ನಗರಕೇಂದ್ರಿತ ಪಕ್ಷ ಎಂಬ ಹೆಗ್ಗಳಿಕೆಯನ್ನು ಕಳೆದುಕೊಳ್ಳಲಿದೆಯೇ ಬಿಜೆಪಿ? 

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹೊರಬಿದ್ದ ‘ಲೋಕನೀತಿ-ಸಿಎಸ್‌ಡಿಎಸ್’ ಸಮೀಕ್ಷೆಯು, ರಾಜ್ಯದ ವಿಧಾನಸಭಾ ಚುನಾವಣೆಯ ಗಾಳಿ ಯಾವ ದಿಕ್ಕಿನತ್ತ ಬೀಸುತ್ತಿದೆ ಎನ್ನುವ ಬಗ್ಗೆ ಕೆಲವು ಸೂಚನೆಗಳನ್ನು ನೀಡಿದೆ. ಹಾಗಾದರೆ, ಸಮೀಕ್ಷೆಯ ಅಂಕಿ-ಸಂಖ್ಯೆಗಳು ಹೇಳುವುದೇನು? ಇಲ್ಲಿದೆ ಮಾಹಿತಿ

ಇತ್ತೀಚೆಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ‘ಲೋಕನೀತಿ-ಸಿಎಸ್‌ಡಿಎಸ್’ ‘ದೇಶದ ಭಾವನೆ’ (ಮೂಡ್‌ ಆಫ್‌ ದ ನೇಷನ್) ಅರಿಯುವ ‌ಸಮೀಕ್ಷೆಯೊಂದನ್ನು ನಡೆಸಿತ್ತು. ಈ ವೇಳೆ, ಇನ್ನೇನು ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಬಗ್ಗೆಯೂ ಸಮೀಕ್ಷೆ ಕೈಗೊಳ್ಳಲಾಗಿತ್ತು. ಸಮೀಕ್ಷೆಗಾಗಿ ರಾಜ್ಯಾದ್ಯಂತ ೪೦ ಸ್ಥಳಗಳಲ್ಲಿ ೮೭೮ ಮಂದಿಯ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಭೌಗೋಳಿಕ ಹಾಗೂ ಜನಗಣತಿಯ ಮಾನದಂಡಗಳಿಗೆ ಅನುಗುಣವಾಗಿ ಸಮೀಕ್ಷೆ ಕೈಗೊಂಡಿದ್ದಾಗಿ ಸಂಸ್ಥೆ ತಿಳಿಸಿತ್ತು. "ಜನವರಿ ಎರಡನೇ ವಾರದಂತೆ ರಾಜ್ಯಾದ್ಯಂತ ಇರುವ ಭಾವನೆಯನ್ನು ಆಧರಿಸುವುದಾದರೆ ಕಾಂಗ್ರೆಸ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾದ ಭಾವನೆ ಇದೆ," ಎನ್ನುವ ಅಭಿಪ್ರಾಯಕ್ಕೆ ಸಮೀಕ್ಷೆಯಲ್ಲಿ ಸ್ಪಷ್ಟವಾಗಿ ಬರಲಾಗಿದೆ.

