ಗುಜರಾತ್ ಚುನಾವಣೆ ಫಲಿತಾಂಶವು ನಮ್ಮೆದುರು ತೆರೆದಿಟ್ಟ ಹತ್ತು ಸತ್ಯಗಳು

ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಆರೋಪ, ಪ್ರತ್ಯಾರೋಪಗಳು ಏನೇ ಇರಲಿ, ಗುಜರಾತ್ ಚುನಾವಣೆ ಫಲಿತಾಂಶವು ಮುಂಬರುವ ಕರ್ನಾಟಕ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮೇಲೆ ಪ್ರಭಾವ ಬೀರುವುದು ನಿಶ್ಚಿತ ಎಂಬುದಂತೂ ಸಾಬೀತಾದಂತಾಗಿದೆ

ಗುಜರಾತ್-ರಾಜಸ್ಥಾನ ಪ್ರದೇಶದಲ್ಲಿ ಒಂದು ಗಾದೆಮಾತಿದೆ. ಅದನ್ನು ಹೀಗೆ ಅನುವಾದಿಸಬಹುದು, 'ತಲೆ ಬಾಗಿದರೂ ಪಗಡಿ ಬಾಗಬಾರದು.’ ಒಂದು ವೇಳೆ ಪಗಡಿ ತಲೆಯಿಂದ ಕಳಚಿದರೆ ಅದು ಆ ಮನುಷ್ಯನಿಗೆ ದೊಡ್ಡ ಅವಮಾನ ಎಂಬಂತೆ ಭಾವಿಸಲಾಗುತ್ತದೆ.

ಸೋಮವಾರ ಬೆಳಗ್ಗೆ ಘೋಷಣೆಯಾದ ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶಗಳು, ಅಲ್ಲಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಲು ಎಲ್ಲ ರೀತಿಯ ಪಣ ತೊಟ್ಟಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಪಗಡಿಯನ್ನು ಮತ್ತು ಮರ್ಯಾದೆಯನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಟ್ಟಿವೆ. ಹಾಗಂತ ಅಂದುಕೊಳ್ಳಬಹುದು. ರಾಜ್ಯದ 182 ವಿಧಾನಸಭೆ ಸ್ಥಾನಗಳ ಪೈಕಿ ಬಿಜೆಪಿ ಸರಳ ಬಹುಮತ ಗೆಲ್ಲಲೂ ನಿರೀಕ್ಷೆಗಿಂತ ಹೆಚ್ಚು ಕಷ್ಟಪಟ್ಟಿದೆ. ಹಾಗೆಯೇ ಪ್ರಧಾನಿಯ ರಾಜ್ಯದಲ್ಲಿ ನಿಯಂತ್ರಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸ್ಥಾನ ಗಳಿಕೆಯಲ್ಲಿ ಬಿಜೆಪಿಯನ್ನು ಹಿಂಬಾಲಿಸಿದ ಕಾಂಗ್ರೆಸ್, ಸುಮಾರು 78 ಸ್ಥಾನಗಳನ್ನಷ್ಟೇ ಗೆಲ್ಲುವ ಗುರಿ ಹೊಂದಿದ್ದಂತೆ ಕಾಣುತ್ತದೆ. ಹಿಂದಿನ ಚುನಾವಣೆಗಳ ಅಂಕಿ ನೋಡಿದರೆ ಇದೊಂದು ಪ್ರಗತಿಯೇ ಸರಿ. ಸದ್ಯ, ಈ ಪಕ್ಷದ ವಿರೋಧಿಸಿಗಳು ಊಹಿಸಿದ್ದಂತೆ ಸಂಪೂರ್ಣ ನೆಲಕಚ್ಚಲಿಲ್ಲ. ಗುಜರಾತ್ ಚುನಾವಣೆ ವೇಳೆ ಬಿರುಸಿನ ಪ್ರಚಾರ ಕೈಗೊಂಡಿದ್ದ, ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿಗೆ ಈಗ ಕೊಂಚ ನಿರಾಳ ಅನ್ನಿಸಿರಬಹುದು. ಅದಕ್ಕೇ ಅವರು ಸೋಮವಾರ ಸಂಸತ್ತಿನಲ್ಲಿ ಫಲಿತಾಂಶ ತೃಪ್ತಿ ತಂದಿದೆ ಎಂದಿದ್ದಾರೆ.

