ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಸಮೀಕರಣ ಹಳಿ ತಪ್ಪಿದ್ದೆಲ್ಲಿ?

ಪಾಟಿದಾರರು ಕೈಕೊಡುತ್ತಾರೆಂದು ಗೊತ್ತಾಗುತ್ತಿದ್ದಂತೆ ಬಿಜೆಪಿ ಮೀನುಗಾರರಿಗೆ ಗಾಳ ಹಾಕಿತು. ಕೋಲಿ ಸಮುದಾಯದ ರಮಾನಾಥ್ ಕೋವಿಂದ ಅವರನ್ನು ರಾಷ್ಟ್ರಪತಿ ಮಾಡಿತು. ಕೋವಿಂದ್ ಆಯ್ಕೆ ಆಗ ಅಚ್ಚರಿ ಎನಿಸುತ್ತಿತ್ತು. ಈಗ ಪಕ್ಕಾ ಲೆಕ್ಕಾಚಾರ ಎಂದು ಜಗಜ್ಜಾಹೀರಾಗಿದೆ. ಆದರೆ ಕಾಂಗ್ರೆಸ್ ಇಲ್ಲಿ ಎಡವಿತ್ತು 

ಗುಜರಾತ್ ಚುನಾವಣೆಯ ಮತಗಟ್ಟೆ ಸಮೀಕ್ಷೆ ಹೊರಬಿದ್ದ ಬೆನ್ನಲ್ಲೇ 'ದಿ ಸ್ಟೇಟ್' ಮತದಾರರ ಮನದಾಳ ತೆರೆದಿಡುವ ಪ್ರಯತ್ನ ಮಾಡಿತ್ತು. ಈಗ ಫಲಿತಾಂಶದ ಬಳಿಕ ತನ್ನದೇ ಗ್ರೌಂಡ್ ರಿಪೋರ್ಟ್ ಅನ್ನು ಒರೆಗಚ್ಚುವ ಕೆಲಸ ಮಾಡುತ್ತಿದೆ. ಕಚ್-ಸೌರಾಷ್ಟ್ರ ಪ್ರಾಂತ್ಯದಿಂದ ಪ್ರಾರಂಭವಾಗಿದ್ದ ಪಯಣ ಕೇಂದ್ರ ಗುಜರಾತ್ ಮತ್ತು ಉತ್ತರ ಗುಜರಾತ್ ಮೂಲಕ ಸಾಗಿ ದಕ್ಷಿಣ ಗುಜರಾತಿನಲ್ಲಿ ಕೊನೆಯಾಗಿತ್ತು. ಈಗ ಮತ್ತದೇ ಹಾದಿಯಲ್ಲಿ.

ಒಟ್ಟು 54 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಕಚ್-ಸೌರಾಷ್ಟ್ರ ಪ್ರಾಂತ್ಯದಲ್ಲಿ 2012ರ ಚುನಾವಣೆ ವೇಳೆ ಬಿಜೆಪಿ 35 ಸೀಟುಗಳನ್ನು ಪಡೆದಿತ್ತು. ಈಗ ಅದಕ್ಕೆ ಸಿಕ್ಕಿರುವುದು ಕೇವಲ 23 ಸ್ಥಾನ. ಕಳೆದ ಬಾರಿ 18 ಸೀಟಿಗೆ ಸಮಾಧಾನಪಟ್ಟುಕೊಂಡಿದ್ದ ಕಾಂಗ್ರೆಸ್‌ಗೆ ಈಗ 30 ಸ್ಥಾನ ಒಲಿದಿವೆ. ಇಲ್ಲಿ ಬಿಜೆಪಿ 35ರಿಂದ 23 ಸ್ಥಾನಕ್ಕೆ ಕುಸಿಯಲು ಮತ್ತು ಕಾಂಗ್ರೆಸ್ 18ರಿಂದ 30 ಸ್ಥಾನಕ್ಕೆ ಏರಲು ಪಾಟಿದಾರರೇ ಪ್ರಮುಖ ಕಾರಣ. ಪಾಟಿದಾರರು ಪ್ರಮುಖ ಕಾರಣವಷ್ಟೇ ಹೊರತು ಸಂಪೂರ್ಣ ರೂವಾರಿಗಳಲ್ಲ. 'ದಿ ಸ್ಟೇಟ್' ವರದಿ ಮಾಡಿದ್ದಂತೆ, ಇಲ್ಲಿ ಪಾಟಿದಾರರಿಗಿಂತಲೂ ಹೆಚ್ಚು ಜನಸಂಖ್ಯೆ ಇರುವುದು ಕೋಲಿ ಸಮಾಜದವರು (ಮೀನುಗಾರರು). ಇವರು ಕೂಡ ರಾಜಕೀಯವಾಗಿ ನಿರ್ಣಾಯಕ ಪಾತ್ರ ವಹಿಸುವವರೇ. ಆದರೆ ಡೋಲು ಭಾರಿಸಿಕೊಂಡು ಸಾರಿ ಹೇಳುವವರಲ್ಲ, ಬದಲಿಗೆ ಮಾಡಿ ತೋರಿಸುವವರು. ಈಗ ಆಗಿರುವುದು ಅದೇ.

