ಅಮಿತ್ ಶಾ ಅವರ ಚುನಾವಣಾ ರಣತಂತ್ರ ಹೇಗಿರುತ್ತದೆ ಗೊತ್ತೇ? | ಕಂತು 1

ಗುಜರಾತ್ ಚುನಾವಣೆ ನಂತರ ಬಿಜೆಪಿ ತಂತ್ರಗಾರರ ದೃಷ್ಟಿ ಕರ್ನಾಟಕದತ್ತ ನೆಟ್ಟಿದೆ. ಅಮಿತ್ ಶಾ ತಂಡ ಚುನಾವಣಾ ಕಣದಲ್ಲಿ ಹೇಗೆ ಕೆಲಸ ಮಾಡುತ್ತದೆ, ತಂತ್ರಗಳು ಹೇಗಿರುತ್ತವೆ ಎಂಬ ಕುರಿತು ಪ್ರಶಾಂತ್ ಜಾ ಬರೆದಿರುವ ‘How the BJP Wins’ ಪುಸ್ತಕದಲ್ಲಿ ವಿವರಣೆ ಇದೆ. ಅದರ ಆಯ್ದ ಭಾಗ ಇಲ್ಲಿದೆ

ಉತ್ತರ ಪ್ರದೇಶದ ಸ್ಥಳೀಯ ಸಂಗತಿಗಳ ಬಗ್ಗೆ ಅಮಿತ್‌ ಶಾಗೆ ಅಷ್ಟಾಗಿ ಏನೂ ಗೊತ್ತಿರಲಿಲ್ಲ. ಅಲ್ಲಿ ಪಕ್ಷವನ್ನು ಬಹುದೊಡ್ಡ ಸಂಖ್ಯೆಯೊಂದಿಗೆ ಗೆಲ್ಲಿಸಿಕೊಂಡು ಬರುವುದು ಸುಲಭವೂ ಆಗಿರಲಿಲ್ಲ. ಆದರೆ, ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲೇಬೇಕು ಎಂಬ ಅವರ ಏಕೈಕ ಉದ್ದೇಶ 2014ರಲ್ಲಿ ಉತ್ತರ ಪ್ರದೇಶವನ್ನು ಗೆಲ್ಲುವಷ್ಟರ ಮಟ್ಟಿಗೆ ಅಮಿತ್‌ ಶಾ ಅವರನ್ನು ತಯಾರು ಮಾಡಿತ್ತು.

೨೦೧೪ರ ಲೋಕಸಭೆ ಚುನಾವಣೆಗಾಗಿ ಉತ್ತರ ಪ್ರದೇಶಕ್ಕೆ ಕಾಲಿಟ್ಟ ಅಮಿತ್‌ ಶಾ ಅವರಿಗೆ ಹೆಗಲಿಗೆ ಹೆಗಲು ಕೊಡಬಲ್ಲ ವ್ಯಕ್ತಿಯೊಬ್ಬರ ನೆರವು ಅಗತ್ಯವಿತ್ತು. ಇದಕ್ಕಾಗಿ ಅವರು ಸಹಜವಾಗಿಯೇ ಸಂಘಪರಿವಾರದ ಮೊರೆಹೋಗಿದ್ದರು. ಅಮಿತ್‌ ಶಾ ಅವರ ಕೋರಿಕೆ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಒಬ್ಬ ಯುವ ಮತ್ತು ಸಂಘಟನಾ ಚಾತುರ್ಯವುಳ್ಳ, ೪೪ ವರ್ಷದ ವ್ಯಕ್ತಿಯೊಬ್ಬರನ್ನು ಶಾ ನೆರವಿಗೆ ಕಳುಹಿಸಿಕೊಟ್ಟಿತ್ತು. ಅವರೇ ಸುನೀಲ್‌ ಬನ್ಸಾಲ್‌.

