ಚಾಣಕ್ಯಪುರಿ | ಮೋದಿಯವರ ‘ಜಾತ್ರೆ’ಯ ಬಗ್ಗೆ ದೇವೇಗೌಡರ ಮೊನಚು ಮಾತು

ದೆಹಲಿಯಲ್ಲಿ ರಾಜ್ಯಕ್ಕೆ ಸಂಬಂಧಿಸಿದಂತೆ ನಡೆಯುವ ರಾಜಕೀಯ ವಿದ್ಯಮಾನಗಳು ಕುತೂಹಲಕರ, ಮಹತ್ವದವು ಕೂಡ. ಅಲ್ಲಿನ ರಾಜಕೀಯ ಕಾರಿಡಾರ್‌ಗಳಲ್ಲಿ ಹರಿದಾಡುವ ಅಂಥ ಮಾತುಕತೆಗಳನ್ನು, ಸುದ್ದಿಯಾಗದ ಪ್ರಸಂಗಗಳನ್ನು ನಿಮ್ಮೆದುರು ಪ್ರಸ್ತುತಪಡಿಸುವ ಅಂಕಣವಿದು

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದೇ ದೆಹಲಿಗೆ ಬಂದಿದ್ದ ಮಾಜಿ ಪ್ರಧಾನಿ ದೇವೇಗೌಡರು, ದೆಹಲಿಯ ಕೊರೆಯುವ ಚಳಿಯಲ್ಲೂ ಒಂದು ಗಂಟೆ ಮುಂಚಿತವಾಗಿ ರಾಜಪಥಕ್ಕೆ ಆಗಮಿಸಿದ್ದರು. ಅಲ್ಲದೆ, ಚಳಿಯಲ್ಲಿ ಅಷ್ಟು ಬೇಗನೆ ಆಗಮಿಸಿದ್ದಕ್ಕೆ ತಮ್ಮನ್ನು ತಾವೇ ಶಪಿಸಿಕೊಂಡರು. ಬಹುಮುಖ್ಯವಾಗಿ, ಗಣರಾಜ್ಯೋತ್ಸವ ನಡೆದ ರೀತಿಯ ಬಗ್ಗೆ ಪರಿತಪಿಸಿದರು. "ಈ ದೇಶದ ಹೊಟ್ಟೆಯೊಳಗೆ ಕ್ಯಾನ್ಸರ್ ಇದೆ, ಇವರಿಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಜನ ಮರುಳೋ, ಜಾತ್ರೆ ಮರುಳೋ... ನಡೀತಿದೆ, ನಡೀಲಿ ನಡೀಲಿ," ಅಂತ ತಮ್ಮ ಸುತ್ತಲಿದ್ದವರ ಬಳಿ ಅಸಮಾಧಾನ ಹೊರಹಾಕಿದರು.

“ಏಷಿಯಾದ ೧೦ ರಾಷ್ಟ್ರಗಳ ಪ್ರಧಾನಿ ಮತ್ತು ಅಧ್ಯಕ್ಷರನ್ನು ಕರೆಸಿದ್ದಾರೆ, ಅದುವೇ ಮಹಾನ್ ಸಾಧನೆ ಬಿಡಿ!” ಎಂದು ವ್ಯಂಗ್ಯ ಸೂಸಿದರು. ಆ ವ್ಯಂಗ್ಯಕ್ಕೆ ಬ್ರೇಕ್ ಹಾಕದೆ, "ಮೋದಿ ಈಸ್ ಗ್ರೇಟ್!" ಎಂದರು. "ಸದ್ಯ, ಪಾಕಿಸ್ತಾನದ ಪ್ರಧಾನಿಯನ್ನು ಕರೆಸಲಿಲ್ಲ!” ಎಂದು ಕುಟುಕಿದರು. ಇಷ್ಟಾದ ಮೇಲೆ ದೇವೇಗೌಡರ ಮಾತು, ಪ್ರಧಾನಿ ಮೋದಿ ಮಾತಿನ ವೈಖರಿಯಡೆಗೆ ತಿರುಗಿತು. "ಪ್ರಧಾನಮಂತ್ರಿ ಮಾಡುವ ಭಾಷಣ ತೂಕದಿಂದ ಕೂಡಿರಬೇಕು,” ಎಂದು ಹೇಳಿ, "ಮೋದಿ ಭಾಷಣದಲ್ಲಿ ತೂಕವಿಲ್ಲ,” ಎನ್ನುವ ಅಭಿಪ್ರಾಯವನ್ನು ಹೊರಹಾಕಿದರು. "ಈ ರೀತಿಯ ಭಾಷಣ ಬಹಳ ದಿನ ನಡೆಯುವುದಿಲ್ಲ. ಆದರೂ ನಾನು ಅವರನ್ನು ಟೀಕಿಸುವುದಿಲ್ಲ. ಪ್ರಧಾನಿಯನ್ನು ಟೀಕಿಸುವ ಮೂಲಕ ಮಾಜಿ ಪ್ರಧಾನಿ ಹುದ್ದೆಗಿರುವ ಘನತೆಗೆ ಚ್ಯುತಿ ತರುವುದಿಲ್ಲ,” ಎಂದು ಹೇಳುತ್ತಲೇ, ತಾವು ಹೇಳಬೇಕಾದ್ದನ್ನು ಹೇಳಿ ಮುಗಿಸಿದ್ದರು!

