ಉತ್ತರ ಕರ್ನಾಟಕದ ಮತದಾರರ ಸೆಳೆಯಲು ಬರಲಿದ್ದಾರೆ ಯೋಗಿ ಆದಿತ್ಯನಾಥ್

ಸದ್ಯದ ಮಟ್ಟಿಗೆ ಹೇಳುವುದಾದರೆ, ಉತ್ತರ ಕರ್ನಾಟಕದಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ಗೆ ಮನ್ನಣೆ ಹೆಚ್ಚಿದೆ. ಆರು ತಿಂಗಳ ಅಂತರದಲ್ಲಿ ಚುನಾವಣೆ ಇದೆ. ಹಾಗಾಗಿ ಉತ್ತರ ಕರ್ನಾಟಕಕ್ಕೆ ಸಿಎಂ ಯೋಗಿ ಅವರು ಆಗಮಿಸಿದ್ದೇ ಆದರೆ ಬಿಜೆಪಿ ಪಾಲಿಗೆ ಲಾಭವಾಗಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರ

ರಾಜ್ಯದಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದೆ. ರಾಜ್ಯ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮೊದಲಿನಿಂದ ತನ್ನದೇ ಆದ ತಂತ್ರಗಳನ್ನು ಹೆಣೆಯುತ್ತಿದೆ. ತೆರೆಮರೆಯಲ್ಲಿಯೂ ಸಾಕಷ್ಟು ಕಸರತ್ತು ನಡೆಯುತ್ತಿದ್ದು, ಇದೇ ತಿಂಗಳ 21ರಂದು ಹುಬ್ಬಳ್ಳಿಯ ಪರಿವರ್ತನಾ ಯಾತ್ರೆ ಸಮಾವೇಶಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಕರೆತರುವ ಪ್ರಯತ್ನ ನಡೆದಿದೆ.

ಸದ್ಯದ ಮಟ್ಟಿಗೆ ಹೇಳುವುದಾದರೆ, ಉತ್ತರ ಕರ್ನಾಟಕದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುನ್ನಡೆ ಹೊಂದಿದೆ. ಆರು ತಿಂಗಳ ಅಂತರದಲ್ಲಿ ಚುನಾವಣೆ ಇದೆ. 96 ವಿಧಾನಸಭಾ ಕ್ಷೇತ್ರಗಳು ಇದೇ ಭಾಗದಲ್ಲಿವೆ. ಉತ್ತರ ಕರ್ನಾಟಕಕ್ಕೆ ಯೋಗಿಯ ಆಗಮನವಾದರೆ ಬಿಜೆಪಿ ಪಾಲಿಗೆ ಹೊಸ ಸಂಚಲನ ಮೂಡಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಯಡಿಯೂರಪ್ಪ ಸ್ಥಾಪಿಸಿದ್ದ ಕೆಜೆಪಿ ಸವಾಲಾಗಿತ್ತು. ಐವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕೆಜೆಪಿ ಸ್ಪರ್ಧೆಯಿಂದ ಬಿಜೆಪಿಗೆ ಕೆಲವೇ ಮತಗಳ ಅಂತರದಿಂದ ಸೋಲಾಗಿತ್ತು. ಕೆಜೆಪಿ ರಾಜ್ಯದಲ್ಲಿ ಪ್ರಭಾವ ಬೀರಲು ಸಾಧ್ಯವಾಗಿರಲಿಲ್ಲವಾದರೂ ಬಿಜೆಪಿಯ ಜಯದ ಆಸೆಗೆ ಅಡ್ಡಗಾಲಾಗಿದ್ದಂತೂ ಸತ್ಯ. ಸದ್ಯ ಯಡಿಯೂರಪ್ಪ ರಾಜ್ಯ ಬಿಜೆಪಿ ಸಾರಥಿ. ಯೋಗಿ ಆದಿತ್ಯನಾಥ್ ಮೂಲಕ, ಪ್ರಖರ ಹಿಂದುತ್ವವಾದ ಮುನ್ನೆಲೆಗೆ ತಂದು ಜನರನ್ನು ಸೆಳೆಯುವುದು ಬಿಜೆಪಿ ನಾಯಕರ ಉದ್ದೇಶ.

ಗುಜರಾತ್ ಚುನಾವಣಾ ಫಲಿತಾಂಶದಲ್ಲಿ ಹಿನ್ನಡೆ ಕಂಡರೂ ಬಿಜೆಪಿ ಗೆಲುವನ್ನು ಸಂಭ್ರಮಿಸಿದೆ. ಅದರ ಪರಿಣಾಮ ಮುಂಬರುವ ರಾಜ್ಯಗಳ ಚುನಾವಣೆಗಳ ಮೇಲೆ ಅಲ್ಪ ಮಟ್ಟಿಗಾದರೂ ಆಗುವುದು ಸಹಜ. ದಕ್ಷಿಣ ಭಾರತ ಮಾತ್ರ ಬಿಜೆಪಿಗೆ ಮೊದಲಿನಿಂದಲೂ ನುಂಗಲಾರದ ತುತ್ತಾಗಿದೆ. ಒಂದು ಸಲ ಕಮಲ ಪಾಳೆಯಕ್ಕೆ ಅಧಿಕಾರ ನೀಡಿದ್ದ ಮತದಾರ ನಂತರ ಕಮಲವನ್ನು ಅರಳಲು ಬಿಟ್ಟಿರಲಿಲ್ಲ. ಇದೆಲ್ಲ ಬಿಜೆಪಿ ನಾಯಕರ ಗಮನದಲ್ಲಿದ್ದು, ಗುಜರಾತ್ ಚುನಾವಣಾ ಫಲಿತಾಂಶ, ಯೋಗಿ ಆಗಮನ, ಕಳಸಾ ಬಗ್ಗೆ ಭರವಸೆಯ ಗಡುವು, ಹೀಗೆ ತಮ್ಮದೇ ತಂತ್ರಗಳ ಮೂಲಕ ಬಿಜೆಪಿಯ ಅಲೆಯನ್ನು ಜೀವಂತವಾಗಿಡುವ ಪ್ರಯತ್ನ ನಡೆದಿದೆ.

