ರಾಜಕೀಯ ಚದುರಂಗದಲ್ಲಿ ಹೊಸ ಪಕ್ಷಗಳು ದಾಳ ಉರುಳಿಸುತ್ತವಾ, ದಾಳವಾಗುತ್ತವಾ?

ರಾಜ್ಯ ರಾಜಕೀಯದಲ್ಲಿ ಮತ್ತೆರಡು ಹೊಸ ಧ್ವನಿ ಕೇಳಿಬರುತ್ತಿದೆ. ಈ ಎರಡೂ ಪಕ್ಷಗಳು ಹುಟ್ಟಿದ ಸಂದರ್ಭ, ಕಾರಣವಾದ ಒತ್ತಡಗಳು, ಅದರ ಸಾರಥಿಗಳ ಸಿನಿಮೀಯ ನಡೆ-ನುಡಿಯನ್ನು ನೋಡಿದರೆ, ಇವು ಮುಂದೆ ಯಾವ ದಿಕ್ಕಿನಲ್ಲಿ ಸಾಗಬಹುದು ಎನ್ನುವುದನ್ನು ಈಗಲೇ ಊಹಿಸುವುದು ನಿಜವಾಗಿಯೂ ಕಷ್ಟ

ಈ ತಿಂಗಳ ಆರಂಭದಲ್ಲಿ ಒಂದು ದಿನದ ಅಂತರದಲ್ಲೇ ಎರಡು ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿವೆ. ಎರಡು ವರ್ಷದ ಹಿಂದೆ ವ್ಯಕ್ತಿಯೊಬ್ಬರು ನೋಂದಣಿ ಮಾಡಿಸಿದ್ದ ‘ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ವು (ಕೆಪಿಜೆಪಿ) ನಟ ಉಪೇಂದ್ರರ ಸಾರಥ್ಯದಲ್ಲಿ ಮರುಜನ್ಮ ಪಡೆದು, ‘ಸಂಪೂರ್ಣ ಬದಲಾವಣೆ’ಯ ಧ್ಯೇಯವನ್ನು ಹೊಮ್ಮಿಸಿದೆ. ಮರುದಿನ ನ.1ರಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಕೂಡ್ಲಿಗಿಯಲ್ಲಿ ‘ಭಾರತೀಯ ಜನಶಕ್ತಿ ಕಾಂಗ್ರೆಸ್’ ಪಕ್ಷ ಘೋಷಿಸಿದ್ದಾರೆ. ಇಬ್ಬರೂ, “ನಮ್ಮಬಳಿ ಹಣವಿಲ್ಲ. ಜಾತಿ ಬಲವನ್ನೂ ನೆಚ್ಚುವುದಿಲ್ಲ. ಜನರ ಒಳಿತಿನ ಧ್ಯೇಯದ ಮೇಲೆ ರಾಜಕಾರಣ ಮಾಡುತ್ತೇವೆ,’’ ಎಂದಿದ್ದಾರೆ.

ಕರ್ನಾಟಕದ ರಾಜಕಾರಣದಲ್ಲಿ ಇಂಥ ಹಲವು ಪ್ರಯತ್ನಗಳು ಆಗಿಹೋಗಿವೆ. ವ್ಯಕ್ತಿ ಪ್ರತಿಷ್ಠೆಯ ಮೇಲಾಟ, ಬದಲಾದ ರಾಜಕೀಯ ವಿದ್ಯಮಾನಗಳೇ ಪ್ರೇರಿತವಾಗಿ ಹಲವು ಪಕ್ಷಗಳು ಹುಟ್ಟಿ, ತಮ್ಮ ವಿರೋಧಿಗಳ ವಿರುದ್ಧ ಸೆಣಸಿ, ಅಷ್ಟೇ ವೇಗವಾಗಿ ಅಸುನೀಗಿವೆ. ಯಾವ್ಯಾವುದೋ ಮೂಲದಿಂದ ಲೂಟಿ ಹೊಡೆದ ಹಣವನ್ನು ನೀರಿನಂತೆ ಚೆಲ್ಲಿ, ರಾಜಕೀಯ ಪ್ರಾಬಲ್ಯ ಸಾಧಿಸಲೆತ್ನಿಸಿ ಮಣ್ಣು ಮುಕ್ಕಿದವರೂ ಇದ್ದಾರೆ. ನಾಡು ನುಡಿ, ನೆಲ ಜಲ, ದೀನದಲಿತರ ಪರ ಕಾಳಜಿ, ಸೈದ್ಧಾಂತಿಕ ಬದ್ಧತೆಯ ರಾಜಕಾರಣ ಮಾಡಿ, ರಾಜಕೀಯವಾಗಿ ಸೋತರೂ ಉದ್ದೇಶ ಈಡೇರಿಕೆಯಲ್ಲಿ ಗೆದ್ದ ಪರ್ಯಾಯ ರಾಜಕೀಯ ಪ್ರಯೋಗಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಈಗ ಹುಟ್ಟಿರುವ ಎರಡು ಪಕ್ಷಗಳು, ಅವು ಹುಟ್ಟಿದ ಸಂದರ್ಭ, ಕಾರಣವಾದ ಒತ್ತಡಗಳು, ಸಾರಥಿಗಳ ‘ಸಿನಿಮೀಯ’ ನಡೆ- ನುಡಿಯನ್ನು ಗಮನಿಸಿದಾಗ ಇವು ಮುಂದೆ ಏನಾದಾವು ಎನ್ನುವುದನ್ನು ಈಗಲೇ ಊಹಿಸುವುದು ಕಷ್ಟ.

