ಲಿಂಗಾಯತ ಹೋರಾಟದ ಮುಂಚೂಣಿ ನಾಯಕನ ಹಣಿಯಲು ಆಡಿಯೋ ಅಸ್ತ್ರ?

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಮುಂಚೂಣಿಯಲ್ಲಿರುವ ಸಚಿವ ವಿನಯ್‌ ಕುಲಕರ್ಣಿ ವಿರುದ್ಧ ಆಡಿಯೋ ಕ್ಲಿಪಿಂಗ್‌ವೊಂದು ಮಾಧ್ಯಮಗಳಲ್ಲಿ ಬಿಡುಗಡೆಯಾಗಿದೆ. ಇದರ ಹಿಂದೆ ಲಿಂಗಾಯತ ಹೋರಾಟವನ್ನು ಹತ್ತಿಕ್ಕುವ ಸಂಚು ಇದೆ ಎನ್ನಲಾಗುತ್ತಿದೆ. ಏನಿದು ಗದ್ದಲ? ಸಚಿವರು ಮಾತನಾಡಿದ್ದಾರೆ

ಮೊದಲಿನಿಂದಲೂ ಧಾರವಾಡ ರಾಜಕಾರಣದಲ್ಲಿ ಧಾಡಸಿತನಕ್ಕೆ ಹೆಸರಾದ ಸಚಿವ ವಿನಯ ಕುಲಕರ್ಣಿ ಸಮಯ ಸಿಕ್ಕಾಗಲೆಲ್ಲ ಬಿಜೆಪಿ ನಾಯಕರನ್ನು ಟೀಕಿಸದೆ ಬಿಟ್ಟಿಲ್ಲ. "ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಗೊಡ್ಡೆಮ್ಮೆಗಳು,” ಎಂದು ಕೆಲವೇ ದಿನಗಳ ಹಿಂದೆಯೂ ಹೇಳಿದ್ದರು. ಮಹದಾಯಿ ಹೋರಾಟದ ಸಮಯದಲ್ಲಿ ರೈತರು ಕುಲಕರ್ಣಿಗೆ ನವಲಗುಂದದಲ್ಲಿ ಮುತ್ತಿಗೆ ಹಾಕಿದ್ದರು. ಆಗಲೂ ವಿನಯ್, “ನಾನು ಶೆಟ್ಟರಂತೆ ವ್ಯಾಪಾರಸ್ಥನೂ ಅಲ್ಲ, ಸುಳ್ಳನ್ನು ಸತ್ಯ ಮಾಡುವ ಜೋಶಿಯೂ ಅಲ್ಲ,” ಎಂದು ಕುಟುಕಿದ್ದರು.

ಮಹದಾಯಿ ಹೋರಾಟ ನಿರಂತರವಾಗಿದೆ. ಸಜಹವಾಗಿಯೇ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ಇದು ತಲೆನೋವೇ. ಬಲುಕಾವು ಪಡೆದುಕೊಂಡಿರುವ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಕೂಡ ಬಿಜೆಪಿಯಲ್ಲಿ ಬೇಗುದಿಯನ್ನು ಹೆಚ್ಚಿಸಿದೆ. ಇತ್ತೀಚೆಗೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಪ್ರಮುಖ ಸಭೆ ಹುಬ್ಬಳ್ಳಿಯಲ್ಲಿ ನಡೆಯಿತು. ಸುಮಾರು ಎರಡು ಲಕ್ಷ ಜನ ಸೇರಿದ್ದರು. ಸಹಜವಾಗಿಯೇ ಒಂಥರದ ಅಳುಕು ಬಿಜೆಪಿ ನಾಯಕರಲ್ಲಿ ಮೂಡಿರಲಿಕ್ಕೂ ಸಾಕು. ವೇದಿಕೆಯಿಂದಲೇ ನೇರವಾಗಿ, "ಬಿಜೆಪಿ ನಾಯಕ್ರ ಈ ಹೋರಾಟಕ್ಕ ಬಂದ್ರ ಅವ್ರೀಗೆ ವೇದಿಕೆ ಬಿಟ್ಟಕೊಟ್ಟು ನಾ ಕೆಳಗ ಕುಂದರತೇನಿ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಡದೈತಿ. ಅದಕ್ಕ ವಿರೋಧ ಮಾಡಿದ್ರ ಎಂತಹ ಮಠಾಧೀಶರಿದ್ರೂ, ನಾಯಕರಿದ್ರೂ ಅವರ ವಿರುದ್ಧಾನೂ ನಮ್ಮ್ ಹೋರಾಟ ಚಾಲೂ ಆಗತ್ತಿನ್ನ,” ಎಂದು ವಿನಯ್ ಗುಟುರು ಹಾಕಿದ್ದರು. ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ವಿನಯ್ ಕುಲಕರ್ಣಿ ಮತ್ತಷ್ಟು ವರ್ಚಸ್ಸಿಗೆ ಬಂದರು.

