ರಾಹುಲ್‌ ಗಾಂಧಿ ವಿದೇಶಿ ಪ್ರವಾಸವನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಳ್ಳಬೇಕು, ಏಕೆ?

ರಾಹುಲ್‌ರ ವಿದೇಶ ಪ್ರವಾಸವೆಂದರೆ ತೀರ ಇತ್ತೀಚಿನವರೆಗೆ ಅದು ರಾಷ್ಟ್ರ ರಾಜಕೀಯದಿಂದ ತಾತ್ಕಾಲಿಕ ಪಲಾಯನವೆಂದೇ ಬಿಂಬಿತವಾಗುತ್ತಿತ್ತು. ಆದರೆ ಬಹ್ರೇನ್‌ ಪ್ರವಾಸ ಅವರ ಇಮೇಜ್‌ಅನ್ನುಗಟ್ಟಿಯಾಗಿ ಕಟ್ಟಿಕೊಡುತ್ತಿರುವಂತಿದೆ. ರಾಹುಲ್‌ರ ಈ ವಿದೇಶ ಪ್ರವಾಸಗಳ ಚರ್ಯೆ ಹೇಳುವುದಾದರೂ ಏನನ್ನು?

ಎಐಸಿಸಿ ಅಧ್ಯಕ್ಷರಾದ ನಂತರ ರಾಹುಲ್‌ ಗಾಂಧಿಯವರು ಮೊದಲ ಬಾರಿಗೆ ಕೈಗೊಂಡ ಬಹ್ರೇನ್‌ ವಿದೇಶ ಪ್ರವಾಸದ ವೇಳೆ ಎನ್‌ಆರ್‌ಐ ಉದ್ಯಮಪತಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು, “ನೀವು ನಮ್ಮ ದೇಶಕ್ಕೆ ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಲು ನಾನು ಇಲ್ಲಿಗೆ ಬಂದಿದ್ದೇನೆ, ದೇಶದಲ್ಲಿ ಗಂಭೀರ ಸಮಸ್ಯೆಗಳಿವೆ, ಆ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಮ್ಮ ಪಾಲೂ ಇದೆ ಎನ್ನುವುದನ್ನು ಹೇಳಲು ಮತ್ತು ನಿಮ್ಮ ಹಾಗೂ ದೇಶದ ನಡುವೆ ಸೇತುವೆಯನ್ನು ನಿರ್ಮಿಸಲು ಇಲ್ಲಿಗೆ ಬಂದಿದ್ದೇನೆ,” ಎಂದಿದ್ದರು. ರಾಹುಲ್‌ ವಿದೇಶದಲ್ಲಿ ದೇಶದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಬಿಜೆಪಿಯ ವಕ್ತಾರರು ಇದಕ್ಕೆ ಪ್ರತಿಕ್ರಿಯಿಸಿದರು.

ರಾಹುಲ್‌ರ ವಿದೇಶ ಪ್ರವಾಸವೆಂದರೆ ತೀರಾ ಇತ್ತೀಚಿನವರೆಗೆ ಅದು ರಾಷ್ಟ್ರ ರಾಜಕೀಯದಿಂದ ತಾತ್ಕಾಲಿಕ ಪಲಾಯನವೆಂದೇ ಬಿಂಬಿತವಾಗುತ್ತಿತ್ತು. ಯಾವುದಾದರೂ ಒಂದು ಪ್ರಮುಖ ವಿಷಯವನ್ನು ಕೈಗೆತ್ತಿಕೊಂಡು ಅದಕ್ಕೊಂದು ಸ್ಪಷ್ಟ ರೂಪು ಬರುತ್ತಿದೆ ಎನ್ನುವಾಗಲೇ ರಾಹುಲ್‌ ದೇಶವನ್ನು ಬಿಟ್ಟು ಪ್ರವಾಸ ಹೊರಡುತ್ತಾರೆ ಎನ್ನುವ ಆರೋಪ ಕೇಳಿಬರುತ್ತಿತ್ತು. ಇದಕ್ಕೆ ಪಕ್ಷದೊಳಗಿನ ಕಾರಣಗಳೇನೇ ಇದ್ದರೂ ರಾಹುಲ್‌ರನ್ನು ‘ಶಸ್ತ್ರತ್ಯಾಗ ಮಾಡಿ ರಣರಂಗದಿಂದ ಅರ್ಧದಲ್ಲೇ ಪಲಾಯನ ಮಾಡುವವರು,’ ಎಂದು ಹೀಗಳೆಯಲಾಗುತ್ತಿತ್ತು.

