ರಾಜಕೀಯದಿಂದ ಶೃಂಗೇರಿ ದೂರವಿದ್ದರೂ ರಾಜಕಾರಣಿಗಳು ಅದರಿಂದ ದೂರವಿಲ್ಲ

ಶಂಕರಾಚಾರ್ಯರು ಸ್ಥಾಪಿಸಿದ ೪ ಮಠಗಳ ಪೈಕಿ ತನ್ನತನ ಉಳಿಸಿಕೊಂಡಿರುವ ಮಠವೆಂದರೆ ಶೃಂಗೇರಿ ಮಠ. ಮಿಕ್ಕವು ವಿವಾದ, ಬಿಜೆಪಿಯ ಸಖ್ಯ ಬೆಳಸುತ್ತಾ ವರ್ಚಸ್ಸು ಕೆಡಿಸಿಕೊಂಡಿವೆ. ಆದರೆ, ಶೃಂಗೇರಿ ರಾಜಕೀಯದಿಂದ ಅದು ದೂರವಿರಬಹುದು, ರಾಜಕಾರಣಿಗಳು ಅದರಿಂದ ದೂರವಾಗಿಲ್ಲ

ಸಂಘಪರಿವಾರ ಮತ್ತು ಬಿಜೆಪಿ ಮೂಲದ ರಾಜಕೀಯ ವಿಚಾರವಾದಗಳಿಂದ ಬಹಳ ಅಂತರವನ್ನು ಕಾಪಾಡಿಕೊಂಡು ಬಂದಿರುವ ಮಠಗಳು ಅಥವಾ ದೇವಾಲಯಗಳು ದೇಶದಲ್ಲಿ ಕಾಣಸಿಗುವುದು ಬಹಳ ಕಡಿಮೆ. ಹೀಗೆ ಅಂತರ ಕಾಪಾಡಿಕೊಂಡೂ ರಾಜಕೀಯವಾಗಿ ಪ್ರಬಲವಾಗಿರುವುದು ಮತ್ತು ಬಿಜೆಪಿಯವರು ಪದೇ ಪದೇ ಓಲೈಕೆಗೆ ಪ್ರಯತ್ನಿಸುತ್ತಿರುವ ಮಠಗಳು ಅಪರೂಪ. ಅಂತಹ ಒಂದು ದೈವಿಕ ತಾಣ ಕರ್ನಾಟಕದಲ್ಲಿದ್ದರೆ ಅದು ಶೃಂಗೇರಿ. ಅದೇ ಕಾರಣದಿಂದ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಶೃಂಗೇರಿ ಮಠದ ಉಲ್ಲೇಖವೂ ಮಾಧ್ಯಮಗಳಲ್ಲಿ ಹೆಚ್ಚಾಗುತ್ತಲೇ ಹೋಗುತ್ತಿದೆ.

ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು 12 ದಿನಗಳ ಅತಿರುದ್ರ ಮಹಾ ಯಾಗವನ್ನು ಶೃಂಗೇರಿ ಮಠದಲ್ಲಿ ನೆರವೇರಿಸಲು ಹಲವು ದಿನ ಅಲ್ಲೇ ತಂಗಿದ್ದರು. ಆದರೆ ಯಾಗ ಪೂರ್ಣಗೊಳ್ಳುವ ಮೊದಲು ಕಾರಣಾಂತರಗಳಿಂದ ಅವರು ವಾಪಾಸಾದರು. ಇದೀಗ ಜನವರಿ 20ರಿಂದ ರಾಜ್ಯಕ್ಕೆ ಭೇಟಿ ಕೊಡಲಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರೂ ಶೃಂಗೇರಿಗೆ ಭೇಟಿ ಕೊಡಲಿದ್ದಾರೆ ಎಂದು ಮಠದ ಮೂಲಗಳು ಹೇಳುತ್ತಿವೆ. ಹೀಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಶೃಂಗೇರಿಯನ್ನು ತಮ್ಮ ನೆಲೆವೀಡಾಗಿಸಿಕೊಂಡಿವೆ ಎನ್ನುವ ಕಾರಣಕ್ಕೆ, ಈ ಮಠ ಕಾಂಗ್ರೆಸ್ ಪರ ಅಥವಾ ಬಿಜೆಪಿಯೇತರ ಎಂದು ಸಂಪೂರ್ಣವಾಗಿ ಹೇಳಲೂ ಸಾಧ್ಯವಾಗದು. ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿ ನಾಯಕರು ಶೃಂಗೇರಿಗೆ ಭೇಟಿಕೊಡುವುದು ಮತ್ತು ತಮ್ಮ ಧಾರ್ಮಿಕ ಸಭೆ, ಕಾರ್ಯಕ್ರಮಗಳಿಗೆ ಶೃಂಗೇರಿಗೆ ಆಹ್ವಾನ ನೀಡುವುದು ತಪ್ಪಿಸುವುದಿಲ್ಲ.