ದೆಹಲಿಯ ಎಬಿವಿಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಬನ್ಸಾಲ್‌ ರಾಜಸ್ಥಾನದವರು. ಎಬಿವಿಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಬನ್ಸಾಲ್‌, ನಂತರದಲ್ಲಿ ಸಂಘಪರಿವಾರ ಸೇರಿಕೊಂಡಿದ್ದರು. ಅದೇ ಹೊತ್ತಿನಲ್ಲಿ ಅಂದರೆ, 2014ರಲ್ಲಿ ಸುರೇಶ್‌ ಸೋನಿ ಅವರು ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬನ್ಸಾಲ್‌ ಅವರಿಗೆ ಕೂಡಲೇ ಹೈದರಾಬಾದ್‌ನಲ್ಲಿ ತಮ್ಮನ್ನು ಭೇಟಿಯಾಗುವಂತೆ ಸೂಚಿಸಿದ್ದರು. ಬನ್ಸಾಲ್‌ ಸುರೇಶ್‌ ಸೋನಿ ಅವರನ್ನು ಭೇಟಿಯಾಗಿದ್ದರು. ಆ ವೇಳೆ, “ಕೂಡಲೇ ಗಂಟುಮೂಟೆ ಕಟ್ಟಿಕೊಂಡು ಅಮಿತ್‌ ಶಾ ಅವರ ಬಿಜೆಪಿ ತಂಡ ಸೇರಲು ಹೋಗು. ಇದು ಸಂಘಪರಿವಾರ ನಿನಗೆ ವಹಿಸುತ್ತಿರುವ ಜವಾಬ್ದಾರಿ. ಆಗಲ್ಲ ಎನ್ನಲು ನಿನಗೆ ಅವಕಾಶವೂ ಇಲ್ಲ,” ಎಂದು ಆಜ್ಞಾಪಿಸಿದ್ದರು.

ಸುರೇಶ್‌ ಸೋನಿ ಅವರ ಆಜ್ಞಾಪನೆಯೊಂದಿಗೆ ೨೦೧೪ರ ಜ.೧೫ರಂದು ಬನ್ಸಾಲ್‌ ಅಮಿತ್‌ ಶಾ ಅವರನ್ನು ಮೊದಲ ಬಾರಿಗೆ ದೆಹಲಿಯಲ್ಲಿ ಭೇಟಿಯಾಗಿದ್ದರು. ಬನ್ಸಾಲ್‌ ಅವರನ್ನು ಆತ್ಮೀಯವಾಗಿ ಮಾತನಾಡಿಸಿದ ಶಾ, ಅವರ ಕೌಟುಂಬಿಕ ಹಿನ್ನೆಲೆ, ಸಂಘಟನೆಯ ನಂಟು ಸೇರಿದಂತೆ ಹಲವು ಸಂಗತಿಗಳ ಬಗ್ಗೆ ವಿಚಾರಿಸಿದ್ದರು. ಅಮಿತ್‌ ಶಾ ಅವರಂತೆ ಬನ್ಸಾಲ್‌ಗೂ ಉತ್ತರ ಪ್ರದೇಶ ಅಷ್ಟಾಗಿ ಏನೂ ಗೊತ್ತಿರುವುದಿಲ್ಲ. ಬನ್ಸಾಲ್‌ ತಮ್ಮ ಎಬಿವಿಪಿಯಲ್ಲಿನ ದಿನಗಳಲ್ಲಿ ಉತ್ತರ ಪ್ರದೇಶವನ್ನುಸುತ್ತಿದ್ದರೇ ಹೊರತು, ಅಲ್ಲಿನ ರಾಜಕೀಯ ಮತ್ತು ಸ್ಥಳೀಯ ಸಂಗತಿಗಳ ಬಗ್ಗೆ ಅವರಿಗೆ ಗೊತ್ತಿರಲಿಲ್ಲ. ಅಮಿತ್‌ ಶಾ ಕೂಡಲೇ ಬನ್ಸಾಲ್‌ಗೆ ಒಂದು ಕೆಲಸ ವಹಿಸಿದರು. ಉತ್ತರ ಪ್ರದೇಶದ ಆರು ವಲಯಗಳಲ್ಲಿ, ಅಂದರೆ ಕಾಶಿ, ಗೋರಖ್‌ಪುರ, ಅವದ್‌, ಕಾನ್‌ಪುರ-ಬುಂದೇಲ್‌ಖಂಡ್‌, ಬ್ರಜ್‌ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರವಾಸ ಕೈಗೊಂಡು, ಮೂರು ವಾರಗಳ ನಂತರ ಲಖನೌದಲ್ಲಿ ಬಂದು ಭೇಟಿಯಾಗುವಂತೆ ತಿಳಿಸಿದ್ದರು.