ರಾಹುಲ್‌ ಕಳೆದೆರಡು ವರ್ಷದ ಅವಧಿಯಲ್ಲಿ ೭ವಿದೇಶ ಪ್ರವಾಸ ಕೈಗೊಂಡಿದ್ದಾರೆ, ಅದರಲ್ಲಿ ಕೆಲವು ಖಾಸಗಿ ಪ್ರವಾಸಗಳು. ಈ ಖಾಸಗಿ ಪ್ರವಾಸಗಳೇ ಬಹುತೇಕವಾಗಿ ಚರ್ಚೆಗೆ ಆಹಾರವಾಗಿರುವುದು. ಆದರೆ, ರಾಹುಲ್‌ ಕಳೆದ ಸೆಪ್ಟೆಂಬರ್‌ನಲ್ಲಿ ಕೈಗೊಂಡ ಉತ್ತರ ಅಮೆರಿಕ‌ ‌ಪ್ರವಾಸ ಇಂತಹ ಆರೋಪಗಳಿಗೆ ಉತ್ತರ ನೀಡುವ ಪ್ರಯತ್ನದಂತಿತ್ತು. ರಾಹುಲ್‌ ಅವರ ವರ್ಚಸ್ಸನ್ನು ವೃದ್ಧಿಸುವಲ್ಲಿ ಇದು ಸಹಕಾರಿಯೂ ಆಯಿತು. ನ್ಯೂಯಾರ್ಕ್‌, ಪ್ರಿನ್ಸ್‌ಟನ್‌, ಬರ್ಕ್ಲಿ ನಗರಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೂ ಅಲ್ಲದೆ ‌ಗಣ್ಯರು, ಚಿಂತಕರನ್ನು ರಾಹುಲ್‌ ಭೇಟಿ ಮಾಡಿದರು. ಸಂದರ್ಶನ, ಸಂವಾದಗಳಲ್ಲಿಯೂ ಪಾಲ್ಗೊಂಡರು. ಪ್ರಧಾನಿ ಮೋದಿಯವರನ್ನು ಬಿಂಬಿಸಲು ಬಿಜೆಪಿ ಹಾಗೂ ಪಿಆರ್ ಸಂಸ್ಥೆಗಳು ಅನುಸರಿಸುವ ತಂತ್ರಗಾರಿಕೆ ಇಲ್ಲಿಯೂ ಕಂಡುಬಂದಿತು. ಆದರೆ ಇದೀಗ ರಾಹುಲ್‌ ಅವರ ಬಹ್ರೇನ್‌ ಪ್ರವಾಸ ಅವರ ಇಮೇಜ್‌ಅನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟಿಕೊಡುವ ಪ್ರಯತ್ನವಾಗಿದೆ. ಹಾಗಾದರೆ ಬದಲಾದ ರಾಹುಲ್‌ರ ಈ ವಿದೇಶ ಪ್ರವಾಸಗಳ ಚರ್ಯೆ ಹೇಳುವುದಾದರೂ ಏನನ್ನು ಇಲ್ಲಿದೆ ಕೆಲವು ಅಂಶಗಳು.

