ಸೋಲದೆ ಇದ್ದರೂ ಅವಮಾನದ ಗಾಯ ಸವರಿಕೊಳ್ಳದೆ ಬಿಜೆಪಿಗೆ ಗತ್ಯಂತರವಿಲ್ಲ!

ಕೇಂದ್ರ ಸರ್ಕಾರದ ಎದುರು ಸಮರ್ಥವಾಗಿ ನಿಲ್ಲಬಲ್ಲ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಒಂದು ವೇಳೆ, ಸಮರ್ಥ ಅಭ್ಯರ್ಥಿಯನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದರೆ, ಫಲಿತಾಂಶವು ಖಂಡಿತ ಬಿಜೆಪಿಗೆ ಮರ್ಮಾಘಾತ ನೀಡುತ್ತಿತ್ತು

ಒಂದು ವೇಳೆ ಬಿಜೆಪಿ ಸೋಲು ಕಂಡಿದ್ದರೂ ಇಲ್ಲಿನ ಪರಿಸ್ಥಿತಿ ತೀರಾ ಭಿನ್ನವಾಗೇನೂ ಇರುತ್ತಿರಲಿಲ್ಲ. ಏಕೆಂದರೆ, ಪಕ್ಷದ ರಾಜ್ಯ ಘಟಕ ಈಗಲೂ ಆಘಾತದ, ಅವಮಾನದ ಮನಸ್ಥಿತಿಯಲ್ಲೇ ಇದೆ. ಏಕೆಂದರೆ, ಅದರ ಸ್ಥಿತಿ ಈಗ ಮಾರಣಾಂತಿಕ ಪೆಟ್ಟು ತಿಂದರೂ ಬದುಕುಳಿದ ಜೀವದಂತಾಗಿದೆ. ಸತತ 22 ವರ್ಷಗಳ ಕಾಲ ನಿರಂತರವಾಗಿ ಅಧಿಕಾರ ಅನುಭವಿಸಿದ ಪಕ್ಷ, ಈವರೆಗೆ ನಿರಾಯಾಸವಾಗಿ ಚುನಾವಣೆ ಗೆಲ್ಲುವುದನ್ನೇ ಅಭ್ಯಾಸ ಮಾಡಿಕೊಂಡಿತ್ತು. ಆದರೆ, ಈ ಬಾರಿ ಅದರ ಹಿಂದುತ್ವದ ಪ್ರಯೋಗಶಾಲೆ, ಇಷ್ಟು ವರ್ಷಗಳ ಕಾಲ ಎದುರಾಳಿಗಳನ್ನು ಧೂಳೀಪಟ ಮಾಡಿದ ಫಲಿತಾಂಶವನ್ನು ನೀಡುವಲ್ಲಿ ವಿಫಲವಾಗಿದೆ.

ಮತ ಎಣಿಕೆಗೆ ಕೇವಲ 48 ಗಂಟೆಗಳ ಮುಂಚೆ ಕೂಡ, ಎಲ್ಲ ಮತಗಟ್ಟೆ ಸಮೀಕ್ಷೆಗಳೂ ಬಿಜೆಪಿಗೆ ಭಾರಿ ಜಯ ಎಂದೇ ಹೇಳಿದ್ದವು. ಆದರೆ, ಫಲಿತಾಂಶಗಳು ಹೊರಬೀಳುತ್ತಲೇ, ಸಮೀಕ್ಷೆಗಳ ತಜ್ಞರು ತಲೆ ಮೇಲೆ ಕೈಹೊತ್ತು ಕೂರುವಂಥ ಜನಾದೇಶವನ್ನು ಗುಜರಾತಿಗಳು ನೀಡಿದರು. ಸರಳ ಬಹುಮತಕ್ಕೆ ಕೇವಲ ಒಂಬತ್ತು ಸ್ಥಾನಗಳ ಅಂತರದ ಸಮೀಪಕ್ಕೆ ಕಾಂಗ್ರೆಸ್‌ ಅನ್ನು ತಂದು ನಿಲ್ಲಿಸಿರುವ ಮತದಾರನ ಚಾಣಾಕ್ಷತೆಗೆ ಚುನಾವಣಾ ಪಂಡಿತರು ಕಂಗಾಲಾಗಿದ್ದಾರೆ. ಬಿಜೆಪಿ ತಾನೇ ನಿಗದಿ ಮಾಡಿಕೊಂಡಿದ್ದ 150ರ ಗಡಿಯ ಸಮೀಪಕ್ಕೆ ಬಂದಿಲ್ಲ. ಕೇವಲ ಸರಳ ಬಹುಮತಕ್ಕಿಂತ ಏಳು ಸ್ಥಾನ ಹೆಚ್ಚು ಪಡೆದು, ಎರಡಂಕಿಯ ಸಾಧನೆಗೇ ಏದುರಿಸಿರು ಬಿಡುತ್ತಿದೆ.

