ಗುಜರಾತ್‌ ಚುನಾವಣೆ ಮೇಲೆ ಪ್ರಭಾವ ಬೀರಿದ ಮೂವರು ಯುವ ನಾಯಕರು

ಗುಜರಾತ್‌ ಚುನಾವಣೆಯಲ್ಲಿ ಮತ್ತೆ ಗೆಲ್ಲುವ ಮೂಲಕ ಬಿಜೆಪಿ ಜಯದ ಯಾತ್ರೆ ಮುಂದುವರಿಸಿದೆ. ಮೋದಿ ಜಯದ ಕುದುರೆಯನ್ನು ಕಟ್ಟಿಹಾಕುವಲ್ಲಿ ಯುವನಾಯಕರಾದ ಅಲ್ಪೇಶ್‌, ಜಿಗ್ನೇಶ್‌, ಹಾರ್ದಿಕ್‌ ಸೋತಿರಬಹುದು. ಆದರೆ ಮೂವರ ಪ್ರಭಾವ ಮತ ಹಂಚಿಕೆಯಲ್ಲಿ ಎದ್ದುಕಾಣುತ್ತಿದೆ

ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಹಣಾಹಣಿಯ ನಂತರ ಭಾರತೀಯ ಜನತಾ ಪಕ್ಷ ವಿಜಯ ಪತಾಕೆ ಹಾರಿಸಿದೆ. ಆದರೆ ೨೦೧೨ರ ಚುನಾವಣೆಯ ಫಲಿತಾಂಶ ಮತ್ತು ಈ ಬಾರಿಯ ಫಲಿತಾಂಶವನ್ನು ತಾಳೆ ಹಾಕಿದರೆ, ಕಾಂಗ್ರೆಸ್‌ ವೀರೋಚಿತ ಸೋಲು ಕಂಡಿದೆ ಎಂಬುದು ಸ್ಪಷ್ಟ. ಕಳೆದ ಬಾರಿಗಿಂತ ೧೫ಕ್ಕೂ ಅಧಿಕ ಸೀಟ್‌ಗಳನ್ನು ಕಾಂಗ್ರೆಸ್‌ ಪಡೆದಿದ್ದು, ಈ ಬೆಳವಣಿಗೆಗೆ ಕಾರಣವಾಗಿದ್ದು ಅಲ್ಪೇಶ್‌, ಜಿಗ್ನೇಶ್‌, ಹಾರ್ದಿಕ್‌ರ ಮ್ಯಾಜಿಕ್‌ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ಮೂಲಕ ಮೂವರೂ ಭವಿಷ್ಯದ ರಾಜಕೀಯದಲ್ಲಿ ಗಟ್ಟಿಯಾಗಿ ನೆಲೆಯೂರುವ ಸಾಧ್ಯತೆಯನ್ನು ತೋರಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಘೋಷಿಸಿದ ಮಿಷನ್‌ ೧೫೦ಯನ್ನು ಮುಟ್ಟುವಲ್ಲಿ ಪಕ್ಷ ಹಿಂದೆ ಬಿದ್ದಿದೆ. ೨೨ ವರ್ಷಗಳಿಂದ ಸತತವಾಗಿ ಗೆಲ್ಲುತ್ತಿರುವ ಬಿಜೆಪಿಗೆ ಈ ಬಾರಿ ದೊಡ್ಡಮಟ್ಟದ ಪ್ರತಿರೋಧ ಎದುರಾಗಿದೆ. ಬಿಜೆಪಿಗೆ ದೊಡ್ಡ ಸವಾಲಾಗಿದ್ದ ಅಲ್ಪೇಶ್‌ ಠಾಕೂರ್‌, ಜಿಗ್ನೇಶ್‌ ಮೇವಾನಿ ಇಬ್ಬರೂ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಗುಜರಾತಿನ ಗ್ರಾಮೀಣ ಪ್ರದೇಶದಲ್ಲಿ ಹಾರ್ದಿಕ್‌ ಪಟೇಲ್‌ ಪ್ರಭಾವ ಕೆಲಸ ಮಾಡಿರುವುದು ಕಾಣುತ್ತದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೋಡಿದರೆ ಬಿಜೆಪಿ ಗೆದ್ದಿರಬಹುದು, ಆದರೆ ಕಾಂಗ್ರೆಸ್‌ ಜೊತೆಗೆ ಮೂವರು ಪ್ರಬಲ ಎದುರಾಳಿಗಳನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗಿದೆ.

ಚುನಾವಣೆಯಲ್ಲಿ ಯಾರ ಪಾತ್ರ ಎಷ್ಟು?

