ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು

ಸದ್ಯಕ್ಕೆ ಈಗ ಮೆರೆಯುತ್ತಿರುವ ಈ ಸುಳ್ಳು ಸುದ್ದಿ ಹರಡುವ ಆಟದ ಬಲಿಪಶುವೇನಾದರೂ ಇದ್ದರೆ, ಅದು ಸರ್ಕಾರದ ಅಧಿಕೃತ ಹೇಳಿಕೆಯೇ! ಸರ್ಕಾರದ ಈ ಸ್ವಯಂಕೃತ ಅಪರಾಧದ ಕಾರಣದಿಂದಾಗಿ ಈಗಾಗಲೇ ಸರ್ಕಾರಿ ಅಧಿಕೃತ ಹೇಳಿಕೆಗಳು ತನ್ನ ಗಂಭೀರತೆ ಕಳೆದುಕೊಂಡಿವೆ, ಪಾವಿತ್ರ್ಯತೆ ಕಳೆದುಹೋಗಿದೆ

ಸುಳ್ಳು ಸುದ್ದಿ ಅಥವಾ ಸುಳ್ಳು ಮಾಹಿತಿ ಎಂಬುದೇ ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರದ ವಿಶೇಷ ಪರಿಣತಿಯ ಕ್ಷೇತ್ರ ಎನಿಸುತ್ತಿದೆ. ಒಮ್ಮೆ ಸಾರ್ವಜನಿಕ ವಲಯಕ್ಕೆ ಹರಿಬಿಟ್ಟ ವದಂತಿ, ಸುಳ್ಳು ಸುದ್ದಿಗಳು ನಿರಂತರವಾಗಿ ನೂರಾರು ರೂಪು ಪಡೆದು, ಸಾವಿರಾರು ದನಿ ಪಡೆದು ಪ್ರತಿಧ್ವನಿಸುತ್ತಲೇ ಹೋಗುತ್ತವೆ. ಅದರಲ್ಲೂ ಬಿಜೆಪಿ ಸರ್ಕಾರದ ಇಂತಹ ಸುಳ್ಳು ಸುದ್ದಿಗಳನ್ನು ಹರಡಲು ಅದರ ಕೇಸರಿ ಪಡೆಯೇ ಟೊಂಕ ಕಟ್ಟಿ ನಿಂತಿದೆ ಮತ್ತು ಹಗಲಿರುಳೆನ್ನದೆ ಅದನ್ನು ಮೂಲೆಮೂಲೆಗೆ ತಲುಪಿಸಲು ಅವರು ಸಾಧ್ಯವಿರುವ ಎಲ್ಲಾ ಅವಕಾಶಗಳನ್ನೂ ಬಳಸಿಕೊಳ್ಳುತ್ತಾರೆ. ಪರಿಣಾಮವಾಗಿ, ಅಂತಹ ಮಾಹಿತಿಗಳ ಸತ್ಯಾಸತ್ಯತೆಯ ಕುರಿತ ಸ್ಪಷ್ಟನೆ, ಪ್ರತಿಹೇಳಿಕೆಗಳು ಅಪಪ್ರಚಾರದ ಯಂತ್ರದ ಕಸದತೊಟ್ಟಿಯ ಪಾಲಾಗಿಬಿಡುತ್ತವೆ.

