ್, ನ್ಯೂಯಾರ್ಕ್; ಈ ಮೂರೇ ಸದ್ಯ ನನ್ನ ಪ್ರವಾಸದ ಪಟ್ಟಿಯ ಆದ್ಯತೆಗಳು. ಇನ್ನೇನಿದ್ದರೂ ಇಂತಹ ಆಸಕ್ತಿಗಳು ಇಳಿಮುಖವಾಗುವ ಸಾಧ್ಯತೆಯೇ ಹೆಚ್ಚು.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಚಿತ್ತವಿತ್ತ | ಕುಸಿದಿರುವುದು ರುಪಾಯಿಯ ಬೆಲೆ ಮಾತ್ರವಲ್ಲ!
Editor’s Pick More