ಕಾಂಗ್ರೆಸ್ ಅಧ್ಯಕ್ಷ (ಆಗ ಉಪಾಧ್ಯಕ್ಷ) ರಾಹುಲ್ ಗಾಂಧಿ ಈ ಸಲದ ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಚಾಲನೆ ಕೊಡಲು ಆಯ್ಕೆ ಮಾಡಿಕೊಂಡಿದ್ದು ಇದೇ ಪ್ರಾಂತ್ಯವನ್ನು. ರಾಹುಲ್ ಗಾಂಧಿಯ ಈ ನಡೆ ಇಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಅವರು ಕಡಲ ತಡಿಯುದ್ದಕ್ಕೂ ಸಂಚರಿಸಿ, ಅಲ್ಲಲ್ಲಿ ಮೀನುಗಾರರ ಜೊತೆ ಮಾತುಕತೆ ನಡೆಸಿದರು. ಅದು ಇನ್ನಷ್ಟು ಮೆರಗು ನೀಡಿತು. ಹಲವು ದೇವಾಲಯಗಳಿಗೆ ಭೇಟಿ ಕೊಟ್ಟಿದ್ದರು. ಅದಕ್ಕಾಗಿ ಭೇಷ್ ಎನಿಸಿಕೊಂಡರು. ಆದರೆ ಈ ಭಾಗದ ಪ್ರಮುಖ ಸಂಗತಿ, ಪಾಟಿದಾರರ ನಿರ್ವಹಣೆಯಲ್ಲಿ ಮಾತ್ರ ಎಡವಿದರು ಎನ್ನಲಾಗುತ್ತಿದೆ. ಈ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕಾಂಗ್ರೆಸ್ ಸಂಪೂರ್ಣವಾಗಿ ಪಾಟಿದಾರರ ಮೇಲೆ ಅವಲಂಬಿತವಾಯಿತು. ಪಾಟಿದಾರರು ಪೂರ್ತಿಯಾಗಿ ನಮ್ಮೊಂದಿಗೆ ಇರುತ್ತಾರೆ ಎಂಬ ಭ್ರಮೆಯಲ್ಲಿತ್ತು. ಅದೇ ಭ್ರಮೆಯಲ್ಲಿ ಇತರರ ಬಗ್ಗೆ ಲಕ್ಷ್ಯ ಕೊಡಲಿಲ್ಲ. ಮೀನುಗಾರರನ್ನು ಮನವೊಲಿಸಲು ರಾಹುಲ್ ಗಾಂಧಿ ಮಾಡಿದ ಪ್ರಯತ್ನದ ಕಾಲುಭಾಗದಷ್ಟು ಕೆಲಸವನ್ನು ಕಾಂಗ್ರೆಸಿನ ಸ್ಥಳೀಯ ನಾಯಕರು ಮಾಡಲಿಲ್ಲ. ಪಾಟಿದಾರರು ದಂಡಿಯಾಗಿ ಒಂದು ಕಡೆ ನಿಲ್ಲುತ್ತಾರೆ ಎಂಬ ಸಂಗತಿಯಿಂದಲೇ ಸಣ್ಣಪುಟ್ಟ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಪಾಟಿದಾರ್, ದಲಿತ ಮತ್ತು ಹಿಂದುಳಿದ ಜಾತಿಗಳಾಚೆಗೆ ಹೆಚ್ಚು ಯೋಚಿಸಲಿಲ್ಲ. ಇದೆಲ್ಲದರ ಪರಿಣಾಮವಾಗಿ, ಸೌರಾಷ್ಟ್ರದಲ್ಲಿ ಕಾಂಗ್ರೆಸ್ ಅಂದುಕೊಂಡಷ್ಟು ಲಾಭ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಪಾಟಿದಾರರಿಗೆ ಕೊಟ್ಟ ಅರ್ಧದಷ್ಟು ಪ್ರಾಶಸ್ತ್ಯವನ್ನಾದರೂ ಕೋಲಿಗಳಿಗೆ ನೀಡಿದ್ದರೆ ಚಿತ್ರಣ ಬದಲಾಗಿರುತ್ತಿತ್ತು. ಪಾಟಿದಾರರ ಅತಿಯಾದ ಒಲೈಕೆ ಮತ್ತು ಕೋಲಿಗಳ ಬಗ್ಗೆ ತೋರಿದ ಉದಾಸೀನದಿಂದಾಗಿ ಕಾಂಗ್ರೆಸ್ ಇಂದು ಭಾರಿ ಬೆಲೆ ತೆತ್ತಿದೆ.