ಇದಾದ ನಂತರ ೨೦೧೪ರ ಫೆ.೫ರಂದು ಅಮಿತ್‌ ಶಾ ಲಖನೌ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಉತ್ತರ ಪ್ರದೇಶದ ೨೫೦ ಪ್ರಮುಖ ನಾಯಕರ ಮಹತ್ವದ ಸಭೆ ಕರೆದಿದ್ದರು. ಅವರೆಲ್ಲರೂ ಮುಂದಿನ ಚುನಾವಣೆಯಲ್ಲಿ ಪಕ್ಷದ ಹೃದಯದಂತೆ, ಚುನಾವಣಾ ಯಂತ್ರಗಳಂತೆ ಕಾರ್ಯಾಚರಣೆ ಮಾಡುವವರಾಗಿದ್ದರು. ಈ ೨೫೦ ನಾಯಕರಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷರು, ೮೦ ಲೋಕಸಭೆ ಕ್ಷೇತ್ರಗಳ ಉಸ್ತುವಾರಿಗಳು ಮತ್ತು ರಾಜ್ಯದ ಪ್ರಮುಖ ನಾಯಕರೂ ಇದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ನಾಯಕರಿಂದಲೂ ಸುಮಾರು ೨೦ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಶಾ ವರದಿ ಪಡೆದುಕೊಂಡರು. ಉತ್ತರ ಪ್ರದೇಶದ ಪ್ರತಿ ಕ್ಷೇತ್ರಗಳಲ್ಲಿ ಸಕ್ರಿಯವಾಗಬೇಕಾಗಿರುವ ಬೂತ್‌ ಸಮಿತಿಗಳಷ್ಟು? ಮಹಿಳೆಯರು, ಯುವಕರು, ಹಿಂದುಳಿದ ವರ್ಗಗಳನ್ನು ಗುರಿಯಾಗಿಟ್ಟು ಮಾಡಿದ ಸಭೆಗಳೆಷ್ಟು? ಸಾಮಾಜಿಕ ತಾಣಗಳ ಪ್ರಭಾವ ಇತ್ಯಾದಿ ವಿಷಯಗಳ ಪ್ರಶ್ನೆಗಳನ್ನು ಶಾ ಸ್ಥಳೀಯ ನಾಯಕರ ಮುಂದಿಟ್ಟು ವರದಿ ಪಡೆದುಕೊಂಡಿದ್ದರು. ಸರಿಸುಮಾರು ೧೨ ಗಂಟೆಗಳ ಕಾಲ ನಡೆದಿದ್ದ ಆ ಸಭೆಯಲ್ಲಿ, ಪ್ರತಿ ಜಿಲ್ಲಾ ಘಟಕದಿಂದಲೂ ಪಕ್ಷದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದಿದ್ದರು. ಸಭೆಯಲ್ಲಿ ಭಾಗವಹಿಸಿದ್ದವರಿಗೆ ಸಂಘಟನೆಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಿದ್ದರು.

ಸಭೆ ಇನ್ನೇನು ಮುಕ್ತಾಯವಾಗುತ್ತಿದೆ ಎನ್ನುವಾಗ ಬನ್ಸಾಲ್‌ ಅವರನ್ನು ಅಮಿತ್‌ ಶಾ ಉತ್ತರ ಪ್ರದೇಶದ ನಾಯಕರಿಗೆ ಪರಿಚಯಿಸಿದ್ದರು. “ನೋಡಿ, ಚುನಾವಣೆಯ ಉಸ್ತುವಾರಿಯನ್ನು ಇವರು (ಸುನೀಲ್‌ ಬನ್ಸಾಲ್‌) ನೋಡಿಕೊಳ್ಳುತ್ತಾರೆ. ಇವರೇನಾದರೂ ಹೇಳಿದರು ಎಂದರೆ ನಾನೇ ಹೇಳಿದಂತೆ ನೀವು ಭಾವಿಸಬೇಕು,” ಎಂದು ಘೋಷಿಸಿದ್ದರು. ಸುನೀಲ್‌ ಬನ್ಸಾಲ್‌ ಎಂಬ ಸಂಘಟಕ ಉತ್ತರ ಪ್ರದೇಶದ ರಾಜಕೀಯ ಕಣಕ್ಕೆ ಬಂದಿದ್ದೇ ಹೀಗೆ. ನಂತರ ಅವರು ಅಮಿತ್‌ ಶಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳಲಾರಂಭಿಸಿದರು.