ಸತತ ಆರನೆಯ ಬಾರಿ ಗುಜರಾತಿನಲ್ಲಿ ತನ್ನ ಸರಕಾರ ಸ್ಥಾಪಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಹಿಮಾಚಲ ಪ್ರದೇಶದಲ್ಲೂ ಗೆಲುವಿನ ನಗೆ ಬೀರಿದೆ. ಆದರೆ ಅದು ತನ್ನ ಎಂದಿನ ವಿಜೃಂಭಣೆಯ ಶೈಲಿಯಲ್ಲಿ ಸಂತೋಷವನ್ನು ಆಚರಿಸದಿರುವುದನ್ನು ಗಮನಿಸಿದರೆ, ಅದರ ಒಳಕತೆ ಏನು ಎನ್ನುವುದು ಗೊತ್ತಾಗುತ್ತದೆ. ಆ ಒಳಕತೆ ಏನೆಂದರೆ ಕಾಂಗ್ರೆಸ್, ಬಿಜೆಪಿಗೆ ಸರಿಯಾದ ಏಟನ್ನು ನೀಡಿದೆಯಲ್ಲದೆ, ತನ್ನದೇ ಆದ ಪ್ರಭಾವವನ್ನು ಮತ್ತೆ ಗಳಿಸಿಕೊಳ್ಳುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ.

ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಬಿಜೆಪಿಗೆ ಪೂರಕವಾಗಿ ಮಾರ್ಪಾಡುಗೊಂಡಿರುವ ಸಂದೇಹ ಮತ್ತು ಕೋಲಾಹಲದ ಮಧ್ಯೆಯೂ ಎರಡೂ ರಾಷ್ಟ್ರೀಯ ಪಕ್ಷಗಳು, ಕರ್ನಾಟಕ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳ ಮತ್ತೊಂದು ಸುತ್ತಿನ ವಿಧಾನಸಭೆ ಚುನಾವಣೆಗಳಿಗೆ ಮತ್ತು 2019ರ ಲೋಕಸಭೆ ಚುನಾವಣೆಗಳಿಗೆ ಸಿದ್ಧಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಗುಜರಾತ್ ಚುನಾವಣೆ ಫಲಿತಾಂಶದಿಂದ ಅನಾವರಣಗೊಂಡ ಹತ್ತು ಸತ್ಯಗಳು ಇಲ್ಲಿವೆ.

1. ಬಿಜೆಪಿ ಅನಿವಾರ್ಯವಾಗಿ ತನ್ನೆಲ್ಲ ಶಿಸ್ತನ್ನು ಗಾಳಿಗೆ ತೂರಿ, ಕಳಪೆ ಮಟ್ಟದ ತಂತ್ರಗಳನ್ನು ಹೆಣೆಯಬೇಕಾಯಿತು. ಪ್ರಧಾನಮಂತ್ರಿ 40ಕ್ಕೂ ಹೆಚ್ಚು ಚುನಾವಣಾ ಪ್ರಚಾರ ಭಾಷಣ ಮಾಡಬೇಕಾಯಿತು. ಅವರ ಪ್ರಚಾರ ವೈಖರಿಯಿಂದಾಗಿ ರಾಜ್ಯ ವಿಧಾನಸಭೆ ಚುನಾವಣೆ, ರಾಷ್ಟ್ರೀಯ ಚುನಾವಣೆಯಂತೆ ಭಾಸವಾಯಿತು. ಆದರೂ ಅದು ಅಂಥ ಭರ್ಜರಿ ಗೆಲುವನ್ನೇನೂ ಕಾಣಲಿಲ್ಲ. ಆ ಪಕ್ಷದ ನಾಯಕರೇ ನಿರೀಕ್ಷಿಸಿದ್ದಂತೆ 182ರಲ್ಲಿ 150 ಸ್ಥಾನ ಗಿಟ್ಟಿಸಲು ಸಾಧ್ಯವಾಗಲಿಲ್ಲ. 2014ರಲ್ಲಿ ಚುನಾವಣೆ ವಿಚಾರ ಪ್ರಸ್ತಾಪವಾದಾಗ ತನ್ನಲ್ಲಿ ಆಂತರಿಕವಾಗಿ ಹೊಂದಿದ್ದ ಆತ್ಮವಿಶ್ವಾಸ ಈಗ ಸೊರಗಿದಂತೆ ಕಾಣುತ್ತದೆ.