ಬಿಜೆಪಿಯ ಪಾಲಿನ ಸದ್ಯದ ದೊಡ್ಡ ಸಮಾಧಾನದ ಸಂಗತಿ ಎಂದರೆ, ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದಂತೆ, "ರಾಜಕೀಯವಾಗಿ ಇನ್ನೂ ಎಳಸು ಎಂಬಂಥ ರಾಹುಲ್ ಅವರ ಕೈವಶವಾಗುತ್ತಿದ್ದ ಇಡೀ ಚುನಾವಣಾ ಫಲಿತಾಂಶವನ್ನು ಕನಿಷ್ಠ ನಮ್ಮದಾಗಿಸಿಕೊಂಡಿದ್ದೇವೆ. ಒಂದು ದೊಡ್ಡ ಅವಮಾನದಿಂದ, ತಲೆತಗ್ಗಿಸಿಕೊಳ್ಳಬೇಕಾದ ಪರಿಸ್ಥಿತಿಯಿಂದ ಪಾರಾಗಿದ್ದೇವೆ ಎಂಬುದೇ ದೊಡ್ಡ ಸಮಾಧಾನದ ಸಂಗತಿ.”

ಬಿಜೆಪಿಯ ಈ ರೋಧನೆ ಮತ್ತು ಕಾಂಗ್ರೆಸ್ಸಿನ ಅದೃಷ್ಟಕ್ಕೆ ದೊಡ್ಡ ಕೊಡುಗೆ ಕೊಟ್ಟವರೆಂದರೆ; ಎರಡು ವರ್ಷದ ಪ್ರಾಯದ ಪಾಟಿದಾರ್ ಮೀಸಲಾತಿ ಹೋರಾಟ ಕಟ್ಟಿದ 24 ವರ್ಷದ ಯುವಕ ಹಾರ್ದಿಕ್ ಪಟೇಲ್, ಆತನಿಗಿಂತ ತುಸು ಹಿರಿಯನಾದ ಹಿಂದುಳಿದ ವರ್ಗಗಳ ಯುವ ನಾಯಕ ಆಲ್ಪೇಶ್ ಠಾಕೂರ್ ಮತ್ತು ದಲಿತ ಹೋರಾಟಗಾರ ಜಿಗ್ನೇಶ್ ಮೆವಾನಿ. ಈ ಹಿಂದೆ ಎಂದೂ ಗುಜರಾತಿನಲ್ಲಿ ಪಾಟಿದಾರ್, ದಲಿತ ಹಾಗೂ ಹಿಂದುಳಿದ ವರ್ಗಗಳ ನಾಯಕರು ಹೀಗೆ ಒಗ್ಗಟ್ಟಾಗಿ ಹೋರಾಡಿದ ಉದಾಹರಣೆಯೇ ಇಲ್ಲ.