ಹೀಗೆ, ಸತ್ಯ ಮತ್ತು ವಾಸ್ತವವನ್ನು ಬದಿಗೊತ್ತಿ ತಿರುಚಿದ, ಉದ್ದೇಶಪೂರ್ವಕವಾಗಿ ಕಟ್ಟಿದ ಸಂಗತಿಗಳನ್ನೇ ನಿಜವೆಂದು, ಅಧಿಕೃತವೆಂದು ಪ್ರಚಾರ ನಡೆಸುವ ಈ ತಂತ್ರಗಾರಿಕೆ ತಾತ್ಕಾಲಿಕವಾಗಿ ಸಾರ್ವಜನಿಕ ಅಭಿಪ್ರಾಯ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಶಕ್ತಿಗಳ ಜಯ ಎನಿಸಿದರೂ, ದೀರ್ಘಾವಧಿಯಲ್ಲಿ ಅದು ಖಂಡಿತವಾಗಿಯೂ ಸಾಕಷ್ಟು ಅಪಾಯಗಳನ್ನು ತಂದೊಡ್ಡಲಿದೆ ಎಂಬುದು ದಿಟ. ಸದ್ಯಕ್ಕೆ ಈಗ ಮೆರೆಯುತ್ತಿರುವ ಈ ಸುಳ್ಳು ಸುದ್ದಿ ಹರಡುವ ಆಟದ ಬಲಿಪಶುವೇನಾದರೂ ಇದ್ದರೆ, ಅದು ಸರ್ಕಾರದ ಅಧಿಕೃತ ಹೇಳಿಕೆಯೇ! ಸರ್ಕಾರದ ಈ ಸ್ವಯಂಕೃತ ಅಪರಾಧದ ಕಾರಣದಿಂದಾಗಿ ಈಗಾಗಲೇ ಸರ್ಕಾರಿ ಅಧಿಕೃತ ಹೇಳಿಕೆಗಳು ತನ್ನ ಗಂಭೀರತೆ ಕಳೆದುಕೊಂಡಿವೆ, ಪಾವಿತ್ರ್ಯತೆ ಕಳೆದುಹೋಗಿದೆ. ಹಾಗಾಗಿ ಸಾಮಾನ್ಯ ನಾಗರಿಕರಾಗಿ ನಾವು ಇನ್ನು ನಾವು ಸರ್ಕಾರದ ಹೇಳಿಕೆಗಳನ್ನು ಸತ್ಯವೆಂದು ನಂಬಲಾರದ ಸ್ಥಿತಿಗೆ ತಲುಪಿದ್ದೇವೆ. ಏಕೆಂದರೆ, ಅಂತಹ ಸರ್ಕಾರದ ಹೇಳಿಕೆಗಳು ಈಗೀಗ ಸದಾ ಒಂದಿಲ್ಲೊಂದು ಸುಳ್ಳು ಸುದ್ದಿಯ ಬೆನ್ನೇರಿಯೇ ನಮ್ಮನ್ನು ತಲುಪುತ್ತಿವೆ!

ಇದಕ್ಕೆ ತೀರಾ ಇತ್ತೀಚಿನ ನಿದರ್ಶನವೆಂದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತ ಕುರಿತ ಸರ್ಕಾರದ ಘೋಷಣೆ. ಇಂಧನ ಬೆಲೆ ಹೆಚ್ಚಳದಿಂದ ಹೈರಾಣಾಗಿದ್ದ ಜನಸಾಮಾನ್ಯರಿಗೆ ಸರ್ಕಾರ ನೀಡಿದ ದೊಡ್ಡ ಕೊಡುಗೆ ಈ ಬೆಲೆ ಕಡಿತ ಎಂದೇ ಅದನ್ನು ಬಿಂಬಿಸಲಾಗಿತ್ತು. ರೂ.೨.೫೦ ಕಡಿತ ಸರ್ಕಾರದ ಜನಪರ ಕ್ರಮ ಎಂದೇ ಮಾಧ್ಯಮಗಳ ಒಂದು ವಲಯ ಸರ್ಕಾರದ ಸ್ತುತಿ ಮಾಡಿದ್ದವು. ಆದರೆ, ನಿಜವಾಗಿಯೂ ಸರ್ಕಾರದ ಆ ತ್ಯಾಗ ಎಂತಹದ್ದು ಎಂಬುದು ಗೊತ್ತಾಗಬೇಕಾದರೆ, ಕೇರಳದ ಸರ್ಕಾರಿ ಎಂಜಿನಿಯರ್ ಜೇಮ್ಸ್ ವಿಲ್ಸನ್ ಅವರೇ ವಿವರಿಸಬೇಕಾಯಿತು. ನೋಟು ಅಮಾನ್ಯೀಕರಣದ ಬಳಿಕ ಸರ್ಕಾರದ ಇಂತಹ ಕ್ರಮಗಳ ಅಸಲೀತನವನ್ನು ಅಂಕಿಅಂಶಗಳ ಸಹಿತ ಬಯಲುಮಾಡುತ್ತಿರುವ ವಿಲ್ಸನ್, ಅಂತಹ ಕಾರಣಕ್ಕಾಗಿಯೇ ಇದೀಗ ಜನಪ್ರಿಯ.