ಇಡೀ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಎಂದರೆ ವಿನಯ್ ಕುಲಕರ್ಣಿ ಎನ್ನುವಂಥ ಪರಿಸ್ಥಿತಿ ಇದೆ. ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ರಾಜ್ಯಾಧ್ಯಕ್ಷ ಹಾಗೂ ಹಾಲಿ ಸಂಸದರಾದ ಪ್ರಹ್ಲಾದ್ ಜೋಶಿಯಂಥವರಿದ್ದರೂ, ಸಂಘ ಪರಿವಾರದ ಕಾರಸ್ಥಾನವಾಗಿದ್ದ ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿಯ ಇಂತಹ ಘಟಾನುಘಟಿಗಳಿಗೆ ಎದುರಾಗಿ ವಿನಯ್ ಕುಲಕರ್ಣಿ ಕಾಂಗ್ರೆಸ್ ನಾಯಕರಿಗೆ ಕಂಡದ್ದರಲ್ಲಿ ಅಚ್ಚರಿ ಇಲ್ಲ. ಮೊದಲಿನಿಂದ ಬಂದಿರುವ ಧಾಡಸಿ ಪ್ರವೃತ್ತಿ, ಹುಂಬರೆನಿಸಿಕೊಂಡರೂ ಪರಿಸ್ಥಿತಿಗಳನ್ನು ಹತೋಟಿಗೆ ತರಬಲ್ಲ ಚಾಣಾಕ್ಷತನ ವಿನಯ್ ಕುಲಕರ್ಣಿಯವರನ್ನು ಕಾಂಗ್ರೆಸ್ ನಾಯಕರ ಆಪ್ತ ವಲಯಕ್ಕೂ ತಲುಪಿಸಿರುವುದು ಈಗ ಇತಿಹಾಸ.

ಸಚಿವ ವಿನಯ್ ಕೈವಾಡವಿದೆ ಎಂದು ಬಿಜೆಪಿ ಆರೋಪಿಸುತ್ತಿರುವ ಜಿಪಂ ಸದಸ್ಯ ಯೋಗೀಶ್ ಗೌಡ ಹತ್ಯೆಯಾಗಿ ಒಂದೂವರೆ ವರ್ಷವಾಗುತ್ತ ಬಂದಿದೆ. ಹತ್ಯೆಯಾದ ಒಂದೆರಡು ಗಂಟೆಗಳಲ್ಲೇ, ಆಗ ಗೃಹಮಂತ್ರಿಯಾಗಿದ್ದ ಜಿ ಪರಮೇಶ್ವರ್, “ಇದು ಭೂವಿವಾದಕ್ಕಾಗಿ ನಡೆದ ಕೊಲೆ,” ಎಂದಿದ್ದರು. ಆಗಿನ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಪಾಂಡುರಂಗ ರಾಣೆ ಸಹಿತ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದವರೆಲ್ಲರೂ ನಂತರದಲ್ಲಿ ಗೃಹಮಂತ್ರಿಗಳ ಮಾತನ್ನೇ ಪುನರುಚ್ಚರಿಸಿದ್ದರು. ಜೊತೆಗೆ ಯೋಗೀಶ್ ಗೌಡ ಹಾಗೂ ಅವರ ಕೊಲೆ ಆರೋಪಿಗಳ ನಡುವೆ ನಡೆದಿದ್ದ ವಾಗ್ಯುದ್ಧವನ್ನು ಅವರು ತಿಳಿಸಿದ್ದರು.