2. ಫಲಿತಾಂಶಗಳು ವಾಸ್ತವದ ಪರೀಕ್ಷೆಯಾಗಿವೆ. ಪ್ರತಿಪಕ್ಷಗಳನ್ನು ಅಥವಾ ಚುನಾವಣೆಯನ್ನು ಹಗುರವಾಗಿ ಪರಿಗಣಿಸಬಾರದು ಎಂಬುದು ಬಿಜೆಪಿಗೆ ಅರಿವಾಗಿದೆ. ಪ್ರತಿಪಕ್ಷಗಳಿಗೆ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ, ಸಿಂಹ (ಮೋದಿ ಅವರನ್ನು ದಿ.ಸರದಾರ ವಲ್ಲಭಭಾಯಿ ಪಟೇಲರಂತೆ ಸಿಂಹಕ್ಕೆ ಹೋಲಿಸಲಾಗುತ್ತಿದೆ) ತನ್ನ ಸ್ವಂತ ಗುಹೆಯೊಳಗೆ ವಿರಮಿಸಬಹುದಾದರೂ, ಅದನ್ನು ಸುಲಭವಾಗಿ ಎಲ್ಲಿಗೆ ಬೇಕಾದರೂ ಕರೆದೊಯ್ಯಬಹುದು ಎಂಬುದು ಮನದಟ್ಟಾಗಿದೆ. ಮೋದಿ-ಶಾ ಎಂಬ ಯುದ್ಧಯಂತ್ರಗಳ ವಿರುದ್ಧ ಸೆಣಸುವ ಸಾಮರ್ಥ್ಯ ತನಗಿದೆ ಎಂಬುದನ್ನು ಕಾಂಗ್ರೆಸ್ ಸಾಬೀತುಪಡಿಸಿದೆ.

