ಪ್ರಮೋದ್ ಮಧ್ವರಾಜ್ ಮನದ ಮಾತು | ಬಿಜೆಪಿಗೆ ಸೇರೋದೆಲ್ಲ ಸುಳ್ಳು ಸುದ್ದಿ

ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡಿತ್ತು. ಆದರೆ, ‘ದಿ ಸ್ಟೇಟ್’ಗೆ ನೀಡಿದ ಸಂದರ್ಶನದಲ್ಲಿ ಅದನ್ನೆಲ್ಲ ಅವರು ಅಲ್ಲಗೆಳೆದಿದ್ದಾರೆ. ಕರಾವಳಿಯ ಕೋಮು ರಾಜಕಾರಣ, ಕೃಷ್ಣಮಠಕ್ಕೆ ಸಿಎಂ ಹೋಗದ ಹಿಂದಿನ ಕಾರಣ, ಆಸ್ಪತ್ರೆ ಪರಭಾರೆ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ

ಕರಾವಳಿ ರಾಜಕಾರಣದಲ್ಲಿ ಪ್ರಮೋದ್ ಮಧ್ವರಾಜ್ ಅವರ ಸ್ಥಾನ ಏನು?

ನಾನು ಒಬ್ಬ ಸೇವಕ. ಜನತೆಯ ಸೇವಕ. ಸೇವಕನಿಗೆ ಏನು ಸ್ಥಾನ ಇದೆಯೋ ಆ ಸ್ಥಾನ ನನಗಿದೆ.

ತಾಯಿ ಮನೋರಮಾ ಮಧ್ವರಾಜ್ ಒಮ್ಮೊಮ್ಮೆ ಬಿಜೆಪಿಯಲ್ಲಿ, ನೀವು ಕಾಂಗ್ರೆಸ್ನಲ್ಲಿ... ಹೀಗೇಕೆ?

ಅವರನ್ನೇ ಕೇಳಬೇಕು, ಯಾಕೆ ಬಿಜೆಪಿಗೆ ಹೋದಿರಿ ಎಂದು. ನಾನು ಪಕ್ಷ ಬಿಡಲಿಲ್ಲ.

ತಮ್ಮ ಬಿಜೆಪಿ ಸೇರ್ಪಡೆ ಸುದ್ದಿ ಹಿಂದೆ ತಾಯಿ ಮನೋರಮಾ ಅವರ ಪ್ರೇರಣೆ ಇದೆಯೇ?

ನಮ್ಮ ತಾಯಿ ಮತ್ತೆ ಬಿಜೆಪಿ ಬಿಟ್ಟರು. ಸಂಸದ ಸ್ಥಾನವನ್ನು ನಾಲ್ಕೂವರೆ ವರ್ಷಗಳ ಕಾಲ ನಿಭಾಯಿಸಿ ಕಾಂಗ್ರೆಸ್ ಸೇರಿದ್ದಾರೆ.

ಕಾಂಗ್ರೆಸ್ನವರು ಹೇಳುತ್ತಾರೆ ನೀವು ಬಿಜೆಪಿ ಸೇರುವುದಿಲ್ಲ, ಬಿಜೆಪಿಯವರು ಹೇಳುತ್ತಾರೆ ನೀವು ಕಾಂಗ್ರೆಸ್ನಲ್ಲಿ ಉಳಿಯುವುದಿಲ್ಲ ಎಂದು. ಈ ಎರಡರಲ್ಲಿ ಯಾವುದು ನಿಜ, ಯಾವುದು ಸುಳ್ಳು?

ನಾನೀಗಾಗಲೇ ಸ್ಪಷ್ಟಪಡಿಸಿದ್ದೇನೆ, ನಾನು ಕಾಂಗ್ರೆಸ್ ಬಿಡುವುದಿಲ್ಲ ಅಂತ.

ಚುನಾವಣೆಗೆ ಇನ್ನೂ ಕೆಲವು ತಿಂಗಳು ಇವೆ. ಅಷ್ಟರಲ್ಲಿ ಮತ್ತೆ ತಮ್ಮ ನಿಲುವು ಬದಲಾಗಬಹುದೇ?

ಖಂಡಿತ ಇಲ್ಲ...