ಹಾರ್ದಿಕ್‌ ಪಟೇಲ್‌: ನಿರುದ್ಯೋಗ, ಉನ್ನತ ಶಿಕ್ಷಣ ಮತ್ತು ರೈತರ ಸಮಸ್ಯೆಗಳನ್ನು ಎತ್ತಿ ಹಿಡಿದು ಸಾಮಾಜಿಕ ಚಳವಳಿ ಹುಟ್ಟುಹಾಕಿದ್ದ ಹಾರ್ದಿಕ್‌ ಗುಜರಾತ್‌ನ ಪ್ರಬಲ ನಾಯಕರಾಗಿ ಬೆಳೆದರು. ಗ್ರಾಮೀಣ ಪ್ರದೇಶದಲ್ಲಿ ಹಾರ್ದಿಕ್‌ ಹಲವು ಸಮಾವೇಶಗಳನ್ನು ನಡೆಸಿದ್ದರು. ಇದರ ಪರಿಣಾಮವಾಗಿ ಕಾಂಗ್ರೆಸ್‌ಗೆ ಗ್ರಾಮೀಣ ಪ್ರದೇಶದಲ್ಲಿ ಈ ಬಾರಿ ಹೆಚ್ಚಿನ ಮತ ಗಳಿಸಲು ಸಹಾಯವಾಗಿದೆ. ಆದರೆ, ನಗರ ಪ್ರದೇಶದಲ್ಲಿನ ಪಾಟೀದಾರ್‌ (ಪಟೇಲ್‌) ಸಮುದಾಯ ಸ್ವಲ್ಪ ವಿಚಲಿತವಾದಂತೆ ಕಂಡರೂ ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದೆ. ಇದಕ್ಕೆ ಕಾರಣ, ಪ್ರಧಾನಿ ನರೇಂದ್ರ ಮೋದಿಯವರು ಕೊನೆಯ ಹಂತದಲ್ಲಿ ನೀಡಿದ ಕೆಲವು ಹೇಳಿಕೆಗಳು ಕಾರಣವಿರಬಹುದು. "ನಾನು ನಿಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ವಂಚಿಸುತ್ತೀರಾ?" ಎಂಬ ಭಾವನಾತ್ಮಕ ಪ್ರಶ್ನೆಯನ್ನು ಮೋದಿಯವರು ನೀಡಿದ್ದರು. ಈ ಹೇಳಿಕೆ ಗುಜರಾತಿಗರನ್ನು ಭಾವನಾತ್ಮಕ ನೆಲೆಗಟ್ಟಿನಲ್ಲಿ ಕಟ್ಟಿಹಾಕಿರುವ ಸಾಧ್ಯತೆ ಇದೆ. ಮೋದಿಯವರ ಈ ರೀತಿಯ ಹೇಳಿಕೆಯಿಂದ ಕಾಂಗ್ರೆಸ್‌ ಕಡೆ ಮುಖ ಮಾಡಿದ್ದ ಪಾಟೀದಾರ್‌ ಸಮುದಾಯ ವಾಪಸು ಬಿಜೆಪಿ ಕಡೆ ತಿರುಗಿ ನೋಡುವಂತೆ ಮಾಡಿರಬಹುದು. ಗ್ರಾಮೀಣ ಪ್ರದೇಶದ ಪಟೇಲ್ ಸಮುದಾಯ ಕಾಂಗ್ರೆಸ್‌ಗೆ ಮನ್ನಣೆ ನೀಡಿದ್ದರೆ, ನಗರ ಪ್ರದೇಶದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಒಂದರ್ಥದಲ್ಲಿ, ಈ ಚುನಾವಣೆಯಲ್ಲಿ ಗುಜರಾತ್‌ ಜನತೆ ಬಿಜೆಪಿ ಮತ್ತು ಪ್ರಧಾನಿ ಮೋದಿಯವರಿಗೆ ಎಚ್ಚರಿಕೆಯನ್ನು ನೀಡಿದೆ. ಅಭಿವೃದ್ಧಿಯ ಕಡೆಗೆ ಮತ್ತು ಸಾಮಾಜಿಕ ಸಮಸ್ಯೆಗಳ ಕಡೆಗೆ ಬೆಳಕು ಚೆಲ್ಲದಿದ್ದರೆ ಮುಂದೆ ಸೋಲಿಸಬೇಕಾದೀತು ಎಂಬ ಜನಾಭಿಪ್ರಾಯ ಮತದಾನದಿಂದ ಕಾಣುತ್ತದೆ.