ಪಾಟಿದಾರರ ಬಲವೊಂದಿದ್ದರೆ ಇಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಲೋಕಸಭೆ ಚುನಾವಣೆ ಸಾಕ್ಷಿ. ಆಗ ಪಾಟಿದಾರರು ಪೂರ್ತಿಯಾಗಿ ಜೊತೆಗಿದ್ದುದರಿಂದ ಬಿಜೆಪಿ 54 ವಿಧಾನಸಭಾ ಕ್ಷೇತ್ರಗಳ ಪೈಕಿ 52 ಕಡೆ ಮುನ್ನಡೆ ಸಾಧಿಸಿತ್ತು. ಪಾಟಿದಾರರು ಕೈಕೊಡುತ್ತಾರೆ ಎನ್ನುವುದು ಗೊತ್ತಾಗುತ್ತಿದ್ದಂತೆ ಬಿಜೆಪಿ ಮೀನುಗಾರರಿಗೆ ಗಾಳ ಹಾಕಿತು. ಕೋಲಿ ಸಮುದಾಯದ ರಮಾನಾಥ್ ಕೋವಿಂದ ಅವರನ್ನು ರಾಷ್ಟ್ರಪತಿ ಮಾಡಿತು. ಕೋವಿಂದ್ ಆಯ್ಕೆ ಆಗ ಅಚ್ಚರಿ ಎನಿಸುತ್ತಿತ್ತು. ಈಗ ಪಕ್ಕಾ ಲೆಕ್ಕಾಚಾರ ಎಂದು ಜಗಜ್ಜಾಹೀರಾಗಿದೆ. ಪಾಟೀದಾರರು ಕೈಕೊಟ್ಟರೂ ಬಿಜೆಪಿ ಈಗ 23 ಸ್ಥಾನ ಗಳಿಸಲು ಕೋಲಿ ಸಮಾಜವೇ ಕಾರಣ. ಕೋಲಿ ಸಮಾಜದೊಂದಿಗೆ ಹಿಂದುಳಿದ ಜಾತಿಗಳದ್ದು ಪೋಷಕ ಪಾತ್ರ. ಈ ಪ್ರಾಂತ್ಯದ ಕೃಷಿ ಬಿಕ್ಕಟ್ಟಿನ ಬಗ್ಗೆ ಅದರಲ್ಲೂ, ಶೇಂಗಾ ಮತ್ತು ಹತ್ತಿ ಬೆಳೆಗಳ ಬಗ್ಗೆ ರಾಹುಲ್ ಗಾಂಧಿ ಬಹಳಷ್ಟು ಭಾಷಣ ಮಾಡಿದರಾದರೂ ಕಡೆಗೂ ಅದು ಚುನಾವಣಾ ವಿಷಯವಾಗಲಿಲ್ಲ ಎನ್ನುವುದು ಈಗ ವೇದ್ಯವಾಗುತ್ತದೆ.

