ಮತೀಯ ಗಲಭೆಗಳಿಗೆ ಜನ ಸತ್ತರೂ ಬಿಜೆಪಿಗೆ ಇಲ್ಲ ಚಿಂತೆ: ದಿನೇಶ್‌ ಗುಂಡೂರಾವ್

ಈ ಬಾರಿಯ ಚುನಾವಣೆಗೆ ಕಾಂಗ್ರೆಸ್‌ ಹೇಗೆ ಸಿದ್ಧವಾಗಿದೆ, ಬಿಜೆಪಿಯ ತಂತ್ರಗಳಿಗೆ ಪಕ್ಷದ ಬಳಿ ಇರುವ ಅಸ್ತ್ರಗಳೇನು? ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂಬೆಲ್ಲ ಅಂಶಗಳ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ‘ಮನದ ಮಾತು’ ಸಂದರ್ಶನದಲ್ಲಿ ಮಾತನಾಡಿದ್ದಾರೆ

ಕರ್ನಾಟಕ ಸದ್ಯ ಚುನಾವಣೆಯ ಹೊಸ್ತಿಲಲ್ಲಿದೆ. ಕಾಂಗ್ರೆಸ್ನ ಸಂಘಟನೆ ಹೇಗೆ ನಡೆಯುತ್ತಿದೆ? ಗುರಿ ಏನಿದೆ?

ಚುನಾವಣೆಗೆ ನಾವು ತಯಾರಾಗಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಕೆಲಸ ಮಾಡಿದೆ ಹೀಗಾಗಿ ಜನರ ಬಳಿಗೆ ಹೋಗಲು ಪಕ್ಷಕ್ಕೆ ಅಂಜಿಕೆ ಇಲ್ಲ. ಚುನಾವಣೆಗೂ ಮುನ್ನ ನಾವು ಹೇಳಿದ್ದನ್ನೆಲ್ಲ ಮಾಡಿದ್ದೇವೆ. ನವ ಕರ್ನಾಟಕ ನಿರ್ಮಾಣ ನಮ್ಮ ಉದ್ದೇಶ.

ಸಂಘಟನೆಗಾಗಿ ದಿನೇಶ್ ಗುಂಡೂರಾವ್ ಮಂತ್ರಿ ಸ್ಥಾನ ತ್ಯಾಗ ಮಾಡಿದವರು. ನಿಮ್ಮ ದೃಷ್ಟಿಯಲ್ಲಿ ಪಕ್ಷದ ಸಂಘಟನೆ ಅಂದರೇನು?

ಕಾರ್ಯಕರ್ತರಿಗೆ ಪಕ್ಷದ ಸಿದ್ಧಾಂತ, ನೀತಿಯನ್ನು ತಿಳಿಸುವ ಮೂಲಕ ಪಕ್ಷ ಸಂಘಟಿಸಬೇಕು. ಉತ್ತಮವಾಗಿ ದುಡಿಯುವವರನ್ನು ಗುರುತಿಸಿ, ಪಕ್ಷದ ತೀರ್ಮಾನಗಳಲ್ಲಿ ಅವರ ಭಾಗವಹಿಸುವಿಕೆಗೆ ಅವಕಾಶ ನೀಡಬೇಕು. ಬಿಜೆಪಿ ಪಕ್ಷ ನಮ್ಮ ವಿರುದ್ಧ ಮಾಡುತ್ತಿರುವ ಸುಳ್ಳಿನ ಆರೋಪಗಳ ವಿರುದ್ಧ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗುತ್ತಿದೆ.

ಸಿದ್ದರಾಮಯ್ಯ ಒಂದೆಡೆ ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಇನ್ನೊಂದೆಡೆ ಪರಮೇಶ್ವರ್ ಅವರು ಪ್ರತ್ಯೇಕ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಯಾಕೆ ಹೀಗೆ?

ಮುಖ್ಯಮಂತ್ರಿಗಳ ಸಾಧನಾ ಸಮಾವೇಶ ಮತ್ತು ಪರಮೇಶ್ವರ್ ಅವರ ಪ್ರಚಾರ ಯಾತ್ರೆಗಳೆಲ್ಲವೂ ಪೂರ್ವ ನಿಯೋಜಿತ ಕಾರ್ಯಕ್ರಮಗಳು. ಇಬ್ಬರ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಮಾರ್ಚ್ ನಂತರ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರು ಒಟ್ಟಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂಬುದು ಸ್ಪಷ್ಟ. ಅದರಲ್ಲಿ ಅನುಮಾನಗಳೇನಿಲ್ಲ. ವ್ಯತ್ಯಾಸ ಇದೆ ಎಂಬುದು ಮಾಧ್ಯಮಗಳ ಸೃಷ್ಟಿ.