ಉಪೇಂದ್ರ ತಮ್ಮದೇ ವಿಭಿನ್ನ ಮ್ಯಾನರಿಸಂ ಮೂಲಕ ಸಿನಿಮಾ ರಂಗದಲ್ಲಿ ಮಿಂಚಿದ ನಟ, ನಿರ್ದೇಶಕ. ಹೊಸ ಪಕ್ಷ ಘೋಷಣೆ ಸಂದರ್ಭ ತೊಟ್ಟ ಖಾಕಿ ಉಡುಗೆ, ‘ಬುದ್ಧಿವಂತಿಕೆ’ ಯ ಮಾತು ಸಹಿತ ಅವರ ಹೊರ ಚಹರೆಗಳೆಲ್ಲ ಸಿನಿಮೀಯವಾಗೇ ಇದ್ದವು. ಆದರೆ, ತಮಿಳುನಾಡು, ಆಂಧ್ರಪ್ರದೇಶದಂತೆ ಕರ್ನಾಟಕದಲ್ಲಿ ತಾರಾ ವರ್ಚಸ್ಸಿನ ಮೇಲೆ ರಾಜಕಾರಣ ಕಟ್ಟುವುದು ಸಾಧ್ಯವಿಲ್ಲ ಎನ್ನುವುದು ಈಗಾಗಲೇ ನಿರೂಪಿತ ಸತ್ಯ. “ಭೂ ಕಬಳಿಕೆಯ ಆರೋಪ ಹೊತ್ತು ನ್ಯಾಯಾಂಗದ ಕಟಕಟೆಯಲ್ಲಿ ನಿಂತು, ತಾಂತ್ರಿಕ ಕಾರಣದಿಂದಷ್ಟೇ ಸದ್ಯಕ್ಕೆ ನಿರಪರಾಧಿ ಎನ್ನಿಸಿಕೊಂಡ ಉಪೇಂದ್ರ, ತಾವೇ ರಾಜಕೀಯ ಪಕ್ಷ ಕಟ್ಟಿ ಇನ್ನೆಂಥ ಸ್ವಚ್ಛ ರಾಜಕಾರಣ ಮಾಡಿಯಾರು?’’ ಎನ್ನುವ ಎಸ್ ಆರ್ ಹಿರೇಮಠರ ಪ್ರಶ್ನೆ ಕೂಡ ಗಮನಾರ್ಹ.