ಕೇಂದ್ರ ಗುಜರಾತ್ ಪ್ರಾಂತ್ಯದಲ್ಲಿ ಭಾರಿ ಪ್ರಮಾಣದ ಬದಲಾವಣೆ ಗೋಚರಿಸುತ್ತಿಲ್ಲ. 2012ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನ ಗೆದ್ದಿತ್ತು. ಈಗ 37ಕ್ಕೆ ಇಳಿದಿದೆ. ಅಂದರೆ, ಕಳೆದುಕೊಂಡಿರುವುದು ಕೇವಲ ಏಳು ಸ್ಥಾನಗಳನ್ನು. ಅಹಮದಾಬಾದ್ ಎನ್ನುವ ಮಹಾನಗರ ಮತ್ತೊಮ್ಮೆ ಬಿಜೆಪಿಯ ಕೈಹಿಡಿದಿದೆ. ಅಹಮದಾಬಾದ್ ನಗರದ ಫಲಿತಾಂಶ ಈಗಲೂ ನಗರ ಪ್ರದೇಶಗಳಲ್ಲಿ ಬಿಜೆಪಿಯ ವರ್ಚಸ್ಸು ಮಾಸಿಲ್ಲ ಎನ್ನುವ ಸಂಗತಿಯನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಜೊತೆಜೊತೆಗೆ ಕಾಂಗ್ರೆಸ್ ಗ್ರಾಮೀಣ ಪ್ರದೇಶದಿಂದಾಚೆಗೆ ತನ್ನ ನೆಲೆಯನ್ನು ಕಂಡುಕೊಂಡಿಲ್ಲ ಎನ್ನುವ ವಿಷಯವನ್ನೂ ನಿಚ್ಚಳವಾಗಿ ಹೇಳುತ್ತದೆ. ಅಹಮದಾಬಾದ್ ಅಷ್ಟೇ ಅಲ್ಲದೆ ವಡೋಧರಾ, ಆನಂದ್‌ನಂಥ ಅರೆನಗರ ಪ್ರದೇಶಗಳಲ್ಲೂ ಕಮಲದ ಕಳೆಯೇ ಕಂಡುಬಂದಿದೆ. ಇಲ್ಲಿ ನಿಜಕ್ಕೂ ನಿರುದ್ಯೋಗ ಸಮಸ್ಯೆ ಆಡಳಿತಾರೂಢ ಬಿಜೆಪಿಯನ್ನು ಬಾಧಿಸಬೇಕಿತ್ತು. ಆದರೆ ನಿರುದ್ಯೋಗ ಸಮಸ್ಯೆ ಚುನಾವಣಾ ಕಣದ ಚರ್ಚೆಯ ಮುನ್ನೆಲೆಗೆ ಬಾರದ ಕಾರಣ ಬಿಜೆಪಿ ಬಚಾವ್ ಆಗುವಂತಾಗಿದೆ.

ದಹೋದ್, ಚೋಟಾ ಉದಯ್ಪುರ್, ಖೇಡಾ, ಪಂಚಮಹಲ್ ಜಿಲ್ಲೆಗಳ ಫಲಿತಾಂಶ ಬಿಜೆಪಿಗೆ ಅಚ್ಚರಿಯಾಗಿ ಮತ್ತು ಕಾಂಗ್ರೆಸ್‌ಗೆ ಆತಂಕವಾಗಿ ಪರಿಣಮಿಸಿದೆ. ಈ ಎಲ್ಲ ಜಿಲ್ಲೆಗಳಲ್ಲೂ ಆದಿವಾಸಿ ಮತದಾರರದ್ದೇ ನಿರ್ಣಾಯಕ ಪಾತ್ರ. ಕಾಂಗ್ರೆಸ್ ಆದಿವಾಸಿಗಳನ್ನು ತಮ್ಮ ಸಾಂಪ್ರದಾಯಿಕ ಮತಗಳೆಂದು ಭಾವಿಸಿತ್ತು. ಛೋಟು ವಸವಾ ಇಲ್ಲಿನ ಆದಿವಾಸಿಗಳ ಅತ್ಯಂತ ನೆಚ್ಚಿನ ನಾಯಕ. ಕಳೆದ ಭಾರಿ ಜೆಡಿಯುನಿಂದ ಗೆದ್ದಿದ್ದ ಛೋಟು ವಸವಾ, ಈ ಸಲ ತಮ್ಮದೇ ಭಾರತೀಯ ಆದಿವಾಸಿಗಳ ಪಕ್ಷ ಕಟ್ಟಿಕೊಂಡಿದ್ದರು. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಬಿಟಿಪಿ ಪಕ್ಷ ಎರಡು ಕಡೆ ಸ್ಪರ್ಧಿಸಿತ್ತು. ಎರಡೂ ಕಡೆಯೂ ಗೆದ್ದಿದೆ. ಆದರೆ ಬಿಟಿಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತಗಳು ವರ್ಗಾ ಆಗಿಲ್ಲ. ಇಡೀ ಗುಜರಾತಿನಲ್ಲಿ ಸೋಲುತ್ತಿದ್ದ ಕಾಂಗ್ರೆಸ್ ಇಲ್ಲಿ ಮಾತ್ರ ಆದಿವಾಸಿಗಳ ಬಲದಿಂದ ಅಗ್ರಪಾಲು ಪಡೆಯುತ್ತಿತ್ತು. ಈ ಸಲ ಇಡೀ ಕೇಂದ್ರ ಗುಜರಾತ್ ಪ್ರದೇಶದಲ್ಲಿ ಕಾಂಗ್ರೆಸ್ ಗಳಿಸಿರುವುದು ಕೇವಲ 22 ಸ್ಥಾನಗಳನ್ನು. ಕಳೆದ ಚುನಾವಣೆಯಲ್ಲಿ ಪಾಟಿದಾರ್, ದಲಿತ ಮತ್ತು ಹಿಂದುಳಿದ ಜಾತಿಗಳ ಸಮೀಕರಣ ಇಲ್ಲದೆಯೂ ಕಾಂಗ್ರೆಸ್ ಇಲ್ಲಿ 21 ಸ್ಥಾನ ಗಳಿಸಿತ್ತು. ದೊಡ್ಡ ಜಾತಿ ಸಮೀಕರಣದ ನಡುವೆಯೂ ಕಾಂಗ್ರೆಸ್ ಒಂದು ಸ್ಥಾನವನ್ನು ಮಾತ್ರ ವೃದ್ಧಿಸಿಕೊಳ್ಳಲು ಸಾಧ್ಯವಾಗಿದೆ ಎಂದರೆ, ಆ ಜಾತಿ ಸಮೀಕರಣ ಅಷ್ಟೇನೂ ಕೆಲಸ ಮಾಡಿಲ್ಲ ಎಂದೇ ಅರ್ಥ. ಪಾಟಿದಾರ್-ದಲಿತ-ಹಿಂದುಳಿದ ಜಾತಿಗಳಂಥ ಸಮೀಕರಣ ಚುನಾವಣೆಯಿಂದ ಚುನಾವಣೆಗೆ ಬದಲಾಗುತ್ತಿರುತ್ತವೆ. ತಮ್ಮ ಜೊತೆ ಗಟ್ಟಿಯಾಗಿ ನಿಂತಿದ್ದ ಆದಿವಾಸಿಗಳು ಚದುರಿಹೋಗಿದ್ದಾರೆ ಎನ್ನುವ ಆತಂಕ ಈಗ ಕಾಂಗ್ರೆಸ್ ಅನ್ನು ಕಾಡಲಾರಂಭಿಸಿದೆ. ಕಾಂಗ್ರೆಸ್ ಪಾಟೀದಾರರತ್ತ ಹೆಚ್ಚೆಚ್ಚು ಒಲವು ತೋರಿದ್ದರಿಂದ ತಮ್ಮ ಹಾಡಿ-ಹಟ್ಟಿಗಳಲ್ಲಿ ಪಟೇಲರ ದೌರ್ಜನ್ಯಕ್ಕೊಳಗಾಗಿದ್ದ ಆದಿವಾಸಿಗಳು ಕಾಂಗ್ರೆಸ್‌ನಿಂದ ದೂರವಾದರು ಎನ್ನಲಾಗುತ್ತಿದೆ. ಇನ್ನೊಂದೆಡೆ, ಪಾಟೀದಾರರು ದೂರವಾಗುವ ಸುಳಿವು ನೀಡುತ್ತಿದ್ದಂತೆ ಬಿಜೆಪಿ ಆದಿವಾಸಿಗಳನ್ನು ಒಲಿಸಿಕೊಳ್ಳಲು ಪ್ರಯತ್ನ ಮಾಡಿತು. ಈ ಪ್ರಯತ್ನದಲ್ಲಿ ಬಿಜೆಪಿ ಭಾಗಶಃ ಯಶಸ್ವಿಯಾಗಿದೆ. ಅದರಿಂದಾಗಿಯೇ ಇಷ್ಟೆಲ್ಲ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಮತ್ತೆ ಈ ಪ್ರಾಂತ್ಯದಲ್ಲಿ ತನ್ನ ಪ್ರಭಾವ ಉಳಿಸಿಕೊಳ್ಳಲು ಸಾಧ್ಯವಾಗಿದೆ.