ಗುಜರಾತ್ ಚುನಾವಣೆ ಫಲಿತಾಂಶವನ್ನು ಕಾಂಗ್ರೆಸ್ ಹೇಗೆ ಅರ್ಥೈಸಿಕೊಂಡಿದೆ? ರಾಜ್ಯದ ಮೇಲೆ ಏನಾದರೂ ಪರಿಣಾಮ ಬೀರಬಹುದಾ?

ಗುಜರಾತ್ ಫಲಿತಾಂಶ ನಮಗೆ ಧೈರ್ಯ ಮತ್ತು ವಿಶ್ವಾಸ ತಂದಿದೆ. ಆದರೆ, ಬಿಜೆಪಿಯ ಗೆಲುವು ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಧಾನಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೆಲ್ಲ ಗುಜರಾತ್‌ನವರೇ ಆಗಿದ್ದರೂ, ಇಪ್ಪತ್ತು ವರ್ಷ ಆಡಳಿತ ನಡೆಸಿದ್ದರೂ ಅವರು ಗಳಿಸಿದ್ದು ಕಡಿಮೆ. ಬಿಜೆಪಿಯ ಹಣ, ಅಧಿಕಾರ ಮತ್ತು ತೋಳ್ಬಲವನ್ನು ನಾವು ಎದುರಿಸಿದ್ದೇವೆ. ಅವರಿಗೂ ನಮಗೂ ಏಳೆಂಟು ಸ್ಥಾನಗಳೇ ವ್ಯತ್ಯಾಸ. ಹೀಗಾಗಿ ಗುಜರಾತ್ ಚುನಾವಣೆ ರಾಜ್ಯದ ಮಟ್ಟಿಗೆ ಕಾಂಗ್ರೆಸ್ಗೆ ಧೈರ್ಯ ಮತ್ತು ವಿಶ್ವಾಸ ನೀಡಿದೆ.

ಗುಜರಾತ್ ನಲ್ಲಿ 20 ವರ್ಷಗಳಿಂದ ಬಿಜೆಪಿ ಆಡಳಿತ ನಡೆಸಿದ್ದರೂ, ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಲಿಲ್ಲ. ಹೀಗಾಗಿ ಬಿಜೆಪಿಯ ನೀತಿಯನ್ನು ಜನ ಒಪ್ಪಿದ್ದಾರೆ ಎಂದು ಅನಿಸುತ್ತಿದೆಯೇ?

ಗುಜರಾತ್ನ ಗ್ರಾಮಾಂತರ ಪ್ರದೇಶದಲ್ಲಿ ಕಾಂಗ್ರೆಸ್ಗೆ ಬಹುಮತ ಸಿಕ್ಕಿದೆ. ನಗರ ಪ್ರದೇಶದಲ್ಲಿ ಮಾತ್ರ ಅವರು ಮುಂದಿದ್ದಾರೆ. ಆದರೆ, ಬಿಜೆಪಿ ಅಲ್ಲಿ ಅಭಿವೃದ್ಧಿ ಮತ್ತು ವಿಕಾಸದ ಬಗ್ಗೆ ಚರ್ಚೆಯನ್ನೇ ಮಾಡಲಿಲ್ಲ. ಕೋಮುವಾದಿ ಅಜೆಂಡಾ, ಭಾವನಾತ್ಮಕವಾಗಿ ಮತ್ತು ಪ್ರಚೋದನಕಾರಿ ಭಾಷಣಗಳ ಮೂಲಕ ಮತಗಳಿಕೆ ಮಾಡಿದರು. ಅದೇನೇ ಇರಲಿ, ಬಿಜೆಪಿಗೆ ಗುಜರಾತ್ ಭದ್ರಕೋಟೆಯಾಗಿತ್ತು. ಅದನ್ನು ನಾವು ಛಿದ್ರಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ.

