ಶೋಭಾ ಓಟಕ್ಕೆ ತಡೆಹಾಕಲು ಬಿಎಸ್‌ವೈಗೆ ಕರೆ ಮಾಡಿದ್ದರೇ ಜಾವಡೇಕರ್?

ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆಯವರನ್ನು ಪರಿವರ್ತನಾ ಯಾತ್ರೆಯ ಉಸ್ತುವಾರಿಯಿಂದ ಹಿಂದೆ ಸರಿಸುವ ಗಂಭೀರ ಪ್ರಯತ್ನವನ್ನು ಹೈಕಮಾಂಡ್‌ ಮಾಡಿದ್ದ ಮಾಹಿತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ. ಈ ಬೆಳವಣಿಗೆಯ ಸುತ್ತಲಿನ ಆಸಕ್ತಿಕರ ವಿವರ, ರಾಜಕೀಯ ಲೆಕ್ಕಾಚಾರ ಇಲ್ಲಿದೆ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಅವರು ಸ್ಪರ್ಧಿಸದೆ ಇರಲು ತಮ್ಮ ಆಪ್ತ ವಲಯದಲ್ಲಿ ಚಿಂತಿಸಿದ್ದಾರೆ ಎನ್ನುವ ವರದಿಯನ್ನು ‘ದಿ ಸ್ಟೇಟ್‌’ ಇತ್ತೀಚೆಗೆ ಪ್ರಕಟಿಸಿತ್ತು. ಈ ಸಂಬಂಧ ಪಕ್ಷದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆಯವರು, “ಈ ಸುದ್ದಿ ಕಾಂಗ್ರೆಸ್‌ ನಾಯಕರು ನಡೆಸುತ್ತಿರುವ ಅಪಪ್ರಚಾರ,” ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಅತ್ತ ಶೋಭಾ ಅವರು ಹೇಳಿಕೆ ನೀಡಿದ ಬೆನ್ನಿಗೇ, ಬಿಜೆಪಿಯೊಳಗಿನ ಬೇಗುದಿಯ ಕುರಿತ ಮತ್ತಷ್ಟು ಆಸಕ್ತಿಕರ ಸಂಗತಿಗಳು ‘ದಿ ಸ್ಟೇಟ್‌’ಗೆ ಪಕ್ಷದ ಮೂಲಗಳಿಂದ ಲಭ್ಯವಾಗಿವೆ.

ರಾಜ್ಯ ಬಿಜೆಪಿಯೊಳಗೆ ಅಸಮಾಧಾನಗಳು ಹೊಸದೇನೂ ಅಲ್ಲ, ಬಣ ರಾಜಕೀಯ ಎನ್ನುವುದನ್ನು ಪಕ್ಷದೊಳಗೆ ಈವರೆಗೆ ಸಂಪೂರ್ಣವಾಗಿ ತಹಬದಿಗೆ ತರಲು ಸಾಧ್ಯವೂ ಅಗಿಲ್ಲ. ಪಕ್ಷದೊಳಗಿನ ಅಂತರಿಕ ಬೇಗುದಿ ಸ್ಫೋಟಗೊಂಡಾಗಲೆಲ್ಲ ಸಾಮಾನ್ಯವಾಗಿ ಒಂದು ಹೆಸರು ಮುನ್ನೆಲೆಗೆ ಬರುತ್ತದೆ, ಅದು ಪಕ್ಷದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆಯವರದ್ದು. ಪಕ್ಷದ ಕುರಿತಾದ ಯಡಿಯೂರಪ್ಪನವರ ನೀತಿನಿರ್ಧಾರಗಳ ಹಿಂದೆ ಶೋಭಾ ಅವರ ಪ್ರಭಾವವಿರುತ್ತದೆ. ಶೋಭಾ ಅವರದ್ದು ಪಕ್ಷದ ಮೇಲೆ ಏಕಸ್ವಾಮ್ಯ ಸಾಧಿಸುವಂಥ ಗುಣ ಎಂಬುದಾಗಿ ಪಕ್ಷದೊಳಗಿನ ಅನೇಕ ಮುಖಂಡರು ಆಗಿಂದಾಗ್ಗೆ ಅಸಮಾಧಾನ ಹೊರಹಾಕುತ್ತಿರುತ್ತಾರೆ. ಪರಿವರ್ತನಾ ಯಾತ್ರೆಯ ಹೊಣೆಗಾರಿಕೆಯನ್ನು ಶೋಭಾ ಕರಂದ್ಲಾಜೆಯವರಿಗೆ ವಹಿಸಿದ ಸಂದರ್ಭದಲ್ಲಿ ಹಾಗೂ ಆನಂತರ ಅದನ್ನು ಸಂಘಟಿಸಲು ಪೂರ್ವಭಾವಿಯಾಗಿ ತಯಾರಿ ನಡೆಯುತ್ತಿದ್ದ ವೇಳೆ ಶೋಭಾ ಅವರ ವರ್ತನೆ ಪಕ್ಷದ ಅನೇಕ ಹಿರಿಯ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಇದು ಗಂಭೀರ ಸ್ವರೂಪ ಪಡೆದಾಗ ಈ ಬಗ್ಗೆ ತಿಳಿಹೇಳುವ ಪ್ರಯತ್ನವನ್ನು‌ ಬಿ ಎಸ್‌ ಯಡಿಯೂರಪ್ಪನವರಿಗೆ ಹೈಕಮಾಂಡ್ ಮಾಡಿತಾದರೂ ಅದು ನಿರೀಕ್ಷಿತ ಪರಿಣಾಮ ಬೀರಲಿಲ್ಲ ಎನ್ನುವ ಮಾಹಿತಿಯನ್ನು ಪಕ್ಷದ ಮೂಲಗಳು ತಿಳಿಸಿವೆ.