ಯೋಗೀಶ್ ಗೌಡ ಜೈಲಲ್ಲಿದ್ದೇ ಜಿಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. ಅವರನ್ನು ಬಂಧಿಸಿದಾಗ ಜಿಪಂ ಚುನಾವಣೆ ಇತ್ತು. ಆಗ ಸಂಸದ ಪ್ರಹ್ಲಾದ್ ಜೋಶಿ ಹಾಗೂ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಬೀದಿಯಲ್ಲಿ ಕೂತು ಹೋರಾಟ ಮಾಡಿದ್ದರು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿದಾಗ ತಡೆದಿದ್ದ ಎಸ್ಪಿಗೆ, "ನಮ್ಮ ಸರಕಾರ ಬಂದಾಗ ನಾವು ತೋರಸ್ತೆವಿ,” ಎನ್ನುತ್ತಲೇ ಇಬ್ಬರೂ ಬಂಧಿತರಾಗಿದ್ದರು. ಇದಾದ ನಂತರ ಯೋಗೀಶ್ ಗೌಡ ಜಿಪಂ ಚುನಾವಣೆ ಗೆದ್ದರು. ಜಿಪಂ ಸಭೆಯೊಂದರಲ್ಲಿ ವಿನಯ್ ಕುಲಕರ್ಣಿ ಮತ್ತು ಯೋಗೀಶ್ ಗೌಡ ನಡುವೆ, "ನೋಡ್ಕೋತೀನಿ, ಕೈ ತೋರಿಸಿ ಮಾತಾಡ್ಬ್ಯಾಡ,” ಎಂಬ ಮಾತುಗಳ ತನಕ ಮಾತಿನ ಚಕಮಕಿ ಬಹಿರಂಗವಾಗಿಯೇ ಆಗಿತ್ತು.

ಇದಾದ ಸುಮಾರು ಮೂರ್ನಾಲ್ಕು ತಿಂಗಳ ಬಳಿಕ ಯೋಗೀಶ್ ಗೌಡ ಹತ್ಯೆಯಾಯಿತು. ಯೋಗೀಶ್ ಗೌಡರ ಬಂಧನವಾದಾಗ ಬೀದಿಗಿಳಿದಿದ್ದ ಬಿಜೆಪಿಯ ನಾಯಕರು ಹತ್ಯೆಗೆ ಅಷ್ಟಾಗಿ ಪ್ರತಿಭಟಿಸದೆ ಕೇವಲ ಖಂಡಿಸಿ, “ತನಿಖೆ ನಡೆಯಲಿ, ಸತ್ಯ ಹೊರಬರಲಿ,” ಎಂದಷ್ಟೇ ಹೇಳಿದ್ದರು. ಕೊಲೆ ನಡೆದ ಎರಡು-ಮೂರು ದಿನಗಳ ಬಳಿಕ ಆರೋಪಿಗಳಾದ ಬಸವರಾಜ ಮುತ್ತಗಿ ಸೇರಿದಂತೆ ಇತರ ನಾಲ್ವರನ್ನು ಬಂಧಿಸಲಾಗಿತ್ತು. ವಿನಯ್ ಕುಲಕರ್ಣಿಯವರ ಜೊತೆ ಬಸವರಾಜ ಮುತ್ತಗಿ ಗುರುತಿಸಿಕೊಂಡಿದ್ದರು. ಹಾಗಾಗಿ ಈ ಕೊಲೆಯಲ್ಲಿ ವಿನಯ್ ಕೈವಾಡವಿದೆ ಎಂಬುದು ಬಿಜೆಪಿ ಆರೋಪ. ವಿನಯ್ ಮಾತ್ರ, "ನಾನೊಬ್ಬ ಜನಪ್ರತಿನಿಧಿ. ನನ್ನ ಹಿಂದ ನೂರಾರು ಜನ ಯುವಕರಿದಾರ, ಹಿಂಬಾಲಕರಿದಾರ. ನನ್ನ ಜೊತಿ ಫೋಟೊ ತೆಗೆಸಿಕೊಂಡಾವ ಯಾಂವರ ಕೊಲೆ ಮಾಡಿದ್ರ ಅದನ ನಾನ ಮಾಡಿಸಿದಂಗನ? ಹಂಗಾರ ನಾನೂ ಜೋಶಿ, ಶೆಟ್ರ ಜೊತಿ ಇದ್ದವ್ರು ಮಾಡಿದ ಕ್ರಿಮಿನಲ್ ಚಟುವಟಿಕೇನ ಹೊರಗ ತೆಗಿಸಿ, ಅದನ ಇವ್ರ ಮಾಡಸ್ಯಾರ ಅಂತ ಹೇಳಿದ್ರ? ಇವೆಲ್ಲ ಸಮಂಜಸ ಅನ್ಸೂಲ್ಲ,” ಎಂಬ ಮಾತನ್ನಾಡುತ್ತಾರೆ.

