ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ

ಮನುಷ್ಯನಾಳದ ವಿಕೃತಿಗೆ, ಮಾನಸಿಕ ಅಸ್ವಸ್ಥತೆಗೆ ಮದ್ದು ನೀಡಬೇಕಾದ ಧರ್ಮ ಮತ್ತು ದೇವರು ಎಂಬ ವ್ಯವಸ್ಥೆಗಳೆಲ್ಲ ಈಗ ನಿಜವಾಗಿಯೂ ಮಾಡುತ್ತಿರುವುದು ಏನು? ಯಾವ ಧರ್ಮ, ಯಾವ ಸಂಸ್ಕೃತಿ ಆತನ ರೋಗವನ್ನು ಗುಣಪಡಿಸಬೇಕಿತ್ತೋ ಅವುಗಳೇ ಆತನನ್ನು ಇನ್ನಷ್ಟು ಮೃಗೀಯಗೊಳಿಸುತ್ತಿವೆ

“ಪುಣ್ಯಕೋಟಿ ಎಂಬ ಹೆಣ್ಣುಮಗಳು ಅರ್ಬುದ ಎಂಬ ದುಷ್ಟನ ಎದುರು ನಿಂತು ‘ಈ ದೇಹವನ್ನು ನೀನು ಭಕ್ಷಿಸು’ ಅಂದದ್ದು ಒಂದು ನಾಟಕೀಯ ಚಿತ್ರ. ಅದು ವಿಚಿತ್ರ ಅರ್ಥಗಳಿಂದ ಕೂಡಿದ ದೃಶ್ಯ. ಸಾವಿಗೆ ಅರ್ಥ ತರುವುದು ಎಲ್ಲ ಸಜ್ಜನರು ಮಾಡಿದ ಕೆಲಸ. ಕ್ರಿಸ್ತನ ರಕ್ತದಿಂದ ಅವನ ದೇಶದ ರಕ್ತದಾಹ ಕಡಿಮೆಯಾಯಿತು. ಗಾಂಧಿಯ ರಕ್ತದಿಂದ ಮನುಷ್ಯನಾಳದ ಕ್ರೌರ್ಯ ಸ್ವಲ್ಪ ಕಾಲವಾದರೂ ತಣ್ಣಗಾಯಿತು. ಆದರೆ, ಈ ಸಜ್ಜನಿಕೆ; ನನ್ನ ದೇಹವನ್ನು, ಪ್ರಾಣವನ್ನು ಬೇಕಾದರೆ ಪಡೆದುಕೋ ಎಂದು ಹೇಳುವ ವ್ಯಕ್ತಿಯ ಶಕ್ತಿಯ ಮೂಲ ಯಾವುದು? ಆ ಪ್ರಾಣದ ಅರ್ಪಣೆಯಿಂದ ಕ್ರೂರಿಯಾದ ಎದುರಾಳಿಯಲ್ಲಿ ಉತ್ತಮಿಕೆ ಮೂಡಲು ಕಾರಣವೇನು?”