ಜಾತಿ ಹಕ್ಕು ಪ್ರತಿಪಾದನೆಯ ಮೂಲಕ ಮುನ್ನೆಲೆಗೆ ಬಂದ ಈ ಮೂವರು ಯುವಕರು ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿ ಇದೀಗ ತಾನೇ ನೇಮಕವಾಗಿರುವ ರಾಹುಲ್ ಗಾಂಧಿ, ಚುನಾವಣಾ ಪ್ರಚಾರದುದ್ದಕ್ಕೂ ಪ್ರಮುಖವಾಗಿ ಮಾತನಾಡಿದ್ದು ಹೆಚ್ಚುತ್ತಿರುವ ನಿರುದ್ಯೋಗ, ದುಬಾರಿ ಮತ್ತು ಖಾಸಗೀಕರಣಗೊಳ್ಳುತ್ತಿರುವ ಶಿಕ್ಷಣ, ರೈತರು ಎದುರಿಸುತ್ತಿರುವ ತೀವ್ರ ಬಿಕ್ಕಟ್ಟು, ನೋಟು ರದ್ದತಿ ಮತ್ತು ಜಿಎಸ್ಟಿ ಎಂಬ ಏಟಿನ ಮೇಲೆ ಏಟು ತಿಂದು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆಯೇ. ಕೆಲವೇ ಮಂದಿ ಕಾರ್ಪೊರೇಟ್ ಕುಳಗಳನ್ನು ಸಂತೃಪ್ತಿಗೊಳಿಸುವ ಮೋದಿ ಮತ್ತು ರಾಜ್ಯ ಸರ್ಕಾರದ ಕ್ರಮಗಳು, ಜನಸಾಮಾನ್ಯರ ಬದುಕಿನ ಮೇಲೆ ತೀವ್ರತರದ ಪರಿಣಾಮ ಬೀರುವ ನೈಜ ಸಮಸ್ಯೆಗಳತ್ತ ಕುರುಡಾಗಿಯೇ ಉಳಿದಿದ್ದವು. ಹಾಗಾಗಿ, ತಮ್ಮ ಬಗ್ಗೆ ಮಾತನಾಡುತ್ತಿದ್ದ ಮೂವರು ಯುವ ನಾಯಕರತ್ತ ಜನ ಸಹಜವಾಗೇ ಒಲವು ತೋರಿದರು. ಅವರ ಪ್ರಚಾರ ಸಭೆಗಳಲ್ಲಿ ಭಾರಿ ಜನಸ್ತೋಮ ಸಾಮಾನ್ಯ ದೃಶ್ಯವಾಗಿತ್ತು.

ಈ ಎಲ್ಲದರ ಪರಿಣಾಮವಾಗಿ, ತನ್ನ ಭದ್ರಕೋಟೆ ಎಂದು ಭಾವಿಸಿದ್ದ ರಾಜ್ಯದಲ್ಲೇ, ಬಿಜೆಪಿ ಮತಹಂಚಿಕೆ ಪ್ರಮಾಣ, 2014ರ ಲೋಕಸಭಾ ಚುನಾವಣೆಯ ಶೇ.60.11ರಿಂದ ಶೇ.49ಕ್ಕೆ ಕುಸಿಯಿತು. ಮತ್ತೊಂದು ಕಡೆ, ಕಾಂಗ್ರೆಸ್ ಮತ ಗಳಿಕೆ ಪ್ರಮಾಣ, ಶೇ.33.45ರಿಂದ 41.5ಕ್ಕೆ ಏರಿತು!

ಸೌರಾಷ್ಟ್ರ ಮತ್ತು ಕಛ್ ವಲಯದಲ್ಲಿನ ಜಯ ಕಾಂಗ್ರೆಸ್ ಪಾಲಿಗೆ ದೊಡ್ಡ ಆಶಾವಾದದ ಸಂಗತಿ. ಈ ಭಾಗದ ಒಟ್ಟು 54 ಸ್ಥಾನಗಳ ಪೈಕಿ 30 ಸ್ಥಾನವನ್ನು ಕೈವಶ ಮಾಡಿಕೊಂಡಿರುವ ಕಾಂಗ್ರೆಸ್, 2012ರ ಚುನಾವಣೆಗೆ ಹೋಲಿಸಿದರೆ ಈ ಬಾರಿ 15 ಸ್ಥಾನಗಳನ್ನು ಹೆಚ್ಚುವರಿಯಾಗಿ ತನ್ನ ಬುಟ್ಟಿಗೆ ಹಾಕಿಕೊಂಡಿದೆ.