ಗಣರಾಜ್ಯೋತ್ಸವಕ್ಕೆ ಬಾರದ ಖರ್ಗೆ

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನಾಲ್ಕನೇ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಿದ್ದು ದೊಡ್ಡ ಸುದ್ದಿಯಾಯಿತು. ಆದರೆ, ರಾಹುಲ್ ಗಾಂಧಿ ಅವರಂತೆಯೇ ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಕಡೆಗಣಿಸಿದ್ದು, ಅವರಿಗೂ ಮೊದಲ ಸಾಲಿನಲ್ಲಿ ಆಸನ ನೀಡದೆ ಇದ್ದದ್ದು ಸಣ್ಣ ಮಟ್ಟದಲ್ಲೂ ಸದ್ದು, ಸುದ್ದಿಯಾಗಲಿಲ್ಲ. ತಮ್ಮನ್ನು ನಿರ್ಲಕ್ಷಿಸಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಮಲ್ಲಿಕಾರ್ಜುನ ಖರ್ಗೆ ಗಣರಾಜ್ಯದ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಬದಲಿಗೆ, ದೆಹಲಿಯ ಸಫ್ದರ್ ಜಂಗ್ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿಯೇ ದ್ವಜಾರೋಹಣ ಮಾಡಿದ್ದರು.

ಅಮಿಶ್ ಶಾ ಮತ್ತು ಭಯೋತ್ಪಾದನೆ!

ರಾಜ್ಯದ ಕೆಲವು ಬಿಜೆಪಿ ನಾಯಕರ ಪಾಲಿಗೆ ಅಮಿತ್ ಶಾ 'ಭಯೋತ್ಪಾದಕ'ರಂತೆ! “ಅಮಿತ್ ಶಾ ಕಾರ್ಯವೈಖರಿ ರಾಜ್ಯದ ನಾಯಕರಲ್ಲಿ ಭಯ ಹುಟ್ಟಿಸುತ್ತದೆ. ಅದಕ್ಕಾಗಿಯೇ ಹೀಗೆ ತೀರಾ ಖಾಸಗಿಯಾಗಿ ಮಾತನಾಡುವಾಗ ‘ಭಯೋತ್ಪಾದಕ’‌ ಎಂದು ತಮಾಷೆ ಮಾಡಿಕೊಳ್ಳುತ್ತೇವೆ. ಇದನ್ನು ಬಹಿರಂಗವಾಗಿ ಹೇಳಿ ಬಿಜೆಪಿಯಲ್ಲಿ ಬದುಕುಳಿಯಲಾದರೂ ಸಾಧ್ಯವೇ?!” ಎಂದು ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರು ತಮ್ಮ ಆತಂಕವನ್ನು ನಗುವಿನ ಹಿಂದೆ ಮರೆಮಾಚುತ್ತ ತೋಡಿಕೊಂಡರು.

ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ, ಪಕ್ಷ ಅಧಿಕಾರಕ್ಕೆ ಬಂದರೂ ತಮ್ಮನ್ನು ಮುಖ್ಯಮಂತ್ರಿ ಮಾಡುತ್ತಾರೋ ಇಲ್ಲವೋ ಎನ್ನುವ ಭಯವಿದೆ. ಕನಿಷ್ಠಪಕ್ಷ ಟಿಕೆಟ್ ಹಂಚುವ ಜವಾಬ್ದಾರಿಯನ್ನಾದರೂ ಯಡಿಯೂರಪ್ಪ ಅವರಿಗೆ ನೀಡಿದ್ದರೆ, ಅವರು ತಮ್ಮ ಕೆಲ ನಿಷ್ಠಾವಂತರಿಗೆ ಟಿಕೆಟ್ ಕೊಟ್ಟು ಚುನಾವಣೆ ನಂತರ ಅವರೆಲ್ಲ ತಮ್ಮ ಪರ ನಿಲ್ಲುವಂಥ ವಾತಾವರಣವನ್ನಾದರೂ ಸೃಷ್ಟಿಸಿಕೊಳ್ಳುತ್ತಿದ್ದರು. ಇದು ಗೊತ್ತಿರುವುದರಿಂದಲೇ ಏನೋ‌, ಟಿಕೆಟ್ ಹಂಚಿಕೆ ಮಾಡುವ ನಿರ್ಣಾಯಕ ಹಂತದಲ್ಲೇ ಅವರ ಕೈ ಕಟ್ಟಿಹಾಕಲಾಗುತ್ತಿದೆ. ಯಡಿಯೂರಪ್ಪ ಅವರಲ್ಲಿ ಇದು ದಿಗಿಲು ಹುಟ್ಟಿಸಿದೆ.‌ ಇಷ್ಟು ಮಾತ್ರವೇ ಅಲ್ಲ, ಅವರ ಅನೇಕ ಬೆಂಬಲಿಗರಿಗೂ 'ಯಡಿಯೂರಪ್ಪ ಬೆಂಬಲಿಗರು' ಎನ್ನುವ ಅಂಶವೇ ಟಿಕೆಟ್‌ ಹಂಚಿಕೆ ವೇಳೆ ಮುಳುವಾಗಬಹುದು ಎಂದು ಅಮಿತ್ ಶಾ ಹುಟ್ಟಿಸಿರುವ ಭಯವನ್ನು ಹಂಚಿಕೊಂಡರು.

ರಮ್ಯ ಕರ್ನಾಟಕಕ್ಕೆ ವಾಪಸು

ಎಐಸಿಸಿಯ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾದ ರಮ್ಯ, ವಿಧಾನಸಭೆ ಚುನಾವಣೆ ನಿಮಿತ್ತ ಕರ್ನಾಟಕಕ್ಕೆ ವಾಪಸಾಗಿದ್ದಾರೆ. ತಮ್ಮ ಆಗಮನ ಹೆಚ್ಚು ಸದ್ದುಗದ್ದಲವಾಗದಂತೆ ಅವರು ನೋಡಿಕೊಂಡಿದ್ದಾರೆ. ರಮ್ಯಾಗೆ ಸಾಮಾಜಿಕ ಜಾಲತಾಣ ವಿಭಾಗದ ಜವಾಬ್ದಾರಿ ನೀಡಿದಾಗ ಕೆಲವರು ಆಕ್ಷೇಪಿಸಿದ್ದರು.‌ ಈ ನಡುವೆಯೂ ರಮ್ಯ ತಮ್ಮ ಕಾರ್ಯವೈಖರಿಯಿಂದ ಗಮನ ಸೆಳೆದಿದ್ದರು. ಅದರಲ್ಲೂ, ಗುಜರಾತ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಸಂಚಲನ ಮೂಡಿಸಿತ್ತು.‌ ಈಗ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಚಮತ್ಕಾರ ಮಾಡಬೇಕೆನ್ನುವುದು‌ ರಮ್ಯ ಸಂಕಲ್ಪ.‌ ಚುನಾವಣೆ ಮುಗಿಯುವವರೆಗೂ ಕರ್ನಾಟಕದಲ್ಲೇ ಠಿಕಾಣಿ ಹೂಡಲಿರುವ ರಮ್ಯಾ, ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಐಟಿ ಸೆಲ್‌ಗೆ ಹಾಜರಿ ಹಾಕುತ್ತಿದ್ದಾರೆ. ತಮ್ಮೊಂದಿಗೆ ಬಂದಿರುವ ಎಐಸಿಸಿಯ ಮಾಧ್ಯಮ ಹಾಗೂ ಐಟಿ ವಿಭಾಗದ ಪ್ರಮುಖರೊಂದಿಗೆ ಸ್ಥಳೀಯ ಉತ್ಸಾಹಿ ತಂಡವನ್ನು ಸರ್ಮಥವಾಗಿ ಮುನ್ನಡೆಸಬೇಕಾದ ಜವಾಬ್ದಾರಿ ಅವರ ಮೇಲಿದೆ. ಯಾವುದೇ ವಿವಾದಗಳಿಗೆ ಆಸ್ಪದವಾಗದಂತೆ ತಮಗೆ ವಹಿಸಿರುವ ಜವಾಬ್ದಾರಿಯನ್ನು ರಮ್ಯ ಮುಗಿಸಿದರೆ ಸಾಕು ಎನ್ನುತ್ತಾರೆ ಪಕ್ಷದೊಳಗಿನ ಮಂದಿ.

