ಮಣ್ಣಿನ ಮಗನ ಮನದ ಮಾತು | ಅರಸು ಸೂಟ್‌ಕೇಸ್ ಕೈಗಿಟ್ಟು ಹೇಳಿದ್ದೇನು?

ಮಾಜಿ ಪ್ರಧಾನಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆದಾಗ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಪಟ್ಟಿ ಕೊನೇಕ್ಷಣದಲ್ಲಿ ಬದಲಾವಣೆಯಾಗಿ ಅವರಿಗೆ ಅಪಖ್ಯಾತಿ ಬಂದಿತ್ತು. ಆದರೆ, ಪಟ್ಟಿ ಬದಲಾಯಿಸಿದ್ದು ರಾಮಕೃಷ್ಣ ಹೆಗಡೆ. ಆದರೆ ಅಷ್ಟೊತ್ತಿಗಾಗಲೇ ದೇವೇಗೌಡ ಅಪರಾಧಿ ಆಗಿಬಿಟ್ಟಿದ್ದರು!

 1. ದೇವರಾಜ ಅರಸು ಅವರ ಸರ್ಕಾರದ ವಿರುದ್ಧ ನಾನು ಮಾಡುತ್ತಿದ್ದ ಆರೋಪಗಳಿಂದ ಅರಸರು ಕಂಗೆಟ್ಟಿದ್ದರು. ಒಂದು ದಿನ ನನಗೆ ಕರೆ ಮಾಡಿದ್ದ ಅರಸು, ನನ್ನನ್ನು ಅವರ ಬಳಿಗೆ ಕರೆಸಿಕೊಂಡು ಚರ್ಚೆಯೊಂದನ್ನು ಮಾಡಿದ್ದರು. ನಾನು ಚರ್ಚೆಗೆ ಹೋಗುವ ಮೊದಲೇ ನನ್ನ ಬಗ್ಗೆ ಅವರು ಮಾಹಿತಿ ಕಲೆಹಾಕಿದ್ದರು.
 2. ಪೊಲೀಸ್, ಕಂದಾಯ ಇಲಾಖೆ, ಡಿಸಿಗಳ ಮೂಲಕ ನನಗೇನಾದರೂ ಆಸ್ತಿ ಇದೆಯೇ, ಅಕ್ರಮಗಳನ್ನೇನಾದರೂ ಮಾಡಿದ್ದೇನೆಯೇ, ಆರ್ಥಿಕ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿದುಕೊಂಡಿದ್ದರು. ನನಗಿರುವ ಸಾಲದ ಲೆಕ್ಕ ಅವರಿಗೆ ಗೊತ್ತಾಗಿತ್ತು. ಭೇಟಿಯಾದ ನನ್ನನ್ನು ಸೋದರನಂತೆ ಮಾತನಾಡಿಸಿದ ಅವರು, "ನಾನು ನಿಮ್ಮನ್ನು ತಪ್ಪು ತಿಳಿದಿದ್ದೆ. ಆದರೆ ನನಗೆ ಸಿಕ್ಕ ಮಾಹಿತಿ ನನ್ನ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಿದೆ. ನಿಮಗೆ ೧. ೩೦ ಲಕ್ಷ ಸಾಲವಿದೆ. ನಿಮ್ಮ ಕುಟುಂಬ ನಿರ್ವಹಣೆಯೇ ಕಷ್ಟವಾಗಿದೆ ಎಂದು ನನಗೆ ಗೊತ್ತಾಗಿದೆ,” ಎಂದು ಹೇಳಿದರು. “ನೀವು ಅಕ್ರಮಗಳನ್ನು ಯಾವುದೇ ಭಯವಿಲ್ಲದೆ ಟೀಕಿಸುತ್ತೀರಿ. ಆದರೆ ನಿಮಗೆ ತಿಳಿದಿರಲಿ, ನೀವು ಮಾಡುತ್ತಿರುವ ಈ ಹೋರಾಟ ನಿಮ್ಮ ಕೈ ಹಿಡಿಯುವುದಿಲ್ಲ,” ಎಂದರು.