-ಸುಮಾರು ಮೂವತ್ತು ವರ್ಷಗಳ ಹಿಂದೆ ಪಿ ಲಂಕೇಶ್ ಅವರು ತಮ್ಮ ಟೀಕೆ-ಟಿಪ್ಪಣಿಯೊಂದರಲ್ಲಿ ಬರೆದ ಈ ಮಾತುಗಳು, ಇವತ್ತಿನ ನಮ್ಮ ಸಂದರ್ಭದ ಹಿನ್ನೆಲೆಯಲ್ಲಿ ಗಮನ ಸೆಳೆದವು. ‘ಕೊಟ್ಟ ಭಾಷೆಗೆ ತಪ್ಪಲಾರೆನು...’ ಎಂಬ ಆ ಟೀಕೆ-ಟಿಪ್ಪಣಿಯು ಗೋವಿನ ಹಾಡು ಎಂಬ ಪದ್ಯವೊಂದರ ಕುರಿತದ್ದು. ಲಂಕೇಶರು ತಮ್ಮ ಈ ಬರಹದುದ್ದಕ್ಕೂ ಅಲ್ಲಲ್ಲಿ ಮೂಲ ಪದ್ಯದ ಸಾಲುಗಳನ್ನು ಉಲ್ಲೇಖಿಸುತ್ತಲೇ ಪುಣ್ಯಕೋಟಿ ಎಂಬ ಗೋವಿನ ಒಳ್ಳೆತನ ಮತ್ತು ಅರ್ಬುದ ಎಂಬ ವ್ಯಾಘ್ರನ ಮನಃಪರಿವರ್ತನೆಯನ್ನು ಮನುಷ್ಯ ಸಮಾಜದ ಸಂಕೀರ್ಣ ಮನಸ್ಥಿತಿಯ ಹಿನ್ನೆಲೆಯಲ್ಲಿ ವಿವರಿಸುತ್ತ ಹೋಗುತ್ತಾರೆ. ಹಾಗೇ, ಇಂತಹ ಪದ್ಯಗಳು ಮಕ್ಕಳ ಮನಸ್ಸಿನ ಮೇಲೆ ಬೀರುವ ಪರಿಣಾಮ ಮತ್ತು ಅದು ಒಟ್ಟಾರೆ ಸಮಾಜದ ಸ್ವಾಸ್ಥ್ಯಕ್ಕೆ ಹೇಗೆ ಪೂರಕ ಎಂಬುದನ್ನೂ ಸೂಚ್ಯವಾಗಿ ಹೇಳುತ್ತಾರೆ.

ಸರಿಸುಮಾರು ಲಂಕೇಶರು ಈ ಟಿಪ್ಪಣಿ ಬರೆಯುವ ಹೊತ್ತಿಗೇ ನಾನೂ, ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಇದೇ ಪುಣ್ಯಕೋಟಿಯ ಗೋವಿನ ಹಾಡನ್ನು ಪಠ್ಯವಾಗಿ ಕಲಿತಿದ್ದೆ. ಲಂಕೇಶರು ಉಲ್ಲೇಖಿಸಿದ ಪದ್ಯದ ಸಾಲುಗಳಿಗೂ, ನಾನು ಕಲಿತ ಸಾಲುಗಳಿಗೂ ಪದ್ಯದ ಭಾಷೆಯಲ್ಲಿ ಬದಲಾವಣೆ ಇದ್ದರೂ, ಒಟ್ಟಾರೆ ಪದ್ಯದ ಅಂತಃಸತ್ವ ಬದಲಾಗಿರಲಿಲ್ಲ. ಈ ಪದ್ಯ ಎಷ್ಟರಮಟ್ಟಿಗೆ ಪ್ರಭಾವಿಸಿದೆ ಎಂದರೆ; ಈಗಲೂ ಆ ಪದ್ಯ ಕೇಳಿದರೆ ಅಥವಾ ಓದಿದರೆ ಕಣ್ಣಂಚಲ್ಲಿ ನೀರಾಡುತ್ತದೆ. ಸರಳ ಮಾತುಗಳಲ್ಲಿ ಅಗಾಧವನ್ನು ಕಟ್ಟಿಕೊಟ್ಟ ಅನಾಮಿಕ ಕವಿಯೊಬ್ಬನ ಆ ಪದ್ಯ, ನಮ್ಮೊಳಗಿನ ಮುಗ್ಧತೆಯಂತೆಯೇ, ಒಳಿತನ್ನೂ ಪೊರೆಯುವ ಶಕ್ತಿಯನ್ನು ಈಗಲೂ ಉಳಿಸಿಕೊಂಡಿದೆ ಎಂಬುದೇ ಅದರ ಭಾವತೀವ್ರತೆಗೆ ಸಾಕ್ಷಿಯಾದಂತೆಯೇ, ಅದು ಕಟ್ಟಿಕೊಡುವ ಮೌಲ್ಯಗಳ ಕಾಲಾತೀತ ಗಟ್ಟಿತನಕ್ಕೂ ನಿದರ್ಶನ.