ವಿಲ್ಸನ್ ಅವರ ಮಾಹಿತಿಯ ಪ್ರಕಾರ, ನಿಜವಾಗಿಯೂ ಈ ೨.೫೦ ಪೈಸೆ ಇಂಧನ ದರ ಕಡಿತದಲ್ಲಿ ಕೇಂದ್ರ ಸರ್ಕಾರದ ಪಾಲು ಕೇವಲ ೦.೮೭ ಪೈಸೆ! ಇನ್ನುಳಿದ ೧.೬೩ ರೂ. ಪೈಕಿ ೦.೬೩ ಪೈಸೆ ರಾಜ್ಯ ಸರ್ಕಾರದ ಮೂಲ ಅಬಕಾರಿ ಸುಂಕದ ಕಡಿತದಿಂದ ಮತ್ತು ರೂ.೧.೦೦ ತೈಲ ಕಂಪನಿಗಳ ಆದಾಯದಿಂದ ಕಡಿತವಾಗಿದೆ. ಆದರೆ, ಅಕ್ಟೋಬರ್ ೪ರಂದು ಕೇಂದ್ರ ಸರ್ಕಾರ ಇಂಧನ ದರ ಕಡಿತವನ್ನು ಘೋಷಿಸಿದಾಗ ಈ ವಿವರ, ಅದರಲ್ಲೂ ರಾಜ್ಯ ಸರ್ಕಾರಗಳ ಅಬಕಾರಿ ಸುಂಕದ ಪಾಲನ್ನು ಪ್ರಸ್ತಾಪಿಸಲೇ ಇಲ್ಲ. ಏಕೆಂದರೆ, ಅದರಲ್ಲಿ ರಾಜ್ಯ ಸರ್ಕಾರಗಳ ಪಾಲು ಸಾಕಷ್ಟಿದೆ ಎಂಬ ಸಂಗತಿ ತನ್ನ ಜನಪರ ಹೆಗ್ಗಳಿಕೆಯನ್ನು ಮುಕ್ಕಾಗಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿತ್ತು. ಆದರೆ, ವಾಸ್ತವವಾಗಿ, ಕೇಂದ್ರ ಸರ್ಕಾರ ಬಹಳ ಜಾಣತನದಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೂಲ ಕೇಂದ್ರ ಅಬಕಾರಿ ತೆರಿಗೆಯಲ್ಲಿ ರೂ.೧.೫೦ ಕಡಿತ ಮಾಡುವ ಮೂಲಕ ಅದರಲ್ಲಿ ರಾಜ್ಯಗಳ ಮೇಲೆ ರೂ.೦.೬೩ ಪೈಸೆ ಹೊರೆ ಬೀಳುವಂತೆ ನೋಡಿಕೊಂಡಿತು. ಅದರ ಬದಲಾಗಿ ವಿಶೇಷ ಹೆಚ್ಚುವರಿ ಅಬಕಾರಿ ತೆರಿಗೆ ಅಥವಾ ರಸ್ತೆ ಸೆಸ್‌ನಲ್ಲಿ ಕಡಿತ ಮಾಡಿದ್ದರೆ, ಆಗ ಇಡಿಯಾಗಿ ೧.೫೦ರೂ. ಕೇಂದ್ರವೇ ಕಡಿತ ಮಾಡಿದಂತಾಗುತ್ತಿತ್ತು.

