ವೈರಲ್ ವಿಡಿಯೋ | ಯೋಗಿ ಆದಿತ್ಯನಾಥರಿಗೆ ಹೊಸ ರೆಸಿಪಿ ಮಾಡಿಕೊಟ್ಟ ಕಾಂಗ್ರೆಸ್!

ಉತ್ತರ ಪ್ರದೇಶ ಸಿಎಂ ಆದಿತ್ಯನಾಥರಿಗೆ ಟಾಂಗ್ ನೀಡಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಅವರ ವಿರುದ್ಧದ ಆರೋಪಗಳ ಪಟ್ಟಿ ಬಳಸಿಕೊಂಡು ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್, #Recipe For Disaster ಹೆಸರಿನಲ್ಲಿ ವಿಡಿಯೋ ಬಿಡುಗಡೆ ಮಾಡಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ನಡುವೆ ಟ್ವಿಟರ್ ವಾರ್ ನಡೆಯುತ್ತಿರುವ ನಡುವೆಯೇ, ಯೋಗಿ ಆದಿತ್ಯಾನಾಥ್‌ಗೆ ಟಾಂಗ್ ನೀಡಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಯೋಗಿ ಆದಿತ್ಯಾನಾಥ್ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್, ಅವರ ವಿರುದ್ಧದ ಆರೋಪಗಳ ಪಟ್ಟಿಯನ್ನು ಬಳಸಿಕೊಂಡು, #Recipe For Disaster ಹೆಸರಿನಲ್ಲಿ ವಿಡಿಯೋ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಕೋಮುಸೌಹಾರ್ದವನ್ನು ಕದಡಿರುವ ಯೋಗಿ ಅವರು, ಕರ್ನಾಟಕದಲ್ಲೂ ಅದನ್ನು ಹರಡಲು ಬರುತ್ತಿದ್ದಾರೆ ಎಂಬ ಆರೋಪ ಅದರಲ್ಲಿದೆ.

ವಿಡಿಯೋದಲ್ಲಿ ಯೋಗಿ ಆದಿತ್ಯನಾಥರ ವಿರುದ್ಧದ ಅಪರಾಧ ಪ್ರಕರಣಗಳ ಪಟ್ಟಿ, ಗೋಹತ್ಯೆ ನಿಷೇಧ, ಉತ್ತರ ಪ್ರದೇಶದ ಶಾಲಾ ಕಟ್ಟಡ ಮತ್ತು ಹಜ್ ಭವನದ ಗೋಡೆಯನ್ನು ಕೇಸರಿಮಯಗೊಳಿಸಿದ ಕ್ರಮ, ಸದನದಲ್ಲಿ ಮೊಸಳೆ ಕಣ್ಣೀರು ಹಾಗೂ ಇವೆಲ್ಲದರ ನಡುವೆ ಉತ್ತರ ಪ್ರದೇಶ ಅಭಿವೃದ್ಧಿಗೆ ಯೋಗಿ ಕೊಟ್ಟಿದ್ದೂ ಶೂನ್ಯ ಕೊಡುಗೆ ಎಂಬ ಆರೋಪಗಳನ್ನೇ ತಮ್ಮ ರೆಸಿಪಿಗೆ ಸಾಮಗ್ರಿಗಳನ್ನಾಗಿ ಬಳಸಿಕೊಳ್ಳಲಾಗಿದೆ. #Recipe For Disaster Coming Soon to Your State ಎಂಬ ವಾಕ್ಯದೊಂದಿಗೆ ವಿಡಿಯೋ ಕೊನೆಯಾಗಿದೆ.

ಇದನ್ನೂ ಓದಿ : ಸಿದ್ದರಾಮಯ್ಯ ಆದಿತ್ಯನಾಥರಿಗೆ ಪತ್ರ ಬರೆದಿದ್ದಾರಂತೆ! ಅದರ ಕರಡು ಇಲ್ಲಿದೆ

ಯೋಗಿ ಆದಿತ್ಯನಾಥ ಅವರು, ರಾಜ್ಯ ಬಿಜೆಪಿ ಕಳೆದ ಭಾನುವಾರ ಆಯೋಜಿಸಿದ್ದ ಪರಿವರ್ತನಾ ಯಾತ್ರೆಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ, “ನಮ್ಮ ರಾಜ್ಯಕ್ಕೆ ಆಗಮಿಸುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಅವರಿಗೆ ಸ್ವಾಗತ. ನೀವು ನಮ್ಮ ರಾಜ್ಯದಿಂದ ಕಲಿಯೋದು ಸಾಕಷ್ಟಿದೆ. ನೀವು ಬೆಂಗಳೂರಿಗೆ ಭೇಟಿ ನೀಡಿದಾಗ ದಯವಿಟ್ಟು ಇಂದಿರಾ ಕ್ಯಾಂಟೀನ್ ಮತ್ತು ರೇಷನ್ ಅಂಗಡಿಗಳಿಗೆ ಭೇಟಿ ನೀಡಿ. ಇದರಿಂದ, ಉತ್ತರ ಪ್ರದೇಶದಲ್ಲಿ ಹಸಿವಿನಿಂದ ಜನ ಸಾವನ್ನಪ್ಪುತ್ತಿರುವ ಪ್ರಕರಣಗಳನ್ನು ತಡೆಯಲು ಸಹಾಯ ಆಗಬಹುದು,” ಎಂದು ಕಿವಿಮಾತು ಹೇಳಿದ್ದರು.

ಇದಕ್ಕೆ ಟ್ವಿಟ್ಟರ್‌ನಲ್ಲಿಯೇ ಪ್ರತಿಕ್ರಿಯೆ ನೀಡಿದ್ದ ಯೋಗಿ ಆದಿತ್ಯನಾಥ್, “ಸ್ವಾಗತ ಕೋರಿರುವುದಕ್ಕೆ ಧನ್ಯವಾದಗಳು ಸಿದ್ದರಾಮಯ್ಯಜೀ. ನಿಮ್ಮ ಆಡಳಿತಾವಧಿಯಲ್ಲಿಯೇ ಅತಿ ಹೆಚ್ಚು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕೇಳಿದ್ದೇನೆ. ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ಹಾಗೂ ಸಾವಿನ ಸಂಖೆಯನ್ನು ನಮೂದಿಸಬೇಡಿ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನಿಮ್ಮ ಮಿತ್ರಪಕ್ಷಗಳು ಮಾಡಿರುವ ಜಂಗಲ್ ರಾಜ್ ಕೊಳಕನ್ನು ಸ್ವಚ್ಚಗೊಳಿಸುವ ಕೆಲಸ ಮಾಡುತ್ತಿದ್ದೇನೆ,” ಎಂದು ತಿರುಗೇಟು ನೀಡಿದ್ದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More