ಉತ್ತರ ಪ್ರದೇಶ ಅಮಿತ್‌ ಶಾ ಅವರ ಮಗುವಾಗಿತ್ತು. ಉತ್ತರ ಪ್ರದೇಶದಂಥ ದೊಡ್ಡ ರಾಜ್ಯದ ಚುನಾವಣೆ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ಬನ್ಸಾಲ್‌ಗೆ ಸಿಕ್ಕಿತ್ತು. ಆದರೆ, ಪಕ್ಷದ ಭವಿಷ್ಯದ ಅಧ್ಯಕ್ಷನೇ ಇಲ್ಲಿ ಕೆಲಸ ಮಾಡುತ್ತಿರುವುದು ಯಾರಿಗೂ ಗೊತ್ತಿರಲಿಲ್ಲ!

“ಚುನಾವಣೆಗೂ ಮುನ್ನ ಅಮಿತ್‌ ಬಾಯ್‌ ಆಳವಾದ ಅಧ್ಯಯನ ಮಾಡುತ್ತಾರೆ. ಅವರು ಉತ್ತರ ಪ್ರದೇಶದ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದೇ ೨೦೧೩ರಲ್ಲಿ. ಆದಾದ ಆರು ತಿಂಗಳ ಹೊತ್ತಿಗೆ ಅವರು ಉತ್ತರ ಪ್ರದೇಶದ ಎಲ್ಲ ಮೂಲೆಗಳನ್ನೂ ಸುತ್ತಿದ್ದರು. ರಾಜ್ಯದ ಪ್ರತಿ ವಲಯದಲ್ಲೂ ಹೆಚ್ಚು ಚರ್ಚೆಯಲ್ಲಿರುವ ವಿಷಯಗಳು ಅವರಿಗೆ ಗೊತ್ತಿದ್ದವು. ಯಾವ ಮುಖಂಡ ಎಲ್ಲಿಗೆ ಸೂಕ್ತ ಎಂಬುದುನ್ನು ಅವರು ಚೆನ್ನಾಗಿ ಅರಿತಿದ್ದರು,’’ ಎಂದು ಬನ್ಸಾಲ್‌, ಶಾ ಬಗ್ಗೆ ಬಣ್ಣಿಸುತ್ತಾರೆ.

ಚುನಾವಣೆಗೆ ಹೇಗೆ ತಯಾರಾಗಬೇಕೆಂಬುದರ ವಿಚಾರದಲ್ಲಿ ವ್ಯಾಪಕ ಪ್ರವಾಸ, ಅಧ್ಯಯನವು ಅಮಿತ್‌ ಶಾ ಅವರನ್ನು ಸಂಪೂರ್ಣ ಸಜ್ಜುಗೊಳಿಸಿತ್ತು. ಉತ್ತರ ಪ್ರದೇಶದಲ್ಲಿ ಪಕ್ಷದ ಸಂಘಟನೆ ಉತ್ತಮವಾಗಿರಲಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಹಾಗಾಗಿಯೇ ಅವರು ಬೂತ್‌ ಸಮಿತಿಗಳ ಬಲವರ್ಧನೆಯ ಕಡೆಗೆ ಹೆಚ್ಚು ಗಮನ ಕೇಂದ್ರೀಕರಿಸಿದ್ದರು. ಬೂತ್‌ ಸಮಿತಿಗಳೆಂಬುದು ಪಕ್ಷದ ಸಂಘಟನೆಯಲ್ಲಿ ಅತ್ಯಂತ ಸಣ್ಣ ಘಟಕ. ಅದು ತಳಮಟ್ಟದಲ್ಲಿ ಕೆಲಸ ಮಾಡುತ್ತಿರುತ್ತದೆ. ಮತಗಳನ್ನು ಪರಿವರ್ತನೆ ಮಾಡಿಕೊಳ್ಳಲು, ಚುನಾವಣೆ ಹೊತ್ತಿಗೆ ಒಂದು ದೊಡ್ಡ ಸಮುದಾಯವನ್ನು ನಮಗೆ ಪೂರಕವಾಗುವಂತೆ ಮಾಡಿಕೊಳ್ಳುವಲ್ಲಿ ಈ ಘಟಕಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.