  • ಪ್ರಧಾನಿ ಮೋದಿಯವರು ವಿದೇಶ ಪ್ರವಾಸ ಕೈಗೊಂಡಾಗ ಅಲ್ಲಿನ ಭಾರತೀಯರನ್ನು ಉದ್ದೇಶಿಸುವ ಸಂದರ್ಭದಲ್ಲಿ ರಾಷ್ಟ್ರ ಹಾಗೂ ಧರ್ಮದ ವಿಚಾರವಾಗಿ ಹೆಚ್ಚಾಗಿ ಬಲಪಂಥೀಯ ನಿಲುವುಗಳನ್ನು ವ್ಯಕ್ತಪಡಿಸಿದ್ದರು. ಆದರೆ, ಇದೀಗ ಮೋದಿಯವರು ದೇಶದಲ್ಲಿ ತಂದಿರುವ ಬದಲಾವಣೆ ಏನು ಎನ್ನುವುದು ಎನ್‌ಆರ್‌ಐ‌ಗಳಲ್ಲಿ ಚರ್ಚೆಯ ವಿಷಯವಾಗಿದೆ. ಮೊದಲಿನ ಭಾವಾವೇಶ ತಗ್ಗಿ ಮೋದಿಯವರನ್ನು ವಿಮರ್ಶಾತ್ಮಕವಾಗಿ ನೋಡುವ ವಾತಾವರಣ ನಿರ್ಮಾಣವಾಗುತ್ತಿದೆ. ವಿಶೇಷವಾಗಿ ಭಾರತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಂಡವಾಳ ಹೂಡಿಕೆಯಾಗುತ್ತಿಲ್ಲ ಎನ್ನುವ ಭಾವನೆ ಎನ್‌ಆರ್‌ಐ ಉದ್ಯಮಿಗಳಲ್ಲಿದೆ. ದೇಶದಲ್ಲಿ ಬಂಡವಾಳ ಹೂಡಿಕೆಗೆ ಸೂಕ್ತ ವಾತಾವರಣ ನಿರ್ಮಿಸುವಲ್ಲಿ ಮೋದಿಯವರು ಸಫಲರಾಗಿಲ್ಲ. ಇಂತಹ ಸನ್ನಿವೇಶದಲ್ಲಿ ರಾಹುಲ್‌ ಅವರನ್ನು ಪ್ರಗತಿಪರ ಚಿಂತನೆಯ, ಅಭಿವೃದ್ಧಿಪರ ಧೋರಣೆಯ ಯುವನಾಯಕನನ್ನಾಗಿ ಬಿಂಬಿಸುವ ಪ್ರಯತ್ನವನ್ನು ಕಾಂಗ್ರೆಸ್‌ ಗಂಭೀರವಾಗಿ ಮಾಡತೊಡಗಿದೆ.
  • ಅನಿವಾಸಿ ಭಾರತೀಯರು ತಮಗೆ ತೋರಿಸಿರುವ ವ್ಯಾಪಕ ಅಭಿಮಾನವನ್ನು ಮೋದಿಯವರು ತನ್ನ ನೀತಿಗಳಿಗೆ ದೊರೆತಿರುವ ಸಮ್ಮತಿ ಎಂದು ಭಾವಿಸಿದಂತೆ ಕಾಣುತ್ತಿದೆ. ಮೋದಿಯವರಲ್ಲಿ ಅನಿವಾಸಿ ಭಾರತೀಯರು ಪ್ರಬಲ ನಾಯಕನ ಗುಣಗಳನ್ನು ಕಂಡಿದ್ದಾರಾದರೂ ಅವರ ಆಡಳಿತಾತ್ಮಕ ನೀತಿನಿರ್ಧಾರಗಳೆಲ್ಲವನ್ನೂ ಅನುಮೋದಿಸಿದ್ದಾರೆ ಎಂದೇನೂ ಅಲ್ಲ. ಅದೇ ರೀತಿ ಮೋದಿಯವರು ವಿದೇಶಗಳಲ್ಲಿ ತಮಗೆ ದೊರೆತಿರುವ ಅನಿವಾಸಿ ಭಾರತೀಯರ ಜನಮನ್ನಣೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಚಾಣಾಕ್ಷತೆ ತೋರಿದ್ದಾರೆ. ಭಾರತದಲ್ಲಿ ತಾವೊಬ್ಬ ಪ್ರಶ್ನಾತೀತ ನಾಯಕ ಎನ್ನುವಂತೆ ಅವರು ವಿದೇಶಗಳಲ್ಲಿ ತಮಗೆ ದೊರೆತ ಅನಿವಾಸಿ ಭಾರತೀಯರ ಬೆಂಬಲವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಮೋದಿಯವರ ಇಮೇಜ್‌ ಜಾಗತಿಕವಾಗಿ ಉತ್ತಮಗೊಂಡರೂ, ಅನಿವಾಸಿ ಭಾರತೀಯರಿಗೆ ಹೆಚ್ಚಿನ ಉಪಯೋಗವಾಗಿಲ್ಲ. ಮೋದಿಯವರು ತಮ್ಮ ಅಭಿಮಾನವನ್ನು ಬಳಸಿಕೊಂಡಿರುವ ರೀತಿಯ ಬಗ್ಗೆ ಅನಿವಾಸಿ ಭಾರತೀಯರಲ್ಲಿ ಒಮ್ಮತವಿಲ್ಲ.
  • ಮೋದಿಯವರಲ್ಲಿ ಪ್ರಬಲ, ಉದಾರವಾದಿ ನಾಯಕನನ್ನು ಅನಿವಾಸಿ ಭಾರತೀಯರು ಗುರುತಿಸಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದೇಶದಲ್ಲಿ ಮೂಲಭೂತವಾದಿ ಶಕ್ತಿಗಳು, ಚಿಂತನೆಗಳು ಬಲಗೊಳ್ಳುತ್ತಿರುವುದು ಅನಿವಾಸಿ ಭಾರತೀಯರಲ್ಲಿ ಗೊಂದಲ ಮೂಡಿಸುತ್ತಿದೆ. ಮೋದಿಯವರಲ್ಲಿ ‘ಪರಿವರ್ತನೆ’ಯ ಮುಖವನ್ನು ನೋಡಲು ಬಯಸಿದ್ದ ಅನೇಕ ಅನಿವಾಸಿ ಭಾರತೀಯರಿಗೆ ಈ ಕಾರಣಕ್ಕೆ ನಿರಾಸೆಯಾಗಿದೆ. ಅಲ್ಪಸಂಖ್ಯಾತ ಸಮುದಾಯದ ಭಯ, ಅತಂಕಗಳನ್ನು ಅನಿವಾಸಿ ಭಾರತೀಯರು ತಮ್ಮದೇ ಅನುಭವಗಳಿಂದ ಬಲ್ಲವರಾಗಿರುತ್ತಾರೆ. ಅಂತಹ ವಾತಾವರಣ ತಮ್ಮದೇ ದೇಶದ ಸಮಾಜದಲ್ಲಿಯೂ ಇದೆ ಎಂದರೆ ಅವರು ಅದನ್ನು ಸಂಭ್ರಮಿಸುವುದಿಲ್ಲ. ಮೋದಿಯವರು ತಂದಿರುವ ‘ಪರಿವರ್ತನೆ’ ಏನು ಎನ್ನುವುದು ಈಗ ಅನಿವಾಸಿ ಭಾರತೀಯ ಸಮೂಹಗಳಲ್ಲಿ ಚರ್ಚೆಯ ವಸ್ತುವಾಗಿದೆ.