ಅನುಪಮಾ ಶೆಣೈ

ಇನ್ನು, ಪೊಲೀಸ್ ಅಧಿಕಾರಿಯಾಗಿದ್ದು, ರಾಜಕೀಯ ಷಡ್ಯಂತ್ರದ ಭಾಗವಾಗಿ ನಡೆದ ವರ್ಗಾವಣೆಯನ್ನು ಖಂಡಿಸಿ ಖಾಕಿ ಕಳಚಿ, ಉನ್ನತ ಅಧಿಕಾರಸ್ಥರ ವಿರುದ್ಧ ಸಿಡಿದೆದ್ದವರು ಅನುಪಮಾ ಶೆಣೈ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸುವ ಗುರಿ ಹೊತ್ತು ಹಲವು ಪಕ್ಷ, ಸಂಘಟನೆಗಳನ್ನು ಎಡತಾಕಿದ್ದ ಅವರಿಗೆ ಎಲ್ಲೂ ಪೂರಕ ಸ್ಪಂದನೆ ಸಿಗಲಿಲ್ಲವಂತೆ. ಸಿಎಂ ಮತ್ತು ಸಚಿವರ ವಿರುದ್ಧ ಬಂಡೆದ್ದ ಸಂದರ್ಭ ಹಿನ್ನೆಲೆಯಲ್ಲಿ ನಿಂತು ಉಬ್ಬಿಸಿದ ಹಿತಾಸಕ್ತಿಗಳು ನಂತರ ನಡುನೀರಿನಲ್ಲಿ ಕೈಬಿಟ್ಟಿದ್ದರ ಅರಿವೂ ಅವರಿಗಿದೆ. ಆದ್ದರಿಂದಲೇ ತಮ್ಮನ್ನು ಪೀಡಿಸಿದ ರಾಜಕೀಯ ವ್ಯವಸ್ಥೆಯನ್ನು, ಆ ವ್ಯವಸ್ಥೆಯ ಒಳಹೊಕ್ಕೇ ದುರಸ್ತಿ ಮಾಡಬೇಕೆನ್ನುವ ಉಮೇದಿನಲ್ಲಿ ಸ್ವಂತ ರಾಜಕೀಯ ಪಕ್ಷ ಕಟ್ಟಿ, 80 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಪ್ರಕಟಣೆ ಮಾಡಿದ್ದಾರೆ. ಇವರ ಹಿಂದೆ ಪ್ರಬಲರಿದ್ದಾರಾ? ಹಣ-ಜಾತಿ ಸಹಿತ ಯಾವುದೇ ಹಿಂಬಲ ಇಲ್ಲದೆ ಹೇಗೆ ಸೆಣಸುತ್ತಾರೆ ಎನ್ನುವುದು ಸದ್ಯದ ಕುತೂಹಲ.

ದೇವರಾಜ ಅರಸು

ಮೇಲೆ ಪ್ರಸ್ತಾಪಿಸಿದಂತೆ, ವ್ಯಕ್ತಿ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಇಂಥ ಹಲವು ರಾಜಕೀಯ ಸೆಣಸುಗಳು ನಡೆದುಹೋಗಿವೆ. ಇಂದಿರಾ ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ದೇವರಾಜ ಅರಸು ಅವರು ‘ಅರಸು ಸಂಯುಕ್ತ ಪಕ್ಷ’ ಕಟ್ಟಿದ್ದರು. ಅರಸು ಮತ್ತು ಎಸ್ ಬಂಗಾರಪ್ಪ ನೇತೃತ್ವದಲ್ಲಿ ‘ಕರ್ನಾಟಕ ಕ್ರಾಂತಿರಂಗ’ ಉದಯಿಸಿತ್ತು. ನಂತರ ಬಂಗಾರಪ್ಪ ‘ಕರ್ನಾಟಕ ವಿಕಾಸ ಪಕ್ಷ’ ಮತ್ತು ‘ಕರ್ನಾಟಕ ಕಾಂಗ್ರೆಸ್ ಪಾರ್ಟಿ’ ಎಂಬ ಮತ್ತೆರಡು ಪಕ್ಷಗಳ ಉದಯಕ್ಕೂ ಕಾರಣರಾಗಿದ್ದರು. ಈ ಮಧ್ಯೆ, ಜನತಾ ಪರಿವಾರದಿಂದ ಸಿಡಿದ ರಾಮಕೃಷ್ಣ ಹೆಗಡೆ ಲೋಕಶಕ್ತಿಯನ್ನು ಹುಟ್ಟುಹಾಕಿದ್ದರು. ಬಿಜೆಪಿಯಿಂದ ಬಂಡೆದ್ದ ಯಡಿಯೂರಪ್ಪ ‘ಕೆಜೆಪಿ’, ಶ್ರೀರಾಮುಲು ‘ಬಿಎಸ್ಆರ್’ ಕಾಂಗ್ರೆಸ್, ವಿಜಯ ಸಂಕೇಶ್ವರ ‘ಕನ್ನಡ ನಾಡು ಪಾರ್ಟಿ’ಯನ್ನು ಕಟ್ಟಿ, ಮತ್ತೆ ಮಾತೃಪಕ್ಷಕ್ಕೇ ಮರಳಿದ್ದು ಇತ್ತೀಚಿನ ದಶಕಗಳ ವಿದ್ಯಮಾನ. ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್, ಹೊಟ್ಟೆ ಪಕ್ಷದ ರಂಗಸ್ವಾಮಿ, ಮಕ್ಕಳ ಪಕ್ಷದ ಅಶೋಕ ಖೇಣಿಯಂತವರು ಏಕಾಂಗಿ ಪಕ್ಷ ರಾಜಕಾರಣ ಮಾಡಿದ್ದೂ ಇದೆ.