೨೦ ಕೋಟಿ ಜನರಿರುವ ಉತ್ತರ ಪ್ರದೇಶದಲ್ಲಿ ೧.೪ ಲಕ್ಷ ಬೂತ್‌ಗಳಿವೆ. ಇಂಥ ರಾಜ್ಯದಲ್ಲಿ ಬೂತ್‌ ಸಮಿತಿಗಳನ್ನು ಬಲಪಡಿಸುವ ಕೆಲಸ ಸುಲಭದ್ದೂ ಅಲ್ಲ. ಜೊತೆಗೆ, ಬಿಜೆಪಿಗೆ ಸ್ಥಳೀಯ ನಾಯಕತ್ವ ಅತ್ಯಂತ ದುರ್ಬಲವಾಗಿತ್ತು. ಬಣಗಳಾಗಿ ಒಡೆದುಹೋಗಿದ್ದರಿಂದಲೇ ಅಲ್ಲಿ ಬಿಜೆಪಿ ಸತತವಾಗಿ ಸೋಲುತ್ತ ಬಂದಿತ್ತು. ಇಂಥ ಸ್ಥಳೀಯ ನಾಯತಕ್ವವನ್ನು ಪಕ್ಕಕ್ಕೆ ಸರಿಸಲೇಬೇಕಾಗಿತ್ತು. ಜೊತೆಗೆ ಸಂಭಾಳಿಸಿಕೊಂಡೂ ಹೋಗಬೇಕಿತ್ತು. ಇಲ್ಲವಾದರೆ ಅವರು ಬಂಡೆದ್ದು ಮತ್ತಷ್ಟು ಸಮಸ್ಯೆ ಸೃಷ್ಟಿಸುವ ಸಾಧ್ಯತೆಗಳಿದ್ದವು. ಈ ಸಂಗತಿಯನ್ನು ಶಾ ಸ್ಪಷ್ಟವಾಗಿ ಅರಿತಿದ್ದರು ಕೂಡ.

ಮೋದಿ ಅವರನ್ನು ಜನರಿಗೆ ಮನದಟ್ಟು ಮಾಡಿಯೇ ಉತ್ತರ ಪ್ರದೇಶವನ್ನು ಗೆಲ್ಲಬೇಕು ಎಂಬುದು ಅಮಿತ್‌ ಶಾ ಅವರ ಇರಾದೆಯಾಗಿತ್ತು. ಆದರೆ, ಏನೇ ಮಾಡಿದರೂ ಮೋದಿ ಮಾತ್ರ ಅಲ್ಲಿನ ಜನರ ಮನ ಮುಟ್ಟಿರಲಿಲ್ಲ. ಹೀಗಾಗಿಯೇ ಅಮಿತ್‌ ಶಾ ಗಾಂಧಿನಗರ ಮೂಲದ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಮತ್ತು ಅವರ ತಂಡದಿಂದ ನೆರವನ್ನೂ ಪಡೆದರು. ರ್ಯಾಲಿ, ಪೋಸ್ಟರ್‌ಗಳು, ರಥಯಾತ್ರೆಗಳು, ಚಾಯ್‌ ಪೇ ಚರ್ಚೆ, ಮಾಧ್ಯಮಗಳು, ವಾಟ್ಸ್ಯಾಪ್‌ ಮೆಸೆಂಜರ್‌ಗಳ ಮೂಲಕ ನೀಡಿದ ಸಂದೇಶಗಳಿಂದಾಗಿ ಕೊನೆಗೆ ಮೋದಿ ಮನೆಮಾತಾದರು.

