ಹಾರ್ದಿಕ್ ಪ್ರಶ್ನೆಗೆ ಉತ್ತರಿಸದ ಮೋದಿ, ಸರ್ದಾರ್ ಹಿಂದೆ ಅಡಗುತ್ತಿರುವುದೇಕೆ?

ಗುಜರಾತ್‌ ಚುನಾವಣಾ ಕಣ ದಿನ ಕಳೆದಂತೆ ರಂಗೇರುತ್ತಿದೆ. ಅಭಿವೃದ್ಧಿ ವಿಷಯ ಹಿಂದೆ ಸರಿದು ಇತಿಹಾಸವನ್ನು ಕೆದಕುವ ಕೆಲಸಗಳು ಆರಂಭ ಆಗಿವೆ. ಸ್ವತಃ ಪ್ರಧಾನಿ ಮೋದಿಯವರೇ ಇದರಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಒಂದೇ ದಿನ ಮೋದಿ, ರಾಹುಲ್, ಹಾರ್ದಿಕ್ ಸಮಾವೇಶ ಇದ್ದದ್ದು ಬುಧವಾರದ ವಿಶೇಷವಾಗಿತ್ತು

ಗುಜರಾತ್‌ನ ಸೌರಾಷ್ಟ್ರದಲ್ಲಿಂದು ಚುನಾವಣಾ ಬಿರುಸು ಭಾರಿ ಜೋರಾಗಿತ್ತು. ಪ್ರಧಾನಿ ಮೋದಿಯವರು ಇಲ್ಲಿ ನಾಲ್ಕು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದರೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದೇ ಪ್ರಾಂತ್ಯದಲ್ಲಿ ಮೂರು ಸಮಾವೇಶಗಳನ್ನು ಉದ್ದೇಶಿಸಿದ್ದಾರೆ. ಇದಿಷ್ಟೇ ಅಲ್ಲದೆ, ಪಟೇಲ್‌ ಸಮುದಾಯದ ಯುವಮುಖಂಡ ಹಾರ್ದಿಕ್ ಪಟೇಲ್ ಕೂಡ ಸೌರಾಷ್ಟ್ರದಲ್ಲಿ, ಅದೂ ಪ್ರಧಾನಿ ಮೋದಿಯವರು ಮಾತನಾಡಿದ ಸಮಾವೇಶವೊಂದರಿಂದ ಕೇವಲ ೩೦ ಕಿಮೀ ಅಂತರದಲ್ಲಿಯೇ ಪಟೇಲ್ ಸಮುದಾಯದ ಸಮಾವೇಶವೊಂದನ್ನು ಉದ್ದೇಶಿಸಿದ್ದು ಮಾತನಾಡಿದ್ದು ಮತ್ತೊಂದು ಹೈಲೈಟ್‌.

ತಮ್ಮ ಇಂದಿನ ಚುನಾವಣಾ ಪ್ರಚಾರದ ವೇಳೆ ಮೋದಿಯವರು ಬಿಜೆಪಿ ಸರ್ಕಾರ ಸೌರಾಷ್ಟ್ರಕ್ಕಾಗಿ ಏನು ಮಾಡಿದೆ ಎನ್ನುವುದನ್ನು ಹೇಳಿದರಾದರೂ, ಹೆಚ್ಚು ಮಾತನಾಡಿರುವುದು ಕಾಂಗ್ರೆಸ್ ಹೇಗೆ‌ ಸೌರಾಷ್ಟ್ರದ ಜನರ ಹಿತಾಸಕ್ತಿಯ ವಿರುದ್ಧವಾಗಿ ನಡೆದುಕೊಂಡಿದೆ ಎನ್ನುವುದರ ಬಗ್ಗೆ. ಅವರು ತಮ್ಮ ಇಂದಿನ ಭಾಷಣದಲ್ಲಿ ನೆಹರು, ಇಂದಿರಾ ಗಾಂಧಿಯವರನ್ನು ಉದ್ದೇಶಪೂರ್ವಕವಾಗಿ ಎಳೆದುತಂದಿದ್ದಾರೆ. ಇಂದಿರಾ ಗಾಂಧಿಯವರು ಮೋರ್ಬಿ ಪಟ್ಟಣವನ್ನು ಮೂಗಿಗೆ ಕರ್ಚೀಫ್‌ ಇಟ್ಟುಕೊಂಡು ಪ್ರವೇಶಿಸಿದ್ದರು ಎಂದು ನಾಟಕೀಯವಾಗಿ ಅಭಿನಯದ ಮೂಲಕ ತೋರಿಸಿದ್ದಾರೆ. “ಸರ್ದಾರ್ ಪಟೇಲ್ ಅವರು ಇಲ್ಲದೆ ಹೋಗಿದ್ದಲ್ಲಿ ಸೋಮನಾಥ ದೇವಾಲಯದ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ. ಈ ದೇಶದ ಮೊದಲ ಪ್ರಧಾನಮಂತ್ರಿಯವರು ಸೋಮನಾಥ ಮಂದಿರ ನಿರ್ಮಾಣಕ್ಕೆ ವಿರುದ್ಧವಾಗಿದ್ದರು. ದೇವಸ್ಥಾನದ ಉದ್ಘಾಟನೆಗೆ ರಾಜೇಂದ್ರ ಪ್ರಸಾದ್‌ ಅವರು ಬಂದಾಗ ನೆಹರು ಆ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು,” ಎಂದು ಇತಿಹಾಸವನ್ನು ತಮ್ಮ ಪರವಾಗಿ ದುಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. “ಇಂದು ಕಾಂಗ್ರೆಸ್‌ನ ಕೆಲ ನಾಯಕರು ಅದೇ ಸೋಮನಾಥ ದೇವಾಲಯಕ್ಕೆ ಭೇಟಿ ನೀಡುತ್ತಿರುವುದು ವಿಚಿತ್ರವೇ ಸರಿ,” ಎಂದು, ಪರೋಕ್ಷವಾಗಿ ರಾಹುಲ್‌ ಗಾಂಧಿಯವರು ಸೋಮನಾಥ ದೇವಾಲಯಕ್ಕೆ ಹೋಗಿದ್ದನ್ನು ಕುಟುಕಿದ್ದಾರೆ. ಮೋದಿಯವರು ಇಂದು ಸೌರಾಷ್ಟ್ರದ ಸಮಾವೇಶಗಳಲ್ಲಿ ಮಾಡಿರುವ ಭಾಷಣದಲ್ಲಿ ನರ್ಮದಾ ಅಣೆಕಟ್ಟೆಯ ಪ್ರಸ್ತಾಪವೂ ಬಂದಿದೆ. “ಸರ್ದಾರ್ ಪಟೇಲ್ ಅವರು ನರ್ಮದಾ ಅಣೆಕಟ್ಟು ನಿರ್ಮಿಸುವ ಬಗ್ಗೆ ಆ ಕಾಲಕ್ಕೇ ಕನಸಿದ್ದರು. ಆದರೆ ನೆಹರೂ ಮತ್ತು ಗಾಂಧಿ ಕುಟುಂಬ ಅದನ್ನು ಸಾಧ್ಯವಾಗದಂತೆ ಬಹುಕಾಲ ತಡೆಯಿತು,” ಎಂದು ಹರಿಹಾಯ್ದಿದ್ದಾರೆ.