3. ಸಾಮಾಜಿಕ ಹೊಂದಾಣಿಕೆಗಳು ಮತ್ತು ಮೈತ್ರಿಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. 2014ರ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ತನ್ನ ಸಂಕೋಚ ಸ್ವಭಾವವನ್ನು ಮೆಟ್ಟಿನಿಂತು ಅನೇಕ ಸಾಮಾಜಿಕ ಗುಂಪುಗಳ ಸ್ಥಳೀಯ ನಾಯಕರೊಂದಿಗೆ ಕೈ ಜೋಡಿಸಿತು. ಅಲ್ಪೇಶ್ ಠಾಕೂರ್, ದಲಿತ ಮುಖಂಡ ಜಿಗ್ನೇಶ್ ಮೇವಾನಿ ಅಂಥವರೊಂದಿಗೆ ಸೇರಿಕೊಂಡದ್ದರಿಂದ ಕಾಂಗ್ರೆಸ್ ಒಂದು ಸಹಕಾರಿ ವೇದಿಕೆಯ ಪಾತ್ರ ನಿರ್ವಹಿಸಿತು. ಈ ನಡೆಯಿಂದ ಕಲಿತ ಪಾಠ, ರಾಹುಲ್ ಗಾಂಧಿಗೆ ಮುಂಬರುವ ದಿನಗಳಲ್ಲಿ ಅನುಕೂಲವಾಗಿ ಪರಿಣಮಿಸಲೇಬೇಕು. ಯುವ ಪಾಟಿದಾರ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಜೊತೆ ಕೈ ಜೋಡಿಸಿಲ್ಲದಿರಬಹದು. ಆದರೆ ಆತನ ಬಿಜೆಪಿ ವಿರೋಧಿ ನಿಲುವು ಸ್ಪಷ್ಟವಾಗಿತ್ತು. ಆತನ ರ್ಯಾಲಿಗಳಿಗೆ ಸೇರುತ್ತಿದ್ದ ಬೃಹತ್ ಜನಸಮೂಹವನ್ನು ಮತಗಳನ್ನಾಗಿ ಪರಿವರ್ತಿಸುವ ವಿಧಾನ ಬಿಜೆಪಿಯ ವಿರೋಧಪಕ್ಷಗಳಿಗೆ ತಿಳಿಯಲೇ ಇಲ್ಲ.

4. ಈ ಫಲಿತಾಂಶಗಳು ಟೆಲಿವಿಷನ್ ಸ್ಟುಡಿಯೋಗಳಲ್ಲಿ ಕೃಷಿ ಸಂಕಷ್ಟದ ವಿಷಯವನ್ನಂತೂ ಚರ್ಚೆಗೆ ತಂದಿರಿಸಿವೆ. ವರ್ಷಗಳಿಂದ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಮತ್ತು ಇತರ ಸಮಸ್ಯೆಗಳು ಸಂಕಷ್ಟದ ಸಂಕೇತಗಳಾಗಿವೆ. ಆದರೆ ಈ ವಿಷಯದ ಬಗ್ಗೆ ರಾಷ್ಟ್ರದ ರಾಜಕೀಯ ಅಷ್ಟೊಂದು ಗಮನ ಹರಿಸಿಲ್ಲ. ಗುಜರಾತ್ ಅಭಿವೃದ್ಧಿ ಮಾದರಿಯನ್ನು ಅಣಕಿಸುವಷ್ಟು ಕೃಷಿ ಸಂಕಷ್ಟ ಎದುರಿಸುತ್ತಿರುವ ಸೌರಾಷ್ಟ್ರ ಮತ್ತು ಕಛ್‌ನಲ್ಲಿ ಕಾಂಗ್ರೆಸ್ ಮತ್ತೆ ತನ್ನ ಪ್ರಾಬಲ್ಯ ಮೆರೆದಿದ್ದರೆ, ಇಲ್ಲಿ ಬಿಜೆಪಿ ಸಾಕಷ್ಟು ಹಾನಿ ಅನುಭವಿಸಿದೆ. ದೇಶಾದ್ಯಂತ ಮನೆ ಮಾಡಿರುವ ಈ ಕೃಷಿ ಸಂಕಷ್ಟಕ್ಕೆ ಮೋದಿ ಸರಕಾರ ಕನಿಷ್ಠ ಗಮನ ನೀಡಿರುವುದರಿಂದ ಚುನಾವಣೆ ಪ್ರಚಾರಕ್ಕೆ ರಾಹುಲ್‌ಗೆ ಇಲ್ಲೊಂದು ಉತ್ತಮ ಅವಕಾಶವಿದೆ.