ಇದನ್ನೂ ಓದಿ : ಚಾಣಕ್ಯಪುರಿ | ಕೊಲಂಬೋಗೂ ಒಳಮೀಸಲಾತಿಗೂ ಎತ್ತಣಿಂದೆತ್ತ ಸಂಬಂಧವಯ್ಯ!

ಬಿಜೆಪಿಯ ಹೊಸ ಸಂಪ್ರದಾಯ!

ಮಹದಾಯಿ ಜಲವಿವಾದ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಈ ಪ್ರಕರಣ 'ಗೋವಾ ಮುಖ್ಯಮಂತ್ರಿ ಕರ್ನಾಟಕದ ಮುಖ್ಯಮಂತ್ರಿಗೆ ಪತ್ರ ಬರೆಯಬೇಕೇ ಹೊರತು ಅವರ ಪಕ್ಷದ ರಾಜ್ಯಾಧ್ಯಕ್ಷರಿಗಲ್ಲ' ಎಂಬ ಟೀಕೆಗೆ ಎಡೆಮಾಡಿಕೊಟ್ಟಿತ್ತು. ಆದರೆ, ಇಂತಹ ಅಪಸ್ವರಗಳಿಗೆ ಬಿಜೆಪಿ ನಾಯಕರೇನೂ ತಲೆಕಡಿಸಿಕೊಂಡಂತೆ ಕಾಣುತ್ತಿಲ್ಲ. ಬದಲಿಗೆ ತಾವೇ ಹುಟ್ಟುಹಾಕಿದ ಈ ಹೊಸ ಸಂಪ್ರದಾಯವನ್ನು ಮುನ್ನಡೆಸುವ ಸುಳಿವು ನೀಡಿದ್ದಾರೆ.

ಕಳೆದ ವಾರ ಕೇಂದ್ರ ಸಚಿವ ಸಂಪುಟ ಸಭೆ ರಾಯಚೂರಿಗೆ ಐಐಐಟಿ ನೀಡಲು‌ ತಾತ್ವಿಕ ಒಪ್ಪಿಗೆ ನೀಡಿತ್ತು. ಆ ಬಳಿಕ, ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್, ಸಂಪುಟದಲ್ಲಿರುವ ರಾಜ್ಯದ ಪ್ರಮುಖ ಸಚಿವರಾದ ಅನಂತ ಕುಮಾರ್ ಅವರಿಗೆ ಸಂಪುಟ ಸಭೆಯ ಒಪ್ಪಿಗೆ ಪತ್ರವನ್ನು ಹಸ್ತಾಂತರಿಸಿದರು. ಇದೇ ಪತ್ರವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಕಳುಹಿಸುವ ಭರವಸೆ ನೀಡಿದರು‌. ವಾಸ್ತವವಾಗಿ, ಒಪ್ಪಿಗೆ ಪತ್ರವನ್ನು ಕರ್ನಾಟಕ ಸರ್ಕಾರಕ್ಕೆ ಕಳುಹಿಸಬೇಕೇ‌ ಹೊರತು ತಮ್ಮದೇ ಸರ್ಕಾರದ ಇನ್ನೊಬ್ಬ ಸಚಿವರಿಗಲ್ಲ ಎನ್ನುವುದು ಪ್ರಕಾಶ್ ಜಾವಡೇಕರ್ ಅವರಿಗೆ ಹೊಳೆಯದೆ ಇರುವುದೇನಲ್ಲ! ಈ ವಿಚಾರ ಆಡಳಿತ ಮತ್ತು ಸಂಸದೀಯ ವ್ಯವಹಾರಗಳಲ್ಲಿ ಅಪಾರ ಅನುಭವವಿರುವ ಅನಂತ ಕುಮಾರ್ ಅವರಿಗೂ ತಿಳಿಯದ್ದೇನೂ ಅಲ್ಲ!‌ ಹಾಗಿದ್ದರೂ, ಬಿಜೆಪಿ ತನ್ನ ಸ್ವಾಮ್ಯವನ್ನು ತೋರ್ಪಡಿಸಿಕೊಳ್ಳಲೆಂದು ಇಂಥದೊಂದು ರಾಜಕೀಯದಾಟಕ್ಕೆ ಮುಂದಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More