ಇನ್ನು, ತೈಲ ಕಂಪನಿಗಳ ವಿಷಯದಲ್ಲಿ ಹೇಳುವುದಾದರೆ, ಅವು ಪ್ರತಿ ಲೀಟರಿಗೆ ಒಂದು ರೂ.ನಂತೆ ತಮ್ಮ ಲಾಭಾಂಶವನ್ನು ಬಿಟ್ಟುಕೊಡಲೇಬೇಕಿದೆ. ಆದರೆ, ಈ ಕಡಿತದ ಪರಿಣಾಮವಾಗಿ ಪ್ರಮುಖ ಸಾರ್ವಜನಿಕ ವಲಯದ ತೈಲ ಕಂಪನಿಗಳ ದಾಸ್ತಾನು ದಿಢೀರ್ ಕುಸಿತ ಕಂಡಿತು. ಅಕ್ಟೋಬರ್ ೪-೫ರ ನಡುವಿನ ವ್ಯವಹಾರದಲ್ಲಿ ಐಒಸಿ ಷೇರು ದರ ಶೇ.೧೯.೯ರಷ್ಟು ಕುಸಿದರೆ, ಎಚ್‌ಪಿಸಿಎಲ್ ಷೇರುಗಳ ದರ ಶೇ.೨೯.೬ರಷ್ಟು ಕುಸಿಯಿತು. ಬಿಪಿಸಿಎಲ್ ದರ ೨೪.೨ ಮತ್ತು ಜಿಎಐಎಲ್ ಷೇರು ದರ ೧೧.೩ರಷ್ಟು ಕುಸಿತ ಕಂಡವು. ಒಟ್ಟಾರೆ ಷೇರು ವಹಿವಾಟಿನಲ್ಲಿ ತೈಲ ಕಂಪನಿಗಳ ಷೇರುಗಳಲ್ಲಿ ಸುಮಾರು ೧.೦೩ ಲಕ್ಷ ಕೋಟಿ ನಷ್ಟ ಉಂಟಾಯಿತು. ವಾಸ್ತವ ಹೀಗಿರುವಾಗ ಬಿಜೆಪಿಯ ಮಾತುಗಾರರು ಕೇಕೆ ಹಾಕುವುದಕ್ಕೆ ಏನಿದೆ?

ತೈಲ ಬಾಂಡ್ ಮರುಪಾವತಿ

ವಾಸ್ತವಾಂಶಗಳನ್ನು ತೀರಾ ತಿರುಚಿ ಜನರನ್ನು ಹಾದಿತಪ್ಪಿಸುವ ಸರ್ಕಾರದ ವರಸೆಗೆ ಇಂಧನ ಬೆಲೆ ಕಡಿತವಷ್ಟೇ ನಿದರ್ಶನವಲ್ಲ; ಬದಲಾಗಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ತೈಲ ಬಾಂಡ್ ಮೂಲಕ ಸರ್ಕಾರ ಎತ್ತಿದ ಸಾಲದ ಮರುಪಾವತಿ ಮತ್ತು ಬಡ್ಡಿಪಾವತಿಯ ವಿಷಯದಲ್ಲಿಯೂ ಇಂತಹದ್ದೇ ಸುಳ್ಳು ಹೇಳಲಾಗುತ್ತಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಪಟ್ನಾದಲ್ಲಿ ೨೦೧೮ರ ಜೂನ್‌ನಲ್ಲಿ ಒಂದು ಹೇಳಿಕೆ ನೀಡಿ, ಹಿಂದಿನ ಯುಪಿಎ ಸರ್ಕಾರ ತೈಲ ಬಾಂಡ್ ಮೂಲಕ ಎತ್ತಿರುವ ೨ ಲಕ್ಷ ಕೋಟಿ ಸಾಲವನ್ನು ತಮ್ಮ ಎನ್ಡಿಎ ಸರ್ಕಾರ ೭೦ ಸಾವಿರ ಕೋಟಿ ಬಡ್ಡಿ ಸಹಿತ ಮರು ಪಾವತಿ ಮಾಡಬೇಕಿದೆ. ಹಾಗಾಗಿಯೇ ತೈಲ ಬೆಲೆ ಸಂಕಷ್ಟ ಎದುರಾಗಿದೆ ಎಂದಿದ್ದರು.