5. ಪ್ರಧಾನಮಂತ್ರಿಯವರು ದ್ವೇಷವನ್ನು, ವಿಭಜನೆಯನ್ನು ಮತ್ತು ಜಾತಿ-ಕೋಮಿನ ಕೊಂಕುಮಾತುಗಳನ್ನು ಧಾರಾಳವಾಗಿ ಬಳಸಿಕೊಂಡರು. ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ನಾಯಕರ ವಿರುದ್ಧ ನಿಂದನೆ, ಅಪವಾದಗಳ ಸುರಿಮಳೆಯನ್ನೇ ಗೈದರು. ಪ್ರತಿಪಕ್ಷದ ಮೂಲಕ ರಾಜ್ಯದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಪ್ರತಿಷ್ಠಾಪಿಸಲು ಪಾಕಿಸ್ತಾನ ಷಡ್ಯಂತ್ರವನ್ನೇ ರೂಪಿಸಿದೆ ಎಂದೂ ದೂರಿದರು. ಹಾರ್ದಿಕ್-ಅಲ್ಪೇಶ್-ಜಿಗ್ನೇಶ್ ಅವರ ಹೋರಾಟ-ಉದೇಶಗಳನ್ನು ಅರಿತಿದ್ದರೂ, ಅವರ ಉಲ್ಲೇಖಕ್ಕಾಗಿ ಹಜ್ ಎಂಬ ಶಬ್ದವನ್ನೇ ಹುಟ್ಟುಹಾಕಿದರು ಮತ್ತು ಒಟ್ಟಾರೆಯಾಗಿ ಸಾರ್ವಜನಿಕ ಭಾಷಣಗಳನ್ನು ಅತ್ಯಂತ ಕೀಳುದರ್ಜೆಗೆ ತಂದು ಅಪವಿತ್ರಗೊಳಿಸಿದರು. ಈ ಎಲ್ಲ ಹಿನ್ನೆಲೆಯಲ್ಲಿ ಈಗ ಉಳಿಯುವ ಪ್ರಶ್ನೆ: ಮೋದಿ (ಮತ್ತು ಬಿಜೆಪಿ) ಮುಂಬರುವ ಚುನಾವಣೆಗಳಲ್ಲೂ ಇದೇ ರೀತಿಯ ಕಳಪೆ ದರ್ಜೆಯ, ಅಗ್ಗದ, ಕೀಳು ಅಭಿರುಚಿಯ ತಂತ್ರಗಳನ್ನೇ ಅನುಸರಿಸುತ್ತಾರೆಯೇ ಅಥವಾ ಇದಕ್ಕಿಂತ ಕೆಳಮಟ್ಟಕ್ಕೆ ಇಳಿಯುತ್ತಾರೆಯೇ?