ಅಮಿತ್‌ ಶಾ ಅವರ ಮತ್ತೊಂದು ಚುನಾವಣೆ ತಂತ್ರವನ್ನು ಬನ್ಸಾಲ್‌ ವಿವರಿಸುತ್ತಾರೆ. “ಶಾ ಎಚ್ಚರಿಕೆಯಿಂದ ಚುನಾವಣಾ ಕಣ ಅಧ್ಯಯನ ಮಾಡುತ್ತಾರೆ. ಸಾಮಾಜಿಕ ಸಂಯೋಜನೆ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ಪ್ರತಿ ಕ್ಷೇತ್ರಗಳ ಅಂಕಿ-ಅಂಶಗಳು, ಜಾತಿಗಳ ಬಲಾಬಲದ ಅರಿವು ಅವರಿಗೆ ಚೆನ್ನಾಗಿ ಗೊತ್ತಿದೆ.”

ಉತ್ತರ ಪ್ರದೇಶದಲ್ಲಿ ಪಕ್ಷ ಈ ಹಿಂದಿನಿಂದ ನಂಬಿದ್ದ ಅಂಕಿ-ಅಂಶಗಳು ತಪ್ಪು ಎಂಬುದು ಅಮಿತ್‌ ಶಾ ಅವರಿಗೆ ಗೊತ್ತಿತ್ತು. ಮುಸ್ಲಿಮರು ಎಂದಿಗೂ ಬಿಜೆಪಿಗೆ ಮತ ನೀಡುವುದಿಲ್ಲ, ಯಾದವರು ಎಸ್‌ಪಿಗೆ ನಿಷ್ಟರು, ದಲಿತರು ಮಾಯಾವತಿ ಅವರಿಗೆ ಬದ್ಧರು, ಇವರೆಲ್ಲರ ಮತಗಳು ಶೇ.೪೦ರಷ್ಟಿತ್ತು. ಇನ್ನುಳಿದ ಶೇ.೫೫-೬೦ರಲ್ಲಿ ಬಿಜೆಪಿ ತನ್ನ ಚಮತ್ಕಾರ ತೋರಬೇಕಿತ್ತು. ಆದರೆ, ಈ ಹಿಂದಿನ ದಶಗಳಲ್ಲಿ ಪಕ್ಷ ಶೇ.೨೦ರಷ್ಟು ಮತಗಳನ್ನು ಮಾತ್ರ ತಲುಪಲು ಸಾಧ್ಯವಾಗಿತ್ತು. ಇತರ ಜಾತಿ, ಜನಾಂಗಗಳನ್ನು ತಲುಪುವಲ್ಲಿ ವಿಫಲವಾಗಿತ್ತು. ಆದರೆ, ಅಮಿತ್‌ ಶಾ ಮೇಲ್ವರ್ಗದ ಜಾತಿಗಳನ್ನು ಕ್ರೋಡಿಕರಿಸುವುದರ ಜೊತೆಗೆ ಇತರ ಹಿಂದುಳಿದ ವರ್ಗಗಳನ್ನು ಮತ್ತು ದಲಿತರನ್ನು ತಲುಪಲು ಪ್ರಯತ್ನಿಸಿದರು.

“ಅಮಿತ್‌ ಬಾಯ್‌ಗೆ ಅವರದ್ದೇ ಆದ ಮಾಹಿತಿ ಜಾಲಗಳಿವೆ. ಪ್ರತಿ ಜಿಲ್ಲೆಯಲ್ಲೂ ಏನಾಗುತ್ತಿದೆ ಎಂಬುದರ ಮಾಹಿತಿ ಅವರಿಗೆ ಹೇಗಾದರೂ ತಲುಪುತ್ತದೆ. ನಾವು ಗಂಟೆಗಂಟೆಗೂ ಮಾತನಾಡುತ್ತಿದ್ದೆವು, ನಿರ್ದಿಷ್ಟ ಸ್ಥಳದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವಂತೆ ಅವರು ನನಗೆ ತಿಳಿಸುತ್ತಿದ್ದರು. ನಂತರ ನಾನು ಸ್ಥಳೀಯ ವಿಚಾರಗಳನ್ನು ಅಧ್ಯಯನ ಮಾಡಿ ವಿಚಾರ ತಿಳಿದುಕೊಳ್ಳುತ್ತಿದ್ದೆ,” ಎನ್ನುತ್ತಾರೆ ಬನ್ಸಾಲ್‌.