ಶೃಂಗೇರಿ ಮಠದ ಸ್ವಾಮೀಜಿ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಯವರ ಆಚಾರ ವಿಚಾರಗಳನ್ನು ಗಮನಿಸಿದಲ್ಲಿ, ಅವರು ಆಧ್ಯಾತ್ಮ ಬಿಟ್ಟು ಲೌಕಿಕ ಜಗತ್ತಿನ ಜೊತೆಗೆ ಹೆಚ್ಚು ಸಂಬಂಧ ಇಟ್ಟುಕೊಳ್ಳುವುದು ಅಪರೂಪ. ಮಠದ ಸ್ವಾಮೀಜಿ ಸಾಮಾನ್ಯವಾಗಿ ರಾಜಕೀಯದಿಂದ ದೂರವಿರುತ್ತಾರೆ ಎನ್ನುವಂತಹ ಒಂದು ಗ್ರಹಿಕೆ ಬರಲು ಇದು ಮುಖ್ಯಕಾರಣ. ಉಡುಪಿ ಮಠಗಳ ಮಠಾಧೀಶರಂತೆ ಶೃಂಗೇರಿ ಮಠಾಧೀಶರು ಸಾಮಾನ್ಯವಾಗಿ ರಾಜಕೀಯ ಮತ್ತು ಸಾಮಾಜಿಕ ಹೇಳಿಕೆಗಳನ್ನು ನೀಡುವುದಿಲ್ಲ. ಈಗಿನ ಮಠಾಧೀಶರೂ ರಾಜಕೀಯ ಹೇಳಿಕೆಗಳು ಅಥವಾ ಸಮಕಾಲೀನ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದರಿಂದ ಅಂತರವನ್ನು ಕಾಪಾಡಿಕೊಂಡೇ ಬಂದಿದ್ದಾರೆ.