ಪಾಟಿದಾರ್ ಪಾರುಪತ್ಯದ ಉತ್ತರ ಗುಜರಾತಿನಲ್ಲಿ ಪಟೇಲರಿಗೆ ಉತ್ತರ ಸಿಗದ ನೂರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಪಾಟೀದಾರರ ಎಪಿಕ್ ಸೆಂಟರ್ ಎಂದು ಕರೆಯಲಾಗುವ ಮೆಹಸಾನಕ್ಕೆ ಭೇಟಿ ನೀಡಿದ್ದ ‘ದಿ ಸ್ಟೇಟ್’ ಎದುರು, ಉತ್ತರ ಗುಜರಾತಿನ ಪಾಟಿದಾರ್ ಅಮಾನತ್ ಆಂದೋಲನ ಸಮಿತಿ ಸಂಚಾಲಕ ಸುನೀಲ್ ಪಟೇಲ್, "ಮೆಹಸಾನದಿಂದಲೇ ಬಿಜೆಪಿಯ ಅವಸಾನ,” ಎಂದು ಷರಾ ಬರೆದಿದ್ದರು. ಸುನೀಲ್ ಪಟೇಲ್ ಇಡೀ ಉತ್ತರ ಗುಜರಾತ್ ಬಗ್ಗೆ ಮಾತನಾಡುತ್ತ, "ಈ ಭಾರಿ ಬಿಜೆಪಿಗೆ ಬುದ್ಧಿ ಕಲಿಸಿಯೇ ತೀರುತ್ತೇವೆ,” ಎನ್ನುವ ಶಪಥವನ್ನೂ ಗೈದಿದ್ದರು. ಆದರೆ ಸುನೀಲ್ ಪಟೇಲ್ ಮಾತುಗಳು ಅವರ ತವರೂರಾದ ಮೆಹಸಾನದಲ್ಲೇ ಸುಳ್ಳಾಗಿವೆ. ಮೆಹಸಾನದಲ್ಲಿ ಬಿಜೆಪಿಯ ಹುರಿಯಾಳಾಗಿದ್ದ ಗುಜರಾತಿನ ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಪಟೇಲ್ ಮುಖಂಡ ನಿತಿನ್ ಪಟೇಲ್ ಜಯಭೇರಿ ಭಾರಿಸಿದ್ದಾರೆ. ಮೆಹಸಾನ ನಗರದಲ್ಲಿ ಪ್ರಭಾವ ಹೊಂದಿರುವ ಮುಸ್ಲಿಂ ಮತಗಳನ್ನು ಒಡೆಯಲು ನಿತಿನ್ ಪಟೇಲ್ ಅವರೇ ಕೆಲವು ಮುಸ್ಲಿಂ ಪಕ್ಷೇತರ ಅಭ್ಯರ್ಥಿಗಳನ್ನು ಹೂಡಿದರೆಂದೂ ಹೇಳಲಾಗುತ್ತಿದೆ.