ದೇವನೂರ ಮಹಾದೇವ

ಶಕ್ತಿ ರಾಜಕೀಯದ ಇಂಥ ವಿಫಲ ಪ್ರಯತ್ನಗಳಾಚೆಗೆ, ಪರ್ಯಾಯ ರಾಜಕೀಯ ಶಕ್ತಿ ಕಟ್ಟಿ, ಬೆಳೆಸುವ ಪ್ರಯತ್ನ ಮಾಡಿದವರೂ ಅನೇಕರಿದ್ದಾರೆ. ಗೋಕಾಕ್ ಚಳವಳಿ ನಂತರ ಕನ್ನಡದ್ದೇ ಒಂದು ಪಕ್ಷ ಕಟ್ಟುವ ಅನೇಕರ ಹಂಬಲದ ಉತ್ಪನ್ನವಾಗಿದ್ದು ‘ಕನ್ನಡ ದೇಶ’ ಪಕ್ಷ. ಚಂದ್ರಶೇಖರ ಪಾಟೀಲ್, ಎ ಕೆ ಸುಬ್ಬಯ್ಯ, ಅಶೋಕ್ ಮುಂತಾದವರು ಇದರ ಮುಂಚೂಣಿಯಲ್ಲಿದ್ದರು. ಪಿ ಲಂಕೇಶ್ ಸಮಾನಮನಸ್ಕರೊಂದಿಗೆ ಸೇರಿ ‘ಪ್ರಗತಿ ರಂಗ’ ಕಟ್ಟಿ ರಾಜ್ಯ ಸುತ್ತಿದ್ದು ಆರೋಗ್ಯಕರ ರಾಜಕೀಯ ಪ್ರಜ್ಞೆಯ ವಿಸ್ತರಣೆಗೆ ಪೂರಕವಾಯಿತು. ಎಂ ಡಿ ನಂಜುಂಡಸ್ವಾಮಿ ರೈತ ಹೋರಾಟಕ್ಕೆ ರಾಜಕೀಯ ಬಲ ತುಂಬಿ, ಶಾಸನಸಭೆಗೂ ಪ್ರವೇಶಿಸಿದರು. ಬಗ್ಗಡಗೊಂಡ ರಾಜಕೀಯವನ್ನು ತಿಳಿಗೊಳಿಸುವ ಆಶಯದಲ್ಲಿ ಉದಯಿಸಿದ ಮತ್ತೊಂದು ಪಕ್ಷ ‘ಸರ್ವೋದಯ ಕರ್ನಾಟಕ.‘ ದಲಿತ ಮತ್ತು ರೈತ ಸಂಘಟನೆಗಳನ್ನು ಬೆಸೆದು, ರಾಜ್ಯ ರಾಜಕೀಯದಲ್ಲಿ ವಿವೇಕಯುತ ಬದಲಾವಣೆ ತರಬೇಕೆಂದು ಹಂಬಲಿಸಿದ ಸಾಹಿತಿ ದೇವನೂರ ಮಹಾದೇವ, ಕಳೆದ ಫೆಬ್ರವರಿಯಲ್ಲಿ ಅದನ್ನು ‘ಸ್ವರಾಜ್ ಇಂಡಿಯಾ’ದಲ್ಲಿ ವಿಲೀನಗೊಳಿಸಿ, ಮೂಲ ಆಶಯವನ್ನು ಕಾಪಿಟ್ಟಿದ್ದಾರೆ.