ನಮ್ಮ ಮುಂದಿನ ಗುರಿ ಕರ್ನಾಟಕ ಎಂದು ಅಮಿತ್ ಶಾ ಹೇಳಿಕೊಳ್ಳುತ್ತಿದ್ದಾರೆ. ಅವರ ಸಹವರ್ತಿ ಭೂಪೇಂದರ್ ಯಾದವ್ ಅವರು ರಾಜ್ಯದತ್ತ ಮುಖ ಮಾಡಿದ್ದಾರೆ. ಅದರ ಬಗ್ಗೆ ಭಯವಿದೆಯೇ?

ಬಿಜೆಪಿಯವರ ನಕಾರಾತ್ಮಕ ಮತ್ತು ಉಗ್ರ ಅಜೆಂಡಾದ ಬಗ್ಗೆ ಕಾಂಗ್ರೆಸ್ಗೆ ಭಯವಿದೆ. ರಾಜ್ಯದಲ್ಲಿ ಗಲಭೆ ಸೃಷ್ಟಿಸುವಂತೆ ಅಮಿತ್ ಶಾ ಅವರೇ ಹೇಳಿಹೋಗಿದ್ದಾರೆ. ಅದನ್ನೇ ಸಂಸದ ಪ್ರತಾಪ್ ಸಿಂಹ ಅವರೂ ಹೇಳಿದ್ದಾರೆ. ಇದರ ಜತೆಗೆ, ಅನಂತ್ಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ಯಡಿಯೂರಪ್ಪ, ಸಿಟಿ ರವಿ, ಯೋಗಿ ಆದಿತ್ಯನಾಥ್ ಅವರ ಮಾತುಗಳು ಹಿಂದೂ ಮುಸ್ಲಿಮರ ಮಧ್ಯೆ ಗಲಭೆ ಸೃಷ್ಟಿಸುವುದೇ ಆಗಿದೆ. ಅದಕ್ಕಾಗಿ ಹತ್ತು ಮಂದಿ ಸತ್ತರೂ ಬಿಜೆಪಿ ಚಿಂತಿಸುವುದಿಲ್ಲ. ಬಿಜೆಪಿಯ ಈ ನಿಲುವಿನ ಬಗ್ಗೆ ನಮಗೆ ಭಯವಿದೆ.

ಈ ಬಾರಿಯ ಚುನಾವಣೆಯಲ್ಲಿ ಅನಂತ್ಕುಮಾರ್ ಹೆಗಡೆ ಕಾಂಗ್ರೆಸ್ಗೆ ಸವಾಲಾಗಿದ್ದಾರಾ?

ಅನಂತ್‌ಕುಮಾರ್ ಹೆಗಡೆ ನಮಗೇನು ಸವಾಲಲ್ಲ. ಅವರು ರಾಜ್ಯಕ್ಕೆ ಕಂಟಕ. ರಾಜ್ಯದ ಪರವಾಗಿ ಅನಂತ್ಕುಮಾರ್ ಹೆಗಡೆ ಈವರೆಗೆ ಒಂದೇ ಒಂದು ಬಾರಿಯೂ ಹೋರಾಟ ಮಾಡಿಲ್ಲ. ಲೋಕಸಭೆಗೆ ನಾಲ್ಕೈದು ಬಾರಿ ಆಯ್ಕೆಯಾಗಿ ಹೋದರೂ, ಒಂದೇ ಒಂದು ಚರ್ಚೆಯಲ್ಲಿ ಭಾಗವಹಿಸಿಲ್ಲ. ಯಾವುದೇ ನಿಯೋಗದೊಂದಿಗೂ ಅವರು ಬಂದ ಉದಾಹರಣೆಗಳಿಲ್ಲ. ಅವರ ಅಜೆಂಡಾವನ್ನು ಜನರಿಗೆ ಮುಟ್ಟಿಸುವುದೇ ಕಾಂಗ್ರೆಸ್ನ ಗುರಿ.

ದೇಶದಲ್ಲಿ ನಡೆಯುತ್ತಿರುವ ಧರ್ಮ ರಾಜಕೀಯವನ್ನು ಕಾಂಗ್ರೆಸ್ ಹೇಗೆ ನೋಡುತ್ತಿದೆ. ಅದಕ್ಕೆ ಪ್ರತಿಯಾಗಿಯೇ ಲಿಂಗಾಯತ ಹೋರಾಟ ತರಲಾಯಿತೇ?