 3. “ನಾನೂ ಭ್ರಷ್ಟನಲ್ಲ. ಆದರೆ, ಮುಖ್ಯಮಂತ್ರಿಯಾಗಿ ಒಳ್ಳೆ ಕೆಲಸ ಮಾಡಬೇಕು, ಕ್ರಾಂತಿಕಾರಕ ನಿರ್ಧಾರಗಳನ್ನು ನಾನು ಕೈಗೊಳ್ಳುವವನಿದ್ದೇನೆ. ಇದನ್ನೆಲ್ಲ ಮಾಡಬೇಕಿದ್ದರೆ ನಾನು ಸರ್ಕಾರ ಉಳಿಸಿಕೊಳ್ಳಬೇಕು. ಆದರೆ, ಅದಕ್ಕೆ ಹಲವು ಸಮಸ್ಯೆಗಳಿವೆ. ಇಂದಿರಾ ಗಾಂಧಿ ನನ್ನ ವಿರುದ್ಧ ಕೆಂಗೆಣ್ಣು ಬೀರಿದ್ದಾರೆ. ಇಂಥ ಸನ್ನಿವೇಶದಲ್ಲಿ ನಾನು ಸರ್ಕಾರ ಉಳಿಸಿಕೊಳ್ಳಬೇಕಿದ್ದರೆ ಶಾಸಕರನ್ನು ಹಿಡಿದಿಟ್ಟುಕೊಳ್ಳಬೇಕು. ನಾನು ಭ್ರಷ್ಟನಲ್ಲದಿದ್ದರೂ ಈ ವ್ಯವಸ್ಥೆ ನನ್ನನ್ನು ಭ್ರಷ್ಟನನ್ನಾಗಿ ಮಾಡುತ್ತಿದೆ. ನಾನು ಇಂಥ ಇಕ್ಕಟ್ಟಿನಲ್ಲಿರುವಾಗ ನನ್ನ ಮೇಲೆ ನೀವು ಭ್ರಷ್ಟಾಚಾರದ ವಿಷಯಗಳನ್ನಿಟ್ಟುಕೊಂಡು ದಾಳಿ ಮಾಡದೆ ನನಗೆ ಸಹಕಾರ ನೀಡಿ,” ಎಂದು ಕೇಳಿಕೊಂಡಿದ್ದರು.
 4. ಐದು ಲಕ್ಷ ರುಪಾಯಿಗಳಿದ್ದ ಸೂಟ್‌ಕೇಸನ್ನು ನನಗೆ ಕೊಡಲು ಬಂದರು. ಆದರೆ ನಾನು ಅದನ್ನು ತಿರಸ್ಕರಿಸಿದೆ. ನನ್ನ ಹೋರಾಟವನ್ನು ನಾನು ಮುಂದುವರಿಸುವುದಾಗಿ ತಿಳಿಸಿದೆ. ಈ ಬೆಳವಣಿಗೆ ನನ್ನ ಮತ್ತು ಅವರ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸುತ್ತದೆ ಮತ್ತು ಮುಖ್ಯಮಂತ್ರಿ-ವಿರೋಧಪಕ್ಷದ ನಾಯಕರು ಹೇಗಿರಬೇಕು ಎಂಬುದನ್ನು ತಿಳಿಸುತ್ತದೆ.
 5. ೧೯೭೨ರ ಹೊತ್ತಿಗೆ ದೇಶದಲ್ಲಿ ಮಹತ್ತರ ಬೆಳವಣಿಗೆ ನಡೆದಿತ್ತು. ಜನಪ್ರಿಯತೆಯ ಉತ್ತುಂಗದಲ್ಲಿದ್ದ ಇಂದಿರಾ ಗಾಂಧಿ ಅವರ ವರ್ಚಸ್ಸು ಕುಂದಿತ್ತು. ಹಲವಾರು ಭ್ರಷ್ಟಾಚಾರ ಆರೋಪಗಳು ಅವರ ಮೇಲೆ ಕೇಳಿಬಂದಿತ್ತು. ಹೋರಾಟಗಳು ನಡೆದವು. ಜಯಪ್ರಕಾಶ್ ನಾರಾಯಣ್ ಅವರು ಹೋರಾಟದ ನೇತೃತ್ವ ವಹಿಸಿದ್ದರು. ಈ ನಡುವೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ರಾಜ್‌ನಾರಾಯಣ್ ಹಾಕಿದ್ದ ಚುನಾವಣಾ ತಕರಾರು ಅರ್ಜಿಯಲ್ಲಿ ಇಂದಿರಾ ಗಾಂಧಿ ಅವರಿಗೆ ವ್ಯತಿರಿಕ್ತ ತೀರ್ಪು ಬಂತು. ಅವರು ಪ್ರಧಾನಿ ಸ್ಥಾನ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಯಿತು. ಈ ಹಂತದಲ್ಲಿ ಸರ್ವಾಧಿಕಾರಿಯಂತಾದ ಇಂದಿರಾ, ಸಂವಿಧಾನವನ್ನು ಲೆಕ್ಕಿಸದೆ, ತಮ್ಮ ಸ್ಥಾನ ಉಳಿಸಿಕೊಳ್ಳಲು ೧೯೭೫ರ ಜೂ.೨೪ರ ಮಧ್ಯರಾತ್ರಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು.
 6. ಈ ನಿರ್ಧಾರವನ್ನು ವಿರೋಧಿಸಿದ ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ವಾಜಪೇಯಿ, ಆಡ್ವಾಣಿ ಆದಿಯಾಗಿ ಎಲ್ಲ ವಿರೋಧಿ ನಾಯಕರನ್ನು ಬಂಧಿಸಲಾಯಿತು. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರೂ ಬಂಧನವಾದರು. ವೀರೇಂದ್ರ ಪಾಟೀಲರು, ಬೊಮ್ಮಾಯಿ ಬಂಧನಕ್ಕೊಳಗಾಗದೆ ಇರಲು ನಿರ್ಧರಿಸಿದ್ದರು. ನಾನು ಸಮಿತಿಯೊಂದರ ವರದಿ ನೀಡಬೇಕಾಗಿದ್ದರಿಂದ ಒಂದು ತಿಂಗಳು ತಡವಾಗಿ ಬಂಧನಗೊಂಡೆ. ಪತ್ನಿ, ಮಕ್ಕಳೊಂದಿಗೆ ರಾತ್ರಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ನನ್ನನ್ನು ಬಂಧಿಸಲಾಯಿತು.
 7. ನನ್ನ ಬಂಧನ ವೈಯಕ್ತಿಕವಾಗಿ ದೇವರಾಜು ಅರಸು ಅವರಿಗೆ ಇಷ್ಟವಿರಲಿಲ್ಲವಾದರೂ, ಅವರಿಗೆ ಅದು ಅನಿವಾರ್ಯವಾಗಿತ್ತು. ತುರ್ತು ಪರಿಸ್ಥಿತಿಯ ದಿನಗಳೆಲ್ಲ ಮುಗಿದು ಜನತಾ ಪಕ್ಷ ಉದಯವಾಯಿತು. ವೀರೇಂದ್ರ ಪಾಟೀಲರು ರಾಜ್ಯ ಘಟಕದ ಅಧ್ಯಕ್ಷರಾದರು. ೧೯೭೭ರಲ್ಲಿ ನಡೆದ ಐತಿಹಾಸಿಕ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷಕ್ಕೆ ಜನಾದೇಶ ಬಂತು. ಸ್ವತಃ ಇಂದಿರಾ ಗಾಂಧಿ ಅವರೇ ಸೋತಿದ್ದರು. ಕಾಂಗ್ರೆಸ್ ದೇಶಾದ್ಯಂತ ನೆಲಕಚ್ಚಿತ್ತು. ಮೊರಾರ್ಜಿ ದೇಸಾಯಿ ಪ್ರಧಾನಿಯಾದರು.