6. ಕಾಂಗ್ರೆಸ್‌ನ ಪ್ರಚಾರ ಬಹುಶಃ ಕೋಮುವಾದದ ವಿಷಯಗಳಿಂದ ದೂರ ಇದ್ದು, ವಿಷಯಾಧಾರಿತವಾಗಿತ್ತು. (ಮಣಿಶಂಕರ್ ಅಯ್ಯರ್ ಅವರ ‘ನೀಚ’ ಪದ ಬಳಕೆಯನ್ನು ಹೊರತುಪಡಿಸಿ). ಈ ಕ್ರಮ ರಾಹುಲ್ ಗಾಂಧಿ ತಾವು ಕಾಂಗ್ರೆಸ್ ಅಧ್ಯಕ್ಷರಾಗುವ ವೇಳೆ ನುಡಿದ ಮಾತುಗಳಿಗೆ ತಾಳೆಯಾಗುವಂತಿತ್ತು. "ಅವರು ಒಡೆಯುತ್ತಾರೆ, ನಾವು ಒಗ್ಗೂಡಿಸುತ್ತೇವೆ. ಅವರು ಬೆಂಕಿ ಹಚ್ಚುತ್ತಾರೆ, ನಾವು ನಂದಿಸುತ್ತೇವೆ. ಅವರು ದ್ವೇಷ ಹರಡಿದರೆ ನಾವು ಪ್ರೀತಿಯನ್ನು ಹಂಚುತ್ತೇವೆ,” ಎಂದು ಅವರು ಮಾರ್ಮಿಕವಾಗಿ ನುಡಿದಿದ್ದರು. ಈ ಭಾಷಣ, ಬಿಜೆಪಿಯ ಭಯ ಹಾಗೂ ದ್ವೇಷ ಹರಡುವ ಪ್ರಚಾರಕ್ಕೆ ಉತ್ತರವಾಗಿ ಕಾಂಗ್ರೆಸ್ ಎಲ್ಲರನ್ನೂ ಒಗ್ಗೂಡಿಸುತ್ತದೆ ಮತ್ತು ಜಾತ್ಯತೀತತೆಯನ್ನು ಎತ್ತಿಹಿಡಿಯುತ್ತದೆ ಎಂಬ ವಿಶ್ವಾಸ ಮೂಡಿಸಿತು. ಇದೊಂದು ಶುಭ ಸೂಚಕವೇ ಸರಿ. ಆದರೆ ಈ ಶಬ್ದಗಳ ಅಳತೆ ಆಚರಣೆಯ ಹಂತದಲ್ಲಿ ತಿಳಿಯುತ್ತದೆ. ಗಾಂಧಿ ಮತ್ತು ಕಾಂಗ್ರೆಸ್ ಈ ಹಂತದಲ್ಲಿ ಹಿಂದೆ ಬೀಳುತ್ತಾರೆ. ಇಡೀ ಗುಜರಾತ್ ಪ್ರಚಾರದ ವೇಳೆ ಗಾಂಧಿ ಇಪ್ಪತ್ತಕ್ಕೂ ಹೆಚ್ಚು ದೇವಸ್ಥಾನಗಳಿಗೆ ಭೇಟಿ ನೀಡಿದರು ಮತ್ತು ಬ್ರಾಹ್ಮಣರು ಹಾಗೂ ಮೇಲ್ಜಾತಿಯವರು ಧರಿಸುವ ಜನಿವಾರವನ್ನೂ ಉಲ್ಲೇಖಿಸಿದರು. ಆದರೆ ಅವರು ಗುಜರಾತಿನ ಅಲ್ಪಸಂಖ್ಯಾತರಿಗಾಗಿ ಬಹಿರಂಗವಾಗಿ ಒಂದು ಮಾತನ್ನೂ ಹೇಳಲಿಲ್ಲ. ಗುಜರಾತ್ ಸಮಾಜದಲ್ಲಿ ಪ್ರತ್ಯೇಕವಾಗಿಯೇ ಕಾಣಲಾಗುವ ಮುಸ್ಲಿಮರಿಗೆ ಬೆಂಬಲವನ್ನು ವ್ಯಕ್ತಪಡಿಸಲೇ ಇಲ್ಲ. ವಾಸ್ತವದಲ್ಲಿ ಸಾಮಾಜಿಕ ಕಾರ್ಯಕರ್ತ, ಲೇಖಕ ಹರ್ಷ ಮಂದೇರ ಗುರುತಿಸುವಂತೆ, ಗಾಂಧಿ ತಮ್ಮ ಭಾಷಣಗಳಲ್ಲಿ ಒಮ್ಮೆಯೂ ಮುಸ್ಲಿಂ ಎಂಬ ಶಬ್ದವನ್ನೇ ಬಳಸಲಿಲ್ಲ. ಈ ಮೃದು ಹಿಂದುತ್ವ ಅಥವಾ ಒಳಗೊಳ್ಳುವ ಹಿಂದೂಯಿಸಂ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ತಂತ್ರಗಾರಿಕೆಯೇ ಆಗಲಿದೆಯೇ?