ಎಸ್ ಆರ್ ಹಿರೇಮಠ

‘ಜನಾಂದೋಲನಗಳ ಮಹಾಮೈತ್ರಿ’ ಈಗ ಸುದ್ದಿಯಲ್ಲಿರುವ ಇನ್ನೊಂದು ಸುಧಾರಣಾ ರಾಜಕೀಯದ ಪ್ರಯತ್ನ. ಬಳ್ಳಾರಿ ಗಣಿಧಣಿಗಳು ಸಹಿತ ರಾಜ್ಯದ ಹಲವು ರಾಜಕಾರಣಿಗಳ ಹಣದ ಸೊಕ್ಕನ್ನು ತುಸುವಾದರೂ ಮಣಿಸಿದ ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ ನೇತೃತ್ವದ ‘ಜನ ಸಂಗ್ರಾಮ ಪರಿಷತ್’ ಆದಿವಾಸಿಗಳು, ಮಹಿಳೆಯರು, ರೈತರು ಮತ್ತು ದಲಿತರ ಹಿತಕ್ಕಾಗಿ ಕೆಲಸ ಮಾಡುತ್ತಿರುವ ವಿವಿಧ 24 ಸಂಘಟನೆಗಳನ್ನು ಮಹಾಮೈತ್ರಿಯಡಿ ತಂದು, ಸ್ಪಷ್ಟ ರಾಜಕೀಯ ನಿರ್ಧಾರ ತಳೆಯುವ ಪ್ರಯತ್ನ ನಡೆಸಿದೆ. ಮಹಾಮೈತ್ರಿ, ಸ್ವರಾಜ್ ಇಂಡಿಯಾ, ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳನ್ನು ಏಕಸೂತ್ರದಡಿ ತಂದು ಚುನಾವಣಾ ರಾಜಕಾರಣ ಮಾಡುವ ಯತ್ನವೂ ಚಾಲ್ತಿಯಲ್ಲಿದೆ.

ವರ್ತೂರು ಪ್ರಕಾಶ್

ಈ ಮಧ್ಯೆ, ಚುನಾವಣಾ ವರ್ಷದಲ್ಲಿ ಅಸ್ತಿತ್ವಕ್ಕೆ ಬಂದು,ಮಾಧ್ಯಮಗಳ ಮೂಲಕ ಪ್ರಚಾರ ಪಡೆದು ಮತಸಮರದ ಹೊಸ್ತಿಲಲ್ಲಿ ‘ಗಾಳಿ ಬೀಸಿದ ಕಡೆಗೆ ತೂರಿಕೊಳ್ಳುವ’ ಲಾಭಕೋರ ರಾಜಕೀಯ ಚಾಳಿಯೂ ಹೆಚ್ಚಿದೆ. ಕರ್ನಾಟಕದಲ್ಲೀಗ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕದನ ಕಣವನ್ನು ಹುರಿಗೊಳಿಸಿಕೊಳ್ಳುತ್ತಿವೆ. ಉಪೇಂದ್ರ, ಅನುಪಮಾ ಹೊಸ ಪಕ್ಷ ಘೋಷಿಸಿದ ಬೆನ್ನಿಗೇ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ‘ನಮ್ಮ ಕಾಂಗ್ರೆಸ್’ಎನ್ನುವ ಪಕ್ಷ ಕಟ್ಟಿ, ಕೆಲವು ಕ್ಷೇತ್ರಗಳಲ್ಲಿ ಕಣಕ್ಕಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಮತ-ಧರ್ಮ ಓಲೈಕೆ, ಹಣ, ಜಾತಿ ಮೇಲಾಟಗಳೇ ಸೋಲು-ಗೆಲುವನ್ನು ನಿಯಂತ್ರಿಸುವುದು ವಾಸ್ತವವಾದರೂ, ಆರಂಭಶೂರತ್ವ ತೋರುವ ನವನಾಯಕರ ತಂತ್ರಗಾರಿಕೆ ಏನಿದ್ದೀತು, ಭವಿಷ್ಯದಲ್ಲಿ ಯಾರು, ಯಾರಿಗೆ ದಾಳವಾಗಿ ಪರಿವರ್ತನೆ ಗೊಳ್ಳುತ್ತಾರೆಂದು ಈಗಲೇ ಹೇಳುವುದು ಕಷ್ಟ.