ಮುಖ್ಯಮಂತ್ರಿಯ ಪ್ರವಾಸ ಈಗಾಗಲೇ ಉತ್ತರ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಈ ಪ್ರವಾಸವೇ ಉತ್ತರ ಕರ್ನಾಟಕವನ್ನು ಸಿಎಂ ಸಿದ್ದರಾಮಯ್ಯ ಹೇಗೆ ಪರಿಗಣಿಸಿದ್ದಾರೆ ಎಂಬುದರ ಸೂಚಿ. ಸಿಎಂ ಸಿದ್ದರಾಮಯ್ಯ ಪ್ರಭಾವ ಕುಗ್ಗಿಸುವುದಕ್ಕಾಗಿಯೂ ಯೋಗಿಯ ಆಗಮನಕ್ಕೆ ಬಿಜೆಪಿ ನಾಯಕರು ಕಾಯುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಉತ್ತರ ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಮೋದಿ ಬಂದಿದ್ದರು. ಉತ್ತರ ಕರ್ನಾಟಕದಿಂದ ಹೆಚ್ಚಿನ ಸಂಸದರು ಆಯ್ಕೆಯಾಗಲು ಇದು ಕಾರಣವಾಗಿತ್ತು ಎಂಬುದು ಗಮನಾರ್ಹ. ಅಮಿತ್ ಶಾ ನಂತರ ರಾಷ್ಟ್ರ ಬಿಜೆಪಿಯ ಪ್ರಬಲ ನಾಯಕ ಎನ್ನಲಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಪರಿವರ್ತನಾ ಯಾತ್ರೆಗೆ ಕರೆಸುವ ಮೂಲಕ ಬಿಜೆಪಿ ನಾಯಕರು ಹಳೇ ತಂತ್ರಕ್ಕೆ ಮೊರೆಹೋಗಿದ್ದಾರೆ. ಈ ಮೊದಲು ಧಾರವಾಡ , ಗದಗ, ಹಾವೇರಿಗಳನ್ನೊಳಗೊಂಡು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮಕ್ಕೆ ಬಿಜೆಪಿ ಮುಂದಾಗಿತ್ತು. ನಂತರದಲ್ಲಿ ಮೂರು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಬಿಜೆಪಿ ಪರಿವರ್ತನಾ ಯಾತ್ರೆ ನಡೆಸಲು ಮುಂದಾಗಿದೆ.

ಜ.28ರಂದು ಬೆಂಗಳೂರಿನಲ್ಲಿ ಪರಿವರ್ತನಾ ಯಾತ್ರೆ ಮುಕ್ತಾಯ ಕಾಣಲಿದೆ. ಉದ್ಘಾಟನೆಯನ್ನು ಅಮಿತ್ ಶಾ ನೆರವೇರಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದಿದೆ ಬಿಜೆಪಿ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿಯ ಚುನಾವಣಾ ರಣಕಹಳೆಯನ್ನು ಆದಿತ್ಯನಾಥ ಮೊಳಗಿಸಲಿದ್ದಾರೆ ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಕಳೆದುಹೋದ ವರ್ಚಸ್ಸನ್ನು ಮತ್ತೆ ಪಡೆದುಕೊಳ್ಳುವುದು ಬಿಜೆಪಿಯ ಉದ್ದೇಶ. ಮಹದಾಯಿ ಹೋರಾಟ ಕೂಡ ನಿರಂತರವಾಗಿದೆ. ಈ ಹೊತ್ತಲ್ಲಿ ರಾಜ್ಯ ಬಿಜೆಪಿ ನಾಯಕರು ಯೋಗಿ ಆದಿತ್ಯನಾಥರನ್ನು ಕರೆಸುವ ಮೂಲಕ ಮತ್ತೊಂದು ದಾಳ ಉರುಳಿಸಲು ಮುಂದಾಗಿದ್ದಾರೆ ಎಂದು ಸಾರ್ವಜನಿಕರಲ್ಲಿ ಮಾತಿದೆ. ಇನ್ನು, ಮಹದಾಯಿ ಭರವಸೆ ಈಡೇರಿಸದ ಯಡಿಯೂರಪ್ಪನವರ ವಿರುದ್ಧ ಮಹದಾಯಿ ಹೋರಾಟಗಾರರು ಗರಂ ಆಗಿದ್ದಾರೆ. ಮಹದಾಯಿ ಹೋರಾಟಗಾರರು ಹುಬ್ಬಳ್ಳಿ ಯಾತ್ರೆಗೆ ಕಪ್ಪುಪಟ್ಟಿ ಪ್ರದರ್ಶಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ, ಪರಿವರ್ತನಾ ಯಾತ್ರೆ ಸಮಾವೇಶದಲ್ಲಿಯೇ ಉತ್ತರ ಕರ್ನಾಟಕದ ರೈತರಿಗೆ ಮಹದಾಯಿ ಕುರಿತು ಶುಭಸುದ್ದಿ ನೀಡಲಿದ್ದೇವೆ ಎಂದಿರುವ ಬಿಜೆಪಿ ನಾಯಕರ ಮಾತಿಗೆ ಹುಬ್ಬಳ್ಳಿ ಸಮಾವೇಶದಲ್ಲಿಯೇ ಉತ್ತರ ಸಿಗಲಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More