ಸಮೀಕ್ಷೆ ನಡೆದಿರುವ ದಿನದಂದು ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆದಿದ್ದೇ ಆದಲ್ಲಿ, ಶೇ.೪೯ ಮಂದಿ ಕಾಂಗ್ರೆಸ್‌ಗೆ ಮತ ನೀಡುವ ಭಾವನೆಯನ್ನು ವ್ಯಕ್ತಪಡಿಸಿದ್ದರೆ, ಶೇ.೨೭ ಮಂದಿ ಬಿಜೆಪಿಗೆ ಹಾಗೂ ಶೇ.೨೦ ಮಂದಿ ಜೆಡಿಎಸ್‌ಗೆ ಮತ ನೀಡುವುದಾಗಿ ತಿಳಿಸಿದ್ದರು. ಸಮೀಕ್ಷೆಯಲ್ಲಿ ವ್ಯಕ್ತವಾದ ಅಂಶಗಳನ್ನು ಅನುಸರಿಸಿ ಹೇಳುವುದಾದರೆ, ಕಾಂಗ್ರೆಸ್‌ ತನ್ನ ಸಮೀಪದ ಪ್ರತಿಸ್ಪರ್ಧಿಯಾದ ಬಿಜೆಪಿಗಿಂತ ಶೇ.೨೨ ಅಂಶಗಳಷ್ಟು ಮುಂದಿದೆ. ಅಲ್ಲದೆ, ಅದೇ ದಿನದಂದು ಒಂದು ವೇಳೆ ಸಮೀಕ್ಷೆಗೊಳಗಾದ ಮಂದಿ ಲೋಕಸಭಾ ಚುನಾವಣೆಗೆ ಮತ ಚಲಾಯಿಸಬೇಕಾಗಿ ಬಂದಿದ್ದರೆ, ಶೇ.೪೭ ಮಂದಿ ಕಾಂಗ್ರೆಸ್‌ಗೆ, ಶೇ.೩೦ ಮಂದಿ ಬಿಜೆಪಿಗೆ ಹಾಗೂ ಶೇ.೧೮ ಮಂದಿ ಜೆಡಿಎಸ್‌ಗೆ ಮತ ನೀಡುವುದಾಗಿ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯ ವಿಷಯವನ್ನು ಗಮನಿಸಿದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಬಿಜೆಪಿಯ ನಷ್ಟದಿಂದ ಕೊಂಚ ಮಟ್ಟದ ಲಾಭ ಪಡೆದಿರುವುದು ಕಂಡುಬರುತ್ತದೆ.

ಸಮೀಕ್ಷೆಯಲ್ಲಿ ಕೇಳಲಾಗಿದ್ದ ಮತ್ತೊಂದು ಪ್ರಮುಖ ಪ್ರಶ್ನೆ, “ಮುಖ್ಯಮಂತ್ರಿಯಾಗಿ ನಿಮ್ಮ ಆಯ್ಕೆ ಯಾರು?” ಎನ್ನುವುದು. ಸಮೀಕ್ಷಾ ವರದಿಯಲ್ಲಿ ತಿಳಿಸಿರುವಂತೆ, ಈ ಪ್ರಶ್ನೆಗೆ ಉತ್ತರವಾಗಿ ಸಮೀಕ್ಷೆಗೆ ಒಳಪಟ್ಟವರಿಗೆ ಯಾವುದೇ ಆಯ್ಕೆಯನ್ನು ನೀಡಲಾಗಿರಲಿಲ್ಲ. ಅವರು ಹೇಳಿದ ಹೆಸರನ್ನಷ್ಟೇ ದಾಖಲಿಸಲಾಗಿತ್ತು. ಆ ಪ್ರಕಾರವಾಗಿ, ಸಮೀಕ್ಷೆಗೆ ಒಳಪಟ್ಟ ಮೂರನೇ ಒಂದು ಭಾಗದಷ್ಟು ಮಂದಿ ಪ್ರಸಕ್ತ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರ ಹೆಸರನ್ನೇ ತಮ್ಮ ಆಯ್ಕೆಯಾಗಿ ಹೇಳಿದ್ದರೆ, ತದನಂತರದ ಸ್ಥಾನದಲ್ಲಿ ಹತ್ತರಲ್ಲಿ ಇಬ್ಬರು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ ಡಿ ಕುಮಾರಸ್ವಾಮಿಯವರ ಹೆಸರನ್ನು ಸೂಚಿಸಿದ್ದಾರೆ, ಏಳನೇ ಒಂದು ಭಾಗದಷ್ಟು ಮಂದಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪನವರ ಹೆಸರನ್ನು ಹೇಳಿದ್ದಾರೆ. ಈ ಮೂರು ಹೆಸರುಗಳಲ್ಲದೆ ಪ್ರಸ್ತಾಪವಾಗಿರುವ ಮತ್ತೊಂದು ಹೆಸರೆಂದರೆ, ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರದು. ಹತ್ತರಲ್ಲಿ ಒಬ್ಬರು ಖರ್ಗೆಯವರ ಹೆಸರು ಪ್ರಸ್ತಾಪಿಸಿದ್ದಾರೆ.