೨೦೧೪-೧೫ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವಾಗಿ ಸಂಗ್ರಹಿಸಿರುವ ೭.೪೯ ಲಕ್ಷ ಕೋಟಿ ರೂ.ಗಳನ್ನು ಸರ್ಕಾರ ಯಾವುದಕ್ಕೆ ಬಳಸಿದೆ ಎಂಬ ಪ್ರಶ್ನೆ ಮುಂದುಮಾಡಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ದಾಳಿ ನಡೆಸಿದಾಗ ಸಚಿವರು ಈ ಹೇಳಿಕೆ ನೀಡಿದ್ದರು. ಸಚಿವರ ಹೇಳಿಕೆಯನ್ನೇ ಮಹಾಪ್ರಸಾದವೆಂಬಂತೆ ಮಾಧ್ಯಮಗಳೂ ಪ್ರಚಾರ ನೀಡಿದವು. ಟಿವಿ ವಾಹಿನಿಗಳಲ್ಲಿ ಹಿಂದಿನ ಯುಪಿಎ ಸರ್ಕಾರವನ್ನು ಗುರಿಯಾಗಿಸಿಕೊಂಡು ಭಾರೀ ಚರ್ಚೆಗಳೂ ನಡೆದವು.

ಆದರೆ, ವಾಸ್ತವಾಂಶ ಬೇರೆಯೇ ಇತ್ತು. ಆ ಸಂಗತಿಗಳು ಪ್ರಧಾನ್ ಅವರ ಹೇಳಿಕೆಗೆ ಯಾವ ಬಗೆಯಲ್ಲೂ ಹತ್ತಿರವಿರಲಿಲ್ಲ. ‘ಫ್ಯಾಕ್ಟಿ’ ಎಂಬ ಸಾರ್ವಜನಿಕ ಹಿತಾಸಕ್ತಿಯ ವರದಿಗಳನ್ನು ಪ್ರಕಟಿಸುವ ವೆಬ್‌ಸೈಟಿನ ಮಾಹಿತಿ ಹಕ್ಕು ಅರ್ಜಿಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಅಡಿಯ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ವಿಭಾಗ(ಪಿಪಿಎಸಿ) ನೀಡಿದ ಮಾಹಿತಿಯ ಪ್ರಕಾರ, ಹಿಂದಿನ ಯುಪಿಎ ಸರ್ಕಾರದ ಎರಡು ಅವಧಿಯಲ್ಲಿ ಒಟ್ಟು ೧.೪೨ ಲಕ್ಷ ಕೋಟಿ ರೂ. ಮೊತ್ತದ ೧೭ ತೈಲ ಬಾಂಡ್ ವಿತರಿಸಲಾಗಿತ್ತು. ಆ ಪೈಕಿ ಈವರೆಗೆ ಆರು ಬಾಂಡ್‌ಗಳ ಅವಧಿ ಪೂರ್ಣಗೊಂಡಿದ್ದು, ೪ ಬಾಂಡ್‌ಗಳ ಮೊತ್ತವನ್ನು ೨೦೦೯ ಮತ್ತು ೧೨ರಲ್ಲಿ ಅಂದಿನ ಯುಪಿಎ ಸರ್ಕಾರವೇ ಪಾವತಿ ಮಾಡಿತ್ತು. ಉಳಿದ ೨ ಬಾಂಡುಗಳ ಮೊತ್ತವನ್ನು ಎನ್‌ಡಿಎ ಸರ್ಕಾರ ಪಾವತಿ ಮಾಡಿದೆ. ಪ್ರತಿ ಬಾಂಡ್‌ಗೆ ೧,೭೫೦ ಕೋಟಿಯಾಗಿದ್ದು, ಒಟ್ಟು ಎನ್‌ಡಿಎ ಸರ್ಕಾರ ೩,೫೦೦ ಕೋಟಿ ಪಾವತಿ ಮಾಡಿದೆ. ಆದರೆ, ಸಚಿವರು ಹೇಳಿದ್ದು ಮಾತ್ರ ೧.೩೦ ಲಕ್ಷ ಕೋಟಿ ರೂ. ಪಾವತಿ ಮಾಡಿದ್ದೇವೆ ಎಂದು!

