ರಾಹುಲ್ ಗಾಂಧಿಗೆ ಗುಜರಾತ್ ಚುನಾವಣಾ ಫಲಿತಾಂಶವು ಪಿಸುಗುಟ್ಟಿದ್ದೇನು?

ಗುಜರಾತ್ ಚುನಾವಣಾ ಫಲಿತಾಂಶದ ಮೂಲಕ ಕಾಂಗ್ರೆಸ್ ರಾಷ್ಟ್ರ ರಾಜಕಾರಣಕ್ಕೆ ಅಚ್ಚರಿಯ ಹೊಸ ತಿರುವು ನೀಡಿದೆ ಎಂಬುದಂತೂ ಈಗ ನಿಜ. ಈವರೆಗೆ ಮೋದಿ ಮತ್ತು ಬಿಜೆಪಿಯ ಆಟವಷ್ಟೇ ಎಂದುಕೊಂಡಿದ್ದ ಮುಂದಿನ ಲೋಕಸಭಾ ಚುನಾವಣೆ, ಇನ್ನು ಹಾಗಿರುವುದಿಲ್ಲ ಎಂಬುದೇ ಆ ತಿರುವು

ಗುಜರಾತ್ ಚುನಾವಣೆ ಮತ ಎಣಿಕೆಯ ಆರಂಭಿಕ ಒಂದೆರಡು ಗಂಟೆ ನಿಜಕ್ಕೂ ನಂಬಲಾಗದ ಸಂಗತಿಗಳಿಗೆ ಸಾಕ್ಷಿಯಾಯಿತು. ಗುಜರಾತಿನಲ್ಲಿ ಬಿಜೆಪಿಗೆ ಮಣ್ಣುಮುಕ್ಕಿಸಿ ಕಾಂಗ್ರೆಸ್ ಅಧಿಕಾರ ಹಿಡಿದೇಬಿಟ್ಟಿತು ಎಂಬಂತಹ ಸ್ಥಿತಿ ಇತ್ತು. ಟಿವಿ ಸ್ಟುಡಿಯೋಗಳಲ್ಲಿ ಚರ್ಚಿಸುತ್ತಿದ್ದ ಪಂಡಿತರು, ಇನ್ನೇನು ರಾಜಕೀಯ ಸುನಾಮಿ ಅಪ್ಪಳಿಸಿಯೇಬಿಟ್ಟಿತು ಎನ್ನತೊಡಗಿದ್ದರು. ಆ ಮೂಲಕ ಕಾಂಗ್ರೆಸ್ ನೂತನ ಅಧ್ಯಕ್ಷ ರಾಹುಲ್ ಗಾಂಧಿಯವರ ಮಾತು ನಿಜವಾಯಿತು ಎನ್ನತೊಡಗಿದ್ದರು. “ಯಾರು ಮತ್ತು ಎಷ್ಟು ಅಂತರದಲ್ಲಿ ಜಯ ಗಳಿಸಲಿದ್ದಾರೆ ಎಂಬ ಬಗ್ಗೆ ಗುಜರಾತ್ ಫಲಿತಾಂಶ ದೊಡ್ಡ ಅಚ್ಚರಿ ನೀಡಲಿದೆ,” ಎಂದು ರಾಹುಲ್ ಹೇಳಿದ್ದರು.

ಆದರೆ, ರಾಹುಲ್ ಅವರ ದುರದೃಷ್ಟಕ್ಕೆ ಆರಂಭದ ಆ ಅಚ್ಚರಿ ಬಹಳ ಕಾಲ ಉಳಿಯಲಿಲ್ಲ. 22 ವರ್ಷಗಳ ಆಡಳಿತ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನೂ ಹಿಮ್ಮೆಟ್ಟಿಸಿ ಬಿಜೆಪಿ, ಕಳೆದ 2012ರ ಚುನಾವಣೆಗೆ ಹೋಲಿಸಿದರೆ (115) ಕಳಪೆ ಎನಿಸಿದರೂ ಸಮಾಧಾನಕರ ಗೆಲುವು (99 ಸ್ಥಾನ) ಪಡೆಯುವಲ್ಲಿ ಯಶಸ್ವಿಯಾಯಿತು. ಅದೇನೂ ಸಣ್ಣ ಸಾಧನೆಯಲ್ಲ. ಆದರೆ, ಸೋಲಿನ ಹೊರತಾಗಿಯೂ ಕಾಂಗ್ರೆಸ್ ಒಂದು ಮಟ್ಟದ ಯಶಸ್ಸನ್ನು ಪಡೆಯುವ ಮೂಲಕ ಅಚ್ಚರಿಯನ್ನು ನೀಡಿದೆಯೇ?

ಹೌದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಚುನಾವಣಾ ಚಾಣಕ್ಯ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಅಸಾಮಾನ್ಯ ಬಲದ ಕುರಿತ ಬೃಹತ್ ಚಿತ್ರಣ, ಮತ ಎಣಿಕೆ ಮುಂದುವರಿದಂತೆ ಕ್ರಮೇಣ ಕರಗತೊಡಗಿತು. ಅಂತಿಮವಾಗಿ ಕಾಂಗ್ರೆಸ್ ಕೆಲವು ಅಚ್ಚರಿಯ ಫಲಿತಾಂಶ ಪಡೆಯುವ ಮೂಲಕ ಒಂದಿಷ್ಟು ಕಸುವು ಪಡೆಯಿತು.

ಕಾಂಗ್ರೆಸ್ ವಿಶ್ವಾಸ ಇಮ್ಮಡಿಸಿದ ಅಂತಹ ಕೆಲ ಸಂಗತಿಗಳೆಂದರೆ; ತಾನು ಪ್ರಬಲವಾಗಿ ನಿಂತರೆ ಮೋದಿ-ಶಾ ಜೋಡಿಯನ್ನು ಕೂಡ ಹೈರಾಣ ಮಾಡಬಹುದು, ಗೆಲ್ಲದೆಹೋದರೂ ಕನಿಷ್ಠ ಅವರ ಮುಖದಲ್ಲಿ ಬೆವರಿಳಿಸಬಹುದು. ಗುಜರಾತಿನಲ್ಲೇ ಇದು ಸಾಧ್ಯವಾಗಿದೆ ಎಂದರೆ, ದೇಶದ ಇತರ ರಾಜ್ಯಗಳಲ್ಲಿ ಯಾಕೆ ಸಾಧ್ಯವಿಲ್ಲ ಎಂಬುದು ಈಗ ಕಾಂಗ್ರೆಸ್ಸಿನ ಕೆಲವರ ಪ್ರಶ್ನೆ. ಅದಕ್ಕಿಂತ ಮುಖ್ಯವಾದದ್ದು, ಕಾಂಗ್ರೆಸ್ ನಾಯಕತ್ವ ವಹಿಸಲು ಅರ್ಹರಲ್ಲ ಎಂದೇ ಬಹುತೇಕರು ಅಂದುಕೊಂಡಿದ್ದ ದೇಶಕ್ಕೆ ರಾಹುಲ್ ಕೂಡ ದೊಡ್ಡ ಅಚ್ಚರಿಯನ್ನೇ ನೀಡಿದ್ದಾರೆ.

ಈವರೆಗೆ ಗುಜರಾತಿನಲ್ಲಿ ಬಿಜೆಪಿಯ ‘ಬಿ’ ಟೀಮ್ ರೀತಿಯಲ್ಲೇ ಇದ್ದ ಕಾಂಗ್ರೆಸ್, ಈ ಬಾರಿ ಚುನಾವಣೆಯನ್ನು ನಿಜವಾದ ಹಣಾಹಣಿಯಾಗಿ ಬದಲಾಯಿಸುವಲ್ಲಿ ಸಫಲವಾಗಿದೆ. 1985ರ ಬಳಿಕ ಮೊದಲ ಬಾರಿಗೆ ಅದರ ಸ್ಥಾನ ಗಳಿಕೆ 75ರ ಗಡಿ (ವಿಧಾನಸಭಾ ಒಟ್ಟು ಸ್ಥಾನ 182) ದಾಟುತ್ತಿದೆ. ಅಲ್ಲದೆ, ತನ್ನ ಮತ ಗಳಿಕೆ ಪ್ರಮಾಣವನ್ನೂ ಹೆಚ್ಚಿಸಿಕೊಂಡಿದೆ.