ಲಿಂಗಾಯತ ಧರ್ಮ ಹೋರಾಟದಲ್ಲಿ ಕಾಂಗ್ರೆಸ್ ನ ಹಸ್ತಕ್ಷೇಪವೇ ಇಲ್ಲ. ಸ್ವತಂತ್ರ ಧರ್ಮಕ್ಕಾಗಿ ಹಿಂದೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನ ಲಿಂಗಾಯತ ಮುಖಂಡರು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪ್ರಭಾಕರ ಕೋರೆ ಅವರೇ ಹಿಂದೆ ಪ್ರತ್ಯೇಕ ಧರ್ಮಕ್ಕೆ ಬೆಂಬಲಿಸಿದ್ದಾರೆ. ಅವರ ಬೇಡಿಕೆಗೆ ಮುಖ್ಯಮಂತ್ರಿ ಸ್ಪಂದಿಸಿದ್ದಾರಷ್ಟೇ. ಇದರಲ್ಲಿ ರಾಜಕೀಯವಿಲ್ಲ.

ಜಾತಿ ಗಣತಿ, ಒಳಮೀಸಲಾತಿ ವಿಚಾರಗಳು ಬಿಜೆಪಿಯ ಧರ್ಮರಾಜಕಾರಣದ ವಿರುದ್ಧವಾಗಿ ಪ್ರಯೋಗಿಸಿದ ಪ್ರತಿತಂತ್ರವೆ?

ಇಲ್ಲ. ಸರ್ಕಾರದ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ ಇವೆಲ್ಲವೂ ಜಾತಿ ಕೇಂದ್ರಿತ ಎಂದು ಹೇಗೆ ಹೇಳಲು ಸಾಧ್ಯ. ಆದರೆ, ಅಲ್ಪಸಂಖ್ಯಾತರಿಗೆ ಮೀಸಲಿರುವ ಕೆಲ ಕಾರ್ಯಕ್ರಮಗಳು ಸಂವಿಧಾನದತ್ತವಾಗಿರುವಂಥವು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಲ್ಲೂ ಅಲ್ಪಸಂಖ್ಯಾತರ ಇಲಾಖೆ ಇದೆ. ಅದರಿಂದ ಆಗಬೇಕಾದ ಕೆಲಸಗಳನ್ನು ಮಾಡಲೇಬೇಕಾಗುತ್ತದೆ. ಆ ಕಾರ್ಯಕ್ರಮಗಳಡಿಯಲ್ಲಿ ಮುಸ್ಲಿಮರಿಗೆ ಅನುದಾನ ನೀಡಿದರೆ ಅದನ್ನೇ ತಪ್ಪು ಎಂದು ಬಿಂಬಿಸಲಾಗುತ್ತದೆ. ಸರ್ಕಾರ ಎಲ್ಲಿಯೂ ಜಾತಿ, ಧರ್ಮದ ಆಧಾರದಲ್ಲಿ ಬೇಧ ಭಾವ ಮಾಡಿಲ್ಲ.

ಸಿದ್ದರಾಮಯ್ಯ ಅವರ ಕೆಲ ನಡವಳಿಕೆಗಳು, ವಿಶೇಷವಾಗಿ ಧರ್ಮಸ್ಥಳ ಪ್ರಕರಣ ಕಾಂಗ್ರೆಸ್ ಗೆ ಹಿಂದೂ ವಿರೋಧಿ ಅಲೆ ಸೃಷ್ಟಿಯಾಗುವಂತೆ ಮಾಡಿದೆ ಎನ್ನಲಾಗುತ್ತಿದೆ. ನಿಜವೇ?