ಇದಿಷ್ಟು ಒಂದೆಡೆಯಾದರೆ, ರಾಹುಲ್ ಗಾಂಧಿಯವರು ಸೋಮನಾಥ ದೇವಾಲಯಕ್ಕೆ ಹೋಗಿ ಪೂಜೆ ಮಾಡಿ ಬಂದ ನಂತರ ಅನೇಕ ಆರೋಪ ಪ್ರತ್ಯಾರೋಪಗಳು ನಡೆದವು. ದೇವಸ್ಥಾನದ ಪ್ರವೇಶ ಪಡೆಯಲು ‘ಹಿಂದೂಯೇತರರಿಗಾಗಿ ಇರಿಸಿದ್ದ ನೋಂದಣಿ’ ಪುಸ್ತಕದಲ್ಲಿ ರಾಹುಲ್ ಹೆಸರು ಸೇರಿಸಲಾಗಿತ್ತು ಎನ್ನುವ ಸುದ್ದಿ ಹಬ್ಬಿತು. ಮಾಧ್ಯಮಗಳು, ಗುಜರಾತ್‌ನ ಸ್ಥಳೀಯ ಬಿಜೆಪಿ ಮುಖಂಡರು ಈ ಬಗ್ಗೆ ದೊಡ್ಡದನಿಯಲ್ಲಿ ಸಣ್ಣ ಮಾತುಗಳನ್ನಾಡಿದರು. ಇತ್ತ, ಕಾಂಗ್ರೆಸ್‌ ರಾಹುಲ್‌ ಹಾಗೂ ಅಹಮದ್ ಪಟೇಲ್ ಅವರ ಜೊತೆ ದೇವಸ್ಥಾನ ಪ್ರವೇಶಿಸಿದ್ದ ಗುಂಪಿನಲ್ಲಿದ್ದ ಮಾಧ್ಯಮ ಸಮನ್ವಯಕಾರರಾದ ಮನೋಜ್ ತ್ಯಾಗಿಯವರು ನೋಂದಣಿ ಪುಸ್ತಕದಲ್ಲಿ ಹಿಂದೂಯೇತರ ಸದಸ್ಯರ ಪರವಾಗಿ ಸಹಿ ಮಾಡಿದ್ದರು. ಆದರೆ, ಬಿಜೆಪಿಯ ಮಂದಿ ಇದರಲ್ಲಿ ‘ರಾಹುಲ್ ಗಾಂಧಿ ಜೀ’ ಎನ್ನುವ ಹೆಸರನ್ನು ಸೇರಿಸುವ ಮೂಲಕ ಕೀಳುಮಟ್ಟದ ಪ್ರಚಾರಕ್ಕೆ ಇಳಿದಿದೆ ಎಂದಿತು. ಪಕ್ಷದ ವಕ್ತಾರ ರಣದೀಪ್‌ ಸುರ್ಜೆವಾಲ ಅವರು ಈ ಸಂಬಂಧ ಪತ್ರಿಕಾಗೋಷ್ಠಿಯನ್ನೂ ನಡೆಸಿ, ರಾಹುಲ್ ಅವರು ಅಧಿಕೃತವಾಗಿ ಸಹಿ ಮಾಡಿರುವುದು ದೇವಸ್ಥಾನಕ್ಕೆ ಭೇಟಿ ನೀಡುವವರ ಪುಸ್ತಕದಲ್ಲಿ ಮಾತ್ರ. ಇದರಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಖುದ್ದು ದಾಖಲಿಸಿದ್ದಾರೆ. ಇದರ ಹೊರತಾದ ಇತರ ದಾಖಲೆಗಳು ತಿರುಚಲ್ಪಟ್ಟಿರುವಂಥವು. ಮೋದಿ ಮತ್ತು ಅಮಿತ್‌ ಶಾ ಅವರು ಸೋಮನಾಥ ದೇವಾಲಯದ ಆಡಳಿತ ಮಂಡಳಿಯಲ್ಲಿದ್ದು, ಇಂಥ ಕೀಳುಮಟ್ಟದ ರಾಜಕಾರಣಕ್ಕೆ ತಮ್ಮ ಪಕ್ಷದವರೇ ಮುಂದಾಗುವುದನ್ನು ತಡೆಯಬೇಕೇ ಹೊರತು ಪ್ರೋತ್ಸಾಹಿಸಬಾರದು ಎಂದು ಕಿಡಿಕಾರಿದ್ದಾರೆ.

