ಉ.ಪ್ರದೇಶ ದೊಂಬಿಹತ್ಯೆ: ಕೊಂದಿದ್ದು ತಾನೇ ಎಂದು ಬಾಯ್ಬಿಟ್ಟ ಆರೋಪಿ!

ಹಾಪುರ್ ದೊಂಬಿಹತ್ಯೆ ಪ್ರಕರಣದಲ್ಲಿ ಅಕ್ರಮ ಗೋಸಾಗಾಟ ಆರೋಪದ ಮೇಲೆ ಹಲ್ಲೆ ಮಾಡಿ ಸಮಿಯುದ್ದೀನ್‌ ಎಂಬುವವರನ್ನು ಹತ್ಯೆ ಮಾಡಲಾಗಿತ್ತು. ಇದೀಗ ಜಾಮೀನಿನ ಮೇಲೆ ಹೊರಬಂದಿರುವ ಆರೋಪಿಯು, ಎನ್ ಡಿ ಟಿವಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ತಪ್ಪು ಒಪ್ಪಿಕೊಂಡಿದ್ದಾನೆ

ಉತ್ತರ ಪ್ರದೇಶದ ಹಾಪುರ್ ದೊಂಬಿಹತ್ಯೆ ಪ್ರಕರಣದಲ್ಲಿ ಅಕ್ರಮ ಗೋಸಾಗಾಟದ ಅನುಮಾನದ ಮೇಲೆ ಹಲ್ಲೆ ಮಾಡಿ ಸಮಿಯುದ್ದೀನ್‌ ನನ್ನು ಕೊಂದಿರುವುದಾಗಿ ಜಾಮೀನಿನ ಮೇಲೆ ಹೊರಬಂದಿರುವ ಆರೋಪಿ ಎನ್ ಡಿ ಟಿವಿ ಕುಟುಕು ಕಾರ್ಯಾಚರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಈ ರಹಸ್ಯ ಕಾರ್ಯಾಚರಣೆಯ ವರದಿ ಪ್ರಸಾರವಾಗುತ್ತಿದ್ದಂತೆ ಈ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ವಕೀಲರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಕೋರಿದ್ದು, ಬರುವ ಸೋಮವಾರ ಈ ಹಲ್ಲೆ ಪ್ರಕರಣ ವಿಚಾರಣೆ ನಡೆಯಲಿದೆ.

ದೆಹಲಿಗೆ ಕೇವಲ ೭೦ ಕಿಮೀ ದೂರ ಇರುವ ಉತ್ತರ ಪ್ರದೇಶದ ಹಾಪುರ್‌ ನಲ್ಲಿ ಎರಡು ವಾರಗಳ ಹಿಂದೆ ಗೋಸಾಗಾಟದ ಶಂಕೆ ಮೇಳೆ ಮುಸ್ಲಿಂ ಸಮುದಾಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಗುಂಪೊಂದು ಮಾರಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ೬೫ ವರ್ಷದ ಸಮಿಯುದ್ದೀನ್ ಸಾವನ್ನಪ್ಪಿದ್ದರು. ಹಾಗೆಯೇ, ೪೫ ವರ್ಷದ ಖಾಸಿಂ ಎಂಬಾತ ಗಂಭೀರವಾಗಿ ಗಾಯಗೊಂಡು ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ದೊಂಬಿಹತ್ಯೆ ನಡೆದ ನಂತರ ಖಾಸಿಂ ನನ್ನು ಪೊಲೀಸರೆದುರೇ ಹೀನಾಯವಾಗಿ ಎಳೆದುಕೊಂಡು ಹೋಗುತ್ತಿದ್ದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೇಶದ ಗಮನ ಸೆಳೆಯಿತು. ನಂತರ ಈ ಬಗ್ಗೆ ಕ್ಷಮೆ ಕೇಳಿದ ಪೊಲೀಸರು, ಪ್ರಕರಣವನ್ನು ದಾಖಲಿಸಿಕೊಂಡು, ಯುಧಿಷ್ಠಿರ ಸಿಂಗ್ ಹಾಗೂ ರಾಕೇಶ್ ಸಿಸೋಡಿಯಾ ಎಂಬುವವರನ್ನು ಬಂಧಿಸಿದ್ದರು.

