ದಲಿತರ ೨೦ ವೋಟುಗಳೂ ಬಿಜೆಪಿಗೆ ಸಿಗಬಾರದು; ಗೌರಿದಿನದಲ್ಲಿ ಮೇವಾನಿ ಗುಡುಗು

ಸೈದ್ಧಾಂತಿಕ ಪರಿಶುದ್ಧತೆಯ ಬೆನ್ನುಹತ್ತಿ ವಾಸ್ತವದ ರಾಜಕಾರಣದ ಗಂಭೀರ ಸಮಸ್ಯೆಗಳಿಗೆ ವಿಮುಖವಾಗದಂತೆ ‘ಗೌರಿ ದಿನ’ದಂದು ನಡೆದ ಸಮಾವೇಶದಲ್ಲಿ ಸ್ಪಷ್ಟ ಅಭಿಪ್ರಾಯ ವ್ಯಕ್ತವಾಗಿದೆ. ಬರಲಿರುವ ಚುನಾವಣೆಯಲ್ಲಿ ಪ್ರಗತಿಪರ ಶಕ್ತಿಗಳು ಮಾಡಿಕೊಳ್ಳಬೇಕಾದ ಆಯ್ಕೆಯನ್ನು ಸಮಾವೇಶ ನಿಚ್ಚಳಗೊಳಿಸಿದೆ

“ಬರುವ ಏಪ್ರಿಲ್‌ನಲ್ಲಿ ೨೦ ದಿನಗಳ ಕಾಲ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತೇನೆ. ಈ ವೇಳೆ ಕರ್ನಾಟಕದಲ್ಲಿನ ದಲಿತರಿಗೆ, ‘ನಿಮ್ಮ ೨೦ ವೋಟುಗಳೂ ಬಿಜೆಪಿಗೆ ಹೋಗಬಾರದು’ ಎಂದು ಮನವಿ ಮಾಡುತ್ತೇನೆ,” ಹೀಗೆಂದು ಗುಡುಗಿದ್ದು ಗುಜರಾತ್‌ನ ಶಾಸಕ, ಯುವ ದಲಿತ ನೇತಾರ ಜಿಗ್ನೇಶ್‌ ಮೇವಾನಿ.

ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣಾರ್ಥ ಆಯೋಜಿಸಲಾಗಿದ್ದ ‘ಗೌರಿ ದಿನ’ದಲ್ಲಿ ಅವರು ಈ ಮಾತುಗಳನ್ನು ಹೇಳುವ ಮೂಲಕ, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಮತ ಸಮೀಕರಣ ಹೇಗಾಗಬೇಕು, ಅದಕ್ಕಾಗಿ ಪ್ರಗತಿಪರ ಸಂಘಟನೆಗಳು, ರಚನಾತ್ಮಕ ನೆಲೆಯಲ್ಲಿ ಚುನಾವಣೆ ಎದುರಿಸಬಯಸುವ ರಾಜಕೀಯ ಪಕ್ಷಗಳು ಏನು ಮಾಡಬೇಕು ಎನ್ನುವುದನ್ನು ಸೂಚಿಸಿದರು. “ಶುದ್ಧ ಸೈದ್ಧಾಂತಿಕತೆ ರಾಜಕೀಯವಾಗಿ ನಮ್ಮನ್ನು ಎಲ್ಲಿಗೂ ಒಯ್ಯದು. ಕೋಮುವಾದದ ವಿರುದ್ಧದ ನಿರ್ಣಾಯಕ ಸಮರ ಸಾರಬೇಕೆಂದರೆ, ಕೋಮುಶಕ್ತಿಗಳನ್ನು ಮಣಿಸಬೇಕೆಂದರೆ ನಾವು ಸೈದ್ಧಾಂತಿಕ ಪರಿಶುದ್ಧತೆಯ ಕಲ್ಪನೆಯನ್ನು ಬದಿಗೆ ಸರಿಸಿ ಹೊಂದಾಣಿಕೆಯ ಮನೋಭಾವದಿಂದ ರಾಜಕೀಯವಾಗಿ ಬಲಗೊಳ್ಳಬೇಕು. ಪ್ರಗತಿಪರ ಸಂಘಟನೆಗಳು, ಒಕ್ಕೂಟಗಳು ಕೋಮುವಾದದ ವಿರುದ್ಧದ ಹೋರಾಟದಲ್ಲಿ ಮುಖ್ಯವಾಹಿನಿಯ ರಾಷ್ಟ್ರೀಯ ಪಕ್ಷಗಳೊಂದಿಗೆ ಕೈಜೋಡಿಸಬೇಕು. ಕೋಮುವಾದ, ಸಂಘಪರಿವಾರವನ್ನು ಮಣಿಸಲು ನಾನಂತೂ ಯಾವುದೇ ಹೊಂದಾಣಿಕೆಗೂ ಸಿದ್ಧ,” ಎಂಬುದಾಗಿ ಜಿಗ್ನೇಶ್ ಹೇಳಿದರು.