ಹಸಿವು (ವ್ಯಾಘ್ರ) ಮತ್ತು ಹಸುತನ (ಪುಣ್ಯಕೋಟಿ) ಎಂಬ ಎರಡು ನೆಲೆಯಲ್ಲಿ ಪ್ರಾಣಿಜಗತ್ತಿನ ಪಾತ್ರಗಳ ಮೂಲಕ, ಮನುಷ್ಯನೂ ಸೇರಿದಂತೆ ಜೀವಜಗತ್ತಿನ ಮಾತಿನ ಘನತೆ, ಅಂತಃಕರಣದ ಬೆಲೆ, ನೈತಿಕ ಬಲದ ಮಹತ್ವವನ್ನು ಸಾರುವ ಆ ಪದ್ಯ, ಬಹುಶಃ ಈಗ ಯಾವ ತರಗತಿಗೂ ಪಠ್ಯವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅದನ್ನು ಕನ್ನಡ ಪಠ್ಯಗಳಲ್ಲಿ ಕಂಡದ್ದು ವಿರಳವೇ.

ಲಂಕೇಶರು ಹೇಳುವಂತೆ; “ಪುಣ್ಯಕೋಟಿ ಕೊಟ್ಟ ಮಾತಿಗೆ ತಪ್ಪಲಾರಳು, ತನ್ನ ನಂಬಿಕೆಯ ವಿರುದ್ಧ ನಡೆಯಲಾರಳು, ಅದು ಆಕೆಗೆ ಜೀವದಷ್ಟೇ ಮುಖ್ಯ. ನಶ್ವರ ದೇವನ್ನು ಉಳಿಸಿಕೊಳ್ಳಲು, ದೇಹವನ್ನು ಮೀರಿದ ಮೌಲ್ಯವನ್ನು ಬಲಿಕೊಡುವುದೇ? ಎಲ್ಲ ಜೀವಿಗಳೂ ಉಳಿದಿರುವುದು ಅನ್ನ, ಬಟ್ಟೆಯಿಂದ ಮಾತ್ರವಲ್ಲ, ತಮ್ಮ ಮೌಲ್ಯಗಳನ್ನು ಒಳಗೊಂಡ ಆತ್ಮಗೌರವದಿಂದ.” ಹಾಗೇ, ಹುಲಿಯಂತಹ ಕ್ರೂರ ಪ್ರಾಣಿಗೆ ಇರುವ ಬಲ, ಮೊನಚು ಉರುಗು, ಕೋರೆ ಹಲ್ಲುಗಳು ಇಲ್ಲದಿದ್ದರೂ, ಸಾಧುಪ್ರಾಣಿಗಳು ಅಂತಹ ದೈಹಿಕ ಬಲವನ್ನೂ ಮೀರುವ ಧೈರ್ಯ, ಪ್ರೀತಿ, ಛಲ ಮತ್ತು ಮನುಷ್ಯತ್ವವನ್ನೂ ಮೀರಿದ ಮೌಲ್ಯಗಳನ್ನು ಬದುಕುತ್ತವೆ. ಹಾಗಾಗಿಯೇ, ಹಸುವಿನಂತಹ ಸಾಧು ವ್ಯಕ್ತಿ ಕೂಡ ತನ್ನ ಬದುಕಿನ ಮೌಲ್ಯದ ಬಲದ ಮೇಲೆ ದಿಟ್ಟ ಬದುಕು ಸಾಗಿಸಬಲ್ಲ. ಹಾಗೇ, ವ್ಯಾಘ್ರನಂತಹ ಕ್ರೂರ ವ್ಯಕ್ತಿ ಕೂಡ ಹಿಂಸೆ ಮತ್ತು ಕ್ರೌರ್ಯದ ಬಲದ ಮೇಲೆಯೇ ಬದುಕು ಸವೆಸಲಾರ. ಆತನಿಗೂ ಪುಣ್ಯಕೋಟಿಯಲ್ಲಿ ‘ಒಡಹುಟ್ಟಿದ ಅಕ್ಕ’ನನ್ನು ಕಾಣುವ ಬಿಸಿ ಹೃದಯ ಬೇಕಾಗುತ್ತದೆ. ಆಗ ಮಾತ್ರ ಹಸಿವನ್ನು ಮೀರಿದ ಅರ್ಥಪೂರ್ಣ ಬದುಕು ಕಂಡುಕೊಳ್ಳುವುದು ಸಾಧ್ಯ ಎಂದು ಲಂಕೇಶರು ಹೇಳುತ್ತಾರೆ.