 8. ದೇಶಾದ್ಯಂತ ಕಾಂಗ್ರೆಸ್ ವಿರುದ್ಧ ಅಲೆ ಇದ್ದರೂ, ಕರ್ನಾಟಕಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ಅದಕ್ಕೆ ಕಾರಣ, ಅರಸರು ಜಾರಿಗೆ ತಂದಿದ್ದ ಹಲವು ಕಾರ್ಯಕ್ರಮಗಳು. ಇದಾದ ನಂತರ ೧೯೭೮ರಲ್ಲಿ ರಾಜ್ಯದಲ್ಲಿ ಕರ್ನಾಟಕದ ಚುನಾವಣೆ ಎದುರಾಯಿತು. ಈ ಹಿನ್ನೆಲೆಯಲ್ಲಿ ರಾಜ್ಯ ಜನತಾ ಪಕ್ಷದ ಅಧ್ಯಕ್ಷ ವೀರೇಂದ್ರ ಪಾಟೀಲರನ್ನು ಬದಲಿಸುವ ನಿರ್ಧಾರವವನ್ನು ಕೈಗೊಳ್ಳಲಾಗಿತ್ತು.
 9. ಜನತಾ ಪಕ್ಷಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ರಾಮಕೃಷ್ಣ ಹೆಗಡೆ ಅವರನ್ನು ನೇಮಿಸುವಲ್ಲಿ ನಾನು ಅದಾಗಲೇ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ. ಆ ನಂತರ ವೀರೇಂದ್ರ ಪಾಟೀಲರಿಂದ ತೆರವಾಗುವ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ನೇಮಿಸುವುದು ನನ್ನ ಇರಾದೆಯಾಗಿತ್ತು. ಆದರೆ ಹೆಗಡೆ, ಆ ಪ್ರಸ್ತಾಪ ನಿರಾಕರಿಸಿ ರಾಷ್ಟ್ರ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು.
 10. ನಂತರ ಅಧ್ಯಕ್ಷ ಸ್ಥಾನಕ್ಕೆ ನನ್ನ (ದೇವೇಗೌಡ), ವೀರೇಂದ್ರ ಪಾಟೀಲರು, ಬೊಮ್ಮಾಯಿ ಹೆಸರು ಕೇಳಿಬಂದವು. ಅಂತಿಮವಾಗಿ ದೇವೇಗೌಡರೇ ಅಧ್ಯಕ್ಷರಾಗಲಿ ಎಂದು ವೀರೇಂದ್ರ ಪಾಟೀಲರು, ಬೊಮ್ಮಾಯಿ, ರಾಮಕೃಷ್ಣ ಹೆಗಡೆ ನಿರ್ಧರಿಸಿದರು.
 11. ಆದರೆ, ಮೊದಲಿಗೆ ಒಪ್ಪಿದ್ದ ವೀರೇಂದ್ರ ಪಾಟೀಲರು ನಂತರ ಒಡೆಯರ್ ಅವರ ಹೆಸರು ಶಿಫಾರಸು ಮಾಡಿದರಾದರೂ, ಪ್ರಧಾನಿ ಮೊರಾರ್ಜಿ ದೇಸಾಯಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಂದ್ರಶೇಖರ್ ಅವರು ನನ್ನ ಪರವಾಗಿ ನಿಂತರು. ಅದರಂತೆ, ೧೯೭೮ರಲ್ಲಿ ಜನತಾ ಪಕ್ಷದ ರಾಜ್ಯ ಅಧ್ಯಕ್ಷನಾದೆ. ನನ್ನ ನೇತೃತ್ವದಲ್ಲೇ ಚುನಾವಣೆ ನಡೆಯಿತು.