ಚುನಾವಣಾ ಪ್ರಚಾರದ ಅಂತ್ಯದ ಹೊತ್ತಿಗೆ, ಈ ಬಾರಿಯ ಫಲಿತಾಂಶವು ತಮ್ಮ ವೈಯಕ್ತಿಕ ಜನಪ್ರಿಯತೆಯ ಮೇಲಿನ ಜನಾದೇಶವಾಗುವಂತೆ ಮೋದಿ ನಡೆದುಕೊಳ್ಳುವಂತೆ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಆದರೆ, ಮೋದಿ ಒಟ್ಟಾರೆ ಫಲಿತಾಂಶದಲ್ಲಿ ಜಯ ಗಳಿಸಿದರೂ, ಅವರಿಗೆ ಕಾಂಗ್ರೆಸ್ ಮತ್ತೆ ತಾನು ಪುಟಿದೆದ್ದು ನಿಲ್ಲುತ್ತಿರುವುದರ ಮೊದಲ ರುಚಿ ಕಾಣಿಸಿದೆ.

ಕಾಂಗ್ರೆಸ್ಸಿನ ಈ ಪುಟಿದೆದ್ದಿರುವ ಹೊಸ ವರಸೆ ನಿಜವಾಗಿಯೂ ಮುಂದಿನ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಗಣನೀಯ ಪರಿಣಾಮ ಬೀರಲಿದೆ. 2019ರ ಲೋಕಸಭಾ ಚುನಾವಣೆಗೆ ಮುನ್ನ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾಗಲಿರುವ ಕರ್ನಾಟಕ, ಮಧ್ಯಪ್ರದೇಶ, ಚತ್ತೀಸ್‌ಗಢ ಮತ್ತು ರಾಜಸ್ಥಾನದ ವಿಧಾನಸಭಾ ಚುನಾವಣೆಗಳಿಗೆ ಕಾಂಗ್ರೆಸ್ ಈ ಫಲಿತಾಂಶದಿಂದ ಹೊಸ ಪಾಠಗಳನ್ನು ರೂಢಿಸಿಕೊಳ್ಳಬೇಕಿದೆ. ಆದರೆ, ಕಾಂಗ್ರೆಸ್ ಅಂತಹ ಪಾಠ ಕಲಿಯಲಿದೆಯೇ ಎಂಬುದು ಇನ್ನೂ ಖಚಿತವಿಲ್ಲ.

ಬಹುಶಃ ರಾಹುಲ್, ಚುನಾವಣೆಯ ಫಲಿತಾಂಶದ ಅಚ್ಚರಿಯ ಕುರಿತು ಹೇಳುವಾಗ ಅವರ ಮನಸ್ಸಿನಲ್ಲಿ ಬೇರೇನೋ ಇದ್ದಿರಬಹುದು. ಆದರೆ, ಈ ಫಲಿತಾಂಶದ ಮೂಲಕ ಕಾಂಗ್ರೆಸ್ ರಾಷ್ಟ್ರ ರಾಜಕಾರಣಕ್ಕೆ ಹೊಸ ಅಚ್ಚರಿಯ ತಿರುವು ನೀಡಿದೆ ಎಂಬುದಂತೂ ಈಗ ನಿಜವಾಗಿದೆ. ಈವರೆಗೆ ಮೋದಿ ಮತ್ತು ಬಿಜೆಪಿಯ ಆಟವಷ್ಟೇ ಎಂದುಕೊಂಡಿದ್ದ ಮುಂದಿನ ಲೋಕಸಭಾ ಚುನಾವಣೆ, ಇನ್ನು ಹಾಗಿರುವುದಿಲ್ಲ ಎಂಬುದೇ ಆ ಅಚ್ಚರಿಯ ತಿರುವು.