ಮೊನ್ನೆ ಪಕ್ಷಿಗಳ ಫೋಟೋಗ್ರಫಿಗೆ ಹೋದಾಗ, ಲಂಕೇಶರು ಹೇಳುವ ಈ ಮಾನವೀಯತೆಯನ್ನೂ ಮೀರಿದ, ಅದಕ್ಕಿಂದ ದೊಡ್ಡದಾದ ಸಹಜೀವನ, ಪರಾನುಭೂತಿಯ ಕ್ಷಣಗಳಿಗೆ ಸಾಕ್ಷಿಯಾಗುವ ಅವಕಾಶ ಸಿಕ್ಕಿತ್ತು. ಪೊದೆಯೊಂದರಲ್ಲಿ ಗುಬ್ಬಚ್ಚಿ ಗಾತ್ರದ ಅರಿಶಿಣ ಗುಬ್ಬಿ ಹಕ್ಕಿ, ಅದಕ್ಕಿಂತ ಮೂರ್ನಾಲ್ಕು ಪಟ್ಟು ದೊಡ್ಡ ಗಾತ್ರದ ಮರಿ ಚಾಣಕ್ಕೆ(ಕೋಗಿಲೆ) ಗುಟುಕು ಕೊಡುತ್ತಿತ್ತು. ಇದೇನಿದು ವಿಚಿತ್ರ ಎಂದು ಒಂದಿಷ್ಟು ಹೊತ್ತು ಅವುಗಳ ಚಟುವಟಿಕೆ ಗಮನಿಸಿದ ನಾನು, ಒಂದೆರಡು ಫೋಟೋ ಕ್ಲಿಕ್ಕಿಸಿದೆನಾದರೂ, ತೀರಾ ಪೊದೆಯೊಳಗೆ ಅವು ಇದ್ದಿದ್ದರಿಂದ ಉತ್ತಮ ಚಿತ್ರವೇನೂ ಸಿಗಲಿಲ್ಲ. ಆದರೆ, ಆ ಪುಟ್ಟ ಹಕ್ಕಿ ದೊಡ್ಡ ಹಕ್ಕಿಯ ಮರಿಗೆ ಗುಟುಕು ಕೊಟ್ಟ ಕುತೂಹಲಕಾರಿ ಘಟನೆಯ ಬಗ್ಗೆ ಪೂರ್ಣಚಂದ್ರ ತೇಜಸ್ವಿ ಅವರ ‘ಕನ್ನಡನಾಡಿನ ಹಕ್ಕಿಗಳು’ ಪುಸ್ತಕದಲ್ಲಿನ ವಿವರಗಳನ್ನು ಕೆದಕಿದೆ.