ವಿಶೇಷವೆಂದರೆ, ಸಿದ್ದರಾಮಯ್ಯನವರನ್ನು ಬೆಂಬಲಿಸಿರುವವರಲ್ಲಿ ಗಂಡಸರಿಗಿಂತ ಹೆಂಗಸರ ಸಂಖ್ಯೆ ಹೆಚ್ಚು ಎನ್ನುವುದು. ಅದೇ ರೀತಿ, ಸಿದ್ದರಾಮಯ್ಯನವರ ಜನಪ್ರಿಯತೆ ಪ್ರಬಲವಲ್ಲದ ಹಿಂದುಳಿದ ಜಾತಿಗಳು, ಪರಿಶಿಷ್ಟ ಜಾತಿ, ವರ್ಗಗಳು ಹಾಗೂ ಮುಸಲ್ಮಾನರಲ್ಲಿ ಹೆಚ್ಚಿದ್ದರೆ, ಕುಮಾರಸ್ವಾಮಿಯವರ ಜನಪ್ರಿಯತೆ ಒಕ್ಕಲಿಗರಲ್ಲಿ ಹಾಗೂ ಯಡಿಯೂರಪ್ಪನವರ ಜನಪ್ರಿಯತೆ ಲಿಂಗಾಯತರಲ್ಲಿ ಹೆಚ್ಚಿದೆ. ಭೌಗೋಳಿಕವಾಗಿ ಗಮನಿಸುವುದಾದರೆ, ಕುಮಾರಸ್ವಾಮಿಯವರ ಜನಪ್ರಿಯತೆ ಬೆಂಗಳೂರಿನಲ್ಲಿ ಹೆಚ್ಚಿದ್ದು, ಸಿದ್ದರಾಮಯ್ಯನವರ ಜನಪ್ರಿಯತೆ ರಾಜ್ಯದ ಇತರ ನಗರ, ಪಟ್ಟಣಗಳಲ್ಲಿ ಹೆಚ್ಚಿದೆ. ಯಡಿಯೂರಪ್ಪನವರ ಜನಪ್ರಿಯತೆ ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಏಕರೂಪವಾಗಿದೆ. ಪ್ರಾಂತೀಯವಾಗಿ ಗಮನಿಸುವುದಾದರೆ ಸಿದ್ದರಾಮಯ್ಯನವರ ಹೆಸರು ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದರೆ, ಮುಂಬೈ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಮತ್ತು ಕರಾವಳಿ ಕರ್ನಾಟಕಗಳಲ್ಲಿ ಯಡಿಯೂರಪ್ಪನವರ ಹೆಸರು ಮುಂದಿದೆ. ಕುಮಾರಸ್ವಾಮಿಯವರ ಹೆಸರು ಹೆಚ್ಚಾಗಿ ಬೆಂಗಳೂರು ಹಾಗೂ ಕರಾವಳಿ ಭಾಗಗಳಲ್ಲಿ ಪ್ರಸ್ತಾಪವಾಗಿದೆ.