ಶೃಂಗೇರಿ ಮಠಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಹಲವು ಲೇಖನಗಳನ್ನು ಬರೆದಿರುವ ಪರಿಸರ ಮತ್ತು ಸಾಮಾಜಿಕ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ ಅವರು ಶೃಂಗೇರಿ ಮಠ ರಾಜಕೀಯದಿಂದ ಸಂಪೂರ್ಣವಾಗಿ ಹೊರಗಿದೆ ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ. “ಮುಖ್ಯವಾಗಿ, ವೈಷ್ಣವ ಮಾಧ್ವ ಮಠಗಳು ರಾಮನನ್ನು ಐಕಾನ್ ಆಗಿಟ್ಟುಕೊಂಡವರನ್ನು ಹೆಚ್ಚಾಗಿ ಆಶ್ರಯಿಸುತ್ತವೆ. ಹೀಗಾಗಿ ಉಡುಪಿಯಂತಹ ಮಾಧ್ವ ಮಠಗಳು ಸಂಘಪರಿವಾರಕ್ಕೆ ಹತ್ತಿರವಾಗಿರುತ್ತವೆ. ಆದರೆ ಶೃಂಗೇರಿ ಮಠ ಸ್ಮಾರ್ತರಿಗೆ ಸೇರಿರುತ್ತದೆ. ಇದೇ ಕಾರಣದಿಂದ ಸಂಘಪರಿವಾರವೂ ಹೆಚ್ಚು ಆಸಕ್ತಿ ತೋರಿಸಿಲ್ಲ ಮತ್ತು ಶೃಂಗೇರಿಯೂ ಅತ್ತಕಡೆ ವಾಲಿಲ್ಲ. ವೈಷ್ಣವರಿಗೂ ಮತ್ತು ಶೈವರಿಗೂ ಹಿಂದಿನಿಂದಲೇ ಸ್ವಲ್ಪ ಮಟ್ಟಿಗೆ ಸಮಸ್ಯೆಗಳಿವೆ. ಇದೇ ಕಾರಣದಿಂದ ಸಂಘಪರಿವಾರದಿಂದ ಶೃಂಗೇರಿ ಮಠ ದೂರವೇ ಇದ್ದಿರಬಹುದು. ಈ ಅಂತರ ಎರಡೂ ಕಡೆಯವರಿಂದಲೂ ಇದ್ದಿರಬಹುದು. ಶೃಂಗೇರಿ ಮಠ ಸಂಘಪರಿವಾರದಿಂದ ಅಂತರ ಕಾಪಾಡಿಕೊಂಡ ಮಾತ್ರಕ್ಕೆ ರಾಜಕೀಯವಾಗಿ ತಟಸ್ಥ ನಿಲುವು ಹೊಂದಿರುವುದು ಅಥವಾ ರಾಜಕೀಯ ಪಕ್ಷಗಳಿಂದ ದೂರವಿದೆ ಎನ್ನುವುದೂ ಸರಿಯಲ್ಲ. ಬಿಜೆಪಿಯೇತರ ಪಕ್ಷಗಳ ಜೊತೆಗೆ ಶೃಂಗೇರಿಯ ನಂಟು ಬಹಳ ಹಿಂದಿನಿಂದಲೇ ಅತ್ಯುತ್ತಮವಾಗಿಯೇ ಇದೆ,” ಎನ್ನುತ್ತಾರೆ ಕಲ್ಕುಳಿ ವಿಠಲ ಹೆಗ್ಡೆ.