ನೀವು ಇತ್ತೀಚೆಗೆ ಫ್ರೆಶಪ್ ಆಗಲು ಆಗಾಗ ಬಿಜೆಪಿ ನಾಯಕರ ಕೊಠಡಿಗಳಿಗೆ ಭೇಟಿಯಾಗುತ್ತೀರಿ ಎಂಬ ಮಾತಿದೆಯಲ್ಲ ನಿಜವೇ?

ನೀವು ಹೇಳುತ್ತಿರುವ ಘಟನೆಗೆ ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಅಂದು ಕೇಂದ್ರ ಸಚಿವ ಅನಂತಕುಮಾರ್ ಐಬಿಯಲ್ಲಿರುವ ವಿಚಾರ ಗೊತ್ತಿಲ್ಲದೆ ನಾನು ವಾಶ್ ರೂಮ್‌ಗೆ ಹೋಗಿದ್ದೆ. ಐಬಿ ಬಳಿ ಇದ್ದ ಕಾರುಗಳನ್ನು ನೋಡಿದಾಗ ಅನಂತ್ ಕುಮಾರ್ ಬಂದಿದ್ದಾರೆ ಎಂದು ತಿಳಿಯಿತು. ಅವರು ಕೂಡ ಐಬಿಗೆ ಬರುವ ಕಾರ್ಯಕ್ರಮ ಇರಲಿಲ್ಲ. ಅಲ್ಲಿ ಗೋಡಂಬಿ ತಯಾರಿಕಾ ಘಟಕದವರ ಮೀಟಿಂಗ್‌ಗಾಗಿ ಬಂದಿದ್ದರು. ಅವರು ಇದ್ದಾರೆ ಎಂದು ಗೊತ್ತಾದಾಗ ಐಬಿಗೆ ಹೋಗಿದ್ದ ನಾನು ಸೌಹಾರ್ದವಾಗಿ ಭೇಟಿ ಮಾಡಿದೆ.

ತಮ್ಮ ಬಿಜೆಪಿ ಸೇರ್ಪಡೆ ಸುದ್ದಿ ಸಂಬಂಧ ನಳೀನ್ ಕುಮಾರ್ ಕಟೀಲು ಅವರು ಕಾರ್ಯಕ್ರಮವೊಂದರಲ್ಲಿ ಆಡಿದ ಮಾತನ್ನು ನೀವು ಅಲ್ಲಗಳೆಯುತ್ತೀರಾ?

ನಾನು ಎಷ್ಟು ಸಲ ಅಲ್ಲಗಳೆಯಬೇಕು? ಎಷ್ಟು ಸಲ? ಅದಕ್ಕೊಂದು ಮಿತಿ ಇದೆಯಲ್ಲ?

ದೇಶದ ಹತ್ತು ಶ್ರೀಮಂತ ಸಚಿವರಲ್ಲಿ ನೀವೂ ಒಬ್ಬರು. ಬಿಜೆಪಿ ಸೇರಿದ ಎಸ್ ಎಂ ಕೃಷ್ಣ ಅವರ ಹಾದಿಯನ್ನೇ ಹಿಡಿದರೆ ತಾವೂ ಸುರಕ್ಷಿತ ಎಂದು ಭಾವಿಸಿ ಪ್ರಮೋದ್ ಬಿಜೆಪಿ ಸೇರುತ್ತಿದ್ದಾರೆ ಎಂಬ ಮಾತಿದೆಯಲ್ಲ?

ನಾನು ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವನು. ಲಂಚದ ಒಂದು ಪೈಸೆಯನ್ನೂ ಮುಟ್ಟುವುದಿಲ್ಲ. ಹಾಗಾಗಿ ನನಗೆ ಯಾರ ಭಯವೂ ಇಲ್ಲ.

ಯಾರೇ ಆಗಲಿ ಕಾಂಗ್ರೆಸ್ನಲ್ಲಿ ಉಳಿದರೆ ಆಗುವ ಪ್ರಯೋಜನಗಳು ಏನು? ಬಿಜೆಪಿಗೆ ಸೇರಿದರೆ ಆಗುವ ಅನುಕೂಲಗಳು ಏನು?