ಸಮೀಕ್ಷೆಯ ಆಧಾರದಲ್ಲಿ ವಿವರಿಸುವುದಾದರೆ, ಬಿಜೆಪಿ ಸಂಕಷ್ಟದಲ್ಲಿರುವುದು ಕಂಡುಬರುತ್ತದೆ. ಕಾರಣ, ಬಿಜೆಪಿಯ ಜನಪ್ರಿಯ ನಾಯಕ ಬಿ ಎಸ್ ಯಡಿಯೂರಪ್ಪನವರ ಜನಪ್ರಿಯತೆ ಅವರ ಪ್ರತಿಸ್ಪರ್ಧಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರ ಹೋಲಿಕೆಯಲ್ಲಿ ಸಾಕಷ್ಟು ಕಡಿಮೆ ಇದೆ. ರಾಜ್ಯ ಬಿಜೆಪಿಯಲ್ಲಿ ಇಂದಿಗೂ ಜನಪ್ರಿಯ ನಾಯಕರೆಂದೇ ಪರಿಗಣಿಸಲ್ಪಡುವ ಬಿ ಎಸ್ ಯಡಿಯೂರಪ್ಪನವರನ್ನು ಅವರ ಜನಪ್ರಿಯತೆ ಹಾಗೂ ಲಿಂಗಾಯತ ಸಮುದಾಯದಲ್ಲಿ ಅವರು ಹೊಂದಿರುವ ಬೆಂಬಲದ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಎಂದು ಬಿಂಬಿಸಲಾಗಿದೆ. ಆದರೆ, ಬಿಎಸ್‌ವೈ ಅವರು ವಿವಿಧ ವರ್ಗ, ಸಮುದಾಯಗಳಲ್ಲಿ ವಿಶೇಷ ಜನಪ್ರಿಯತೆಯನ್ನು ಹೊಂದಿರಬಹುದಾದ ಬಗ್ಗೆ ಸಮೀಕ್ಷೆ ಅನುಮಾನ ವ್ಯಕ್ತಪಡಿಸುತ್ತದೆ. ಸಮೀಕ್ಷೆಯ ಅನುಸಾರ, ಜೆಡಿಎಸ್ ಬಿಜೆಪಿಗಿಂತ ಶೇ.7ರಷ್ಟು ಕಡಿಮೆ ಮತಗಳನ್ನು ಹೊಂದಿದ್ದರೂ ಅದರ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಜನಪ್ರಿಯತೆಯಲ್ಲಿ ಬಿಎಸ್‌ವೈಗಿಂತ ಮುಂದಿರುವುದು ಕಂಡುಬರುತ್ತದೆ. ಕುಮಾರಸ್ವಾಮಿ ಅವರು ತಮ್ಮ ಸಮುದಾಯದ ಆಚೆಗೂ ಜನಪ್ರಿಯತೆ ಹೊಂದಿರುವುದನ್ನು ಇದು ಸೂಚಿಸುತ್ತದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ, ಬಿಜೆಪಿಯನ್ನು ಈ ಮೊದಲು ನಗರಕೇಂದ್ರಿತ ಪಕ್ಷವೆಂದೇ ಗುರುತಿಸಲಾಗುತ್ತಿತ್ತು ಎನ್ನುವುದು. ಈ ಮಾತು ಕೇವಲ ರಾಜ್ಯಕ್ಕೆ ಮಾತ್ರವೇ ಸೀಮಿತವಾದುದಲ್ಲ, ದೇಶದೆಲ್ಲೆಡೆ ಕೇಳಿಬರುತ್ತಿತ್ತು. ಬಿಜೆಪಿ ದೇಶದುದ್ದಕ್ಕೂ ನೆಲೆ ಕಂಡುಕೊಂಡಿದ್ದೇ ನಗರ ಭಾಗಗಳಲ್ಲಿನ ತನ್ನ ಹಿಡಿತದಿಂದಾಗಿ. ಆದರೆ, ಸಮೀಕ್ಷೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಪರಿಗಣಿತರಾದ ಬಿಎಸ್‌ವೈ ಅವರ ಜನಪ್ರಿಯತೆ ಮಾತ್ರ ನಗರ ಪ್ರದೇಶಗಳಲ್ಲಿ ಇಲ್ಲದಿರುವುದು ಗೋಚರಿಸುತ್ತದೆ. ರಾಜಧಾನಿ ಬೆಂಗಳೂರಿನಲ್ಲಿ ಕುಮಾರಸ್ವಾಮಿಯವರ ಜನಪ್ರಿಯತೆ ಹೆಚ್ಚಿರುವುದು ಕಂಡುಬಂದರೆ, ರಾಜ್ಯದ ಇತರ ಭಾಗಗಳಲ್ಲಿನ ನಗರ ಮತ್ತು ಪಟ್ಟಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯತೆ ಹೆಚ್ಚಿರುವುದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಸಮೀಕ್ಷೆಯ ಆರಂಭದಲ್ಲಿ ತಿಳಿಸಿರುವಂತೆ, ರಾಜ್ಯಾದ್ಯಂತ ಶೇ.೫೭ಮಂದಿ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಸಮಾಧಾನಕರ ಭಾವನೆ (ಪೂರ್ಣ ತೃಪ್ತಿ ಶೇ.೧೧ ಹಾಗೂ ಸ್ವಲ್ಪ ತೃಪ್ತಿ ಶೇ.೪೬) ಹೊಂದಿದ್ದಾರೆ. ಈ ಪ್ರಮಾಣ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಶೇ.೬೮ (ಪೂರ್ಣ ತೃಪ್ತಿ ಶೇ.೯ ಹಾಗೂ ಸ್ವಲ್ಪ ತೃಪ್ತಿ ಶೇ.೫೯), ಹಳ್ಳಿಗಳಲ್ಲಿ ಶೇ.೫೫ (ಪೂರ್ಣ ತೃಪ್ತಿ ಶೇ.೯ ಹಾಗೂ ಸ್ವಲ್ಪ ತೃಪ್ತಿ ಶೇ.೪೬), ದಕ್ಷಿಣ ಕರ್ನಾಟಕದಲ್ಲಿ ಶೇ.೮೦ (ಪೂರ್ಣ ತೃಪ್ತಿ ಶೇ.೯ ಹಾಗೂ ಸ್ವಲ್ಪ ತೃಪ್ತಿ ಶೇ.೭೧), ಮುಂಬೈ ಕರ್ನಾಟಕದಲ್ಲಿ ಶೇ.೫೮ (ಪೂರ್ಣ ತೃಪ್ತಿ ಶೇ.೧, ಸ್ವಲ್ಪ ತೃಪ್ತಿ ಶೇ.೫೭), ಹೈದರಾಬಾದ್‌ ಕರ್ನಾಟಕದಲ್ಲಿ ಶೇ.೮೬ (ಪೂರ್ಣ ತೃಪ್ತಿ ಶೇ.೧೮, ಸ್ವಲ್ಪ ತೃಪ್ತಿ ಶೇ.೬೮), ಕರಾವಳಿ ಕರ್ನಾಟಕದಲ್ಲಿ ಶೇ.೫೧ (ಪೂರ್ಣ ತೃಪ್ತಿ ಶೇ.೧೦ ಹಾಗೂ ಸ್ವಲ್ಪ ತೃಪ್ತಿ ಶೇ.೪೧), ಮಧ್ಯ ಕರ್ನಾಟಕದಲ್ಲಿ ಈ ಪ್ರಮಾಣ ಶೇ.೨೮ (ಪೂರ್ಣ ತೃಪ್ತಿ ಶೇ.೮ ಹಾಗೂ ಸ್ವಲ್ಪ ತೃಪ್ತಿ ಶೇ.೨೦) ಇದೆ. ಬೆಂಗಳೂರು ನಗರದಲ್ಲಿ ಈ ಪ್ರಮಾಣ ಶೇ.೩೪ (ಪೂರ್ಣ ತೃಪ್ತಿ ಶೇ.೧೫ ಹಾಗೂ ಸ್ವಲ್ಪ ತೃಪ್ತಿ ಶೇ.೧೯).

ಇದನ್ನೂ ಓದಿ : ಮುಂದಿನ ನೂರೇ ದಿನಗಳಲ್ಲಿ ಲೋಕಸಭಾ ಚುನಾವಣೆ ಬರಬಹುದೇ?