ಹಿಂದುಳಿದ ವರ್ಗಗಳ ಪ್ರಾಬಲ್ಯದ ಪಠಾಣ್ ಜಿಲ್ಲೆಯ ರಾಧನ್ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಲ್ಪೇಶ್ ಠಾಕೂರ್ ಗೆದ್ದಿದ್ದಾರೆ. ಪಕ್ಕದ ಬನಸ್ಕಾಂಟಾ ಜಿಲ್ಲೆಯ ವಡ್ಗಾಂ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿಗ್ನೇಶ್ ಮೇವಾನಿ ಕೂಡ ಜಯ ಸಾಧಿಸಿದ್ದಾರೆ. ಆಲ್ಪೇಶ್ ಠಾಕೂರ್ ಗೆಲುವಿನಲ್ಲಿ ಜಿಗ್ನೇಶ್ ಪಾತ್ರವಿದೆ. ಜಿಗ್ನೇಶ್ ಜಯ ಗಳಿಸುವುದರಲ್ಲಿ ಆಲ್ಪೇಶ್ ಠಾಕೂರ್ ಕೊಡುಗೆ ಇದೆ. ಇಬ್ಬರೂ ಬಿಜೆಪಿ ವಿರುದ್ಧ ಸಮರ ಸಾರಿದವರು. ಇವರಂತೆ ಹಾರ್ದಿಕ್ ಪಟೇಲ್ ಕೂಡ. ಮೇಲುನೋಟಕ್ಕೆ ಈ ಮೂವರು ಒಂದಾಗಿದ್ದರು. ಇವರ ಶತ್ರುವಾಗಿದ್ದ ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್ ಜೊತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೈಜೋಡಿಸಿದರು. ಇವರ ನಡುವೆ ಆದ ಈ ಹೊಂದಾಣಿಕೆ, ಸಹಕಾರ, ರಾಜಿ ಅಥವಾ ಕೊಡುಕೊಳ್ಳುವಿಕೆ ನೆಲಮೂಲದಲ್ಲಿ ಆಗಿರಲಿಲ್ಲ. ಫಲಿತಾಂಶ ಹೊರಬೀಳುತ್ತಿದ್ದಂತೆ ಗುಜರಾತಿನಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಅಶೋಕ್ ಗೆಹ್ಲೋಟ್ ಈ ಸಂಗತಿಯನ್ನು ಒಪ್ಪಿಕೊಂಡರು. "ಇಷ್ಟು ದಿವಸ ಈ ಸಂಗತಿಯನ್ನು ಹೇಳುವ ಸ್ಥಿತಿಯಲ್ಲಿರಲಿಲ್ಲ. ಇಂಥದೊಂದು ದೊಡ್ಡ ಜಾತಿ ಸಮೀಕರಣ ಮಾಡುವುದು ನಿಜಕ್ಕೂ ಸಾಹಸವಾಗಿತ್ತು. ಹೇಗೋ ಮಾಡಿದೆವು. ಆದರೆ ಇದು ಇನ್ನೂ ಆರು ತಿಂಗಳು ಮೊದಲೇ ಆಗಬೇಕಿತ್ತು. ಮೊದಲೇ ಆಗಿದ್ದಿದ್ದರೆ ಬೇರುಮಟ್ಟದಲ್ಲೂ ಪಾಟಿದಾರ್, ದಲಿತ, ಹಿಂದುಳಿದ ಜಾತಿಗಳ ಮತಗಳನ್ನು ಬೆಸೆಯಲು ಸಾಧ್ಯವಾಗುತ್ತಿತ್ತು. ಆಗ ಖಂಡಿತಕ್ಕೂ ಜನಾದೇಶ ನಮ್ಮ ಪರವಾಗಿರುತ್ತಿತ್ತು. ಒಂದೊಳ್ಳೆ ಅವಕಾಶ ಮಿಸ್ ಮಾಡಿಕೊಂಡೆವು,” ಎಂದು ಅಲವತ್ತುಕೊಂಡರು.