 12. ಚುನಾವಣೆಗೆ ಸಿದ್ಧತೆ ಆರಂಭಿಸಿದ ನಾನು ಪಕ್ಷದ ಎಲ್ಲರೊಂದಿಗೆ ಚರ್ಚಿಸಿ, ರಾಜ್ಯದ ೨೨೪ ಕ್ಷೇತ್ರಗಳಿಗೂ ಸೂಕ್ತ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ, ಪಟ್ಟಿಯನ್ನು ತೆಗೆದುಕೊಂಡು ದೆಹಲಿಗೆ ತೆರಳಿ, ವರಿಷ್ಠರಿಗೆ ನೀಡಿದೆ. ಆಗ ನನ್ನ ಜೊತೆ ವೀರೇಂದ್ರ ಪಾಟೀಲರು, ಬೊಮ್ಮಾಯಿ, ಸಮಾಜವಾದಿ ಗೆಳೆಯ ವೆಂಕಟರಾಮ್ ಕೂಡ ಇದ್ದರು. ಆದರೆ, ರಾಮಕೃಷ್ಣ ಹೆಗಡೆ ಅವರು ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಅದಲುಬದಲು ಮಾಡಿ ಮರುದಿನ ಬೇರೆಯದ್ದೇ ಪಟ್ಟಿ ಪ್ರಕಟಿಸಿದರು. ಆದರೆ, ರಾಜ್ಯದಲ್ಲಿ ಪಕ್ಷದ ಅಧ್ಯಕ್ಷನಾಗಿದ್ದ ನನ್ನ ಒಂದು ಅಭಿಪ್ರಾಯವನ್ನೂ ಹೆಗಡೆ ಕೇಳಿರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
 13. ಅಭ್ಯರ್ಥಿ ಬದಲಾವಣೆ ಬೆಳವಣಿಗೆಯಿಂದ ಪಕ್ಷಕ್ಕೆ ತುಂಬಾ ಕೆಟ್ಟ ಹೆಸರು ಬಂತು. ಪಟ್ಟಿಯಲ್ಲಿ ದೇವೇಗೌಡರು ಕೈಯಾಡಿಸಿದ್ದಾರೆ, ಅಕ್ರಮ ಮಾಡಿದ್ದಾರೆ, ದುಡ್ಡು ಪಡೆದು ಟಿಕೆಟ್ ಹಂಚಿದ್ದಾರೆ ಎಂದು ಸುದ್ದಿ ಹರಿಡಿಸಲಾಯಿತು. ಇದನ್ನು ಮಾಡಿದ್ದು ರಾಮಕೃಷ್ಣ ಹೆಗಡೆ ಅವರಾದರೂ, ಅದರಿಂದ ಬಂದ ಅಪಖ್ಯಾತಿ ಹೊತ್ತದ್ದು ಮಾತ್ರ ನಾನು. ಹೆಗಡೆ ಮಾಡಿದ ಈ ಪ್ರಮಾದವನ್ನು ನಾನು ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದೆ. ಆದರೆ ಅದಕ್ಕೆ ಅವರಿಂದ ಉತ್ತರವೇ ಬರಲಿಲ್ಲ.
 14. ಈ ಮೂಲಕ ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಹೆಣೆಯಲಾಗಿತ್ತು. ನಾನು ವಿಪಕ್ಷದ ನಾಯಕನಾಗಿ ಮಾಡಿದ ಹೋರಾಟಗಳ ಮೂಲಕ ಗಳಿಸಿದ ಜನಪ್ರಿಯತೆಗೆ ಹಾನಿ ಮಾಡಲಾಯಿತು. ಒಂದು ವೇಳೆ, ಪಕ್ಷ ಅಧಿಕಾರಕ್ಕೆ ಬಂದರೆ ನಾನು ಮುಖ್ಯಮಂತ್ರಿ ಆಗುವುದನ್ನು ಮೊದಲೇ ತಡೆಯುವುದು ಅದರ ಹಿಂದಿನ ಸಂಚಾಗಿತ್ತು.
 15. ಈ ನೋವು ಕಾಡುತ್ತಿರುವಾಗಲೇ, ನಿಜಲಿಂಗಪ್ಪ ಅವರೂ ನನ್ನ ವಿರುದ್ಧ ಹೇಳಿಕೆ ಕೊಟ್ಟು ಪಕ್ಷದಿಂದ ಹೊರನಡೆದರು. ಅದರಿಂದ ನಾನು ಲಿಂಗಾಯತ ವಿರೋಧಿ ಎನಿಸಿಕೊಳ್ಳಬೇಕಾಯಿತು. ಇದಕ್ಕೂ ಹಿಂದೆ, ದೇವರಾಜ ಅರಸರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದಕ್ಕಾಗಿ ಹಿಂದುಳಿದ ವರ್ಗಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು.