ಕಾಂಗ್ರೆಸ್‌ಗೆ ಸೇರಿದರೆ ಜಾಸ್ತಿ ಲಾಭ. ಕಾಂಗ್ರೆಸ್ ಸಿದ್ಧಾಂತ ಭಾರತೀಯ ಸಂವಿಧಾನಕ್ಕೆ ಅನುಗುಣವಾದ ಸಿದ್ದಾಂತ. ಇಡೀ ದೇಶವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು, ಎಲ್ಲೂ ತಾರತಮ್ಯ ಇರಬಾರದು, ಇಡೀ ದೇಶವೇ ಒಂದು ಕುಟುಂಬ ಎಂಬ ಸಿದ್ಧಾಂತ. ನಮ್ಮ ಹಿಂದೂ ಸನಾತನ ಧರ್ಮದಲ್ಲಿ ವಸುದೈವ ಕುಟುಂಬಕಂ ಎಂಬ ಮಾತಿದೆ. ಅದು ‘ಪ್ರಪಂಚವೇ ಒಂದು ಕುಟುಂಬ’ ಎಂದು ಹೇಳಿದರೆ, ‘ದೇಶವೇ ಒಂದು ಕುಟುಂಬ’ ಎಂದು ಸಾರುತ್ತದೆ ಕಾಂಗ್ರೆಸ್.

ಕೆಲ ಬುದ್ಧಿಜೀವಿಗಳು ಸಿಎಂಗೆ ಒತ್ತಡ ಹಾಕಿ ಉಡುಪಿ ಮಠಕ್ಕೆ ಹೋಗಬೇಡಿ ಎನ್ನುತ್ತಿದ್ದಾರೆ ಎಂದು ಪೇಜಾವರ ಶ್ರೀಗಳು ಆರೋಪಿಸಿದ್ದಾರೆ. ಈ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು?

ನೀವು ಈ ಪ್ರಶ್ನೆಯನ್ನು ಪೇಜಾವರ ಶ್ರೀಗಳು ಮತ್ತು ಮುಖ್ಯಮಂತ್ರಿಯವರ ಬಳಿ ಕೇಳಬೇಕು. ಮುಖ್ಯಮಂತ್ರಿಗಳಿಗೆ ಯಾರೆಲ್ಲ ಏನೆಲ್ಲ ಅಡ್ವೈಸ್ ಮಾಡ್ತಾರೆ ಅಂತ ನನಗೆ ಹೇಗೆ ಗೊತ್ತಾಗಬೇಕು?

ಸಿದ್ದರಾಮಯ್ಯನವರು ಮತ್ತು ನಿಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದವು ಎಂಬುದಕ್ಕೆ ನಿಮ್ಮ ಪ್ರತಿಕ್ರಿಯೆ?

ಸಿದ್ದರಾಮಯ್ಯನವರೊಂದಿಗೆ ನನಗೆ ಎಲ್ಲಿ ಇತ್ತು ಭಿನ್ನಾಭಿಪ್ರಾಯ?

ಯಾವುದೋ ಕಾರ್ಯಕ್ರಮದಲ್ಲಿ ನಿಮ್ಮ ಅನಿಸಿಕೆಗಳನ್ನು ತಡೆದರು ಎಂಬುದರ ಸುತ್ತ...?

ಮುಖ್ಯಮಂತ್ರಿಗಳು ಉಡುಪಿ ಸಭೆ ವೇಳೆ ಒತ್ತಡದಲ್ಲಿದ್ದರು. ಇನ್ನೊಂದು ಕಾರ್ಯಕ್ರಮಕ್ಕೆ ಅವರು ಹೋಗಲಿಕ್ಕಿತ್ತು. ಮುಖ್ಯಮಂತ್ರಿಯವರ ಒತ್ತಡ ಏನು ಎಂಬುದು ನನ್ನಂಥ ನಿಮ್ಮಂಥವರಿಗೆ ಗೊತ್ತಾಗುವುದಿಲ್ಲ. ಹೈ ಪ್ರೆಶರ್ ಜಾಬ್ ಅದು. ಅಂಥ ಸಂದರ್ಭದಲ್ಲಿ ಡಿಸ್ಟರ್ಬ್ ಆದರೆ ಕಿರಿಕಿರಿ ಆಗುವುದು ಸ್ವಾಭಾವಿಕ.