ಈ ತಿರುವಿನ ಹೊರತಾಗಿಯೂ, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಗೆ ಈ ಚುನಾವಣೆ ಹಲವು ಮುಖ್ಯ ಪಾಠಗಳನ್ನು ನೀಡಿದೆ. ಗುಜರಾತಿನ ದಕ್ಷಿಣ ಹಾಗೂ ಸೌರಾಷ್ಟ್ರ ಭಾಗದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಲಾಭವಾಗಿದೆ. ಆ ಭಾಗದಲ್ಲಿ ಪಕ್ಷ, ಹಾರ್ದಿಕ್ ಪಟೇಲ್ ಅವರ ಪಾಟಿದಾರ್ ಹೋರಾಟದ ಆಸರೆ ಪಡೆದಿತ್ತು.

ಅಲ್ಲದೆ, ಈ ಫಲಿತಾಂಶ ಎರಡು ಪ್ರಮುಖ ಸಂದೇಶಗಳನ್ನೂ ಕಾಂಗ್ರೆಸ್ಸಿಗೆ ನೀಡಿದೆ. ಆ ಪೈಕಿ ಮೊದಲನೆಯದು; ಸ್ಥಳೀಯ ವಿಷಯ ಮತ್ತು ನಂಬಿಕಸ್ಥ, ಜನರ ವಿಶ್ವಾಸದ ಸ್ಥಳೀಯ ನಾಯಕತ್ವದ ಬಲವಿಲ್ಲದೆ ಹೋದರೆ, ಅದು ರಾಜಕೀಯ ಅಪ್ರಸ್ತುತತೆಯ ಅಪಾಯದಿಂದ ಪಾರಾಗಲಾರದು. ಎರಡನೆಯದು; ತಳಮಟ್ಟದ ತೀವ್ರ ಪ್ರಚಾರಾಂದೋಲನ, ದಣಿವರಿಯದ ನಿರಂತರ ಕಾರ್ಯತಂತ್ರಗಳೇ ಅಂತಿಮವಾಗಿ ಬಿಜೆಪಿಗೆ ಸರಿಯಾದ ಪ್ರತಿಸ್ಪರ್ಧೆಯೊಡ್ಡುವ ಮಾರ್ಗ.

ರಾಹುಲ್ ಗಾಂಧಿ, ಈ ಪೈಕಿ ಮೊದಲನೆಯ ಸಂದೇಶವನ್ನು ಈಗಾಗಲೇ ಅರ್ಥ ಮಾಡಿಕೊಂಡಿದ್ದಾರೆ ಎನಿಸುತ್ತದೆ. ಕಾಂಗ್ರೆಸ್ ಬಲವರ್ಧನೆ ಮತ್ತು ಪುನರ್ ಕಟ್ಟುವ ಕುರಿತು ಅವರು ದಶಕದಿಂದಲೂ ಮಾತನಾಡುತ್ತಿದ್ದಾರೆ. ಈಗ ಅವರು ತಮ್ಮ ಆ ಮಾತನ್ನು ಉಳಿಸಿಕೊಳ್ಳಬೇಕಿದೆ. ನುಡಿದಂತೆ ನಡೆಯಬೇಕಿದೆ. ಅದರ ಮೊದಲ ಹೆಜ್ಜೆಯಾಗಿ ರಾಜಸ್ಥಾನದಂತಹ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ಸಮಕಾಲೀನರಾದ ಸಚಿನ್ ಪೈಲಟ್‌ರಂತಹ ನಾಯಕರನ್ನು ಮುಖ್ಯಮಂತ್ರಿ ಅಭ್ಯರ್ಥಿಗಳಾಗಿ ಘೋಷಿಸಬೇಕಿದೆ.