ಪರಪುಟ್ಟ ಎಂದೇ ಹೆಸರಾಗಿರುವ ಕೋಗಿಲೆಗಳು ಸ್ವತಃ ಗೂಡು ಕಟ್ಟುವುದಿಲ್ಲ; ಬದಲಾಗಿ, ಕಾಗೆ ಸೇರಿದಂತೆ ಇತರ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆ ಇಟ್ಟು, ಆ ಹಕ್ಕಿಗಳ ಮೊಟ್ಟೆ ನಾಶಪಡಿಸಿ, ತಮ್ಮ ಮೊಟ್ಟೆಯಷ್ಟೇ ಮರಿಯಾಗುವಂತೆ ನೋಡಿಕೊಳ್ಳುತ್ತವೆ ಎಂಬುದು ಬಹುತೇಕ ಜನಜನಿತ. ಆದರೆ, ತೇಜಸ್ವಿ ಅವರು ದಾಖಲಿಸಿರುವ ಮತ್ತೊಂದು ಸಂಗತಿ ಏನೆಂದರೆ; ಮೊಟ್ಟೆಯ ಹಂತದಲ್ಲಿ ಆ ಮೊಟ್ಟೆ ತಮ್ಮದಲ್ಲ ಎಂಬುದನ್ನು ಅರಿಯದ ಇತರ ಹಕ್ಕಿಗಳು, ಮೊಟ್ಟೆ ಮರಿಯಾಗಿ, ಕ್ರಮೇಣ ಮರಿಯ ರೆಕ್ಕೆಪುಕ್ಕ, ಕೊಕ್ಕು, ಕಾಲುಗಳು ಬಲಿತ ಬಳಿಕ ಅದು ತಮ್ಮ ಮರಿಯಲ್ಲ ಎಂದು ಅರಿಯುತ್ತವೆ. ಆದರೆ, ತಮ್ಮ ಮರಿಯಲ್ಲ ಎಂದು ಖಚಿತವಾದ ಮೇಲೂ ಆ ಪಕ್ಷಿಗಳು ಅದನ್ನು ತಿರಸ್ಕರಿಸಿದೆ, ಕಚ್ಚಿ ಸಾಯಿಸದೆ, ಎಂದಿನಂತೆ ಆಹಾರ ಗುಟುಕು ನೀಡುವುದು, ಗೂಡು ಶುಚಿಗೊಳಿಸುದನ್ನು ಮುಂದುವರಿಸುತ್ತವೆ. ಕೋಗಿಲೆಯ ಆ ಮರಿ ರೆಕ್ಕೆ ಬಲಿತು ಹಾರಿ ಸ್ವತಃ ತನ್ನ ಆಹಾರ ತಾನು ಸಂಪಾದಿಸಿಕೊಳ್ಳುವವರೆಗೂ ತಮ್ಮದೇ ಮರಿಯಂತೆಯೇ ಮೇವು ಕೊಡುತ್ತವೆ!

ಈ ವಿವರ ನೀಡುತ್ತ ತೇಜಸ್ವಿ, ಪಕ್ಷಿಗಳಲ್ಲಿ ಪರಾನುಭೂತಿ ಮತ್ತು ಸಹಜೀವನದ ಈ ಗುಣಗಳನ್ನು ಕಂಡು ನಾನು ಅಚ್ಚರಿಪಟ್ಟೆ ಎಂದು ಹೇಳುತ್ತಾರೆ. ಅದನ್ನು ಓದಿದ ಬಳಿಕ, ಕಳೆದ ವಾರ ಕಂಡ ಕಿರುಹಕ್ಕಿ ಹಿರಿಹಕ್ಕಿಯ ಮರಿಗೆ ಮೇವು ಕೊಡುವ ದೃಶ್ಯ; ಜೀವ ಜಗತ್ತಿನೊಳಗಿನ ಅಸೀಮ ಜೀವಪರ ಗುಣದ ದರುಶನ ಎಂದು ತಿಳಿಯುತ್ತಲೇ ಅಚ್ಚರಿ ಎನಿಸಿತು. ಹಾಗೇ ನಾಚಿಕೆ ಕೂಡ; ಒಂದೇ ರೂಪ, ಒಂದೇ ಸ್ವರೂಪ ಮತ್ತು ಬದುಕು ಬದುಕುವ ಮನುಷ್ಯ ಮನುಷ್ಯರ ನಡುವೆ ಧರ್ಮ, ಜಾತಿ, ಮತ, ಪಂಥಗಳ ಗೋಡೆ ಕಟ್ಟಿಕೊಂಡು, ಪರಸ್ಪರ ಕತ್ತುಕೊಯ್ಯುವ, ಬೆಂಕಿ ಹಚ್ಚುವ, ಕೊಚ್ಚುವ ಕೌರ್ಯ ಮೆರೆಯುತ್ತಿರುವ ನಾವು, ಕನಿಷ್ಠ ಹಿಡಿಯಷ್ಟು ಗಾತ್ರದ ಒಂದು ಗುಬ್ಬಚ್ಚಿಗೆ ಇರುವ ಹೃದಯವಂತಿಕೆಯನ್ನೂ ಉಳಿಸಿಕೊಳ್ಳದೆ ಹೋದೆವಾ ಎಂದು ನಾಚಿಕೆಯಾಯಿತು.