"ಅಮಿತ್‌ ಬಾಯ್‌ ಮಾತು ವಿಸ್ಮಯ ಎನಿಸುತ್ತಿತ್ತು. ಅದು ಸುಮ್ಮನೆ ಹಾಗೆ ಅನಿಸಿದ್ದಲ್ಲ. ಅವರಿಗೆ ಮಾಹಿತಿಗಳು ಪಕ್ಷ ಮತ್ತು ತಾತ್ವಿಕ ಮೂಲಗಳಿಂದ ಬಂದಿರುತ್ತಿತ್ತು. ತಮ್ಮದೇ ಮಾಹಿತಿ ಮೂಲಗಳಿಂದ ವಿಚಾರಗಳು ತಿಳಿಯುತ್ತಿತ್ತು, ಸ್ಥಳೀಯ ಮಾಹಿತಿಯನ್ನು ನೀಡಲೆಂದೇ ನೇಮಿಸಿಕೊಂಡಿದ್ದ ತಂಡಗಳಿಂದಲೂ ಅವರಿಗೆ ಮಾಹಿತಿ ರವಾನೆಯಾಗುತ್ತಿತ್ತು. ಅವರಿಗೆ ಸಿಗುತ್ತಿದ್ದ ಈ ಮಾಹಿತಿಗಳು ಮತ್ತು ಸ್ಥಳೀಯ ವಿಚಾರಗಳ ಅತಿ ಸೂಕ್ಷ್ಮ ಚಿತ್ರಣ ಅವರಿಗೆ ಇದ್ದಿದ್ದರಿಂದಲೇ ವ್ಯಾಪಕವಾದ ರಣತಂತ್ರ ರೂಪಿಸಲು ಅವರು ಸಮರ್ಥರಾಗಿದ್ದರು. ಜಿಲ್ಲಾ ಮುಖಂಡರೊಂದಿಗೆ ದಿನವಿಡೀ ಕುಳಿತು ಚರ್ಚಿಸುತ್ತಿದ್ದ ಅವರು, ಅಲ್ಲಿ ಸಿಕ್ಕ ಮಾಹಿತಿಯನ್ನು ವಿಶ್ಲೇಷಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಅಲ್ಲದೆ, ತಮಗೆ ಸಿಕ್ಕ ಮಾಹಿತಿಯನ್ನು ಬೇರೊಬ್ಬರ ಮೂಲಕ ಮತ್ತೊಮ್ಮೆ ಪರಿಶೀಲಿಸಿಕೊಳ್ಳುತ್ತಿದ್ದರು,” ಎಂದು ಹೇಳುತ್ತಾರೆ ಬನ್ಸಾಲ್.

ಇದನ್ನೂ ಓದಿ : ಸಂಕಲನ | ಗುಜರಾತ್‌ ಚುನಾವಣೆ | ಎಲ್ಲ ವಿಶ್ಲೇಷಣಾ ವರದಿಗಳ ಮಾಹಿತಿ ಕೊಂಡಿ

ವಿರೋಧಪಕ್ಷಗಳಿಗೆ ಬೆಂಬಲವಾಗಿ ನಿಂತಿರುವ, ಅವರ ಬಲ ಎನಿಸುವಂಥ ಕೆಲ ನಾಯಕರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ವಿರೋಧಿಗಳನ್ನು ಅಧೀರರನ್ನಾಗಿ ಮಾಡುವುದು ಅಮಿತ್‌ ಶಾ ಅವರ ಮತ್ತೊಂದು ರಣತಂತ್ರ. ಅವರೊಂದಿಗೆ ವ್ಯಾಪಕವಾಗಿ ಕೆಲಸ ಮಾಡಿದ ಹಲವರು ಇದೇ ಮಾತನ್ನು ಹೇಳಿದ್ದಾರೆ. ಇದು ಬಹುತೇಕ ಎಲ್ಲ ಪಕ್ಷಗಳೂ ಪ್ರಯೋಗಿಸುವ ತಂತ್ರವೆಂಬುದೂ ಅಷ್ಟೇ ಸರಿ. ಆದರೆ, ಹೊರಗಿನಿಂದ ಬಂದವರನ್ನು ಬಿಜೆಪಿಯಲ್ಲಿ ಅನುಮಾನದಿಂದಲೇ ಕಾಣುವ ಸಂಪ್ರದಾಯವಿದೆ. ತಾವು ನಂಬಿದ ತತ್ವ, ಸಿದ್ಧಾಂತಗಳ ವಿಚಾರದಲ್ಲಿ ಹೊರಗಿನವರು ಪರಿಶುದ್ಧರಲ್ಲ ಎಂಬ ಭಾವನೆಯೇ ಅನುಮಾನಗಳಿಗೆ ಮೂಲ ಕಾರಣ. ಇದೆಲ್ಲ ಏನೇ ಇದ್ದರೂ, ಹೊರಗಿನಿಂದ ಬಂದವರು ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಳ್ಳುವ ಮತ್ತು ಅದನ್ನು ಅಳವಡಿಸಿಕೊಳ್ಳುವ ಬಗ್ಗೆ ಅಮಿತ್‌ ಶಾ ಅವರಿಗೆ ವಿಶ್ವಾಸ ಇರುತ್ತಿತ್ತು.