7. ಗುಜರಾತ್ ಚುನಾವಣೆಯ ಅಂಕಿ-ಅಂಶಗಳು ಮೂರು ದಶಕಗಳಿಂದ ಚಾಲ್ತಿಯಲ್ಲಿರುವ ಟ್ರೆಂಡನ್ನೇ ತೋರಿಸುತ್ತಿವೆ. ಅಂದರೆ, ನಗರ ಪ್ರದೇಶದ ಮತದಾರರು ಕಾಂಗ್ರೆಸ್‌ಗಿಂತ ಬಿಜೆಪಿಗೇ ಆದ್ಯತೆ ನೀಡುತ್ತಾರೆ. ತಮ್ಮನ್ನು ಸಂಕಷ್ಟಕ್ಕೆ ದೂಡಿದ ಮೋದಿಯವರ ನೋಟು ಅಮಾನ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ ಜಾರಿಯಂಥ ಕ್ರಮಗಳ ಹೊರತಾಗಿಯೂ ನಗರ ಪ್ರದೇಶದ, ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಮತದಾರರು ಇನ್ನೂ ಬಿಜೆಪಿಗೇ ನಿಷ್ಠರಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಗರ ಮತದಾರರನ್ನು ಸೆಳೆಯಲು ಸೂಕ್ತ ತಂತ್ರವೊಂದನ್ನು ರೂಪಿಸಬೇಕಾಗುತ್ತದೆ. 2019ರ ಚುನಾವಣೆ ಹೊತ್ತಿಗೆ ಈ ತಂತ್ರ ರೂಪುಗೊಂಡಿದ್ದೇ ಆದರೆ ಕಾಂಗ್ರೆಸ್‌ಗೆ ಅದು ವರದಾನವಾಗಲಿದೆ.

8. ಮುಂಬರುವ ತಿಂಗಳುಗಳಲ್ಲಿ ಇವಿಎಂಗಳ ಬಗ್ಗೆ ಚರ್ಚೆ ತೀವ್ರಗೊಳ್ಳಲಿದೆ ಮತ್ತು ಇದು ಆಗಲೇಬೇಕು ಕೂಡ. ಬಿಜೆಪಿ ಪರವಾಗಿ ಇವಿಎಂಗಳನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿಬಂದ ಗುಜರಾತ್ ಚುನಾವಣೆಯಲ್ಲಿ ಕನಿಷ್ಠ 12ರಿಂದ 15 ಸ್ಥಾನಗಳಲ್ಲಿ ಜಯದ ಅಂತರ ಕೆಲವೇ ನೂರುಗಳಲ್ಲಿ ಅಥವಾ ಸಾವಿರಗಳಲ್ಲಿ ಇತ್ತು ಎಂಬುದು ಗಮನಾರ್ಹ. ಕೆಲವು ಸ್ಥಾನಗಳಲ್ಲಿ ಮರು ಎಣಿಕೆ ನಡೆದಾಗ ಪ್ರತಿಪಕ್ಷಗಳಿಗೆ ಜಯ ಲಭಿಸಿದೆ. ಹಾರ್ದಿಕ್ ಪಟೇಲ್ ಕೆಲ ದಿನಗಳಿಂದ ಈ ಬಗ್ಗೆ ಚಕಾರ ಎತ್ತುತ್ತಲೇ ಇದ್ದಾರೆ. ಮುಂಬರುವ ಇತರ ರಾಜ್ಯಗಳ ಮತ್ತು 2019ರ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಈ ಇವಿಎಂ ಟ್ಯಾಂಪರಿಂಗ್ ಸಾಧ್ಯತೆ ಮತ್ತು ವಿವಿಪಿಎಟಿಯ ಅವಶ್ಯಕತೆಯನ್ನು ಸಮರ್ಪಕವಾಗಿ ನಿಭಾಯಿಸಬೇಕಿದೆ.