ಸೋಮವಾರದಂದು ಗುಜರಾತ್‌ನಲ್ಲಿ ತಮ್ಮ ಚುನಾವಣಾ ಯಾತ್ರೆಯನ್ನು ಮೋದಿಯವರು ಆರಂಭಿಸಿದಾಗ, "ವಿಕಾಸವಾದ ಹಾಗೂ ವಂಶವಾದದ ವಿರುದ್ಧದ ಚುನಾವಣೆ ಇದು,” ಎಂದಿದ್ದರು. ಗುಜರಾತ್ ಚುನಾವಣೆಯಲ್ಲಿ ಅವರು ಒಟ್ಟು ೩೦ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೋಮವಾರ ಹಾಗೂ ಇಂದು ಇದಾಗಲೇ ಒಟ್ಟು ೮ ಸಮಾವೇಶಗಳಲ್ಲಿ ಭಾಷಣ ಮಾಡಿದ್ದಾರೆ. ಈ ವೇಳೆ, ಅವರು ವಿಕಾಸವಾದದ ಕುರಿತು ಮಾತನಾಡಿರುವುದಕ್ಕಿಂತ ಸಲ್ಲದ ಉದಾಹರಣೆಗಳ ಮೂಲಕ ಚುನಾವಣಾ ಕಣವನ್ನು ಬಿರುಸಾಗಿಸಿರುವುದೇ ಹೆಚ್ಚು. ಇಂದಿನ ಭಾಷಣವನ್ನೇ ನೋಡುವುದಾದರೆ, ಅವರು ಇಂದಿರಾ ಗಾಂಧಿಯವರು ಮೋರ್ಬಿ ನಗರಕ್ಕೆ ಮೂಗಿಗೆ ಕರ್ಚೀಫ್ ಹಿಡಿದು ಪ್ರವೇಶಿಸಿದ್ದರು ಎಂದು ಹೇಳಿದರೇ ಹೊರತು ಇಂದಿರಾ ಅವರು ಹಾಗೇಕೆ ಮಾಡಿದ್ದರು ಎನ್ನುವುದನ್ನು ವಿವರಿಸಲು ಹೋಗಲಿಲ್ಲ. ಅಸಲಿಗೆ, ಇಂದಿರಾ ಗಾಂಧಿಯವರು ಮೋರ್ಬಿಗೆ ಭೇಟಿ ನೀಡಿದ್ದು ಆ ಪಟ್ಟಣ ಗಂಭೀರ ದುರಂತದ ಸೂತಕದಲ್ಲಿದ್ದಾಗ. ಮೋರ್ಬಿ ಸಮೀಪದ ಮಚ್ಚಚ್ಛು ಅಣೆಕಟ್ಟು ಒಡೆದ ಪರಿಣಾಮ ದೊಡ್ಡ ಮಟ್ಟದಲ್ಲಿ ಪ್ರವಾಹ ಉಂಟಾಗಿ ಅಪಾರ ಸಾವುನೋವು ಸಂಭವಿಸಿತ್ತು. ಪ್ರವಾಹದಿಂದಾಗಿ ಜನ, ಜಾನುವಾರುಗಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದವು. ವಾರವೇ ಕಳೆದರೂ ಗುರುತು ಹಿಡಯಲಾಗದ ರೀತಿ ಊದಿಕೊಂಡಿದ್ದ ಹೆಣಗಳನ್ನು ಟ್ರಕ್‌ಗಳಲ್ಲಿ ಸಾಗಿಸುವ ಕಾರ್ಯ ಮುಗಿದಿರಲಿಲ್ಲ. ಇಡೀ ಪ್ರದೇಶದಲ್ಲಿ ಕೊಳೆತ ಹೆಣಗಳ ವಾಸನೆ ಆವರಿಸಿತ್ತು, ಸಾಂಕ್ರಾಮಿಕ ರೋಗಗಳ ಭೀತಿ ಇತ್ತು. ಇಂಥ ಸಂದರ್ಭದಲ್ಲಿ ಇಂದಿರಾ ಗಾಂಧಿ ಅಲ್ಲಿಗೆ ಭೇಟಿ ಇತ್ತು ಪರಿಹಾರ ಕಾರ್ಯಾಚರಣೆ ವೀಕ್ಷಿಸಿದ್ದರು. ವಿಪರ್ಯಾಸವೆಂದರೆ, ಮೋದಿಯವರು ಇದಾವುದನ್ನೂ ಪ್ರಸ್ತಾಪಿಸದ ಮೋದಿಯವರು ತಮಗೆ ಅನುಕೂಲವಾಗುವ ರೀತಿಯಲ್ಲಿ ಇಂದಿರಾರ ಚಿತ್ರವನ್ನು ಜನರೆದುರು ಕಟ್ಟಿಕೊಡಲು ಪ್ರಯತ್ನಿಸಿದ್ದು.