“ವಿರೋಧಿಗಳ ಬಲ ಮುರಿಯುವುದರಲ್ಲಿ ಅಮಿತ್‌ ಶಾ ಬಲವಾದ ನಂಬಿಕೆಯನ್ನೇ ಹೊಂದಿದ್ದಾರೆ. ಪಕ್ಷ ಅಂದುಕೊಂಡಿರುವುದನ್ನು ಈವರೆಗೆ ಸಾಧಿಸಲು ಸಾಧ್ಯವಾಗದೆ ಇದ್ದರೂ, ದಶಕಗಳಿಂದಲೂ ಅದ್ಯಾವುದಕ್ಕೆ ಇಷ್ಟು ಹೋರಾಟ ಮಾಡುತ್ತಿದೆ ಎಂಬುದರ ವಿಚಾರದಲ್ಲಿ ಅವರು ಸದಾ ಆಶ್ಚರ್ಯಚಕಿತರಾಗಿರುತ್ತಿದ್ದರು. ೫-೧೦ರಷ್ಟು ಮತಗಳು ಕೈತಪ್ಪುತ್ತಿರುವ ಬಗ್ಗೆ ಅವರಿಗೆ ಆತಂಕವಿತ್ತು ಮತ್ತು ಅದನ್ನು ಮರಳಿ ಪಡೆಯುವ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ಇರುತ್ತಿದ್ದರು. ಅದಕ್ಕಾಗಿಯೇ ಅನ್ಯಪಕ್ಷಗಳ ನಾಯಕರನ್ನು ಪಕ್ಷಕ್ಕೆ ಕರೆತರುವ ವಿಚಾರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಹೀಗೆ ಮಾಡಿದರೆ ನಾವು ಬಲಗೊಳ್ಳುತ್ತೇವೆ, ಎದುರಾಳಿಗಳು ಬಲ ಕಳೆದುಕೊಳ್ಳುತ್ತಾರೆ, ಆ ಮೂಲಕ ನಮ್ಮ ಕೈತಪ್ಪಿಹೋಗಿರುವ ಮತಗಳನ್ನು ಪಡೆಯಬಹುದು ಎಂಬುದು ಶಾ ಅವರ ನಂಬಿಕೆ,” ಎನ್ನುತ್ತಾರೆ ಗುಜರಾತ್‌ನ ಶಾಸಕ, ಬಿಜೆಪಿ ವಕ್ತಾರ ಭರತ್‌ ಪಾಂಡ್ಯ. ಭರತ್‌ ಪಾಂಡ್ಯ, ಮೋದಿ ಮತ್ತು ಅಮಿತ್‌ ಶಾ ಅವರೊಂದಿಗೆ ಬಹುದಿನಗಳ ಕಾಲ ಕೆಲಸ ಮಾಡಿದವರು. ಅಲ್ಲದೆ, ಮೋದಿ ಅವರು ಗುಜರಾತ್‌ನಿಂದ ಲೋಕಸಭೆಗೆ ಸ್ಪರ್ಧಿಸಿದ್ದ ವಡೋದರಾ ಕ್ಷೇತ್ರದ ಉಸ್ತುವಾರಿ ಕೂಡ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More