ಪಾಟಿದಾರ್ ಹೋರಾಟ, ರೈತರ ಬಿಕ್ಕಟ್ಟು, ನೋಟು ರದ್ದತಿ ಮತ್ತು ಜಿಎಸ್ಟಿ ಉದ್ದಿಮೆಗಳಿಗೆ ಕೊಟ್ಟ ಪೆಟ್ಟು ಸೇರಿದಂತೆ ಎಲ್ಲ ಪ್ರಮುಖ ಸಮಸ್ಯೆಗಳ ಬಗ್ಗೆಯೂ ಗುಜರಾತಿನ ಇತರ ಭಾಗಗಳಿಗಿಂತ ಇಲ್ಲಿ ಹೆಚ್ಚು ಪ್ರಸ್ತಾಪಿಸಲಾಗಿತ್ತು. ಹಾಗಾಗಿ ಈ ಫಲಿತಾಂಶವು, ಗುಜರಾತಿನ ನಗರ ಪ್ರದೇಶಗಳಿಗೆ ಹೋಲಿಸಿದರೆ, ಗ್ರಾಮೀಣ ಭಾಗದಲ್ಲಿ ಬಿಜೆಪಿ ತನ್ನ ಹಿಡಿತ ಕಳೆದುಕೊಂಡಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ. ನಗರ ಪ್ರದೇಶಗಳು ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್ ಎಂಬುದು ಗೊತ್ತಿರುವ ಸಂಗತಿ.

ಇದನ್ನೂ ಓದಿ : ಸಂಕಲನ | ಗುಜರಾತ್‌ ಚುನಾವಣೆ | ಎಲ್ಲ ವಿಶ್ಲೇಷಣಾ ವರದಿಗಳ ಮಾಹಿತಿ ಕೊಂಡಿ

ಕೇಂದ್ರ ಸರ್ಕಾರದ ಎದುರು ಸಮರ್ಥವಾಗಿ ನಿಲ್ಲಬಲ್ಲ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಹಾಗಾಗಿಯೇ ಆ ಪಕ್ಷ, ಮೋದಿ ಸರ್ಕಾರ ಹಾಗೂ ಅದರ ನೆರಳಿನಂಥ ಜನವಿರೋಧಿ ರಾಜ್ಯ ಸರ್ಕಾರದ ವಿರುದ್ಧದ ಜನರ ಹತಾಶೆ ಮತ್ತು ಆಕ್ರೋಶವನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಲಿಲ್ಲ. ಹಾಗೊಂದು ವೇಳೆ ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ನಡೆಸಿದ್ದರೆ, ಫಲಿತಾಂಶ ಖಂಡಿತವಾಗಿಯೂ ಬಿಜೆಪಿಗೆ ಮರ್ಮಾಘಾತ ನೀಡುತ್ತಿತ್ತು.

ಇನ್ನು, ರಾಹುಲ್ ಅವರು ಈ ಚುನಾವಣಾ ಪ್ರಚಾರದಲ್ಲಿ ತೋರಿಸಿದ ಅಸಾಮಾನ್ಯ ವೇಗ ಮತ್ತು ಚಾತುರ್ಯಗಳು, ಸಮಯಕ್ಕೆ ಸರಿಯಾದ ನಡೆ ಮತ್ತು ನುಡಿಗಳು, ಅದೆಲ್ಲಕ್ಕಿಂತ ಮುಖ್ಯವಾಗಿ ಜನಸಾಮಾನ್ಯರೊಂದಿಗೆ ತಮ್ಮನ್ನು ತಾವು ಬೆಸೆದುಕೊಂಡು ರೀತಿ ತೀರಾ ಭಿನ್ನವಾಗಿತ್ತು ಮತ್ತು ಹಿಂದಿನ ಅವರ ಎಲ್ಲ ಚುನಾವಣೆಗಳ ಪ್ರಚಾರ ವರಸೆಗಿಂತ ಹೆಚ್ಚು ಜನಮೆಚ್ಚುಗೆಗೆ ಪಾತ್ರವಾಯಿತು. ಆದರೂ ರಾಹುಲ್ ಸೋತರು; ಆದರೆ, ನಿಜವಾಗಿಯೂ ಅದು ಸೋಲಲ್ಲ. ಮೋದಿ ಗೆದ್ದರು, ಆದರೂ ಅವರಿಗೆ ಈಗ ತಮ್ಮ ಸೋಲಿನ, ಅವಮಾನದ ಗಾಯವನ್ನು ಸವರಿಕೊಳ್ಳದೇ ಗತ್ಯಂತರವಿಲ್ಲ!

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More