ಸಂಘಪರಿವಾರದ ವಿರೋಧ ಕಟ್ಟಿಕೊಂಡ ನೀವು ಆ ಕಾರಣಕ್ಕೆ ಬಿಜೆಪಿ ಸೇರಲು ಹಿಂಜರಿಯುತ್ತಿದ್ದೀರಿ ಎಂಬ ಮಾತುಗಳಿವೆ. ನಿಜವೇ?

ಬಿಜೆಪಿ ಯಾಕೆ ಸೇರಬೇಕಪ್ಪ? ನಿಮಗೆ ಇಷ್ಟ ಇದೆಯಾ? ಬಿಜೆಪಿ ಸೇರುವ ಬಗ್ಗೆ ಯಾಕೆ ನೀವು ಇಷ್ಟೊಂದು ದೊಡ್ಡದಾಗಿ ಮಾತನಾಡುತ್ತೀರಿ?

ಜನ ಮಾತನಾಡುತ್ತಿರುವುದನ್ನು ಹೇಳಿದೆವು...

ಜನ ಯಾರೂ ಮಾತನಾಡುವುದಿಲ್ಲ. ನೀವೊಂದು ಮೀಡಿಯಾದಲ್ಲಿದ್ದೀರಿ, ಇನ್ನೊಂದು ಮೀಡಿಯಾಕ್ಕೆ ಯಾವಾಗ ಸೇರುತ್ತೀರಿ ಎಂದು ಕೇಳುತ್ತ ಹೋದರೆ ನಿಮಗೆ ಹೇಗೆ ಅನ್ನಿಸುತ್ತದೆ?

ಸರ್ಕಾರಿ ಆಸ್ಪತ್ರೆಯನ್ನು ಉದ್ಯಮಿ ಬಿ ಆರ್ ಶೆಟ್ಟಿ ಅವರಿಗೆ ಸರ್ಕಾರ ವಹಿಸಿದ ವಿಚಾರದಲ್ಲಿ ನಿಮ್ಮ ನಿಲುವು ಏನು?

ಅಲ್ಲಿ ಒಟ್ಟು ನಾಲ್ಕು ಎಕರೆ ಭೂಮಿ ಇದೆ. ರಸ್ತೆಯ ಈ ಬದಿಯಲ್ಲಿ ಹಾಗೂ ಆ ಬದಿಯಲ್ಲಿ ತಲಾ ಎರಡು ಎಕರೆ ಭೂಮಿ ಇದೆ. ರಸ್ತೆಯ ಆ ಬದಿಯ ಭೂಮಿಯಲ್ಲಿ ಕ್ವಾರ್ಟರ್ಸ್ ಇತ್ತು. ಅಲ್ಲಿ ಈಗ ೭೦ ಹಾಸಿಗೆಗಳ ಆಸ್ಪತ್ರೆ ಬದಲಿಗೆ ೨೦೦ ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ಆಗುತ್ತಿದೆ. ಎಪ್ಪತ್ತು ಹಾಸಿಗೆಯ ಆಸ್ಪತ್ರೆ ಒಳ್ಳೆಯದೋ ಅಥವಾ ಇನ್ನೂರು ಹಾಸಿಗೆಗಳ ಆಸ್ಪತ್ರೆ ಒಳ್ಳೆಯದೋ? ಬಡವರಿಗೆ ಪಂಚತಾರಾ ಆಸ್ಪತ್ರೆ ಸೌಲಭ್ಯ ಯಾಕೆ ಸಿಗಬಾರದು? ಅಲ್ಲಿ ಉಚಿತವಾಗಿ ಬಡವರಿಗೆ ಚಿಕಿತ್ಸೆ ಸಿಗಬೇಕಾದರೆ ಬಾಕಿಯವರು ಯಾಕೆ ಹೊಟ್ಟೆಕಿಚ್ಚು ಪಟ್ಟುಕೊಳ್ಳಬೇಕು? ಇನ್ನುಳಿದ ಎರಡು ಎಕರೆ ಜಾಗದಲ್ಲಿ ೪೦೦ ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬರುತ್ತದೆ. ೨೦೦ ಹಾಸಿಗೆಗಳ ಆಸ್ಪತ್ರೆಯನ್ನು ಉಚಿತವಾಗಿ ನಡೆಸಲು ಆದಾಯ ಎಲ್ಲಿಂದ ಬರುತ್ತದೆ? ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಬಂದ ಆದಾಯವನ್ನು ಅಲ್ಲಿಗೆ ಉಪಯೋಗ ಮಾಡಿಕೊಳ್ಳುತ್ತೇವೆ. ಬಿ ಆರ್ ಶೆಟ್ಟರು ಇನ್ನು ಕೆಲವಾರು ವರ್ಷ ಇರಬಹುದು. ಅವರ ನಂತರ ಆಸ್ಪತ್ರೆಯನ್ನು ಯಾರು ನೋಡಿಕೊಳ್ಳುವವರು? ಮೂವತ್ತು ವರ್ಷಗಳ ಲೀಸ್ ಇದೆ. ಅವರಿಗೆ ಗ್ರಾಂಟ್ ಮಾಡಿಲ್ಲ, ಲೀಸ್‌ನಲ್ಲಿ ಕೊಟ್ಟದ್ದು. ೨೦೦ ಹಾಸಿಗೆಗಳ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅದನ್ನು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೀಡಲಾಗುವುದು. ೪೦೦ ಹಾಸಿಗೆಗಳ ಆಸ್ಪತ್ರೆ ಕೂಡ ಸರ್ಕಾರದ ಯೋಜನೆಗಳಿಗೆ ಬದ್ಧವಾಗಿ ಕೆಲಸ ಮಾಡುತ್ತದೆ.