ಈ ಅಂಕಿ-ಅಂಶಗಳ ಆಧಾರದಲ್ಲಿ ಗಮನಿಸುವುದಾದರೆ, ಬೆಂಗಳೂರು ಹಾಗೂ ಮಧ್ಯ ಕರ್ನಾಟಕದ ಭಾಗವನ್ನು ಹೊರತುಪಡಿಸಿದರೆ ಉಳಿದೆಡೆ ಸರ್ಕಾರದ ಸಾಧನೆಯ ಬಗ್ಗೆ ಸಮಾಧಾನಕರ ಭಾವನೆ ವ್ಯಕ್ತವಾಗಿದೆ. ಪದೇಪದೇ ಮತೀಯ ಉದ್ವಿಗ್ನತೆಗೆ ತುತ್ತಾಗಿರುವ ಕರಾವಳಿ ಪ್ರದೇಶದಲ್ಲಿಯೂ ಸರ್ಕಾರದ ಬಗ್ಗೆ ಶೇ.51ರಷ್ಟು ಸಮಾಧಾನಕರ ಭಾವನೆ ಇರುವುದು ಕಂಡುಬರುತ್ತದೆ. ಇನ್ನು, ವರ್ಗಾಧಾರಿತವಾಗಿ ನೋಡುವುದಾದರೆ, ರಾಜ್ಯದಲ್ಲಿ ಶೇ.೪೫ ಶ್ರೀಮಂತರು ಸರ್ಕಾರದ ಬಗ್ಗೆ ಸಮಾಧಾನಕರ ಭಾವನೆ ಹೊಂದಿದ್ದರೆ (ಪೂರ್ಣ ತೃಪ್ತಿ ಶೇ.೯ ಹಾಗೂ ಸ್ವಲ್ಪ ತೃಪ್ತಿ ಶೇ.೩೬), ಬಡವರಲ್ಲಿ ಶೇ.೬೦ ಮಂದಿ (ಪೂರ್ಣ ತೃಪ್ತಿ ಶೇ.೧೧ ಹಾಗೂ ಸ್ವಲ್ಪ ತೃಪ್ತಿ ಶೇ.೪೯) ಸರ್ಕಾರದ ಬಗ್ಗೆ ಸಮಾಧಾನಕರ ಭಾವನೆ ಹೊಂದಿದ್ದಾರೆ.

ಇವು ಸಮೀಕ್ಷೆಯಲ್ಲಿ ಹೊರಹೊಮ್ಮಿರುವ ಸ್ಥೂಲ ವಿವರಗಳು. ಹೊರನೋಟಕ್ಕೆ ಕಾಣಿಸುವಂತೆ ಈ ವಿವರಗಳು ಕಾಂಗ್ರೆಸ್ ಪಕ್ಷವು ತನ್ನ ಪ್ರತಿಸ್ಪರ್ಧಿ ಪಕ್ಷಗಳ ಹೋಲಿಕೆಯಲ್ಲಿ ಭಾರಿ ಮುನ್ನಡೆ ಹೊಂದಿರುವುದನ್ನು ತಿಳಿಸುತ್ತವೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ನಗರ, ಪಟ್ಟಣ ಪ್ರದೇಶಗಳಲ್ಲಿ ಬಿಜೆಪಿ ಹಿಂದಿರುವುದು ಗೊತ್ತಾಗುತ್ತದೆ. ಚುನಾವಣೆಗೆ ಇನ್ನೂ ಹದಿನಾಲ್ಕು ವಾರಗಳಿದ್ದು, ಬಿಜೆಪಿ ಈ ಅಂತರಗಳನ್ನು ತುಂಬಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆಯೋ ಅಥವಾ ಕಾಂಗ್ರೆಸ್ ಈ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿದೆಯೋ ಕಾದುನೋಡಬೇಕು. ಅದೇ ವೇಳೆ, ಜೆಡಿಎಸ್ ಈ ಅಂತರವನ್ನು ಹೇಗೆ ತುಂಬಿಕೊಳ್ಳಲಿದೆ ಎನ್ನುವುದೂ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿನ ಅದರ ಪ್ರಾಮುಖ್ಯತೆಯನ್ನು ನಿರ್ಧರಿಸಲಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More