ಉದ್ದೇಶಗಳೇನೇ ಇರಲಿ, ಮೇಲ್ನೋಟಕ್ಕಿವು ಸರಣಿ ವೈಫಲ್ಯಗಳೆನಿಸಿದರೂ, ರಾಜಕೀಯ ನಡೆ-ನುಡಿ ಕಾಲಕಾಲಕ್ಕೆ ಬದಲಾಗಿದ್ದರಲ್ಲಿ, ಜನರಿಗೆ ಭಿನ್ನ ಆಯ್ಕೆಗಳನ್ನು ಕಲ್ಪಿಸಿದ್ದರಲ್ಲಿ ಈ ಎಲ್ಲ ಹೊರಳುಹಾದಿಯ ಪ್ರಯತ್ನಗಳ ಕೊಡುಗೆ ಮಹತ್ವದ್ದು. ಆಗಾಗ ತರಂಗಗಳು ಏಳದಿದ್ದಲ್ಲಿ ರಾಜಕೀಯದ ಕೊಳ ಮತ್ತಷ್ಟು ಕಲುಷಿತಗೊಳ್ಳುತ್ತಿತ್ತು. ಶಕ್ತಿ ರಾಜಕಾರಣ ಮೂಗುದಾರ ಕಿತ್ತ ತೊಂಡು ಗೂಳಿಯಂತೆ ವರ್ತಿಸುತ್ತಿತ್ತು. ನಿರಂತರ ಪ್ರತಿರೋಧ ಸೃಜಿಸದಿದ್ದರೆ, ಅದು ಸಣ್ಣ ಮೀನುಗಳನ್ನು ನುಂಗಿ ನೊಣೆಯುವ ಬೃಹತ್ ತಿಮಿಂಗಿಲ ಸ್ವರೂಪಿಯಾಗಿರುತ್ತಿತ್ತು. ಇಂಥ ತಿಮಿಂಗಿಲ ರಾಜಕೀಯವನ್ನೂ ಮಣಿಸುವ ಹೊಸ ದಾರಿಗಳು ಅಲ್ಲಲ್ಲಿ ಹೆಜ್ಜೆ ಮೂಡಿಸುತ್ತಿರುವ ಕಾರಣಕ್ಕೆ ಯಾವುದೇ ಹೊಸ ರಾಜಕೀಯ ಪ್ರಯತ್ನಗಳನ್ನು ಆಶಾದಾಯಕ ಎಂದೇ ಪರಿಗಣಿಸಬಹುದು.

ತಮ್ಮ ರಾಜಕೀಯ ನಡೆ ಕುರಿತು ಹೊಸ ಪಕ್ಷದ ಸಾರಥಿಗಳು ಏನು ಮಾಡಲಿದ್ದಾರೆ, ಯಾವ ರೀತಿ ಆಲೋಚನೆ ಮಾಡುತ್ತಿದ್ದಾರೆ ಎಂಬುದನ್ನು ಅವರ ಈ ಹೇಳಿಕೆಗಳೇ ಬಿಂಬಿಸುತ್ತಿವೆ.