ಇದನ್ನೂ ಓದಿ : ಲಿಂಗಾಯತ ಧರ್ಮ ಹೋರಾಟಕ್ಕೆ ಸಡ್ಡು ಹೊಡೆದ ವೀರಶೈವ ಲಿಂಗಾಯತ ಹೋರಾಟ

ರಾಜಕೀಯವಾಗಿ ಹೇಳಿಕೆ ಕೊಡುವುದರಿಂದ ದೂರವೇ ಇದ್ದರೂ, ರಾಜಾಶ್ರಯದ ವಿಚಾರದಲ್ಲಿ ಶೃಂಗೇರಿ ಮಠ ಮುಂದಿದೆ ಎನ್ನುವುದಕ್ಕೆ ಟಿಪ್ಪು ಸುಲ್ತಾನ್ ರಿಂದ ಕೊಡುಗೆ ಪಡೆದ ದೇವಾಲಯ ಎನ್ನುವ ಪ್ರಸಿದ್ಧಿಯೂ ಕಾರಣವಾಗಿರಬಹುದು. 1791ರಲ್ಲಿ ಮರಾಠರು ಶೃಂಗೇರಿ ಮಠದ ಮೇಲೆ ದಾಳಿ ಮಾಡಿ ಶಾರದಾಂಬೆಯ ವಿಗ್ರಹ ಕಿತ್ತು ಹಾಕಿ ಸಂಪತ್ತನ್ನು ದೋಚಿಕೊಂಡು ಹೋದ ಸಂದರ್ಭದಲ್ಲಿ ಗೂಢಾಚಾರರಿಂದ ವಿಷಯ ತಿಳಿದುಕೊಂಡು ಶೃಂಗೇರಿ ಮಠಕ್ಕೆ ಟಿಪ್ಪು ಸುಲ್ತಾನ್ ನೆರವಾಗಿರುವ ವಿವರಗಳು ದಾಖಲೆಗಳಲ್ಲಿವೆ. ಅಪಾಯದ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ಆಶ್ರಯ ಪಡೆದಿದ್ದ ಸಚ್ಚಿದಾನಂದ ಭಾರತಿ ಸ್ವಾಮೀಜಿಗೆ ರಕ್ಷಣೆ ಕೊಟ್ಟು ಶಾರದಾಂಬೆಯನ್ನು ಪುನರ್ ಪ್ರತಿಷ್ಠೆ ಮಾಡಲು ಸಾವಿರ ವರಹಗಳ ನಿಧಿಯನ್ನು ಟಿಪ್ಪು ಕೊಟ್ಟಿರುವ ಬಗ್ಗೆ ಶೃಂಗೇರಿ ಮಠದ ದಾಖಲೆಗಳು ಮತ್ತು ಟಿಪ್ಪು ಶೃಂಗೇರಿ ಮಠಕ್ಕೆ ಬರೆದ 23 ಪತ್ರಗಳಲ್ಲಿ ವಿವರಗಳಿವೆ. “ಶೃಂಗೇರಿ ಬಹಳ ಪ್ರಾಚೀನ ಮಠವಾಗಿದ್ದ ಕಾರಣದಿಂದ ಮೈಸೂರು ಅರಸರು ಮಠದ ಗುರುಗಳು ಮತ್ತು ಸ್ವಾಮೀಜಿಗಳ ಬಗ್ಗೆ ಹಿಂದಿನಿಂದಲೂ ಬಹಳ ಗೌರವಾದರಗಳಿಂದ ನಡೆದುಕೊಳ್ಳುತ್ತಾರೆ. ಗುರುಗಳು ಆಗಮಿಸಿದಾಗ ಪಾದಪೂಜೆ ಮಾಡುತ್ತಾರೆ. ರಾಜರ ಕಾಲದಲ್ಲಿ ಶೃಂಗೇರಿ ಸ್ವಾಮೀಜಿಗಳು ಬಂದಾಗ ಜೋಡಿಶಾಲು, ತೆಂಗಿನಕಾಯಿ ಮೊದಲಾದುವನ್ನು ಗೌರವಪೂರ್ಣವಾಗಿ ನೀಡಲು ಸಿದ್ಧತೆ ಮಾಡಲು ಹೊರಡಿಸಿದ ನಿರೂಪಗಳ (ಅರಮನೆಯ ಅಧಿಕೃತ ಆದೇಶ) ವಿವರವನ್ನು ಇಂದಿಗೂ ಮೈಸೂರು ಪತ್ರಾಗಾರ ವಿಭಾಗದಲ್ಲಿ ಕಾಣಬಹುದು” ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾಗೈತಿಹಾಸಿಕ ದಾಖಲೆಗಳ ವಿಭಾಗದ ಮುಖ್ಯಸ್ಥರಾದ ಶೆಲ್ವಪಿಳ್ಳೈ ಅಯ್ಯಂಗಾರ್ ಅವರು ನೆನಪಿಸಿಕೊಳ್ಳುತ್ತಾರೆ. ಈ ಹಿಂದೆ ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಅವರೂ ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದರು.

ಶೃಂಗೇರಿ ತಾನು ರಾಜಕೀಯವಾಗಿ ತಟಸ್ಥ ಮತ್ತು ನಿರ್ಲಿಪ್ತ ಎನ್ನುವ ವರ್ಚಸ್ಸನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲು ಕೆಲವು ಮುಖ್ಯ ಕಾರಣಗಳೂ ಇವೆ. ಶೃಂಗೇರಿ ಮಠ ಎಂದೂ ಶೈಕ್ಷಣಿಕ ಸಂಸ್ಥೆಗಳು ಅಥವಾ ಸಾಮಾಜಿಕ ಸಂಸ್ಥೆಗಳನ್ನು ಪೊರೆಯುತ್ತಾ ಬಂದಿಲ್ಲ. ಅದು ನಡೆಸಿಕೊಂಡು ಬಂದಿರುವ ಒಂದು ಆಸ್ಪತ್ರೆಯತ್ತಲೂ ಹೆಚ್ಚು ಗಮನಹರಿಸುತ್ತಿಲ್ಲ. ಇದನ್ನು ಕರ್ಮಣಿ ಮಠ ಎಂದು ಹೇಳುತ್ತಾರೆ. ಮೇಲ್ನೋಟಕ್ಕೆ ಸ್ವಾಮೀಜಿಗಳಿಗೂ ಲೌಕಿಕ ವಿಚಾರಗಳಿಗೂ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ಅಲ್ಲಿನ ಕಾರ್ಯ ಕಲಾಪಗಳು ಸಾಗುತ್ತವೆ.

ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಇಂದಿಗೂ ಹಳೇ ಸಂಪ್ರದಾಯದಲ್ಲಿ ಉಳಿದಿರುವುದು ಶೃಂಗೇರಿ ಮಠವೇ. ಉಳಿದವುಗಳು ಇನ್ಯಾವುದೋ ವಿವಾದ, ಬಿಜೆಪಿಯ ರಾಜಕೀಯ ಆಂದೋಲನಗಳ ಜೊತೆಗೆ ಎನ್ನುತ್ತಾ ವರ್ಚಸ್ಸು ಕೆಡಿಸಿಕೊಂಡಿವೆ. ಶೃಂಗೇರಿ ಮಠ ಹೀಗೆ ‘ವೇದಿಕೆ’ಗಳಲ್ಲಿ ಗುರುತಿಸಿಕೊಳ್ಳದೆ ಇರುವ ಕಾರಣದಿಂದ ಹೆಚ್ಚು ಪ್ರಾಮುಖ್ಯತೆ ಉಳಿಸಿಕೊಂಡಿದೆ. ಆಯೋಧ್ಯೆ ವಿಚಾರವಾಗಿ ಬಿಜೆಪಿ ಚಳವಳಿ ಆರಂಭಿಸಿದಾಗಲೂ ಶೃಂಗೇರಿಯನ್ನು ಜೊತೆಗೂಡಿಸಿಕೊಳ್ಳಲು ನಡೆಸಿದ ಪ್ರಯತ್ನ ವಿಫಲವಾಗಿತ್ತು. ರಾಜಕಾರಣಿಗಳು ಮಠಕ್ಕೆ ಬಂದರೂ ಇಲ್ಲಿನ ಜಗದ್ಗುರುಗಳು ಆಶೀರ್ವಾದ ನೀಡಿ ಕಳುಹಿಸುವುದಕ್ಕಿಂತ ಹೆಚ್ಚು ಆಸ್ಥೆ ತೋರಿಸುವುದಿಲ್ಲ. ವಿಶ್ವ ಹಿಂದೂ ಪರಿಷತ್ ಆರಂಭವಾಗಿ ಯತಿಗಳ ಸಂಸತ್ತು ಮಾಡಲು ಆರಂಭಿಸಿದಾಗಿನಿಂದಲೂ ಶೃಂಗೇರಿ ಮಠಾಧೀಶರನ್ನು ಆಹ್ವಾನಿಸಿದ್ದರೂ, ಅವರು ದೂರವೇ ಉಳಿದಿದ್ದರು.

ಬಿಜೆಪಿ ಜೊತೆಗೆ ಗುರುತಿಸಿಕೊಳ್ಳುವುದಿಲ್ಲ ಅಥವಾ ಕಾಂಗ್ರೆಸ್ ಪರ ಎನ್ನುವ ಆರೋಪಗಳು ಶೃಂಗೇರಿ ಮೇಲಿರುವುದೇನೋ ನಿಜ. ಆದರೆ ಇಲ್ಲಿಗೆ ಬಿಜೆಪಿ ನಾಯಕರೂ ಬರುತ್ತಾರೆ. ಜೆಡಿಎಸ್, ಕಾಂಗ್ರೆಸ್ ನಾಯಕರೂ ಆಗಮಿಸುತ್ತಾರೆ. 2015 ಜನವರಿಯಲ್ಲಿ ಕಿರಿಯ ಸ್ವಾಮೀಜಿಗಳನ್ನು ನೇಮಕ ಮಾಡಿದ ಸಂದರ್ಭದಲ್ಲಿಯೂ ರಾಜ್ಯದ ಪ್ರಮುಖ ಬಿಜೆಪಿ ನಾಯಕರಾದ ಬಿ ಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಅವರು ಉಪಸ್ಥಿತರಿದ್ದರು. ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರು ಗೈರು ಹಾಜರಾಗಿದ್ದರೂ, ಕಾನೂನು ಸಚಿವ ಟಿಬಿ ಜಯಚಂದ್ರ ಕಾರ್ಯಕ್ರಮದಲ್ಲಿದ್ದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More