ಆದರೆ, ಇತ್ತೀಚೆಗೆ ಸಾಕ್ಷಾಧಾರಗಳ ಕೊರತೆಯಿಂದಾಗಿ ಬಂಧಿತರಿಬ್ಬರೂ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಇವರನ್ನು ಎನ್‌ ಡಿಟಿವಿ ಕುಟುಕು ಕಾರ್ಯಾಚರಣೆ ತಂಡ ಬಜೇಧಾ ಗ್ರಾಮಕ್ಕೆ ಹುಡುಕಿಕೊಂಡು ಹೋಗಿ, ಹಲ್ಲೆ ಪ್ರಕರಣದ ಬಗ್ಗೆ ಮಾತನಾಡಿಸಿದಾಗ ಗೋಸಾಗಾಟದ ನೆಪದ ಮೇಲೆ ಸಮಿಯುದ್ದೀನ್ ನನ್ನು ಹೊಡೆದು ಕೊಂದಿದ್ದು ನಾವೇ ಎಂದು ಒಪ್ಪಿಕೊಂಡಿದ್ದಾರೆ. ಆ ಕುಟುಕು ಕಾರ್ಯಾಚರಣೆಯ ವಿಡಿಯೋವನ್ನು ಎನ್ ಡಿಟಿವಿ ಪ್ರಸಾರ ಮಾಡಿದೆ. ಈ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಸಮಿಯುದ್ದೀನ್ ಕುಟುಂಬದ ಸದಸ್ಯರು ವಕೀಲರೊಬ್ಬರ ಮೂಲಕ ಅರ್ಜಿ ಸಲ್ಲಿಸಿ, “ಆರೋಪಿ ಟಿವಿಯೊಂದರ ಕುಟುಕು ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿದ್ದು ತಾನೇ ಎಂದು ಒಪ್ಪಿಕೊಂಡಿರುವ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಹಾಗೆಯೇ, ಆರೋಪಿಗೆ ನೀಡಿರುವ ಜಾಮೀನನ್ನು ಕೂಡಲೇ ರದ್ದುಗೊಳಿಸಿ, ಈ ಪ್ರಕರಣದ ನ್ಯಾಯಯುತ ತನಿಖೆಗಾಗಿ ಬೇರೆಡೆ ವರ್ಗಾಯಿಸಿಸಬೇಕು,” ಎಂದು ಸುಪ್ರೀಂ ಕೋರ್ಟ್‌ ಅನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ದೊಂಬಿ ಹತ್ಯೆ/ ಹಲ್ಲೆ | ದಿ ಸ್ಟ್ರೇಟ್‌ ಟ್ರ್ಯಾಕರ್‌

ಕುಟುಕು ಕಾರ್ಯಾಚರಣೆಯಲ್ಲಿ ಮಾತನಾಡಿರುವ ಆರೋಪಿ, "ಗೋವುಗಳನ್ನು ಅಕ್ರಮ ಸಾಗಾಟ ಮಾಡಿ ಅವರು ಕೊಲ್ಲುತ್ತಾರೆ. ನಾವು ಅವರನ್ನು ಕೊಲ್ಲುತ್ತೇವೆ,” ಎಂದಿದ್ದಾನೆ. ಅಲ್ಲದೆ, “ಸಮಿಯುದ್ದೀನ್ ನನ್ನು ಹಲ್ಲೆ ಮಾಡಿ ಕೊಂದಿದ್ದು ನಾವೇ, ನಮ್ಮನ್ನು ಏನು ಮಾಡಿಕೋಳ್ತಿರೋ ನೋಡೋಣ…” ಎಂದು ಪೊಲೀಸರಿಗೂ ಬೆದರಿಕೆ ಒಡ್ಡಿರುವುದು ರಹಸ್ಯ ಕ್ಯಾಮೆರಾದಲ್ಲಿ ಬೆಳಕಿಗೆ ಬಂದಿದೆ. ಆದರೆ, ಇದೇ ಸುಸೋಡಿಯಾ ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ನೀಡಿರುವ ಲಿಖಿತ ಹೇಳಿಕೆಯಲ್ಲಿ, “ಆ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಆ ಹಲ್ಲೆ ನಡೆಯುವಾಗ ನಾವು ಸ್ಥಳದಲ್ಲಿ ಇರಲಿಲ್ಲ,” ಎಂದಿರುವುದು ಬೆಳಕಿಗೆ ಬಂದಿದೆ.

ಚಿತ್ರ: ಹತ್ಯೆಯಾದ ಸಮಿಯುದ್ದೀನ್‌

ಸ್ಟೇಟ್ ಪಿಕ್ | ಫೇಲ್ ರಫೇಲ್
ಸ್ಟೇಟ್ ಪಿಕ್ | ಜಾರಿಬಿದ್ದ ಜಾಣೆ
ಸ್ಟೇಟ್ ಪಿಕ್ | ತಾಲೀಮು
Editor’s Pick More