 16. ಹೀಗಾಗಿ, ೧೯೭೮ರ ಚುನಾವಣೆಯಲ್ಲಿ ನಾನು ಎಷ್ಟೇ ಕಷ್ಟುಪಟ್ಟು ಸೆಣಸಿದರೂ ಪಕ್ಷ ಹೀನಾಯ ಸೋಲು ಅನುಭವಿಸಿತು. ನಾನು ಹೊಳೆನರಸೀಪುರದಲ್ಲಿ ಗೆದ್ದರೂ, ಪಕ್ಷ ನೆಲಕಚ್ಚಿತ್ತು. ಬಹುಮತ ಪಡೆದ ಕಾಂಗ್ರೆಸ್ ಸರ್ಕಾರ ರಚಿಸಿತು. ದೇವರಾಜ ಅರಸರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು.
 17. ಆ ಚುನಾವಣೆ ಫಲಿತಾಂಶ ನನಗೆ ತೀವ್ರ ಆಘಾತ ಉಂಟುಮಾಡಿತು. ಭ್ರಷ್ಟಾಚಾರದ ವಿರುದ್ಧ ನಾನು ಎಷ್ಟೇ ಹೋರಾಟ ಮಾಡಿದರೂ, ಅದೇ ಭ್ರಷ್ಟಾಚಾರದ ಆರೋಪದಿಂದಾಗಿ ನಾನು ಸೋಲಬೇಕಾಯಿತು. ಇದು ನನಗೆ ಅತೀವ ದುಃಖ ತರಿಸಿತ್ತು.
 18. ಭ್ರಷ್ಟಾಚಾರದ ವಿರುದ್ಧ ನೀನು ಮಾಡುತ್ತಿರುವ ಹೋರಾಟ ನಿನ್ನ ಕೈಹಿಡಿಯುವುದಿಲ್ಲ ಎಂದು ಅರಸರು ಅಂದು ಹೇಳಿದ ಮಾತು ನೆನಪಿಗೆ ಬಂತು. ಆ ಸನ್ನಿವೇಶ ನನ್ನನ್ನು ಅಣಕಿಸುವಂತಿತ್ತು. ಈ ಹಿನ್ನೆಲೆಯಲ್ಲಿ ನಾನು ಒಂದು ನಿರ್ಧಾರಕ್ಕೆ ಬಂದೆ. ಸ್ಪೀಕರ್ ಅವರಿಗೆ ಒಂದು ಪತ್ರ ಕೊಟ್ಟು, ಇನ್ನು ಮುಂದೆ ನಾನು ಸದನದ ಮುಂದಿನ ಸಾಲಿನಲ್ಲಿ ಕೂರುವುದಿಲ್ಲ, ಹಿಂದಿನ ಯಾವುದಾದರೂ ಸಾಲಿನಲ್ಲಿ ಕೂರುತ್ತೇನೆ ಎಂದು ತಿಳಿಸಿದೆ.
 19. ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಅರ್ಥಹೀನ ಎಂದು ನಿರ್ಧರಿಸಿದ ನಾನು ವಿಧಾನಸಭೆ ಚರ್ಚೆಗಳಲ್ಲಿ ಭಾಗವಹಿಸಲಿಲ್ಲ. ಹಿಂದಿನಂತೆ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಅಬ್ಬರಿಸಲಿಲ್ಲ. ಸದನದ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಹೊರನಡೆಯುತ್ತಿದ್ದೆ.
 20. ೧೯೭೮ರ ಚುನಾವಣೆ ಸೋಲು ನನಗೆ ಹಲವು ಪಾಠಗಳನ್ನು ಕಲಿಸಿತ್ತು. ನನ್ನ ಜೊತೆಗಿದ್ದವರೇ ನನ್ನ ವಿರುದ್ಧ ಸಂಚು ಮಾಡಿದ್ದರು. ರಾಜಕೀಯ ಒಳಸಂಚುಗಳು ಹೇಗಿರುತ್ತವೆ ಎಂಬುದನ್ನು ನೋಡಿದ್ದೆ. ಇದಾದ ನಂತರ ಬಂದಿದ್ದೇ ೧೯೮೦ರ ಲೋಕಸಭೆ ಚುನಾವಣೆ.
ಇದನ್ನೂ ಓದಿ : ಮಣ್ಣಿನ ಮಗನ ಮನದ ಮಾತು | ‘ಮಂತ್ರಿ ಪದವಿಯ ಆಮಿಷ ಒಡ್ಡಿದ್ದರು ಅರಸು’
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More