ಆನಂತರ ನಡೆದ ಬೆಳವಣಿಗೆಗಳು ಆಸಕ್ತಿಕರವಾಗಿವೆ. ಶೋಭಾ ಅವರ ವಿಚಾರದಲ್ಲಿ ಯಡಿಯೂರಪ್ಪನವರಿಗೆ ನೇರವಾಗಿಯೇ ಸಂದೇಶ ನೀಡುವುದು ಸೂಕ್ತವೆನ್ನುವ ತೀರ್ಮಾನಕ್ಕೆ ಪಕ್ಷದ ರಾಷ್ಟ್ರೀಯ ವರಿಷ್ಠರು ಬಂದರು ಎನ್ನಲಾಗಿದೆ. ಅದರಂತೆ, ಯಾತ್ರೆಯ ಉದ್ಘಾಟನೆಗೆ ಇನ್ನೇನು ಬೆರಳೆಣಿಕೆಯ ದಿನಗಳಿವೆ ಎನ್ನುವಾಗ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಹೊತ್ತಿರುವ ಪ್ರಕಾಶ್‌ ಜಾವಡೇಕರ್ ಅವರೇ ಯಡಿಯೂರಪ್ಪನವರಿಗೆ ನೇರವಾಗಿ ಈ ಸಂಬಂಧ ಕರೆ ಮಾಡಿದರು. ಅಮೆರಿಕ ಪ್ರವಾಸದಲ್ಲಿದ್ದ ಜಾವಡೇಕರ್ ಅಲ್ಲಿಂದಲೇ ಫೋನ್‌ ಕರೆ ಮಾಡಿ, “ಪಕ್ಷದೊಳಗಿನ ಅಸಮಾಧಾನವನ್ನು ಶಮನಗೊಳಿಸಬೇಕೆಂದರೆ ಶೋಭಾ ಕರಂದ್ಲಾಜೆಯವರನ್ನು ಈ ಹಂತದಲ್ಲಿ ಹಿಂದೆ ಸರಿಸಿ ಇತರ ನಾಯಕರಿಗೂ ಪರಿವರ್ತನಾ ಯಾತ್ರೆಯ ಸಂಘಟನೆಯಲ್ಲಿ ಅವಕಾಶ ಕಲ್ಪಿಸಿಕೊಡುವುದು ಸೂಕ್ತ.” ಎಂದು ಸೂಚಿಸಿದ್ದಾಗಿ ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.

ಈ ಅನಿರೀಕ್ಷಿತ ಕರೆಯಿಂದಾಗಿ ಪಕ್ಷದಲ್ಲಿ ಗಲಿಬಿಲಿಯ ವಾತಾವರಣ ಉಂಟಾಯಿತು. ಅದರಲ್ಲಿಯೂ, ಯಡಿಯೂರಪ್ಪನವರ ಆಪ್ತವಲಯದಲ್ಲಿ, ಈ ಹಂತದಲ್ಲಿ ಪಕ್ಷದ ವರಿಷ್ಠರ ಸೂಚನೆಯನ್ನು ಹೇಗೆ ನಿಭಾಯಿಸುವುದು ಎನ್ನುವ ಬಗ್ಗೆ ಸುದೀರ್ಘ ಮಂತ್ರಾಲೋಚನೆಗಳು ನಡೆದವು. ಕಡೆಗೆ, ಪಕ್ಷದ ರಾಜ್ಯದ ಉಸ್ತುವಾರಿ ಹೊತ್ತ ಮುರಳೀಧರ ರಾವ್‌ ಅವರ ಮುಖೇನ ಸೂತ್ರವೊಂದನ್ನು ವರಿಷ್ಠರಿಗೆ ತಲುಪಿಸಲಾಯಿತು. ಇದರ ಪ್ರಕಾರ, ಯಾತ್ರೆಯ ನಿರ್ವಹಣೆಯ ಹೊಣೆಯನ್ನು ಪಕ್ಷದ ನಾಲ್ಕೂ ಮಂದಿ ಪ್ರಧಾನ ಕಾರ್ಯದಶಿಗಳಿಗೆ ಹಂಚಿಕೆ ಮಾಡುವುದು; ಮೊದಲ ೨೦ ದಿನಗಳನ್ನು ಶೋಭಾ ನಿರ್ವಹಿಸುವುದು, ನಂತರದ ದಿನಗಳನ್ನು ಇತರರು ಕ್ರಮವಾಗಿ ನಿರ್ವಹಿಸುವುದು ಎನ್ನುವ ತೀರ್ಮಾನಕ್ಕೆ ಬರಲಾಯಿತು. ಈ ಮೂಲಕ ಗಂಭೀರ ಸ್ವರೂಪ ಪಡೆದಿದ್ದ ಅಸಮಾಧಾನದ ಪ್ರಕರಣಕ್ಕೆ ತೇಪೆ ಹಚ್ಚುವ ಕೆಲಸ ಮಾಡಲಾಯಿತು ಎನ್ನುತ್ತವೆ ಮೂಲಗಳು.