ಯೋಗೀಶ್ ಗೌಡ ಹತ್ಯೆ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮೃತ ಯೋಗೀಶ್ ಗೌಡರ ಪತ್ನಿ ಮಲ್ಲಮ್ಮರನ್ನು ಅವರ ಮನೆಯಲ್ಲಿಯೇ ಭೇಟಿ ಮಾಡಿದ್ದರು. ತದನಂತರ ಮಲ್ಲಮ್ಮ ತಮಗೆ ಬಂದ ಬೆದರಿಕೆ ಪತ್ರಗಳನ್ನಿಟ್ಟುಕೊಂಡು ಪೊಲೀಸ್ ಉಪಾಧೀಕ್ಷಕರಿಗೆ ದೂರು ನೀಡಲು ಬಂದಿದ್ದರು. ಬಿಜೆಪಿ ನಾಯಕರಾರೂ ಆಗ ಮಲ್ಲಮ್ಮನವರ ಜೊತೆ ಇರಲಿಲ್ಲ. ಬಿಜೆಪಿ ಮುಖವಾಣಿಯ ಮಾಧ್ಯಮಗಳು ಲಿಂಗಾಯತ ಧರ್ಮದ ಹೋರಾಟವನ್ನು ತಣ್ಣಗಾಗಿಸಲು ನೆಲ ಗೆಬರುವ ಕೆಲಸ ಮಾಡುತ್ತಿವೆ ಎನ್ನುವುದು ವಿನಯ್ ನೇರಮಾತು.

ಇದನ್ನೂ ಓದಿ : ಸಂಸದ ಪ್ರತಾಪ್‌ ಸಿಂಹರನ್ನು ಇಕ್ಕಟ್ಟಿಗೆ ಸಿಲುಕಿಸಿದ ಫೇಸ್ಬುಕ್‌ ಪೇಜ್‌ ಯಾರದ್ದು?