ಹೊಸ ಪಕ್ಷ ಕಟ್ಟುವ ಯಾರಿಗೇ ಆದರೂ, ಸ್ಪಷ್ಟತೆ, ದೂರದೃಷ್ಟಿ, ಕಟಿಬದ್ಧತೆ ಇರಬೇಕು. ವೈಯಕ್ತಿಕವಾಗಿ ಸ್ವಚ್ಛ ಚಾರಿತ್ರ್ಯವನ್ನು ಹೊಂದಿರಬೇಕು. ನಟ ಉಪೇಂದ್ರ ಸ್ವತಃ ಸರ್ಕಾರದ ಭೂಮಿಯನ್ನು ಕಬಳಿಸಿದ ಆರೋಪ ಹೊತ್ತಿದ್ದು, ಮುಂದೆ ಯಾವತ್ತಾದರೂ ಬೆಲೆ ತೆರಲೇ ಬೇಕಾಗುತ್ತೆ. ತಮ್ಮ ಜೀವನದೊಳಗೆ ಸ್ವಚ್ಛವಾಗಿರದವರು ರಾಜ್ಯವನ್ನು; ರಾಜಕೀಯವನ್ನು ಹೇಗೆ ಸ್ವಚ್ಚಗೊಳಿಸುತ್ತಾರೆ? ಕರ್ನಾಟಕದಲ್ಲಿನ ‘ಜೆಸಿಬಿ’  (ಜೆಡಿಎಸ್,ಕಾಂಗ್ರೆಸ್, ಬಿಜೆಪಿ) ಪಕ್ಷಗಳು ಜನಪರವಾಗಿ, ಸಂವಿಧಾನದ ಚೌಕಟ್ಟಿನೊಳಗೆ ಅರ್ಥಪೂರ್ಣವಾಗಿ ಕೆಲಸ ಮಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಕೇಂದ್ರದ ಆಡಳಿತ ಪಕ್ಷ ಮಾನವಾಭಿವೃದ್ಧಿ , ಶ್ರಮಜೀವಿಗಳ ಹಿತ ಮುಂತಾದ ವಿಷಯಗಳತ್ತ ಲಕ್ಷ್ಯ ವಹಿಸದೆ ಬಿಲಿಯನೇರ್ ಗಳ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಇದು ಸಂವಿಧಾನ ವಿರೋಧಿ.
ಎಸ್‌ ಆರ್‌ ಹಿರೇಮಠ, ಜನಸಂಗ್ರಾಮ ಪರಿಷತ್‌ ರೂವಾರಿ
ನನ್ನ ಮಟ್ಟಿಗೆ ರಾಜಕೀಯ ಎನ್ನುವುದು ಆತ್ಮದ ಕರೆ. ನನ್ನ ಓದು, ತಿಳಿವಳಿಕೆ, ವೈಚಾರಿಕತೆ ಮತ್ತು ದೀರ್ಘಾವಧಿಯ ಒಳಗುದಿಯಿಂದ ರೂಪುಗೊಂಡ ಬದ್ಧತೆಯೇ ಇದರ ಹಿಂದಿನ ಚಾಲಕ ಶಕ್ತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನಾದರೂ ಒಳಿತಿನ ನಿರ್ಧಾರವಾಗಬೇಕೆಂದರೆ ರಾಜಕೀಯದ ಪಾತ್ರವೇ ಪ್ರಮುಖ. ಅಯೋಗ್ಯರು, ಅನರ್ಹರನ್ನು ಆಳಲು ಬಿಟ್ಟು, ನಮ್ಮಂತಹವರು ತೆರೆಯ ಹಿಂದೆ ನಿಲ್ಲುವುದು ಬೇಜವಾಬ್ದಾರಿತನ. ಆದ್ದರಿಂದಲೇ, ಸೋಲು-ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ಆರಂಭಿಕ ಬದ್ಧತೆಯಿಂದಲೇ ಮುನ್ನಡೆಯುತ್ತಿದ್ದೇನೆ. ಮೂರು ಚುನಾವಣೆಯಲ್ಲಿ ಗೆಲುವು ಸಾಧ್ಯವಾಗದಿದ್ದರೂ, ನಾವು ಎತ್ತುವ ವಿಷಯಗಳು ಪ್ರಚಲಿತಕ್ಕೆ ಬಂದು, ಅಧಿಕಾರಸ್ಥರನ್ನು ಒತ್ತಡಕ್ಕೆ ಸಿಲುಕಿಸಿ ಸಫಲತೆ ಕಂಡಿವೆ. ಈ ವಿಷಯದಲ್ಲಿ ನಮ್ಮದು ಗೆಲುವಿನ ರಾಜಕಾರಣ.
ರವಿಕೃಷ್ಣಾರೆಡ್ಡಿ, ಲಂಚಮುಕ್ತ ಕರ್ನಾಟಕದ ಸಂಚಾಲಕ