ಸನಾತನ ಧರ್ಮ, ಸಂಸ್ಕೃತಿ, ನಾಗರೀಕತೆಗಳನ್ನೂ, ದೇವರು, ನಂಬಿಕೆ, ಸಂಪ್ರದಾಯಗಳನ್ನೂ, ಸಂವಿಧಾನ, ಕಾನೂನು, ಕೋರ್ಟುಗಳನ್ನೂ, ಮನೆ, ಮಂದಿರ, ಮಠ, ಆಲಯಗಳನ್ನೂ ಕಟ್ಟಿಕೊಂಡ ಮನುಷ್ಯ, ಅದರಿಂದೆಲ್ಲ ಪಡೆದುಕೊಂಡಿರುವುದು ಯಾವ ಮಾನವೀಯತೆ ಎಂಬ ಪ್ರಶ್ನೆ ಕಾಡದೆ ಇರಲಿಲ್ಲ. ಮನುಷ್ಯನಾಳದ ವಿಕೃತಿಗೆ, ಮಾನಸಿಕ ಅಸ್ವಸ್ಥತೆಗೆ ಮದ್ದು ನೀಡಬೇಕಾದ ಈ ವ್ಯವಸ್ಥೆಗಳೆಲ್ಲ, ಈಗ ನಿಜವಾಗಿಯೂ ಮಾಡುತ್ತಿರುವುದು ಏನು? ಯಾವ ಧರ್ಮ, ಯಾವ ಸಂಸ್ಕೃತಿ, ಯಾವ ಮಠ-ಮಾನ್ಯ, ಮಂದಿರಗಳು ಆತನ ರೋಗವನ್ನು ಗುಣಪಡಿಸಬೇಕಿತ್ತೋ, ಆತನನ್ನು ಮನುಷ್ಯನನ್ನಾಗಿ, ಉತ್ತಮ ಮನುಷ್ಯನನ್ನಾಗಿ ಮಾಡಬೇಕಿತ್ತೋ ಅವುಗಳೇ ಆತನನ್ನು ಇನ್ನಷ್ಟು ಮೃಗವನ್ನಾಗಿ (ಈ ಪದ ನೈಜ ಮೃಗಗಳಿಗೂ ಅವಮಾನವೆನಿಸಬಹುದು!) ಮಾಡುತ್ತಿವೆ, ಮೃಗೀಯವಾಗಿ ಬೆಳೆಸುತ್ತಿವೆ ಎಂಬುದಕ್ಕೆ ದೂರದ ಸಿರಿಯಾದಿಂದ ನಮ್ಮದೇ ಬೆಂಗಳೂರಿನ ರಾಜರಾಜೇಶ್ವರಿ ನಗರದವರೆಗೆ ಉದಾಹರಣೆಗಳು ಸಾಕಷ್ಟಿವೆ. ಸಿರಿಯಾದ ನೆಲದಲ್ಲಿ ರಕ್ತಪಿಪಾಸುಗಳು ಒಂದು ಧರ್ಮದ ಹೆಸರಿನಲ್ಲಿ ಅಟ್ಟಹಾಸ ಮೆರೆಯುತ್ತಿದ್ದರೆ, ಅದೇ ರಕ್ತಪಿಪಾಸುಗಳು ಮತ್ತೊಂದು ಧರ್ಮದ ಹಣೆಪಟ್ಟಿಯಲ್ಲಿ ರಾಜರಾಜೇಶ್ವರಿ ನಗರದಲ್ಲಿ ಲಂಕೇಶರ ಮಗಳನ್ನೇ ಬಲಿ ತೆಗೆದುಕೊಂಡಿವೆ.