ಇದನ್ನೂ ಓದಿ : ವಿಧಾನಸಭೆ ಚುನಾವಣೆಗೆ ಸ್ಪರ್ಧಿಸದಿರಲು ಚಿಂತಿಸಿದ್ದಾರೆಯೇ ಯಡಿಯೂರಪ್ಪ?

ಆದರೆ, ಇಡೀ ಪ್ರಕರಣ ಇಷ್ಟಕ್ಕೇ ನಿಲ್ಲಲಿಲ್ಲ. ಒಮ್ಮೆ ವರಿಷ್ಠರ ಗಮನಕ್ಕೆ ಈ ಸೂತ್ರವನ್ನು ತಂದ ನಂತರ ಹೊಸದೊಂದು ತಂತ್ರವನ್ನು ಹೊಸೆಯಲಾಯಿತು. ಅದೆಂದರೆ, ಯಡಿಯೂರಪ್ಪನವರ ಆಪ್ತವಲಯದಲ್ಲಿ ಗುರುತಿಸಿಕೊಳ್ಳುವ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆದ ಮತ್ತೊಬ್ಬ ನಾಯಕ ಅರವಿಂದ ಲಿಂಬಾವಳಿಯವರನ್ನು ಯಾತ್ರೆಯ ನಿರ್ವಹಣೆಯ ಹೊರಗಿಟ್ಟು ಆ ಅವಧಿಯಲ್ಲಿಯೂ ಶೋಭಾ ಅವರೇ ಉಸ್ತುವಾರಿ ವಹಿಸುವುದು ಎನ್ನುವ ತಂತ್ರ ರೂಪುಗೊಂಡಿತು. ಇದಕ್ಕಾಗಿ ಅರವಿಂದ ಲಿಂಬಾವಳಿಯವರು ವಿಧಾನಸಭಾ ಅಧಿವೇಶನದಲ್ಲಿ ಉಪಸ್ಥಿತರಿದ್ದು, ರಾಜ್ಯ ಸರ್ಕಾರದ ವಿರುದ್ಧದ ವಾಗ್ದಾಳಿಯಲ್ಲಿ ಪಾಲ್ಗೊಳ್ಳುವುದು ಅವಶ್ಯ ಎಂದು ಬಿಂಬಿಸಲಾಯಿತು. ಆ ಮೂಲಕ ಯಾತ್ರೆಯ ಬಹುಭಾಗವನ್ನು ಶೋಭಾ ಅವರ ಉಸ್ತುವಾರಿಯಲ್ಲಿಯೇ ನಿರ್ವಹಿಸುವ ತಂತ್ರಗಾರಿಕೆಯನ್ನು ಮುಂದು ಮಾಡಲಾಯಿತು ಎನ್ನುತ್ತವೆ ಮೂಲಗಳು.

ಪರಿವರ್ತನಾ ಯಾತ್ರೆಯ ಮೊದಲ ಹಂತ ಮುಗಿದು ಎರಡನೆಯ ಹಂತ ಆರಂಭಗೊಂಡಿರುವ ಈ ಹೊತ್ತಿನಲ್ಲಿ ಇಡೀ ಪ್ರಕರಣ ಹೊರಬರುವುದರೊಂದಿಗೆ, ಯಾತ್ರೆಯ ಆರಂಭದಲ್ಲಿ ಉಂಟಾದ ಗೊಂದಲಗಳು, ಆನಂತರದ ದಿನಗಳಲ್ಲಿ ಪಕ್ಷದ ಮುಖಂಡರಲ್ಲಿ ಕಂಡುಬಂದ ನಿರುತ್ಸಾಹದ ಕುರಿತಾದ ಚರ್ಚೆಗೆ ಹೊಸ ಆಯಾಮ ದಕ್ಕಿದೆ. ಮುಂದಿನ ದಿನಗಳಲ್ಲಿ ಪಕ್ಷದ ರಾಜ್ಯ ನಾಯಕರೊಳಗಿನ ಅಸಮಾಧಾನಗಳನ್ನು ಬಗೆಹರಿಸುವಲ್ಲಿ ಹೈಕಮಾಂಡ್‌ ಎಷ್ಟರ ಮಟ್ಟಿಗೆ ಸಫಲವಾಗುವುದು ಎನ್ನುವುದರ ಮೇಲೆ ಯಶಸ್ಸಿನ ಲೆಕ್ಕಾಚಾರಗಳು ನಿಂತಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More