ಚುನಾವಣಾ ಪ್ರಚಾರದ ಬಗೆಗಿನ ಮತ್ತೊಂದು ಅಂಶವನ್ನು ಗಮನಿಸುವುದಾದರೆ, ಸೌರಾಷ್ಟ್ರ ಪ್ರದೇಶವೇನಿದೆ ಇದು ಗುಜರಾತ್‌ನ ದಕ್ಷಿಣ ಭಾಗದಲ್ಲಿ ಕಛ್ ಕೊಲ್ಲಿಯಿಂದ ಖಂಬತ್ ಕೊಲ್ಲಿಯವರೆಗೆ ವಿಸ್ತರಿಸಿರುವಂಥದ್ದು; ಪಟೇಲ್‌ ಸಮುದಾಯದ ಬಾಹುಳ್ಯ ಹೆಚ್ಚಿರುವ ಪ್ರದೇಶ. ಪಟೇಲ್‌ರ ಮೀಸಲಾತಿ ಹೋರಾಟದ ನೆಲ. ಇಲ್ಲಿಂದಲೇ ಹಾರ್ದಿಕ್‌ ಪಟೇಲ್‌ ಎನ್ನುವ, ಚುನಾವಣೆಗೆ ಸ್ಪರ್ಧಿಸಲು ಬೇಕಾದ ವಯೋಮಾನದ ಅರ್ಹತೆಯನ್ನೂ ಗಳಿಸಿಕೊಂಡಿರದ ಓರ್ವ ಯುವ ತರುಣ ಪಟೇಲ್‌ ಸಮುದಾಯಕ್ಕೆ ಮೀಸಲಾತಿಯನ್ನು ಆಗ್ರಹಿಸಿ ಬಿಜೆಪಿಗೆ ಸೆಡ್ಡು ಹೊಡೆದಿರುವುದು. ವಿಪರ್ಯಾಸವೆಂದರೆ, ಪಟೇಲ್‌ ಸಮುದಾಯವನ್ನು ಸಮಾಧಾನಗೊಳಿಸುವಂಥ, ಅವರ ಕೋಪ ತಣಿಸುವಂಥ ಯಾವುದೇ ಮಾತುಗಳನ್ನು ಮೋದಿಯವರು ಇಲ್ಲಿನ ತಮ್ಮ ಸಮಾವೇಶಗಳಲ್ಲಿ ಆಡಲು ಹೋಗಿಲ್ಲ. ಬದಲಿಗೆ, ಆ ವಿಷಯದಿಂದ ದೂರವೇ ಉಳಿದು, ಕಾಂಗ್ರೆಸ್‌ ಗುಜರಾತ್‌ನ ವಿರೋಧಿ, ನೆಹರು-ಗಾಂಧಿ ಪರಿವಾರ ಗುಜರಾತ್‌ನ ವಿರೋಧಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಪರೋಕ್ಷವಾಗಿ ಕಾಂಗ್ರೆಸ್‌ ಪಕ್ಷವು ಪಟೇಲ್‌ ಸಮುದಾಯದ ವಿರೋಧಿ ಎನ್ನುವ ಸಂದೇಶವನ್ನು ರವಾನಿಸಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ : ಗುಜರಾತ್ ಹಣಾಹಣಿ | ಬಿಜೆಪಿಗೆ ಉಳಿದದ್ದು ಮೋದಿಯ ಕೊನೇ ಕ್ಷಣದ ಅಸ್ತ್ರ ಮಾತ್ರ

ಸೋಮವಾರದಂದು ಇದೇ ಪ್ರದೇಶದಲ್ಲಿ ನಡೆದಿದ್ದ ಮೋದಿಯವರ ಸಮಾವೇಶಗಳಲ್ಲಿ ಕುರ್ಚಿಗಳು ಖಾಲಿ ಉಳಿದಿದ್ದವು. ಪಟೇಲ್‌ ಸಮುದಾಯದ ಯುವಪೀಳಿಗೆ ಬಿಜೆಪಿ ವಿರುದ್ಧ, ಅದರಲ್ಲಿಯೂ ಪ್ರಧಾನಿ ಮೋದಿ ವಿರುದ್ಧ ಮುನಿಸಿಕೊಂಡಿರುವುದು