  • ಅನಿವಾಸಿ ಭಾರತೀಯರು ಬಹುವಾಗಿ ಗೌರವಿಸುವುದು ಭದ್ರತೆಯ ಭಾವನೆಯನ್ನು; ಈ ಕಾರಣಕ್ಕೆ ಬಹುಸಂಸ್ಕೃತಿಗಳನ್ನು ಗೌರವಿಸುವ, ಆದರಿಸುವ, ಭಯಮುಕ್ತ ವಾತಾವರಣದೆಡೆಗೆ ಅವರು ಹೆಚ್ಚು ತುಡಿಯುತ್ತಾರೆ. ಭಾರತದಲ್ಲಿ ಇತ್ತೀಚೆಗೆ, ಧರ್ಮ, ಭಾಷೆ, ಆಹಾರ, ಆಚರಣೆಗಳ ವಿಷಯದಲ್ಲಿ ನಡೆಯುತ್ತಿರುವ ಚರ್ಚೆಗಳು, ಮೂಡಿರುವ ತ್ವೇಷಮಯ ವಾತಾವರಣವನ್ನು ಅವರು ಆತಂಕದಿಂದ ಗಮನಿಸುತ್ತಿದ್ದಾರೆ. ಮೋದಿಯವರ ಮನವಿಗಳ ನಂತರವೂ ದೇಶದಲ್ಲಿ ಕೆಲ ಮತೀಯ ಶಕ್ತಿಗಳು ಗಟ್ಟಿಗೊಳ್ಳುತ್ತಿರುವುದು ಮೋದಿಯವರ ಶಕ್ತಿಯ ಬಗ್ಗೆ ಅನಿವಾಸಿ ಭಾರತೀಯರಲ್ಲಿ ಅನುಮಾನ ಮೂಡಿಸುತ್ತಿದೆ. ಭಾರತದ ನಗರಗಳೂ ಕೂಡ ಧರ್ಮ, ಭಾಷೆಯಂತಹ ವಿಷಯಗಳ ಆಧಾರದಲ್ಲಿ ಸೀಳಿಕೊಳ್ಳುತ್ತಿರುವುದು ಅನಿವಾಸಿಗಳಿಗೆ ಭರವಸೆಯನ್ನು ಮೂಡಿಸುತ್ತಿಲ್ಲ.
ಇದನ್ನೂ ಓದಿ : ಮೋದಿಯವರಿಗೆ ಸಡ್ಡು ಹೊಡೆಯಲು ರಾಹುಲ್‌ ಇನ್ನೂ ಎಷ್ಟು ದೂರ ಸಾಗಬೇಕು?

ಈ ಹಿನ್ನೆಲೆಯಲ್ಲಿಯೇ ರಾಹುಲ್‌ ಅವರು ಭಾರತೀಯ ಮೂಲದವರ ಜಾಗತಿಕ ಸಂಸ್ಥೆಯ ವೇದಿಕೆಯಲ್ಲಿ ಆಡಿರುವ ಮಾತುಗಳು ಗಮನಸೆಳೆದಿವೆ. ‘ದೇಶದಲ್ಲಿ ಸಮಸ್ಯೆ ಇದೆ, ಅದಕ್ಕೆ ನೀವು ಪರಿಹಾರವಾಗಬಲ್ಲಿರಿ,’ ಎಂದು ಅವರು ಅಲ್ಲಿ ಹೇಳಿರುವ ಮಾತು ವಿಶೇಷ ಅರ್ಥ ಪಡೆದುಕೊಂಡಿದೆ. ಇದು ಮುಂದಿನ ದಿನಗಳಲ್ಲಿ ರಾಹುಲ್‌ರ ವಿದೇಶ ಪ್ರವಾಸಗಳು ಯಾವ ವಿಷಯಗಳನ್ನು ಮುನ್ನೆಲೆಗೆ ತರಲಿವೆ ಎನ್ನುವುದರ ದಿಕ್ಸೂಚಿಯಾಗಿದೆ. ರಾಹುಲ್‌ರ ಹೇಳಿಕೆಗಳಿಗೆ ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿರುವ ರೀತಿ ಈ ವಿಷಯದ ಮಹತ್ವವನ್ನು ಅವರು ಅರಿತಿರುವಂತೆ ತೋರುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More