ಸಿದ್ದರಾಮಯ್ಯ ಅವರ ವಿಚಾರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳೇ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಸಿದ್ದರಾಮಯ್ಯ ಅವರೂವದಲ್ಲಿ ನಂಬಿಕೆ ಹೊಂದಿರುವವರೇ. ಆದರೆ, ಅದನ್ನು ಹೇರುವ ಪ್ರಯತ್ನ ಮಾಡುವುದಿಲ್ಲ. ಅದು ಹಾಗಿರಲಿ. ಬಿಜೆಪಿಯವರಿಗೆ ಧೈವತ್ವದ ಮೇಲೆ ಅಪಾರವಾದ ನಂಬಿಕೆ ಇದೆ ಎಂದೇ ಭಾವಿಸುವುದಾದರೆ, ಯಡಿಯೂರಪ್ಪ ಜೈಲಿಗೆ ಹೋಗುವಂಥ ಕೆಲಸ ಮಾಡಿದ್ದೇಕೆ.ಬಿಜೆಪಿ ನಾಯಕರು ಸದನದಲ್ಲೇ ಅಶ್ಲೀಲ ಚಿತ್ರ ನೋಡಿದ್ದೇಕೆ?ಭ್ರಷ್ಟಾಚಾರದ ಆರೋಪದಲ್ಲಿ ಅವರ ಸಚಿವರು ಜೈಲಿಗೆ ಹೋಗಿದ್ದೇಕೆ? ಆಗ ಧರ್ಮ ಬರಲಿಲ್ಲವೇ? ಆಗ ದೇವರು ನೆನಪಾಗಲಿಲ್ಲವೇ? ಬಿಜೆಪಿಯವರು ಡೋಂಗಿಗಳು. ಅಂಥ ಡೋಂಗಿತನ ಸಿದ್ದರಾಮಯ್ಯ ಅವರಿಗಿಲ್ಲ.

ರಾಹುಲ್ ಗಾಂಧಿ ಕಾಂಗ್ರೆಸ್ ನ ಅಧ್ಯಕ್ಷರಾದ ನಂತರ ಯುವ ನಾಯಕತ್ವಕ್ಕೆ ಮನ್ನಣೆ ನೀಡುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಯುವ ನಾಯಕತ್ವವನ್ನು ಬೆಳೆಸುವುದೇ ಆದರೆ, ಅಂಥ ನಾಯಕರು ಯಾರು?

ಸಿದ್ದರಾಮಯ್ಯ ಸಂಪುಟದಲ್ಲಿ ಯುವ ಸಚಿವರಿದ್ದಾರೆ. ಯುಟಿ ಖಾದರ್, ಕೃಷ್ಣ ಬೈರೇಗೌಡ, ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಪ್ರಮೋದ್ ಮಧ್ವರಾಜ್ ಇದ್ದಾರೆ. ಇಲ್ಲಿ ಇನ್ನೊಂದು ವಿಚಾರ ಗಮನಿಸಬಹುದು. ಬಿಜೆಪಿಯ ಯುವನಾಯಕರನ್ನು ನೋಡಿ… ಸಿಟಿ ರವಿ, ಪ್ರತಾಪ್ ಸಿಂಹ. ಇವರಿಗೆ ಹೋಲಿಸಿಕೊಂಡರೆ ಯಾರು ಒಳ್ಳೆಯವರು, ಯಾರು ತಾತ್ವಿಕತೆಯಿಂದ ಕೆಲಸ ಮಾಡುತ್ತಾರೆ ಎಂಬುದು ಗೊತ್ತಾಗುತ್ತದೆ.

ಕಾಂಗ್ರೆಸ್ ಈ ಬಾರಿ ಚುನಾವಣೆ ಗೆದ್ದರೆ, ಯುವ ನಾಯಕತ್ವ ನೋಡಬಹುದಾ ಅಥವಾ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರಾ?

ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತಿದ್ದೇವೆ. ಇದರ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವೇನಿಲ್ಲ. ಅವರ ಹೆಸರಲ್ಲೇ ಚುನಾವಣೆ ಗೆದ್ದು ಬಂದರೆ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ.

ಸಮ್ಮಿಶ್ರ ಸರ್ಕಾರದ ಸಾಧ್ಯತೆಗಳಿವೆ ಎಂಬ ಮಾತುಗಳಿವೆಯಲ್ಲ?

೨೨೪ ಕ್ಷೇತ್ರಗಳಲ್ಲೂ ಗೆಲ್ಲವ ಪ್ರಯತ್ನ ಮಾಡುತ್ತೇವೆ. ಎಷ್ಟು ಸ್ಥಾನ ಗೆಲ್ಲುತ್ತೇವೆ ಎಂಬುದು ಆಮೇಲಿನ ಮಾತು. ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಕೂಗಿಲ್ಲ, ಆರೋಪಗಳಿಲ್ಲ. ಹೀಗಾಗಿ ಹಿಂದಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ.

ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ನ ಕರೆಗಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಕಾಂಗ್ರೆಸ್ನ ನಿಲುವೇನು?

ಅವರೆಲ್ಲರೂ ಒಟ್ಟಿಗೆ ಬಂದಿದ್ದಾರೆ, ಒಟ್ಟಿಗೆ ಕಾಂಗ್ರೆಸ್ ಸೇರುತ್ತಾರೆ. ಈಗಾಗಲೇ ರಾಹುಲ್ ಗಾಂಧಿ ಅವರನ್ನು ಭೇಟಿಯೂ ಮಾಡಿದ್ದಾರೆ. ಒಂದು ಔಪಚಾರಿಕ ಸಭೆ ನಡೆಸಿ ಸೇರಿಸಿಕೊಳ್ಳುವುದಷ್ಟೆ ಬಾಕಿ ಇದೆ.

ಸಂಘಟನೆ ಕಾರಣಕ್ಕೆ ನೀವು ರಾಜಿನಾಮೆ ಕೊಟ್ಟಿರಿ. ಇದರಿಂದ ನಿಮಗೆ, ನಿಮ್ಮ ಬೆಂಬಲಿಗರಿಗೆ ಏನಾದರೂ ಬೇಸರವಾಯಿತೇ?

ಸ್ವಲ್ಪ ಜನರಿಗೆ ಬೇಸರವಾಗಿರಬಹುದು. ಆದರೆ, ಸಚಿವ ಸ್ಥಾನದಿಂದ ಕೆಳಗಿಳಿದಾಗ ನನಗೆ ಮಾತ್ರವೇ ತಕ್ಷಣಕ್ಕೆ ಪರ್ಯಾಯಾ ಸ್ಥಾನ ಸಿಕ್ಕಿತು. ನನಗೆ ಸಂಘಟನೆಯಲ್ಲೇ ಖುಷಿ ಇದೆ.

ದೊಡ್ಡ ಖಾತೆಯನ್ನು ಕೊಟ್ಟಾಗ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ ಎಂಬ ಮಾತುಗಳು ಉದ್ಭವವಾಗಿದ್ದವಲ್ಲ?

ನನ್ನ ಅಧಿಕಾರವಧಿಯಲ್ಲಿ ಸುಮಾರು ಸುಧಾರಣೆಗಳಾಗಿವೆ. ರೇಷನ್ ಕಾರ್ಡ್ಗಳನ್ನು ಆಧಾರ್ಗೆ ಜೋಡಣೆ ಮಾಡಲಾಯಿತು. ವಿತರಣಾ ವ್ಯವಸ್ಥೆಯನ್ನು ಬಲಪಡಿಸಲಾಯಿತು. ಆದರೆ, ಈಗ ಬೇರೆ ಜವಾಬ್ದಾರಿ ನೀಡಿದ್ದಾರೆ. ಅದನ್ನು ನಿರ್ವಹಿಸುತ್ತಿದ್ದೇನೆ.

ಬಿಜೆಪಿಯವರು ನಿಮ್ಮನ್ನು ವೈಯಕ್ತಿವಾಗಿ ನಿಂದಿಸಿದರು. ನಿಮ್ಮ ತಂದೆ, ಪತ್ನಿಯನ್ನು ಮೂದಲಿಸಿದರು. ಇದಕ್ಕೆ ನೀವು ಏನು ಹೇಳುತ್ತೀರಿ. ಇಂಥ ಘಟನೆಗಳನ್ನು ಹೇಗೆ ಸ್ವೀಕರಿಸಿದಿರಿ?

ವೈಯಕ್ತಿಕ ಟೀಕೆ ಎಂದಿಗೂ ಸರಿಯಲ್ಲ. ಕೀಳುಮಾತುಗಳನ್ನಾಡುವುದರಲ್ಲಿ ಬಿಜೆಪಿ ಅವರು ಮುಂದಿದ್ದಾರೆ. ಹಾಗೆ ಮಾತನಾಡುವವರು ನಮ್ಮಲ್ಲೂ ಇದ್ದಾರೆ. ಹಾಗಾಗಿಯೇ ವೈಯಕ್ತಿಕ ಟೀಕೆ ಮಾಡಬಾರದು ಎಂದು ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕಾಗಿಯೇ ಮಣಿ ಶಂಕರ್ ಅಯ್ಯರ್ ಅವರನ್ನೇ ಅಮಾನತು ಮಾಡಲಾಯಿತು.