ಹಣ, ಜಾತಿ ಬಲವಿದ್ದರಷ್ಟೆ ರಾಜಕೀಯ ಸಾಧ್ಯ ಎನ್ನುವ ಈಗಿನ ಸ್ಥಿತಿಯನ್ನು ಸಂಪೂರ್ಣ ಬದಲಿಸುವುದು ನಮ್ಮ ಪರಿಕಲ್ಪನೆ. ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ನಮ್ಮಿಂದಲೇ ಬದಲಾವಣೆ ಶುರುವಾಗಬೇಕು. ಎಲ್ಲಾ 224 ಕ್ಷೇತ್ರಗಳಲ್ಲೂ ಕೆಪಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ರಾಜಕಾರಣ ಮಾಡಿದರೆ ಶತೃಗಳು ಸೃಷ್ಟಿಯಾಗುತ್ತಾರೆ; ಪ್ರಜಾಕೀಯ ಮಾಡಿದರೆ ಮಿತ್ರರಾಗುತ್ತಾರೆ. ರಾಜ್ಯದ ಜನ ರಾಜಕೀಯವಾಗಿ ಪ್ರಜ್ಞಾವಂತರಿದ್ದು, ಅವರಿಗಾಗಿಯೇ ಪಕ್ಷ ಸ್ಥಾಪಿತವಾಗಿದೆ. ನಮ್ಮನ್ನು ಗೆಲ್ಲಿಸುವ ಮೂಲಕ ಅವರೂ ಗೆಲ್ಲುತ್ತಾರೆ. ನಾವು ನಾಯಕರಲ್ಲ, ಸೇವಕರೂ ಅಲ್ಲ. ನಾವು ಕಾರ್ಮಿಕರು. ಆದ್ದರಿಂದಲೇ ಖಾಕಿ ವಸ್ತ್ರ ನಮ್ಮ ಐಡೆಂಟಿಟಿ.
ಉಪೇಂದ್ರ, ಕೆಪಿಜೆಪಿ ಸಾರಥಿ
ಉಪೇಂದ್ರ ಮತ್ತು ಅನುಪಮಾ ಅವರ ಪಕ್ಷಗಳು ಬಿಜೆಪಿ, ಕಾಂಗ್ರೆಸ್ ಪಕ್ಷಗಳ ‘ಬಿ’ ಟೀಮ್ ಇದ್ದಂತೆ. ನಮ್ಮದು ಭ್ರಷ್ಟಾಚಾರ, ಕೋಮುವಾದದ ವಿರುದ್ಧದ ಸಮರ. ನವ ಉದಾರೀಕರಣ ನೀತಿಯಿಂದ ಬಾಧಿತರಾದ ದಲಿತರು, ಆದಿವಾಸಿಗಳು,ರೈತರು ಮತ್ತು ಮಹಿಳೆಯರ ಹಿತಕ್ಕಾಗಿ ಹೋರಾಡುತ್ತಿರುವ 24 ಸಂಘಟನೆಗಳನ್ನು ‘ಜನಾಂದೋಲನಗಳ ಮಹಾಮೈತ್ರಿ’ಯಡಿ ಒಂದು ವೇದಿಕೆಗೆ ತಂದಿದ್ದು, ಜನ ವಿರೋಧಿ ನೀತಿಗಳ ವಿರುದ್ಧ ರಾಜಕೀಯ ಹೋರಾಟ ನಡೆಸಲು ಉದ್ದೇಶಿಸಿದ್ದೇವೆ. ನಮ್ಮದೇ ಆದ ‘ಜನತಾ ಪ್ರಣಾಳಿಕೆ’ ರೂಪಿಸಿ, ಅದನ್ನು ಒಪ್ಪಿಕೊಳ್ಳುವ ಪಕ್ಷಗಳನ್ನು ಬೆಂಬಲಿಸುವ ಮತ್ತು ಚುನಾವಣಾ ಮೈತ್ರಿ ಮಾಡಿಕೊಳ್ಳುವ ಸಂಬಂಧ ಸ್ವರಾಜ್ ಇಂಡಿಯಾ ಮತ್ತು ಎಲ್ಲ ಎಡಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ.
ರಾಘವೇಂದ್ರ ಕುಷ್ಟಗಿ, ಜನಾಂದೋಲನಗಳ ಮಹಾಮೈತ್ರಿ ಸಂಚಾಲಕ
ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೊಸ ಪಕ್ಷ ಕಟ್ಟಿದ್ದೇನೆ. ಕೃಷಿ, ಆರೋಗ್ಯ, ಕಾನೂನು- ಸುವ್ಯವಸ್ಥೆ, ಸಾರಿಗೆ, ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ. ನಾನೂ ಸ್ಪರ್ಧಿಸುತ್ತೇನೆ. ನೌಕರರು ಮತ್ತು ಮಹಿಳೆಯರಿಗಾದ ಅನ್ಯಾಯದ ವಿರುದ್ಧದ ಹೋರಾಟ ಮುಂದುವರಿಯುತ್ತದೆ.
ಅನುಪಮಾ ಶೆಣೈ, ಭಾರತೀಯ ಜನಶಕ್ತಿ ಕಾಂಗ್ರೆಸ್ ಸ್ಥಾಪಕಿ
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More