9. ಆಡಳಿತ ವಿರೋಧಿ ಅಲೆಯ ವಿಷಯ ಇನ್ನೂ ನಿಗೂಢವಾಗಿಯೇ ಉಳಿದಿದೆ. ಗುಜರಾತಿನಲ್ಲಿ ಬಿಜೆಪಿ ಕಳೆದ 22 ವರ್ಷಗಳಿಂದ ಅಧಿಕಾರದಲ್ಲಿದೆ ಮತ್ತು ತನ್ನ ಆರ್ಥಿಕ ನೀತಿಗಳು, ಜಾತಿ ಮತ್ತು ಧರ್ಮದ ಆದ್ಯತೆಗಳಿಂದಾಗಿ ವಿಶಿಷ್ಟ ಸರಕಾರ ಎಂದೇ ಗುರುತಿಸಿಕೊಂಡಿದೆ. ಆದಾಗ್ಯೂ ಅದು ಪ್ರತಿ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಂತಿದೆ. ತಥಾಕಥಿತ ‘ಗುಜರಾತ್ ಅಭಿವೃದ್ಧಿ ಮಾದರಿ’ ಈ ಬಾರಿ ಪ್ರಚಾರದಲ್ಲಿ ಅಲ್ಲಲ್ಲಿ ಮಾತ್ರ ಕೇಳಿಬಂದಿರಬೇಕು. ಹಾಗಾದರೆ, ಕೋಮುವಾದದ ಕಾರ್ಡ್ ರಾಜ್ಯ ಸರಕಾರದ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರಿದೆಯೇ? ಹೌದಾಗಿದ್ದರೆ, ಪ್ರತಿಪಕ್ಷಗಳು ಇದರಿಂದ ಪಾಠ, ಅದರಲ್ಲೂ ವಿಶೇಷವಾಗಿ ಆಡಳಿತವಿರೋಧಿ ಅಲೆಯನ್ನು ಮತವನ್ನಾಗಿ ಹೇಗೆ ಪರಿವರ್ತಿಸಬೇಕು ಎಂಬ ಪಾಠವನ್ನು ಮೊದಲು ಕಲಿಯಬೇಕು.

10. ಈ ಚುನಾವಣೆ ಗುಜರಾತ್, ಮೋದಿಗೆ ನೀಡಿದ ಸಂದೇಶವಿದು, “ಹಗುರವಾಗಿ ಪರಿಗಣಿಸಬೇಡಿ.” ಸದ್ಯದ ಭಾರತೀಯ ರಾಜಕೀಯದಲ್ಲಿ ತನಗೆ ಪ್ರತಿಸ್ಪರ್ಧೆಯೇ ಇಲ್ಲ, ತಾನು ಬಯಸಿದ ಎಲ್ಲ ಚುನಾವಣೆಗಳಲ್ಲಿ ಸಲೀಸಾಗಿ ಜಯಿಸಬಲ್ಲೆ ಎಂದು ಭಾವಿಸಿರುವ ನಾಯಕನಿಗೆ ಇದೊಂದು ವಾಸ್ತವತೆಯ ಪರೀಕ್ಷೆ. ಈ ಸಂದೇಶದಲ್ಲಿ ಪ್ರತಿಪಕ್ಷಕ್ಕೆ ಒಂದು ಆಹ್ವಾನವಿದೆ.

ಇದನ್ನೂ ಓದಿ : ಗುಜರಾತ್ ಚುನಾವಣಾ ಫಲಿತಾಂಶದ ನಂತರ ಕಾಡುತ್ತಿರುವ ಪ್ರಶ್ನೆಗಳು

ಲೇಖಕರು ಮುಂಬಯಿಯಲ್ಲಿ ನೆಲೆಸಿರುವ ಹಿರಿಯ ಪತ್ರಕರ್ತೆ ಮತ್ತು ಅಂಕಣಕಾರ್ತಿ. ‘ಔಟ್‌ಲುಕ್’ ಹಾಗೂ 'ಸ್ಟಾರ್ ನ್ಯೂಸ್‌’ನ ಪಶ್ಚಿಮ ಭಾರತದ ಬ್ಯುರೋ ಮುಖ್ಯಸ್ಥರಾಗಿ ಗುಜರಾತಿನ ಆಗುಹೋಗುಗಳನ್ನು ವರದಿ ಮಾಡಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More