ಇದನ್ನೂ ಓದಿ : ಸಂಕಲನ | ಗುಜರಾತ್‌ ಚುನಾವಣೆ | ಎಲ್ಲ ವಿಶ್ಲೇಷಣಾ ವರದಿಗಳ ಮಾಹಿತಿ ಕೊಂಡಿ

ದಕ್ಷಿಣ ಗುಜರಾತಿನಲ್ಲಿ ಬಿಜೆಪಿ ತನ್ನ ನೆಲೆ ಉಳಿಸಿಕೊಂಡಿದೆ. ಇಲ್ಲಿ ನೆಲೆ ಉಳಿಸಿಕೊಳ್ಳುವ ಜೊತೆಗೆ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಂಡಿದೆ. ದಕ್ಷಿಣ ಗುಜರಾತಿನ ಪ್ರಮುಖ ಆಕರ್ಷಣೆ ಸೂರತ್. ಇದೇ ಸೂರತ್ ವ್ಯಾಪಾರಿಗಳು, ಉದ್ಯಮಿಗಳು, ಕೋಟ್ಯಾಧಿಪತಿಗಳು ಇಲ್ಲಿನ ರಾಜಕೀಯ ಚಿತ್ರಣವನ್ನು ಬದಲಿಸಬಲ್ಲರು. ಇವರೆಲ್ಲರೂ ಮೊದಲಿನಿಂದಲೂ ಬಿಜೆಪಿ ಬೆಂಬಲಿಗರು. ಇವರ ಬೆಂಬಲದಿಂದಾಗಿಯೇ 2012ರಲ್ಲಿ ಇಲ್ಲಿನ 29 ಸೀಟುಗಳ ಪೈಕಿ ಬಿಜೆಪಿ 22 ಸ್ಥಾನ ಗೆದ್ದಿತ್ತು. ನೋಟು ನಿಷೇಧ ಮತ್ತು ಜಿಎಸ್ಟಿ ಜಾರಿಯಿಂದಾಗಿ ಪರಿಸ್ಥಿತಿ ಬದಲಾಗಿತ್ತು. ಇಲ್ಲಿನ ವ್ಯಾಪಾರಿ ವರ್ಗ ಬಹಿರಂಗವಾಗಿ ಬಿಜೆಪಿ ವಿರುದ್ಧ ಸಮರ ಸಾರಿತ್ತು. ವ್ಯಾಪಾರಿಗಳ ಪ್ರತಿರೋಧದಿಂದ ಬಿಜೆಪಿ ಬೆದರಿತ್ತು. ಇಷ್ಟೆಲ್ಲದರ ನಡುವೆಯೂ ಈ ವ್ಯಾಪಾರಿ ವರ್ಗ ಎಂದೂ ಕಾಂಗ್ರೆಸ್‌ಗೆ ಮತ ಹಾಕಿದವರಲ್ಲ, ಆದ್ದರಿಂದ ಈ ಬಾರಿಯೂ ಅವರು ನಮ್ಮನ್ನು ಬಿಟ್ಟುಹೋಗಲ್ಲ ಎನ್ನುವ ಕಟ್ಟಕಡೆಯ ಆಶಾಭಾವ ಹೊಂದಿದ್ದರು ಬಿಜೆಪಿ ನಾಯಕರು. ಆ ಆಶಾಭಾವ ಸತ್ಯವಾಗಿದೆ. ‘ದಿ ಸ್ಟೇಟ್’ ಇಲ್ಲಿ ಸುತ್ತಾಡುತ್ತಿದ್ದಾಗ ಎಡತಾಕಿದ ಎಲ್ಲರೂ ಬಿಜೆಪಿಯ ಬಗ್ಗೆ ಕೆಂಡಕಾರಿದವರೇ. ಆದರೆ ಯಾರಿಗೂ ಕಾಂಗ್ರೆಸ್ ಮೇಲೆ ಪ್ರೀತಿ ಇರುವ ಸುಳಿವು ಸಿಕ್ಕಿರಲಿಲ್ಲ. ಈಗಂತೂ ಅದು ಅತ್ಯಂತ ಸ್ಪಷ್ಟವಾಗಿ ಗೊತ್ತಾಗಿದೆ.

ಇಲ್ಲಿನ ವ್ಯಾಪಾರಿಗಳ ಆಕ್ರೋಶವನ್ನು ಚೆನ್ನಾಗಿ ಅರಿತಿದ್ದ ಬಿಜೆಪಿ ನಾಯಕರು, ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ, ಕಡೆಯ ದಿನಗಳಲ್ಲಿ ಹಠಕ್ಕೆ ಬಿದ್ದು ಅವಸರಕ್ಕೆ ಜಿಎಸ್ಟಿ ಕೌನ್ಸಿಲ್ ಸಭೆ ಕರೆದು ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಿದರು. ಈ ಕಸರತ್ತಿಗಾಗಿ ಸೂರತ್ ಬಿಜೆಪಿಗೆ ಗೆಲುವಿನ ಬಹುಮಾನ ನೀಡಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More