ಜಿಗ್ನೇಶ್‌ ಮೇವಾನಿ: ಗುಜರಾತ್‌ ಯುವ ದಲಿತ ಸಮುದಾಯದ ಆಶಾಕಿರಣವಾಗಿ ಹೊರಹೊಮ್ಮಿರುವ ಜಿಗ್ನೇಶ್‌ ಮೇವಾನಿ, ಗುಜರಾತ್‌ ಚುನಾವಣೆಯಲ್ಲಿ ಉತ್ತಮ ಪಾತ್ರ ವಹಿಸಿದ್ದಾರೆ. ಕಾಂಗ್ರೆಸ್‌ ಬೆಂಬಲದಿಂದ ಮತ್ತು ಯುವ ಸಮುದಾಯದ ಬೆಂಬಲದಿಂದ ವೇದ್ಗಮ್‌ ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ್ದಾರೆ. ದಲಿತರ ಮೇಲೆ ಗೋರಕ್ಷಕರ ಹಲ್ಲೆಗಳು ದೇಶದೆಲ್ಲೆಡೆ ತಾರಕಕ್ಕೇರಿದ ಸಂದರ್ಭದಲ್ಲಿ ಜಿಗ್ನೇಶ್‌ ಮೇವಾನಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮುಖವಾಣಿಯಾಗಿ ಹೊರಹೊಮ್ಮಿದರು. ಆದರೆ ಜಿಗ್ನೇಶ್‌ ಮೇವಾನಿ ತಮ್ಮ ಕ್ಷೇತ್ರದ ಪ್ರಚಾರದಲ್ಲಿಯೇ ಮುಳುಗಿಹೋಗಿದ್ದು ಕಾಂಗ್ರೆಸ್ ಹಿನ್ನಡೆಗೆ ಒಂದು ಕಾರಣವೂ ಹೌದು. ಜಿಗ್ನೇಶ್‌ ಮೇವಾನಿ ಚುನಾವಣೆಯಲ್ಲಿ ಸ್ಪರ್ದಿಸದೆ, ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ ಇನ್ನಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಬಹುದಿತ್ತು ಎಂಬ ಮಾತುಗಳೂ ವ್ಯಕ್ತವಾಗುತ್ತಿವೆ. ಗುಜರಾತಿನಲ್ಲಿರುವ ಶೇ.೧೧ರಷ್ಟು ದಲಿತ ಸಮುದಾಯದ ಮತದಾರರನ್ನು ಚುನಾವಣೆ ಪ್ರಚಾರದ ವೇಳೆ ಜಿಗ್ನೇಶ್‌ ತಲುಪಲು ಸಾಧ್ಯವಾಗಿರಲಿಲ್ಲ ಎಂಬ ಮಾತೂ ಇದೆ. ಆದರೂ ಕಾಂಗ್ರೆಸ್‌ ಈ ಬಾರಿ ಉತ್ತಮ ಹೋರಾಟ ಮಾಡುವಲ್ಲಿ ಜಿಗ್ನೇಶ್‌ ಮೇವಾನಿಯವರ ಪಾತ್ರವೂ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ : ಒನ್‌ ಮಿನಿಟ್‌ ವಿಡಿಯೋ | ಬಿಜೆಪಿಗೆ ಆಘಾತ ನೀಡಿದ ಮೂವರು ಯುವ ನಾಯಕರು

ಅಲ್ಪೇಶ್‌ ಠಾಕೂರ್‌: ಚುನಾವಣಾಪೂರ್ವದಲ್ಲಿಯೇ ಕಾಂಗ್ರೆಸ್‌ಗೆ ಸೇರ್ಪಡೆಯಾದ ಅಲ್ಪೇಶ್‌ ಠಾಕೂರ್‌ಗಿರುವ ದೊಡ್ಡ ಬೆಂಬಲವೆಂದರೆ ಹಿಂದುಳಿದ ಸಮುದಾಯದ ಜನಸಂಖ್ಯೆ. ರಾಧನ್‌ಪುರ್‌ ಕ್ಷೇತ್ರದಿಂದ ಚುನಾವಣೆ ಎದುರಿಸಿದ ಅಲ್ಪೇಶ್‌ ಗೆದ್ದಿದ್ದಾರೆ. ಆದರೆ, ಒಟ್ಟಾರೆಯಾಗಿ ಗಮನಿಸಿದರೆ, ಹಿಂದುಳಿದ ವರ್ಗದ ಮತದಾರರ ಸಂಖ್ಯೆಯನ್ನು ಪರಿಗಣಿಸಿದರೆ ಸಮುದಾಯದೊಳಗೆ ಅಲ್ಪೇಶ್‌ ಪ್ರಭಾವ ಕಡಿಮೆ ಪ್ರಮಾಣದಲ್ಲಿರುವ ಸಾಧ್ಯತೆ ಕಾಣುತ್ತದೆ. ಅವರೂ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಸಮಯ ಪ್ರಚಾರದಲ್ಲಿ ಕಳೆದಿದ್ದು ಕಾರಣವಿರಬಹುದು. ಆದರೆ ಮುಂದಿನ ದಿನಗಳಲ್ಲಿ ಅಲ್ಪೇಶ್‌, ಜಿಗ್ನೇಶ್‌ರಂಥ ಯುವ ಮುಖಂಡರು ರಾಜಕೀಯದ ಭಾಷ್ಯ ಬದಲಿಸುವ ಶಕ್ತಿ ಹೊಂದಿರುವುದು ಸ್ಪಷ್ಟ. ಹಾರ್ದಿಕ್‌ ಪಟೇಲ್‌ ಲೋಕಸಭಾ ಚುನಾವಣೆಯಲ್ಲೂ ಬಹುಮುಖ್ಯವಾದ ಪಾತ್ರ ವಹಿಸಲಿದ್ದಾರೆ. ಈ ಚುನಾವಣೆಯಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಹೋಗುವ ಅವಕಾಶವೂ ಇವರಿಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More