ಈ ಐದು ವರ್ಷಗಳಲ್ಲಿ ಸರ್ಕಾರ ನಡೆ ಸರಿಯಿಲ್ಲ ಎಂದು ತಮಗೆ ಯಾವಾಗಲಾರೂ, ಯಾವುದಕ್ಕಾದರೂ ಅನಿಸಿದ್ದಿದೆಯೇ?

ಗಲಭೆ ಎಬ್ಬಿಸುವ ಜನರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದು ನನಗೆ ಅನಿಸುತ್ತದೆ. ಅದನ್ನು ಬಿಟ್ಟರೆ ಸರ್ಕಾರದ ಆರಂಭದ ದಿನಗಳಲ್ಲಿ ನಾವು ಬೆಂಗಳೂರಿಗೆ ಹೆಚ್ಚಿನ ಆದ್ಯತೆ ನೀಡಲಿಲ್ಲ ಎಂಬ ಕೊರಗಿದೆ.

ಮಾಡಲಾಗದೇ ಉಳಿದ ಕೆಲಸಗಳೇನಾದರೂ ಇವೆಯೇ?

ಎಲ್ಲ ಕಾರ್ಯಕ್ರಮಗಳನ್ನೂ ನಾವು ಮಾಡಿ ಮುಗಿಸಿದ್ದೇವೆ. ಮಕ್ಕಳಿಂದ ಹಿಡಿದು, ಹಿರಿಯರವರೆಗೆ, ಲೈಂಗಿಕ ಅಲ್ಪಸಂಖ್ಯಾತರು, ರೈತರು, ಅಂಗವಿಕಲರೆಲ್ಲರಿಗೂ ನಾವು ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ.

ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನವನ್ನು ಅಪೇಕ್ಷಿಸುತ್ತೀರಾ? ಅಥವಾ ಸಂಘಟನೆ ಹೊಣೆ ಹೊರುತ್ತೀರಾ?

ನಾನು ಈಗ ಅದರ ಬಗ್ಗೆ ಯೋಚಿಸುತ್ತಲೇ ಇಲ್ಲ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕು. ನಂತರ ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತೇನೆ. ಮೊದಲು ನಾನು ಇನ್ನೊಂದು ಬಾರಿ ಗೆಲ್ಲಬೇಕಾಗಿದೆ. ಅದರ ನಂತರ ಉಳಿದದ್ದು.

ಇದನ್ನೂ ಓದಿ : ಮಾಜಿ ಸಂಸದ ವಿಜಯಶಂಕರ್‌ ಮನದ ಮಾತು | ಕುತಂತ್ರಕ್ಕೆ ಬಲಿಯಾಗಲಾರೆ

ಮೋದಿ ಹವಾ ಇದೆ ಎನ್ನಲಾಗುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಹೇಗೆ ಹೋರಾಡುತ್ತದೆ?

ಮೋದಿ ಅವರ ಪ್ರಭಾವ ಇರುವುದು ನಿಜ. ಅವರು ಶಕ್ತಿಶಾಲಿ ನಾಯಕ. ಸಂಘಟನೆ ಮಾಡುತ್ತಾರೆ. ಅದೆಲ್ಲವೂ ಸರಿ. ಆದರೆ, ಅಭಿವೃದ್ಧಿಯ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಈಗ ವಿಕಾಸದ ಬಗ್ಗೆ ಮಾತನಾಡುತ್ತಲೇ ಇಲ್ಲ. ಅವರ ನಡವಳಿಕೆ ಬದಲಾಗಿದೆ. ಮೋದಿ ಅವರ ಘೋಷಣೆಗಳು ಹಳಿ ತಪ್ಪಿವೆ. ಅವರಲ್ಲಿ ಸರ್ವಾಧಿಕಾರಿ ಧೋರಣೆ ಮೊಳೆತಿದೆ. ಆದರೆ ಅವರು ಇದನ್ನೆಲ್ಲ ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಲಿ. ಕಾಂಗ್ರೆಸ್ ಮುಕ್ತ ಭಾರತದಿಂದ ದೇಶಕ್ಕೇನೂ ಉಪಯೋಗವಿಲ್ಲ. ಅವರನ್ನು ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More