ಹಾಗೊಂದು ವೇಳೆ ಪೈಲಟ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ, ಅದು ರಾಹುಲ್ ಅವರ ನಿಜವಾದ ರಾಜಕೀಯ ಪ್ರಬುದ್ಧತೆಗೆ ಸಾಕ್ಷಿಯಾಗಲಿದೆ. ನೆಹರು-ಗಾಂಧಿ ಕುಟುಂಬದ ಅಧಿಕಾರದ ಆಡುಂಬೊಲವಾಗಿರುವ ಕಾಂಗ್ರೆಸ್ಸಿನಲ್ಲಿ ಮುಂದೆ ಬರಲಿರುವ ಬದಲಾವಣೆಗಳಿಗೂ ಅದೊಂದು ದಿಕ್ಸೂಚಿಯಾಗಲಿದೆ. ಆ ಮೂಲಕ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ಸಿಗೆ ಜನ ವಿಶ್ವಾಸ ಮತ್ತು ರಾಜಕೀಯ ಬಲ ತರಲಿದೆ.

ಇನ್ನು, ಎರಡನೇ ಸಂದೇಶವನ್ನು ರಾಹುಲ್ ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಏಕೆಂದರೆ, ತೀರಾ ಇತ್ತೀಚಿನವರೆಗೆ ಅವರು, ಸ್ವತಃ ತಮ್ಮ ರಾಜಕೀಯ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ರಾಜಕಾರಣವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇರುವುದೇ ಈವರೆಗೆ ಅವರ ರಾಜಕೀಯ ಶೈಲಿ ಎಂಬಂತಾಗಿತ್ತು. ಆದರೆ, 2017ರ ಈ ಗುಜರಾತ್ ಚುನಾವಣೆಯಲ್ಲಿ ಮೂರು ತಿಂಗಳ ಕಾಲ ನಿರಂತರವಾಗಿ ರಾಜ್ಯದ ಮೂಲೆಮೂಲೆ ಸುತ್ತಿ, ಸಾಮಾನ್ಯ ಮತದಾರರೊಂದಿಗೆ ಒಡನಾಡಿ ಅವರು ತಮ್ಮ ಆ ಚಹರೆಯನ್ನು ಇಡಿಯಾಗಿ ಬದಲಾಯಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಅವರ ಈ ಹೊಸ ಅವತಾರದಲ್ಲೂ ರಾಜಕೀಯ ಸಕ್ರಿಯತೆ ನಿರಂತರವಾಗಿ ಕಾಯ್ದುಕೊಂಡಲ್ಲಿ ಅದು, ಅವರಿಗೂ ಮತ್ತು ಪಕ್ಷಕ್ಕೂ ಅನುಕೂಲಕರ.

ಇನ್ನು ಈ ಚುನಾವಣಾ ಫಲಿತಾಂಶದಿಂದ ರಾಹುಲ್ ಕಲಿಯಬೇಕಿರುವ ಕೊನೆಯ ಪಾಠವೆಂದರೆ, ಚುನಾವಣಾ ಪ್ರಚಾರದಲ್ಲಿ ತಮ್ಮ ಯಾವ ನಡೆಗಳು ಫಲಿಸಿವೆ ಮತ್ತು ಯಾವ ನಡೆಗಳು ಕೈಕೊಟ್ಟಿವೆ ಎಂಬುದರ ಪರಾಮರ್ಶೆ. ಆ ದೃಷ್ಟಿಯಲ್ಲಿ ಅವರ ಸರಣಿ ದೇವಾಲಯಗಳ ಭೇಟಿಯಾಗಲೀ, ಮೋದಿ ಅವರ ಮೇಲಿನ ವೈಯಕ್ತಿಕ ದಾಳಿಗಳಾಗಲೀ ಗುಜರಾತಿನ ಮತದಾರರ ಮನವೊಲಿಸುವಲ್ಲಿ ಸಫಲವಾಗಿಲ್ಲ. ಅವರ ಪ್ರಚಾರಸಭೆಗಳಲ್ಲಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಭಾಷಣಗಳಲ್ಲಿ ಅವರು ಹೆಚ್ಚು ಗಮನ ಹರಿಸಿದ್ದು ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿಗಳಿಗೇ.

ಇದನ್ನೂ ಓದಿ : ಈಗ ನಾವು ನೋಡುತ್ತಿರುವ ರಾಹುಲ್ ಗಾಂಧಿ ಇಷ್ಟೊಂದು ಬದಲಾದದ್ದು ಹೇಗೆ?