ಇದನ್ನೂ ಓದಿ : ಹಗೇವು | ಮಲೆನಾಡಿನ ಕಾಲುದಾರಿಗಳಲ್ಲಿ ನಡೆಯುವವರನ್ನು ಸದಾ ಕಾಡುವ ಕತೆಗಳಿವು

ಮತ್ತೆ ಲಂಕೇಶರು ಹೇಳಿದ ಗೋವಿನ ಕುರಿತ ಮಾತುಗಳಿಗೇ ಬರುವುದಾದರೆ, “ಪುಣ್ಯಕೋಟಿ ಅಥವಾ ಪುಣ್ಯಕೋಟಿಯಂತಹ ಮನುಷ್ಯರು ಆತ್ಮಗೌರವ, ಪ್ರೀತಿಯ ಬದುಕು ಸಾಧ್ಯವಾಗುವುದು ದೇವರ ಮೇಲಿನ ನಂಬಿಕೆಯಿಂದಲೇ? ಅಥವಾ ಇಲ್ಲಿನ ಪರಮಾತ್ಮ ಕೇವಲ ನೈತಿಕ ಜಗತ್ತಿನ ಮಾರ್ಗದರ್ಶಿಯೇ?” ಎಂಬ ಪ್ರಶ್ನೆಯನ್ನು ಎತ್ತುತ್ತಾರೆ. ಹಾಗೇ, “ಪ್ರಾಣಿಜಗತ್ತಿನಲ್ಲಿಯೇ ಯಾರಿಗೂ ಕೆಟ್ಟದ್ದನ್ನು ಬಯಸದ, ಎಲ್ಲರಿಗೂ ಒಳಿತನ್ನೇ ನೀಡುವ ಅತ್ಯಂತ ಸಾಧುಪ್ರಾಣಿಯಾದ ಹಸುವಿನ ದೇವರು ಯಾರು? ಅದರ ದೇವರು ಪೂಜೆಯಲ್ಲ, ಮೂಢನಂಬಿಕೆಯಲ್ಲ, ದೇವರ ಹೆಸರಿನಲ್ಲಿ ಶೋಷಿಸುವುದೂ ಅಲ್ಲ,” ಎನ್ನುತ್ತಾರೆ. “ಆಕಸ್ಮಾತ್ತಾಗಿಯೋ, ಉದ್ದೇಶಪೂರ್ವಕವಾಗಿಯೋ ಸೃಷ್ಟಿಯಾಗಿರುವ ಈ ಜಗತ್ತಿನಲ್ಲಿ ತನ್ನ ಪಾತ್ರವನ್ನು ನಿಸರ್ಗದ ನಿಯಮಕ್ಕೆ ತಕ್ಕಂತೆ ನಿರ್ವಹಿಸುವ, ಈ ನಿಸರ್ಗದ ಆಣತಿಗೆ ತಲೆಬಾಗುವ ಗೋವಿನ ದೇವರು ಒಳ್ಳೆಯತನ,” ಎನ್ನುವ ಲಂಕೇಶರ ಮಾತುಗಳು, ಈ ಹೊತ್ತು ಅದೇ ಗೋವಿನ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯದ ಅಟ್ಟಹಾಸಗಳಿಗೆ ಒಂದು ಕಿವಿಮಾತನ್ನೂ ಒಳಗೊಂಡಿವೆ.

‘ಒಳ್ಳೇತನವೇ ದೇವರು’ ಎಂಬುದು ಎಲ್ಲ ಧರ್ಮಶಾಸ್ತ್ರಗಳನ್ನೂ ಮೀರಿದ ಅಂತಿಮ ಸತ್ಯ. ಎಲ್ಲ ಧರ್ಮಗಳ, ಎಲ್ಲ ಸಿದ್ಧಾಂತಗಳ ಅಂತಿಮ ತಿರುಳು ಕೂಡ ಒಳ್ಳೆತನದ ಸಾಕಾರವೇ ಅಲ್ಲವೇ? ಹಾಗಾಗಿದ್ದರೆ, ದೇವರನ್ನು ಮೀರಿದ ಒಳ್ಳೆತನದ ಮುಂದೆ, ದೇವರು ಧರ್ಮ, ಗೋವಿನ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣವನ್ನೂ, ಹೇಯ ಕೃತ್ಯಗಳನ್ನು ಮನುಷ್ಯತ್ವ ಎಂದು ಕರೆಯುವುದು ಸಾಧ್ಯವೇ?

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
ಚಿತ್ತವಿತ್ತ | ಕುಸಿದಿರುವುದು ರುಪಾಯಿಯ ಬೆಲೆ ಮಾತ್ರವಲ್ಲ!
Editor’s Pick More