ಇದಕ್ಕೆ ಕಾರಣ ಎನ್ನಲಾಗಿತ್ತು. ಮೋದಿಯವರು ತಮ್ಮ ಇಂದಿನ ಭಾಷಣಗಳಲ್ಲಿ ಈ ಮುನಿಸನ್ನು ತೊಡೆಯುವಂಥ ಯಾವುದೇ ಪ್ರಯತ್ನಗಳನ್ನು ಮಾಡದೆ ಇದ್ದುದು ಅವರ ಬದಲಾದ ಆದ್ಯತೆಯನ್ನು ಸೂಚಿಸುತ್ತಿರುವಂತಿದೆ. ಸರ್ದಾರ್ ಪಟೇಲ್‌ರಿಗೆ ಇತಿಹಾಸದಿಂದ, ಕಾಂಗ್ರೆಸ್‌ನಿಂದ ಅಪಚಾರವಾಗಿದೆ ಎನ್ನುವುದಷ್ಟನ್ನೇ ಅವರು ವಿವಿಧ ರೀತಿಯಲ್ಲಿ ಹೇಳುವ ಮೂಲಕ ಪಟೇಲ್‌ ಸಮುದಾಯವನ್ನು ಕಾಂಗ್ರೆಸ್‌ ಬಗ್ಗೆ ಎಚ್ಚರಿಸುತ್ತಿದ್ದಾರೆ. ಹಾರ್ದಿಕ್ ಪಟೇಲ್‌ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗದ ಮೋದಿಯವರು, ಸರ್ದಾರ್ ಪಟೇಲ್‌ರ ಬೆನ್ನಹಿಂದೆ ನಿಂತು ಕಾಂಗ್ರೆಸ್‌ ಗುಮ್ಮ ತೋರಿಸುವ ತಂತ್ರಗಾರಿಕೆ ಪ್ರದರ್ಶಿಸುತ್ತಿದ್ದಾರೆ.

ಇತ್ತ, ರಾಹುಲ್ ತಮ್ಮ ಇಂದಿನ ಚುನಾವಣಾ ಸಮಾವೇಶಗಳಲ್ಲಿ ಇಂಥ ಯಾವ ವಿಶೇಷ ತಂತ್ರಗಾರಿಕೆಯನ್ನೂ ತೋರಿಸಲು ಹೋಗಿಲ್ಲ. ಬದಲಿಗೆ, ಬಿಜೆಪಿ ಕಳೆದ ೨೨ ವರ್ಷಗಳಲ್ಲಿ ರಾಜ್ಯದ ಜನತೆಗೆ ಆಶ್ವಾಸನೆಗಳಷ್ಟೇ ನೀಡಿದೆಯೇ ವಿನಾ ಸಾಧನೆಯನ್ನು ಮಾಡಿಲ್ಲ ಎನ್ನುವುದನ್ನು ಅಂಕಿ-ಅಂಶದ ಮೂಲಕ ವಿವರಿಸಲು ಪ್ರಯತ್ನಿಸಿದ್ದಾರೆ. ವಾಣಿಜ್ಯ, ವ್ಯವಹಾರವೇ ಪ್ರಮುಖವಾದ ಸೌರಾಷ್ಟ್ರದಲ್ಲಿ ಹೇಗೆ ಸಣ್ಣ ಉದ್ಯಮಗಳು ಜಿಎಸ್‌ಟಿ ಹೊಡೆತಕ್ಕೆ ಸಿಲುಕಿ ತತ್ತರಿಸಿ ದಾರಿ ಕಾಣದಾಗಿವೆ ಎಂದು ವಿವರಿಸಿದ್ದಾರೆ. ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಪಟೇಲ್, ಪಾಟೀದಾರ್ ಸಮುದಾಯಗಳ ನೋವಿಗೆ ಬಿಜೆಪಿ ಆತುರಾತುರವಾಗಿ ಜಾರಿಗೊಳಿಸಿದ ಜಿಎಸ್‌ಟಿ ಕಾರಣ ಎಂದಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More