ಈ ಬಾಂಡುಗಳು ಪೈಕಿ ಮುಂದಿನದ್ದು ೨೦೨೧ಕ್ಕೆ ಪಾವತಿಗೆ ಬರಲಿದೆ ಮತ್ತು ಅಂತಿಮವಾಗಿ ೨೦೧೬ಕ್ಕೆ ಕೊನೆಯ ಬಾಂಡ್ ಪಾವತಿಯಾಗಲಿದೆ. ಇನ್ನು ಈ ಬಾಂಡ್‌ಗಳ ಬಡ್ಡಿ ವಿಷಯಕ್ಕೆ ಬರುವುದಾದರೆ, ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರ ಒಟ್ಟು ೪೦,೨೨೫ ಕೋಟಿ ರೂ. ಬಡ್ಡಿ ಪಾವತಿಸಿದೆ. ಈ ಆರ್ಥಿಕ ವರ್ಷದ ಅಂತ್ಯದ ಹೊತ್ತಿಗೆ ಇನ್ನೂ ರೂ. ೯,೯೮೯.೯೬ ಕೋಟಿ ಮೊತ್ತವನ್ನು ಈ ಸರ್ಕಾರ ಪಾವತಿ ಮಾಡಲಿದೆ. ಸಚಿವರು ಹೇಳಿದಂತೆ ಬಡ್ಡಿ ಮೊತ್ತ ೭೦,೦೦೦ ಕೋಟಿ ರೂ. ಅಲ್ಲವೇ ಅಲ್ಲ!

ಇಂತಹದ್ದೇ ಇನ್ನಷ್ಟು ಪರಾಕುಗಳು

ಇದನ್ನೂ ಓದಿ : ಏರಿದ ಕಚ್ಚಾ ತೈಲ ದರ, ಮತ್ತಷ್ಟು ಕುಸಿದ ರುಪಾಯಿ; ಷೇರುಪೇಟೆಯಲ್ಲಿ ಅಸ್ಥಿರತೆ

ಪೆಟ್ರೋಲ್ ವಲಯದಲ್ಲಿಯಂತೆಯೇ ಕಲ್ಲಿದ್ದಲು ವಿಷಯದಲ್ಲಿಯೂ ಸರ್ಕಾರ ಇಂತಹ ಪರಾಕುಗಳನ್ನು ಮೆರೆದಿದೆ. ಅದಕ್ಕೆ ಒಂದು ಉದಾಹರಣೆ ೨೦೧೫ ಫೆಬ್ರವರಿ- ಮಾರ್ಚನಲ್ಲಿ ನಡೆದ ಮೂವತ್ತು ವರ್ಷ ಅವಧಿಗೆ ೬೭ ಕಲ್ಲಿದ್ದಲು ಬ್ಲಾಕ್ ಹರಾಜು ಪ್ರಕ್ರಿಯೆಯಿಂದ ಸರ್ಕಾರಕ್ಕೆ ಬರೋಬ್ಬರಿ ರೂ.೩.೫ ಲಕ್ಷ ಕೋಟಿ ಆದಾಯ ಬರಲಿದೆ ಎಂಬ ಹೇಳಿಕೆ. ಆದರೆ, ಸರ್ಕಾರ ತನ್ನ ಬೆನ್ನು ತಾನೇ ತಟ್ಟಿಕೊಂಡ ಆ ಹರಾಜು ಪ್ರಕ್ರಿಯೆ ಕುರಿತ ‘ಬ್ಯುಸಿನೆಸ್ ಸ್ಟ್ಯಾಂಡರ್ಡ್’ನ ನಿತಿನ್ ಸೇಥಿ ಅವರ ಇತ್ತೀಚಿನ ವರದಿ ಉಲ್ಲೇಖಿಸಿರುವ ಸ್ವತಃ ಸರ್ಕಾರದ ಅಂಕಿಅಂಶಗಳು ನೀಡುವ ಚಿತ್ರಣ ಬೇರೆಯೇ! ಕಲ್ಲಿದ್ದಲು ಗಣಿ ಹಂಚಿಕೆಯಿಂದ ಸರ್ಕಾರದ ಆದಾಯ ಈವರೆಗೆ ಕೇವಲ ರೂ.೫,೬೮೪ ಕೋಟಿ ಮಾತ್ರ. ೨೦೧೫ರಲ್ಲಿ ಸರ್ಕಾರದ ಅಧಿಕೃಯ ಮಾಧ್ಯಮ ಪ್ರಕಟಣೆ ಹೇಳಿದಂತೆ, ಈ ಗಣಿ ಹಂಚಿಕೆಯಿಂದ ಭಾರೀ ಆದಾಯವೇನೂ ಬಂದಿಲ್ಲ ಮತ್ತು ಬರುವುದೂ ಇಲ್ಲ. ಆದರೆ, ಸರ್ಕಾರ ಅಂದು, “ಇತ್ತೀಚೆಗೆ ಪೂರ್ಣಗೊಂಡ ಹರಾಜು ಪ್ರಕ್ರಿಯೆಯಿಂದ ಭಾರತ, ಚಿನ್ನದ ಗಣಿಗೇ ಲಗ್ಗೆ ಇಟ್ಟಂತಾಗಿದೆ,” ಎಂದು ಹೇಳಿತ್ತು. ಹಲವು ಬಿಜೆಪಿ ನಾಯಕರು ಕೂಡ ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಸರ್ಕಾರ ಪರ ಬೊಂಬಡಾ ಬಜಾಯಿಸಿದ್ದರು.