“ಊನಾ ಚಲೋ ಚಳವಳಿ ವೇಳೆ ನಾವು ದಲಿತ ಕುಟುಂಬಗಳು ಸ್ವಾಭಿಮಾನದಿಂದ ಬದುಕಲು ಸಣ್ಣ ಪ್ರಮಾಣದ ಭೂಮಿಯನ್ನಾದರೂ ನೀಡಿ ಎಂದು ಗುಜರಾತ್ ಸರ್ಕಾರದ ಮುಂದೆ ಬೇಡಿಕೆ ಇರಿಸಿ ಹೋರಾಟ ಕೈಗೊಂಡೆವು. ಆದರೆ, ಅಗ್ಗದ ಬೆಲೆಗೆ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಉದ್ಯಮಿಗಳಿಗೆ ನೀಡುವ ಗುಜರಾತ್‌ ಸರ್ಕಾರ ನಮ್ಮ ಮಾತುಗಳನ್ನು ಕಿವಿಗೂ ಹಾಕಿಕೊಳ್ಳಲಿಲ್ಲ. ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಎರಡು ದಿನಗಳ ಹಿಂದಷ್ಟೇ ಇಲ್ಲಿನ ರಾಜ್ಯ ಸರ್ಕಾರ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯು ಮುಂದಿಟ್ಟ ಪ್ರಸ್ತಾಪಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ತೀರ್ಮಾನಗಳನ್ನು ಕೈಗೊಂಡಿದೆ. ಈ ವಿಚಾರವನ್ನು ಇಲ್ಲಿನ ದಲಿತರು, ದಮನಿತರು ಅರ್ಥ ಮಾಡಿಕೊಳ್ಳಬೇಕು,” ಎಂದರು. ಆ ಮೂಲಕ ಪ್ರಧಾನಿ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಕ್ಕೂ ಹಾಗೂ ಕರ್ನಾಟಕದಲ್ಲಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೂ ತುಲನೆ ಮಾಡಿದರು.

ಮಣಿಪುರದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೊಮ್ ಶರ್ಮಿಳಾ, ಹಿರಿಯ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌, ತಮ್ಮ ಹೋರಾಟಗಳ ಮೂಲಕ ದೇಶಾದ್ಯಂತ ಗಮನಸೆಳೆದಿರುವ ಯುವ ಹೋರಾಟಗಾರರಾದ ಕನ್ಹಯ್ಯ ಕುಮಾರ್, ಶೆಹ್ಲಾ ರಷೀದ್, ಉಮರ್ ಖಾಲಿದ್, ರೀಚಾ ಸಿಂಗ್ ಮುಂತಾದವರಿದ್ದ ವೇದಿಕೆಯಲ್ಲಿ, ಯುವ ರಾಜಕಾರಣ ಹಾಗೂ ಭವಿಷ್ಯದ ರಾಜಕಾರಣದ ಸಾಧ್ಯತೆಗಳನ್ನು ವಿವರಿಸಿ ಜಿಗ್ನೇಶ್‌ ಮೇಲಿನ ಮಾತುಗಳನ್ನು ಆಡಿದ್ದು ಗಮನಾರ್ಹ. ಪ್ರಗತಿಪರ ಸಂಘಟನೆಗಳು ಮುಂಬರುವ ಚುನಾವಣೆಯಲ್ಲಿ ಯಾವ ವಿಷಯಗಳನ್ನು ಕೈಗೆತ್ತಿಕೊಳ್ಳಬೇಕು, ಯಾರ ಜೊತೆ ನಿಲ್ಲಬೇಕು ಎನ್ನುವುದನ್ನು ಜಿಗ್ನೇಶ್‌ ಮಾತುಗಳು ಖಚಿತವಾಗಿ ವಿವರಿಸಿದವು.

ಇದನ್ನೂ ಓದಿ : ನಗರಕೇಂದ್ರಿತ ಪಕ್ಷ ಎಂಬ ಹೆಗ್ಗಳಿಕೆಯನ್ನು ಕಳೆದುಕೊಳ್ಳಲಿದೆಯೇ ಬಿಜೆಪಿ? 