ವಕೀಲರಿಗೆ ಬೆದರಿಕೆ ಹಾಕಿದ್ದರ ಕುರಿತು ಕೇಳಿದರೆ ವಿನಯ್, “ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಹಿಂದಿನಿಂದಲೂ ನನ್ನ ಕುಟುಂಬಕ್ಕೆ ಅಶ್ಲೀಲ ಪತ್ರಗಳು ಬರುತ್ತಿದ್ದವು. ಅದರ ಬಗ್ಗೆ ಸ್ಪಷ್ಟನೆ ಕೇಳಲು ಪ್ರಶ್ನಿಸಿದ್ದಂತೂ ನಿಜ. ಆದರೆ ಕೊಲೆ ಪ್ರಕರಣದಲ್ಲಿ ಯೋಗೀಶ್ ಗೌಡ ಕುಟುಂಬಸ್ಥರಿಗೆ ಸಹಾಯ ಮಾಡಬೇಡ ಅಂತ ಹೇಳಿಲ್ಲ. ಬೇರೆಯವರನ್ನು ಕೊಲೆ ಮಾಡಿಸುವ ಮಟ್ಟಕ್ಕೆ ನಾನು ಇಳಿಯುವವನಲ್ಲ,” ಎಂದೂ ಹೇಳುತ್ತಾರೆ. “1996ರಲ್ಲಿ ನಿಮ್ಮ ಮೇಲೆ ಗೂಂಡಾ ಕಾಯ್ದೆ ಜಾರಿಗೆ ಶಿಫಾರಸು ಮಾಡಲಾಗಿತ್ತು. ಹಾಗಿದ್ದಾಗ ನೀವು ಮತ್ತೊಬ್ಬರನ್ನು (ಗುರುನಾಥ ಗೌಡ) ರೌಡಿಶೀಟರ್ ಎಂದು ಕರೆಯುವುದು ಎಷ್ಟು ಸರಿ?” ಎಂಬ ಪ್ರಶ್ನೆಗೆ ಕಿಡಿಕಿಡಿಯಾಗಿದ್ದ ವಿನಯ್, “ಅಂತಹ ಯಾವ ಪ್ರಕರಣವೂ ನನ್ನ ಮೇಲಿಲ್ಲ,” ಎನ್ನುತ್ತ ಆರೋಪಕ್ಕೆ ದಾಖಲೆಗಳನ್ನು ಕೇಳಿದ್ದರು. ದಾಖಲೆ ಪತ್ರ ನೀಡುತ್ತಲೇ ಸುದ್ದಿಗೋಷ್ಠಿ ಮುಗಿಸಿದ್ದರು.

“ಯೋಗೀಶ್ ಗೌಡರ ಅಣ್ಣ ಗುರುನಾಥ ಗೌಡರನ್ನು ಉದ್ಯಮಿಯೊಬ್ಬರ ಮನೆಯಲ್ಲಿ ಭೇಟಿ ಮಾಡಿದ್ದೆ. ಆದರೆ, ಕೊಲೆ ಆರೋಪಿ ಮುತ್ತಗಿ ಪರ ಸಂಧಾನದ ಒಂದು ಮಾತನ್ನೂ ಆಡಿಲ್ಲ,” ಎಂದಿದ್ದಾರೆ ಸಚಿವರು. “ಬೆಳಗಾವಿ ಐಜಿಪಿ ಕಚೇರಿಯ ಡಿವೈಎಸ್ಪಿ ತುಳಜಪ್ಪ ಸುಲ್ಫಿ ಸಂಧಾನಕ್ಕೆ ಗುರುನಾಥ ಗೌಡರನ್ನು ಸಂಪರ್ಕಿಸಿ, ನಿಮ್ಮ ಹೆಸರು ಪ್ರಸ್ತಾಪಿಸಿದ್ದಾರಲ್ಲ?” ಎಂಬ ಪ್ರಶ್ನೆಗೆ, “ಸುಲ್ಫಿ ಜಿಲ್ಲೆ ಬಿಟ್ಟು ಐದು ವರ್ಷಗಳಾಗಿವೆ. ಇದರ ಬಗ್ಗೆ ನನಗೆ ಗೊತ್ತಿಲ್ಲ. ಇದು ಬಿಜೆಪಿಯವರ ತಂತ್ರ,” ಎನ್ನುತ್ತಾರೆ. ಇಷ್ಟು ದಿನ ವಿವಾದವನ್ನು ಕೆಣಕದೆ ತಣ್ಣಗಿದ್ದ ಬಿಜೆಪಿ ಈಗ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಚುನಾವಣೆ ಕೂಡ ಹತ್ತಿರದಲ್ಲಿದೆ. ಲಿಂಗಾಯತ ಹೋರಾಟದ ಮೂಲಕ ಬಿಜೆಪಿಯಲ್ಲಿ ತಳಮಳಕ್ಕೆ ಕಾರಣರಾಗಿದ್ದ ವಿನಯ್ ಕುಲಕರ್ಣಿ ಬಲಹೀನರಾದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಹೀನವಾದಂತೆ. ಇದರ ಸ್ಪಷ್ಟ ಅರಿವು ಬಿಜೆಪಿ ನಾಯಕರಿಗೂ ಇದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More