ಸರ್ಕಾರದ ಇಂತಹ ಸುಳ್ಳು ಪರಾಕುಗಳ ಸಾಲಿಗೆ ಇತ್ತೀಚಿನ ಮತ್ತೊಂದು ಸೇರ್ಪಡೆ ಬೆಂಗಳೂರಿನ ಅಜೀಂಪ್ರೇಮ್‌ಜೀ ವಿವಿಯ ಸೆಂಟರ್ ಫಾರ್ ಸಸ್ಟೇನಬಲ್ ಎಂಪ್ಲಾಯ್ಮೆಂಟ್ (ಸಿಎಸ್‌ಇ) ಬಿಡುಗಡೆ ಮಾಡಿರುವ ದೇಶದ ಉದ್ಯೋಗ ಸ್ಥಿತಿಗತಿ ಕುರಿತ ವರದಿ. ದೇಶದಲ್ಲಿ ಸದ್ಯದ ನಿರುದ್ಯೋಗ ಪ್ರಮಾಣ, ಕಳೆದ ಎರಡು ದಶಕದಲ್ಲೇ ಅತಿ ಹೆಚ್ಚು ಎಂದಿರುವ ಆ ವರದಿ, ನಿರುದ್ಯೋಗ ಪ್ರಮಾಣ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ. ನ್ಯಾಷನಲ್ ಸ್ಯಾಂಪಲ್ ಸರ್ವೆ ಕಚೇರಿ, ಕಾರ್ಮಿಕ ಬ್ಯೂರೋದ ಉದ್ಯೋಗ- ನಿರುದ್ಯೋಗ ಸರ್ವೆ ಮತ್ತು ಬಾಂಬೆ ಸ್ಟಾಕ್ ಎಕ್ಸೇಂಝ್ ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ (ಬಿಎಸ್‌ಸಿ-ಸಿಎಂಐಇ) ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ಸಿಎಸ್‌ಇ ಈ ವರದಿ ಸಿದ್ಧಪಡಿಸಿದೆ. ಹಲವು ವರ್ಷಗಳ ಕಾಲ ಶೇ.೨-೩ರ ಆಸುಪಾಸಿನಲ್ಲಿದ್ದ ದೇಶದ ನಿರುದ್ಯೋಗ ಪ್ರಮಾಣ, ಇದೀಗ ೨೦೧೫ರಲ್ಲಿ ಶೇ.೫ಕ್ಕೆ ಏರಿಕೆಯಾಗಿದೆ. ಅದರಲ್ಲೂ ಯುವಜನತೆಯ ನಿರುದ್ಯೋಗ ಪ್ರಮಾಣ ಶೇ.೧೬ರಷ್ಟು ದಾಖಲೆ ಏರಿಕೆ ಕಂಡಿದೆ,” ಎಂದು ವರದಿ ಹೇಳಿದೆ. ಆದರೆ, ೨೦೧೮ರ ಜೂನ್‌ಗೆ ಮುಂಚಿನ ೧೦ ತಿಂಗಳಲ್ಲಿ ೧.೨ ಕೋಟಿ ಉದ್ಯೊಗ ಸೃಷ್ಟಿಸಲಾಗಿದೆ ಎಂಬ ಸರ್ಕಾರದ ವಿವಾದಾತ್ಮಕ ಹೇಳಿಕೆಗೆ ಈ ವರದಿಯ ವಾಸ್ತವಾಂಶಗಳು ತದ್ವಿರುದ್ಧವಾಗಿವೆ.