ಆದರೆ, ಈ ಫಲಿತಾಂಶ ನೀಡಿರುವ ಸಂದೇಶವೆಂದರೆ; ಕಾಂಗ್ರೆಸ್ ಜನರೊಂದಿಗೆ ತನ್ನನ್ನು ಬೆಸೆದುಕೊಳ್ಳಲು ಬೇಕಿರುವುದು ವಿಷಯಾಧಾರಿತ, ಜನರ ಸಮಸ್ಯೆಗಳನ್ನಾಧಾರಿತ ಪ್ರಚಾರವೇ ಹೊರತು, ವ್ಯಕ್ತಿಗಳನ್ನಾಧಾರಿತ ವಾಗ್ದಾಳಿಗಳಲ್ಲ ಎಂಬುದು. ಅಷ್ಟಕ್ಕೂ ಮೋದಿಯಂತಹ ಜನಪ್ರಿಯ ನಾಯಕರ ಮೇಲೆ ವೈಯಕ್ತಿಕ ದಾಳಿ ಮಾಡುವಂತಹ ಸರಿಸಮನಾದ ವ್ಯಕ್ತಿತ್ವಗಳೇ ಕಾಂಗ್ರೆಸ್ಸಿನಲ್ಲಿ ಇಲ್ಲ. ನಯವಾಗಿ ಹೇಳಬೇಕೆಂದರೆ, ರಾಹುಲ್ ಗಾಂಧಿಯ ವ್ಯಕ್ತಿತ್ವ ಅಂತಹ ಎರಕದ್ದೇ ಅಲ್ಲ ಅಥವಾ ಈವರೆಗೆ ಅಂತಹ ದ್ರಾಷ್ಟ್ಯವನ್ನು ಅವರು ತೋರಿಲ್ಲ. ಆದರೆ, ಬಿಜೆಪಿಗೆ ಕೆಲಮಟ್ಟಿಗಿನ ನಡುಕ ಹುಟ್ಟಿಸಿರುವುದು, ಉದ್ಯೋಗ, ಜಿಎಎಸ್‌ಟಿ ತೆರಿಗೆ, ನೋಟು ರದ್ದತಿಯಂತಹ ವಿಷಯದಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳ ಕುರಿತ ಕಾಂಗ್ರೆಸ್ ಟೀಕೆಗಳು. ಈ ಮರ್ಮವನ್ನು ರಾಹುಲ್ ಗ್ರಹಿಸಬೇಕಿದೆ.

ಕೇಂದ್ರ ಸರ್ಕಾರದ ವೈಫಲ್ಯಗಳು, ಆಡಳಿತದ ಯಡವಟ್ಟುಗಳು ಹಾಗೂ ಹಿಂದೂ ರಾಷ್ಟ್ರ, ಹಿಂದುತ್ವವಾದದ ಬಿಜೆಪಿಯ ತೀವ್ರ ನಡೆಗಳು ಜನಸಾಮಾನ್ಯರ ಬದುಕಿನ ಮೇಲೆ ಉಂಟುಮಾಡುತ್ತಿರುವ ಪರಿಣಾಮಗಳನ್ನು ಎಷ್ಟು ಸಮರ್ಥವಾಗಿ ಜನರಿಗೆ ಮನದಟ್ಟು ಮಾಡುತ್ತದೆ ಎಂಬುದರ ಮೇಲೆ ಕಾಂಗ್ರೆಸ್ಸಿನ ಪುನರುತ್ಥಾನದ ಭವಿಷ್ಯ ನಿಂತಿದೆ. ತಮ್ಮ ಹೊಸ ಹೊಣೆಗಾರಿಕೆಯಲ್ಲಿ ರಾಹುಲ್ ಈ ಅಂಶವನ್ನು ಎಷ್ಟರಮಟ್ಟಿಗೆ ಜಾರಿಗೆ ತರುತ್ತಾರೆ ಎಂಬುದು ಪಕ್ಷ ಪುಟಿದೇಳುವ ಅಚ್ಚರಿಯ ದಿನವನ್ನು ನಿರ್ಧರಿಸಲಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More