ಇದಕ್ಕೂ ಮೊದಲು ತಮ್ಮ ಆಕರ್ಷಕ ಮಾತುಗಳ ಮೂಲಕವೇ ಮೋದಿ ಸರ್ಕಾರದ ವೈಫಲ್ಯಗಳನ್ನು ಜೆಎನ್‌ಯುನ ಯುವ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ವಿವರಿಸಿದರು. “ಪಕೋಡೇಬಾಜಿ (ಉದ್ಯೋಗಾವಕಾಶಗಳ ಕೊರತೆಯ ಬಗ್ಗೆ ಪ್ರತಿಕ್ರಿಯಿಸುತ್ತ ಪಕೋಡಾ ಮಾರುವುದೂ ಉದ್ಯೋಗವೇ ಎಂದಿದ್ದ ಪ್ರಧಾನಿಯವರ ಹೇಳಿಕೆ), ಜುಮ್ಲೇಬಾಜಿ (ಪದಗಳೊಂದಿಗಿನ ಆಟ) ಮೂಲಕ ನಿರುದ್ಯೋಗ, ಕೋಮುವಾದವೂ ಸೇರಿದಂತೆ ದೇಶವನ್ನು ಗಂಭೀರವಾಗಿ ಕಾಡುತ್ತಿರುವ ಸಮಸ್ಯೆಗಳನ್ನು ಚರ್ಚಿಸುವುದರಿಂದ ಪ್ರಧಾನಿ ಮೋದಿಯವರು ತಪ್ಪಿಸಿಕೊಳ್ಳುತ್ತಿದ್ದಾರೆ,” ಎಂದು ಛೇಡಿಸಿದರು. ಇದೇ ವೇಳೆ, ಸೈದ್ಧಾಂತಿಕ ಶುದ್ಧತೆಯ ಹೆಸರಿನಲ್ಲಿ ದೇಶದ ಎದುರಿಗಿರುವ ಗಂಭೀರ ಸಮಸ್ಯೆಗಳಿಂದ ವಿಮುಖರಾಗದೆ ಇರಬೇಕಾದ ಅಗತ್ಯದ ಬಗ್ಗೆಯೂ ಹೇಳಿದರು.

ಪರ್ಯಾಯ ರಾಜಕಾರಣದ ಸಾಧ್ಯತೆಗಳು ಹಾಗೂ ಮುಖ್ಯವಾಹಿನಿ ರಾಜಕಾರಣದೊಂದಿಗೆ ರಾಷ್ಟ್ರೀಯ ಪಕ್ಷಗಳೊಂದಿಗೆ ಮಾಡಿಕೊಳ್ಳಬೇಕಾದ ಹೊಂದಾಣಿಕೆಯ ಬಗ್ಗೆ ‘ಗೌರಿ ದಿನ’ದ ಸಮಾವೇಶದಲ್ಲಿ ಖಚಿತತೆ ಇದ್ದುದು ಕಂಡುಬಂದಿತು. ಕೋಮುವಾದದ ವಿರುದ್ಧದ ಹೋರಾಟದಲ್ಲಿ ದಲಿತ ಹಾಗೂ ಪ್ರಗತಿಪರ ಮತಗಳು ಚದುರಿಹೋಗದಂತೆ ತಡೆಯಬೇಕಾದ ಅಗತ್ಯತೆಯ ಬಗ್ಗೆ ಸಮಾವೇಶದಲ್ಲಿ ಒತ್ತು ನೀಡಿದ್ದು ಸ್ಪಷ್ಟವಾಗಿ ಗೋಚರಿಸಿತು.

ಪ್ರಗತಿಪರ ವಿಚಾರಧಾರೆಯ ಎಲ್ಲ ಶಕ್ತಿಗಳನ್ನೂ ಒಂದೇ ವೇದಿಕೆಯಡಿ ತಂದು, ರಚನಾತ್ಮಕ ರಾಜಕಾರಣಕ್ಕೆ ನಾಂದಿ ಹಾಡಬೇಕು ಎನ್ನುವ ಚಿಂತನೆಯನ್ನು ಕಡೆಯವರೆಗೂ ಪ್ರತಿಪಾದಿಸುತ್ತಿದ್ದ ಗೌರಿಯವರ ಆಶಯದ ಈಡೇರಿಕೆಯ ಭಾಗದಂತೆ ಸಮಾವೇಶ ಕಂಡಿತು. ಎಲ್ಲ ವರ್ಗ, ವಯೋಮಾನದ ಜನರಿಂದ ಭರ್ತಿಯಾಗಿ ತುಂಬಿದ್ದ ಸಭಾಂಗಣವು ಯುವಮುಖಂಡರಲ್ಲಿ ಉತ್ಸಾಹವನ್ನು ತುಂಬಿತು. ಅಲ್ಲದೆ, ಚಪ್ಪಾಳೆ ಕಾರ್ಯಕ್ರಮದುದ್ದಕ್ಕೂ ಹುರುಪು ತುಂಬಿತು. ಮುಂಬರಲಿರುವ ರಾಜ್ಯದ ವಿಧಾನಸಭಾ ಚುನಾವಣೆಯು ಮತೀಯವಾದ ಹಾಗೂ ಜಾತ್ಯತೀತವಾದದ ನಡುವಿನ ಸಮರ ಎಂದು ಪ್ರಗತಿಪರ ಶಕ್ತಿಗಳು ಸ್ಪಷ್ಟವಾಗಿ ಭಾವಿಸಿರುವುದು ಸಮಾವೇಶದಲ್ಲಿ ನಿಚ್ಚಳವಾಗಿ ಕಂಡಿತು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More