ಈ ಎಲ್ಲ ಉದಾಹರಣೆಗಳು ಈ ಸರ್ಕಾರದ ಇಂತಹ ಸುಳ್ಳು ಮತ್ತು ತಿರುಚಿದ ವಾಸ್ತವಾಂಶಗಳ ವ್ಯವಸ್ಥಿತ ಪ್ರಚಾರದ ಒಂದು ಸಣ್ಣ ಇಣುಕುನೋಟವಷ್ಟೇ. ನೀವೇನಾದರೂ ಹೀಗೆ ವಾಸ್ತವಾಂಶಗಳನ್ನು ಮತ್ತು ಸರ್ಕಾರದ ಹೇಳಿಕೆಗಳನ್ನೂ ತಾಳೆ ಮಾಡತೊಡಗಿದರೆ ನಿಮಗೆ ಸುಳ್ಳಿನ ಸರಮಾಲೆ, ತಪ್ಪು ಮಾಹಿತಿಗಳ ರಾಶಿಯೇ ರಾಚುತ್ತದೆ. ಅದು ನೋಟು ಅಮಾನ್ಯೀಕರಣವಿರಬಹುದು, ಕಪ್ಪು ಹಣದ ವಿರುದ್ಧದ ‘ಸರ್ಜಿಕಲ್ ಸ್ಟ್ರೈಕ್’ ಇರಬಹುದು, ಆಧಾರ್ ಇರಬಹುದು, ಸ್ವಜನಪಕ್ಷಪಾತ, ಅವಕಾಶವಾದಿ ಉದ್ಯಮಿಶಾಹಿಗಳ ಉತ್ತೇಜನವಿರಬಹುದು, ಬ್ಯಾಂಕುಗಳ ವಸೂಲಾಗದ ಸಾಲ(ಎನ್‌ಪಿಎ) ಇರಬಹುದು, ಜಿಡಿಪಿ ದರ ಕುರಿತ ಅಂಕಿಅಂಶಗಳಿರಬಹುದು, ಕೊನೆಗೆ ರಾಫೇಲ್ ಡೀಲ್ ಇರಬಹುದು,.. ಎಲ್ಲದರಲ್ಲೂ ಸರ್ಕಾರದ ಹೇಳಿಕೆಗಳನ್ನು ಸಂಶಯ ಮತ್ತು ಅಪನಂಬಿಕೆಯಿಂದ ನೋಡುವುದಲ್ಲದೆ, ಜನಸಾಮಾನ್ಯರ ಮುಂದೆ ಬೇರೆ ಆಯ್ಕೆಗಳಿಲ್ಲ.

ಆದರೆ, ಇಂತಹ ಸ್ಥಿತಿ ಖಂಡಿತವಾಗಿಯೂ ಯಾವುದೇ ಸರ್ಕಾರಕ್ಕೆ ಆರೋಗ್ಯಕರ ಬೆಳವಣಿಗೆಯಲ್ಲ. ಅದರಲ್ಲೂ ಪ್ರಾಮಾಣಿಕ, ಪಾರದರ್ಶಕ ಮತ್ತು ಭ್ರಷ್ಟಾಚಾರಮುಕ್ತ ಆಡಳಿತದ ಭರವಸೆ ನೀಡಿ ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಸರ್ಕಾರದಿಂದ ದೇಶದ ಜನತೆ ಖಂಡಿತವಾಗಿಯೂ ಇದನ್ನು ನಿರೀಕ್ಷಿಸಿರಲಿಲ್ಲ.

ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
ಚಿತ್ತವಿತ್ತ | ಕುಸಿದಿರುವುದು ರುಪಾಯಿಯ ಬೆಲೆ ಮಾತ್ರವಲ್ಲ!
Editor’s Pick More