ಇದನ್ನೂ ಓದಿ : ಕಲ್ಲಡ್ಕ ಪ್ರಭಾಕರ ಭಟ್‌ ಸಂದರ್ಶನ | ‘ಹಿಂದೂಗಳು ಓಡಿಸೋರೂ ಅಲ್ಲ, ಓಡೋರೂ ಅಲ್ಲ’

ಈ ಬಾರಿ ತಾವೂ ಜಯಗಳಿಸಿ, ಕಾಂಗ್ರೆಸ್ ಕೂಡ ಅಧಿಕಾರ ಹಿಡಿದರೆ ಯಾವ ಖಾತೆಯನ್ನು ಬಯಸುವಿರಿ?

ನಾನು ಖಾತೆಯ ಹಿಂದೆ ಇರುವಂಥ ವ್ಯಕ್ತಿಯೇ ಅಲ್ಲ. ನನಗೆ ಖಾತೆ ಯಾಕೆ? ಜನರ ಸೇವೆ ಮಾಡಲಿಕ್ಕೆ ಮುಖ್ಯಮಂತ್ರಿಗಳು ಯಾವ ಖಾತೆಯಲ್ಲಿರಬೇಕು ಎಂದು ಬಯಸುತ್ತಾರೋ ಆ ಖಾತೆಯಲ್ಲಿರುತ್ತೇನೆ. ನನಗೆ ಲಂಚ ತೆಗೆದುಕೊಳ್ಳುವ ಅಗತ್ಯ ಇಲ್ಲ. ಅಂಥದ್ದೇ ಖಾತೆ ಬೇಕು ಇಂಥದ್ದೇ ಖಾತೆ ಬೇಕು ಎಂದು ಕ್ಯಾತೆ ತಗೆಯುವಂಥ ಅಗತ್ಯವೂ ನನಗಿಲ್ಲ.

ಕರಾವಳಿಯಲ್ಲಿ ಆಗುತ್ತಿರುವ ಕೋಮು ರಾಜಕಾರಣದ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ನಾನು ಕರಾವಳಿ ಬಗ್ಗೆ ಮಾತನಾಡುವುದಿಲ್ಲ. ಉಡುಪಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಕೋಮು ರಾಜಕೀಯ ಆಗುತ್ತಿಲ್ಲ. ಅದನ್ನು ತಡೆದಿದ್ದೇವೆ ಮತ್ತು ಯಾರಾದರೂ ಕಾನೂನನ್ನು ಕೈಗೆ ತೆಗೆದುಕೊಂಡರೆ ಹಿಂದೂ ಇರಲಿ, ಮುಸ್ಲಿಂ ಇರಲಿ, ಕ್ರಿಶ್ಚಿಯನ್ ಇರಲಿ, ಬಿಜೆಪಿಯಾಗಿರಲಿ, ಕಾಂಗ್ರೆಸ್ ಆಗಿರಲಿ ಅಥವಾ ಕಮ್ಯುನಿಸ್ಟರೇ ಇರಲಿ, ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More